Saturday, 14th December 2024

ವಿಶ್ವಮಾನ್ಯ ಸಂತರು – ಆಚಾರ್ಯ ಮಧ್ವರು

ತನ್ನಿಮಿತ್ತ

ಡಾ.ಗುರುರಾಜ ಪೋಶೆಟ್ಟಿಹಳ್ಳಿ

(ಇಂದು ಮಧ್ವನವಮಿ)

ಆಚಾರ‍್ಯರು ಉಡುಪಿಯ ಪಶ್ಚಿಮ ಸಮುದ್ರದಲ್ಲಿ ದೊರಕಿದ ಶ್ರೀಕೃಷ್ಣನ ಪ್ರತಿಮೆಯನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿ ಆ ಪ್ರತಿಮೆಗೆ ತಮ್ಮ ಎಂಟು ಶಿಷ್ಯರಿಂದ ಪೂಜೆ ಸಲ್ಲುವಂತೆ ಏರ್ಪಾಟು ಮಾಡಿದರು.

ಮುಂದೆ ಆ ಶಿಷ್ಯರಿಂದಲೇ ಉಡುಪಿ ಅಷ್ಠಮಠವೆಂಬ ಪ್ರಸಿದ್ಧಿ ಯನ್ನು ಪಡೆತು. ೭೯ ವರ್ಷ ತುಂಬು ಜೀವನ ನಡೆಸಿದ ಮಧ್ವಾ ಚಾರ್ಯರು ತಮ್ಮ ತತ್ತ್ವವಾದದ ಪರಂಪರೆಯನ್ನು ಮುಂದುವರಿಸುವ ಹೊಣೆಗಾರಿಕೆ ಯನ್ನು ತಮ್ಮ ಶಿಷ್ಯಂದಿರ ಹೆಗಲ ಮೇಲೆ ಹೊರಿಸಿದರು. ಬಳಿಕ ಪಿಂಗಲ ಸಂವತ್ಸರದ ಮಾಘ ಶುದ್ಧ ನವಮಿಯಂದು ಏಕಾಕಿಯಾಗಿ ಬದರಿಗೆ ತೆರಳಿದರು. ಅನಂತರ ಅವರನ್ನು ಕಂಡವರಿಲ್ಲ; ಇಂದಿಗೂ ಆ ದಿನವನ್ನು ಮಧ್ವನನವಮಿ ಎಂದು ಆಚಾರ‍್ಯರನ್ನು ಸ್ಮರಿಸಲಾಗುತ್ತದೆ.

ನಿರ್ಲಿಪ್ತ, ಧೀರ ಸಂನ್ಯಾಸಿಗಳಾಗಿದ್ದ ಮಧ್ವಾಚಾರ್ಯರು ಹುಟ್ಟಿದ್ದು ಉಡುಪಿ ಸಮೀಪದ ಪಾಜೆಯಲ್ಲಿ ಎಂಬುದು ಕನ್ನಡಿಗರು
ಹೆಮ್ಮೆ ಪಟ್ಟುಕೊಳ್ಳುವ ಸಂಗತಿ. ಅದಿಂದು ಪಾಜಕಕ್ಷೇತ್ರ ಎಂಬ ಹೆಸರಲ್ಲಿ ಪವಿತ್ರ ಯಾತ್ರಾಸ್ಥಳವಾಗಿದೆ. ೭೫೦ ವರ್ಷಗಳ ಹಿಂದೆ
ವಿಳಂಬಿ ಸಂವತ್ಸರದ ಅಶ್ವಯುಜ ಶುಕ್ಲ ದಶಮಿಯಂದು (ವಿಜಯ ದಶಮಿ) ಆಚಾರ‍್ಯ ಮಧ್ವರ ಜನನವಾಯಿತು. ಮಗುವಿಗೆ ತಂದೆ ಇಟ್ಟ ಹೆಸರು ವಾಸುದೇವ. ತಂದೆಯ ಹೆಸರು ನಡಿಲ್ಲಾಯ ನಾರಾಯಣ ಭಟ್ಟರು. ತಾಯಿಯ ಹೆಸರು ವೇದವತಿ. ಬಾಲಕ
ವಾಸುದೇವನಿಗೆ ಬಾಲ್ಯದಲ್ಲೇ ಅಧ್ಯಾತ್ಮದ ಒಲವು. ವಿರಕ್ತಿಮಾರ್ಗದ ಸೆಳೆತ ಉಂಟಾಯಿತು.

ಮಗ ಸಂಸಾರಿಯಾಗಬೇಕೆಂದು ತಂದೆ – ತಾಯಿ ಬಯಸಿದರೆ ಬಾಲಕ ವಾಸುದೇವ ಸಂನ್ಯಾಸಿಯಾದ. ಹನ್ನೊಂದನೆಯ ವಯಸ್ಸಿನಲ್ಲೇ ಅಚ್ಯುತಪ್ರಜ್ಞ ಯತಿಗಳಿಂದ ಸಂನ್ಯಾಸದೀಕ್ಷೆ ಪಡೆದ ವಾಸುದೇವ ಆಶ್ರಮ ನಿಯಮಾನುಸಾರ ಪೂರ್ಣಪ್ರಜ್ಞ ಎಂಬ ಹೊಸ ಹೆಸರನ್ನು ಪಡೆದ. ಹೆಸರಿಟ್ಟವರು ಗುರು ಅಚ್ಯುತ ಪ್ರಜ್ಞರು. ಆಚಾರ‍್ಯರ ಸಂನ್ಯಾಸ ಪಟ್ಟಾಭಿಷೇಕ ಸಂದರ್ಭದಲ್ಲಿ ಅವರ ಹೆಸರು ಮತ್ತೆ ಬದಲಾಯಿತು. ಆ ಹೆಸರು ಆನಂದತೀರ್ಥ. ಅದು ಅಲ್ಲಿಗೇ ನಿಲ್ಲಲಿಲ್ಲ.

ಸ್ವತಃ ಆಚಾರ‍್ಯರೇ ತಮ್ಮ ಹೆಸರನ್ನು ‘ಮಧ್ವ’ ಎಂದು ಬದಲಾಯಿಸಿಕೊಂಡರು. ಇಂದು ಅವರನ್ನು ಗುರುತಿಸುವುದು ಆ ಹೆಸರಿನಿಂದಲೇ. ಆಚಾರ‍್ಯರು ಹದಿಹರೆಯದಲ್ಲೇ ದಕ್ಷಿಣ ಭಾರತದ ಸಂಚಾರವನ್ನು ಕೈಕೊಂಡರು. ಅನಂತಶಯನ, ಕನ್ಯಾ ಕುಮಾರಿ, ರಾಮೇಶ್ವರ, ಶ್ರೀರಂಗದಂಥ ಪ್ರಮುಖ ಕ್ಷೇತ್ರಗಳಿಗೆ ಸಂದರ್ಶನ ನೀಡಿ ಹೋದೆಡೆಯಲ್ಲೆಲ್ಲ ಪ್ರವಚನ ನಡೆಸಿ ತಮ್ಮ ತತ್ತ್ವದ ಸಂದೇಶ ಸಾರಿದರು. ದೇಶಸಂಚಾರ ಮುಗಿಸಿ ಪುನಃ ಉಡುಪಿಗೆ ಬಂದ ಆಚಾರ‍್ಯರು ಗೀತೆಗೆ ಭಾಷ್ಯವನ್ನು ಬರೆದು ಅದನ್ನು ವೇದವ್ಯಾಸರಿಗೆ ಕಾಣಿಕೆಯಾಗಿ ಅರ್ಪಿಸಬೇಕೆಂದು ಬದರಿಗೆ ಪ್ರಯಾಣ ಮಾಡಿದರು.

ಅಲ್ಲಿಂದ ಮರಳಿದ ಮೇಲೆ ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದುದಲ್ಲದೆ ಭಾಗವತಕ್ಕೆ ತಾತ್ಪರ್ಯ ರಚಿಸಿದರು. ಆಚಾರ‍್ಯರು ರಚಿಸಿದ ಒಟ್ಟು ಕೃತಿಗಳು ನಲವತ್ತು. ಎಲ್ಲಾ ಜೀವರ ಉಸಿರಾಟದ ದೇವತೆಯಾಗಿ ನಿಷ್ಪಕ್ಷಪಾತ ಜೀವನಾಧಾರರಾದ ಮುಖ್ಯಪ್ರಾಣದೇವರ ಅವತಾರಿಗಳಾದ ಶ್ರೀಮನ್ಮಧ್ವಾಚಾರ್ಯರು ತಮ್ಮ ಮಾತುಗಳಿಂದಲೂ ಎಲ್ಲರ ಸುಂದರ ಬದುಕಿಗೆ ಆಧಾರರೆನಿಸಿದರು. ಅವರವರ ಕರ್ತವ್ಯದ ಪರಿಪಾಲನೆ, ಜತೆಯಲ್ಲಿ ಸ್ವಾಮಿಯಾದ ಶ್ರೀಹರಿಯ ಪಾದದಲ್ಲಿ ನಮ್ರತೆಯ ಭಾವನೆಗಳು ಜೀವನದ ಸೌಖ್ಯ ಮತ್ತು ಔನ್ನತ್ಯಕ್ಕೆ ಬುನಾದಿ ಎಂದು ಸಾರಿದವರು.

ತೀಕ್ಷ್ಣ ಬುದ್ಧಿಯ ಬಾಲ ಪ್ರತಿಭೆ: ವಾಸುದೇವ ಮಗು ವಾಗಿದ್ದಾಗಿನಿಂದಲೂ ತೀಕ್ಷ್ಣಬುದ್ಧಿಮತ್ತೆ ಇದ್ದವನು. ಆಗಿನ ದಿನಗಳಲ್ಲಿ ಅಗ್ರಹಾರಗಳಲ್ಲಿ ವೇದಾಧ್ಯಯನ, ಶಾಸ್ತ್ರಗ್ರಂಥ ಪುರಾಣ, ಪುರಾಣ ಪ್ರವಚನ, ಜಿಜ್ಞಾಸುಗಳ ವಾದ ವಿವಾದ ದಿನನಿತ್ಯದ ಸಾಮಾನ್ಯ ಸಂಗತಿ. ಈ ವಾತಾವರಣದಲ್ಲಿ ಬೆಳೆಯುತ್ತಿದ್ದ ಚತುರಮತಿ ವಾಸುದೇವ ಬಾಲ್ಯದಲ್ಲಿಯೇ ಸಂಸ್ಕೃತ, ವೇದ,
ಉಪನಿಷತ್ತು, ಶಾಸ್ತ್ರಗ್ರಂಥಗಳ ಅರಿವನ್ನು ಪಡೆದಿದ್ದು ಆಶ್ಚರ್ಯ ವೇನಲ್ಲ. ಧ್ರುವ, ಪ್ರಹಾದ ಮುಂತಾದ ಬಾಲ ಭಕ್ತರ ಕಥೆಗಳನ್ನು
ಕೇಳಿ ಅವನಲ್ಲಿಯೂ ಭಕ್ತಿಭಾವ ಬೆಳೆದಿದ್ದರೆ ವಿಶೇಷವೇನಲ್ಲ. ಅದ್ಭುತ ಗ್ರಹಣಶಕ್ತಿಯ ವಾಸುದೇವ ಹಿರಿಯರ ವಾಕ್ಯಾರ್ಥಗಳನ್ನು ಕೇಳಿ ಕೇಳಿ ಆ ಚಿಕ್ಕ ವಯಸ್ಸಿಗೇ ಪ್ರಬುದ್ಧತೆ ಪಡೆದು ಹಿರಿಯ ಪಂಡಿತರು ಎಲ್ಲಾದರೂ ಎಡವಿದರೆ ಅವರನ್ನು ತಿದ್ದುವುದರಲ್ಲಿ ತನ್ನ ಬಾಲ ಪ್ರತಿಭೆಯನ್ನು ಮೆರೆದಿದ್ದ.

ಕ್ರಮಬದ್ಧ ವೇದಾಭ್ಯಾಸಕ್ಕಾಗಿ ಕುಂಜಾರು ಎಂಬಲ್ಲಿ ವಾಸಿಸುತ್ತಿದ್ದ ವೇದ ವಿದ್ವಾಂಸ ತೋಟಂತಿಲ್ಲಾಯ ಎಂಬುವರ ಬಳಿ ಮಧ್ಯಗೇಹ ಭಟ್ಟರು ವಾಸುದೇವನನ್ನು ಬಿಟ್ಟರು. ಬಾಲ್ಯ ಸಹಜವಾಗಿ ಗೆಳೆಯರ ಜತೆ ಸದಾ ಆಟಗಳಲ್ಲಿ ಆಸಕ್ತನಾಗಿದ್ದ ಅವನು ಅಧ್ಯಯನದಲ್ಲಿ ಉತ್ಸುಕನಾಗಿರಲಿಲ್ಲವೆಂದು ಗುರು ಗಳಿಗೆ ಅಸಮಾಧಾನವಾಗಿ ಒಮ್ಮೆ ಅವನನ್ನು ತಾವು ಕಲಿಸಿದ್ದನ್ನು ಪುನರುಚ್ಚರಿಸುವಂತೆ ಹಠಾತ್ತಾಗಿ ಕೇಳಿದರು. ಕೂಡಲೇ ಆಟ ನಿಲ್ಲಿಸಿ ಬಂದು ಪದ್ಮಾಸನದಲ್ಲಿ ಕುಳಿತು ಕಲಿತಿದ್ದ ಎಲ್ಲ ವೇದಮಂತ್ರಗಳನ್ನೂ ತಪ್ಪಿಲ್ಲದೆ, ಸ್ಫುಟವಾಗಿ, ಶಾಸ್ತ್ರೋಕ್ತವಾಗಿ, ಸ್ವರಸತವಾಗಿ ವಾಸುದೇವ ಹೇಳಿದಾಗ ತೋಟಂತಿಲ್ಲಾಯರು ಆಶ್ಚರ್ಯಚಕಿತರಾಗಿ ದಂಗು ಬಡಿದು ನಿಂತುಬಿಟ್ಟರು.

ಅವರು ಶಿಷ್ಯರಿಗೆ ಐತರೇಯೋಪ ನಿಷತ್ತನ್ನು ಪಾಠ ಡುವಾಗ ಅವರು ಅರ್ಥೈಸಿದ ರೀತಿ ಸಮಂಜಸವಾಗಿಲ್ಲ ಎಂದು ತಾನು ಅದನ್ನು ಸರಿಪಡಿಸಿ ಹೇಳಿ ಗುರುಗಳು ತಬ್ಬಿಬ್ಬಾಗುವಂತೆ ಮಾಡಿದನಂತೆ ವಾಸುದೇವ. ಇಂಥ ಬಾಲ ಪ್ರತಿಭೆ ವಾಸುದೇವನನ್ನು ಉಡುಪಿಯ ಸನಿಹದ ಪಾಜಕ ಕ್ಷೇತ್ರ ಪ್ರಭಾವದಿಂದಲೇ ಏನೋ ಪಾರಮಾರ್ಥಿಕ ವಿಚಾರಗಳು ಆವರಿಸಿದ್ದವು. ತಾನು ಶ್ರೀಕೃಷ್ಣ ಭಕ್ತಿಯನ್ನು ಜನಸಾಮಾನ್ಯರಲ್ಲಿ ಮೂಡಿಸಿ ಅವರನ್ನು ಭಕ್ತಿಮಾರ್ಗದಲ್ಲಿ ಕರೆದೊಯ್ಯಬೇಕೆಂದು ಸಂಕಲ್ಪಿಸಿ ಸಂನ್ಯಾಸ ದೀಕ್ಷೆಯನ್ನು ಪಡೆಲು ನಿರ್ಧರಿಸಲು ಈ ಸಂಸ್ಕಾರವೇ ಕಾರಣವಾಗಿರಬಹುದು.

ತನಗೆ ಬೇಕಾದ ಗುರುವನ್ನು ಹುಡುಕುವುದು ಕಷ್ಟವಾಗಲಿಲ್ಲ. ಪಾಜಕಕ್ಕೆ ಸನಿಹದ್ದ ಉಡುಪಿಯ ಅನಂತೇಶ್ವರ ದೇವಾಲಯ ದಲ್ಲಿದ್ದ ಅಚ್ಯುತ ಪ್ರೇಕ್ಷರನ್ನು ಭೇಟಿ ಮಾಡಿ ತನಗೆ ಸಂನ್ಯಾಸ ದೀಕ್ಷೆಯನ್ನು ನೀಡಬೇಕೆಂದು ನಂತಿಸಿದ. ಬಾಲಕನ ತೇಜಃಪುಂಜ ಮೂರ್ತಿ ಯನ್ನು, ಕಣ್ಣುಗಳಲ್ಲಿನ ದಿವ್ಯಪ್ರಭೆಯನ್ನು, ಮಾತಿನಲ್ಲಿ ಹೊರ ಹೊಮ್ಮುತ್ತಿದ್ದ ನಯ, ವಿವೇಕ, ಗೌರವಾದರಗಳನ್ನು ಕಂಡ ಅಚ್ಯುತಪ್ರೇಕ್ಷಕರು ಒಮ್ಮೆಲೆ ಸಂತಸದಿಂದ ಶಾಸ್ತ್ರೋಕ್ತ ವಾಗಿ ಸಂನ್ಯಾಸಾಶ್ರಮವನ್ನು ನೀಡಿ ಪೂರ್ಣಪ್ರಜ್ಞ ಎಂದು ಹೆಸರಿಟ್ಟರು.

ಸಂನ್ಯಾಸ ಸ್ವೀಕರಿಸಿದ ನಲವತ್ತು ದಿವಸಗಳಲ್ಲಿ ಪೂರ್ಣಪ್ರಜ್ಞರಿಗೆ ಒಂದು ಸವಾಲು ಎದುರಾಯಿತು. ನ್ಯಾಯ ಹಾಗೂ ತರ್ಕಗಳಲ್ಲಿ
ಮಹಾವಿದ್ವಾಂಸರೆಂದು ಕೀರ್ತಿಗಳಿಸಿದ್ದ ವಾಸುದೇವ ಪಂಡಿತರೆಂಬುವರೊಬ್ಬರು ಅಚ್ಯುತ ಪ್ರೇಕ್ಷರಲ್ಲಿಗೆ ಬಂದು ಅವರನ್ನು ವಾದಕ್ಕೆ ಆಹ್ವಾನಿಸಿದಾಗ ಗುರುಗಳ ಇಚ್ಛೆಯಂತೆ ಪೂರ್ಣಪ್ರಜ್ಞರೇ ವಾದವನ್ನು ಸಮರ್ಥವಾಗಿ ನಿರ್ವಹಿಸಿ ವಾಸುದೇವ ಪಂಡಿತರನ್ನು ಪರಾಭವಗೊಳಿಸಿ ನೆರೆದಿದ್ದ ವಿದ್ವಜ್ಜನರ ಅಪಾರ ಮನ್ನಣೆಗೆ ಪಾತ್ರರಾದರು.

ಹೀಗೆ ಆರಂಭದಲ್ಲೇ ಜಯಭೇರಿ ಬಾರಿಸಿದ ಶ್ರೀಗಳು ಗುರು ಅಚ್ಯುತಪ್ರೇಕ್ಷರ ಅಭಿಮಾನದ ಶಿಷ್ಯರಾಗಿ, ಅದರ ದ್ಯೋತಕವಾಗಿ ಆನಂದತೀರ್ಥರೆಂಬ ಇನ್ನೊಂದು ಅಭಿಧಾನದಿಂದ ಗೌರವಿಸಲ್ಪಟ್ಟರು. ಈಗ ಜನಜನಿತವಾಗಿರುವ ಮಧ್ವಾಚಾರ್ಯ ರೆಂಬ ಹೆಸರು ತಾವು ಬರೆದ ಗ್ರಂಥಗಳ ಕೊನೆಯಲ್ಲಿ ‘ಮಧ್ವ’ ಎಂಬ ಅಂಕಿತವನ್ನು ಸೇರಿಸುತ್ತಿದ್ದರಿಂದ ಬಂದು ಅವರು ಮಧ್ವಾಚಾರ್ಯ
ರೆಂದು ಗುರುತಿಸಲ್ಪಟ್ಟರು.

ಒಮ್ಮೆ ವಾದಿಸಿಂಹ, ಬುದ್ಧಿಸಾಗರ ಎಂಬಿಬ್ಬರು ಬೌದ್ಧ ಪಂಡಿತರು ಅಚ್ಯುತಪ್ರೇಕ್ಷಕರೊಂದಿಗೆ ವಾಗ್ವಾದ ಮಾಡಲು ಬಂದಾಗ ಅವರು ಮತ್ತೆ ತಮ್ಮ ಶಿಷ್ಯ ಆನಂದತೀರ್ಥರನ್ನೇ ಮುಂದು ಮಾಡಿದರು. ವಾಕ್ಚಾತುರ್ಯದ ವಾದಿಸಿಂಹ ದೀರ್ಘ ವಾಗಿ ವಾದಿಸಿ ಹದಿನೆಂಟು ಬಗೆಯ ಕಲ್ಪಗಳನ್ನು ಮುಂದಿರಿಸಿ ಅವಕ್ಕೆ ಆನಂದ ತೀರ್ಥರಿಂದ ಉತ್ತರಗಳನ್ನು ಬಯಸಿದರು. ಒಂದಿಷ್ಟೂ ಹಿಂಜರಿಯದ ಆನಂದತೀರ್ಥರು ಒಂದೊಂದೇ ಕಲ್ಪವನ್ನು ತೆಗೆದುಕೊಂಡು ಉತ್ತರಿಸುತ್ತಾ ಪ್ರತಿವಾದಿ ಗಳ ಬಾಯನ್ನು ಕಟ್ಟಿ ಹಾಕಿ ಅವರು ಸೋಲೊಪ್ಪಿಕೊಂಡು ಹಿಂದಿರುಗುವಂತೆ ಮಾಡಿ ತಮ್ಮ ಪ್ರತಿಭಾ ಪ್ರದರ್ಶನದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಸನಾತನ ಧರ್ಮ ಸಂರಕ್ಷಕ: ಮಧ್ವರು ಅಧ್ಯಯನ, ಅಧಿಷ್ಠಾನ, ಅಧ್ಯಾಪನ, ವಾಕ್ಯಾರ್ಥ, ವಾದವಾದಗಳಿಂದ ಪರಿಪಕ್ವ ಗೊಂಡು ತಮ್ಮದೇ ಆದ ಕೆಲವು ತತ್ತ್ವ ಸಿದ್ಧಾಂತಗಳಿಗೆ ಬಂದು ಮುಟ್ಟಿದರು. ಆ ವೇಳೆಗೆ ಭಾರತದಲ್ಲಿ ಭಕ್ತಿ ಪಂಥಗಳು ಪ್ರಬಲವಾಗಿ
ಊರ್ಜಿತ ಗೊಂಡು ದೇಶೋವಿಶಾಲವಾಗಿ ಪಸರಿಸಿದ್ದವು. ಶ್ರೀ ಶಂಕರಾ ಚಾರ್ಯರ ಅದ್ವೆ ತ ಸಿದ್ಧಾಂತ, ಶ್ರೀರಾಮಾನುಜಾ
ಚಾರ್ಯರ ವಿಶಿಷ್ಟಾದ್ವೆ ತ ಸಿದ್ಧಾಂತ ಬಹಳಷ್ಟು ಪ್ರಭಾವವನ್ನು ಬೀರಿ ಆಸ್ತಿಕತೆಯನ್ನು ಕಾಪಾಡುವುದರಲ್ಲಿ ತಮ್ಮದೇ ಆದ ಕೊಡುಗೆ ಯನ್ನು ನೀಡಿದ್ದರೆ ವೇದಗಳನ್ನು ಒಪ್ಪದ ಅವೈದಿಕ ಮತಗಳೆಂದು ಹಣೆಪಟ್ಟಿ ಹಚ್ಚಿಕೊಂಡಿದ್ದ ಜೈನ, ಬೌದ್ಧ ಮುಂತಾದವು ಸಹ ಪ್ರಭಾವಿಯಾಗಿದ್ದವು.

ಬೌದ್ಧ ಮತದಲ್ಲಿ ವಜ್ರಯಾನ ಎಂಬ ಪಂಗಡ ವಾಮಾಚಾರದಲ್ಲಿ ತೊಡಗಿ ಮದ್ಯ, ಮಂತ್ರ, ಹಠಯೋಗ, ಸ್ತ್ರೀಗಳಿಗೆ ಮುಖ್ಯಸ್ಥಾನ ನೀಡಿ ಸಮಾಜದಲ್ಲಿ ಅನೈತಿಕತೆಗೆ ಪ್ರೋತ್ಸಾಹ ನೀಡಿತ್ತು, ಅವೈದಿಕ ಶೈವ ಪಂಥೀಯರೆಂದು ಗುರುತಿಸಲಾಗಿರುವ ಲಕುಲೀಶ, ಕಾಪಾಲಿಕ, ಕಾಳಾಮುಖ ಪಂಗಡಗಳು ಅಸಹ್ಯಕರ ವಾಗಿ, ಅನೈತಿಕವಾಗಿ ವರ್ತಿಸುತ್ತಾ ಸಮಾಜದ ಆರೋಗ್ಯವನ್ನ ಹಾಳುಗೆಡ ಎಲ್ಲೆಲ್ಲೂ ಅರಾಜಕತೆ ಸೃಷ್ಟಿಸಿದ್ದವು.

ವಾಮಾಚಾರವನ್ನು ಜೀವನದಲ್ಲಿ ಅಳವಡಿಕೊಂಡು ಮದ್ಯ, ಮತ್ಸ್ಯ, ಮೈಥುನ ಮೊದಲಾದ ಪಂಚ ‘ಮ’ ಕಾರಗಳ ದಾಸರಾಗಿದ್ದ ತಾಂತ್ರಿಕರ ಹಾವಳಿಯಿಂದ ಸಮಾಜ ತತ್ತರಿಸಿಹೋಗಿತ್ತು. ಇವೆಲ್ಲವನ್ನು ಗಮನಿಸಿದ ಮಧ್ವರು ಭಕ್ತಿ ಮಾರ್ಗವನ್ನು ಪಸರಿಸಿ ದೇಶದಲ್ಲಿ ಧರ್ಮವನ್ನು ಪುನಃ ಪ್ರತಿಷ್ಠಾಪಿಸಲು ‘ಹರಿ ಸರ್ವೋತ್ತಮ’ ಎಂಬ ಘೋಷ ವಾಕ್ಯದೊಂದಿಗೆ ದಿಗ್ವಿಜಯ ಯಾತ್ರೆಗಳನ್ನು ಕೈಗೊಂಡರು. ಇದು ಅವರ ಸಂನ್ಯಾಸ ಧರ್ಮಕ್ಕೆ ಅನುಗುಣವಾಗಿಯೇ ಇತ್ತು.

ದಿಗ್ವಿಜಯ ಯಾತ್ರೆಗಳು: ದಕ್ಷಿಣ ಭಾರತ, ಉತ್ತರ ಭಾರತಗಳಲ್ಲಿ ಸಂಚರಿಸಿ ದ್ವೆ ತ ಸಿದ್ಧಾಂತವನ್ನು ಬಲವಾಗಿ ಪ್ರತಿಪಾದಿಸುತ್ತಾ,
ವಾಕ್ಯಾರ್ಥಗಳಲ್ಲಿ ವಿರುದ್ಧ ಪಕ್ಷದ ಪಂಡಿತರ ಮೇಲೆ ಜಯ ಸಾಧಿಸುತ್ತಾ ಅವರು ದಿಗ್ವಿಜಯ ಯಾತ್ರೆಯನ್ನು ಸಾಗಿಸಿದರು. ಬದರಿ ಕ್ಷೇತ್ರದಲ್ಲಿ ಸಾಕ್ಷಾತ್ ವೇದವ್ಯಾಸರನ್ನು ಭೇಟಿಯಾಗಿ ಅವರಿಗೆ ತಾವು ರಚಿಸಿದ ಭಗವದ್ಗೀತಾ ಭಾಷ್ಯವನ್ನು ನೀಡಿದರೆಂದೂ
ನಂಬಿಕೆಯುಂಟು. ಇನ್ನೂ ಒಂದು ಬಾರಿ ಬದರಿ ಕ್ಷೇತ್ರವನ್ನು ದರ್ಶಿಸಿದರೆಂದೂ ಅಲ್ಲಿಂದ ಹಿಂದಿರುಗುವಾಗ ದೆಹಲಿಯ ಸುಲ್ತಾನ
ಜಲಾಲುದ್ದೀನ್ ಖಿಲ್ಜಿಯ ಸೈನಾಧಿಕಾರಿ ಸೈಯದ್ ಮುಸ್ತಾ- ಖಾನನೆಂಬ ಧೂರ್ತ ಸೈನ್ಯಾಧಿಕಾರಿಯೊಂದಿಗೆ ಮ್ಲೆಚ್ಛ (ಪಾರಸಿ)
ಭಾಷೆಯಲ್ಲಿ ಸಂಭಾಷಿಸಿ ತದನಂತರ ಸುಲ್ತಾನನನ್ನೇ ಭೇಟಿಯಾಗಿ ಅವನಲ್ಲಿ ದೈವೀಭಾವ ಮೂಡುವಂತೆ ಮಾಡಿದ ರೆಂದು ಅವರ ಜೀವನ ಚರಿತ್ರೆಯಲ್ಲಿ ತಿಳಿಸಲಾಗಿದೆ.

ಹೀಗೆ ನಿತ್ಯ ಸಂಚಾರಿಯಾಗಿ ಕಾಡು ಮೇಡುಗಳನ್ನು ದಾಟುತ್ತಾ, ತೀರ್ಥಕ್ಷೇತ್ರಗಳಲ್ಲಿ ಪವಿತ್ರ ನದಿಗಳಲ್ಲಿ ಮೀಯುತ್ತಾ, ವೇದಾಂತ
ದಿಗ್ದಂತಿಗಳ ಜತೆ ವಾಕ್ಯಾರ್ಥ ನಡೆಸಿ ದ್ವೆ ತ ಸಿದ್ಧಾಂತದ ವಿಜಯ ಪತಾಕೆ ಹಾರಿಸುತ್ತಾ ವಿಷ್ಣು ಭಕ್ತಿಯ ಆಸ್ತಿಕತೆಯನ್ನು ಸ್ಥಾಪಿಸುತ್ತಾ ಧರ್ಮ ಸಂರಕ್ಷಣೆಯ ಕಾರ್ಯವನ್ನು ಅಪೂರ್ವವಾಗಿ ಸಾಧಿಸಿದರು. ಹೀಗೆ ವಿಜಯಗಳ ಮೇಲೆ ವಿಜಯಗಳನ್ನು
ಸಾಧಿಸುತ್ತಾ ತಮ್ಮ ಶಿಷ್ಯ ಸಂಕುಲವನ್ನು ವಧಿಸಿಕೊಳ್ಳುತ್ತಾ ಸಾಗಿರಲು ಒಂದು ದಿವಸ ಗೋದಾವರಿ ತೀರದ ಓರಗಲ್ಲು
(ವಾರಂಗಲ್) ಸಂಸ್ಥಾನವನ್ನು ಪ್ರವೇಶಿಸಿದರು.

ಅಲ್ಲಿನ ಸಂಸ್ಥಾನದ ಆಸ್ಥಾನ ವಿದ್ವಾಂಸರಾಗಿದ್ದ ಶೋಭನ ಭಟ್ಟ ಮತ್ತು ಸ್ವಾಮಿಶಾಸ್ತ್ರಿ ಎಂಬಿಬ್ಬರ ಭೇಟಿಯಾಗಿ ಅವರು ಮಧ್ವರನ್ನು ವಾಕ್ಯಾರ್ಥಕ್ಕೆ ಆಹ್ವಾನಿಸಿದರು. ಅವರಿಬ್ಬರು ಅದ್ವೆ ತಿಗಳಾಗಿದ್ದರು. ಮಧ್ವರು ಆ ಪಂಡಿತರ ‘ಅಹಂ ಬ್ರಹ್ಮಾಸ್ಮಿ’ ಸಿದ್ಧಾಂತದ ಮೇಲೆ ‘ಹರಿ ಸರ್ವೋತ್ತಮ’ ಎಂಬ ತಮ್ಮ ಪಾದವನ್ನು ಮಂಡಿಸಿ ವಿಜಯಗಳಿಸಿ ಅವರಿಬ್ಬರನ್ನು ಶಿಷ್ಯರನ್ನಾಗಿ ಸ್ವೀಕರಿಸಿ ಸಂನ್ಯಾಸ ದೀಕ್ಷೆ ನೀಡಿದರು.

ಅವರಿಬ್ಬರೇ ಮುಂದೆ ಮಠಾಧಿಪತಿಗಳಾದ ಪದ್ಮನಾಭತೀರ್ಥ ಹಾಗೂ ನರಹರಿ ತೀರ್ಥರು. ಅಂತೆಯೇ ತ್ರಿಕ್ರಮ ಪಂಡಿತರೆಂಬ ಮಹಾನ್ ಅದ್ವೆ ತ ಸಿದ್ಧಾಂತಿಗಳನ್ನು ಹದಿನೆಂಟು ದಿವಸಗಳ ಕಾಲ ನಡೆದ ವಾಕ್ಯಾರ್ಥದಲ್ಲಿ ಪರಾಭವಗೊಳಿಸಿ ಅವರಿಗೆ ತಪ್ತ ಮುದ್ರಾಧಾರಣ ಪೂರ್ವಕ ವೈಷ್ಣವ ದೀಕ್ಷೆ ನೀಡಿದರು. ಇವರ ಮಕ್ಕಳೇ ಮುಂದೆ ಮಧ್ವಜಯ ಗ್ರಂಥವನ್ನು ರಚಿಸಿ ಆಚಾರ್ಯರ ಜೀವನಚರಿತ್ರೆಯನ್ನು ತಿಳಿಸಿದ ನಾರಾಯಣ ಪಂಡಿತರು. ಸುಮಾರು ಏಳೂ ಅಡಿ ಎತ್ತರವಿದ್ದ ಮಧ್ವರು ಹೊಂಬಣ್ಣದ ಮೈಕಾಂತಿಯಿಂದ ಕಂಗೊಳಿಸುತ್ತಿದ್ದ ಭೀಮಕಾಯರು. ಅವರನ್ನು ದೈಹಿಕವಾಗಿ ಮುಗಿಸಿ ಹಾಕಬೇಕೆಂಬ ವಿರೋಧಿಗಳ ಪ್ರಯತ್ನಗಳನ್ನು ತಮ್ಮ ಶರೀರ ಬಲದಿಂದ ವಿಫಲಗೊಳಿಸಿದ ಹಲವು ಹತ್ತು ಘಟನೆಗಳು ಅವರ ಜೀವನದಲ್ಲಿ ಕಂಡುಬರುವು ದುಂಟು.

ಅಷ್ಟ ಮಠಗಳನ್ನು ಸ್ಥಾಪಿಸುತ್ತಾರೆ. ದ್ವೆ ತ ಸಿದ್ಧಾಂತವನ್ನು ಪ್ರತಿಪಾದಿಸುವ ಮೂವತ್ತೇಳು ಗ್ರಂಥಗಳನ್ನು ರಚಿಸಿ ತಮ್ಮ
ಅನುಯಾಯಿಗಳಿಗೆ ಶಾಶ್ವತ ಮಾರ್ಗದರ್ಶನ ನೀಡುತ್ತಾರೆ. ಹೀಗೆ ಎಪ್ಪತ್ತೊಂಬತ್ತು ಸಾರ್ಥಕ ವರ್ಷಗಳನ್ನು ಕಳೆದ ಈ ಮಹಾ
ಮೇಧಾವಿ ಧರ್ಮಾಚಾರ್ಯರು ೧೩೧೭ರ ಫೆಬ್ರವರಿ ಮಾಸದಲ್ಲಿ ಇಹ ಜೀವನಯಾತ್ರೆಗೆ ಮುಕ್ತಾಯ ಹಾಡಲು ನಿಶ್ಚಯಿಸುತ್ತಾರೆ.
ಅಂದು ಮಾಘ ಶುದ್ಧ ನವಮಿ, ಉಡುಪಿಯ ಅನಂತೇಶ್ವರ ದೇವಸ್ಥಾನದಲ್ಲಿ ತಮಗೆ ಅತ್ಯಂತ ಪ್ರಿಯವಾಗಿದ್ದ ಐತರೇಯ
ಉಪಷತ್ತಿನ ಪ್ರವಚನ ಮಡುತ್ತಿದ್ದರು. ಬಹಳಷ್ಟು ಭಕ್ತರು ಶ್ರದ್ಧೆಯಿಂದ ಅವರ ಪ್ರವಚನ ಆಲಿಸುತ್ತಿದ್ದರು.

ಎಲ್ಲರೂ ಮೈಮರೆತು ಕುಳಿತಿದ್ದಾಗ ಮಧ್ವರ ಶರೀರದ ಮೇಲೆ ಒಂದೇ ಸಮ ಪುಷ್ಪ ವೃಷ್ಟಿ ಆಯಿತು. ಅದು ನಿಂತಾಗ ಮಧ್ವರು ಪುಷ್ಟಗಳ ರಾಶಿಯಲ್ಲಿ ಮುಚ್ಚಿಹೋಗಿದ್ದರು. ಇನ್ನೂ ಅಚ್ಚರಿ ಎಂದರೆ ಅನಂತರ ಪುಷ್ಪಗಳನ್ನು ಸರಿಸಿದಾಗ ಅಲ್ಲಿ ಮಧ್ವರು ಇರಲಿಲ್ಲ! ಅಂತರ್ಧಾನರಾಗಿದ್ದರು!! ಇಂದಿಗೂ ಶ್ರೀಮನ್ಮಧ್ವಾಚಾರ್ಯರು ಅದೃಶ್ಯ ರೂಪದಲ್ಲಿ ಉಡುಪಿಯಲ್ಲಿಯೂ ದೃಶ್ಯರೂಪದಲ್ಲಿ ಬದರಿ ಕ್ಷೇತ್ರದಲ್ಲಿಯೂ ಇದ್ದಾರೆಂದು ಭಕ್ತರ ನಂಬಿಕೆ.

ಇದು ಒಂದು ಅಭಿಪ್ರಾಯವಾದರೆ ಅವರು ಒಮ್ಮೆ ಪ್ರವಚನದ ಅನಂತರ ಉಡುಪಿಯನ್ನು ತೊರೆದು ಕೆಲವರು ಶಿಷ್ಯರೊಂದಿಗೆ
ಬದರಿ ಕ್ಷೇತ್ರಕ್ಕೆ ತೆರಳಿದವರು ಮತ್ತೆ ಹಿಂದಿರುಗಲಿಲ್ಲ ಎಂಬ ಅಭಿಪ್ರಾಯವೂ ಉಂಟು.