Saturday, 5th October 2024

ಅಸ್ಮಿತೆಯ ಮಹಾಗ್ರಂಥಕ್ಕೆ ವಿರೋಧವೇಕೆ ?

ಮಾರುತೀಶ್ ಅಗ್ರಾರ

ಅಷ್ಟಕ್ಕೂ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆಯಿಂದ ಆಗುವ ತೊಂದರೆಯಾದರು ಏನು? ಭಗವದ್ಗೀತೆಯೇನು ಯೂರೋಪಿನ ಚರಿತ್ರೆ ಹೇಳುವ ಪುಸ್ತಕವೇ? ಅಥವಾ ಬಿಜೆಪಿ ಚುನಾವಣಾ ಪ್ರಣಾಳಿಕೆಯೇ? ಅಥವಾ ಪ್ರಧಾನಿ ಮೋದಿಯವರ ಅಭಿವೃದ್ಧಿ ಸಾರುವ
ಕೃತಿಯೇ? ಅಥವಾ ರಾಜಕಾರಣದ ಹೊತ್ತಗೆಯೇ? ಇದ್ಯಾವುದೂ ಅಲ್ಲವಲ್ಲ.

ಆದರೂ ವಿರೋಧವೇಕೆ? ಭಾರತ ಮಾತ್ರವಲ್ಲ, ಜಗತ್ತಿನ ಅನೇಕರಿಗೆ ಮಾರ್ಗದರ್ಶಕ ವಾಗಿರುವ, ಬದುಕಿನ ಸಾರವನ್ನು ತಿಳಿಸುವ, ನ್ಯಾಯ, ನೀತಿ, ಧರ್ಮ, ಸತ್ಯದ ಅರಿವು ಮೂಡಿಸುವ ಮಹಾಗ್ರಂಥ ಭಗವದ್ಗೀತೆ ಎನ್ನುವುದು ನಮಗೆಲ್ಲ ಗೊತ್ತಿರುವಂಥದ್ದೇ. ಅದು ಭಾರತೀಯರ ಅಸ್ಮಿತೆ ಕೂಡ. ಸಾಧು-ಸಂತರು, ಮಹರ್ಷಿ ಅರವಿಂದರು, ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಗಾಂಧೀಜಿ, ಅಂಬೇಡ್ಕರ್, ಅಬ್ದುಲ್ ಕಲಾಂ ಆದಿಯಾಗಿ ಅನೇಕರು ಇದರಿಂದ ಪ್ರೇರಣೆ ಪಡೆದು ಮಹಾನ್ ವ್ಯಕ್ತಿಗಳಾಗಿದ್ದಾರೆ. ಗೀತೆಯ ಒಟ್ಟಾರೆ ಸಾರವೇ ‘ಕರ್ಮಫಲಗಳನ್ನು ಬಿಟ್ಟು ಭಗವಂತನಲ್ಲಿ ಶರಣಾಗತಿ ಹೊಂದು’ ಎನ್ನುವುದು.

ನಾವು(ಮನುಷ್ಯ, ಪ್ರಾಣಿ-ಪಕ್ಷಿ) ಎನ್ನುವುದು ಇಲ್ಲಿ ನೆಪ ಮಾತ್ರ. ಎಲ್ಲವೂ ಪರಮಾತ್ಮನ ಲೀಲೆ ಎನ್ನುತ್ತದೆ ಗೀತೆ. ಜ್ಞಾನ, ಭಕ್ತಿ, ಕರ್ಮ-ಯೋಗ ಇವುಗಳ ವಿಸತವಾದ ವ್ಯಾಖ್ಯಾನ ವೇ ಗೀತೆ. ಈ ಮಾರ್ಗಗಳಲ್ಲಿ ಮುನ್ನಡೆಯುವವರು ಖಂಡಿತವಾಗಿಯೂ ಪರಮಸ್ಥಾನ ಪಡೆಯುತ್ತಾರೆ ಎಂದು ಶ್ರೀಕೃಷ್ಣನೇ ಗೀತೋಪದೇಶ ಸಂದರ್ಭ ಹೇಳಿದ್ದಾನೆ. ಮಹಾತ್ಮ ಗಾಂಧಿಯವರು ತಮ್ಮ ಗೀತಾ ಟಿಪ್ಪಣಿಯಲ್ಲಿ ‘ಭಗವದ್ಗೀತೆ ಯಾವುದೇ ಜಾತಿ-ಮತ, ಶ್ರದ್ಧೆಯವರು ಓದಬಹುದಾದ ಗ್ರಂಥ. ಅದು ಯಾವುದೇ ಒಂದು ಪಂಥದ ಪರ ನಿಲ್ಲುವುದಿಲ್ಲ. ಅದು ಶುದ್ಧ ನೈತಿಕತೆಯನ್ನಷ್ಟೇ ಬೋಧಿಸುತ್ತದೆ.

ಜಗತ್ತಿನಲ್ಲಿ ಮನುಕುಲಕ್ಕೆ ಒಳಿತಾಗಬಲ್ಲ ಯಾವುದಾದರೊಂದು ಗ್ರಂಥವಿದ್ದರೆ ಅದು ಭಗವದ್ಗೀತೆ. ಹಾಗಾಗಿ ನಾವು ಗೀತೆಯನ್ನು
ಗೌರವಿಸ ಬೇಕು ಹಾಗೂ ಪೂಜ್ಯ ಭಾವದಿಂದ ಕಾಣಬೇಕು ಎನ್ನುತ್ತಾರೆ ಗಾಂಧೀಜಿ. ಜರ್ಮನಿಯ ತತ್ವಜ್ಞಾನಿ ವಿಲಿಯಂ ವಾನ್ ಹಂಬೋಲ್ಟ
ಭಗವದ್ಗೀತೆಯ ಬಗ್ಗೆ ಹೇಳಿದ್ದು ನೋಡಿ- ‘ಗೀತೆಯು ಅತ್ಯಂತ ಸುಂದರ ಮತ್ತು ಪ್ರಾಯಶಃ ಪ್ರಪಂಚದ ಬೇರಾವುದೇ ಭಾಷೆಯಲ್ಲೂ ಇಲ್ಲದ ಏಕೈಕ ದಾರ್ಶನಿಕ ಗ್ರಂಥ. ಸಮಸ್ತ ವಿಶ್ವವೇ ಗರ್ವ ಪಡಬಹುದಾದಂತಹ ಗಹನವಾದ ಹಾಗೂ ಉನ್ನತ ವಿಚಾರಗಳು ಗೀತೆಯಲ್ಲಿ ಇದೆ. ಅಮೆರಿಕದ ಖ್ಯಾತ ಇತಿಹಾಸಕಾರ ರಾಲ ವಾಲ್ಡೋ ಎಮರ್ಸನ್ ಅವರು ಭಗವದ್ಗೀತೆ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತ, ‘ನಾನು ಭಗವದ್ಗೀತೆಗೆ ಅತ್ಯಂತ ಋಣಿಯಾಗಿದ್ದೇನೆ.

ಅದನ್ನು ಓದಿದಾಗ ಯಾವುದೋ ಒಂದು ವಿರಾಟ ಶಕ್ತಿಯೊಡನೆ ನಮ್ಮ ಸಂವಾದ ನಡೆಯುತ್ತಿದೆ ಎಂಬ ಭಾವನೆ ನನಗೆ ಬಂದಿತ್ತು.
ಅದರಲ್ಲಿ ಕ್ಷುದ್ರವಲ್ಲದ, ಅನುಪಯುಕ್ತವಲ್ಲದ, ಉನ್ನತ ಪ್ರಜ್ಞೆಯ ಸ್ಪಷ್ಟ ಶಾಂತಿಯುತ ಹಾಗೂ ತರ್ಕಬದ್ಧ ದನಿ ಇದೆ. ಅದರ ಹೂಂಕಾರ ದಲ್ಲಿ ಭೀತಗೊಂಡಿರುವ ಯುಗದಲ್ಲಿನ ಹಾಗೂ ಮಹಲುಗಳಲ್ಲಿ ವಾಸವಾಗಿರುವವರನ್ನೂ ಒಳಗೊಂಡಂತೆ ಇಂದಿನ ಸಮಸ್ಯೆಗಳಿಗೆ
ಪರಿಹಾರವನ್ನೂ ಮತ್ತು ಅದರಿಂದ ಹೊರಬರುವ ಉಪಾಯವನ್ನು ಹೇಳುವ ಕ್ಷಮತೆ ಗೀತೆಗೆ ಇದೆ’ ಎಂದಿದ್ದಾರೆ.

ಇಂಗ್ಲೆಂಡಿನ ಫಿಲಾಸಫರ್ ಆಲ್ಡಸ್ ಹಕ್‌ಸ್ಲಿ ಭಗವದ್ಗೀತೆಯನ್ನು ವರ್ಣಿಸಿರುವ ರೀತಿ ಅದ್ಭುತ. ಅವರ ಪ್ರಕಾರ, ಚಿರಸ್ಥಾಯಿ ದರ್ಶನದ ಸ್ಪಷ್ಟವಾದ ಮತ್ತು ವಿಸ್ತಾರವಾದ ಸಾರಾಂಶವೇ ಗೀತೆ. ಆದ್ದರಿಂದ ಅದರ ಚಿರಂತನ ಮೌಲ್ಯವು ಕೇವಲ ಭಾರತೀಯರಿಗಷ್ಟೇ ಅಲ್ಲ ಸಮಸ್ತ ಮಾನವ ಜನಾಂಗಕ್ಕೆ ಸೇರಿದೆ ಎನ್ನುತ್ತಾರವರು. ಇನ್ನು ಅನೇಕ ಪಾಶ್ಚಿಮಾತ್ಯ ಇತಿಹಾಸಕಾರರು, ತತ್ವಜ್ಞಾನಿಗಳು, ಸಂಶೋಧಕರು, ಸಾಹಿತಿಗಳು, ರಾಜಕಾರಣಿಗಳು ಭಗವದ್ಗೀತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಪ್ರತಿಯೊಬ್ಬ ಭಾರತೀಯನಿಗೂ ಭಗವದ್ಗೀತೆ ಕೇವಲ ಗ್ರಂಥ ಮಾತ್ರ ಆಗಿರದೆ ಅದು ದೈನಂದಿನ ಜೀವನದ ಊರುಗೋಲಾಗಿದೆ ಎಂದರು ಅತಿಶಯೋಕ್ತಿಯಲ್ಲ.

ಭಗವದ್ಗೀತೆಯ ಹೆಚ್ಚಿನ ಭಾಗವು ಭಾವನೆ ಮತ್ತು ಬಾಂಧವ್ಯವನ್ನು ನಿರ್ವಹಿಸುವ ಬಗ್ಗೆ ಹೇಳುತ್ತದೆ. ಶಾಂತಿಯನ್ನು ಹೇಗೆ ಕಾಪಾಡಬೇಕು? ನಾವು ಹೇಗೆ ಶಾಂತರಾಗಿರಬೇಕು? ಕೆಟ್ಟ ಸಮಯದಲ್ಲೂ ಭಾವನೆಯ ಬದಲಾಗಿ ತರ್ಕವನ್ನು ಬಳಸುವುದರ ಬಗ್ಗೆಯೂ ಯೋಚಿಸಬೇಕು ಎಂಬಿತ್ಯಾದಿ ಗೀತೆ ಹೇಳುತ್ತದೆ. ನಾವು ಕೆಲಸ ಮಾಡುವಾಗ ಯಾವುದೇ ಆತಂಕವಾಗಲಿ, ಭೀತಿಯಾಗಲಿ ಇರಬಾರದು. ನಾವು ಮಾಡುವ ಕೆಲಸ ಪ್ರೀತಿ ಪೂರ್ವಕವಾಗಿಬೇಕು.

ಕಷ್ಟಪಟ್ಟರೆ ಸುಖ ಸಿಕ್ಕೆ ಸಿಗುತ್ತದೆ, ಸತ್ಯ ಒಂದಲ್ಲ ಒಂದು ದಿನ ಗೆದ್ದೇ ಗೆಲ್ಲುತ್ತದೆ. ಅಲ್ಲಿಯವರೆಗೂ ನಿಮ್ಮ ಕರ್ತವ್ಯ ನೀವು ಮಾಡಿಕೊಂಡು
ಮುಂದುವರಿಯಬೇಕು. ನಿಮ್ಮ ಶತ್ರುವು ಅಸಾಧಾರಣನಾಗಿ ಕಾಣಿಸಿದರೂ ನಿಮ್ಮ ಕರ್ತವ್ಯವನ್ನು ನೀವು ಮುಂದುವರಿಸಿ ಎನ್ನುವ ಆತ್ಮ
ವಿಶ್ವಾಸ ಹಾಗೂ ಧೈರ್ಯದ ಮಾತುಗಳನ್ನು ಗೀತೆ ನಮಗೆ ಕಲಿಸಿಕೊಡುತ್ತದೆ. ಹಾಗಾಗಿಯೇ ಭಗವದ್ಗೀತೆ ಎಲ್ಲ ಕಾಲಕ್ಕೂ, ಸಮಾಜ ಕ್ಕೂ ಹಾಗೂ ಎಲ್ಲಾ ವಯೋಮಾನದವರಿಗೂ ಪ್ರೇರಣೆ ನೀಡುವ ಮಹಾ ಗ್ರಂಥವೆನಿಸಿದೆ.

ಗೀತೆ ಅನ್ಯ ಧರ್ಮವನ್ನು ದೂಷಿಸಿಲ್ಲ, ತಮ್ಮ ಧರ್ಮದ ಉಳಿವಿಗಾಗಿ ಇತರೆ ಧರ್ಮಗಳ ಮೇಲೆ ಯುದ್ಧ ಮಾಡಿ ಎಂದಿಲ್ಲ, ಜಾತಿ-ಮತ-ಪಂಥಗಳನ್ನು ತುಂಡರಿಸುವ, ತನ್ನ ಮತವೇ ಶ್ರೇಷ್ಠ ಎನ್ನುವ ಧೋರಣೆ ಹೊಂದಿಲ್ಲ. ಬದಲಾಗಿ ಗೀತೆ ಹೇಳುವುದು ಸರ್ವರು ಸಮಾನರು, ಸರ್ವರು ಶ್ರೇಷ್ಠರು ಎಂದು. ಇಂಥ ಒಂದು ಮಹಾನ್ ಸಂದೇಶ ಸಾರುವ ಭಗವದ್ಗೀತೆ(ಭಗವಂತನ ವಾಣಿ) ಯನ್ನು ಶಾಲಾ ಪಠ್ಯದಲ್ಲಿ ಸೇರಿಸಿದರೆ ತಪ್ಪೇನಿದೆ? ಅಷ್ಟಕ್ಕೂ ಬೊಮ್ಮಾಯಿ ಸರಕಾರ ಲಾಡೆನ್, ಕಸಬ್ ಅವರ ಜೀವನ ಚರಿತ್ರೆಯನ್ನೋ ಅಥವಾ ಪಾಶ್ಚಾತ್ಯ ದೇಶಗಳ ಗ್ರಂಥಗಳನ್ನೋ ಪಠ್ಯದೊಳಗೆ ಸೇರಿಸುವ ಅಡ್ಡ ಕಸುಬು ಚಿಂತನೆಯನ್ನು ಹೊರಹಾಕಿಲ್ಲವಲ್ಲ!

ಇವತ್ತು ನಮ್ಮ ರಾಜಕಾರಣಿಗಳು ತಮ್ಮ ರಾಜಕಾರಣದ ಬೇಳೆ ಬೇಯಿಸಿಕೊಳ್ಳಲು ಎಂತಹ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದರೆ
ನೆಪೋಲಿಯನ್ ಬಗ್ಗೆ, ಭಾರತದ ಮೇಲೆ ದಾಳಿ ಮಾಡಿದ ಮೊಘಲರು, ತುರುಕರು, ಡಚ್ಚರ ಬಗ್ಗೆ, ಭಾರತೀಯರನ್ನು ಗುಲಾಮರಾಗಿ
ಕಂಡ ಬ್ರಿಟಿಷರ ಬಗ್ಗೆ ಶಾಲಾ ಪಠ್ಯದಲ್ಲಿ ಪುಟಗಟ್ಟಲೆ ಸೇರಿಸಿದರು ಯಾರೂ ಸೋತ್ತುವುದಿಲ್ಲ. ಯೂನಿವರ್ಸಿಟಿಗಳಲ್ಲಿ ಮೆಕಾಲೆ,
ಮ್ಯಾಕ್ಸ್‌ ಮುಲ್ಲರ್, ಜಿನ್ನಾ ಇವರುಗಳ ಫೋಟೋ ಹಾಕಿಕೊಂಡರೂ ಕೇಳೋದಿಲ್ಲ.

ಅಷ್ಟೇ ಏಕೆ ಲಕ್ಷಾಂತರ ಹಿಂದೂಗಳನ್ನು ಮತಾಂತರ ಮಾಡಿ, ನಿರ್ದಾಕ್ಷಿಣ್ಯವಾಗಿ ಕೊಲೆಗೈದು, ಭಾರತದ ಮೇಲೆ ದಾಳಿ ಮಾಡುವಂತೆ ಅರಬ್ ದೇಶದ ದೊರೆಗಳಿಗೆ ಮನವಿ ಮಾಡಿದ್ದ ದೇಶದ್ರೋಹಿ ಟಿಪ್ಪು ಸುಲ್ತಾನ್ ಬಗ್ಗೆ ವೈಭವಿಕರಿಸಿ ಶಾಲಾ ಪಠ್ಯದಲ್ಲಿ ಸೇರಿಸಿದ್ದರೂ ಅದರ ಬಗ್ಗೆ ಡಿ.ಕೆ. ಶಿವಕುಮಾರ್, ಪ್ರಿಯಾಂಕ ಖರ್ಗೆ, ಎಚ್.ಡಿ. ಕುಮಾರಸ್ವಾಮಿಯಂಥ ನಾಯಕರಿಗಾಗಲೀ ಪ್ರಗತಿಪರ- ಬುದ್ಧಿಜೀವಿಗಳಿ ಗಾಗಲೀ ವಿರೋಧವಿಲ್ಲ.

ಆದರೆ ಭಾರತೀಯರು ಹೆಮ್ಮೆ ಪಡುವ, ಜೀವನ ಸಾರವನ್ನು ತಿಳಿಸುವ ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರಿಸುವ ವಿಚಾರ ಕೇಳಿದೊಡ ನೆಯೇ ಇವರುಗಳು ವಿರೋಧಿಸುತ್ತಾರೆಂದರೆ ಇವರ ಮತಬ್ಯಾಂಕ್ ರಾಜಕಾರಣಕ್ಕೆ ಏನೆನ್ನಬೇಕು?