Thursday, 12th December 2024

ಗಿಡವಾಗಿ ಬಗ್ಗದ ಮಹಾರಾಜ, ಮರವಾಗಿ ಬಗ್ಗುವನೇ ?

ಸ್ವಗತ

ಡಾ.ದಯಾನಂದ ಲಿಂಗೇಗೌಡ

ದೇಶೀಯ ವಿಮಾನ ಸಂಚಾರದ ಅನುಭವದಿಂದಲೂ ಹೇಳುವುದಾದರೆ ಇವರಿಗೆ ಸಿಬ್ಬಂದಿಯ ಕೊರತೆಯೇನು ಇಲ್ಲ. ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿ ಚೆಕ್ ಇನ್ ಸ್ಥಳದಲ್ಲಿ ಮತ್ತು ವಿಮಾನ ವೇರುವ ಸ್ಥಳದಲ್ಲಿ ಇರುತ್ತಾರೆ. ವಿಮಾನ ಏರುವ ಸೇತುವೆಯಲ್ಲಿ ಸಿಬ್ಬಂದಿಗಳು ಕೈಚೀಲಗಳ ತಪಾಸಣೆ ನೆಡೆಸುತ್ತಾರೆ. ವಿಮಾನಕ್ಕೆ ಹೋಗುವ ಸೇತುವೆ ಮೇಲೆ ಕೈಚೀಲ ಪರಿಶೀಲಿಸುವ ಪರಿಪಾಠ ಬೇರೆ ವಿಮಾನ ಕಂಪನಿಗಳಲ್ಲಿ ಇಲ್ಲ.

ಬಹುಶಃ ಈ ಘಟನೆ ಏರ್ ಇಂಡಿಯಾ ಸಂಸ್ಥೆಯನ್ನು ಸರಕಾರ ಮಾರಾಟ ನೆಡೆಸುವಾಗ ಸಮಯದ ಆಸುಪಾಸಿನಲ್ಲಿ ನೆಡೆದಿದ್ದು . ರೋಗಿಯೊಬ್ಬರಿಗೆ ಲಿವರ್ ಕ್ಯಾನರ್ ಚಿಕಿತ್ಸೆಗೆ ಬಂದಿದ್ದರು. ಆಂತರಿಕ ವೈದ್ಯರ ಸಭೆಯಲ್ಲಿ ಈ ರೋಗಿಗೆ ಟ್ರಾ ಆರ್ಟರಿಯಲ್ ರೇಡಿಯೋ ಎಂಬೊಲೈಝಷನ್ (TARE) ಎಂಬ ಚಿಕಿತ್ಸೆ ನೀಡಲು ನಿರ್ಧರಿಸಲಾಯಿತು.

ಈ ಚಿಕಿತ್ಸೆಯಲ್ಲಿ ರೋಗಿಗೆ ಲಿವರ್ ಆಂಜಿಯೋಗ್ರಾಮ್ ಮಾಡಿ, ಸೂಕ್ಷ್ಮ ನಳಿಕೆಯನ್ನು ಯಕೃತ್ತಿನ ರಕ್ತನಾಳದಲ್ಲಿ ಇಟ್ಟು, ವಿಕಿರಣ ಸೂಸುವ ಔಷಧ ವನ್ನು (ಔಷಧದ ಹೆಸರು ೯೦) ಕೊಡಲಾಗುತ್ತದೆ. ನಲಿಕೆಯನ್ನು ಲಿವರ್‌ನ ರಕ್ತನಾಳದಲ್ಲಿ ಇಟ್ಟು ಕೊಡುವುದರಿಂದ, ಔಷಧ ಬೇರೆ ಭಾಗಕ್ಕೆ ಹೋಗದೆ, ಯಕೃತ್ತಿನಲ್ಲಿ ಮಾತ್ರ ಕೆಲಸ ಮಾಡುತ್ತದೆ. ಆದ್ದರಿಂದ ದೇಹದ ಇತರ ಭಾಗಗಳಿಗೆ ತೊಂದರೆ ಅಥವಾ ಅಡ್ಡ ಪರಿಣಾಮಗಳಾಗುವುದಿಲ್ಲ.

ಈ ಔಷಧದ ಬೆಲೆ ಆಗ ಏಳರಿಂದ ಎಂಟು ಲಕ್ಷ ರುಪಾಯಿಗಳು. ಅದು ಭಾರತದಲ್ಲಿ ಲಭ್ಯವಿಲ್ಲವಾದ್ದರಿಂದ ಕೆನಡಾ ಅಥವಾ ಸಿಂಗಾಪುರ್‌ನಿಂದ ಆಮದು ಮಾಡಿಕೊಳ್ಳಬೇಕು. ಮುಂಗಡ ಹಣ ಕೊಟ್ಟ ಮೇಲೆ ಔಷಧವನ್ನು ತಯಾರಿಸಿ ವಾರದ ಒಳಗೆ ವಿಮಾನದ ಮೂಲಕ ಕಳುಹಿಸಿ ಕೊಡುತ್ತಾರೆ. ಇದು ಈ ಔಷಧದ ವಿಶೇಷವೇನೆಂದರೆ, ವಿಕಿರಣದಿಂದ ಪ್ರತಿ ಎರಡೂವರೆ
ದಿನಕ್ಕೆ ಔಷಧಿಯ ಶಕ್ತಿ ತನ್ನಿತಾನೆ ಅರ್ಧದಷ್ಟು ಕಡಿಮೆಯಾಗುತ್ತದೆ. ಆದ್ದರಿಂದ ಈ ಔಷಧವನ್ನು ಪೂರ್ವ ನಿರ್ಧಾರಿಸಿದ ದಿನ ಕೊಡಬೇಕು. ಒಂದು ದಿನ ಹೆಚ್ಚು ಕಡಿಮೆಯಾದರೂ ಔಷಧದ ಪ್ರಮಾಣ ಕಡಿಮೆಯಾಗಿ ಪ್ರಯೋಜನಕ್ಕೆ ಬರುವುದಿಲ್ಲ.

ಆದ್ದರಿಂದ ಈ ಚಿಕಿತ್ಸೆಯಲ್ಲಿ ಪೂರ್ವ ಸಿದ್ಧತೆ ಬಹು ಮುಖ್ಯ. ಮರುಪಾವತಿ ಅವಕಾಶ ವಿಲ್ಲದ ಮುಂಗಡ ಹಣವನ್ನು ಕೊಟ್ಟು ಔಷಧಕ್ಕೆ ಆರ್ಡರ್ ಕೊಟ್ಟಿದ್ದಾಯಿತು. ಔಷಧ ಕೆನಡಾ ದೇಶವನ್ನು ಬಿಟ್ಟ ಸುದ್ದಿ ಖಚಿತ ಮಾಡಿಕೊಂಡು, ಔಷಧ ಬರುವ ದಿನ ರೋಗಿಯನ್ನು ಆಸ್ಪತ್ರೆಯಲ್ಲಿ ದಾಖಲಾತಿ ಮಾಡಿಸಿಕೊಂಡು ಅಗತ್ಯ ಸಿದ್ಧತೆ ಮಾಡಿಕೊಂಡು ಕಾಯುತ್ತಿದ್ದೆವು. ವಿಮಾನ ಮೊದಲು ದೆಹಲಿಗೆ ಬಂದು ನಂತರ ಮತ್ತೊಂದು ವಿಮಾನದಲ್ಲಿ ಕೋಲ್ಕತ್ತಾ ಬರುವುದಿತ್ತು. ವಿಮಾನ ಕೋಲ್ಕತ್ತಾ ನಗರಕ್ಕೆ ಬಂದು ಇಳಿದರೂ ವಿಮಾನದಲ್ಲಿ ಔಷಧ ವಿರಲಿಲ್ಲ.

ವಿಚಾರಿಸಲಾಗಿ ಔಷಧ ದೆಹಲಿಯಲ್ಲಿಯೇ ಉಳಿದುಕೊಂದಿರುವುದಾಗಿಯೂ, ಬೇರೆ ಏರ್ ಇಂಡಿಯಾ ವಿಮಾನ ಇಲ್ಲವಾದ್ದ
ರಿಂದ ಮರುದಿನ ಬರುವುದಾಗಿಯೂ ತಿಳಿದುಬಂದು. ಮರುದಿನದ ಉಳಿದುಕೊಳ್ಳುವ ಔಷಧ ಲೆಕ್ಕ ಹಾಕಿದಾಗ ಔಷಧ ಪ್ರಮಾಣ ಅಗತ್ಯ ಪ್ರಮಾಣದಲ್ಲಿ ಇರುವುದಿಲ್ಲ ವಾದ್ದರಿಂದ, ಔಷಧ ಕೊಟ್ಟು ಪ್ರಯೋಜನವಿಲ್ಲ ಎಂದೆನಿಸಿ ಚಿಕಿತ್ಸೆಯನ್ನು ರದ್ದುಗೊಳಿಸಲಾಯಿತು. ಎಂಟು ಲಕ್ಷ ರುಪಾಯಿ ಮೌಲ್ಯದ ಔಷಽ ಏರ್ ಇಂಡಿಯಾ ಅಧಿಕಾರಿಗಳ ಅಲಕ್ಷ್ಯದಿಂದ ನಷ್ಟವಾ ಯಿತು.

ಈ ನಷ್ಟವನ್ನು ಕೊನೆಗೆ ಔಷಧ ಕಂಪನಿ ಬರಿಸಿದರೂ, ನಷ್ಟ ನಷ್ಟವೇ. ಅಲಕ್ಷದಿಂದ ಆದ ನಷ್ಟದ ಅರಿವು ಅಥವಾ ಕಿಂಚಿತ್ತಾ ದರೂ ನಾಚಿಕೆ ಬಹುಷಃ ಏರ್ ಇಂಡಿಯಾ ಅಧಿಕಾರಿಗಳಿಗೆ ಇರಲಿಲ್ಲ. ದುರಾದೃಷ್ಟಕ್ಕೆ ಬೇರೆ ವಿಮಾನ ಕಂಪನಿಯವರಿಗೆ, ಈ ಔಷಧ ಸಾಗಿಸಲು ಪರವಾಣಿ ಇಲ್ಲವಾದ್ದರಿಂದ, ಬೇರೆ ಆಯ್ಕೆಗಳಿಲ್ಲ. ಇವರ ಅಲಕ್ಷದಿಂದ ಜನರಿಗಾಗುವ ಗಮನಕ್ಕೆ ಬಾರದ ನಷ್ಟಗಳೆಷ್ಟೋ? ಗೊತ್ತಿಲ್ಲ. ಗೊತ್ತಾಗುವುದೂ ಇಲ್ಲ.

ಕಾಲುಚಾಚಲು ಬಹಳಷ್ಟು ಸ್ಥಳಾವಕಾಶ ಹೊಂದಿದ ಉತ್ತಮ ವಿಮಾನ ಆಸನ ವ್ಯವಸ್ಥೆ ಇದ್ದರೂ, ಈ ಮೊದಲು ಜನರು ಪ್ರಯಾಣ ಮಾಡುವುದಕ್ಕೆ ಏರ್ ಇಂಡಿಯಾ ಮೊದಲ ಆಯ್ಕೆ ಆಗಿರಲಿಲ್ಲ. ಕಾರಣ ಏರ್ ಇಂಡಿಯಾ ನೀಡುವ ಸಿಬ್ಬಂದಿಯ ಸೇವೆ, ಇತರ ವಿಮಾನಗಳಿಗೆ ಹೋಲಿಸಿದರೆ ಕಳಪೆ ಎಂಬ ಭಾವನೆ ಎಲ್ಲರಲ್ಲಿ ಮೂಡಿತ್ತು. ಮೊದಲು ಏರ್ ಇಂಡಿಯಾ ದರವು ಇತರ ವಿಮಾನಗಳಿಗೆ ಹೋಲಿಸಿದರೆ ತುಟ್ಟಿಯಾಗಿತ್ತು. ಟಾಟಾ ಒಡೆತನಕ್ಕೆ ಬಂದ ನಂತರ ದರ ಸ್ಪರ್ಧಾತ್ಮಕವಾಗಿದೆ ಯಾದರೂ ಸಿಬ್ಬಂದಿಯ ನಡವಳಿಕೆ ಸುಧಾರಿಸಿಲ್ಲ.

ಒಂದು ಅಥವಾ ಎರಡು ಗಂಟೆಯ ಪ್ರಯಾಣವಾದರೆ ಸೇವೆಯ ಕುಂದು ಕೊರತೆಗಳು ಹೆಚ್ಚು ಗಮನಕ್ಕೆ ಬಾರದೆ ಇರಬಹುದು. ದೀರ್ಘ ಪ್ರಯಾಣದಲ್ಲಿ ಎಲ್ಲ ಸಣ್ಣ ಪುಟ್ಟ ಕೊರತೆಗಳು ನಿಚ್ಚಳವಾಗುತ್ತದೆ . ಇತ್ತೀಚೆಗೆ ವೈದ್ಯಕೀಯ ಸಭೆಯೊಂದರಲ್ಲಿನನ್ನ ಸಂಶೋಧನೆಯನ್ನು ಮಂಡಿಸಲು ಅಮೆರಿಕಕ್ಕೆ ಹೋಗುವ ಸಂದರ್ಭ ಬಂತು. ಸುಮಾರು ಹದಿನೆಂಟು ಗಂಟೆಗಳ ಪ್ರಯಾಣ. ಇತರ ವಿಮಾನಗಳಿಗೆ ಹೋಲಿಸಿದರೆ ಕಡಿಮೆ ದರ ಎಂಬ ಕಾರಣಕ್ಕೆ ಏರ್ ಇಂಡಿಯಾ ಪ್ರಯಾಣ ಆರಿಸಿಕೊಂಡೆ. ಸುದೀರ್ಘ ಪ್ರಯಾಣ ಮಾಡುವಾಗ ಸಮಯನ್ನು ಕಳೆಯಲು ಕಂಪ್ಯೂಟರ್ ಪರದೆಯಲ್ಲಿ ಬರುವ ಮನೋರಂಜನೆ ತುಂಬಾ ಮುಖ್ಯ. ಅಲ್ಲಿ ಇರುವ ಸಿನಿಮಾ, ಸಂಗೀತ ಸವಿಯುತ್ತಲೋ, ವಿಮಾನದ ಸಂಚರಿಸುವ ಮಾಹಿತಿ ನೋಡುತ್ತಲೋ ಅಥವಾ ಕ್ಯಾಮರಾ ಮುಖಾಂತರ ಹೊರಗಿನ ದೃಶ್ಯನನ್ನು ನೋಡುತ್ತಲೋ, ಸಮಯ ದೂಡಬಹುದು.

ಇಲ್ಲವಾದರೆ ಅಷ್ಟು ಸಮಯ ದೂಡು ವುದು ಬಹಳ ಕಷ್ಟ. ಆದರೆ ವಿಮಾನದಲ್ಲಿ ಬಹಳಷ್ಟು ಜನರ ಕಂಪ್ಯೂಟರ್ ಪರದೆ ಕೆಲಸ ಮಾಡುತ್ತಿರಲಿಲ್ಲ. ಕೆಲವು ಪರದೆಗಳು ಮಂಕಾಗಿ ಕಾಣುತ್ತಿದ್ದವು. ಕೆಲವು ಪರದೆಗಳಲ್ಲಿ ಯಾವುದನ್ನೋ ತೆರೆದರೆ ಮತ್ತಾವುದೋ
ತೆರೆದುಕೊಳ್ಳುತ್ತಿತ್ತು. ಕೇಳಿದರೆ ಸಿಬ್ಬಂದಿ ಏನೂ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬ ಉತ್ತರ. ಒಟ್ಟಿನಲ್ಲಿ ನನ್ನನ್ನೂ ಸೇರಿದಂತೆ, ಬಹಳಷ್ಟು ಜನರಿಗೆ ಸಮಯ ಕಳೆಯಲು ಆಗದೆ, ಅಸಹನೆ ಎದ್ದು ಕಾಣುತ್ತಿತ್ತು.

ಪರಿಚಾರಿಕೆಯರೂ ಅಷ್ಟೇ. ಒಂದು ನಗು ಮುಖವಿಲ್ಲ. ಅತ್ತ ಆಧುನಿಕವಲ್ಲದ ಇತ್ತ ಉತ್ತಮ ದೇಶೀಯವೂ ಅಲ್ಲದ ಮಾಸಿದ ಸಮವಸ. ಉಪಹಾರ ನೀಡಿದ ನಂತರ ಮಾಯ. ಹೆಚ್ಚಿನ ಅಗತ್ಯಗಳಿಗೆ ನಾವೇ ಉಡುಕಿಕೊಂಡು ಹೋಗಬೇಕು. ಕರೆಗಂಟೆಗೆ ಉತ್ತರವಿಲ್ಲ. ಊಟ ಮಾಡುವುದು ತಡವಾದರೆ, ನಾವೇ ಹೋಗಿ ಊಟದ ತಟ್ಟೆಯನ್ನು ಹಿಂದಿರುಗಿಸಬೇಕು. ಪ್ರಯಾಣದ ಕೊನೆಯಲ್ಲಿ ವಿಮಾನದ ಹಿಂಬದಿಯಲ್ಲಿ ಚೆಡಿದ ಕಸ, ಕಿರಿಕಿರಿ ಎನಿಸುವ ಅನಗತ್ಯ, ಅಷ್ಪಷ್ಟ ಪ್ರಕಟಣೆಗಳು, ಈ ಅಂತರ್‌ ದೇಶೀಯ ವಿಮಾನಕ್ಕಿಂತ, ಇತರೆ ಖಾಸಗಿ ದೇಶಿಯ ವಿಮಾನಗಳೇ ವಾಸಿ ಎನಿಸಿದ್ದು ಉಂಟು.

ದೇಶೀಯ ವಿಮಾನ ಸಂಚಾರದ ಅನುಭವದಿಂದಲೂ ಹೇಳುವುದಾದರೆ ಇವರಿಗೆ ಸಿಬ್ಬಂದಿಯ ಕೊರತೆಯೇನು ಇಲ್ಲ. ಅಗತ್ಯ ಕ್ಕಿಂತ ಹೆಚ್ಚಿನ ಸಿಬ್ಬಂದಿ ಚೆಕ್ ಇನ್ ಸ್ಥಳದಲ್ಲಿ ಮತ್ತು ವಿಮಾನವೇರುವ ಸ್ಥಳದಲ್ಲಿ ಇರುತ್ತಾರೆ. ವಿಮಾನ ಏರುವ ಸೇತುವೆಯಲ್ಲಿ ಸಿಬ್ಬಂದಿಗಳು ಕೈಚೀಲಗಳ ತಪಾಸಣೆ ನೆಡೆಸುತ್ತಾರೆ. ವಿಮಾನಕ್ಕೆ ಹೋಗುವ ಸೇತುವೆ ಮೇಲೆ ಕೈಚೀಲ ಪರಿಶೀಲಿಸುವ ಪರಿಪಾಠ ಬೇರೆ ವಿಮಾನ ಕಂಪನಿಗಳಲ್ಲಿ ಇಲ್ಲ.

ಅಷ್ಟೇ ಅಲ್ಲ, ಮೊದಲೇ ಕ್ಷ ಕ್ಷಕಿರಣ ತಪಾಸಣೆ ಮಾಡಿದ ಚೀಲಗಳನ್ನು ಮರು ಪರಿಶೀಲಿಸುವ ತರ್ಕ ಅರ್ಥವಾಗುವುದಿಲ್ಲ. ನನಗೆ ಅನಿಸಿದ್ದು ಹೆಚ್ಚಿನ ಸಿಬ್ಬಂದಿಗಳಿಗೆ ಕೆಲಸ ಕೊಡಲು ಈ ವ್ಯವಸ್ಥೆ ಇರಬಹುದು ಎಂದು. ಇನ್ನು ಬೆಳಿಗ್ಗೆ ಮೂರೂ ಗಂಟೆಯ ವಿಮಾನ ದಲ್ಲೂ ಅಗತ್ಯವಿರಲಿ ಇಲ್ಲದಿರಲಿ, ನಿದ್ರೆಯಲ್ಲಿರುವ ಪ್ರಯಾಣಿಕರನ್ನು ಎಬ್ಬಿಸಿ ಊಟ ಕೊಡುವ ಪದ್ಧತಿ ನೋಡಿದರೆ, ಏರ್ ಇಂಡಿಯಾದ ಹಣ ಸೋರಿಕೆಯ ಒಂದು ರೂಪ ಅರ್ಥವಾಗುತ್ತಿತ್ತು.

ಪ್ರಯಾಣಿಕರೂ ಕೂಡ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುವಾಗ, ಬೇರೆ ವಿಮಾನಗಳಲ್ಲಿ ಪಾಲಿಸುವ ಶಿಸ್ತನ್ನು ಪಾಲಿಸುವುದಿಲ್ಲ. ಎಲ್ಲರಿಗೂ ಕೇಳುವಂತೆ ಸಂಗೀತ ಹಾಕಿಕೊಳ್ಳುವ ಪ್ರಯಾಣಿಕರ ಕುರಿತು ಸಿಬ್ಬಂದಿಗಳು ತಲೆ ಕೆಡಿಸಿ ಕೊಳ್ಳುವುದಿಲ್ಲ. ಟಾಟಾ ಕಂಪನಿ ತಮ್ಮ ನೌಕರನ್ನು ಉತ್ತಮವಾಗಿ ನೋಡಿಕೊಳ್ಳುವುದಕ್ಕೆ ಪ್ರಸಿದ್ಧಿ. ಸರಕಾರಿ ನೌಕರಿ ಬಿಟ್ಟರೆ,
ಟಾಟಾ ಕಂಪನಿಯ ನೌಕರಿ ಸ್ಥಿರತೆ ಮತ್ತು ಸಿಬ್ಬಂದಿಯ ಅನುಕೂಲಗಳಿಗೆ ಪ್ರಸಿದ್ಧಿ. ಅದಕ್ಕೆ ಕೆಲವರು ತಮಷೆಗಾಗಿ ‘ಅಂಬಾನಿ ಕಂಪನಿಯಲ್ಲಿ ಹಣ ಹೊಂದಬೇಕು, ಟಾಟಾ ಕಂಪನಿಯಲ್ಲಿ ನೌಕರಿ ಮಾಡಬೇಕು’ ಎಂದು ಹೇಳುವುದು ಉಂಟು. ಟಾಟಾ ಸಮೂಹ ಸಂಸ್ಥೆ ಏರ್ ಇಂಡಿಯಾವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಒಂದು ವರ್ಷದ ಮೇಲಾದರೂ, ಈಗಲೂ ಸುಧಾರಣೆ ಕಾಣದೆ ಮೊದಲಿನಂತೆಯೇ ಕಾರ್ಯ ನಿರ್ವಹಿಸುತ್ತಿದೆ ಎನಿಸುತ್ತಿದೆ.

ಟಾಟಾ ಸಿಬ್ಬಂದಿಗಳ ಮೇಲೆ ಒತ್ತಡ ಹಾಕುತ್ತಿಲ್ಲ ಎನಿಸುತ್ತಿದೆ. ಕಾರ್ಯದಲ್ಲಿ ಇರಲಿ, ಕನಿಷ್ಠ ಸಿಬ್ಬಂದಿಯ ಸಮವಸ್ತ್ರದಲ್ಲಿಯೂ ಕೂಡ ಬದಲಾವಣೆ ತಂದಿಲ್ಲ. ಬದಲಾವಣೆ ತರಲು ಹಳೆ ಸರಕಾರೀ ನೌಕರರ ಮನಸ್ಥಿತಿ ಕಾರಣವೋ ಅಥವಾ ಟಾಟಾ ಕಂಪನಿ ಸೇವೆ ಸುಧಾರಣೆಗೆ ಮೃದು ದೋರಣೆಯೋ ಗೊತ್ತಾಗುತ್ತಿಲ್ಲ. ಒಂದುಕಡೆ ಅಮೆರಿಕವೇ ಹುಬ್ಬೇರಿಸುವಂತೆ ಟಾಟಾ ಹೊಸ
ವಿಮಾನಗಳ ಖರೀದಿ ಮೂಲಕ ಏರ್ ಇಂಡಿಯಾದಲ್ಲಿ ಹೂಡಿಕೆ ಮಾಡುತ್ತಿದ್ದರೆ, ಮತ್ತೊಂದೆಡೆ ಇದಕ್ಕೂ ಇನ್ನು ಸರಕಾರಿ ಸಂಸ್ಥೆಯಂತೆ ಕೆಲಸ ನಿರ್ವಹಿಸುತ್ತಿದೆ.

ಬದಲಾವಣೆಗೆ ಇನ್ನು ಎಷ್ಟು ದಿನ ಕಾಯಬೇಕೋ ಗೊತ್ತಿಲ್ಲ. ಉತ್ತಮ ವಿಮಾನಗಳು, ಉತ್ತಮ ಪಥ ಪರವಾನಿ, ಸಿಬ್ಬಂದಿ ಎಲ್ಲವನ್ನು ಇಟ್ಟುಕೊಂಡು ಬರಿ ಕಳಪೆ ಸೇವೆಯಿಂದ ನಷ್ಟದಿಂದ ನೆಡೆದ ಏರ್ ಇಂಡಿಯಾದಿಂದ ಕಲಿಯಬಾರದ ಪಾಠಗಳು ಬಹಳವಿದೆ. ತಮ್ಮ ಹಳೆಯ ಛಾಳಿ ಮುಂದುವರಿಸಿ ಟಾಟಾ ಸಮೂಹವನ್ನು ಬರಿಸಲಾರದ ನಷ್ಟಕ್ಕೆ ನೂಕದಿರಲಿ ಎಂದು ಮಾತ್ರ
ಆಶಿಸಬಹುದು.

ಕೊನೆ ಮಾತು: ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ? ಎಂಬ ಮಾತಿದೆ. ಹೊಸ ಮಾಲೀಕತ್ವದ ನಂತರ ಖಾಸಗಿ ಕಂಪನಿ, ಹಳೆ ಸರಕಾರಿ ಮನೋಭಾವನೆಯಿಂದ ಹಳ್ಳ ಹಿಡಿಯುತ್ತದೆಯೋ, ಅಥವಾ ಸರಕಾರೀ ನೌಕರರು ಖಾಸಗಿ ಕಂಪನಿಗಳ ನೌಕರರಂತೆ ಬದಲಾವಣೆ ಹೊಂದುತ್ತಾರೋ ಕಾದು ನೋಡಬೇಕು.