ಅಕ್ಬರ್ ನಾಮಾ
ಎಂ.ಜೆ.ಅಕ್ಬರ್
ಡೊನಾಲ್ಡ್ ಟ್ರಂಪ್ ಅಮೆರಿಕದ ೪೭ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಏಕೆಂದರೆ, ಅವರು ದೇಶದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಸೋತಿದ್ದಾರೆ! ಒಂದೆರಡಲ್ಲ, ಬರೋಬ್ಬರಿ ಶೇ.೯೨.೪ ಮಾರ್ಜಿನ್ ಮತಗಳ ಮೂಲಕ, ಕೇವಲ ಶೇ.೬.೭ರಷ್ಟು ಮತ ಗಳಿಸಿ, ಹೀನಾಯವಾಗಿ ಸೋತಿದ್ದಾರೆ.
ಖಂಡಿತ ನೀವು ಓದಿದ್ದು ಸರಿಯಾಗಿಯೇ ಇದೆ. ಟ್ರಂಪ್ ಏಕೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರು ಅಂದರೆ, ಅವರು ವಾಷಿಂಗ್ಟನ್
ಡಿ.ಸಿ.ಯಲ್ಲಿ ಶೇ.೮೫ರಷ್ಟು ಮತಗಳಿಂದ ಸೋತಿದ್ದಾರೆ. ಈ ಅಂಕಿ-ಅಂಶವನ್ನು ನೋಡಿದರೆ ಅಮೆರಿಕದ ರಾಜಧಾನಿ ಅಮೆರಿಕದಿಂದ ಎಷ್ಟು ದೂರವಾಗಿದೆ ಎಂಬುದು ಚೆನ್ನಾಗಿ ಅರ್ಥವಾಗುತ್ತದೆ.
ಕಮಲಾ ಹ್ಯಾರಿಸ್ ರಾಜಧಾನಿಯ ಅಭ್ಯರ್ಥಿಯಾಗಿದ್ದರು. ಅವರು ವಾಷಿಂಗ್ಟನ್ ಡಿ.ಸಿ.ಯ ಕುಲೀನ ಸಿಂಹಾಸನಾಧೀಶ ಬರಾಕ್ ಒಬಾಮಾ,
ರಾಣಿ ಮಿಶೆಲ್ ಒಬಾಮಾ ಮತ್ತು ಶ್ರೇಷ್ಠತೆಯ ವ್ಯಸನದಲ್ಲಿ ಮುಳುಗಿರುವ ಹುಸಿ ರಣತಂತ್ರಗಾರರ ನೀಲಿಗಣ್ಣಿನ ಹುಡುಗಿಯಾಗಿದ್ದರು. ತಾವು ಯಾರನ್ನು ಬೆಂಬಲಿಸಿದರೂ ಅವರು ಗೆದ್ದುಬಿಡುತ್ತಾರೆಂಬ ಭ್ರಮೆ ಅವರಲ್ಲಿತ್ತು. ೧೦೭ ದಿನಗಳ ಚುನಾವಣಾ ಪ್ರಚಾರದ ಅವಧಿಯಲ್ಲಿ ಅಮೆರಿಕದ ನೀತಿ-ನಿಯಮಗಳಿಗೆ ಅಪಚಾರವಸೆಗುವಂಥ ಯಾವ ತಪ್ಪನ್ನೂ ನಾವು ಮಾಡಿಲ್ಲ, ಕಳೆದ ೪ ವರ್ಷಗಳ ಅವಧಿಯಲ್ಲೂ ನಮ್ಮಿಂದ ಯಾವುದೇ ತಪ್ಪಾಗಿಲ್ಲ, ಹೀಗಾಗಿ ಜನರು ‘ಕಸದ ಭಾಷೆಯಲ್ಲಿ’ ಮಾತನಾಡುತ್ತಿರುವ ರಿಪಬ್ಲಿಕನ್ನರನ್ನು ಸೋಲಿಸಿ ನಮ್ಮನ್ನು ಗೆಲ್ಲಿಸಿಬಿಡುತ್ತಾರೆ ಎಂಬ
ನಂಬಿಕೆ ಅವರಲ್ಲಿತ್ತು.
ಹೀಗಾಗಿಯೇ ಕಮಲಾ ಹ್ಯಾರಿಸ್ ಅಮೆರಿಕದಲ್ಲಿ ಹಣದುಬ್ಬರ ಅಥವಾ ವಲಸೆಗೆ ಸಂಬಂಧಿಸಿದ ಯಾವುದೇ ನೀತಿಯನ್ನು ಬದಲಿಸುವ ಕಿಂಚಿತ್ ಅಗತ್ಯವೂ ಇಲ್ಲ ಎಂದು ಬಹಳ ಪ್ರಾಮಾಣಿಕವಾಗಿ ಹೇಳಿದ್ದರು. ಏಕೆಂದರೆ ಅವರಿಗೂ, ಅವರ ತತ್ವಗಳಿಗೂ ಆರ್ಥಿಕತೆಯ ಸರಾಸರಿ ತಾಕತ್ತಿ
ಗಿಂತ ಹಲವು ಪಟ್ಟು ಹೆಚ್ಚು ಶ್ರೀಮಂತಿಕೆಯಲ್ಲಿ ಬದುಕುವ ಸೌಕರ್ಯವಿತ್ತು. ಇದೇ ಕಾರಣಕ್ಕೆ ತಮಗೆ ವಲಸಿಗರ ಮತಗಳೂ ಸಿಗುತ್ತವೆ ಎಂದು ಅವರು ಲೆಕ್ಕಾಚಾರ ಹಾಕಿಕೊಂಡಿದ್ದರು. ಇದೇ ರೀತಿಯ ಪ್ರಚಾರವನ್ನು ಅಮೆರಿಕದ ಕೆಲ ಪ್ರಭಾವಿ ಮಾಧ್ಯಮ ಗಳೂ ತಮ್ಮದೇ ಆದ ರೀತಿಯಲ್ಲಿ ಮಾಡಿದ್ದವು. ಹಾಗಂತ ಡೊನಾಲ್ಡ್ ಟ್ರಂಪ್ ಬಡವರಲ್ಲ. ಆದರೆ ಅವರ ಮನಸ್ಸು ‘ಹೆವೆನ್ ಅವೆನ್ಯೂ’ ಬದಲು ಅಮೆರಿಕದಲ್ಲಿ ವಾಸಿಸುತ್ತಿತ್ತು.
ಅಮೆರಿಕದ ಈ ಚುನಾವಣೆಯನ್ನು ನೋಡಿದಾಗ ನನಗೆ ರಿಚರ್ಡ್ ನಿಕ್ಸನ್ನರದು ಎನ್ನಲಾದ ಸಿದ್ಧಾಂತವೊಂದು ನೆನಪಾಗುತ್ತದೆ. “ಎರಡು ತಪ್ಪುಗಳು ಸೇರಿದಾಗ ಒಂದು ಸರಿ ಆಗುವುದಿಲ್ಲವಾದರೆ ಮೂರು ತಪ್ಪು ಸೇರಿಸಿ ನೋಡೋಣ!” ಎಂಬುದು ಅವರ ಸಿದ್ಧಾಂತವಾಗಿತ್ತಂತೆ.
ಏಕೆ? ಏಕೆಂದರೆ, ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಕುಳಿತಿರುವ ನಾವು, “ಅಮೆರಿಕದ ಚುನಾವಣೆಯನ್ನು ನಾವು ನೋಡುತ್ತಿದ್ದೇವೆ’ ಎಂದು
ಹೇಳಿದರೆ ನಿಜವಾಗಿಯೂ ನಾವು ಅಲ್ಲಿನ ಚುನಾವಣೆಯನ್ನು ನೋಡುತ್ತಿರುವುದಿಲ್ಲ. ಅಮೆರಿಕದ ದೊಡ್ಡ ಮಾಧ್ಯಮಗಳು ಅಲ್ಲಿನ ಚುನಾವಣೆಯನ್ನು ಹೇಗೆ ತೋರಿಸುತ್ತವೆಯೋ ಹಾಗೆ ನಾವು ನೋಡುತ್ತೇವೆ. ಪ್ರಭಾವಿ ದಿನಪತ್ರಿಕೆಗಳು ಅಥವಾ ಟಿವಿ ಚಾನಲ್‌ಗಳು ತಮ್ಮದೇ ಆದ ಅಜೆಂಡಾ ಇರಿಸಿಕೊಂಡು, ಚುನಾವಣೆ ಹೇಗೆ ನಡೆಯುತ್ತಿದೆಯೋ ಹಾಗೆ ತೋರಿಸದೆ, ತಿರುಚಿದ ವರದಿಗಳನ್ನು ಪ್ರಕಟಿಸಿದರೆ ಅಥವಾ ತಮಗೆ
ಬೇಕಾದವರ ಸಂದರ್ಶನಗಳನ್ನು ಮಾತ್ರ ಪ್ರಕಟಿಸಿದರೆ ಆಗ ನಮಗೆ ಚುನಾವಣೆಯ ನಿಜವಾದ ಕಣ ಅರ್ಥವೇ ಆಗುವುದಿಲ್ಲ. ಅಧಿಕಾರ ದಲ್ಲಿರುವವರ ಈ ಆಟ ವಾಷಿಂಗ್ಟನ್ ಮತ್ತು ನ್ಯೂಯಾರ್ಕ್ ನಡುವೆ ಚಿನ್ನದ ಮೊಟ್ಟೆಯಿಡುವ ಕೋಳಿಯಾಗಿ ಪರಿಣಮಿಸಿದೆ. ಅಮೆರಿಕದ ದೊಡ್ಡ ಮಾಧ್ಯಮಗಳು ೨೧ನೇ ಶತಮಾನದ ಮೋಸೆಸ್‌ನಂತೆ ವರ್ತಿಸುತ್ತವೆ.
ಅವು ದೇವರ ಜತೆ ಮಾತನಾಡಿ ಬಳಿಕ, ‘ದೇವರನ್ನು ತಲುಪುವ ದಾರಿ ಯಾವುದು’ ಎಂಬ ಬಗ್ಗೆ ತಮ್ಮ ಅನುಯಾಯಿಗಳಿಗೆ ಪ್ರವಚನಗಳನ್ನು ನೀಡುತ್ತವೆ. ಆ ದಾರಿ ಯಾವಾಗಲೂ ದೂರದ ದಿಗಂತದಲ್ಲಿ ಕಾಣಿಸುತ್ತದೆಯೇ ಹೊರತು ಯಾರ ಕಾಲಿಗೂ ನಿಲುಕುವುದಿಲ್ಲ. ಅಮೆರಿಕದ ದೊಡ್ಡ ಮಾಧ್ಯಮಗಳ ೧೦ ಕಮಾಂಡ್‌ಮೆಂಟುಗಳು ಒಂದೇ ಕಮಾಂಡ್‌ಮೆಂಟಿನ ೧೦ ಅವತರಣಿಕೆಯಂತಿವೆ: “ನಾವು ಹೇಳಿದ್ದನ್ನು ನೀವು ಕೇಳಬೇಕು, ಏಕೆಂದರೆ ನಿಮಗೇನು ಒಳ್ಳೆಯದು ಎಂಬುದು ನಮಗೆ ಗೊತ್ತಿದೆ”. ಈ ಕಮಾಂಡ್ ಮೆಂಟುಗಳನ್ನು ಪ್ರಶ್ನಿಸುವವರ ಮೇಲೆ ನರಕದ ಬೆಂಕಿ ಬೀಳುತ್ತದೆ. ‘ವಾಷಿಂಗ್ಟನ್ ಪೋಸ್ಟ್’ನ ಮಾಲೀಕ ಜೆಫ್ ಬೆಜೋಸ್ ಅವರು ಕಮಲಾ ಮತ್ತು ಟ್ರಂಪ್ ಇವರಿಬ್ಬರಲ್ಲಿ ಯಾರೊಬ್ಬರನ್ನೂ ಬೆಂಬಲಿಸಲು ನಿರಾಕರಿಸಿದಾಗ ಅವರು ಮೋಸೆಸ್ ಎಳೆದ ಗೆರೆ ದಾಟಿಬಿಟ್ಟಿದ್ದಾರೆ ಎಂಬಂತೆ ಎಲ್ಲರೂ ಅವರ ಮೇಲೆ ಮುಗಿಬಿದ್ದಿದ್ದರು.
ಆದರೆ ಜೆಫ್ ಬೆಜೋಸ್ ಹೇಳಿದ್ದು ಕಟುಸತ್ಯವಾಗಿತ್ತು. ಅವರು ತಮ್ಮದೇ ಪತ್ರಿಕೆಯಲ್ಲಿ, “ಅಮೆರಿಕನ್ನರು ಸುದ್ದಿ ಮಾಧ್ಯಮಗಳನ್ನು ನಂಬುವು
ದಿಲ್ಲ. ಏಕೆಂದರೆ ಮಾಧ್ಯಮಗಳು ಪಕ್ಷಪಾತಿಯಾಗಿವೆ” ಎಂದು ಬರೆದಿದ್ದರು. ಅದು ವಿವಾದವಾದ ಬಳಿಕ ಅವರ ಸಂಪಾದಕೀಯ ಮಂಡಳಿಯ ಕೆಲ ಪ್ರಮುಖ ಸದಸ್ಯರು ರಾಜೀನಾಮೆ ನೀಡಿದ್ದರು. ೨.೫ ಲಕ್ಷ ಓದುಗರು ವಾಷಿಂಗ್ಟನ್ ಪೋಸ್ಟ್‌ನ ಡಿಜಿಟಲ್ ಚಂದಾದಾರಿಕೆ ರದ್ದು ಮಾಡಿದ್ದರು. ಅವರೇ ಕಮಲಾ ಹ್ಯಾರಿಸ್‌ಗೆ ಶೇ.೯೨.೪ರಷ್ಟು ಮತಗಳು ಬರುತ್ತವೆ ಎಂದು ಟಾಂ ಟಾಂ ಹೊಡೆದ ಬ್ರಿಗೇಡಿನ ಮುಂಚೂಣಿ ಸದಸ್ಯರಾಗಿದ್ದರು. -ಲಿತಾಂಶ ಬಂದಾಗ ಬೆಜೋಸ್ ಹೇಳಿದ್ದು ನಿಜವಾಗಿತ್ತು.
ಜಗತ್ತಿನಲ್ಲಿ ಪ್ರಜಾಪ್ರಭುತ್ವ ಈಗಲೂ ಕೆಲಸ ಮಾಡುತ್ತಿರುವುದು ಏಕೆಂದರೆ ಮತದಾರರು ತಮ್ಮ ಕಣ್ಣು ತೆರೆದುಕೊಂಡೇ ಇರುತ್ತಾರೆ ಮತ್ತು ತಮಗಾದ ನೋವನ್ನು ನೆನಪಿಟ್ಟುಕೊಂಡಿರುತ್ತಾರೆ. ಮುಕ್ತ ಮಾಧ್ಯಮಗಳು ತಮ್ಮ ಮನಸ್ಸನ್ನು ಮುಕ್ತವಾಗಿಟ್ಟು ಕೊಂಡಿದ್ದರೆ ಮಾತ್ರ ಪ್ರಸ್ತುತತೆ ಉಳಿಸಿಕೊಳ್ಳುತ್ತವೆ. ಈ ಬಾರಿಯ ಚುನಾವಣೆಯಲ್ಲಿ ಅಮೆರಿಕದ ಅತ್ಯಂತ ಪ್ರಮುಖ ಸುದ್ದಿವಾಹಿನಿ ಸಿಎನ್‌ಎನ್ ಟ್ರಂಪ್
ವಿರುದ್ಧ ಯಾವ ಪರಿ ಕೆಲಸ ಮಾಡಿತು ಅಂದರೆ, ತನ್ನದೇ ಚುನಾವಣೋತ್ತರ ಸಮೀಕ್ಷೆಯಲ್ಲಿ ಅಮೆರಿಕದ ಶೇ.೭೨ರಷ್ಟು ಜನರು ಕಳೆದ ನಾಲ್ಕು ವರ್ಷಗಳ ಹಣದುಬ್ಬರದಿಂದ ಸಿಟ್ಟುಗೊಂಡಿದ್ದಾರೆ ಎಂದು ಹೇಳಿದ್ದನ್ನು ಅದು ನಂಬಲು ತಯಾರಿರಲಿಲ್ಲ.
ಫ್ಯಾಕ್ಸ್ ನ್ಯೂಸ್‌ನ ಎಕ್ಸಿಟ್ ಪೋಲ್‌ನಲ್ಲೂ ಇಂಥದೇ ಅಂಕಿ- ಅಂಶ ಬಂದಿತ್ತು. ಶೇ.೭೦ರಷ್ಟು ಜನರು ಅಮೆರಿಕದ ಆರ್ಥಿಕತೆಯೇ ತಮ್ಮ ಪ್ರಮುಖ ಆತಂಕ ಎಂದು ಹೇಳಿದ್ದರು. ಟ್ರಂಪ್ ವಿರುದ್ಧ ಸಿಎನ್‌ಎನ್ ಎಷ್ಟು ಪಕ್ಷಪಾತಿಯಾಗಿತ್ತು ಅಂದರೆ, ಫಲಿತಾಂಶ ಪ್ರಕಟವಾಗುವ ವೇಳೆ ಇಡೀ ರಾತ್ರಿಯ ಕವರೇಜನ್ನು ಎಕ್ಸಿಟ್ ಪೋಲ್ ಭವಿಷ್ಯ ಸುಳ್ಳಾಗಲಿ ಎಂದು ಪ್ರಾರ್ಥಿಸುವುದಕ್ಕೇ ಅದು ಮೀಸಲಿಟ್ಟಿತ್ತು. ದೇವರು ದೊಡ್ಡವನು.
ಅವನು ದೊಡ್ಡವರ ಪ್ರಾರ್ಥನೆಗೆ ಸುಲಭವಾಗಿ ಓಗೊಡುವುದಿಲ್ಲ.
ಆದರೆ ವಿದೇಶಿ ಪತ್ರಕರ್ತರಿಗೆ ಬಹಳ ಬೇಗ ಅಮೆರಿಕದ ಸತ್ಯ ಗೊತ್ತಾಗಿಬಿಟ್ಟಿತ್ತು. ಚುನಾವಣೆಗೂ ಮುನ್ನ ಅವರು ದೇಶ ಸುತ್ತಾಡಿದಾಗ ಫಲಿತಾಂಶ
ಏನಿರುತ್ತದೆ ಎಂಬುದನ್ನು ಊಹಿಸಿದ್ದರು. ಅಕ್ಟೋಬರ್‌ನಲ್ಲಿ ಲಂಡನ್ನಿನ ‘ದಿ ಟೈಮ್ಸ್’ ವರದಿಗಾರ ಎಡ್ವರ್ಡ್ ಲೂಕಸ್ ಅಮೆರಿಕದ ‘ವಿದೇಶಾಂಗ ನೀತಿ ಪಂಡಿತರ’ ಜತೆಗೆ ಒಂದು ವಾರ ಕಳೆದಿದ್ದರು. ಅವರೆಲ್ಲರೂ ಟ್ರಂಪ್ ಹೀನಾಯವಾಗಿ ಸೋಲುತ್ತಾರೆ ಎಂದೇ ಹೇಳಿದ್ದರು. ನಿಮ್ಮ ಯೋಚನೆ ತಪ್ಪು, ಇಲ್ಲೇ ಸಮೀಪದಲ್ಲಿರುವ ಪೆನ್ಸಿಲ್ವೇನಿಯಾದ ಮತದಾರರ ಜತೆಗೆ ಒಮ್ಮೆ ಮಾತನಾಡಿ ನೋಡಿ, ಆಗ ವಾಸ್ತವ ತಿಳಿಯುತ್ತದೆ ಎಂದು ಎಡ್ವರ್ಡ್ ಲೂಕಸ್ ಹೇಳಿದ್ದನ್ನು ಅವರಾರೂ ಕಿವಿಗೆ ಹಾಕಿಕೊಂಡಿರಲಿಲ್ಲ. ಪೆನ್ಸಿಲ್ವೇನಿಯಾ ಏಕೆ ಅಮೆರಿಕದ ಚುನಾವಣೆಯಲ್ಲಿ ಬಹಳ
ಮುಖ್ಯವಾದ ರಾಜ್ಯವೆಂದರೆ, ಅಲ್ಲಿನ ಮತದಾರರು ಯಾವ ಚುನಾವಣೆಯಲ್ಲಿ ಬೇಕಾದರೂ ಉಲ್ಟಾ ಹೊಡೆಯುತ್ತಾರೆ. ಅವರು ಡೆಮಾಕ್ರಟಿಕ್ ಅಥವಾ ರಿಪಬ್ಲಿಕನ್ ಪಕ್ಷಕ್ಕೆ ನಿಷ್ಠರಲ್ಲ. ಅವರು ಯಾವ ಕಡೆ ವಾಲುತ್ತಾರೋ ಆ ಪಕ್ಷ ಗೆಲ್ಲುವ ಸಾಧ್ಯತೆ ಹೆಚ್ಚಿರುತ್ತದೆ. ಲೂಕಸ್ ಇದರ ಬಗ್ಗೆ ಅಮೆರಿಕದ ಸೋಕಾಲ್ಡ್ ಎಲೆಕ್ಷನ್ ಎಕ್ಸ್‌ಪರ್ಟ್‌ಗಳ ಜತೆ ಮಾತನಾಡಲು ಹೋದರೆ ಅವರೆಲ್ಲರೂ ‘ಬ್ಯುಸಿ’ ಇದ್ದರು. ಹಾಗಾಗಿ ಲೂಕಸ್ ತಮ್ಮ ಪಾಡಿಗೆ ತಾವು ದೇಶ ಸುತ್ತಿಕೊಂಡು ಮರಳಿದರು. ನಂತರ ಲಂಡನ್ನಿಗೆ ಬಂದು ಅಕ್ಟೋಬರ್ ೨೧ರ ಸಂಚಿಕೆಯಲ್ಲಿ ವರದಿ ಬರೆದರು. ಅದರಲ್ಲಿ,
“ಕಮಲಾ ಹ್ಯಾರಿಸ್‌ಗೆ ಕಾರ್ಯಕರ್ತರ ಕೊರತೆ ಯಿದೆ. ಅವರ ಪರವಾಗಿ ಓಡಾಡಿ ಪ್ರಚಾರ ಮಾಡಲು ಸಾಕಷ್ಟು ಜನರಿಲ್ಲ. ಇದು ದುಬಾರಿಯಾಗಿ
ಪರಿಣಮಿಸಬಹುದು” ಎಂದು ಹೇಳಿದ್ದರು.
ಇದೇ ವೇಳೆ, “ಟ್ರಂಪ್ ಪಾಳಯದಲ್ಲಿ ಸದ್ದು ಬಹಳ ಜೋರಾಗಿದೆ; ಜೀಸಸ್ ನಮ್ಮ ದೇವರು, ಟ್ರಂಪ್ ನಮ್ಮ ಪ್ರೆಸಿಡೆಂಟ್ ಎಂದು ಬರೆದ ಬೇಸ್‌ಬಾಲ್ ಕ್ಯಾಪ್‌ಗಳು ಬಿಸಿ ರೊಟ್ಟಿಯಂತೆ ಮಾರಾಟವಾಗುತ್ತಿವೆ. ಸ್ವತಂತ್ರ ಮತದಾರರು, ಅಂದರೆ ರಿಪಬ್ಲಿಕನ್ ಅಥವಾ ಡೆಮಾಕ್ರಟಿಕ್ ಪಕ್ಷಕ್ಕೆ ನೋಂದಾಯಿಸಿಕೊಂಡಿಲ್ಲದೆ ಇರುವ ಮತದಾರರು, ಕಮಲಾ ಹ್ಯಾರಿಸ್ ಬಗ್ಗೆ ತಮಗೆ ಯಾವ ಭರವಸೆಯೂ ಇಲ್ಲ, ಏಕೆಂದರೆ ಆಕೆ
ನಮ್ಮೆಲ್ಲರ ಅತಿದೊಡ್ಡ ಕಳವಳವಾದ ಅಕ್ರಮ ವಲಸೆಯ ಬಗ್ಗೆ ಗಂಭೀರವಾಗಿಲ್ಲ ಎಂದು ಹೇಳುತ್ತಿದ್ದಾರೆ” ಎಂದು ಬರೆದಿದ್ದರು.
“ಕಮಲಾ ಹ್ಯಾರಿಸ್ ಬಗ್ಗೆ ಅಮೆರಿಕದ ಸ್ವತಂತ್ರ ಮತದಾರರಿಗೆ ನಂಬಿಕೆ ಇರಲಿಲ್ಲ. ಅವರೊಬ್ಬ ದುರ್ಬಲ ಅಭ್ಯರ್ಥಿ. ಅವರ ಇತಿಹಾಸ ಹಾಗೂ ಚುನಾವಣಾ ಭರವಸೆಗಳೂ ದುರ್ಬಲವಾಗಿವೆ. ಆದರೆ ಆ ಭರವಸೆಗಳನ್ನೇ ಅತಿಯಾಗಿ ಪ್ರಚಾರ ಮಾಡಲಾಗುತ್ತಿದೆ. ಎಡ ಪಂಥೀಯ ಡೆಮಾಕ್ರಟಿಕ್ ರಾಜಕೀಯ ಯಂತ್ರಗಳು ಮತ್ತು ಮಾಧ್ಯಮಗಳು ಕೂಡ ಸತ್ವವಿಲ್ಲದ ಅವರ ಚುನಾವಣಾ ಪ್ರಚಾರಕ್ಕೆ ಕೈಜೋಡಿಸಿವೆ ಎಂದು
ಜನರು ಮಾತನಾಡಿಕೊಳ್ಳುತ್ತಿದ್ದರು” ಎಂದು ಲೂಕಸ್ ಬರೆದಿದ್ದರು.
ಹಾಗೆ ನೋಡಿದರೆ ಈ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ಕಮಲಾ ಹ್ಯಾರಿಸ್ ಅವರನ್ನು ಅಧ್ಯಕ್ಷೀಯ ಅಭ್ಯರ್ಥಿಯಾಗಿ ‘ಅಮೆರಿಕನ್ ರೀತಿ
ಯಲ್ಲಿ’ ಆಯ್ಕೆ ಮಾಡಿರಲಿಲ್ಲ. ಅಽಕೃತ ಅಭ್ಯರ್ಥಿ ಯಾಗಿದ್ದ ಜೋ ಬೈಡೆನ್ ಹಿಂದೆ ಸರಿದಾಗ ಒಬಾಮಾ ಗಳು ಮತ್ತು ಪಕ್ಷದ ಹಿರಿಯ ನಾಯಕರಾದ ನಾನ್ಸಿ ಪೆಲೋಸಿಯಂಥವರು ಸೇರಿಕೊಂಡು ಕಮಲಾ ರನ್ನು ಆ ಜಾಗಕ್ಕೆ ತಂದು ನಿಲ್ಲಿಸಿದ್ದರು. ‘ಡಸ್ಟ್‌ಬಿನ್’
ಅಭ್ಯರ್ಥಿ ಟ್ರಂಪ್‌ರನ್ನು ಯಾರು ಬೇಕಾದರೂ ಸೋಲಿಸಬಹುದು ಎಂಬ ಭ್ರಮೆ ಅವರಿಗಿತ್ತು. ಅವರ ಪ್ರಕಾರ ಕಮಲಾ ಹ್ಯಾರಿಸ್ ಅತ್ಯಂತ ಸಮರ್ಥ
ಅಭ್ಯರ್ಥಿಯಾಗಿದ್ದರು. ಆಕೆ ಪಕ್ಷಕ್ಕೆ ನಿಷ್ಠಳಾಗಿದ್ದರು. ಆಕೆಯನ್ನು ಕಣ್ಮುಚ್ಚಿಕೊಂಡು ನಂಬಬಹುದಿತ್ತು. ಆ ನಂಬಿಕೆಯ ಪ್ರಕಾರವೇ ಕಮಲಾ ಎಲ್ಲಾ ನಿರ್ಧಾರಗಳನ್ನೂ ಒಬಾಮಾಗಳಿಗೆ ಬಿಟ್ಟು, ತಾವು ನಾಮ್ -ಕೆ-ವಾಸ್ತೆ ಸಮಾರಂಭಗಳಲ್ಲಿ ಭಾಗವಹಿಸುವುದರಲ್ಲಿ ವ್ಯಸ್ತರಾಗಿದ್ದರು. ಈಗ ಮತದಾರರು ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದಾರೆ.
ಆದರೆ, ಡೆಮಾಕ್ರಟಿಕ್ ಪಕ್ಷದ ನಿಷ್ಠರು ಈ ಫಲಿತಾಂಶ ನೋಡಿ ಅಮೆರಿಕವನ್ನು ಬೈಯುತ್ತಾರೆಯೇ ಹೊರತು ತಮ್ಮನ್ನು ದೂಷಿಸಿಕೊಳ್ಳುವುದಿಲ್ಲ. ಏಕೆಂದರೆ ಮಿಸ್ಟರ್ ಆಂಡ್ ಮಿಸಸ್ ಮೋಸೆಸ್ ತಪ್ಪು ಮಾಡಲು ಸಾಧ್ಯವಿಲ್ಲ! ಅಯ್ಯೋ, ಇನ್ನು ೪ ವರ್ಷ ಅವರು ರಿಪಬ್ಲಿಕನ್ ಪಕ್ಷದ ಕಸದ ತೊಟ್ಟಿಯಿಂದ ಬರುವ ವಾಸನೆ ತಡೆದುಕೊಳ್ಳಲು ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಓಡಾಡಬೇಕಾಗುತ್ತದೆ. ಇಲ್ಲದಿದ್ದರೆ, ಪಾಪ, ಅವರ
ಸೂಕ್ಷ್ಮ ಮೂಗಿಗೆ ತುಂಬಾ ಸಮಸ್ಯೆಯಾಗುತ್ತದೆ. ಕೊನೆಯ ಪ್ರಚಾರಭಾಷಣ ಮಾಡಿ ಮುಗಿಸಿದಾಗಲೇ ಟ್ರಂಪ್‌ಗೆ ಫಲಿತಾಂಶ ನಿಚ್ಚಳವಾಗಿತ್ತು. ಹೀಗಾಗಿ ಅವರು ಬಹಳ ಖುಷಿಯಲ್ಲಿದ್ದರು. ತಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದ ಮಾಧ್ಯಮಗಳನ್ನು ಹಿಂದಿಕ್ಕಿ ಶ್ವೇತಭವನದ ರೇಸ್‌ನಲ್ಲಿ ಬಹಳ ಮುಂದೆ ಬಂದಿದ್ದೇನೆ ಎಂಬುದು ಅವರಿಗೆ ಗೊತ್ತಿತ್ತು. ಅಮೆರಿಕದಲ್ಲಿ ಜನರು ನೇರವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡುವುದಿಲ್ಲ.
ಅಧ್ಯಕ್ಷರನ್ನು ಆಯ್ಕೆ ಮಾಡುವುದಕ್ಕೆಂದೇ ಜನರು ಎಲೆಕ್ಟೋರಲ್ ಕಾಲೇಜ್ ಎಂಬ ಪ್ರತಿನಿಧಿಗಳ ಗುಂಪನ್ನು ಪ್ರತಿ ರಾಜ್ಯದಲ್ಲೂ ಆಯ್ಕೆ ಮಾಡಿರುತ್ತಾರೆ. ಅವರು ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಆ ಗುಂಪುಗಳಲ್ಲಿ ಟ್ರಂಪ್ ಪರ ಒಲವಿರುವ ಹೆಚ್ಚಿನವರು ‘ಪೊಲಿಟಿಕಲಿ ಇನ್‌ಕರೆಕ್ಟ್’ ಆಗಿರುವ ಪುರುಷರು, ಬಿಳಿಯರು ಮತ್ತು ಯುವ ಅಮೆರಿಕನ್ನರಾಗಿದ್ದರು. ಅವರು ಚುನಾವಣೆ ಆರಂಭವಾಗುವುದಕ್ಕೂ ಮೊದಲೇ ಬೈಡನ್ ಸರಕಾರದ ಬಗ್ಗೆ ಬೇಸತ್ತು ಕುಳಿತಿದ್ದರು. ನಂತರ ಅವರ ಜತೆಗೆ ಬೇರೆ ಬೇರೆ ಅನಿವಾರ್ಯ ಕಾರಣಗಳಿಗಾಗಿ ಇನ್ನೊಂದಷ್ಟು ಗುಂಪುಗಳು ಕೈಜೋಡಿಸಿದವು. ಅಮೆರಿಕದಲ್ಲಿರುವ ಶೇ.೩೧ರಷ್ಟು ಸ್ವತಂತ್ರ ಮತದಾರರಲ್ಲಿ ಹೆಚ್ಚಿನವರು ಈ ಬಾರಿ ಟ್ರಂಪ್‌ಗೆ ಮತ ಹಾಕಿದರು. ಅಂದರೆ,
ಮತದಾನ ಮಾಡಿದ ಶೇ.೫೪ರಷ್ಟು ಸ್ವತಂತ್ರ ಮತದಾರರಲ್ಲಿ ಶೇ.೪೩ರಷ್ಟು ಮಂದಿ ಟ್ರಂಪ್ ಪರ ಮತ ಚಲಾಯಿಸಿದ್ದರು.
ಇದು ಆರಂಭಿಕ ಲೆಕ್ಕಾಚಾರ. ಅಂತಿಮ ಲೆಕ್ಕಾಚಾರ ಅಲ್ಪಸ್ವಲ್ಪ ಬದಲಾಗಬಹುದು. ಆದರೆ, ಹೆಚ್ಚು ಬದಲಾಗುವುದಿಲ್ಲ. ಹಿಂದೆ ಕಮಲಾ
ಹ್ಯಾರಿಸ್‌ರನ್ನೇ ಶ್ವೇತ ಭವನಕ್ಕೆ ಕಳುಹಿಸಬೇಕು ಎಂದು ಪಣತೊಟ್ಟಿದ್ದ ಲ್ಯಾಟಿನ್ ಅಮೆರಿಕನ್ ಮೂಲದ ಮತದಾರರು ಬಹಳ ದೊಡ್ಡ ಸಂಖ್ಯೆಯಲ್ಲಿ ಟ್ರಂಪ್ ಪಾಳಯಕ್ಕೆ ಜಿಗಿದಿದ್ದರು. ಏಕೆಂದರೆ, ಹಣದುಬ್ಬರ ಅವರನ್ನು ಸುಡುತ್ತಿತ್ತು.
ಇನ್ನು, ೨೦೨೪ರಲ್ಲಿ ಜೋ ಬೈಡನ್‌ಗೆ ಲಭಿಸಿದ್ದ ಕರಿಯರ ಮತಗಳಲ್ಲಿ ಹ್ಯಾರಿಸ್ ಕನಿಷ್ಠ ಪಕ್ಷ ಶೇ.೧೦ರಷ್ಟಾದರೂ ಮತಗಳನ್ನು ಕಳೆದು
ಕೊಂಡಿದ್ದರು. ಮಿಶಿಗನ್‌ನಲ್ಲಿ ಅರಬ್ ಅಮೆರಿಕನ್ನರು ಹ್ಯಾರಿಸ್‌ರಿಂದ ದೂರವಾಗಿ ಟ್ರಂಪ್‌ಗೆ ಅನುಕೂಲ ಮಾಡಿಕೊಟ್ಟರು. ಟ್ರಂಪ್ ಇಸ್ರೇಲ್‌ಗೆ ಬೆಂಬಲ ನೀಡುವವರಾಗಿದ್ದರೂ ಪ್ಯಾಲೆಸ್ತೀನ್ ಮತ್ತು ಗಾಜಾ ಪಟ್ಟಿಯ ವಿಷಯದಲ್ಲಿ ಬೈಡನ್ ಆಡಳಿತ ನಡೆದು ಕೊಂಡ ರೀತಿಗಾಗಿ ಅವರ ಪಕ್ಷಕ್ಕೆ ಶಿಕ್ಷೆ ಕೊಡಲೇ ಬೇಕೆಂದು ಅರಬ್ ಅಮೆರಿಕನ್ನರು ನಿರ್ಧರಿಸಿದ್ದರು.
ಆದರೆ ಅವರು ನೇರವಾಗಿ ಟ್ರಂಪ್‌ಗೆ ಮತ ಹಾಕಲಿಲ್ಲ, ಅದರ ಬದಲಿಗೆ ೩ನೇ ಅಭ್ಯರ್ಥಿಯ ಪರ ನಿಂತು ತಮ್ಮ ಮತವನ್ನು ಉದ್ದೇಶ ಪೂರ್ವಕವಾಗಿ ವ್ಯರ್ಥ ಮಾಡಿದರು. ಇನ್ನು, ಈ ಸಲದ ಫಲಿತಾಂಶ ಹೀಗೇ ಇರುತ್ತದೆ ಎಂದು ಹೇಳುವ ಅನೇಕ ರಾಜಕೀಯೇತರ ಸುಳಿವುಗಳು ಕೂಡ ಚುನಾವಣೆಗೂ ಮೊದಲೇ ಲಭಿಸಿದ್ದವು.
ಕ್ರಿಪ್ಟೋಕರೆನ್ಸಿಯನ್ನು ಕಾನೂನುಬದ್ಧ ಮಾಡುತ್ತೇನೆ ಎಂದು ಟ್ರಂಪ್ ಹೇಳಿದ ಮೇಲೆ ಬಿಟ್ ಕಾಯಿನ್ ಮೌಲ್ಯ ಶೇ.೩ರಷ್ಟು ಏರಿಕೆಯಾಗಿತ್ತು. ಅಮೆರಿಕದ ಬಹುದೊಡ್ಡ ಬೆಟ್ಟಿಂಗ್ ಕಂಪನಿ ‘ಬೆಟ್-ರ್’ ತನ್ನ ಪಂಟರ್‌ಗಳಿಗೆ ಈ ಸಲ ಟ್ರಂಪ್ ಗೆಲ್ಲುತ್ತಾರೆ ಎಂದು ಹೇಳುತ್ತಿತ್ತು. ಲಂಡನ್ನಿ ನಲ್ಲೂ ಬ್ರಿಟಿಷ್ ಜೂಜುಕೋರರು ಪೆನ್ಸಿಲ್ವೇನಿಯಾ, ಜಾರ್ಜಿಯಾ, ನೆವಾಡಾ, ನಾರ್ತ್ ಕೆರೋಲಿನಾದಲ್ಲಿ ಅಥವಾ ‘ಬೇಲಿ ಮೇಲೆ ಕುಳಿತ’ ೭ ರಾಜ್ಯಗಳ ಪೈಕಿ ೫ ರಾಜ್ಯಗಳಲ್ಲಿ ಟ್ರಂಪ್ ಗೆಲ್ಲುತ್ತಾರೆ ಎಂದೇ ಬೆಟ್ ಕಟ್ಟುತ್ತಿದ್ದರು. ಅಂದರೆ, ಅಮೆರಿಕದ ದೊಡ್ಡ ಮಾಧ್ಯಮಗಳಿಗಿಂತ ಹೆಚ್ಚಿನ ಮಾಹಿತಿ ಬೆಟ್ಟಿಂಗ್ ದಂಧೆಯವರಿಗೆ ಇತ್ತು.
ಫಲಿತಾಂಶದ ದಿನ ಭಾರತೀಯ ಕಾಲಮಾನದಲ್ಲಿ ಬೆಳಗ್ಗೆ ೭ ಗಂಟೆಗೆ ಯಾವ ನ್ಯೂಸ್ ಚಾನಲ್ ಬೇಕಿದ್ದರೂ ಲೀಡ್‌ಗಳನ್ನು ನೋಡಿ ಸರಳ ಲೆಕ್ಕಾಚಾರದೊಂದಿಗೆ ಟ್ರಂಪ್ ಗೆಲ್ಲುತ್ತಾರೆ ಎಂದು ಮೊದಲೇ ಹೇಳಬಹುದಿತ್ತು. ಆದರೆ, ಏನಾದರೂ ಪವಾಡ ಸಂಭವಿಸಬಹುದು ಎಂಬ
ನಿರೀಕ್ಷೆಯಲ್ಲಿ ಹೆಚ್ಚಿನ ಮಾಧ್ಯಮಗಳು ಹಾಗೆ ಹೇಳುವುದನ್ನು ಬೇಕಂತಲೇ ತಪ್ಪಿಸುತ್ತಿದ್ದವು. ಅಧ್ಯಕ್ಷೀಯ ಚುನಾವಣೆಯ ಜತೆಗೇ ನಡೆದಿದ್ದ ಸೆನೆಟ್ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷವು ಟ್ರಂಪ್ ಎಫೆಕ್ಟ್ ನಿಂದಲೇ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತಿದ್ದರೂ ಅದನ್ನು ಒಪ್ಪಿಕೊಳ್ಳಲು ಅಮೆರಿಕದ ಮಾಧ್ಯಮಗಳು ಸಿದ್ಧರಿರಲಿಲ್ಲ.
ಕೊನೆಗೆ ಫಲಿತಾಂಶ ಬಂದಾಗ ಟ್ರಂಪ್ ೨೦೧೬ರಲ್ಲಿ ಹಿಲರಿ ಕ್ಲಿಂಟನ್ ಪಡೆದಿದ್ದಕ್ಕಿಂತ ೩೦ ಲಕ್ಷ ಕಡಿಮೆ ಮತ ಮತ್ತು ೨೦೨೦ರಲ್ಲಿ ಜೋ ಬೈಡನ್ ಪಡೆದಿದ್ದಕ್ಕಿಂತ ೭೦ ಲಕ್ಷ ಕಡಿಮೆ ಮತ ಪಡೆದಿದ್ದರೂ ಈ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್‌ಗಿಂತ ೫೦ ಲಕ್ಷ ಹೆಚ್ಚು ಮತ ಗಳಿಸಿ ವಿಜಯಿಯಾಗಿದ್ದರು. ಅದರೊಂದಿಗೆ, ಆವರೆಗಿನ ಎಲ್ಲಾ ಒತ್ತಡಗಳನ್ನೂ ಮೀರಿ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವು ಭೂಮಿಯನ್ನು
ಗಡಗಡ ನಡುಗಿಸದೆಯೇ ದೊಡ್ಡ ಭೂಕಂಪನವನ್ನು ಉಂಟುಮಾಡಿತ್ತು.
ಈ ಚುನಾವಣೆಯಲ್ಲಿ ಅಮೆರಿಕದ ದೊಡ್ಡ ಮಾಧ್ಯಮಗಳ ಕಳ್ಳಾಟಗಳ ನಡುವೆಯೂ ಲಂಡನ್ನಿನ ಒಂದು ಟಿವಿ ಚಾನಲ್‌ನಲ್ಲಿ ಚರ್ಚೆಗೆ ಕುಳಿತಿದ್ದ ವಿಐಪಿಯೊಬ್ಬರ ನಿಷ್ಪಕ್ಷಪಾತ ನಡವಳಿಕೆಯನ್ನು ಮೆಚ್ಚಿಕೊಳ್ಳಲೇಬೇಕು. ಬ್ರಿಟನ್ನಿನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಫಲಿತಾಂಶದ ದಿನ ಕಾಮೆಂಟರಿ ಹೇಳಲು ಚಾನಲ್-೪ ಕರೆಸಿತ್ತು. ಅವರ ಜತೆಗೆ ಸ್ಟಾರ್ಮಿ ಡೇನಿಯಲ್ಸ್ ಕುಳಿತಿದ್ದರು. ಬೋರಿಸ್ ಜಾನ್ಸನ್ ತುಂಬಾ ನಿಷ್ಠುರ ಮತ್ತು ನಿಷ್ಪಕ್ಷ ಪಾತಿಯಾಗಿ ನಡೆದುಕೊಂಡರು. ಅವರು ಡೊನಾಲ್ಡ್ ಟ್ರಂಪ್ ಪರವಾಗಿಯೂ ಮಾತನಾಡಲಿಲ್ಲ ಅಥವಾ ಕಮಲಾ ಹ್ಯಾರಿಸ್ ಪರವಾಗಿಯೂ ಮಾತನಾಡಲಿಲ್ಲ.
ಬದಲಿಗೆ, ಅತ್ಯಂತ ನಿಷ್ಠೆಯಿಂದ ತಮ್ಮ ಹೊಸ ಪುಸ್ತಕದ ಬಗ್ಗೆ ಮಾತನಾಡಿದರು. ಎಲ್ಲಿಯವರೆಗೆ ಅಂದರೆ, ಕೊನೆಗೆ ಸ್ಟುಡಿಯೋದಲ್ಲೇ ವೀಕ್ಷಕರಿಗೆ
ಪುಸ್ತಕವನ್ನು ಎತ್ತಿ ಹಿಡಿದು ತೋರಿಸಿ, ಇಂದೇ ಹೋಗಿ ಒಂದು ಕಾಪಿ ಖರೀದಿಸಿ ಎಂದು ಹೇಳಿದರು. ಚಾನಲ್‌ನವರು ಅನಿವಾರ್ಯವಾಗಿ ಅವರನ್ನು
‘ಹೊರಗೆ’ ಹಾಕಬೇಕಾಯಿತು. ಹಾಗಾಗಿ ಮೋಸೆಸ್ ಹೇಳುವಂತೆ: ಆಮೆನ್….
(ಲೇಖಕರು ಹಿರಿಯ ಪತ್ರಕರ್ತರು)
ಇದನ್ನೂ ಓದಿ: M J Akbar Column: ಸಾವೇ, ನೀನೆಲ್ಲಿ ಕುಟುಕುತ್ತೀಯೆ ಎಂಬುದು ನಮಗೆ ಗೊತ್ತು !