Thursday, 12th December 2024

ಭಗವಂತ ಭರವಸೆ ಯೋಗಕ್ಷೇಮಂ ವಹಾಮ್ಯಹಂ

ಗೀತಾ ಸ್ಮರಣೆ

ಗಣೇಶ್ ಭಟ್ಟ ನೆಲ್ಲಿಕೇರಿ

ಗುಣದಿಂದಲೂ ಮೌಲ್ಯದಿಂದಲೂ ಬೃಹತ್ತಾದ ಗ್ರಂಥ ಮಹಾಭಾರತ. ವೇದವ್ಯಾಸರಿಂದ ರಚಿಸಲ್ಪಟ್ಟು ಒಂದು ಲಕ್ಷ ಶ್ಲೋಕಗಳನ್ನೊಳಗೊಂಡಿರುವ ಇದು ‘ಪಂಚಮವೇದ’ವೆಂದೂ ಪ್ರಸಿದ್ಧಿ ಪಡೆದಿದೆ. ಇತಿಹಾಸ, ರಾಜನೀತಿ, ಅರ್ಥಶಾಸ್ತ್ರ, ಆಚಾರಶಾಸ್ತ್ರ ಮತ್ತು ಅಧ್ಯಾತ್ಮದ ಆಯಾಮಗಳನ್ನು ಒಳಗೊಂಡ ಈ ಜ್ಞಾನಭಂಡಾರದಲ್ಲಿ ಸರ್ವಕಾಲಕ್ಕೂ ಅನ್ವಯವಾಗುವ ಅನೇಕ ವಿಚಾರಗಳಿವೆ.

ಪಾಂಡವ-ಕೌರವರ ಕಥೆ ಲೋಕಪ್ರಸಿದ್ಧವಾದುದು. ದಾಯಾದಿಗಳಾದ ಪಾಂಡವರಿಗೆ ನಾನಾ ಕಷ್ಟಗಳನ್ನು ನೀಡುವ ಕೌರವರು ಜೂಜಿನಲ್ಲಿ ಅವರನ್ನು ಮೋಸದಿಂದ ಸೋಲಿಸಿದರು. ಆಗ ಹಾಕಲಾಗಿದ್ದ ಷರತ್ತಿನಂತೆ ಪಾಂಡವರು ೧೨ ವರ್ಷ ವನವಾಸ ಮತ್ತು ೧ ವರ್ಷ ಅಜ್ಞಾತವಾಸ ಮುಗಿಸಿ ಮರಳಿ, ‘ನಮಗೆ ನ್ಯಾಯಯುತವಾಗಿ ಬರಬೇಕಾದ ಅರ್ಧರಾಜ್ಯ, ಅಥವಾ ಕೊನೆಯ ಪಕ್ಷ ಐದು ಗ್ರಾಮಗಳನ್ನಾದರೂ ನೀಡಿ’ ಎಂದು ಕೌರವರಲ್ಲಿ ಬೇಡಿಕೆ ಯಿಟ್ಟರು. ಈ ಕುರಿತಾಗಿ, ಧೃತರಾಷ್ಟ್ರ ಮತ್ತು ದುರ್ಯೋಧನರಲ್ಲಿ ಪಾಂಡವರ ಪರವಾಗಿ ಶ್ರೀಕೃಷ್ಣ ನಡೆಸಿದ ಸಂಧಾನ ವಿಫಲವಾಯಿತು.

‘ಎಲೈ ಕೇಶವ, ಯುದ್ಧವಿಲ್ಲದೆ ಸೂಜಿಯ ಮೊನೆಯಷ್ಟೂ ಭೂಮಿ ನೀಡಲಾರೆ’ ಎಂದುಬಿಟ್ಟ ದುರ್ಯೋಧನ. ಈ ಸಂದರ್ಭದಲ್ಲಿ ಪಾಂಡವರ ಎದುರಿಗೆ ೨ ಆಯ್ಕೆಗಳಿದ್ದವು. ತಮ್ಮ ಹಕ್ಕನ್ನು ಬಿಟ್ಟು, ಸನ್ಯಾಸ ಸ್ವೀಕರಿಸಿ ಭಕ್ಷಾವೃತ್ತಿಯಿಂದ ಜೀವನ ಸಾಗಿಸುವುದು, ಇಲ್ಲವೇ ಕೌರವರೊಂದಿಗೆ ಹೋರಾಡಿ ರಾಜ್ಯವನ್ನು ಮರಳಿ ಪಡೆಯುವುದು. ಇಂಥ ಸಂದರ್ಭದಲ್ಲಿ ಕ್ಷತ್ರಿಯರು ಯುದ್ಧವನ್ನೇ ಮಾಡಬೇಕೆಂದಿದೆ ಧರ್ಮಶಾಶಾಸ್ತ್ರ. ಅದರಂತೆ, ಪಾಂಡವರು-ಕೌರವರು ಯುದ್ಧಕ್ಕೋ ಸ್ಕರ ಕುರುಕ್ಷೇತ್ರದಲ್ಲಿ ಸೇರಿದರು.

ಭಗವಾನ್ ಶ್ರೀಕೃಷ್ಣ ಅರ್ಜುನನ ಸಾರಥಿಯಾಗಿ ಅಸ ಹಿಡಿಯುವುದಿಲ್ಲ ಎಂಬ ಪ್ರತಿಜ್ಞೆ ಮಾಡಿದ್ದ. ರಣೋತ್ಸಾಹಿ ಅರ್ಜುನ, ‘ಎರಡೂ ಸೇನೆಗಳ ಮಧ್ಯೆ ರಥ ನಿಲ್ಲಿಸು, ನನ್ನೆದುರು ಯುದ್ಧಮಾಡಲು ಬಂದವರನ್ನು ನೋಡಬಯಸುವೆ’ ಎಂದು ಕೃಷ್ಣನಿಗೆ ಹೇಳಿದ. ಹಾಗೆ ನೋಡಿದಾಗ ಅವನಿಗೆ ಕಂಡಿದ್ದು ಪಿತಾಮಹ ಭೀಷ್ಮ, ಗುರು ದ್ರೋಣಾಚಾರ್ಯ, ಸೋದರ ಸಂಬಂಽಗಳು ಮತ್ತು ಒಡನಾಡಿಗಳು. ಸೆಣಸಲೆಂದೇ ರಣಾಂಗಣಕ್ಕೆ ಬಂದವನು ಅರ್ಜುನ; ಆದರೆ, ತನ್ನವರನ್ನೇ ಕೊಂದು ತಾನು ಸುಖವಾಗಿರುವುದು ಹೇಗೆ? ಈ ಯುದ್ಧದಿಂದ ಕುಲಕ್ಷಯವಾಗಿ ತಾನು ಪತಿತನಾಗುವುದಿಲ್ಲವೇ? ಎಂದು ಆತನ ಮನಸ್ಸು ವ್ಯಾಕುಲಗೊಂಡಿತು, ಮೋಹ ಆವರಿಸಿತು.

‘ಬಾಂಧವರೊಡನೆ ಸೆಣಸುವುದನ್ನು ಕಲ್ಪಿಸಿಕೊಂಡೇ ನನ್ನ ಶರೀರ ನಡುಗುತ್ತಿದೆ, ಗಾಂಡೀವ ಕೈಯಿಂದ ಜಾರುತ್ತಿದೆ’ ಎಂದು ಕೃಷ್ಣನಿಗೆ ಹೇಳಿದ ಅರ್ಜುನ ಕ್ಷತ್ರಿಯ ಧರ್ಮದಿಂದ ವಿಚಲಿತನಾದ. ಮುಂದೇನು ಮಾಡಬೇಕೆಂದು ಗೊತ್ತಾಗದೆ ಅವನಲ್ಲಿ ಅಂಧಕಾರ ಆವರಿಸಿತು. ಆಗ ಪ್ರಕಾಶಪುಂಜನಾದ ಶ್ರೀ ಕೃಷ್ಣನು ಅರ್ಜುನನ ಮುಂದೆ ಯೋಗಸ್ಥನಾಗಿ, ಜ್ಞಾನ ಕಿರಣಗಳ ಮೂಲಕ ಮೋಹ-ಅಂಧಕಾರಗಳನ್ನು ದೂರಗೊಳಿಸುವ ‘ಗೀತೆ’ಯನ್ನು ಉಪದೇಶಿಸಿದ. ‘ಈ ಸಮಯದಲ್ಲಿ ನಿನ್ನೊಳಗೆ ಈ ಮೋಹ ಎಲ್ಲಿಂದ ಬಂತು? ನಿನಗಿದು ಯೋಗ್ಯವಾದುದಲ್ಲ, ಯಶಸ್ಸನ್ನು ನೀಡುವಂಥದ್ದಲ್ಲ.

ಎಲೈ ಪಾರ್ಥ, ಕ್ಷುದ್ರವಾದ ಹೃದಯದೌರ್ಬಲ್ಯವನ್ನು ಬಿಟ್ಟು ಜಾಗೃತನಾಗು’ ಎಂದು ಎಚ್ಚರಿಸಿದ ಕೃಷ್ಣನು ಅರ್ಜುನನ ಅಜ್ಞಾನ-ಅಂಧಕಾರವನ್ನು ತೊಡೆದ. ಅವನ ಮನಸ್ಸನ್ನು ಬೆಳಗಿ, ಉತ್ಸಾಹಭರಿತನಾಗಿ ಯುದ್ಧ ಕೈಗೊಳ್ಳುವಂತೆ ಅಣಿಗೊಳಿಸಿದ. ಆ ವೇಳೆ, ಜ್ಞಾನ-ವಿಜ್ಞಾನದಿಂದ ತುಂಬಿಕೊಂಡು ಚಿರಂತನ ಸತ್ಯವಾಗಿರುವ ಅಮರವಾಣಿಯು ಶ್ರೀಕೃಷ್ಣನ ಮೂಲಕ ಹೊರಹೊಮ್ಮಿತು. ಇದೇ ಭಗವದ್ಗೀತೆ. ಮಾರ್ಗಶೀರ್ಷ ಶುದ್ಧ ಏಕಾದಶಿಯಂದು ಶ್ರೀಕೃಷ್ಣನು ಅರ್ಜುನನಿಗೆ ಇದನ್ನು ಬೋಧಿಸಿದ. ಈ ಮಹಾನ್ ಗ್ರಂಥ ಭೂಮಿಯಲ್ಲಿ ಹೀಗೆ ಅವತರಿಸಿದ ದಿನವನ್ನು ‘ಗೀತಾ ಜಯಂತಿ’ಯಾಗಿ ಆಚರಿಸ ಲಾಗುತ್ತಿದೆ.

ಭಾರತೀಯ ಕಾವ್ಯ, ಕಥೆ, ಪುರಾಣ, ಉಪನಿಷತ್ತು ಮುಂತಾದವು ಸಂವಾದ ರೂಪದಲ್ಲಿವೆ. ಯಾವುದೇ ಪ್ರಶ್ನೆಯನ್ನು ಚರ್ಚಿಸಿ ಉತ್ತರ ಹೇಳಲು, ಯಾವುದೇ ಸಿದ್ಧಾಂತವನ್ನು ಪ್ರತಿಪಾದಿಸಲು ನಮ್ಮ ಪ್ರಾಚೀನ ಕವಿಗಳು ಸಾಮಾನ್ಯವಾಗಿ ಈ ಸಂವಾದ ಪದ್ಧತಿಯನ್ನು ಆಶ್ರಯಿಸಿದ್ದಾರೆ. ಗೀತೆಯ ರಚನೆಯೂ ಶ್ರೀಕೃಷ್ಣ ಮತ್ತು ಅರ್ಜುನರ ಸಂವಾದದ ರೂಪದಲ್ಲಿದೆ. ಅನಂತ ಮೌಲ್ಯಗಳನ್ನು, ತತ್ತ್ವಗಳನ್ನು ಸಾರುವ ಗ್ರಂಥವಾಗಿದೆ ಭಗವದ್ಗೀತೆ. ಇದರಲ್ಲಿ ಭಗವಂತನು ಕರ್ಮದ ಮಹತ್ವವನ್ನು ತಿಳಿಸುತ್ತಾ, ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ’ ಎಂದಿದ್ದಾನೆ. ಅಂದರೆ, ‘ನಾವು ಯಾವುದೇ ಕೆಲಸ ಮಾಡುವಾಗ ಅದರ -ಲದ ಕುರಿತು ಯೋಚಿಸಬಾರದು, ಕೇವಲ ಕೆಲಸವನ್ನಷ್ಟೇ ಮಾಡಬೇಕು. ಕಾರ್ಯ ನನ್ನಿಂದಲೇ ಆಯಿತು ಎಂದು ಅಂದುಕೊಳ್ಳ ಬಾರದು’ ಎಂದರ್ಥ.

ಉದಾಹರಣೆಗೆ, ರೈತನೊಬ್ಬ ತನ್ನ ಹೊಲದಲ್ಲಿ ಕೃಷಿಯನ್ನು ಶ್ರದ್ಧೆಯಿಂದ ಮಾಡಬೇಕು. ಅದರ ಫಲದ ಕುರಿತು ಆತ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳ ಬಾರದು. ಯಾಕೆಂದರೆ ನಿರೀಕ್ಷೆಯಂತೆ ಫಲ ದೊರಕದಿದ್ದಾಗ ಆತನಿಗೆ ದುಃಖವಾಗುವುದು. ಒಂದು ವೇಳೆ, ನಿರೀಕ್ಷೆಗಿಂತ ಹೆಚ್ಚು ಫಲ ದೊರಕಿದಾಗ, ‘ಅದು ನನ್ನಿಂದಲೇ ಆಯಿತು’ ಎಂಬ ಅಹಂಕಾರ ಬರುವ ಸಾಧ್ಯತೆಯುಂಟು. ಆದ್ದರಿಂದ, ‘ಕೇವಲ ಕೆಲಸ ಮಾಡು, ಅದರ ಫಲದ ಬಗ್ಗೆ ಯೋಚಿಸಬೇಡ.

ಕೆಲಸ-ಕಾರ್ಯಗಳಲ್ಲಿ ಮೇಲು-ಕೀಳೆಂಬುದು ಇಲ್ಲ. ಮಾಡುವ ಯಾವುದೇ ಕೆಲಸವನ್ನು ಶ್ರದ್ಧೆಯಿಂದ, ಪ್ರಾಮಾಣಿಕವಾಗಿ ಮಾಡಿದಲ್ಲಿ, ಫಲ ಖಂಡಿತ ವಾಗಿ ದೊರಕುತ್ತದೆ. ಮೋಕ್ಷಕ್ಕೆ ಬೇರೇನೂ ಬೇಡ, ಕಾರ್ಯತತ್ಪರತೆಯೊಂದೇ ಸಾಕು’ ಎಂದು ಹೇಳುವ ಮೂಲಕ ಆಲಸ್ಯ-ಜಡತೆಯ ವಿರುದ್ಧ ಯುದ್ಧ ಸಾರಿರುವ ಕೃಷ್ಣ ತನ್ಮೂಲಕ ಉದ್ಯಮಶೀಲತೆಯನ್ನು ಎತ್ತಿಹಿಡಿದಿದ್ದಾನೆ. ಕೃಷ್ಣ ಯಾವಾಗಲೂ ಕಾರ್ಯಶೀಲರ ಪಕ್ಷಪಾತಿ.

ಈ ಜಗತ್ತನ್ನು ಯಾವಾಗಲೂ ಆಳಿದ್ದು ಜ್ಞಾನದ ಬಲ. ಅದನ್ನೇ ಭಗವಂತ ಗೀತೆಯಲ್ಲಿ ‘ನ ಹಿ ಜ್ಞಾನೇನ ಸದೃಶಂ’ ಎಂದಿದ್ದಾನೆ. ಅಂದರೆ ಈ ಜಗತ್ತಿನಲ್ಲಿ ಜ್ಞಾನಕ್ಕಿಂತ ಶ್ರೇಷ್ಠವಾದುದು ಯಾವುದೂ ಇಲ್ಲ ಎಂದರ್ಥ. ಹಾಗಾದರೆ ಜ್ಞಾನಿಯಾಗುವುದು ಹೇಗೆ? ಎಂಬ ಪ್ರಶ್ನೆಗೂ ಕೃಷ್ಣ ಗೀತೆಯಲ್ಲಿ ಉತ್ತರಿಸಿದ್ದಾನೆ. ಗುರುವಿನ ಬೋಧನೆಯನ್ನು ಚೆನ್ನಾಗಿ ಆಲಿಸುವುದು, ಶ್ರದ್ಧೆಯಿಂದ ಓದುವುದು, ಅದರಲ್ಲಿ ಸಂದೇಹ ಉಂಟಾದಲ್ಲಿ ಗುರುವಿನಲ್ಲಿ ಪುನಃ ಪ್ರಶ್ನಿಸಿ ಅದನ್ನು ಪರಿಹರಿಸಿಕೊಳ್ಳುವುದು, ಮನನ ಮಾಡುವುದು, ಮನನ ಮಾಡಿದ್ದನ್ನು ಪುನಃ ಸ್ಮರಿಸಿಕೊಳ್ಳುವುದು, ಗುರು-ಹಿರಿಯರಲ್ಲಿ ವಿನಯ-ವಿಧೇಯತೆಯಿಂದ ನಡೆದುಕೊಳ್ಳುವುದು ಹೀಗೆ ಮಾಡಿದರೆ ಮನುಷ್ಯ ಜ್ಞಾನಿಯಾಗುವನು. ಅಂಥ ಜ್ಞಾನಿಗಿಂತ ಶ್ರೇಷ್ಠರಾದವರು ಯಾರೂ ಇಲ್ಲ. ಜ್ಞಾನದಿಂದಲೇ ಮನುಷ್ಯ ಸುಖ-ಭೋಗಗಳನ್ನು ತನ್ನದಾಗಿಸಿಕೊಳ್ಳುವನು ಎಂಬುದು ಶ್ರೀಕೃಷ್ಣನ ಸ್ಪಷ್ಟನುಡಿ.

ತನ್ನದಾದ ವಸ್ತುವನ್ನು, ತನ್ನವರನ್ನು ಕಳೆದುಕೊಂಡಾಗ ಮನುಷ್ಯನಿಗೆ ದುಃಖವಾಗುವುದು ಸಹಜ. ಆದರೆ ಕಳೆದುಹೋದುದರ ಬಗ್ಗೆಯಾಗಲೀ, ತನ್ನವರ ಮರಣದ ಕುರಿತಾಗಲೀ ಯಾರೂ ದುಃಖಗೊಳ್ಳಬಾರದು ಎನ್ನುತ್ತಾನೆ ಗೀತಾಚಾರ್ಯ ಶ್ರೀಕೃಷ್ಣ. ‘ಈ ಲೋಕದಲ್ಲಿ ಜನಿಸಿದ ಪ್ರತಿಯೊಬ್ಬರೂ ಒಂದಲ್ಲಾ ಒಂದು ದಿನ ಮರಣ ಹೊಂದುವರು. ಈ ವಿಷಯದಲ್ಲಿ ಯಾರೂ ದುಃಖಿಸತಕ್ಕದ್ದಲ್ಲ. ಹೇಗೆ ಮನುಷ್ಯನು ಹಳೆಯದಾದ ಬಟ್ಟೆಯನ್ನು ಬಿಸಾಡಿ ಹೊಸ ಬಟ್ಟೆಯನ್ನು ಧರಿಸಿಕೊಳ್ಳುತ್ತಾನೋ, ಹಾಗೆಯೇ ದೇಹವನ್ನು ಹೊಂದಿದ ಆತ್ಮವು ಹಳೆಯದಾದ ಶರೀರವನ್ನು ಬಿಟ್ಟು ಹೊಸ ಶರೀರವನ್ನು ಧರಿಸುತ್ತದೆ. ಈ ದೇಹಕ್ಕೆ ಅಳಿವುಂಟು, ಆತ್ಮಕ್ಕೆ ಅಳಿವಿಲ್ಲ. ಆತ್ಮವನ್ನು ಅಗ್ನಿ ಸುಡಲಾರದು, ನೀರು ನೆನೆಸಲಾರದು, ಗಾಳಿ ಒಣಗಿಸಲಾರದು, ಶಸ್ತ್ರವು ಕತ್ತರಿಸಲಾರದು.

ಈ ದೇಹ ವಿನಾಶಿ, ಈ ದೇಹವನ್ನು ಆಶ್ರಯಿಸಿದ ಆತ್ಮ ಅವಿನಾಶಿ. ನಾವೆಲ್ಲ ಭಗವಂತನಿಂದ ಸಿಡಿದ ಕಿಡಿಗಳು, ಮರಣ ಹೊಂದಿದ ಮೇಲೆ ಈ ಕಿಡಿಯು
ಭಗವಂತನನ್ನೇ ಸೇರುವುದು. ಹೀಗಾಗಿ ಮರಣ ಹೊಂದಿದವರ ಕುರಿತು ಯಾರೂ ದುಃಖಿಸಬಾರದು. ಸೃಷ್ಟಿಕಾಲದಲ್ಲಿ ಭಗವಂತ ಅವರನ್ನು ಪುನಃ ಸೃಷ್ಟಿಸುತ್ತಾನೆ’ ಎನ್ನುತ್ತಾನೆ ಶ್ರೀಕೃಷ್ಣ. ಭಗವಂತನನ್ನು ಕಾಣುವ ಬಗೆಯನ್ನು ವಿವರಿಸುತ್ತಾ, ‘ಭಗವಂತ ಸರ್ವವ್ಯಾಪಿ, ಸರ್ವಶಕ್ತನಾಗಿದ್ದಾನೆ. ಯಾರು ಎಲ್ಲರಲ್ಲಿಯೂ ಭಗವಂತನನ್ನು ಕಾಣುತ್ತಾನೋ ಹಾಗೂ ಭಗವಂತನಲ್ಲಿ ಎಲ್ಲರನ್ನೂ ನೋಡುತ್ತಾನೋ, ಅವನಿಗೆ ಭಗವಂತ ಗೋಚರಿಸುವನು. ಮಗ ಪ್ರಹ್ಲಾದನಿಗೆ ಎಲ್ಲೆಲ್ಲೂ ಭಗವಂತನ ಇರುವಿಕೆ ಗೋಚರಿಸಿತು, ಆದರೆ ತಂದೆ ಹಿರಣ್ಯಕಶಿಪುವಿಗೆ ಹಾಗಾಗಲಿಲ್ಲ. ಹೀಗೆ ಮಾಯೆ ಆವರಿಸಲ್ಪಟ್ಟ ವ್ಯಕ್ತಿಗಳಿಗೆ, ಮೂಢರಿಗೆ, ದುರ್ಜನರಿಗೆ ಭಗವಂತ ಗೋಚರಿಸಲಾರ. ಒಬ್ಬ ತನ್ನ ಅಂತರಂಗದಲ್ಲಿ ಭಗವಂತನನ್ನು ಆರಾಧಿಸಿದರೆ, ಆತನ ಅಂತರಂಗದಲ್ಲೇ ಭಗವಂತ ಪ್ರತ್ಯಕ್ಷನಾಗುವನು.

ಬಹಿರಂಗವಾಗಿ ಪ್ರತಿಮೆಗಳಲ್ಲಿ ಆ ಭಗವಂತನನ್ನು ಆರಾಧಿಸುವವರಿಗೆ, ಆ ಮೂರ್ತಿಗಳಲ್ಲಿ ಅದೇ ಸ್ವರೂಪದಿಂದ ಗೋಚರಿಸುವನು’ ಎಂದಿದ್ದಾನೆ.
ನಮ್ಮ ಬದುಕು ನಂಬಿಕೆಯ ಮೇಲೆ, ಭರವಸೆಯ ಮೇಲೆ ನಿಂತಿದೆ. ಈ ಬಾಳಿನಲ್ಲಿ ನಂಬಿಕೆ ಕಳೆದುಕೊಂಡು ನಿರಾಸೆಯೆಂಬ ನದಿಗೆ ಬಿದ್ದವನನ್ನು, ಭರವಸೆಯೆಂಬ ಕಡೆಗೋಲಿನಿಂದ ಮೇಲೆತ್ತುವನು ಗೀತಾಚಾರ್ಯ ಶ್ರೀಕೃಷ್ಣ. ‘ಯೋಗಕ್ಷೇಮಂವಹಾಮ್ಯಹಂ’ ಎಂಬುದು ಆತ ಎಲ್ಲರಿಗೂ ನೀಡಿದ ಭರವಸೆ. ಅದು ಭಗವಂತನ ಭರವಸೆ. ದೊರಕದೇ ಇರುವುದನ್ನು ಪಡೆದುಕೊಳ್ಳುವುದು ‘ಯೋಗ’, ಹಾಗೆ ದೊರಕಿರುವುದನ್ನು ಯಾವಾಗಲೂ ಉಳಿಸಿ ಕೊಳ್ಳುವಂತೆ ಮಾಡುವುದು ‘ಕ್ಷೇಮ’. ಅನನ್ಯ ಭಕ್ತಿಯಿಂದ ಭಗವಂತನನ್ನು ನಂಬಿದರೆ, ಆತ ನಂಬಿದವರ ಕೈಬಿಡನು. ಅವರ ಯೋಗಕ್ಷೇಮದ ಭಾರ ಅವನದ್ದು.

ದ್ರೌಪದಿ, ಬಾಲಕ ಧ್ರುವ, ಪ್ರಹ್ಲಾದ ಮುಂತಾದವರು ಅನನ್ಯ ಭಕ್ತಿಯಿಂದ ಆತನನ್ನು ನೆನೆದಾಗ, ಕೂಡಲೇ ಅವರನ್ನು ರಕ್ಷಿಸಿದವನು ಭಗವಂತ. ಈ ಕಾಲದಲ್ಲೂ ಸಾಧು-ಸಂತರು, ಸಜ್ಜನರ ಮೂಲಕ, ಕಷ್ಟದಲ್ಲಿರುವವರನ್ನು, ಧರ್ಮಮಾರ್ಗಿಗಳನ್ನು ಸಂರಕ್ಷಿಸುವನು. ಈ ರೀತಿಯಾಗಿ, ತನ್ನ ಮನದಲ್ಲಿ ಉದಯಿಸಿದ ಅನೇಕ ಸಂಶಯಗಳಿಗೆ ಶ್ರೀಕೃಷ್ಣನಿಂದ ಪರಿಹಾರವನ್ನು ಪಡೆದುಕೊಳ್ಳುವ ಅರ್ಜುನನು ಕೊನೆಯಲ್ಲಿ, ‘ಮೋಹ ಅಳಿಯಿತು, ಜ್ಞಾನ ಉದಯಿಸಿತು. ನೀ ನುಡಿದಂತೆ ನಡೆಯುವೆ’ ಎನ್ನುತ್ತಾನೆ.

ಪ್ರತಿ ಕ್ಷಣದಲ್ಲಿ ದುಃಖ-ದುಮ್ಮಾನ, ಕಷ್ಟ-ನಷ್ಟ, ಮೋಹ-ಮತ್ಸರಗಳಿಗೆ ಒಳಗಾಗುವ ಮಾನವಕೋಟಿಯನ್ನು ಕುರಿತು, ಅರ್ಜುನನನ್ನು ಒಂದು ನೆಪವಾ ಗಿಟ್ಟು ಕೊಂಡು ಶ್ರೀಕೃಷ್ಣನು ಮಾಡುವ ಉಪದೇಶವಾಗಿದೆ ಭಗವದ್ಗೀತೆ. ಸುಮಾರು ೨,೬೦೦ ವರ್ಷಗಳಿಂದ ಮಾನವನ ಅಂತಃಕರಣವನ್ನು ಪ್ರಕಾಶಮಾನ ವಾಗಿ ಬೆಳಗುತ್ತಾ ಬಂದಿರುವ ಭಗವದ್ಗೀತೆಯು, ಅಧ್ಯಾತ್ಮದ ಹಸಿವನ್ನು ಹೊಂದಿದವರಿಗೆ, ಶಾಂತಿ-ಜ್ಞಾನವನ್ನು ಬಯಸುವವರಿಗೆ ಅನಂತಕಾಲದವರೆಗೆ ಕೈಪಿಡಿಯಾಗಿದೆ.

ಪ್ರಸ್ಥಾನತ್ರಯಗಳಲ್ಲಿ ಒಂದಾದ, ಎಲ್ಲಾ ಮತಾಚಾರ್ಯರೂ ಭಾಷ್ಯ ಬರೆದ, ಜಗತ್ತಿನ ಅನೇಕ ಭಾಷೆಗಳಿಗೆ ದಾಖಲೆ ಸಂಖ್ಯೆಯಲ್ಲಿ ಭಾಷಾಂತರಗೊಂಡ ಕೃತಿ ಭಗವದ್ಗೀತೆ. ಇದರಲ್ಲಿ ಉಕ್ತವಾಗಿರುವ ತತ್ತ್ವಗಳನ್ನು ಚಿಂತನೆಯ ಒರೆಗಲ್ಲಿಗೆ ಹಚ್ಚಿ ಅಳವಡಿಸಿಕೊಂಡಾಗ, ಬದುಕು ಸಾರ್ಥಕ, ಧನ್ಯ, ಸುಖಮಯ.

(ಲೇಖಕರು ಸಂಸ್ಕೃತ ಉಪನ್ಯಾಸಕರು)