ಬೆಂಗಳೂರು: ಮಾಗಡಿರಸ್ತೆಯಲ್ಲಿರುವ ಟೋಲ್‍ಗೇಟ್ ಬಳಿಯ ವೃತ್ತಕ್ಕೆ ಆದಿಚುಂಚನಗಿರಿ ಪೀಠದ ಶ್ರೀ ಡಾ.ಬಾಲಗಂಗಾಧರ ನಾಥ ಶ್ರೀಗಳ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.
ಅವರು ಬದುಕಿರುವಾಗಲೇ ಒಪ್ಪಿಗೆಯನ್ನು ಪಡೆಯಲಾಗಿತ್ತು. ಸದ್ಯದಲ್ಲೇ ಟೋಲ್‍ಗೇಟ್ ಬಳಿ ಇರುವ ವೃತ್ತಕ್ಕೆ ಆದಿಚುಂಚನಗಿರಿ ಬಾಲಗಂಗಾಧರನಾಥ ಸ್ವಾಮೀಜಿಗಳ ಹೆಸರು ನಾಮಕರಣ ಮಾಡಲಾಗುವುದು ಎಂದು ಹೇಳಿದರು.
ವೃತ್ತಕ್ಕೆ ಶ್ರೀಗಳ ನಾಮಕರಣ ಮಾಡಲು ಹಲವಾರು ಬಾರಿ ಸಂಘಟನೆಗಳ ಮುಖಂಡರು ಸೇರಿದಂತೆ ಮತ್ತಿತರರ ಜೊತೆ ಮಾತುಕತೆ ನಡೆಸಲಾಗಿತ್ತು. ಅದಕ್ಕೆ ಪಾಲಿಕೆಯಿಂದ ಆದೇಶ ಹೊರಡಿಸಲಾಗಿತ್ತು. ಕೆಲ ತಿಂಗಳ ಹಿಂದೆ ಕೆಲವರು ರಾತ್ರೋರಾತ್ರಿ ವಿಷ್ಣು ವರ್ಧನ್ ಪುತ್ಥಳಿಯನ್ನು ತಂದು ಕೂರಿಸಿದರು. ಇದು ಗೊಂದಲಕ್ಕೆ ಕಾರಣವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ಹಾಗೂ ಡಾ.ವಿಷ್ಣುವರ್ಧನ್ ಕನ್ನಡ ನಾಡು-ನುಡಿ, ಭಾಷೆ, ಸಾಹಿತ್ಯ, ಶಿಕ್ಷಣ, ಆರೋಗ್ಯ, ವೈದ್ಯಕೀಯ ಸೇರಿದಂತೆ ರಾಜ್ಯದ ಬೆಳವಣಿಗೆಯಲ್ಲಿ ಸಾಕಷ್ಟು ಸಮಾಜಸೇವೆ ಸಲ್ಲಿಸಿದ್ದಾರೆ.