Saturday, 7th September 2024

ನೋಡುತ್ತಿರುವಂತೆಯೇ ಪವಾಡವು ಸಂಭವಿಸಿತು !

ಹಿಂದಿರುಗಿ ನೋಡಿದಾಗ

ನಮ್ಮ ಭೂಮಿಯ ಮೇಲೆ ಜೀವರಾಶಿಯು ನೀರಿನಲ್ಲಿ ಹುಟ್ಟಿತು. ಏಕಕಣ ರೂಪದ ಜೀವಿಗಳು, ಸಮುದ್ರದ ನೀರನ್ನೇ ರೂಪಾಂತರಿಸಿಕೊಂಡು, ಅದನ್ನು ತಮ್ಮ ಒಡಲಿನ ಜೀವಜಲವನ್ನಾಗಿ ಪರಿವರ್ತಿಸಿತು. ಅದುವೇ ಕೋಶರಸ ಅಥವ ಸೈಟೋಪ್ಲಾಸಂ. ಜೀವವಿಕಾಸದ ಫಲವಾಗಿ ಬಹುಕೋಶ ಜೀವಿಗಳು ಉದಯಿಸಿದರು. ಬಹುಕೋಶ ಜೀವಿಗಳಲ್ಲಿ ಅಸಂಖ್ಯ ನಮೂನೆಗಳು ವಿಕಾಸವಾದವು. ಒಂದು ಕಾಲಘಟ್ಟದಲ್ಲಿ ಜೀವಿಗಳು ನೀರನ್ನು ಬಿಟ್ಟು ಭೂಮಿಯ ಕಡೆಗೆ ಹೋಗವು ನಿರ್ಧರಿಸಿದವು. ಹಾಗೇ ಹೋಗುವಾಗ ರೂಪಾಂತರಿತ ಸಮುದ್ರದ ನೀರಾದ ಕೋಶರಸದಲ್ಲಿ ಉಳಿಸಿಕೊಂಡವು.

ಜೊತೆಗೆ ತಮ್ಮ ಒಡಲಿನಲ್ಲಿ ಒಂದು ರಕ್ತಪರಿಚಲನಾ ವ್ಯವಸ್ಥೆಯನ್ನು ರೂಪಿಸಿಕೊಂಡವು. ಈ ವ್ಯವಸ್ಥೆಯ ಮೂಲಕ ತಮ್ಮ ದೇಹದ ಪ್ರತಿಯೊಂದು ಜೀವಕೋಶಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಿ, ತ್ಯಾಜ್ಯವನ್ನು ಕ್ಲುಪ್ತವಾಗಿ ವಿಸರ್ಜಿಸಲು ರೂಢಿಸಿಕೊಂಡವು. ಈ ಪರಿಚಲನೆಯಲ್ಲಿ ಹರಿಯುವ ರಕ್ತವೂ ಸಹ ರೂಪಾಂತರಿತ ಸಮುದದ್ರ ನೀರೆ! ಹಾಗಾಗಿ ಸಮುದ್ರದ ನೀರು, ಕೋಶರಸ ಹಾಗೂ ರಕ್ತದ ರಾಸಾಯನಿಕ ಸಂಯೋಜನೆಯನ್ನು ಅಕ್ಕಪಟ್ಟ ಇಟ್ಟು ಪರಿಶೀಲಿಸಿದರೆ, ಅವುಗಳ ನಡುವೆ ಅಂತಹ ದೊಡ್ಡ ವ್ಯತ್ಯಾಸವೇನೂ ಕಾಣುವುದಿಲ್ಲ.

ನಮ್ಮ ದೇಹದಲ್ಲಿರುವ ನೀರಿನ ಪ್ರಮಾಣವು ಲಿಂಗ, ವಯಸ್ಸು, ದೇಹರಚನೆ ಹಾಗೂ ಮಾಡುವ ಉದ್ಯೋಗವನ್ನು ಅವಲಂಬಿಸಿರುತ್ತದೆ. ಪುರುಷರ ದೇಹದಲ್ಲಿ ಶೇ.೬೦ ರಷ್ಟು ನೀರಿದ್ದರೆ ಮಹಿಳೆಯರ ದೇಹದಲ್ಲಿ ಶೇ. ೫೫ರಷ್ಟು ನೀರಿದೆ. ಮಹಿಳೆಯಲ್ಲಿ ಸ್ನಾಯುವಿಗಿಂತ ಕೊಬ್ಬು ಅಧಿಕವಾಗಿರುತ್ತದೆ.
ಕೊಬ್ಬಿನ ಜೀವಕೋಶಗಳಲ್ಲಿ ನೀರಿನ ಪ್ರಮಾಣವು ಕಡಿಮೆಯಿರುತ್ತದೆ. ನಮ್ಮ ದೇಹದ ರಕ್ತ ಹಾಗೂ ಶ್ವಾಸಕೋಶಗಳಲ್ಲಿ ನೀರು ಶೇ.೮೩ ಆಸುಪಾಸಿನಲ್ಲಿರುತ್ತದೆ. ಸ್ನಾಯುಗಳು ಹಾಗೂ ಮೂತ್ರಪಿಂಡಗಳಲ್ಲಿ ಶೇ. ೭೯ ರಷ್ಟು ನೀರಿರುತ್ತದೆ. ಮಿದುಳು ಮತ್ತು ಹೃದಯದಲ್ಲಿ ಶೇ.೭೩ರಷ್ಟು ನೀರು ಇದ್ದರೆ, ಚರ್ಮದಲ್ಲಿ ಶೇ.೬೪ ರಷ್ಟು ನೀರು ಇರುತ್ತದೆ. ನಮ್ಮ ದೇಹದ ಗಟ್ಟಿಮೂಳೆಗಳಲ್ಲಿ ಶೇ.೩೧ರಷ್ಟು ನೀರು ಇರುತ್ತದೆ.

ಮೂಳೆಗಳ ರಚನೆಯಲ್ಲಿ ಖನಿಜ ಮತ್ತು ಲವಣಗಳ ಪಾತ್ರವೇ ಹಿರಿದಾಗಿರುತ್ತದೆ. ನಮ್ಮ ದೇಹದ ಎಲ್ಲ ಜೈವಿಕ ಕೆಲಸ ಕಾರ್ಯಗಳು ನೀರಿನ ಮಾಧ್ಯಮ ದಲ್ಲಿಯೇ ನಡೆಯುತ್ತವೆ. ಜೀವದಾಯಕ ನೀರು ಕೆಲವು ಸಂದರ್ಭಗಳಲ್ಲಿ ನಮ್ಮ ದೇಹದಿಂದ ತ್ವರಿತವಾಗಿ ನಷ್ಟವಾಗಬಹುದು. ನಾನಾ ಸಮಸ್ಯೆಗಳಿಗೆ ಎಡೆ ಮಾಡಿಕೊಟ್ಟು ಸಾವು ನೋವಿಗೆ ಕಾರಣವಾಗಬಹುದು. ಅಂತಹ ಸಂದರ್ಭಗಳಲ್ಲಿ ವಾಂತಿ, ಭೇದಿ, ಜ್ವರ ಮತ್ತು ತೀವ್ರಶಾಖಗಳು ಮುಖ್ಯವಾದವು. ಮಕ್ಕಳಲ್ಲಿ ಇವು ಅತ್ಯಂತ ಕಡಿಮೆ ಅವಧಿಯಲ್ಲಿ ಉಗ್ರ ರೂಪವನ್ನು ತಳೆಯಬಹುದು. ವಾಂತಿಯಾಗುವಾಗ ಮಗು ತಾನು ತಿಂದ ಎಲ್ಲ ಪದಾರ್ಥಗಳನ್ನು ವಾಂತಿಯ ಮೂಲಕ ಹೊರಕ್ಕೆ ಹಾಕುತ್ತದೆ.

ಆನಂತರ ನೀರು ನೀರಾಗಿ ವಾಂತಿಯನ್ನು ಮಾಡಬಹುದು. ಭೇದಿಯ ಮೂಲಕ ನೀರು ತ್ವರಿತವಾಗಿ ಹೊರಹೋಗುತ್ತದೆ. ಕಾಲರ ಮುಂತಾದ ಸೋಂಕುಗಳಲ್ಲಿ ಆಗುವ ಭೇದಿಯು ನೀರುನೀರಾಗಿಯೇ ಇರುತ್ತದೆ. ಮಲವೇ ಇರುವುದಿಲ್ಲ. ಇಂತಹ ನೀರು ಭೇದಿಯು ಮಗುವಿನ ಮೈಯಲ್ಲಿ ನೀರನ್ನು
ತ್ವರಿತವಾಗಿ ಕಳೆದು, ಮಗುವನ್ನು ಸಾವಿನೆಡೆಗೆ ಸಾಗಿಸುತ್ತದೆ. ವಿಪರೀತ ಜ್ವರ ಬಂದಾಗ, ಮೈಯಲ್ಲಿರುವ ನೀರಿನಂಶವು ಬೆವರಿನ ಮೂಲಕ ಆವಿಯಾಗ ಬಹುದು. ಹಾಗೆಯೇ ವಿಪರೀತ ಬಿಸಿಲಲ್ಲಿ ನಡೆಯುವಾಗ ಇಲ್ಲವೇ ಕೆಲಸವನ್ನು ಮಾಡುವಾಗ, ಇಲ್ಲವೇ ಕುಲುಮೆ, ಬಾಯ್ಲರ್, ಸೌದೆ ಒಲೆಯಲ್ಲಿ ಅಡುಗೆ ಮುಂತಾದ ಶಾಖ ಪರಿಸರದಲ್ಲಿ ಕೆಲಸ ಮಾಡುವಾಗಲೂ ಮೈಯಲ್ಲಿರುವ ನೀರಿನಂಶವು ನಷ್ಟವಾಗುತ್ತದೆ. ಸಕಾಲದಲ್ಲಿ ನೀರು, ಲವಣ ಹಾಗೂ ಖನಿಜಗಳನ್ನು ಪೂರೈಸದಿದ್ದರೆ ಮಗುವು ಸಾಯುವುದು ಶತಸಿದ್ಧ.

ಜ್ವರ, ವಾಂತಿ, ಭೇದಿ ಮುಂತಾದವು ಪೀಡಿತರಾಗಿರುವ ಮಕ್ಕಳು ಹಾಗೂ ವಯಸ್ಕರರಲ್ಲಿ ಪ್ರತಿ ಶತ ಎಷ್ಟು ನೀರು ನಷ್ಟವಾಗಿದೆ ಎನ್ನುವುದನ್ನು ನೋಡಿ ಕೊಂಡು ಅವರಿಗೆ ಯಾವ ರೀತಿಯ ಚಿಕಿತ್ಸೆಯು ಸೂಕ್ತವಾಗಬಲ್ಲುದು ಎನ್ನುವುದನ್ನು ನಿರ್ಧರಿಸಬಹುದು. ಮೈಯಲ್ಲಿರುವ ಸಹಜ ನೀರು ನಷ್ಟವಾದ ಸ್ಥಿತಿಯನ್ನು ನೀರ್ಕಳೆತ ಅಥವ ಡಿ-ಹೈಡ್ರೇಶನ್ ಎಂದು ಕರೆಯುವುದು ವಾಡಿಕೆ. ಈ ನೀರ್ಕಳೆತದಲ್ಲಿ ಮೂರು ಘಟ್ಟಗಳಿವೆ. ಸೌಮ್ಯ ನೀರ್ಕಳೆತ ಅಥವ ಮೈಲ್ಡ್ ಡಿ-ಹೈಡ್ರೇಷನ್, ಮಧ್ಯಮ ಪ್ರಮಾಣದ ನೀರ್ಕಳೆತ ಅಥವ ಮೀಡಿಯಂ ಡಿ-ಹೈಡ್ರೇಶನ್ ಹಾಗೂ ತೀವ್ರ ನೀರ್ಕಳೆತ ಅಥವ ಸಿವಿಯರ್
ಡಿ-ಹೈಡ್ರೇಶನ್. ಸೌಮ್ಯ ಸ್ವರೂಪದ ನೀರ್ಕಳೆತದಲ್ಲಿ ಮಗುವು ಚುರುಕಾಗಿರುತ್ತದೆ. ಕಣ್ಣುಗಳು ಹೊಳಪಿನಿಂದ ಕೂಡಿರುತ್ತವೆ.

ಕಣ್ಣುಗಳು ಗುಳಿ ಬಿದ್ದಿರುವುದಿಲ್ಲ. ನೀರು ಮತ್ತು ದ್ರವ ಪದಾರ್ಥಗಳನ್ನು ಕೊಟ್ಟರೆ ಕುಡಿಯುತ್ತದೆ. ಚರ್ಮವೂ ಆರೋಗ್ಯವಾಗಿರುತ್ತದೆ. ಈ ಸೌಮ್ಯ ಸ್ವರೂಪದ ನೀರ್ಕಳೆತವನ್ನು ಸರಿಪಡಿಸುವುದು ಸುಲುಭ. ಮಧ್ಯಮ ಪ್ರಮಾಣದ ನೀರ್ಕಳೆತವಾದಾಗ ಮಗುವು ನೆಮ್ಮದಿಯನ್ನು ಕಳೆದುಕೊಂಡಿರುತ್ತದೆ. ಕಿರಿಕಿರಿಯನ್ನು ತೋರುತ್ತದೆ. ಅಳುತ್ತಿರುತ್ತದೆ. ಕಣ್ಣುಗಳ ಹೊಳಪು ಕಡಿಮೆಯಾಗಿ ಕಣ್ಣು ಗುಳಿ ಬಿದ್ದಿರಬಹುದು. ನೀರು ಮತ್ತು ದ್ರವಪಾದರ್ಥಗಳನ್ನು ಕೊಟ್ಟರೆ ಆತುರಾತುರವಾಗಿ ಕುಡಿಯುತ್ತದೆ. ಮೈ ಚರ್ಮವನ್ನು ಎಳೆದರೆ, ಆ ಚರ್ಮವು ನಿಧಾನವಾಗಿ ಮೊದಲಿನ ರೂಪಕ್ಕೆ ಮರಳುತ್ತದೆ. ತೀವ್ರ ಸ್ವರೂಪದ ನೀರ್ಕಳೆತದಲ್ಲಿ ಮಗುವು ಜಡವಾಗಿರುತ್ತದೆ.

ಪ್ರಜ್ಞೆಯು ಹೋಗಿರಬಹುದು. ಕಣ್ಣುಗಳ ಹೊಳಪು ಬಹುಪಾಲು ಕಡಿಮೆಯಾಗಿರುತ್ತದೆ ಹಾಗೂ ಎರಡೂ ಕಣ್ಣುಗಳು ಗುಳಿಬಿದ್ದಿರುತ್ತವೆ. ನೀರು ಮತ್ತು
ದ್ರವಪದಾರ್ಥಗಳನ್ನು ಕೊಟ್ಟರೆ ಅದನ್ನು ಕುಡಿಯುವುದಿಲ್ಲ. ಮೈ ಚರ್ಮವನ್ನು ಎಳೆದರೆ, ಆ ಚರ್ಮವು ಪೂರ್ವ ಸ್ಥಿತಿಗೆ ಮರಳಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಈ ಘಟ್ಟದಲ್ಲಿ ಮಗುವಿಗೆ ಓಆರ್‌ಎಸ್, ಹಣ್ಣಿನ ಜ್ಯೂಸ್, ಬೇಳೆಕಟ್ಟು, ನೀರುಮಜ್ಜಿಗೆ, ಗಂಜಿ ಮುಂತಾದವನ್ನು ಕುಡಿಯಲು ಕೊಟ್ಟರೆ, ಮಗುವು ಬೇಗ ಸುಧಾರಿಸಿಕೊಳ್ಳುತ್ತದೆ. ತೀವ್ರ ಸ್ವರೂಪದ ನೀರ್ಕಳೆತದಲ್ಲಿ ಮಗುವಿಗೆ ಸಕಾಲದಲ್ಲಿ ನೀರು, ಖನಿಜ ಮತ್ತು ಲವಣ ಗಳನ್ನು ಪೂರೈಸದಿದ್ದರೆ ಸಾವು ಕಟ್ಟಿಟ್ಟ ಬುತ್ತಿ. ಇವನ್ನು ಓಆರ್‌ಎಸ್ ಅಥವ ಇತರ ದ್ರವಗಳ ಮೂಲಕ ಪೂರೈಸಲು ಸಾಧ್ಯವಿಲ್ಲ.

ಹಾಗಾಗಿ ಮಕ್ಕಳಿಗೆ ರಕ್ತ ನಾಳದ ಮೂಲಕ ನೀರು-ಲವಣ-ಖನಿಜಗಳನ್ನು ಪೂರೈಸಬೇಕಾಗುತ್ತದೆ. ಇದನ್ನು ಸಿರೆಮೂಲಕ ದ್ರವ ಪೂರೈಕೆ ಅಥವ
ಇಂಟ್ರಾವೀನಸ್ ಇನ್ ಫ್ಯೂಶನ್ ಎನ್ನುವರು. ಸಂಕ್ಷಿಪ್ತವಾಗಿ ಐವಿ ಇನ್ ಫ್ಯೂಶನ್ ಅಥವ ಐವಿ ಫ್ಲುಯಿಡ್ಸ್ ಎಂದೂ ಕರೆಯುವರು. ಈ ಐವಿ ಫ್ಲುಯಿಡ್ಸ್ ಅಥವ ಸಿರೆದ್ರವದ ತಂತ್ರಜ್ಞಾನವು ಬೆಳೆದುಬಂದ ದಾರಿಯು ರೋಚಕವಾಗಿದೆ.

ಸಿರೆದ್ರವದ ಉಗಮವನ್ನು ಅರಿಯಲು ನಾವು ಮಧ್ಯಯುಗದ ಯೂರೋಪಿಗೆ ಹೋಗಬೇಕು. ಯುದ್ಧಗಳಲ್ಲಿ, ಅಪ ಘಾತಗಳಲ್ಲಿ ಹಾಗೂ ಪ್ರಸವದಲ್ಲಿ ವಿಪರೀತ ರಕ್ತಸ್ರಾವದಿಂದ ಜನರು ಸಾಯುವುದು ಸಾಮಾನ್ಯವಾಗಿತ್ತು. ಹಾಗಾಗಿ ಇಂತಹ ಜನರ ಜೀವವನ್ನು ಉಳಿಸಲು ರಕ್ತಪೂರಣವನ್ನು ಮಾಡಿದರೆ ಒಳ್ಳೆಯದು ಎಂದು ವೈದ್ಯರು ತರ್ಕಿಸಿದರು. ಅದಕ್ಕಾಗಿ ಅವರು ಪ್ರಾಣಿಗಳ ರಕ್ತವನ್ನು ಮನುಷ್ಯರಿಗೆ ಪೂರಣವನ್ನು ಮಾಡುವ ಪ್ರಯೋಗವನ್ನು ನಡೆಸಿದರು. ಆದರೆ ಇಂತಹ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಕೊನೆಗೆ ಬ್ರಿಟನ್ ಮತ್ತು ಫ್ರಾನ್ಸ್ ಸರಕಾರಗಳು ಹಾಗೂ ಚರ್ಚ್ ಸಾಮೂಹಿಕ ವಾಗಿ ಸೇರಿ
ಪ್ರಾಣಿ-ಮನುಷ್ಯರ ರಕ್ತಪೂರಣವನ್ನು ನಿರ್ಬಂಧಿಸಿದರು.

ಕೊನೆಗೆ ಜೇಮ್ಸ್ ಬ್ಲಂಡೆಲ್ (೧೭೯೦-೧೮೭೮) ಮಾನವ-ಮಾನವ ರಕ್ತಪೂರಣವನ್ನು ಯಶಸ್ವಿಯಾಗಿ ಕೈಗೊಂಡ (೧೮೨೯). ಕಾಲರ, ಅನಾದಿ ಕಾಲದ ಕಾಯಿಲೆ. ಇದಕ್ಕೆ ಕಾರಣ ವಿಬ್ರಿಯೋ ಕಾಲರೆ ಎನ್ನುವ ಬ್ಯಾಕ್ಟೀರಿಯ. ಕಲುಷಿತ ಆಹಾರ-ಪಾನೀಯಗಳ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಕಾಲರದ ಪ್ರಮುಖ ಲಕ್ಷಣ ವಾಂತಿ ಮತ್ತು ಭೇದಿ. ಮಕ್ಕಳು ಹಾಗೂ ವಯಸ್ಕರರು ತೀವ್ರ ನೀರ್ಕಳೆತಕ್ಕೆ ತುತ್ತಾಗಿ ಸಾಯುವುದು ಸರ್ವೇ ಸಾಮನ್ಯವಾಗಿತ್ತು. ೧೮೪೬- ೧೮೬೦ರ ನಡುವೆ ಯೂರೋಪಿನಲ್ಲಿ ಕಾಣಿಸಿಕೊಂಡ ಕಾಲರ ಹತ್ತು ಲಕ್ಷ ಜನರ ಸಾವಿಗೆ ಕಾರಣವಾಯಿತು. ಈ ಘಟ್ಟದಲ್ಲಿ ಕೆಲವರು ಯೋಚಿಸಿ ದರು. ಪ್ರಸವೋತ್ತರ ರಕ್ತಸ್ರಾವದಿಂದ ಸಂಭವಿಸುವ ತಾಯಂದಿರ ಮರಣವನ್ನು ತಪ್ಪಿಸಲು ರಕ್ತ ಪೂರಣವು ಹೇಗೆ ಉಪಯುಕ್ತವಾದ ಬಲ್ಲುದೋ, ಹಾಗೆಯೇ ಕಾಲರದಿಂದ ನೀರ್ಕಳೆತಕ್ಕೆ ತುತ್ತಾದವರಿಗೂ ನೀರು, ಲವಣಾದಿಗಳನ್ನು ಪೂರೈಸಿದರೆ, ಅವರೂ ಬದುಕುವ ಸಾಧ್ಯತೆಯು ಹೆಚ್ಚುತ್ತದೆ ಎನ್ನುವುದು ಅವರ ಚಿಂತನ-ಮಂಥನಗಳ ಸಾರಾಂಶವಾಗಿತ್ತು.

೧೬೫೬ರಲ್ಲಿ ಬ್ರಿಟನ್ನಿನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಕ್ರಿಸ್ಟೋಫರ್ ರೆನ್, ಮೊದಲಬಾರಿಗೆ ಸಿರೆದ್ರವವನ್ನು ತುಂಬಲು ಸೂಕ್ತವಾದ ಉಪಕರಣವನ್ನು ಸಿದ್ಧಪಡಿಸಿದ್ದ. ಇವನು ಬಾತುಕೋಳಿಯ ಪುಕ್ಕವನ್ನು ತೆಗೆದುಕೊಂಡ. ಅದರ ಒಂದು ತುದಿಗೆ ಹಂದಿಯ ಮೂತ್ರಕೋಶವನ್ನು ಅಳವಡಿಸಿದ. ಮೂತ್ರಕೋಶದೊಳಗೆ ವೈನ್ ತುಂಬಿದ. ಬಾತುಕೋಳಿಯ ಚೂಪಾದ ತುದಿಯನ್ನು ಒಂದು ನಾಯಿಯ ಸಿರೆಯೊಳಗೆ ತೂರಿಸಿದ. ಮೂತ್ರಕೋಶವನ್ನು ನಿಧಾನವಾಗಿ ಒತ್ತಿದ. ಮೂತ್ರಕೋಶದಲ್ಲಿದ್ದ ವೈನ್ ಸಾವಕಾಶವಾಗಿ ನಾಯಿಯ ಸಿರೆಯೊಳಗೆ ಹೋಗಲಾರಂಭಿಸಿತು. ಮೂತ್ರಕೋಶದಲ್ಲಿದ್ದ ಅಷ್ಟೂ ವೈನನ್ನು ನಾಯಿಯ ಸಿರೆಯ ಒಳಗೆ ತುಂಬಿದ. ಸ್ವಲ್ಪ ಹೊತ್ತಿನಲ್ಲಿ ನಾಯಿಯು ಆಲ್ಕೋಹಾಲ್ ಮತ್ತಿಗೆ ಒಳಗಾಗಿ ಮಲಗಿತು. ಮರುದಿನ ಎದ್ದು ಆರಾಮವಾಗಿ ಓಡಾಡಲಾರಂಭಿಸಿತು. ಕ್ರಿಸ್ಟೋಫರ್ ರೂಪಿಸಿದ ಈ ಉಪಕರಣದ ದೊಡ್ಡ ಸಮಸ್ಯೆಯೆಂದರೆ, ಅದರ ತಾಳಿಕೆ ಮತ್ತು ಬಾಳಿಕೆ. ಹಂದಿಯ
ಮೂತ್ರಾಶಯವು ಬಹಳ ಬೇಗ ಹಾಳಾಗುತ್ತಿತ್ತು.

ಅಲ್ಲದೇ, ಒಂದು ಹಂದಿಯನ್ನು ಕೊಲ್ಲಬೇಕಾಗಿತ್ತು. ತಾಂತ್ರಿಕವಾಗಿ ಈ ಉಪಕರಣವು ಉಪಯುಕ್ತ ಎಂದು ಕಂಡುಬಂದರೂ ಸಹ ಪ್ರಾಯೋಗಿಕವಾಗಿ ಸಾಧುವಲ್ಲವೆನಿಸಿತು. ಹಾಗಾಗಿ ಈ ಕ್ಷೇತ್ರ ದಲ್ಲಿ ಸುಧಾರಣೆಯಾಗಲು ೧೯ನೆಯ ಶತಮಾನಕ್ಕಾಗಿ ಕಾಯಬೇಕಾಯಿತು. ಥಾಮಸ್ ಐಟ್ಚಿಸನ್ ಲಟ್ಟ (೧೭೯೬-೧೮೩೩) ಎಡಿನ್‌ಬರೋ ಹತ್ತಿರದ ಜಸೀಲ್ಡ್ ಎಂಬ ಹಳ್ಳಿಯಲ್ಲಿ ಹುಟ್ಟಿದ. ಎಡಿನ್‌ಬರೋ ವಿವಿಯಲ್ಲಿ ವೈದ್ಯಕೀಯ ಶಿಕ್ಷಣವನ್ನು ೧೯೧೯ರಲ್ಲಿ ಪೂರ್ಣಗೊಳಿಸಿದ. ೧೮೩೨ರಲ್ಲಿ ಕಾಲರ ಸೋಂಕು ಬ್ರಿಟನ್ನಿನಲ್ಲಿ ವ್ಯಾಪಿಸಿತು. ತುಂಬಾ ಜನರು ಸತ್ತರು. ಲಟ್ಟ ತನ್ನ ಇಬ್ಬರು ಸಹೋದ್ಯೋಗಿಗಳ ಜೊತೆಯಲ್ಲಿ ಡಾ.ಥಾಮಸ್ ಕ್ರೈಗ್ ಮತ್ತು ಡಾ.ರಾಬರ್ಟ್ ಲೆವಿನ್ಸ್ ಜೇಮ್ಸ್ ಬ್ಲಂಡೆಲ್ ಮಾಡಿದ ರಕ್ತ ಪೂರಣದ ಪ್ರಯೋಗಗಳನ್ನು ಚರ್ಚಿಸಿದ. ಹಾಗೆಯೇ ಐರಿಶ್ ವೈದ್ಯ ಸರ್ ವಿಲಿಯಂ ಬ್ರೂಕ್ ಒಶಾಂಗ್ನೆಸೆ (೧೮೦೯-೧೮೮೯) ಉಪ್ಪು ನೀರು ಕಾಲರ ರೋಗಿಗಳನ್ನು ಹೇಗೆ ಬದುಕಿಸಬಲ್ಲುದು ಎನ್ನುವುದಕ್ಕೆ ಪೂರಕವಾದ ಸಿದ್ಧಾಂತಗಳನ್ನು ಮಂಡಿಸಿದ್ದ. ಆ ಸಿದ್ಧಾಂತವನ್ನು ಪರೀಕ್ಷಿಸಬೇಕೆಂದು ಈ ತ್ರಿವಳಿ ವೈದ್ಯರು ನಿರ್ಧರಿಸಿದ್ದರು. ಮೂವರು ಸೇರಿ ಎಡೆನ್‌ ಬರೋ ಕಾಲರ ಆಸ್ಪತ್ರೆಯಲ್ಲಿ ಒಂದು ದಿಟ್ಟ ಪ್ರಯೋಗವನ್ನು ಕೈಗೊಂಡರು.

೨೩ ಮೇ, ೧೮೩೨ ರಲ್ಲಿ ಓರ್ವ ಮಹಿಳೆ. ತೀವ್ರ ಸ್ವರೂಪದ ನೀರ್ಕಳೆತದಿಂದ ಸಾವಿನ ಅಂಚನ್ನು ತಲುಪಿದ್ದಳು. ಆಕೆಯ ಮುಂದೋಳಿನಲ್ಲಿ ಒಂದು ಸಿರೆಯನ್ನು (ಬೆಸಿಲಿಕ್ ವೇಯಿನ್) ಬಹಳ ಕಷ್ಟಪಟ್ಟು ಹುಡುಕಿದರು. ಅದರೊಳಗೆ ಒಂದು ನಳಿಕೆಯನ್ನು ತೂರಿಸಿದರು. ತಮ್ಮದೆ ಆದ ಒಂದು ಒರಟು
ಉಪಕರಣದ ಮೂಲಕ ಉಪ್ಪು ನೀರನ್ನು ತುಂಬಲಾರಂಭಿಸಿದರು. ನೋಡ ನೋಡುತ್ತಿರುವಂತೆಯೇ ಪವಾಡವು ಸಂಭವಿಸಿತು. ಮೊದಲು ಮುಂಗೈ ನಾಡಿಯು ಕೈಗೆ ಸಿಕ್ಕಿತು. ಕ್ರಮೇಣ ನಾಡಿಯು ಬಲವಾಗಿ ಮಿಡಿಯಲಾರಂಭಿಸಿತು. ಉಸಿರಾಟವು ಸ್ಥಿರವಾಯಿತು. ಗುಳಿಬಿದ್ದ ಕಣ್ಣುಗಳಲ್ಲಿ ಹೊಳಪು ಕಾಣಿಸಿಕೊಂಡಿತು. ಜೋಲುಬಿದ್ದ ಕೆಳದವಡೆಯು ಸ್ವಸ್ಥಾನಕ್ಕೆ ಮರಳಿತ್ತು.

ತಣ್ಣಗಾಗಿದ್ದ ಚರ್ಮವು ಬೆಚ್ಚಗಾಗಲಾರಂಭಿಸಿತು. ಸುಮಾರು ೬ ಪಿಂಟ್ (೪೭೩ ಎಂ.ಎಲ್) ಉಪ್ಪುದ್ರವವನ್ನು ಸಿರೆಯ ಮೂಲಕ ದೇಹದೊಳಗೆ ಕಳುಹಿಸಿದ್ದ. ಆಕೆಯು ಪೂರ್ಣ ಎಚ್ಚರಗೊಂಡಳು. ಅಧಿಕಾರಯುತ ಧ್ವನಿಯಿಂದ ನಾನು ಹುಷಾರಾಗಿದ್ದೇನೆ ಎಂದಳು. ಹಾಸ್ಯವನ್ನು ಮಾಡಿದಳು. ಲಟ್ಟ
ಗೆಳೆಯರು ಎಡಿನ್‌ಬರೋ ಆಸ್ಪತ್ರೆಯಲ್ಲಿ ಐವರ ಮೇಲೆ ಸಿರೆ ದ್ರವವನ್ನು ಚುಚ್ಚುವ ಪ್ರಯೋಗವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದರು. ೨೩ ಜೂನ್, ೧೮೩೨ರ ಲ್ಯಾನ್ಸೆಟ್ ಪತ್ರಿಕೆಯಲ್ಲಿ ತಮ್ಮ ಪ್ರಯೋಗದ ಎಲ್ಲ ವಿವರಗಳನ್ನು ಪ್ರಕಟಿಸಿದರು. ಲ್ಯಾನ್ಸೆಟ್ ಪತ್ರಿಕೆಯು ಇದೊಂದು ಪವಾಡ ಸದೃಶವಾದ
ಚಿಕಿತ್ಸೆ ಎಂದು ವರ್ಣಿಸಿತು.

ಲಟ್ಟೆ ತನ್ನ ಪ್ರಯೋಗದಲ್ಲಿ ಯಶಸ್ವಿಯಾಗುತ್ತಿದ್ದಂತೆಯೇ ಕಾಲರ ಪಿಡುಗು ಕಡಿಮೆಯಾಯಿತು. ಇದರೊಡನೆ ಲಟ್ಟ ರೂಪಿಸಿದ ಪ್ರಯೋಗವನ್ನು ವೈದ್ಯಜಗತ್ತು ಮರೆಯಿತು. ಸಿರೆದ್ರವಗಳ ಮುಂದಿನ ಘಟ್ಟ ಆರಂಭವಾಗುವುದಕ್ಕೆ ೧೯೦೨ರವರೆಗೆ ಕಾಯಬೇಕಾಯಿತು.

Leave a Reply

Your email address will not be published. Required fields are marked *

error: Content is protected !!