Tuesday, 17th December 2024

‌M J Akbar Column: ಎಷ್ಟೊಂದು ನಂಬಿಕೆಗಳು, ಆದರೆ ಎಷ್ಟು ಕಡಿಮೆ ಶಾತಿ !

ಅಕ್ಬರ್‌ ನಾಮಾ

ಎಂ.ಜೆ.ಅಕ್ಬರ್

ಸಿರಿಯಾದಲ್ಲಿ ಬಶರ್ ಅಲ್ ಅಸದ್‌ನ ಸಾಮ್ರಾಜ್ಯ ಪತನಗೊಂಡ ಪರಿಣಾಮ ಇರಾನ್ ದುರ್ಬಲ ವಾಗಿದೆಯೇ? ಅಥವಾ ಇಸ್ರೇಲ್ ವಿರುದ್ಧದ ಯುದ್ಧಕ್ಕೆ ಇನ್ನಷ್ಟು ಶಕ್ತಿ ಬಂದಿದೆಯೇ?

ಅಲೆಪ್ಪೋದಿಂದ ಏನೂ ಸುದ್ದಿಯಿಲ್ಲ. ದೇವರು ದೊಡ್ಡವನು!’ ಹಾಗಂತ ಡಮಾಸ್ಕಸ್‌ನ ಅಲ್ ಹಮೀದಿಯಾ
ಬಜಾರ್‌ನಲ್ಲಿರುವ ವ್ಯಾಪಾರಿಯೊಬ್ಬ ಬಹುಶಃ ಸಾವಿರ ವರ್ಷಗಳ ಹಿಂದೆ ಹೇಳಿದ್ದ. ಆದರೆ ಕಳೆದ ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ಅಲೆಪ್ಪೋದಿಂದ ದೊಡ್ಡ ಸುದ್ದಿಯೇ ಬಂದಿತು. ಅದರ ಬೆನ್ನಲ್ಲೇ ಡಿಸೆಂಬರ್ ಮೊದಲ ವಾರ ದಲ್ಲಿ ಸಿರಿಯಾದ ರಾಜಧಾನಿ ಡಮಾಸ್ಕಸ್‌ನ ಬೀದಿಯಲ್ಲಿ ದೈತ್ಯಾಕಾರದ ಪ್ರತಿಮೆಯ ತಲೆಯೊಂದು ಉರುಳಿ ಬಿತ್ತು. ಸುದ್ದಿ ಹಾಗೂ ಅಪಾಯ ಬಹಳ ವೇಗವಾಗಿ ಚಲಿಸುತ್ತವೆ.

ಇತಿಹಾಸವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು ಅಂದರೆ ನಾವು ಮಾರುಕಟ್ಟೆಗಳ ಸಿದ್ಧಾಂತವನ್ನು ಗಮನಿಸ ಬೇಕು. ಡಮಾಸ್ಕಸ್‌ನ ಬೃಹತ್ ಮಾರುಕಟ್ಟೆ ಒಂದರ್ಥದಲ್ಲಿ ಇತಿಹಾಸದಷ್ಟೇ ಹಳೆಯದು! ಪ್ರಾಯಶಃ ಅಲ್ಲಿ ಯಾವಾಗಲೂ 4000 ಅಂಗಡಿಗಳು ಇದ್ದಿರಬಹುದು. ಅಲ್ಲಿ ಯಾವಾಗಲೂ ಭಾರತದಿಂದ ಕಳ್ಳಸಾಗಣೆ ಮಾಡಿದ ಉಕ್ಕಿನಲ್ಲಿ ತಯಾರಿಸಿದ ಚಾಕು ಚೂರಿಗಳು ಬಿಕರಿಯಾಗುತ್ತಿದ್ದವು. ಅಲ್ಲಿ ಯಾವಾಗಲೂ ಚೀನಾದ ರೇಷ್ಮೆಯಿಂದ ತಯಾರಿಸಿದ ಸಿರಿಯನ್ ಉಡುಗೆಗಳು ಮಾರಾಟವಾಗುತ್ತಿದ್ದವು.

ಚೌಕಾಸಿಯ ಗೌಜು ಅಲ್ಲಿ ಯಾವಾಗಲೂ ಕಿವಿಗೆ ಸಂಗೀತದಂತೆ ಅಪ್ಪಳಿಸುತ್ತಿತ್ತು. ಹರಟೆಯೇ ಅಲ್ಲಿ ಜ್ಞಾನದ ವಿನಿಮಯವಾಗಿತ್ತು. ಇಸ್ತಾಂಬುಲ್‌ನ ಗ್ರ್ಯಾಂಡ್ ಬಜಾರ್ ಸ್ಥಾಪನೆಯಾಗಿದ್ದು 15ನೇ ಶತಮಾನದಲ್ಲಿ. ಜಗತ್ತಿನ ಅತಿ ಪುರಾತನ ಮಾರುಕಟ್ಟೆಯೆಂದು ನಾವು ಹೇಳುವ ಕೈರೋ ನಿರ್ಮಾಣವಾಗಿದ್ದು 10ನೇ ಶತಮಾನದಲ್ಲಿ. ಆದರೆ, ಡಮಾಸ್ಕಸ್ ನಗರ ಬೈಬಲ್ ಕಾಲದ ಅರಮೀನ್‌ಗಳಿಗೆ ರಾಜಧಾನಿಯಾಗಿತ್ತು.

ಅವರ ಅರಮೈಕ್ ಭಾಷೆಯನ್ನು ಇವತ್ತಿಗೂ ಅಲ್ಲಿ ಮಾತನಾಡಲಾಗುತ್ತದೆ. ಪ್ರಾಚೀನ ಕಾಲದಿಂದಲೂ ನಿರಂತರ ವಾಗಿ ಮನುಷ್ಯರು ವಾಸಿಸುತ್ತಾ ಬಂದಿರುವ ಅತ್ಯಂತ ಹಳೆಯ ನಗರ ಡಮಾಸ್ಕಸ್. ಅಲ್ಲಿನ ಚರ್ಚನ್ನು ಬೈಜಾಂಟಿ ಯನ್ ಚಕ್ರವರ್ತಿ ಥಿಯೋಡೋಸಿಸ್ 4ನೇ ಶತಮಾನದ ಕೊನೆಯ ಭಾಗದಲ್ಲಿ ನಿರ್ಮಿಸಿದ್ದ. ಪೋಪ್ ಹೊರತು ಪಡಿಸಿದರೆ ಅತಿಹೆಚ್ಚು ಅಧಿಕಾರ ಆಂಟಿಯೋಕ್ ಪೇಟ್ರಿಯಾರ್ಕನಿಗಿತ್ತು. ಅರಬ್ ಇತಿಹಾಸದ ಅತ್ಯಂತ ಡೈನಾಮಿಕ್ ದಂಡನಾಯಕನೆಂದು ಹೆಸರಾದ ಖಾಲಿದ್ ಇಬ್ನ್ ಅಲ್ ವಾಲಿದ್ 634ರಲ್ಲಿ ಡಮಾಸ್ಕಸ್ ನಗರವನ್ನು ವಶಪಡಿಸಿಕೊಂಡ.

ಬಳಿಕ ಅದನ್ನು ಮುಸ್ಲಿಂ ಸಾಮ್ರಾಜ್ಯದ ಪ್ರಮುಖ ಪ್ರದೇಶವನ್ನಾಗಿ ಮಾಡಿದ. 661ರಲ್ಲಿ ಡಮಾಸ್ಕಸ್ ನಗರವನ್ನು ಉಮಯ್ಯಾದ್ ಗೆದ್ದು ಕ್ಯಾಲಿಫೇಟ್‌ನ ರಾಜಧಾನಿಯನ್ನಾಗಿ ಮಾಡಿದ. 680ರಲ್ಲಿ ನಡೆದ ಕರ್ಬಾಲಾ ಯುದ್ಧದಲ್ಲಿ ಜನರನ್ನು ಸೆರೆಹಿಡಿದು ಎಳೆದೊಯ್ಯುವುದನ್ನು ಅಲ್ ಹಮೀದಿಯಾ ಬಜಾರ್‌ನ ವ್ಯಾಪಾರಿಗಳು ಕುತೂಹಲದಿಂದ ನೋಡಿದ್ದರು. ಪ್ರವಾದಿ ಮೊಹಮ್ಮದರ ಮೊಮ್ಮಗನಾದ ಹುತಾತ್ಮ ಇಮಾಮ್ ಹುಸೇನ್‌ನನ್ನು ಪ್ರಸಿದ್ಧ
ಉಮಯ್ಯಾದ್ ಮಸೀದಿಯಲ್ಲೇ ದಫನ್ ಮಾಡಲಾಗಿದೆ.

ಮುಸ್ಲಿಮರ ಸಾಂಪ್ರದಾಯಿಕ ನಂಬಿಕೆಯ ಪ್ರಕಾರ 715ರಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡ ಈ ಮಸೀದಿ ಬ್ಯಾಪ್ಟಿಸ್ಟ್ ಸೇಂಟ್ ಜಾನ್‌ನ ಸಮಾಽ ಸ್ಥಳವಾಗಿತ್ತು. ತನ್ನ ದತ್ತುಪುತ್ರಿ ಸಲೋಮ್‌ಳನ್ನು ಖುಷಿಪಡಿಸಲು ರಾಜ ಹೆರೋಡ್ ಅಂತಿಪಾಸ್ ಈ ಸಂತನ ತಲೆಯನ್ನು ಜೆರುಸಲೇಂನಲ್ಲಿ ಕಡಿದುಹಾಕಿದ್ದ. ನಾನು ಎಂಟು ವರ್ಷಗಳ ಹಿಂದೆ ಕೊನೆಯ ಬಾರಿ ಡಮಾಸ್ಕಸ್‌ಗೆ ಹೋಗಿದ್ದಾಗ ಹರೆಯದ ಜೋಡಿಗಳು ಆಗಲೂ ಸೇಂಟ್ ಜಾನ್‌ನ ಆಶೀರ್ವಾದ ಪಡೆಯಲು ತಮ್ಮ ಫೋಟೋಗಳನ್ನು ಅಲ್ಲಿರುವ ಗಾಜಿನ ಜಾಡಿಯೊಳಗೆ ಹಾಕುತ್ತಿದ್ದರು. 831ರಲ್ಲಿ 253 ಅಡಿ
ಎತ್ತರದ ಮಧನತ್ ಅಲ್ ಅರುಸ್ ಅಥವಾ ಮಿನರೆಟ್ ಆಫ್ ದಿ‌ ಬ್ರೈಡ್ ಹೆಸರಿನ ಗೋಪುರ ಆ ಮಸೀದಿಯ ಉತ್ತರದ ಗೋಡೆಯ ಮೇಲೆ ನಿರ್ಮಾಣವಾಯಿತು. ಗೋಪುರ ನಿರ್ಮಾಣಕ್ಕೆ ಸಹಕರಿಸಿದ ವ್ಯಾಪಾರಿಯ ಮಗಳ ಹೆಸರನ್ನೇ ಅದಕ್ಕೆ ಇಡಲಾಗಿತ್ತು.

ಅವಳು ಆ ಸಮಯದ ಸುಲ್ತಾನನನ್ನು ಮದುವೆಯಾಗಿದ್ದಳು. ಪ್ರತಿದಿನ ಜನರನ್ನು ಪ್ರಾರ್ಥನೆಗೆ ಕರೆಯುವ ವ್ಯಕ್ತಿ ಆ ಗೋಪುರದ ವೃತ್ತಾಕಾರದ 160 ಮೆಟ್ಟಿಲುಗಳನ್ನು ಹತ್ತಿ ಹೋಗಿ ಘೋಷಣೆ ಕೂಗುತ್ತಿದ್ದ. ಗೋಪುರದ ಬಳಿ ಇಬ್ನ್ ಅಲ್ ಶಾತಿರ್‌ನ ಗಡಿಯಾರವನ್ನು ಹೋಲುವ ಬೃಹತ್ ಗಡಿಯಾರ ನಿರ್ಮಿಸಲಾಗಿತ್ತು. ಆ ಸಮಯದಲ್ಲಿ ಜನರಿಗೆ ಸಮಯ ತಿಳಿದುಕೊಳ್ಳಲು ಅನುಕೂಲವಾಗುವಂತೆ ಇಡೀ ದಿನವನ್ನು ಸಮ ಪ್ರಮಾಣದ ಸಂಖ್ಯೆಯಲ್ಲಿ ವೈಜ್ಞಾನಿಕ ವಾಗಿ ವಿಭಾಗಿಸಿಕೊಟ್ಟಿದ್ದ ವಿಜ್ಞಾನಿ ಇಬ್ನ್ ಅಲ್ ಶಾತಿರ್.

ಈ ವರ್ಷದ ಡಿಸೆಂಬರ್ 7ರ ಶನಿವಾರ ಉಮಯ್ಯಾದ್ ಮಸೀದಿಯಲ್ಲಿ ಅಲ್ಲಾಹು ಅಕ್ಬರ್ ಮತ್ತು ಲಬೇಕ್ ಘೋಷಣೆಗಳು ಮೊಳಗಿದವು. ಆ ವೇಳೆಗೆ ಸರಿಯಾಗಿ, ಡಮಾಸ್ಕಸ್ ಮೇಲೆ ದಾಳಿ ನಡೆಸಿ ನಗರವನ್ನು ವಶಪಡಿಸಿ ಕೊಂಡ ಕೊನೆಯ ವ್ಯಕ್ತಿ ಅಹಮದ್ ಅಲ್ ಶರಾ ಮೊದಲ ಪತ್ರಿಕಾಗೋಷ್ಠಿ ನಡೆಸಿ ತಾನು ಡಮಾಸ್ಕಸ್ ನಗರವನ್ನು ವಶಪಡಿಸಿಕೊಂಡ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದ. ಹಯಾತ್ ತಹ್ರೀರ್ ಅಲ್ ಶಾಮ್ (ಎಚ್‌ಟಿಎಸ್) ಅನುಯಾಯಿಗಳು ‘ಹೇ ಅಲ್ಲಾ, ಇದೋ ನಿನ್ನ ಸೇವೆಗಾಗಿ ನಾವಿಲ್ಲಿಗೆ ಬಂದಿದ್ದೇವೆ’ ಎಂದು ಘೋಷಿಸಿದರು.

ಅತ್ತ ಅಮೆರಿಕ ಮತ್ತು ಬ್ರಿಟನ್ ಕೂಡ ಬಶರ್ ಅಲ್ ಅಸದ್‌ನ ಅವಸಾನವನ್ನು ಸ್ವಾಗತಿಸಿದವು. ಜತೆಗೇ, ಇನ್ನೂ ಉತ್ತರ ಸಿಗದ ನೂರಾರು ಪ್ರಶ್ನೆಗಳಿಗೆ ಉತ್ತರ ಹುಡುಕಲು ತನಿಖೆ ಆರಂಭಿಸಿದವು. ಒಟ್ಟು ಮೂರು ಶಕ್ತಿಗಳು ಡಮಾ ಸ್ಕಸ್‌ನಲ್ಲಿ ಉಂಟಾದ ಈ ಶೂನ್ಯವನ್ನು ಸಿರಿಯಾದ ಮಿಲಿಟರಿ ವ್ಯವಸ್ಥೆಯ ನಾಶಕ್ಕೆ ಸಿಕ್ಕ ಅದ್ಭುತ ಅವಕಾಶವೆಂದು ಲೆಕ್ಕಹಾಕಿವೆ. ಇಸ್ರೇಲ್‌ನವರು ಸಿರಿಯಾದ ಶೇ.80ರಷ್ಟು ಶಸ್ತ್ರಾಸ್ತ್ರಗಳನ್ನು ನಾಶಪಡಿಸಿರುವುದಾಗಿ ಹೇಳಿಕೊಂಡಿ ದ್ದಾರೆ. ಇದು ಇಸ್ರೇಲ್‌ನ ಹೇಳಿಕೆಯಷ್ಟೆ. ಭದ್ರತಾ ವಿಶ್ಲೇಷಕರು ಸಾಮಾನ್ಯವಾಗಿ ಇಂಥ ವಿಷಯಗಳನ್ನು ಬಹಿರಂಗವಾಗಿ ಮಾತನಾಡುವುದಿಲ್ಲ.

ಈಗಾಗಲೇ ಅವಧಿ ಮುಗಿದಿದ್ದ ಶಸ್ತ್ರಾಸ್ತ್ರಗಳನ್ನು ನಾಶಪಡಿಸಿದ್ದೇ ಹೌದಾದರೆ 2025ರಲ್ಲಿ ಹೊಸತಾಗಿ ಇನ್ನಷ್ಟು ಶಸ್ತ್ರಾಸ್ತ್ರಗಳನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಂತಾಯಿತು ಎಂದು ಅವರು ಒಳಗೊಳಗೇ ಅಂದಾಜಿಸಿರ ಬಹುದು. ಇದು ಸದ್ಯಕ್ಕೆ ಮುಗಿಯುವ ಯುದ್ಧವಲ್ಲ. ಇಸ್ಲಾಮಿಸಂ ಬ್ರ್ಯಾಂಡ್‌ನಡಿ ಕಾರ್ಯಾಚರಣೆ ನಡೆಸುತ್ತಿದ್ದ ವ್ಯವಸ್ಥೆಗಳನ್ನು ಅಮೆರಿಕ ಧ್ವಂಸಗೊಳಿಸಿದೆ. ಮತ್ತು ಕುರ್ದ್‌ಗಳಿಗೆ ಪ್ರತ್ಯೇಕ ದೇಶ ಬೇಕೆಂದು ಹೋರಾಡುತ್ತಿದ್ದ ಕುರ್ದಿಶ್ ವರ್ಕರ್ಸ್ ಪಾರ್ಟಿಯ ಸಂಪನ್ಮೂಲಗಳ ಮೇಲೆ ಟರ್ಕಿ ದಾಳಿ ನಡೆಸಿದೆ.

ಅತ್ಯಾಧುನಿಕ ಬಾಂಬ್‌ಗಳ ಈ ಗದ್ದಲದ ನಡುವೆ, ಹಯಾತ್ ತಹ್ರೀರ್ ಅಲ್ ಶಾಮ್ ಸಂಘಟನೆಯು ಪೂರ್ವದಲ್ಲಿ ಇರಾಕ್ ಗಡಿಯಲ್ಲಿ ಅಮೆರಿಕದ ಬೆಂಬಲದಿಂದ ಕಾರ್ಯಾಚರಣೆ ನಡೆಸುತ್ತಿರುವ ಕುರ್ದಿಶ್ ಸಂಘಟನೆಯ ಹಿಡಿತ ದಿಂದ ಡಿಯೆರ್ ಎಜ್ ಜೋರ್ ಹೆಸರಿನ ನಗರವನ್ನು ವಶಪಡಿಸಿಕೊಂಡಿರುವುದು ಹೆಚ್ಚು ಸುದ್ದಿಯೇ ಆಗಿಲ್ಲ. ಸ್ಪಷ್ಟವಾದ ಉತ್ತರ ಸಿಗಲು ಇನ್ನೂ ಕಾಲ ಪಕ್ವವಾಗಿಲ್ಲ. ಆದರೆ ಪೂರ್ವಗ್ರಹಪೀಡಿತ ಮನಸ್ಥಿತಿಯಿಂದ ಒಮ್ಮೆ ಹೊರಗೆ ಬಂದ ಮೇಲೆ ಕೊನೆಯ ಪಕ್ಷ ನಮ್ಮ ಪ್ರಶ್ನೆಗಳಾದರೂ ಸ್ಪಷ್ಟವಾಗಬೇಕು.

ದೊಡ್ಡ ಪ್ರಶ್ನೆಯಿರುವುದು ಏನೆಂದರೆ, ಸಿರಿಯಾದಲ್ಲಿ ಬಶರ್ ಅಲ್ ಅಸದ್‌ನ ಸಾಮ್ರಾಜ್ಯ ಪತನಗೊಂಡ ಪರಿಣಾಮ ಇರಾನ್ ದುರ್ಬಲವಾಗಿದೆಯೇ? ಅಥವಾ ಇಸ್ರೇಲ್ ವಿರುದ್ಧದ ಯುದ್ಧಕ್ಕೆ ಇನ್ನಷ್ಟು ಶಕ್ತಿ ಬಂದಿದೆಯೇ?
ಉಮಯ್ಯಾದ್ ಮಸೀದಿಯ ಬಳಿ ಹಯಾತ್‌ನವರು ಸಂಭ್ರಮಾಚರಣೆ ನಡೆಸುತ್ತಿದ್ದಾಗ ಕೂಗುತ್ತಿದ್ದ ಉನ್ಮತ್ತ ಘೋಷಣೆಗಳ ಒಂದು ವಿಡಿಯೋದಲ್ಲಿ, ‘ಇದು ಇಸ್ಲಾಂನ ನೆಲ, ಇದು ಡಮಾಸ್ಕಸ್, ಇದು ಮುಸ್ಲಿಮರ ಭದ್ರಕೋಟೆ’ ಎಂಬ ಕೂಗುಕೇಳಿಬರುತ್ತಿತ್ತು.

‘ಇಲ್ಲಿಂದ ನಮ್ಮ ಪ್ರಯಾಣ ಜೆರುಸಲೇಮ್‌ಗೆ! ಹೇ ಜೆರುಸಲೇಂ, ಇದೋ ನಾವು ಬರುತ್ತಿದ್ದೇವೆ. ಗಾಜಾದ ಜನರೇ, ತಾಳ್ಮೆಯಿಂದಿರಿ ತಾಳ್ಮೆಯಿಂದಿರಿ…’ ಎಂದೂ ಅವರು ಕೂಗುತ್ತಿದ್ದರು. ಇದು ಸಿರಿಯಾದಲ್ಲಾಯಿತು. ಅತ್ತ ಗಾಜಾದಲ್ಲಿ
ಹಮಾಸ್ ಕೂಡ ಡಮಾಸ್ಕಸ್‌ನಲ್ಲಿ ಆಡಳಿತ ಬದಲಾಗಿರುವುದನ್ನು ಸ್ವಾಗತಿಸಿದೆ.

ಗೆಲುವಿಗೆ ಸಾವಿರಾರು ತಂದೆಯರು ಇರುವುದರಿಂದ ಮತ್ತು ಸೋಲು ಯಾವತ್ತೂ ಅನಾಥವಾಗಿರುವುದರಿಂದ ಸಿರಿಯಾದಲ್ಲಿ ಅಸದ್ ಕುಟುಂಬದ ಆಡಳಿತ ಅಂತ್ಯಗೊಳ್ಳುವಂತೆ ಮಾಡಿದ್ದು ನಾವೇ ಎಂದು ಜೋ ಬೈಡೆನ್ ಮತ್ತು ಬೆಂಜಮಿನ್ ನೆತನ್ಯಾಹು ಹೇಳಿಕೊಳ್ಳುತ್ತಿದ್ದಾರೆ. ಇದು ರಾಜಕೀಯ ಅವಕಾಶವಾದಿತನ. ಇದರ ಮರ್ಮವನ್ನು ಅರ್ಥಮಾಡಿಕೊಳ್ಳುವುದು ಕಷ್ಟವಲ್ಲ. ಇಬ್ಬರಿಗೂ ಹಳೆಯ ಎಚ್ಚರಿಕೆಗಳ ಬಗ್ಗೆ ಸಂಪೂರ್ಣ ಮಾಹಿತಿಯಿದೆ. ನೀವೇನು ಬಯಸುತ್ತೀರೋ ಅದರ ಬಗ್ಗೆ ಹುಷಾರಾಗಿರಿ; ಏಕೆಂದರೆ ಅದು ಸಿಕ್ಕೇಬಿಡಬಹುದು!

ಸಿರಿಯಾದ ಮಿಲಿಟರಿ ಮೂಲಸೌಕರ್ಯಗಳ ಮೇಲೆ ಇಸ್ರೇಲ್ ಈಗ ಏಕೆ ಬಾಂಬ್ ದಾಳಿ ನಡೆಸುತ್ತಿದೆ ಎಂಬುದನ್ನು
ತಿಳಿದುಕೊಳ್ಳಬೇಕೆಂದರೆ ಸಿರಿಯಾದಲ್ಲಿ ಬಶರ್ ಅಲ್ ಅಸದ್ ಅಧಿಕಾರದಲ್ಲಿದ್ದಾಗ ಏಕೆ ನೆತನ್ಯಾಹು ಆ ದೇಶವನ್ನು ಕೆಣಕಲು ಹೋಗಲಿಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅಸದ್ ಇಸ್ರೇಲ್‌ಗೆ ಅಪಾಯಕಾರಿ ಯಾಗಿರಲಿಲ್ಲ.

ಅರ್ಧ ಶತಮಾನದ ಯುದ್ಧ 1973ರಲ್ಲಿ ಕೊನೆಗೊಂಡ ನಂತರ ಸ್ಥಾಪನೆಯಾದ ವ್ಯವಸ್ಥೆಯನ್ನು ಹಾಗೇ ಉಳಿಸಿ ಕೊಳ್ಳುವುದಾಗಿ ತನ್ನ ತಂದೆ ನೀಡಿದ್ದ ವಾಗ್ದಾನವನ್ನು ಕಾಪಾಡಿಕೊಂಡು ಹೋಗುವುದಷ್ಟೇ ಅವನ ಗುರಿಯಾಗಿತ್ತು. ಆದರೆ ಅವನ ಉತ್ತರಾಧಿಕಾರಿಗಳು ಶಾಂತಿ ಸ್ಥಾಪನೆಯ ಬಗ್ಗೆ ವೇದಿಕೆಯಲ್ಲಿ ಏನೇ ಭಾಷಣ ಬಿಗಿದರೂ ಈ ಒಪ್ಪಂದ ವನ್ನು ಉಳಿಸಿಕೊಳ್ಳುವ ಸಾಧ್ಯತೆ ಇರಲಿಲ್ಲ. ಅಸದ್ ಓಡಿಹೋದ ಎಂದಮಾತ್ರಕ್ಕೆ ಸಿರಿಯಾದ ಸೇನೆಗಾಗಲೀ ಅಥವಾ ಸಿರಿಯಾದ ಜನರಿಗಾಗಲೀ ಗೋಲನ್ ಹೈಟ್ಸ್ ಪುನಃ ತಮ್ಮ ದೇಶದ ವಶಕ್ಕೆ ಬರಬೇಕು ಎಂಬ ಆಸೆ ಇಲ್ಲ ಎಂದರ್ಥ ವಲ್ಲ. 1967ರಲ್ಲಿ ವಶಪಡಿಸಿಕೊಂಡ ಗೋಲನ್ ಹೈಟ್ಸ್ ಶಾಶ್ವತವಾಗಿ ಇಸ್ರೇಲ್‌ಗೆ ಸೇರಿರುತ್ತದೆ ಎಂದು ನೆತನ್ಯಾಹು ಹೇಳಿಕೊಳ್ಳುತ್ತಾರೆ. ಅಬ್ರಹಾಮ್ ನ ಮರುಭೂಮಿಯಲ್ಲಿ ಶಾಶ್ವತ ಎಂಬ ಪದಕ್ಕಿರುವ ಜೀವಿತಾವಧಿ ಬಹಳ ಕಡಿಮೆ.

ಸಿರಿಯಾದಲ್ಲಿ ಉಂಟಾದ ಬದಲಾವಣೆ ಅಮೆರಿಕ ಮತ್ತು ಇಸ್ರೇಲ್ ಪಾಲಿಗೆ ಸಿರಿಯಾವನ್ನು ಮತ್ತೊಮ್ಮೆ ಒಡೆಯಲು ಸಿಕ್ಕಿದ ಅವಕಾಶ. ಸಿರಿಯಾ ಈಗಾಗಲೇ ಅನಧಿಕೃತವಾಗಿ ಹಲವು ಬ್ಲಾಕ್ ಗಳಾಗಿ ಒಡೆದುಹೋಗಿದೆ. ಇಸ್ರೇಲ್ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಲು ಈ ವಿಭಾಗಗಳನ್ನು ಅಧಿಕೃತಗೊಳಿಸಲು ಪ್ರಯತ್ನಿಸುತ್ತದೆ. ಟರ್ಕಿಯ ರಿಸೆಪ್ ತಯ್ಯಿಪ್ ಎರ್ಡೋಗನ್ ಈಗ ಇನ್ನೂ ಎಚ್ಚರಿಕೆಯಿಂದ ಹೆಜ್ಜೆಯಿಡುತ್ತಿದ್ದಾರೆ. ಭವಿಷ್ಯ ಏನು ಎಂಬುದು ಯಾರಿಗೂ ಗೊತ್ತಿಲ್ಲ ವಾದರೂ ಎರ್ಡೋಗನ್‌ನ ಸದ್ಯದ ಮೂರು ಗುರಿಗಳು ಸ್ಪಷ್ಟವಾಗಿವೆ. ಸಿರಿಯಾವನ್ನು ಒಗ್ಗಟ್ಟಿನಿಂದ ಇರಿಸುವುದು, ಉತ್ತರದಲ್ಲಿ ನೆಲೆಗೊಂಡಿರುವ ಕುರ್ದಿಶ್ ಭಯೋತ್ಪಾದಕರನ್ನು ನಾಶಗೊಳಿಸುವುದು ಮತ್ತು ಸಿರಿಯಾದ ನಿರಾಶ್ರಿತರು ಅದಾನಾ (ರುಚಿಕರ ಕಬಾಬ್‌ಗೆ ಪ್ರಸಿದ್ಧ ಊರು) ಹಾಗೂ ಇನ್ನಿತರ ಹಲವಾರು ನಗರಗಳಿಗೆ ಮರಳಲು ಅವಕಾಶ ಮಾಡಿಕೊಡುವುದು.

ಅಹಮದ್ ಅಲ್ ಶರಾ ಈಗ ಜನರ ಕಣ್ಣಿಗೆ ತನ್ನ ಇತಿಹಾಸ ಕಾಣಿಸದಂತೆ ನೋಡಿಕೊಳ್ಳಲು ಪ್ರಯತ್ನ ಆರಂಭಿಸಿ ದ್ದಾನೆ. ಹೀಗಾಗಿ ತನ್ನ ಅಲಿಯಾಸ್‌ಗಳನ್ನು ಅಳಿಸಿಕೊಂಡಿದ್ದಾನೆ. ಅಬು ಮೊಹಮ್ಮದ್ ಅಲ್ ಜೊಲಾನಿಯಾಗಿದ್ದಾಗ ಅವನು ಅಬು ಬಕ್ರ್ ಅಲ್ ಬಾಗ್ದಾದಿಗೆ ದಂಡನಾಯಕನಾಗಿದ್ದ. ‘ಮೌನ ಪಂಡಿತ’ ಎಂದೇ ಹೆಸರಾದ ಅವನು ಮೊಸುಲ್ ಮೇಲೆ ಇಸ್ಲಾಮಿಕ್ ಸ್ಟೇಟ್ ನ ಕಪ್ಪು-ಬಿಳುಪಿನ ಧ್ವಜ ಹಾರಾಡುವಂತೆ ಮಾಡಿದ್ದ. ಡಿಸೆಂಬರ್ 9ರಂದು ಬಿಬಿಸಿ ವೆಬ್‌ಸೈಟಿನಲ್ಲಿ ಜೊಲಾನಿ 2021ರಲ್ಲಿ ಪಿಬಿಎಸ್‌ಗೆ ನೀಡಿದ್ದ ಸಂದರ್ಶನದ ಆಯ್ದ ಭಾಗ ಪ್ರಕಟವಾಗಿದೆ. ಅಂದರೆ ಅಮೆರಿಕದ ಸರಕಾರ ಹಣ ಕೊಟ್ಟು ಸಾಕುತ್ತಿರುವ ಮಾಧ್ಯಮಗಳಿಗೆ ಅವನು ಹೊಸಬನಲ್ಲ. ಬಿಬಿಸಿ ವರದಿಯನ್ನು ಮಿನಾ ಅಲ್ ಲಾಮಿ ಬರೆದಿದ್ದರು. ಆಕೆ ಬಿಬಿಸಿಯ ‘ಜಿಹಾದಿ ಮಾಧ್ಯಮ ತಜ್ಞ’.

ಆ ಸಂದರ್ಶನ ಪಿಬಿಎಸ್‌ಗೆ ಸಿಕ್ಕಿದ್ದು ಹೇಗೆ? ಅಹಮದ್ ಅಲ್ ಶರಾ ಜನಿಸಿದ್ದು 1982ರಲ್ಲಿ. ಸೌದಿ ಅರೇಬಿ
ಯಾದಲ್ಲಿ ಅವನ ತಂದೆ 1989ರವರೆಗೆ ತೈಲ ಎಂಜಿನಿಯರ್ ಆಗಿದ್ದ. ಅಲ್ಲೇ ಶರಾ ಹುಟ್ಟಿದ. ನಂತರ ಅವನ ಕುಟುಂಬ ಡಮಾಸ್ಕಸ್‌ಗೆ ಮರಳಿತು. ಅಲ್ಲಿನ ಬೆಳವಣಿಗೆಗಳು ಶರಾನನ್ನು ತೀವ್ರಗಾಮಿ ಚಟುವಟಿಕೆಗಳ ಕಡೆಗೆ ಆಕರ್ಷಿಸಿದವು. ಬಹುಶಃ ಇರಾಕ್ ಯುದ್ಧ ಅವನ ಪಾಲಿಗೆ ನಿರ್ಣಾಯಕ ಕ್ಷಣವಾಯಿತು. ೨೦೦೫ರಲ್ಲಿ ಕ್ಯಾಂಪ್ ಬುಕಾದಲ್ಲಿರುವ ಅಮೆರಿಕದ ಜೈಲಿನಲ್ಲಿ ಅವನು ಬಂಧಿಯಾಗಿದ್ದ.

2011ರಲ್ಲಿ ಅವನನ್ನು ಸಿರಿಯಾಕ್ಕೆ ಕಳುಹಿಸಿದ ಬಾಗ್ದಾದಿ, ಅಲ್ ನುಸ್ರಾ ಸಂಘಟನೆಯನ್ನು ಮುನ್ನಡೆಸಲು ಸೂಚನೆ ನೀಡಿದ. ಒಂದೇ ವರ್ಷದಲ್ಲಿ ಅದು ಸಿರಿಯಾದ ಅತ್ಯಂತ ಪ್ರಬಲ ಇಸ್ಲಾಮಿಕ್ ಸೇನೆಯಾಗಿ ಹೊರಹೊಮ್ಮಿತು.
ಆದರೆ ಬಶರ್ ಅಲ್ ಅಸದ್ ಹೇಗೋ ‘ಅರಬ್ ಕ್ರಾಂತಿ’ ಮತ್ತು ಅದಕ್ಕೆ ಸಂಬಂಧಿಸಿದ ಹಲವು ದಾಳಿಗಳಲ್ಲಿ ಜೀವ ಉಳಿಸಿಕೊಂಡು ಪಾರಾದ. ೨೦೧೩ರಲ್ಲಿ ಅಲ್ ಬಾಗ್ದಾದಿಯಿಂದ ಶರಾ ಬೇರೆಯಾದ. ಅವನಿಗೆ ಅಖಂಡ ಕ್ಯಾಲಿ-ಟ್ ಸಾಮ್ರಾಜ್ಯವನ್ನು ಸ್ಥಾಪಿಸುವ ಕನಸಿತ್ತು. ಹೀಗಾಗಿ ಅಲ್ ನುಸ್ರಾ ಸಂಘಟನೆಯನ್ನು ಅಲ್ ಖೈದಾದ ಸಿರಿಯಾ ಶಾಖೆಯನ್ನಾಗಿ ಮಾಡಿದ.

ಸಿರಿಯಾದಲ್ಲಿ ಅಲ್ ನುಸ್ರಾ ಭಯೋತ್ಪಾದಕರೇ ನಮ್ಮ ಪ್ರಮುಖ ಶತ್ರುಗಳು ಎಂದು ಮಾಧ್ಯಮಗಳಲ್ಲಿ ಅಮೆರಿಕ ‘ಟಾಂ ಟಾಂ’ ಹೊಡೆಯಿತು. 2015ರಲ್ಲಿ ಇದ್ಲಿಬ್ ಪ್ರಾಂತ್ಯವನ್ನು ಜೊಲಾನಿ ವಶಪಡಿಸಿಕೊಂಡ. ಮರುವರ್ಷ ಅಲ್ ಖೈದಾವನ್ನು ಬದಿಗೆ ಸರಿಸಿ, ಜಬತ್ -ತಾಲ್ ಅಲ್ ಶಾಮ್ ಹೆಸರಿನಲ್ಲಿ ತನ್ನ ಬೆಂಬಲಿಗರನ್ನೆಲ್ಲ ಒಂದುಗೂಡಿಸಿದ. ಬಳಿಕ ತನ್ನ ಸಂಘಟನೆಗೆ ಹಯಾತ್ ತಹ್ರೀರ್ ಅಲ್ ಶಾಮ್ (ಎಚ್‌ಟಿಎಸ್) ಎಂದು ಹೆಸರಿಟ್ಟ. ಈ ವೇಳೆಗೆ ಅವನು ತನ್ನ ಗುರಿಯನ್ನು ಬದಲಿಸಿಕೊಂಡಿದ್ದ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಇಸ್ಲಾಮಿಕ್ ಸಂಘಟನೆಗಳನ್ನೂ ಒಂದುಗೂಡಿಸಿ ಕ್ಯಾಲಿಫೇಟ್‌ ಸ್ಥಾಪಿಸುವುದರ ಬದಲು ಸಿರಿಯಾವನ್ನು ವಶಪಡಿಸಿಕೊಳ್ಳುವುದು ಅವನ ರಾಷ್ಟ್ರೀಯ ಗುರಿಯಾಗಿ ಬದಲಾಯಿತು. 2020ರ ವೇಳೆಗೆ ಸಿರಿಯಾದಲ್ಲಿ ಅಲ್ ಖೈದಾ ಮತ್ತು ಅದರ ಬೆಂಬಲಿಗರನ್ನು ಎಚ್ ಟಿಎಸ್ ನಿರ್ನಾಮ ಮಾಡಿತು (ಕೋವಿಡ್‌ನಿಂದ ಯುದ್ಧಭೂಮಿಯ ಮೇಲೆ ಯಾವುದೇ ಪರಿಣಾಮವಾಗಲಿಲ್ಲ. ಸತ್ತವರ ಸಂಖ್ಯೆ ಮುಖ್ಯವಲ್ಲ). 2021ರಲ್ಲಿ ಅಫ್ಘಾ ನಿಸ್ತಾನದಲ್ಲಿ ತಾಲಿಬಾನ್ ಸರಕಾರ ಮರಳಿ ಸ್ಥಾಪನೆಯಾಗಿದ್ದನ್ನು ಜೊಲಾನಿ ಸ್ವಾಗತಿಸಿದ.

ಏಕಪ್ರಕಾರದಲ್ಲಿ ಯೋಚಿಸುವವರಿಗೆ ಆಶ್ಚರ್ಯ ಉಂಟುಮಾಡುವಂತೆ ಅವನು ಸಾಂಪ್ರದಾಯಿಕ ಸಮಕಾಲೀನ ಆರ್ಥಿಕತೆಯನ್ನು ಪ್ರೋತ್ಸಾಹಿಸತೊಡಗಿದ. ಅವನಿಗಿಂತ ಕಟ್ಟರ್ ಇಸ್ಲಾಮಿಕ್ ಮನಸ್ಥಿತಿಗೆ ಅಂಟಿಕೊಂಡಿದ್ದವರು 2023ರ ಡಿಸೆಂಬರ್‌ನಲ್ಲಿ ಅವನ ವಿರುದ್ಧ ಪ್ರತಿಭಟನೆ ನಡೆಸಿದರು. ಹಬ್ಬದ ಸಂಭ್ರಮಾಚರಣೆಗಳಿಗೆ ಅವಕಾಶ ನೀಡುವುದು, ಬಣ್ಣಬಣ್ಣದ ಬೆಳಕಿನಿಂದ ಝಗಮಗಿಸುವ ಮಾಲ್‌ಗಳು ಮತ್ತೆ ಬಾಗಿಲು ತೆರೆಯುವುದು ಅವರಿಗೆ
ಇಷ್ಟವಿರಲಿಲ್ಲ. ಇದ್ಲಿಬ್‌ನ ನಲವತ್ತು ಲಕ್ಷ ಜನರಿಗೆ ವ್ಯವಸ್ಥಿತ ಆಡಳಿತ ನೀಡುವ ಸರಕಾರವೊಂದು ಅಲ್ಲಿತ್ತು. ಅದಕ್ಕೊಬ್ಬ ಪ್ರಧಾನಿ ಹಾಗೂ ಸಚಿವ ಸಂಪುಟವಿತ್ತು.

ಅಫ್‌ ಕೋರ್ಸ್, ಅಲ್ಲಿ ಶರಿಯಾ ಕಾನೂನು ಪಾಲನೆಯಾಗುವುದನ್ನು ಖಾತ್ರಿಪಡಿಸಿಕೊಳ್ಳಲು ಒಂದು ಸಮಿತಿಯೂ ಇತ್ತು. 2022ರಲ್ಲಿ ಕ್ಲಿಕ್ಕಿಸಿದ ಫೋಟೋವೊಂದರಲ್ಲಿ ಇದ್ಲಿಬ್‌ನಲ್ಲಿ ನಡೆದ ಸಾಂಸ್ಕೃತಿಕ ಉತ್ಸವದಲ್ಲಿ ಉಮಯ್ಯಾದ್ ಮಸೀದಿಯಲ್ಲಿರುವ ವರ್ಣಚಿತ್ರವೊಂದನ್ನು ಜೊಲಾನಿ ನೋಡುತ್ತಿದ್ದ. ಎರಡು ವರ್ಷದ ನಂತರ ಅದೇ ಮಸೀದಿ ಯಲ್ಲಿ ಅವನು ಪತ್ರಿಕಾಗೋಷ್ಠಿ ನಡೆಸುವ ಫೋಟೋಗಳು ಬಂದವು. ಆ ದಿನ ಸಿರಿಯಾದ ರಾಷ್ಟ್ರೀಯ ಫುಟ್
ಬಾಲ್ ತಂಡ ತನ್ನ ಜೆರ್ಸಿಯ ಬಣ್ಣವನ್ನು ಹಸಿರಿಗೆ ಬದಲಾಯಿಸಿಕೊಂಡಿತು.

ಈ ಅಂಕಣ ಬರೆಯುವ ಹೊತ್ತಿಗೆ ಜೊಲಾನಿ ಮತ್ತು ಎಚ್ ಟಿಎಸ್ ಮೂರು ‘ಯುನೈಟೆಡ್‌ಗಳ’ ಭಯೋತ್ಪಾದಕರ ಪಟ್ಟಿಯಲ್ಲಿದ್ದರು: ಯುನೈಟೆಡ್ ನೇಷನ್ಸ್ (ವಿಶ್ವಸಂಸ್ಥೆ), ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಮತ್ತು ಯುನೈಟೆಡ್ ಕಿಂಗ್‌ಡಮ್ (ಬ್ರಿಟನ್). ಜೊಲಾನಿಯ ತಲೆಗೆ ಅಮೆರಿಕ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ. ಹೀಗಾಗಿ ನಿಧಿ ಶೋಧಕರು ತಮಗೆ ಬೇಕಾದ ಗಂಟು ಎಲ್ಲಿದೆ ಎಂಬುದನ್ನು ತಿಳಿದುಕೊಂಡಿದ್ದಾರೆ.

ಅವರೀಗ ತರಾತುರಿಯಲ್ಲಿ ಕೆಲಸ ಆರಂಭಿಸಬೇಕು. ಸಿರಿಯಾದಲ್ಲಿರುವ ಜೊಲಾನಿಯ ಆಡಳಿತಕ್ಕೆ ತಾನು ಮಾನ್ಯತೆ
ನೀಡಬೇಕೆಂದರೆ ಒಂದಷ್ಟು ಷರತ್ತುಗಳನ್ನು ಪಾಲಿಸಬೇಕಾಗುತ್ತದೆ ಎಂಬ ಸಂದೇಶವನ್ನು ವಾಷಿಂಗ್ಟನ್ ರವಾನಿಸಿದೆ. ಶರಾ ಅಲಿಯಾಸ್ ಜೊಲಾನಿ ಇನ್ನೊಬ್ಬ ನಗುಮೊಗದ ಸರ್ವಾಧಿಕಾರಿಯಾಗಬಹುದು ಎಂಬ ಆತಂಕ ಅಮೆರಿಕಕ್ಕಿದೆ. ಅವನು ಧರ್ಮವನ್ನು ಕನಿಷ್ಠ ಅಗತ್ಯಗಳಿಗೆ ತಕ್ಕಷ್ಟೇ ಒಳಗೆ ಬಿಟ್ಟುಕೊಂಡು ಆಡಳಿತ ನಡೆಸಲಿ, ನಿಧಾನವಾಗಿ ಯಾದರೂ ಎಲ್ಲರಿಂದ ಒಪ್ಪಿಕೊಳ್ಳಲ್ಪಡುವ ಸರಕಾರವನ್ನು ಸ್ಥಾಪನೆ ಮಾಡಲಿ, ಇರಾನ್‌ನಿಂದ ಹೆಜ್ಬುಲ್ಲಾವರೆಗೆ ಚಾಚಿರುವ ಶಿಯಾ ಬಾಹುಗಳನ್ನು ಕತ್ತರಿಸಲಿ, ಅದಕ್ಕೆ ದೊರೆಯುವ ನೆರವನ್ನು ತಡೆಯಲಿ, ಇಸ್ರೇಲ್ ಜತೆಗಿರುವ ವೈರತ್ವದ ಕಾವನ್ನು ನಿಯಂತ್ರಿಸಲಿ ಎಂಬ ಆಸೆಗಳನ್ನು ಅಮೆರಿಕ ಹೊಂದಿದೆ.

ರಷ್ಯಾ ಈಗಾಗಲೇ ಸಿರಿಯಾದ ಹೊಸ ಆಡಳಿತದ ಜತೆಗೆ ಮಾತುಕತೆ ನಡೆಸಿ ಮೆಡಿಟರೇನಿಯನ್ ಸಮುದ್ರದಲ್ಲಿರುವ
ತನ್ನ ನೌಕಾನೆಲೆಯನ್ನು ಮುಂದುವರಿಸುವ ಬಗ್ಗೆ ಚೌಕಾಸಿ ನಡೆಸಿದೆ. ಯುದ್ಧದ ನೆಲದಲ್ಲಿ ಬದುಕು ಮತ್ತು ಸಾವು ತನ್ನ ಸಹಜ ದಾರಿಯಲ್ಲಿ ಹೋಗುವುದಕ್ಕೆ ಅವಕಾಶ ಮಾಡಿಕೊಡಿ ಎಂದು ರಷ್ಯಾ ಹೇಳಿದೆ. ಲಟಾಕಿಯಾ ಮೇಲೆ ತನ್ನ ಯುದ್ಧ ವಿಮಾನಗಳು ದಾಳಿ ನಡೆಸಿದಾಗ ರಷ್ಯಾದ ನೆಲೆಗಳಿಗೆ ಏನೂ ಆಗದಂತೆ ಇಸ್ರೇಲ್ ಸಾಕಷ್ಟು ಎಚ್ಚರಿಕೆ ವಹಿಸಿದೆ. ಇನ್ನು, ಟರ್ಕಿಗೆ ತನ್ನ ದಕ್ಷಿಣ ಭಾಗದಲ್ಲಿ ಭಯೋತ್ಪಾದನೆ ನಿಲ್ಲಬೇಕು.

ಕ್ರಮೇಣ ಸಿರಿಯಾ ಕೂಡ ಸುನ್ನಿ ಬಶರ್ ಅಲ್ ಅಸದ್ ಜತೆಗೆ ಒಂದು ಹೊಂದಾಣಿಕೆ ಮಾಡಿಕೊಳ್ಳುತ್ತದೆ. ತನ್ನ ಅಲವೈಟ್ ಶಿಯಾ ಸ್ನೇಹಿತನ ಅವಸಾನದ ಬಳಿಕ ಇರಾನ್ ಈಗ ಹೊಸ ಬೀಜಗಣಿತವನ್ನು ಹುಡುಕಿಕೊಳ್ಳಬೇಕಿದೆ. ಜಗತ್ತಿನ ಇನ್ನುಳಿದ ಅಸ್ಥಿರ ದೇಶಗಳಿಗೆ ತಲೆಕೆಡಿಸಿಕೊಳ್ಳಲು ಬೇಕಾದಷ್ಟು ಸಮಸ್ಯೆಗಳಿವೆ. ಚಿರತೆಗೆ ತನ್ನ ಮೈಮೇಲಿನ ಕಲೆಗಳನ್ನು ಬದಲಿಸಿಕೊಳ್ಳಲು ಸಾಧ್ಯವೇ? ಯಾರಿಗೆ ಗೊತ್ತು. ಚಿರತೆಯನ್ನು ನಾಲ್ಕು ಗೋಡೆಗಳ ನಡುವೆ ಕೂಡಿಹಾಕಿ ನೋಡಿ. ಅದು ಕ್ರಮೇಣ ಬಡ ಬೆಕ್ಕಾಗಿ ಪರಿವರ್ತನೆಯಾಗಿ, ಜೇನುತುಪ್ಪ ಬೆರೆಸಿದ ಹಾಲನ್ನು ಮಹಾಗನಿಯ ಪಾತ್ರೆ ಯಲ್ಲಿ ಕುಡಿಯಲು ಆರಂಭಿಸುತ್ತದೆ.

ಎಲ್ಲದಕ್ಕೂ ಕಾಲವೇ ಉತ್ತರಿಸಬೇಕು ಎಂದು ಹಿರಿಯರು ಹೇಳುತ್ತಾರೆ. ನಿಜವಿರಬಹುದು. ಆದರೆ ಕಾಲಕ್ರಮೇಣ ಘಟಿಸುವ ಎಲ್ಲವೂ ಧನಾತ್ಮಕ ಬದಲಾವಣೆಯೇ ಆಗಿರುವುದಿಲ್ಲ. ಸಮಯಕ್ಕೆ ತಾಳ್ಮೆಯಿಲ್ಲ. ಮುಂದೇನಾಗುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಅಲೆಪ್ಪೋದಿಂದ ಇನ್ನಷ್ಟು ಸುದ್ದಿಗಳು ಬರುವುದಕ್ಕೆ ಬಾಕಿಯಿದೆ. ಬ್ಯಾಬಿಲೋನ್, ಲೆಬನಾನ್, ಹೆಬ್ರಾನ್, ಗೋಲನ್, ಅಶ್ಕೆಲಾನ್, ಆಡೆನ್, ಅಂಕಾರಾ, ಅಮ್ಮಾನ್, ಗಾಜಾ, ಕೈರೋ ದಿಂದಲೂ ಇನ್ನಷ್ಟು ಸುದ್ದಿಗಳು ಬರಲಿವೆ.

ಎಚ್ಚರ ವಹಿಸದೆ ಇದ್ದರೆ ಗ್ರೋಜ್ನಿಯಿಂದಲೂ ಬರಬಹುದು. ಸತ್ತವರು ಈ ದ್ವಾರದ ಮೂಲಕವೇ ಸ್ವರ್ಗ ಅಥವಾ ನರಕಕ್ಕೆ ಹೋಗುತ್ತಾರೆ ಎಂದು ಆಸ್ತಿಕರು ನಂಬುವ ಜೆರುಸಲೇಂನಿಂದಲೂ ಬರಬಹುದು. ಎಷ್ಟೊಂದು ನಂಬಿಕೆಗಳು. ಆದರೆ ಎಷ್ಟು ಕಡಿಮೆ ಶಾಂತಿ!

(ಲೇಖಕರು ಹಿರಿಯ ಪತ್ರಕರ್ತರು)

ಇದನ್ನೂ ಓದಿ: M J Akbar Column: ಅಭದ್ರತೆಯ ಕಾಲದಲ್ಲಿ ವಿಮಾನಗಳ ಎತ್ತರದ ಹೋರಾಟ