ತನ್ನಿಮಿತ್ತ
ನಂ ಶ್ರೀಕಂಠ ಕುಮಾರ್
ಭಾರತವು ಧರ್ಮಭೂಮಿ, ಪುಣ್ಯಭೂಮಿ, ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಹರಡಿಕೊಂಡಿರುವ ಸಸ್ಯಶ್ಯಾಮಲೆ ಯಾದ ಈ ಭರತಖಂಡದಲ್ಲಿ ಪುರಾತನ ವೇದ-ಪುರಾಣ ಇತಿಹಾಸಗಳ ಹಿನ್ನೆಲೆಯುಳ್ಳ ಪವಿತ್ರ ಕ್ಷೇತ್ರಗಳು, ಪುಣ್ಯ ನದಿಗಳು ಎಲ್ಲೆಲ್ಲೂ ಕಾಣಸಿಗುತ್ತವೆ.
ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಪರ್ವತ ಪ್ರದೇಶವು ಹಚ್ಚ ಹಸುರಿನ ರಮಣೀಯ ನಿಸರ್ಗವೆಂದು ಪ್ರಸಿದ್ದಿಯನ್ನು ಪಡೆದಿವೆ. ಮಹರ್ಷಿಗಳು, ಸಂತರು, ರಾಜ ಮಹಾರಾಜರು ಮಠಮಾನ್ಯಗಳನ್ನು, ದೇವಾಲಯಗಳನ್ನು ಎಲ್ಲೆಡೆ ಸ್ಥಾಪಿಸಿ ಧರ್ಮ ರಕ್ಷಣೆ ಮಾಡಿದರು ಎನ್ನುವುದು ಐತಿಹ್ಯ. ಅಂತಹ ಕ್ಷೇತ್ರಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಮಡಿಲಲ್ಲಿರುವ ಸವಿ ನೀರಿನ ತುಂಗೆಯ ದಡದ ಹರಿಹರಪುರದ ಕ್ಷೇತ್ರವು ಸಹ ಒಂದು ಪುಣ್ಯಭೂಮಿಯಾಗಿದೆ.
ಈ ಪವಿತ್ರ ಸ್ಥಳವು ಯಾಗ ಭೂಮಿ, ತಪೋ ಭೂಮಿ ಮತ್ತು ಜ್ಞಾನ ಭೂಮಿಯಾಗಿ ಪ್ರಖ್ಯಾತಿಯ ಜೊತೆಗೆ ಐತಿಹಾಸಿಕ ಪ್ರಸಿದ್ಧಿ ಯನ್ನು ಹೊಂದಿದೆ. ಶ್ರೀಮಠ ಮಹಿಮಾ ಸ್ತೋತ್ರ ಎಂಬ ಪುರಾತನ ತಾಳೇಗರಿ ಗ್ರಂಥದ ಆಧಾರ ಮತ್ತು ಸ್ಕಾಂದ ಪುರಾಣದ ಪ್ರಕಾರ ಈ ಸ್ಥಳದಲ್ಲಿ ಪರಶಿವನ ಮಾವನಾದ ದಕ್ಷ ಪ್ರಜಾಪತಿಯು ಮಹಾಯಾಗವೊಂದನ್ನು ಮಾಡಿದನೆಂದು ಪ್ರತೀತಿ. ಈ ಮಹಾ ಯಾಗದ ಕುಂಡದಲ್ಲಿ ಸಾಕ್ಷಾತ್ ಪರಶಿವನೇ ಆವಿರ್ಭವಿಸಿ ಅಲ್ಲಿ ಸೇರಿದ್ದ ಎಲ್ಲಾ ದೇವಾನುದೇವತೆಗಳನ್ನು, ಮಾವನಾದ ದಕ್ಷ ಬ್ರಹ್ಮ ನನ್ನೂ ಅನುಗ್ರಹಿಸಿದನೆಂದು ತಿಳಿದು ಬರುತ್ತದೆ.
ಹರಿಹರಪುರದ ಕಾಡಿನ ನಡುವೆ ಶಿಲಾಮಯ ದೇವಾಲಯವಿರುವ ಸ್ಥಳವೇ ಯಾಗ ಕುಂಡವಾಗಿದ್ದು, ಅಲ್ಲಿ ಲಿಂಗ ರೂಪದಲ್ಲಿ ರುವ ಶ್ರೀ ಸೋಮೇಶ್ವರ ದೇವರಿಗೆ ದಕ್ಷ-ಹರ ಸೋಮೇಶ್ವರ ಎಂಬುದಾಗಿಯೇ ಈಗಲೂ ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ಹೀಗೆ ಪ್ರಸಿದ್ಧಿ ಪಡೆದ ಈ ಕ್ಷೇತ್ರದಲ್ಲಿ ಯಜ್ಞಯಾಗಗಳು ನಿರಂತರವಾಗಿ ನಡೆಯುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಶೀಕ್ಷೇತ್ರವು ಯಾಗ ಭೂಮಿಯೂ ಆಗಿದೆ.
ಭಾರತೀಯ ಸನಾತನ ವೈದಿಕ ಪರಂಪರೆಯ ಮಹಾ ತಪಸ್ವಿಗಳಲ್ಲಿ ಮಹರ್ಷಿ ಅಗಸ್ತ್ಯರು ದಕ್ಷಿಣ ಭಾರತದಲ್ಲಿ ಸುಪ್ರಸಿದ್ಧರು. ದಕ್ಷಿಣೋತ್ತರ ಭಾರತದ ನಡುವಿನ ವಿಂಧ್ಯ ಪರ್ವತವು ವಿಪರೀತ ಎತ್ತರಕ್ಕೆ ಬೆಳೆಯುವುದನ್ನು ತಡೆಗಟ್ಟಲು ದೇವತೆಗಳು ಅಗಸ್ತ್ಯ ಮಹರ್ಷಿಯನ್ನು ಪ್ರಾರ್ಥಿಸಲಾಗಿ ಅವರು ಉತ್ತರದಿಂದ ದಕ್ಷಿಣಕ್ಕೆ ಹೊರಟು ತಮ್ಮ ತಪಸ್ಸಿನ ಮಹಿಮೆಯಿಂದ ವಿಂಧ್ಯಪರ್ವತವು ತಲೆ ತಗ್ಗಿಸುವಂತೆ ಮಾಡಿ ವಿಧಿಯನ್ನು ವಿಧಿಸಿ ದಕ್ಷಿಣ ಭಾರತವನ್ನು ಪ್ರವೇಶಿಸಿ ಹಲವಾರು ಕಡೆ ತಪಸ್ಸು ನಡೆಸುತ್ತಾ ದಕ್ಷಿಣ ದಲ್ಲಿನ ತೀರ್ಥ ಕ್ಷೇತ್ರಗಳ ಮಹತ್ವಕ್ಕೆ ಕಾರಣರಾದರು.
ಮುಂದೆ ಮಹರ್ಷಿ ಅಗಸ್ತ್ಯರು ದಕ್ಷ-ಕ್ಷೇತ್ರ ಹರಿಹರಪುರದ ಪರಿಸರ ಮತ್ತು ಪಾವಿತ್ರ್ಯದಿಂದ ಪ್ರಭಾವಿತರಾಗಿ ಕೆಲವು ಕಾಲ ತಪೋ ನಿರತರಾಗಿ ಇಲ್ಲಿ ಇದ್ದ ಸಂದರ್ಭದಲ್ಲಿ ತಮ್ಮ ಶಿಷ್ಯರಾದ ಗೋವಿಂದ ಯೋಗಿಗಳಿಗೆ ಶ್ರೀಲಕ್ಷ್ಮೀನರಸಿಂಹ ಸಾಲಿಗ್ರಾಮದ ಮೂರ್ತಿ ಗಳನ್ನು ನೀಡಿ ಅನುಗ್ರಹಿಸಿ ಮುಂದೆ ತೆರಳಿದರು. ಇಂದಿಗೂ ಅಗಸ್ತ್ಯ ಕರಾರ್ಚಿತ ಸಾಲಿಗ್ರಾಮದ ಮೂರ್ತಿಗಳು ಶ್ರೀಮಠದಲ್ಲಿ ಆರಾಧಿಸಲ್ಪಡುತ್ತಿರುವುದು ವಿಶೇಷ.
ಶ್ರೀಕ್ಷೇತ್ರವು ಶ್ರೀಕೃಷ್ಣ ಯೋಗೀಂದ್ರರ ನಂತರದ ಹಲವಾರು ಮಹರ್ಷಿಗಳ ತಪೋಭೂಮಿಯಾಗಿ ಮುಂದುವರೆಯುತ್ತಿದೆ. ಸುಮಾರು 8ನೇ ಶತಮಾನದಲ್ಲಿ ಸನಾತನ ವೈದಿಕ ಧರ್ಮವನ್ನು ಪುನರುಜ್ಜೀವನಗೊಳಿಸಿದ ಪರಶಿವನ ಅವತಾರವಾದ ಪರಮ ಪೂಜ್ಯ ಆಚಾರ್ಯ ಶಂಕರ ಭಗವತ್ಪಾದರು ದಕ್ಷಿಣ ಭಾರತದಲ್ಲಿ ಧರ್ಮಪ್ರಸಾರವಾಗಿ ವಿಜಯಯಾತ್ರೆಯನ್ನು ಮಾಡುತ್ತಾ ದಕ್ಷ ಕ್ಷೇತ್ರವಾದ ಹರಿಹರಪುರಕ್ಕೂ ಆಗಮಿಸಿ ತಪಸ್ಸುಗಳಲ್ಲಿ ನಿರತರಾಗಿದ್ದ ಶ್ರೀಕೃಷ್ಣ ಯೋಗೀಂದ್ರರಿಗೆ ಮಂತ್ರ ದೀಕ್ಷೆಯನ್ನು ನೀಡಿ ಆಶೀರ್ವದಿಸಿ ಜ್ಞಾನದೇವತೆ ಶ್ರೀ ಶಾರದೆಯನ್ನು ಶ್ರೀಚಕ್ರದ ಮೂಲಕ ಪ್ರತಿಷ್ಠಾಪಿಸಿದರು.
ಅಂದಿನಿಂದ ಪೀಠದ ಪ್ರಥಮ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಶ್ರೀ ಸುರೇಶ್ವರಾಚಾರ್ಯರು ಶ್ರೀಕೃಷ್ಣ ಯೋಗೀಂದ್ರರಿಗೆ ಸಂನ್ಯಾಸ ದೀಕ್ಷೆಯನ್ನು ನೀಡಿ ಸ್ವಯಂ-ಪ್ರಕಾಶ ಸರಸ್ವತೀ ಎಂಬ ಯೋಗಪಟ್ಟವನ್ನು ಅನುಗ್ರಹಿಸಿದರು. ಅಂದಿನಿಂದ ಶ್ರೀಕ್ಷೇತ್ರ ದಲ್ಲಿ ಮಹರ್ಷಿಗಳ ಪರಂಪರೆಯಿಂದ ಆಸ್ತಿಕರಿಗೆ ಮಾರ್ಗದರ್ಶನ ದೊರಕುತ್ತಿದೆ. ಐತಿಹಾಸಿಕವಾಗಿ ದಕ್ಷಿಣ ಭಾರತವನ್ನು ಆಕ್ರಮಿಸುತ್ತಿದ್ದ ವಿಧರ್ಮೀಯ ದಾಳಿಕೊರರ ಹಾವಳಿಯನ್ನು ತಡೆಗಟ್ಟಲು ಕ್ರಿ.ಶ.14ನೇ ಶತಮಾನದಲ್ಲಿ ಶೃಂಗೇರಿಯ ಜಗದ್ಗುರು
ಪೀಠದ ಮಹಾಯೋಗಿ ಶ್ರೀವಿದ್ಯಾತೀರ್ಥರ ನಿರ್ದೇಶನದಂತೆ ಅವರ ನೇರ ಶಿಷ್ಯರಾದ ಯೋಗಿಶ್ರೇಷ್ಠ ಜಗದ್ಗುರು ಶ್ರೀ ಶ್ರೀ ವಿದ್ಯಾ ರಣ್ಯರ ಪ್ರಯತ್ನದಿಂದ ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯದ ಮೊದಲ ಚಕ್ರವರ್ತಿ ಹರಿಹರ ರಾಯರು ತುಂಗಾ ನದಿ ತೀರದ ದಡದಲ್ಲಿದ್ದ ಕಪಾಲಂ ಎಂಬ ಸ್ಥಳದಲ್ಲಿ ಅಗ್ರಹಾರವನ್ನು ನಿರ್ಮಿಸಿ ತಮ್ಮ ಹೆಸರಿನಲ್ಲಿ ಹರಿಹರಪುರ ಎಂದು ಪುನರ್ ನಾಮಕರಣ ಮಾಡಿದರು.
ನಂತರದ ರಾಜರಾದ ಇಮ್ಮಡಿ ಹರಿಹರ ರಾಯರು ಶ್ರೀ ಮಠಕ್ಕೆ ಭೂಮಿಯನ್ನು ದತ್ತಿಯಾಗಿ ನೀಡಿದರೆಂಬುದು ದಾಖಲೆಯಲ್ಲಿದೆ. ಹೀಗೆ ಸಾವಿರಾರು ವರ್ಷಗಳ ಭವ್ಯವಾದ ಇತಿಹಾಸ ಮತ್ತು ಶ್ರೇಷ್ಠವಾದ ಗುರುಪರಂಪರೆಯನ್ನು ಹೊಂದಿರುವ ರಾಜಮಾನ್ಯವಾದ ಈ ಧರ್ಮಪೀಠವು ಆಯಾಯ ಕಾಲ ಪರಿಸ್ಥಿತಿಗೆ ಅನುಗುಣವಾಗಿ ಯಾವುದೇ ಭೇದ ಭಾವವಿಲ್ಲದೆ ಸಮಸ್ತ ಸಮಾಜಕ್ಕೂ ಧರ್ಮ
ಮಾರ್ಗವನ್ನು ಬೋಧಿಸುತ್ತಾ ಸನ್ಮಾರ್ಗದಲ್ಲಿ ಸುಖ, ಶಾಂತಿ, ಸಮೃದ್ಧಿ, ಸಾಮರಸ್ಯತೆಗಾಗಿ ನಿರಂತರವಾಗಿ ದಿವ್ಯ ಮಾರ್ಗದರ್ಶನ ವನ್ನು ಮಾಡಿಕೊಂಡು ಬರುತ್ತಿದೆ.
ಅನಾದಿ ಕಾಲದಿಂದ ಶ್ರೀಮಠದ ಗುರುಪರಂಪರೆಯಲ್ಲಿ ೨೫ ಯತಿಗಳು ಧರ್ಮಬೋಧನೆಯನ್ನು ಮಾಡುತ್ತಾ ಆಸ್ತಿಕರಿಗೆ ಅನು ಗ್ರಹಿಸುತ್ತಿದ್ದಾರೆ. 1999ರಲ್ಲಿ ಬ್ರಹ್ಮೈಕ್ಯರಾದ ಶ್ರೀ ಶ್ರೀ ಸ್ವಯಂ ಪ್ರಕಾಶ ಅಭಿನವ ರಮಾನಂದ ಸರಸ್ವತೀ ಮಹಾಸ್ವಾಮಿಗಳವರು ತಮ್ಮ ಉತ್ತರಾಧಿಕಾರಿಯನ್ನು ನೇಮಿಸದ ಕಾರಣ ಶ್ರೀಮಠದ ಭಕ್ತರೆಲ್ಲರೂ ಶೃಂಗೇರಿ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರಲ್ಲಿ ಹರಿಹರ ಪುರದ ಶ್ರೀಮಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸುವಂತೆ ಬಿನ್ನವಿಸಲಾಗಿ ಶೃಂಗೇರಿ ಜಗದ್ಗುರುಗಳವರು ಶೃಂಗೇರಿ ಪೀಠದಲ್ಲೇ ಅಧ್ಯಯನ ಮಾಡುತ್ತಿದ್ದ ನಾಗರಾಜ ಶರ್ಮ ಎಂಬ ಬ್ರಹ್ಮಚಾರಿಗೆ ಆಶೀರ್ವಾದ ಮಾಡಿ ಶ್ರೀಕ್ಷೇತ್ರ ಹರಿಹರಪುರದ ಶ್ರೀಮಠಕ್ಕೆ ಪೀಠಾಧಿಕಾರಿಯಾಗಿ ಕಳುಹಿಸಿಕೊಟ್ಟರು.
ಶೃಂಗೇರಿ ಸಮೀಪದ ಉಳವೆ ಗ್ರಾಮದ ಸದ್ಗೃಹಸ್ತ ದೈವಭಕ್ತರಾದ ಶ್ರೀಗೋಪಾಲರಾಯರು ಮತ್ತು ಶ್ರೀಮತಿ ಜಯಲಕ್ಷ್ಮೀ ದಂಪತಿ ಗಳ ಎರಡನೇ ಸುಪುತ್ರರಾಗಿ ಜುಲೈ 6, 1970ರಂದು ಜನಿಸಿದ ಶ್ರೀನಾಗರಾಜ ಶರ್ಮರವರು ಬಾಲ್ಯದಲ್ಲೇ ಆಧ್ಯಾತ್ಮಿಕತೆಯಲ್ಲಿ ಒಲವನ್ನು ಬೆಳೆಸಿಕೊಂಡರು. ನಂತರ ರಾಮಕೃಷ್ಣ ಆಶ್ರಮ ಹಾಗೂ ಶ್ರೀ ಶೃಂಗೇರಿ ಶಾರದಾ ಪೀಠದಲ್ಲಿ ಜಗದ್ಗುರುಗಳವರ ಮಾರ್ಗ ದರ್ಶನದಲ್ಲಿ ನೈಷ್ಠಿಕ ಬ್ರಹ್ಮಚರ್ಯದಿಂದ ವೇದ, ಸಂಸ್ಕೃತ, ಶಾಸ್ತ್ರಾಧ್ಯಯನವನ್ನು ಮಾಡಿದರು. ಮೇ 27, 2001ರಂದು ಇವರು 30ನೇ ವಯಸ್ಸಿನಲ್ಲಿ ಶೃಂಗೇರಿಯಲ್ಲಿ ಬ್ರಹ್ಮಚಿಂತನಾ ತತ್ಪರರಾಗಿದ್ದ ಹಿರಿಯ ವಯಸ್ಸಿನ ಪರಿವ್ರಾಜಕ ಶ್ರೀನಿತ್ಯಾನಂದ ಭಾರತೀ ಸ್ವಾಮಿಗಳವರಿಂದ ಸಂನ್ಯಾಸ ದೀಕ್ಷೆ, ಮಹಾವಾಕ್ಯೋಪದೇಶ ಪಡೆದು ಶ್ರೀ ಶ್ರೀ ಸಚ್ಚಿದಾನಂದ ಸರಸ್ವತೀ ಎಂಬ ಯೋಗ ಪಟ್ಟ ವನ್ನು ಪಡೆದರು.
ಇವರಿಗೆ ಶ್ರೀಮಠದ ಗುರುಪೀಠದಲ್ಲಿ ಪಟ್ಟಾಭಿಷೇಕವನ್ನು ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ನೆರವೇರಿಸಿ ಆಶೀರ್ವದಿಸಿದರು. ಪೀಠಾಧಿಪತಿಗಳಾದ ನಂತರ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿ ಗಳವರು ಶ್ರೀಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಎಲ್ಲೆಡೆ ಪ್ರವಾಸವನ್ನು ಮಾಡಿ ಸನಾತನ ಹಿಂದೂ ಧರ್ಮದ ಪ್ರಸಾರವನ್ನು ಮಾಡುತ್ತಾ ಆಸ್ತಿಕರನ್ನು ಅನುಗ್ರಹಿಸುತ್ತಿರುವುದು ನಮ್ಮೆಲ್ಲರ ಪುಣ್ಯವೇ ಸರಿ.
ವೇದ-ಸಂಸ್ಕೃತ ಪಾಠಶಾಲೆ ಸ್ಥಾಪನೆ, ಹಿಂದಿನ ಗುರುಗಳವರ ಅಧಿಷ್ಠಾನದ ಪುನರ್ ನಿರ್ಮಾಣ, ಭಕ್ತಾದಿಗಳ ಸೌಕರ್ಯಕ್ಕೆ ಸುಸಜ್ಜಿತ ವಸತಿಗೃಹ ನಿರ್ಮಾಣ, ಮುಷ್ಠಿ ಭಿಕ್ಷಾ ಯೋಜನೆ, ಆಧ್ಯಾತ್ಮಿಕ ಮೌಲ್ಯಗಳನ್ನು ತಿಳಿಸಲು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾಸಪತ್ರಿಕೆ ಪ್ರಕಟಣೆ, ಸುಸಜ್ಜಿತ ಗೋಶಾಲೆ ಸ್ಥಾಪನೆ, ತುಂಗಾತೀರದ ನದಿಯ ದಂಡೆಯ ಅಭಿವೃದ್ಧಿ ಹೀಗೆ ಹಲವು ಯೋಜನೆಗಳ ಜೊತೆಗೆ ಪ್ರಮುಖವಾಗಿ ಜಾತಿ-ಮತ ಬೇಧವಿಲ್ಲದೆ ಎಲ್ಲಾ ವರ್ಗದ ಭಕ್ತರಿಗೆ ರುದ್ರಾಕ್ಷಿಯೊಂದಿಗೆ ಶಿವದೀಕ್ಷೆಯನ್ನು
ನೀಡುತ್ತಿರುವುದು ಶ್ರೀಗಳವರ ಕಾರುಣ್ಯಕ್ಕೆ ಸಾಕ್ಷಿಯಾಗಿದೆ.
ಇಂತಹ ಸತ್ಕಾರ್ಯಗಳ ಜೊತೆಗೆ ಭಗವಂತನ ಪ್ರೇರಣೆಯಂತೆ ಈ ದಿವ್ಯ ಕ್ಷೇತ್ರದಲ್ಲಿ ಶ್ರೀ ಶಾರದಾಪರಮೇಶ್ವರಿ ಅಮ್ಮನವರ, ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯಗಳ ಪುನರ್ ಬೃಹತ್ ನಿರ್ಮಾಣದ ಮಹತ್ಕಾರ್ಯವನ್ನು ಸುಮಾರು ೧೨ ವರ್ಷಗಳ ಹಿಂದೆ ಆರಂಭಿಸಿದ್ದು, ಈಗ ಸುಂದರ ಶಿಲಾ ಕಲಾಕೃತಿಗಳನ್ನೊಳಗೊಂಡ ಭವ್ಯವಾದ ಶಿಲಾಮಯ ದೇವಾಲಯವು ನಿರ್ಮಾಣ ಗೊಂಡಿರುತ್ತದೆ.
ಇದೀಗ ಭಕ್ತ ಕೋಟಿಯು ಬಹುದಿನಗಳಿಂದ ನಿರೀಕ್ಷಿಸುತ್ತಿರುವ ಸುಸಮಯವು ಬಂದಿದ್ದು ಶ್ರೀ ಶುಭಕೃನ್ನಾಮ ಸಂವತ್ಸರದ ಚೈತ್ರ ಶುದ್ಧ ಚತುರ್ದಶಿಯ (ದಿನಾಂಕ 15-04-2022) ಶುಭದಿನದಂದು ಅಗಸ್ತ್ಯ ಮಹರ್ಷಿ ಕರಾರ್ಚಿತ ಶ್ರೀಲಕ್ಷ್ಮೀ ನರಸಿಂಹಸ್ವಾಮಿಗೆ ಹಾಗೂ ಶ್ರೀ ಆದಿ ಶಂಕರ ಭಗವತ್ಪಾದರು ಪ್ರತಿಷ್ಠಾಪಿಸಿರುವ ಶ್ರೀ ಶಾರದಾ ಪರಮೇಶ್ವರಿ ದೇವಿಗೆ ಪರಮಪೂಜ್ಯ ಶ್ರೀ ಶ್ರೀ ಮಹಾ ಸ್ವಾಮಿಗಳವರು ತಮ್ಮ ಅಮೃತ ಹಸ್ತದಿಂದ ಮಹಾಕುಂಭಾಭಿ ಷೇಕವನ್ನು ನೆರವೇರಿಸುವರು.
ತತ್ಸಂಬಂಧವಾಗಿ ದಿನಾಂಕ 10-04-2022 ರಿಂದ 24-04-2022ರವರೆಗೆ ಧಾರ್ಮಿಕ ಕಾರ್ಯಗಳಾದ ಗಣಪತಿ ಹೋಮ, ನವಗ್ರಹ ಮಹಾ ಯಾಗ, ಲಲಿತಾ ಹೋಮ, ಗಾಯಿತ್ರಿ ಮಹಾಯಾಗ, ಸುದರ್ಶನ ನಾರಸಿಂಹ ಮಹಾಯಾಗ, ಗುರುದತ್ತಾತ್ರೇಯ ಮಹಾ ಯಾಗ, ಕೋಟಿ ತುಳಸಿ ಅರ್ಚನೆ, ಶ್ರೀ ಲಕ್ಷ್ಮೀ ನರಸಿಂಹ ಮಹಾಯಾಗ, ಸಹಸ್ರ ಚಂಡಿಕಾ ಮಹಾಯಾಗ, ಶ್ರೀ ಆಂಜನೇಯ ಮಹಾ ಯಾಗ, ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ, ಧನ್ವಂತ್ರಿ ಮಹಾಯಾಗ, ತುಂಗಾನದಿಯಲ್ಲಿ ತೆಪ್ರೋತ್ಸವ ಹಾಗೂ ನಾಡಿನ ಪ್ರಖ್ಯಾತ ಕಲಾವಿದರುಗಳಿಂದ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿ, ಉತ್ಸಾಹ, ಸಡಗರಗಳಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವೈಭವೋಪೇತವಾಗಿ ನಡೆಯಲಿದ್ದು, ಸನಾತನ ಧರ್ಮದ ರಕ್ಷಣೆಯಲ್ಲಿನ ಶ್ರೀಮಠದ ಕಾರ್ಯ ನಾಡಿನ
ಆಸ್ತಿಕ ಬಂಧುಗಳಿಗೆ ಸಂತಸ ತಂದಿದೆ.