Wednesday, 9th October 2024

ಶಿವನಸಮುದ್ರ ಯೋಜನೆಗೂ ಮದ್ರಾಸ್ ಅಡಚಣೆಯೊಡ್ಡಿತ್ತು !

ತನ್ನಿಮಿತ್ತ

ಗಜಾನನ ಶರ್ಮ

ಕನ್ನಂಬಾಡಿ ಅಣೆಕಟ್ಟೆ ನಿರ್ಮಾಣಕ್ಕೆ ಮದ್ರಾಸು ಸರಕಾರ ಪದೇಪದೆ ಅಡಚಣೆ ಒಡ್ಡಿದ್ದು, ಮಾದರಿ ಮೈಸೂರಿನ ನಿರ್ಮಾತೃಗಳಾದ ನಾಲ್ವಡಿಯವರ ನಿರ್ದೇಶನ ದಡಿ ಸರ್ ಎಂ.ವಿಶ್ವೇಶ್ವರಯ್ಯನವರು ಸ್ವತಃ ವಾದ ಮಾಡಿ ಬ್ರಿಟಿಷ್ ಸರಕಾರ ನೇಮಿಸಿದ ನ್ಯಾಯ ಪಂಚಾಯತಿಯಲ್ಲಿ ಮೈಸೂರಿಗೆ ಗೆಲುವನ್ನು ದಕ್ಕಿಸಿಕೊಟ್ಟು
ಕನ್ನಂಬಾಡಿಯನ್ನು ಯಶಸ್ವಿಯಾಗಿ ನಿರ್ಮಿಸಿದ್ದು ಈಗ ಇತಿಹಾಸ.

ಆದರೆ, ಕನ್ನಂಬಾಡಿಗೂ ಮೊದಲು ಶಿವನ ಸಮುದ್ರ ವಿದ್ಯುದಾಗಾರ ನಿರ್ಮಾಣದ ಸಂದರ್ಭದಲ್ಲೂ ಮದ್ರಾಸು ಹಲವು ಬಗೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದು
ಬಹಳ ಜನಕ್ಕೆ ತಿಳಿದಿಲ್ಲ. 1892ರಲ್ಲಿ ಕಾವೇರಿ ನೀರು ಹಂಚಿಕೆಯ ಸಂಬಂಧ ಮೈಸೂರು ಸಂಸ್ಥಾನ ಮತ್ತು ಬ್ರಿಟಿಷರ ನೇರ ಆಡಳಿತಕ್ಕೆ ಸೇರಿದ್ದ ಮದ್ರಾಸು ಪ್ರಾಂತ್ಯ (ಮದ್ರಾಸ್ ಪ್ರಾವಿ)ಗಳ ನಡುವೆ ಒಪ್ಪಂದವೊಂದು ಏರ್ಪಟ್ಟಿತ್ತು. ಆದರೆ, ಆ ಒಪ್ಪಂದ ಅದೆಷ್ಟು ಏಕಪಕ್ಷೀಯವಾಗಿತ್ತೆಂದರೆ ಮುಂದೆ ಮೈಸೂರು ಸಂಸ್ಥಾನ ಶಿವನ ಸಮುದ್ರ ಜಲವಿದ್ಯುತ್ ಯೋಜನೆ ಆರಂಭಿಸಲು ಹೊರಟಾಗ ಕಾವೇರಿ ನೀರಿನ ಹರಿವಿನ ಪ್ರಮಾಣವನ್ನು ಅಳತೆ ಮಾಡಲೂ ಅಂದಿನ ಮದ್ರಾಸು ಸರಕಾರ ಸುಲಭಕ್ಕೆ ಅನುಮತಿ ಕೊಡಲಿಲ್ಲ.

1894ರಲ್ಲಿ ಎಡ್ಮಂಡ್ ಚಾರಿಂಗ್ಟನ್ ಎಂಬಾತ ಶಿವನಸಮುದ್ರ ಜಲಪಾತ ಬಳಸಿ ವಿದ್ಯುತ್ ಉತ್ಪಾದಿಸಲು ಅರ್ಜಿ ಸಲ್ಲಿಸಿದ್ದ. ಅದರನ್ವಯ ಮೈಸೂರು ಸಂಸ್ಥಾನದ ಮುಖ್ಯ ಎಂಜಿನಿಯರಾಗಿದ್ದ ಕರ್ನಲ್ ಬೋವೆನ್ ಮೊದಲ ಬಾರಿಗೆ ಕಾವೇರಿ ಹರಿವಿನ ಪ್ರಮಾಣವನ್ನು ಅಳತೆ ಮಾಡಿದ್ದ. ಈ ಅಳತೆಯ ನಿಖರತೆಯ ಕುರಿತು ಸಾಕಷ್ಟು ಸಂಶಯ ವ್ಯಕ್ತವಾಗಿದ್ದರಿಂದ ಮತ್ತೆ ಅಳತೆ ಮಾಡುವುದು ಅನಿವಾರ್ಯವಾಗಿತ್ತು. ಮುಂದೆ ಶಿವನಸಮುದ್ರ ವಿದ್ಯುತ್ ಯೋಜನೆಯನ್ನು ಮೈಸೂರು ದರ್ಬಾರು ಸ್ವತಃ ಅನುಷ್ಠಾನಗೊಳಿಸಲು ನಿಶ್ಚಯಿಸಿತು. ಆದರೆ, ನಿಖರವಾಗಿ ನೀರಿನ ಹರಿವಿನ ಪ್ರಮಾಣ ತಿಳಿಯದೆ ಉತ್ಪಾದಿಸಬಹುದಾದ ವಿದ್ಯುತ್ ಪ್ರಮಾಣ ನಿರ್ಧರಿಸ ಲಾಗುತ್ತಿರಲಿಲ್ಲ.

ಕೆಜಿಎಫ್ ನ ಚಿನ್ನದ ಗಣಿ ಮಾಲೀಕರಾಗಿದ್ದ ಜಾನ್ ಟೇಲರ್ ಕಂಪನಿಯವರು ತಮಗೆ ಕನಿಷ್ಠ 4000 ಎಚ್‌ಪಿ ವಿದ್ಯುತ್ ನೀಡಿದರೆ ಪ್ರತಿ ಎಚ್‌ಪಿ ವಿದ್ಯುತ್ತಿಗೆ ಮೊದಲ ವರ್ಷ 29 ಪೌಂಡ್ (435 ರುಪಾಯಿ) ಮತ್ತು ಮುಂದೆ ಕೆಲವು ವರ್ಷ 18 ಪೌಂಡ್ (260 ರುಪಾಯಿ) ನೀಡುವುದಾಗಿ ಮೈಸೂರು ಸರಕಾರಕ್ಕೆ ಕೋರಿಕೆ ಸಲ್ಲಿಸಿದ್ದರು. ಇದು ಅಂದಿನ ಆರ್ಥಿಕ ಸಂಕಷ್ಟದ ದಿನಗಳಲ್ಲಿ ಮೈಸೂರು ಸರಕಾರಕ್ಕೆ ಆಶಾದಾಯಕ ಬೆಳವಣಿಗೆಯಾಗಿತ್ತು. ಶಿವನಸಮುದ್ರದಲ್ಲಿ ಲಭ್ಯವಿದ್ದ ಎತ್ತರ (ಹೆಡ್)ದಲ್ಲಿ ಅಷ್ಟು ಪ್ರಮಾಣದ ವಿದ್ಯುತ್ ಉತ್ಪಾದಿಸಲು ಕನಿಷ್ಠ 181 ಕ್ಯೂಸೆಕ್ ನೀರು ಅಗತ್ಯವಿತ್ತು.

ಮಳೆಗಾಲದಲ್ಲಿ ನೀರಿನ ಕೊರತೆ ಇರದಿದ್ದರೂ ಬೇಸಿಗೆಯಲ್ಲಿ ಈ ಪ್ರಮಾಣದ ನೀರು ದೊರೆಯುವುದನ್ನು ಖಾತ್ರಿ ಪಡಿಸಿಕೊಳ್ಳದೇ ಮೈಸೂರು ಸಂಸ್ಥಾನ ಮುಂದಿನ ಹೆಜ್ಜೆ ಇರಿಸುವಂತಿರಲಿಲ್ಲ. ಹಾಗಾಗಿ ಕಾವೇರಿ ಹರಿವಿನ ನಿಖರ ಮಾಪನದ ಅಗತ್ಯವಿತ್ತು. ನೀರಿನ ಅಳತೆಗಾಗಿ ಅಂದಿನ ಮಾಪನದ ಪದ್ಧತಿಯಲ್ಲಿ ಎರಡು ತಾತ್ಕಾ ಲಿಕ ಒಡ್ಡುಗಳನ್ನಾದರೂ ನಿರ್ಮಿಸಿಕೊಳ್ಳುವುದು ಅತ್ಯಗತ್ಯವಾಗಿತ್ತು. 1892ರ ಒಪ್ಪಂದದ ಪ್ರಕಾರ ಈ ತಾತ್ಕಾಲಿಕ ಒಡ್ಡುಗಳ ನಿರ್ಮಾಣಕ್ಕೂ ಮದ್ರಾಸಿನ ಅನುಮತಿಯ ಅಗತ್ಯವಿತ್ತು.

ಹಾಗಾಗಿ ಅವರ ಅನುಮತಿಗೆ ಕೋರಿಕೆ ಸಲ್ಲಿಸಿದ ಮೈಸೂರು ಸಂಸ್ಥಾನಕ್ಕೆ ಅಚ್ಚರಿ ಕಾದಿತ್ತು. ನೀರಿನ ಹರಿವಿನ ಮಾಪನದ ಕಾರಣಕ್ಕೆ ತಾತ್ಕಾಲಿಕ ಒಡ್ಡು ನಿರ್ಮಾಣಕ್ಕೂ ಮದ್ರಾಸು ಸರಕಾರ ಅನುಮತಿ ನಿರಾಕರಿಸಿತ್ತು. ಆ ಕಾಲದಲ್ಲಿ ನದಿಯ ನೀರು ಇಡೀ ನದಿಯ ಪಾತ್ರದುದ್ದಕ್ಕೂ ಹರಿಯುತ್ತಿದ್ದರೆ ಅದರ ಅಳತೆ ಸಾಧ್ಯವಾಗುತ್ತಿರಲಿಲ್ಲ. ನೀರಿನ ಪ್ರಮಾಣವನ್ನು ನಿಖರವಾಗಿ ಅಳೆಯಲು ಒಂದೇ ಜಾಗದಲ್ಲಿ ಆಂಗ್ಲ ಭಾಷೆಯ ‘ವಿ’ ಆಕಾರದ ವಿಯರ್ ಮೂಲಕ ನೀರನ್ನು ಹರಿಸಿ ಹರಿವಿನ ಪ್ರಮಾಣವನ್ನು ಅಳೆಯಬೇಕಿತ್ತು (ಈಗ ಬೇರೆ ಮಾದರಿಯಲ್ಲೂ ಅಳತೆ ಸಾಧ್ಯವಿದೆಯಾದರೂ ಆಗಿನ ತಾಂತ್ರಿಕತೆಯಲ್ಲಿ ನೀರನ್ನು ‘ವಿಯರ್’ ಮೂಲಕ ಹರಿಸಿಯೇ ಅಳೆಯುವುದು ಅನಿವಾರ್ಯವಾಗಿತ್ತು) ಶಿವನಸಮುದ್ರದಲ್ಲಿ ಕಾವೇರಿ ಎರಡು ಕವಲಾಗಿ ಹರಿಯುತ್ತಿದ್ದರಿಂದ ಎರಡೂ ಕವಲುಗಳಲ್ಲಿ ಈ ವ್ಯವಸ್ಥೆ
ಅನಿವಾರ್ಯವಾಗಿತ್ತು.

ನೀರು ಹಾಗೆ ಒಂದೇ ಜಾಗದಲ್ಲಿ ಹರಿಯುವಂತೆ ಮಾಡಲು ತಾತ್ಕಾಲಿಕ ಒಡ್ಡಿನ ನಿರ್ಮಾಣ ಅನಿವಾರ್ಯವಾಗಿತ್ತು. ದುರದೃಷ್ಟವಶಾತ್ ಅದಕ್ಕೂ ಮದ್ರಾಸಿನ ಅನುಮತಿ ಇರಲಿಲ್ಲ. ಹಾಗಾಗಿ ಅಂದಿನ ಸಂಸ್ಥಾನದ ಆಡಳಿತ ಮರಳು ಚೀಲಗಳನ್ನು ಪೇರಿಸಿ, ತಾತ್ಕಾಲಿಕ ವ್ಯವಸ್ಥೆಯೊಂದನ್ನು ಕಲ್ಪಿಸಿಕೊಳ್ಳಲು ತೀರ್ಮಾನಿ ಸಿತು. ಇಂತಹದೊಂದು ತಾತ್ಕಾಲಿಕ ಕ್ರಮದಿಂದ ಅಳತೆಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾದರೂ, ವಿದ್ಯುತ್ ಉತ್ಪಾದಿಸುವ ಮುಂದಿನ ಹಂತ ಸುಲಭವಿರಲಿಲ್ಲ.

ಯಾಕೆಂದರೆ ಸೂರ್ಯ ಮುಳುಗದ ಸಾಮ್ರಾಜ್ಯದ ನೇರ ಆಡಳಿತದಲ್ಲಿರುವ ಮದ್ರಾಸೆಂಬ ಮದ್ರಾಸಿಗೇ ಸಾಧ್ಯವಾಗದ ಸಾಹಸವೊಂದನ್ನು ಒಡೆಯರ್ ಆಡಳಿತದ ಪುಟ್ಟ ಮೈಸೂರು ಸಂಸ್ಥಾನ ಕೈಗೊಳ್ಳುವುದು ಮದ್ರಾಸಿನ ಅಹಂಕಾರಕ್ಕೆ ಹೊಡೆತವಾಗಿತ್ತು. ಹಾಗಾಗಿ ಅದೀಗ ಇನ್ನೊಂದು ಖ್ಯಾತೆ ತೆಗೆಯಿತು. ಶಿವನಸಮುದ್ರ ಆ ಕಾಲದಲ್ಲಿ ಒಬ್ಬ ಜಾಗೀರುದಾರನ ಅಧೀನದಲ್ಲಿತ್ತು ಮತ್ತು ಆತ ಮದ್ರಾಸು ಪ್ರಾಂತ್ಯದ ಅಡಿಯಾಳಾಗಿ ಬದುಕುವುದರ ಸಾರ್ಥಕತೆ ಕಂಡುಕೊಂಡಿದ್ದ. ಜತೆಗೆ ಅಂದಿನ ಗಡಿಲೆಕ್ಕಾಚಾರದಲ್ಲಿ ಶಿವನಸಮುದ್ರದ ಸಮೀಪ ಕಾವೇರಿಯ ಉತ್ತರ ವಾಹಿನಿ (ಉತ್ತರದ ಕವಲು) ಅಂದು ಮದ್ರಾಸಿಗೆ ಒಳಪಟ್ಟ ನೆಲದಲ್ಲಿ ಹರಿಯು ತ್ತಿತ್ತು.

ವಿದ್ಯುತ್ ಉತ್ಪಾದಿಸಲು ಉತ್ತರ ವಾಹಿನಿಯ ನೀರನ್ನೂ ದಕ್ಷಿಣವಾಹಿನಿಗೆ ತಿರುವಿ, ಅಲ್ಲಿಂದ ವಿದ್ಯುತ್ ಉತ್ಪಾದಿಸುವ ಪೆನ್ ಸ್ಟಾಕಿಗೆ ಹರಿಸಬೇಕಿತ್ತು. ಅದಕ್ಕಾಗಿ ಮತ್ತೆ ಮದ್ರಾಸಿನ ಅನುಮತಿ ಅನಿವಾರ್ಯವಾಗಿತ್ತು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಮೈಸೂರು ವಿದ್ಯುತ್ ಉತ್ಪಾದಿಸುವುದರಿಂದ ಮದ್ರಾಸಿಗೆ ಹನಿ ನೀರಿನ ಕೊರತೆಯೂ ಆಗುತ್ತಿರಲಿಲ್ಲ. ಇನ್ನೂ ಹೇಳುವುದಾದರೆ ಮೇಲ್ಭಾಗದಲ್ಲಿ ಬೇಸಿಗೆ ಬೆಳೆಯನ್ನು ರದ್ದುಗೊಳಿಸಿದ ಹೆಚ್ಚುವರಿ ನೀರೂ ಅದಕ್ಕೆ ಲಭಿಸುತ್ತಿತ್ತು. ಆದರೂ ಮೈಸೂರಿಗೆ ಅನುಕೂಲವಾಗುವುದು ಅವರಿಗೆ ಬೇಕಿರಲಿಲ್ಲ.

ನಮ್ಮ ಮನೆಯ ಹುಡುಗ ಫೇಲಾದರೂ ಸರಿ, ಪಕ್ಕದ ಮನೆಯ ಹುಡುಗ ರ‍್ಯಾಂಕ್ (rank) ಬರಬಾರದು. ಇದು ಮದ್ರಾಸಿನವರ ಮನೋಭಾವದ ಎರಡನೆಯ ಬಾರಿ ಕೋರಿಕೆ ಸಲ್ಲಿಸುವಾಗ ಮೈಸೂರು ತುಂಬ ಮುನ್ನೆಚ್ಚರಿಕೆ ವಹಿಸಿತು. ತನಗೆ ಲಭಿಸುವ ಲಾಭದಲ್ಲಿ ಪಾಲು ಕೊಡಲು ತೀರ್ಮಾನಿಸಿತು. ಮದ್ರಾಸು ಸರಕಾರಕ್ಕೆ ಒಪ್ಪಿಗೆ ಕೇಳುವಾಗಲೇ, ‘ತಾನು ಉತ್ತರ ವಾಹಿನಿಯಿಂದ ದಕ್ಷಿಣವಾಹಿನಿಗೆ ನೀರು ಹರಿಸುವುದರಿಂದ ಮೈಸೂರು ದರ್ಬಾರಿಗೆ ವಾರ್ಷಿಕ 15000 ರುಪಾಯಿ ಆದಾಯ ಬರುವುದೆಂದೂ, ಅದಕ್ಕಾಗಿ ತಾನು ಮದ್ರಾಸಿಗೆ ವಾರ್ಷಿಕ 500 ರುಪಾಯಿಗಳ ಬಾಡಿಗೆ ತೆರಲು ಸಿದ್ಧವಿದ್ದೇನೆ’ ಎಂದೂ ಹೇಳಿತು. ಆದರೆ, ಮದ್ರಾಸಿನ ಅಹಂಕಾರ ಈ ಕೋರಿಕೆಗೂ ತಣಿಯಲಿಲ್ಲ. ನೀರಿನ ಹರಿವಿನ ಪ್ರಮಾಣದ ಅಳತೆಯನ್ನು ಮರಳುಚೀಲ ಪೇರಿಸಿಯಾದರೂ ಮಾಡಬಹುದಿತ್ತು.

ಆದರೆ, ಬೇಸಿಗೆಯಲ್ಲಿ ವಿದ್ಯುತ್ ಉತ್ಪಾದನೆಗೆ ಮಳೆಗಾಲದ ನೀರು ಸಂಗ್ರಹಿಸಲೇಬೇಕಿತ್ತು. ಅದಕ್ಕಾಗಿ ಕಾವೇರಿ ನದಿಯು ಕವಲೊಡೆಯುತ್ತಿದ್ದ ತಾಣಕ್ಕೂ ಮೊದಲೇ ಒಂದು ಅಣೆಕಟ್ಟೆ ಕಟ್ಟಬೇಕಿತ್ತು. ಆದರೆ, ನೀರಿನ ಅಳತೆಗೆ ಅಗತ್ಯವಿದ್ದ ತಾತ್ಕಾಲಿಕ ಒಡ್ಡಿಗೇ ಆಸ್ಪದ ನೀಡದ ಮದ್ರಾಸು ಇನ್ನು ನಿರಂತರ ನೀರು
ಸಂಗ್ರಹಿಸುವ ಡ್ಯಾಮಿನ ನಿರ್ಮಾಣಕ್ಕೆ ಅನುಮತಿ ನೀಡೀತೇ? ಮೈಸೂರು ಸಂಸ್ಥಾನ ದಿನಾಂಕ 24-3-1900 ರಿಂದ ಮರಳು ಚೀಲ ಪೇರಿಸಿ ತಾತ್ಕಾಲಿಕವಾಗಿ ನೀರನ್ನು ಒಂದು ಕಡೆ ಹರಿಸಿ ನೀರಿನ ಹರಿವಿನ ಪ್ರಮಾಣವನ್ನು ಅಳೆಯುವ ಕೆಲಸ ಆರಂಭಿಸಿತು. ಈ ಅಳತೆಯಿಂದ ಬೇಸಿಗೆಯ ನೀರಿನ ಹರಿವು ಕೇವಲ 95 ಕ್ಯೂಸೆಕ್ ಎಂಬುದು ತಿಳಿಯಿತು.

ಆದರೆ 4000 ಎಚ್‌ಪಿ ವಿದ್ಯುತ್ ಉತ್ಪಾದಿಸಲು ಕನಿಷ್ಠ 181 ಕ್ಯೂಸೆಕ್ ನೀರು ಬೇಕೇಬೇಕಿತ್ತು. ಲಭ್ಯ ನೀರಿನ ಪ್ರಮಾಣದಂತೆ ಕನಿಷ್ಠ ಎರಡು ತಿಂಗಳು 2000 ಎಚ್‌ಪಿ ಕೊರತೆಯಾಗುತ್ತಿತ್ತು. ಜಾನ್ ಟೇಲರ್ ಕಂಪನಿಯೊಂದಿಗಿನ ಒಪ್ಪಂದದಂತೆ ಇದನ್ನು ಸರಿದೂಗಿಸಲು ಬೇಸಿಗೆಯಲ್ಲಿ ಒಪ್ಪಂದಕ್ಕೆ ಬದ್ಧವಾಗಲು ಕನಿಷ್ಠ 2000 ಎಚ್‌ಪಿ ಉತ್ಪಾದಿಸಲು ಉಷ್ಣ ವಿದ್ಯುದಾಗಾರವೊಂದನ್ನು ಸ್ಥಾಪಿಸಬೇಕಾಗುತ್ತಿತ್ತು. ಆದರೆ, ಅದಕ್ಕೆ ವಿಪರೀತ ವೆಚ್ಚ ತಗಲುತ್ತಿತ್ತು. ಅಂದಿನ ಆರ್ಥಿಕ
ಪರಿಸ್ಥಿತಿಯಲ್ಲಿ ಮೈಸೂರು ಸಂಸ್ಥಾನಕ್ಕೆ ಅದು ಕಷ್ಟಸಾಧ್ಯವಾಗಿತ್ತು. ಮೈಸೂರಿನ ಈ ತಾಪತ್ರಯಗಳಿಗೆ ಸ್ಪಂದಿಸುವ ಮನಸ್ಥಿತಿ ಮದ್ರಾಸಿಗೆ ಕಿಂಚಿತ್ತೂ ಇರಲಿಲ್ಲ.
ಮೈಸೂರು ಆಡಳಿತ ಇಕ್ಕಟ್ಟಿನಲ್ಲಿ ಸಿಕ್ಕಿಬಿದ್ದಿತ್ತು. ಅದರಿಂದ ಹೊರಬರಲು ಅದರೆದುರು ಎರಡು ಆಯ್ಕೆಗಳಿದ್ದವು.

ಶಿವನಸಮುದ್ರಕ್ಕಿಂತ ಮೇಲ್ಭಾಗದಲ್ಲಿ ಕಾವೇರಿ ನದಿಗೆ, ಹಿಂದೆ ಆಳಿದ ರಾಜಮಹಾರಾಜರು ಮತ್ತು ಮಂತ್ರಿಮಹಾಶಯರು ನಿರ್ಮಿಸಿದ ಒಟ್ಟು ಹನ್ನೆರಡು ಪುಟ್ಟ ಅಣೆಕಟ್ಟೆಗಳಿದ್ದವು. (ಧನಗೆರೆ, ಮಾಧವಮಂತ್ರಿ ಮುಂತಾದ ಪಿಕ್ ಅಪ್ ಅಣೆಕಟ್ಟುಗಳು) ಜಲಪಾತಕ್ಕಿಂತ 20 ಮೈಲುಗಳ ಮೇಲ್ಭಾಗದ ತಲಕಾಡಿನಲ್ಲಿದ್ದ ಮಾಧವಮಂತ್ರಿ ಅಣೆಕಟ್ಟೆಯನ್ನು ಒಂದೂವರೆ ಅಡಿಯಷ್ಟು ಎತ್ತರಿಸಿ, ಅದರ ಶೇಖರಣಾ ಸಾಮರ್ಥ್ಯವನ್ನು 313 ದಶಲಕ್ಷ ಘನ ಅಡಿಗೆ ಹೆಚ್ಚಿಸಬಹುದೆಂದು ಮೈಸೂರು ಸರಕಾರ ಅಂದಾಜಿಸಿತು.

ಕೆಜಿಎಫ್ ಕೋರಿಕೆಯಂತೆ 4000 ಎಚ್‌ಪಿ ಉತ್ಪಾದನೆಗೆ ಅಗತ್ಯವಾದ ನೀರಿನ ಪ್ರಮಾಣ 181 ಕ್ಯೂಸೆಕ್. ಬೇಸಿಗೆಯ ಹರಿವು 95 ಕ್ಯೂಸೆಕ್. ಆಗಿದ್ದರೆ ಇನ್ನೂ 86 ಕ್ಯೂಸೆಕ್ ಹೆಚ್ಚುವರಿ ನೀರು ಅಗತ್ಯವಾಗುತ್ತಿತ್ತು. ಈ ಪ್ರಕಾರ ದಿನವಹಿ ನೀರಿನ ಕೊರತೆ, 86*24*60*60= 7.43 ದಶಲಕ್ಷ ಕ್ಯೂಸೆಕ್ ಆಗುತ್ತಿತ್ತು.
ಮಾಧವಮಂತ್ರಿ ಕಟ್ಟೆಯ ಶೇಕರಣೆ ಕೇವಲ 313 ದಶಲಕ್ಷ ಕ್ಯೂಸೆಕ್ ಅಂದರೆ ಈ ನೀರು (31367.43= 42) ಕೇವಲ ದಿನಗಳಿಗೆ ಸಾಲುತ್ತಿತ್ತು. ಮಾಧವಮಂತ್ರಿ ಅಣೆಕಟ್ಟೆಯಿಂದ ಪೂರ್ತಿನೀರು ಬಳಸುವಂತಿರಲಿಲ್ಲ. ಬೇಸಿಗೆ ಬೆಳೆಗೆ ತೊಂದರೆಯಾಗುತ್ತಿತ್ತು. ಹಾಗಾಗಿ ಧನಗೆರೆ ಅಣೆಕಟ್ಟೆಯ ನೀರನ್ನೂ ಬಳಸುವುದು ಅನಿ ವಾರ್ಯವಾಗಿತ್ತು. ಇದಕ್ಕಾಗಿ ಶಿವನಸಮುದ್ರ ಜಾಗೀರುದಾರನ ಒಪ್ಪಿಗೆ ಅವಶ್ಯವಿತ್ತು. ಆತ ತನ್ನ ವ್ಯಾಪ್ತಿಯಲ್ಲಿ ಬೇಸಿಗೆ ಬೆಳೆಯನ್ನು ರದ್ದುಗೊಳಿಸಬೇಕಿತ್ತು.  ಹಾಗಾಗಿ ಮೈಸೂರು ಸಂಸ್ಥಾನ ಅವನೊಂದಿಗೆ ಒಪ್ಪಂದವೊಂದಕ್ಕೆ ಸಿದ್ಧವಾಯಿತು. ಇದಕ್ಕಾಗಿ ಅವನಿಗೆ ವಾರ್ಷಿಕವಾಗಿ 941 ರುಪಾಯಿಗಳ ಪರಿಹಾರ ಧನ ನೀಡಲು ಒಪ್ಪಲಾಯಿತು. ಇಷ್ಟೆಲ್ಲ ನಡೆದರೂ ಮೇಲ್ಭಾಗದ ಕಾಮಗಾರಿಗಳಿಗೆ ಮದ್ರಾಸಿನ ಒಪ್ಪಿಗೆ ಪಡೆಯಲೇಬೇಕಿತ್ತು. ಈ ಕುರಿತು ಮದ್ರಾಸ್ ಪ್ರಾವಿನ್ಸಿನೊಂದಿಗೆ 8-7-1899ರಿಂದ 4-8-1900ರವರೆಗೆ ಹಲವು ಸುತ್ತಿನ ಕಾಗದ ಪತ್ರಗಳ ವ್ಯವಹಾರ ನಡೆಯಿತು. ಅಂತಿಮವಾಗಿ ಜಾನ್ ಟೇಲರ್ ಪ್ರಭಾವದಿಂದ ಕರಡು ಒಪ್ಪಂದವೊಂದಕ್ಕೆ ಬರಲಾಯಿತು.

ಅದರ ಪ್ರಕಾರ, 1. ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆಗೆ ಬಳಸಿದ ನೀರನ್ನು ಸಂಪೂರ್ಣವಾಗಿ ಮದ್ರಾಸ್ ಪ್ರಾಂತ್ಯಕ್ಕೆ ಹನಿಯೂ ಕೊರತೆಯಾಗದಂತೆ ಬಿಡಬೇಕು.

2. ಮೊದಲ ಐದು ವರ್ಷಗಳ ಕಾಲ, ಮೈಸೂರು ದರ್ಬಾರು ಕೇವಲ ತನ್ನ ಪಾಲಿನ ನೀರು ಬಳಸುವುದರಿಂದ ಮದ್ರಾಸು ಸರಕಾರಕ್ಕೆ ಯಾವುದೇ ಪರಿಹಾರ ನೀಡಬೇಕಿಲ್ಲ.

3. ಅಲ್ಲಿಂದ ಮುಂದೆ 30 ವರ್ಷಗಳ, ಕಾಲ ಒಟ್ಟು ಉತ್ಪಾದನೆಯ ಅರ್ಧದಷ್ಟು ವಿದ್ಯುತ್ತಿಗೆ ಪ್ರತಿ ಎಚ್‌ಪಿಗೆ ಐದು ರುಪಾಯಿಯಂತೆ ವಾರ್ಷಿಕ ಕನಿಷ್ಠ 2000
ರುಪಾಯಿಗಳ ಪರಿಹಾರ ಧನ ನೀಡಬೇಕೆಂಬ ನಿರ್ಣಯಕ್ಕೆ ಬರಲಾಯಿತು. ಈ ಒಪ್ಪಂದದ ನಂತರವಷ್ಟೇ ಮದ್ರಾಸು ಕಾವೇರಿ ಕಾಮಗಾರಿಗಳಿಗೆ ಅನುಮತಿ ನೀಡಿತು. ಇಲ್ಲಿ ಇನ್ನೊಂದು ವಿಶೇಷ ಗಮನಿಸಬೇಕು. ಏನೆಂದರೆ ಈ ಎಲ್ಲ ಪತ್ರ ವ್ಯವಹಾರಗಳೂ ಬ್ರಿಟಿಷ್ ರೆಸಿಡೆಂಟರ ಮೂಲಕವೇ ನಡೆದಿತ್ತು. ಇಷ್ಟಾಗಿಯೂ ಮದ್ರಾಸು ಇಷ್ಟೆಲ್ಲ ಅಡಚಣೆ ಒಡ್ಡಿತ್ತು. ಇಂತಹ ಪರಿಸ್ಥಿತಿಯಲ್ಲಿ ಮುಂದೆ ಸರ್ ಎಂ.ವಿಶ್ವೇಶ್ವರಯ್ಯನವರು ಕನ್ನಂಬಾಡಿಗೆ ಎಂತಹ ಹರಸಾಹಸ ಮಾಡಿ ಒಪ್ಪಿಗೆ ಪಡೆದಿರಬಹುದು ಊಹಿಸಿ.