Sunday, 15th December 2024

ಮಹಾದೇವರೆ, ಸತ್ಯವನ್ನು ಒಪ್ಪಿದಿರಿ! ಆದರೆ..

ದಾಸ್ ಕ್ಯಾಪಿಟಲ್

dascapital1205@gmail.com

ಕನ್ನಡದ ಸಾಕ್ಷಿಪ್ರಜ್ಞೆ, ಲೇಖಕ ದೇವನೂರು ಮಹಾದೇವರು ಕೊನೆಗೂ ಸತ್ಯವನ್ನು ಬಹಿರಂಗವಾಗಿ ಒಪ್ಪಿ ಮೆಚ್ಚುಗೆಯ ಮಾತು ಗಳನ್ನಾಡಿದ್ದಾರೆ. ಆರೆಸ್ಸೆಸ್ಸಿನ ಆಳವನ್ನು ಮುಳುಗಿ, ಅಗಲವನ್ನು ಕಂಡುಕೊಂಡು ಈ ಮಾತಾಡಿದ್ದಾರೆ ಎಂದು ಪರಿಭಾವಿಸು ತ್ತೇನೆ.

ಮೈಸೂರಿನಲ್ಲಿ ಪ್ರೊ.ಮಧು ದಂಡವತೆ ಶತಮಾನೋತ್ಸವ ಪ್ರಯುಕ್ತ ‘ಮುಕ್ತ ಮತದಾನ-ಸಮರ್ಥ ಸರಕಾರ’- ಜನತಂತ್ರದ ‘ನೈಜ ಹಕ್ಕುದಾರರ ಧ್ವನಿ ಹಿಡಿದಿಡುವ ಡಯಗ್ನಾಸ್ಟಿಕ್ ವರದಿ’ಯನ್ನು ಬಿಡುಗಡೆ ಮಾತನಾಡಿದ ಅವರು, ‘ಸಮಾಜಮುಖಿ ರಾಜಕೀಯ ಪಕ್ಷಗಳ ಸಾಂಸ್ಥಿಕ ರಚನೆ ಗಟ್ಟಿಯಿದ್ದರೂ, ರಾಜಕೀಯ ಪ್ರಜ್ಞೆಯ ಕೊರತೆಯಿಂದಾಗಿ ಯಾವುದೇ ಅಲೆಯೆಬ್ಬಿಸುತ್ತಿಲ್ಲ.

ತನ್ನ ರಾಜಕೀಯ ಪಕ್ಷದ (ಬಿಜೆಪಿಯ) ಗೆಲುವಿನಲ್ಲೇ ತನ್ನ ಅಳಿವು-ಉಳಿವು ಎಂದು ಸಂಘ ಪರಿವಾರವು ಕಾರ್ಯನಿರ್ವಹಿಸುವಂತೆ ಸಮಾಜಮುಖಿ ಪಕ್ಷಗಳ ಸಾಂಸ್ಥಿಕ ಸಂಘಟನೆಗಳು ವರ್ತಿಸುತ್ತಿಲ್ಲ. ರಾಜ್ಯದ ಮುಖ್ಯವಾಹಿನಿ ಸಮಾಜಮುಖಿ ರಾಜಕೀಯ ಪಕ್ಷಗಳಿಗೆ ಆರೆಸ್ಸೆಸ್ ಶೈಲಿಯ ಸಾಂಸ್ಥಿಕ ರಚನೆಯ ತಳಪಾಯ ಮತ್ತು ರಾಜಕೀಯ ಪ್ರಜ್ಞೆ ಅತ್ಯಗತ್ಯ’ ಎಂದು ಹೇಳಿದ್ದಾರೆ. ಬೆಂಗಳೂರಿನ ಸಮಾಜ ವೇದಿಕೆ, ದೆಹಲಿಯ ಜನತಾಂತ್ರಿಕ ಸಮಾಜವಾದ ಸಂಘಟನೆ ಸಿದ್ಧಪಡಿಸಿರುವ ವರದಿಯನ್ನು ಹಿತ್ತಲಗಿಡ ಪ್ರಕಾಶನ ಪ್ರಕಟಿಸಿದ್ದು, ‘ಬಿಜೆಪಿಗೆ ಆರೆಸ್ಸೆಸ್ ಎಂಬ ಗಟ್ಟಿ ಸಾಂಸ್ಥಿಕ ತಳಪಾಯವಿರುವುದರ ಬಗ್ಗೆ ವರದಿಯಲ್ಲಿ ಪರಾಮರ್ಶಿಸ ಲಾಗಿದೆ.

ತಳಮಟ್ಟದವರೆಗೂ ಬೇರೂರಿರುವ ಪ್ರಗತಿಪರ ಸಂಘಟನೆಗಳು, ಸಂಘ-ಸಂಸ್ಥೆಗಳು ಹೊಸ ರಾಜಕೀಯ ಪ್ರಯೋಗಕ್ಕೆ ಇಂಥ ಸಾಂಸ್ಥಿಕ ರಚನೆಯನ್ನು ಒದಗಿಸಬಹುದು. ಆಮ್ ಆದ್ಮಿ ಪಕ್ಷವು ಅಲೆ ಎಬ್ಬಿಸುತ್ತಿದ್ದರೂ ಇತರ ಸಮಾನ ಪಕ್ಷಗಳೊಂದಿಗೆ ಕೈ ಜೋಡಿಸದೆ ಒಂಟಿಯಾಗಿರುವುದೇ ನಿರೀಕ್ಷಿತ ಫಲಿತಾಂಶ ನೀಡದಿರಲು ಕಾರಣ ಎಂಬುದನ್ನು ವರದಿ ಗುರುತಿಸಿದೆ.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಇದುವರೆಗೂ ಆಳ್ವಿಕೆ ಸಂಸಾರ ನಡೆಸಿವೆ. ಅವನ್ನು ಬಿಟ್ಟು ಆಳ್ವಿಕೆ ಸಂಸಾರ ಮಾಡದಿರುವ ನವಪಕ್ಷಗಳ ಕಡೆಗೆ ಶೇ. ೪೬ರಷ್ಟು ಮತದಾರರು ಒಲವು ತೋರಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಮೋದಿ, ಅಮಿತ್ ಶಾ ಹೆಚ್ಚು ಓಡಾಡುತ್ತಿದ್ದಾರೆ. ಹೀಗಾಗಿ ಇಲ್ಲಿ ‘ಮೊದಾನಿ’ ಎಂಬ ಕಸಿಪದ ಚಲಾವಣೆಯಲ್ಲಿದೆ. ಮೋದಿ, ಅದಾನಿ ಸೇರಿದ ಒಂದೇ ಪದ, ಒಂದೇ ಹೆಸರು ಇದು. ಅಧಿಕಾರ ಮತ್ತು ಕುರುಡು ಕಾಂಚಾಣ ಸೇರಿ ಒಂದೇ ಪದವಾಗಿದೆ, ಉಳಿಗಾಲವಿಲ್ಲ’ ಎಂದು ದೇವನೂರು ಹೇಳಿದರು ಎಂಬುದಾಗಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.

ಮುಖ್ಯವಾಗಿ ಗಮನಿಸಬೇಕಾದ ವಿಚಾರವೇನೆಂದರೆ, ಆರೆಸ್ಸೆಸ್ಸಿನಂಥ ಬಲವಾದ ಸಂಘಟನೆ, ಬಿಜೆಪಿಯ ಗೆಲುವಿನ ಹಿಂದೆ ತಳಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಇಂಥ ಸಂಘಟನೆಯಲ್ಲಿ ರಾಜಕೀಯ ಪ್ರಜ್ಞೆಯ ಕೊರತೆಯಿಲ್ಲ. ಗಟ್ಟಿಯಾದ ರಾಜಕೀಯ ಪ್ರಜ್ಞೆಯೇ ಸಂಘ ಪರಿವಾರದಲ್ಲಿ ಇರುವುದರಿಂದ ಚುನಾವಣೆಯಲ್ಲಿ ಗೆಲುವು ಸಾಧ್ಯವಾಗುತ್ತಿದೆಯೆಂಬುದು ಅವರ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು. ೭೫ರ ಹರೆಯದ ದೇವನೂರು ಮಹಾದೇವರು ನೂರು ವರ್ಷ ಪೂರೈಸಿದ, ಸುಮಾರು ೬೦ ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರಿರುವ ಆರೆಸ್ಸೆಸ್ ಎಂಬ ಬೃಹತ್ ಸಂಘಟನೆಯ ಆಳ- ಅಗಲ ಕಂಡುಹಿಡಿಯುವ ದೊಡ್ಡ ದುಸ್ಸಾಹಸ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ.

ಆದ್ದರಿಂದ ಈ ಸಂಘಟನೆಯ ಬೇರು ಬಿಜೆಪಿ ಬಲವಾಗಿ ಸಂಘ ಪರಿವಾರದಲ್ಲೆಲ್ಲ ವ್ಯಾಪಿಸಿದೆ ಎಂದು ತಳಮಟ್ಟದ ಸಂಶೋಧನೆ ಯಿಂದ ಕಂಡುಕೊಂಡು ಅದರ ಪ್ರಭಾವವನ್ನು ಹೇಳಿದ್ದಷ್ಟೇ ಅಲ್ಲದೆ ಹೊಗಳಿದ್ದಾರೆ. ದುಸ್ಸಾಹಸ ಅಂತ ಯಾಕೆ ಹೇಳಿದೆ? ಬೇರಾವುದೇ ಸಂಘಟನೆಯ ಬಗ್ಗೆ ಇಷ್ಟು ತೀವ್ರಾಸಕ್ತಿಯಲ್ಲಿ ಅವರು ಇಲ್ಲಿಯವರೆಗೂ ಸಂಶೋಧನೆ ಮಾಡದಿರುವು ದರಿಂದ!

ಕೇವಲ ಆರೆಸ್ಸೆಸ್ಸಿನ ಬಾಗಿಲಿನ ಹೊರನಿಂತೇ ಇಷ್ಟು ಸಂಶೋಧಿಸಿದ ಅವರು ಒಳಹೋಗಿದ್ದರೆ ಸಂಶೋಧನೆಯ ದಿಕ್ಕಿನ ವ್ಯಾಪ್ತಿ ಇನ್ನೂ ಹಲವು ಮಗ್ಗುಲುಗಳಲ್ಲಿ ಬೆಳೆಯುತ್ತಿತ್ತೇನೋ! ಆದರೆ ಅವರು ಹೊರಗೆ ನಿಂತುಕೊಂಡೇ ದಣಿದರು, ತಮಗೆ ಬೇಕಾದ ಸಂಗತಿಗಳನ್ನು ಆಯ್ದುಕೊಂಡೇ ಬರೆದರು. ಇರಲಿ ಬಿಡಿ, ಬರೆಯುವುದಕ್ಕೂ ಮಾತನಾಡುವುದಕ್ಕೂ ಅವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಈ ದೇಶದ ಸಂವಿಧಾನ ಯಾವುದಕ್ಕೆ ಕಡಿಮೆ ಮಾಡಿದೆ, ಹೇಳಿ? ಹಾಗಂತ ಮೋದಿ (ಅಧಿಕಾರ) ಮತ್ತು ಅದಾನಿ (ಕುರುಡು ಕಾಂಚಾಣ) ಎಂಬ ಪದಗಳನ್ನು ಸೇರಿಸಿ ‘ಮೊದಾನಿ’ ಎಂದಿದ್ದು ಮಾತ್ರ ಬಾಲಿಶವಾಗಿ ಕಂಡಿತು- ಪ್ರಾಥಮಿಕ ಶಾಲೆಯ
ಮಕ್ಕಳು ಒಬ್ಬರಿಗೊಬ್ಬರು ಅಡ್ಡಹೆಸರನ್ನು ಇಟ್ಟುಕೊಂಡು ಅಣಕಿಸಿದಂತೆ!

‘ಪದ್ಮಶ್ರೀ’ ಪುರಸ್ಕೃತರಾದ ಅವರು ಇಂಥ ಪದಗಳನ್ನೂ ವ್ಯುತ್ಪತ್ತಿ ಮಾಡುತ್ತಾರೆ ಎಂದಾದರೆ ಅದು ಬೌದ್ಧಿಕ ದಿವಾಳಿತನ ಅನಿಸುವುದಿಲ್ಲವೇ? ಅಷ್ಟಕ್ಕೂ ಮೋದಿ, ಅದಾನಿ, ಅಂಬಾನಿಗಳಿಂದ ವೈಯಕ್ತಿಕವಾಗಿಯಾಗಲೀ ದೇಶಕ್ಕಾಗಲೀ ಯಾವ ಜಾತಿ-ಮತ-ಪಂಥಗಳಿಗೆ ಯಾವ ಬಗೆಯ ಸಮಸ್ಯೆಯಾಗುತ್ತಿದೆ ಎಂಬುದನ್ನು ಕಂಡುಹಿಡಿಯಲಾಗಲಿಲ್ಲ. ಮೋದಿಯ ಪಕ್ಷ ಮತ್ತು ನಾಯಕತ್ವದೆಡೆಗಿನ ಸೈದ್ಧಾಂತಿಕ ವಿರೋಧಗಳಿಗೆ ಯಾರಿಗೂ ಯಾವ ನೈತಿಕ ಅರ್ಹತೆಯೂ ಅಗತ್ಯವಿಲ್ಲ ಎಂದೇ ಪರಿಭಾವಿಸಿ ದವನು ನಾನು.

ಏಕೆಂದರೆ, ಈ ದೇಶದ ಪ್ರಧಾನಿಯನ್ನು ಸುಳ್ಳುಗಾರ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹುಯಿಲೆಬ್ಬಿಸಿದ ಮೂರ್ಖರನ್ನು ನೋಡಿದ ಮೇಲೆ, ವಿರೋಽಸುವುದಕ್ಕೆ ಯಾವುದೇ ಪ್ರಜೆಗೆ ಯಾವ ನೈತಿಕ ಅರ್ಹತೆಯೂ ಬೇಕಿಲ್ಲ. ಇದೇ ಪ್ರಜಾಪ್ರಭುತ್ವದ ನಿಜವಾದ ಶಕ್ತಿ! ದಲಿತ ಪ್ರಜ್ಞೆಯಿಂದ ದಲಿತ ವರ್ಗಕ್ಕೇ ಹೀರೋ ಆಗಿ ಬೆಳೆದು ನಿಂತ ಅವರು ಅವರಂಥವರಿಗೂ ಹಾಗೆಯೇ ಯಾವ ನೈತಿಕ ಅರ್ಹತೆಯೂ ಇಲ್ಲದೆ ‘ಮೊದಾನಿ’ ಎಂಬಂಥ ಕ್ಲೀಷೆಯ ಮಾತುಗಳನ್ನಾಡಿದ್ದಾರೆ ಎಂದು ಭಾವಿಸುತ್ತೇನೆ. ಸರ್ವಥಾ ತಪ್ಪು ಕಾಣುವುದಿಲ್ಲ!

ರಾಜಕೀಯವು ದೇವನೂರು ಮಹಾದೇವರ ಕ್ಷೇತ್ರವಲ್ಲ. ಹಾಗಂತ ಅವರ ಒಳ ಮತ್ತು ಹೊರ ಸಾಮಾಜಿಕ ಬದುಕು ಅದನ್ನು ಹೊರತುಪಡಿಸಿ ಅಭಿವ್ಯಕ್ತಿಯಾಗೇ ಇಲ್ಲವೇನೋ! ಸೈದ್ಧಾಂತಿಕವಾಗಿ ಅವರು ರಾಜಕೀಯವಾದ ನಡೆಯಲ್ಲೇ ಕ್ರಮಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ಬಿಡಿ, ಅವರಿಗೂ ಗೊತ್ತಿರುವ ಸಂಗತಿಯೇ. ಒಬ್ಬ ಸಾಹಿತಿಯಾಗಿ ಅವರು ಸಾಹಿತ್ಯ ಕ್ಷೇತ್ರದಿಂದ ದೂರಸಾಗಿ ಕೆಲವು ವರ್ಷಗಳೇ ಸಂದಿತೇನೋ! ‘ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು’ ಎಂದು ಹೇಳಿದ ಅವರೊಳಗೇ ‘ಕುಸುಮಬಾಲೆ’ಯಂಥ ಯಾವ ಸಾಹಿತ್ಯವೂ ಮತ್ತೆ ಸೃಜನೆಯಾಗಲಿಲ್ಲವೇನೋ!

ಒಮ್ಮೆ ಮಾತಿನ ಚಟಕ್ಕೆ ಬಿದ್ದರೆ ಮುಗಿಯಿತು, ಬರೆಯುವ ಶಕ್ತಿ-ಸಾಮರ್ಥ್ಯ ಅಲ್ಲಿಗೆ ಕಡಿಮೆಯಾಗುತ್ತದೆ ಎಂಬುದು ಅವರಿಗೆ ಗೊತ್ತಿರದ ವಿಚಾರವೇನೂ ಅಲ್ಲವಲ್ಲ! ದೇವನೂರರೇ, ಬಿಜೆಪಿ, ಆರೆಸ್ಸೆಸ್, ಬ್ರಾಹ್ಮಣರು, ಸಾವರ್ಕರ್, ಬೋಸ್, ಕ್ರಾಂತಿಕಾರಿಗಳು, ದೇಶದ ಸೈನಿಕರು, ಸಾಧು-ಸಂತರು, ಮಠಾಧಿಪತಿ ಗಳನ್ನು, ಗೀತೆ-ಗೋವು- ಗಾಯತ್ರಿ, ವೇದೋಪನಿಷತ್ತುಗಳು, ಪುರಾಣಗಳನ್ನು, ಹಿಂದೂ, ಹಿಂದುತ್ವ, ಮನುಸ್ಕೃತಿಯನ್ನು ನಿಂದಿಸಿದವರನ್ನು ಹೀಗಳೆ ದವರನ್ನು, ಅಂಥ ಪ್ರತಿಗಾಮಿ ಮನಸ್ಥಿತಿಯವರನ್ನು ನೋಡುತ್ತಲೇ ಬಂದಿದ್ದೇವೆ. ಅಂಥವರು ಅಪ್ಪಿತಪ್ಪಿಯೂ ಮಿತಿಮೀರಿ ಹೆಚ್ಚುತ್ತಿರುವ ಮುಸ್ಲಿಂ ಜನಸಂಖ್ಯೆಯ ಬಗ್ಗೆ  ಒಮ್ಮೆಯೂ ಆತಂಕ ವ್ಯಕ್ತಪಡಿಸಲಿಲ್ಲ, ಪ್ರಶ್ನಿಸಲಿಲ್ಲ.

ಮುಸ್ಲಿಂ ಭಯೋತ್ಪಾದನೆಯನ್ನು ಖಂಡಿಸಲಿಲ್ಲ, ವಿರೋಧಿಸಲಿಲ್ಲ. ಯಾಕೀ ವೈರುದ್ಧ್ಯ? ಈ ನಡೆಯೇ ವಿಚಿತ್ರವೆನಿಸುವುದಿಲ್ಲವೇ?
ಜನರ ತೆರಿಗೆ ಹಣದಲ್ಲಿ ಬಿಟ್ಟಿಯೋಜನೆಗಳನ್ನು (ಯಾವುದೇ ಪಕ್ಷದ ಸರಕಾರವಾಗಲೀ) ಕೊಡುವುದನ್ನು ವಿರೋಧಿಸಿ ಪ್ರಶ್ನಿಸ ಲಿಲ್ಲ. ಸರಕಾರದ ಸವಲತ್ತುಗಳು ಸಿಕ್ಕಿದವರಿಗೇ ಸಿಗುತ್ತವೆ. ಪಾಪ, ಮಧ್ಯಮವರ್ಗದವರು ಆರಕ್ಕೇರಲಿಲ್ಲ, ಮೂರಕ್ಕಿಳಿಯ ಲಿಲ್ಲ. ಸರಕಾರದ ದುಡ್ಡೆಲ್ಲ ಒಂದೋ ಅಲ್ಪಸಂಖ್ಯಾತರಿಗೆ ಅಂತ ಒಂದಿಷ್ಟು ಖಾಲಿಯಾಗುತ್ತದೆ, ಇಲ್ಲವೇ ದಲಿತರ ಏಳಿಗೆಗೆ ಅಂತ ಒಂದಿಷ್ಟು ಸುರಿಯಲಾಗುತ್ತದೆ.

ಉಳಿದವರು ಮಾಡಿರುವ ಪಾಪವೇನು? ಅಲ್ಪಸಂಖ್ಯಾತರು, ದಲಿತರು ಮಾತ್ರ ಯಾವ ನೆಲೆಯಲ್ಲಿ ಇದಕ್ಕೆ ಅರ್ಹರು? ಎಂಬುದೇ ಇಂದಿಗೂ ಉತ್ತರವಿಲ್ಲದ ಪ್ರಶ್ನೆಯಾಗಿದೆ. ಒಂದು ದೇಶದ ಪ್ರಜೆಗಳು ಅಂದಮೇಲೆ ಎಲ್ಲರೂ ಎಲ್ಲ ಬಗೆಯಲ್ಲೂ ಸಮಾನರು. ಅಂಥದ್ದರಲ್ಲಿ, ಜಾತಿ-ಮತ ಆಧರಿಸಿ ಮಾಡುವ ಇಂಥ ಕೆಲಸಕ್ಕೆ ಬಾರದ ವಿಂಗಡಣೆಗಳಿಂದ ದೇಶದ ಸಂಪತ್ತಿನ ಸಮಾನ ಹಂಚಿಕೆ ಸಾಧ್ಯವೇ ಇಲ್ಲ ಎಂಬುದು ತಮ್ಮಂಥವರಿಗೆ ಅನಿಸುವುದೇ ಇಲ್ಲವೇ? ಸರಕಾರದ ಎಲ್ಲ ಬಗೆಯ ಸವಲತ್ತು, ಮೀಸಲಾತಿ, ಕೊಡುಗೆ ಗಳಿಂದ ಬ್ರಾಹ್ಮಣರನ್ನು ಹೊರಗಿಟ್ಟೇ ನಡೆಸಿಕೊಂಡು ಬರಲಾಗುತ್ತಿದೆ, ಶತಮಾನಗಳಿಂದಲೂ ಅವರನ್ನು ಶೋಷಿಸಲಾಗುತ್ತಿದೆ.

ಯಾರೋ ಯಾವ ಕಾಲಕ್ಕೋ ಮಾಡಿದ್ದರೆನ್ನಲಾದ (?) ತಪ್ಪಿಗೆ ಈಗ ನೀವು ಶಿಕ್ಷೆ ಅನುಭವಿಸಲೇಬೇಕು ಅಂತ ಅವರ ವಿರುದ್ಧ ಅಲ್ಲಸಲ್ಲದ್ದನ್ನು ಹಿಗ್ಗಾಮುಗ್ಗಾ ಬರೆಯಲಾಯಿತು, ಆರೋಪಿಸಲಾಯಿತು, ಆಕ್ಷೇಪಿಸಲಾಯಿತು, ನಿಂದಿಸಲಾಯಿತು. ‘ಹಿಡಿರಲಾ, ಒದಿರಲಾ, ಇಕ್ರಲಾ’ ಎಂದು ಜರೆದಿದ್ದೂ ಆಯಿತು. ಅಪಾರ್ಥದ ಪದಗಳಲ್ಲಿ ನಿಂದಿಸಿಯೂ ಆಯಿತು. ‘ಆರೆಸ್ಸೆಸ್ಸಿನಲ್ಲಿ ಇರೋ ರೆಲ್ಲ ಬ್ರಾಹ್ಮಣರೇ’ ಎಂದು ತಲೆಬುಡವಿಲ್ಲದೆ ಆರೋಪಿಸಿಯೂ ಆಯಿತು. ಆರೆಸ್ಸೆಸ್ಸನ್ನು ‘ಹಿಂದೂ ಕೋಮುವಾದಿ ಸಂಘಟನೆ’ ಎನ್ನಲಾಯಿತು. ಆದರೆ, ತಮಗೆ, ತಮ್ಮಂಥವರಿಗೆ ಗೊತ್ತಿದ್ದ ಸಂಗತಿಯೇ ನೆಂದರೆ, ಜಗತ್ತಿಗೆ ತಲೆನೋವಾಗಿರುವುದು ಪಾಕ್/ಇಸ್ಲಾಮಿಕ್ ಸಂಘಟನೆಗಳೇ ಹೊರತು ಬ್ರಾಹ್ಮಣರಲ್ಲ, ಆರೆಸ್ಸೆಸ್‌ನಂಥ ಸಂಘಟನೆಗಳಲ್ಲ, ಹಿಂದೂ ಐಕಮತ್ಯವೂ ಅಲ್ಲ ಎಂಬುದು!

ಆದರೆ, ತಮ್ಮಂಥವರು ಎಲ್ಲಿಯೂ ಮುಸ್ಲಿಂ ಉಗ್ರವಾದವನ್ನು ವಿರೋಧಿಸಲಿಲ್ಲ, ಮುಲ್ಲಾಗಳನ್ನು ಪ್ರಶ್ನಿಸಲಿಲ್ಲ. ಬ್ರಾಹ್ಮಣ ಮಠಗಳ ರೀತಿ-ರಿವಾಜು ಗಳನ್ನು ಪ್ರಶ್ನಿಸಿದಂತೆಯೇ ಮುಸ್ಲಿಂ ಮೌಢ್ಯದ ಬಗ್ಗೆ ಚಕಾರ ಎತ್ತಲಿಲ್ಲ. ದೇವನೂರು ಮಹಾದೇವರೇ, ಬೇಸರ ಮಾಡಿಕೊಳ್ಳಬೇಡಿ. ಜಾತಿನಾಶ ಬಯಸುವ ನಿಮ್ಮಂಥವರ ವೈಚಾರಿಕತೆಯಲ್ಲೇ ನ್ಯೂನತೆಗಳಿವೆ ಮತ್ತು ಅದು ವೈಚಾರಿಕ ಕಾಯಿಲೆಯಾಗಿ ಕಾಣುತ್ತಿದೆ. ಹಿಂದೂಗಳಾಗೇ ಇದ್ದುಕೊಂಡು ಹಿಂದೂ ಧರ್ಮದ ಬಗ್ಗೆ ಅವ್ಯಾಹತವಾಗಿ ಅವಹೇಳನ ಮಾಡು ವುದು ನಿಮ್ಮಂಥವರಿಗೆ ವೈಚಾರಿಕ ಅರ್ಬುದವಾಗಿಬಿಟ್ಟಿದೆ. ಮುಸ್ಲಿಂ ಮೂಲಭೂತವಾದ, ಮತಾಂತರದ ಬಗ್ಗೆ ಎಂದಾದರೂ ದನಿಯೆತ್ತಿದ್ದೀರಾ? ಇಲ್ಲ ತಾನೆ? ಹೋಗಲಿಬಿಡಿ.

ಹೇಳುತ್ತ ಹೋದರೆ ತುಂಬ ವಿಚಾರಗಳು ನೆನಪಾಗುತ್ತವೆ. ಆದರೂ ತಮ್ಮನ್ನು ನಾನು ಮೆಚ್ಚುತ್ತೇನೆ. ಏಕೆಂದರೆ, ಆರೆಸ್ಸೆಸ್ಸಿನ ಆಳವನ್ನು ಮುಳುಗಿ, ಅಗಲವನ್ನು ಕಂಡುಕೊಂಡು ಕೊನೆಗೂ ಸತ್ಯವನ್ನು ಬಹಿರಂಗವಾಗಿ, ಒಳಮನಸ್ಸಿನಿಂದಲೋ ಅಲ್ಲವೋ ಅಂತೂ ಒಪ್ಪಿಕೊಂಡು ಮೆಚ್ಚುಗೆಯ ಮಾತುಗಳನ್ನಾಡಿದಿರಿ. ಆದರೆ ನನ್ನ ಪ್ರಶ್ನೆಗಳು ಮಾತ್ರ ಜೀವಂತವಾಗೇ ಇರುತ್ತವೆ!

Read E-Paper click here