ಸಂಗತ
ಡಾ.ವಿಜಯ್ ದರಡಾ
ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಅಧಿಕಾರಕ್ಕೆ ಬಂದ ಹೊಸ ಸರಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದೆ. ಎಲ್ಲಿ ನೋಡಿದರೂ ಜನವೋ ಜನ. ಸಮಾರಂಭ ಕಿಕ್ಕಿರಿದು ತುಂಬಿತ್ತು. ಉದ್ಯಮಿಗಳು ಹಾಗೂ ಚಿತ್ರರಂಗದ ಖ್ಯಾತ ನಾಮರ ಜತೆಗೆ ಬಹಳ ದೊಡ್ಡ ಸಂಖ್ಯೆಯಲ್ಲಿ ಜನಸಾಮಾನ್ಯರೂ ಸೇರಿದ್ದರು.
ಅದಕ್ಕಿಂತ ಹೆಚ್ಚಾಗಿ ‘ಲಡ್ಕಿ ಬಹಿನ್ ’ಗಳು ಭಾಗವಹಿಸಿದ್ದರು. ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಉಪಸ್ಥಿತರಿದ್ದರು. ಸ್ವತಃ ಆಗಮಿಸಿ ಅವರು ಹೊಸ ಸರಕಾರವನ್ನು ಹುರಿದುಂಬಿಸಿದರು. ಅವರ ಜತೆಗೆ ಕೇಂದ್ರದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಇನ್ನೂ ಹಲವು
ಸಚಿವರು, 19 ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಬೇರೆ ಬೇರೆ ರಾಜಕೀಯ ಪಕ್ಷಗಳ ಪ್ರಮುಖ ನಾಯಕರು
ಪಾಲ್ಗೊಂಡಿದ್ದರು. ಈ ಗಣ್ಯಾತಿಗಣ್ಯರ ಉಪಸ್ಥಿತಿಯು ಎನ್ ಡಿಎ ಮೈತ್ರಿಕೂಟದ ಒಗ್ಗಟ್ಟು ಹಾಗೂ ಪಕ್ಷ ಸಂಘಟ ನೆಯ ಸಾಮರ್ಥ್ಯವನ್ನು ತೋರಿಸಿತು.
ಅಲ್ಲಿಂದ ಹೊರಟು ಬಂದಮೇಲೆ ನನ್ನ ತಲೆಯಲ್ಲಿ ನಾನಾ ರೀತಿಯ ವಿಶ್ಲೇಷಣೆಗಳು ಮೂಡತೊಡಗಿದವು. ಮೊದಲಿಗೆ ಕಾಂಗ್ರೆಸ್ ಮತ್ತು ಅದರ ಮೈತ್ರಿಪಕ್ಷಗಳ ಅತಿಯಾದ ಆತ್ಮವಿಶ್ವಾಸದ ಬಗ್ಗೆ ಯೋಚನೆ ಬಂತು. ಲೋಕ ಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷ ಬೇರೆಲ್ಲ ಪಕ್ಷಗಳಿಗಿಂತ ಹೆಚ್ಚು ಸೀಟು ಗಳಿಸಿತ್ತು. ಈ ಸಲದ ವಿಧಾನಸಭೆ ಚುನಾವಣೆಯಲ್ಲೂ ಹಾಗೇ ಆಗುತ್ತದೆ ಎಂಬ ಅತಿಯಾದ ನಿರೀಕ್ಷೆಯನ್ನು ಬಹುಶಃ ಕಾಂಗ್ರೆಸ್ ನಾಯಕರು ಹೊಂದಿದ್ದರು.
ಆದ್ದರಿಂದಲೇ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗುವುದಕ್ಕೂ ಮುನ್ನ ಅವರು ಬಹಳ ಆತ್ಮವಿಶ್ವಾಸ ದಿಂದ ಗೆಲುವಿನ ಬಗ್ಗೆ ಮಾತನಾಡುತ್ತಿದ್ದರು. ಯಾವುದೇ ಕಾರಣಕ್ಕೂ ಈ ಸಲ ನಾವು ಸೋಲುವುದಿಲ್ಲ ಎನ್ನು ತ್ತಿದ್ದರು. ಆದರೆ, ಫಲಿತಾಂಶ ಪ್ರಕಟವಾದಾಗ ಅವರೆಲ್ಲ ಅದುರಿಹೋದರು. ನಿರೀಕ್ಷೆ ತಲೆಕೆಳಗಾಗಿತ್ತು. ಮಹಾ ರಾಷ್ಟ್ರದ ಇತಿಹಾಸದಲ್ಲಿ ಮೊದಲ ಬಾರಿ ಕಾಂಗ್ರೆಸ್ ಪಕ್ಷವು ರಾಜ್ಯದ 36 ಜಿಲ್ಲೆಗಳ ಪೈಕಿ 21 ಜಿಲ್ಲೆಗಳಲ್ಲಿ ಒಂದೇ ಒಂದು ಕ್ಷೇತ್ರವನ್ನೂ ಗೆದ್ದಿರಲಿಲ್ಲ.
ಸೋಲಾಪುರ, ಕೊಲ್ಲಾಪುರ, ಸತಾರಾ ಮತ್ತು ಪುಣೆಯಂಥ ಪ್ರದೇಶಗಳು ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಮತ್ತು ಎನ್‌ಸಿಪಿಯ ಭದ್ರಕೋಟೆಯಾಗಿದ್ದವು. ಅವು ಕೂಡ ಈ ಸಲ ಕೈ ಬಿಟ್ಟು ಹೋದವು. ಮರಾಠವಾಡ ಮತ್ತು ವಿದರ್ಭ ದಲ್ಲಿ ಈ ಸಲ ಪವಾಡ ಸಂಭವಿಸುತ್ತದೆ ಎಂದೆಲ್ಲಾ ವ್ಯಾಖ್ಯಾನ ಮಾಡುತ್ತಿದ್ದ ಕಾಂಗ್ರೆಸ್ಸಿಗರಿಗೆ ಫಲಿತಾಂಶದ ನಂತರ ನಿರಾಸೆ ಕಾದಿತ್ತು.
ಕಾಂಗ್ರೆಸ್ಸಿಗರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾಗ ಬಿಜೆಪಿಯ ಹಿರಿಯ ನಾಯಕರೊಬ್ಬರು ನನ್ನ ಬಳಿ, “ಮರಾಠವಾಡ ಮತ್ತು ವಿದರ್ಭದ ಜನ ನಮ್ಮ ಕೈಹಿಡಿದರೆ ಖಂಡಿತ ಈ ಸಲ ನಾವೇ ಸರಕಾರ ರಚಿಸುತ್ತೇವೆ” ಎಂದು ಹೇಳಿಕೊಂಡಿ ದ್ದರು. ಕೊನೆಗೆ ಆಗಿದ್ದೂ ಅದೇ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಈ ಬಾರಿ ಸಂಘಟನೆಯ ಕೊರತೆ ಎದ್ದು ಕಾಣು ತ್ತಿತ್ತು. ಹಿರಿಯ ನಾಯಕರಾದ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆಯಂಥವರು ಕೂಡ ಕಾಂಗ್ರೆಸ್‌ನ ಹಣೆಬರಹ ಬದಲಿಸಲು ಆಗಲಿಲ್ಲ. ಕಾಂಗ್ರೆಸ್‌ನ ಅನೇಕ ಹಿರಿಯ ನಾಯಕರೇ ಸೋತು ಮನೆ ಸೇರಿದರು. ಪಕ್ಷದ ರಾಜ್ಯಾಧ್ಯಕ್ಷ ನಾನಾ ಪಟೋಲೆ ಕೆಲವೇ ಮತಗಳ ಅಂತರದಲ್ಲಿ ಗೆದ್ದು ಸೀಟು ಉಳಿಸಿಕೊಂಡರು. ಚುನಾವಣೆಯ ಸೋಲಿಗೆ ಕಾಂಗ್ರೆಸ್ ಪಕ್ಷವೀಗ ಬೇರೆ ಬೇರೆ ನೆಪಗಳನ್ನು ಹೇಳುತ್ತಿದೆ. “ಮಹಾಯುತಿ ಮೈತ್ರಿಕೂಟದವರು ಇವಿಎಂ ಗಳನ್ನು ತಿರುಚಿ ಗೆದ್ದಿದ್ದಾರೆ” ಎಂದು ಅದು ಆರೋಪಿಸುತ್ತಿದೆ.
ಅಮೆರಿಕದ ಶ್ರೀಮಂತ ಉದ್ಯಮಿ ಹಾಗೂ ಟೆಸ್ಲಾ ಕಾರು ಉತ್ಪಾದನಾ ಕಂಪನಿಯ ಮಾಲೀಕ ಎಲಾನ್ ಮಸ್ಕ್ ಅವರು
“ಇಲೆಕ್ಟ್ರಾನಿಕ್ ಮತಯಂತ್ರಗಳನ್ನು ತಿರುಚಬಹುದು” ಎಂದು ಹೇಳುವ ಮೂಲಕ ಬೆಂಕಿಗೆ ತುಪ್ಪ ಸುರಿದಿದ್ದಾರೆ. ನಿಜ, ತಂತ್ರಜ್ಞಾನದ ವಿಷಯದಲ್ಲಿ ಎಲ್ಲವೂ ಸಾಧ್ಯ ಮತ್ತು ಅನೇಕ ಸಂಗತಿಗಳು ಅಸಾಧ್ಯ. ಆದರೆ ಅದಕ್ಕೆ ಪುರಾವೆ ಗಳು ಬೇಕು. ಇವಿಎಂಗಳನ್ನು ತಿರುಚಿ ಗೆಲ್ಲಲು ಸಾಧ್ಯ ಅಥವಾ ಯಾರನ್ನಾದರೂ ಸೋಲಿಸಲು ಸಾಧ್ಯ ಎಂದು ಯಾರಾದರೂ ಸಾಬೀತು ಪಡಿಸಲಿ! ಆಗ ಒಪ್ಪೋಣ. ವಾದಕ್ಕಾಗಿ ಏನು ಬೇಕಾದರೂ ಹೇಳಬಹುದು. “ಅವರು ಜಮ್ಮು ಮತ್ತು ಕಾಶ್ಮೀರವನ್ನು ಬಿಟ್ಟುಕೊಟ್ಟು ಹರಿಯಾಣವನ್ನು ತಮಗೆ ಉಳಿಸಿಕೊಂಡರು. ಹಾಗೆಯೇ, ಜಾರ್ಖಂಡ್‌ನಲ್ಲಿ ಬೇಕಂತಲೇ ಸೋತು ಮಹಾರಾಷ್ಟ್ರವನ್ನು ಉಳಿಸಿಕೊಂಡರು” ಎಂಬಂಥ ಊಹಾಪೋಹದ ಮಾತುಗಳನ್ನೂ ಕೆಲವರು ಆಡುತ್ತಿದ್ದಾರೆ.
ಇದನ್ನೆಲ್ಲ ಕೇಳಿದ ಮೇಲೆ ನನ್ನ ಬಳಿ ಒಬ್ಬರು, “ಬಿಜೆಪಿಯವರು ಇವಿಎಂ ಅನ್ನು ತಿರುಚುವುದೇ ನಿಜವಾಗಿದ್ದಿದ್ದರೆ ಕೇರಳದ ವಯನಾಡಿನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಗೆ ಅಷ್ಟೊಂದು ದೊಡ್ಡ ಅಂತರದಲ್ಲಿ ಗೆದ್ದರು?” ಎಂದು ಕೇಳಿದರು. ಇದಕ್ಕೆ ಇನ್ನೊಬ್ಬರು ವಿಶಿಷ್ಟ ಸ್ಪಷ್ಟೀಕರಣವನ್ನೂ ನೀಡಿದರು- “ಪ್ರಾಮಾಣಿಕರು ಎಂದು ತೋರಿಸಿಕೊಳ್ಳಲು ಕೆಲವೊಮ್ಮೆ ಹೀಗೆ ಮಾಡಬೇಕಾಗುತ್ತದೆ”!
ಕಾಂಗ್ರೆಸ್‌ನವರ ಸಮಸ್ಯೆಯೇ ಇದು. ಅವರು ಇದೇ ರೀತಿಯ ಧೋರಣೆಯನ್ನು ಮುಂದುವರಿಸಿಕೊಂಡು ಹೋದರೆ ಆ ಪಕ್ಷ ಈಗ ತಲುಪಿರುವ ಸ್ಥಿತಿಯಿಂದ ಮೇಲಕ್ಕೆ ಏಳುವುದಿಲ್ಲ. ಮಹಾರಾಷ್ಟ್ರದ ವಿಷಯಕ್ಕೆ ಬಂದರೆ, ಕೇರಳದ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಅವರು ಪಕ್ಷದ ಚುನಾವಣಾ ಉಸ್ತುವಾರಿಯಾಗಿ ಆಗಮಿಸುವ ವೇಳೆಗೆ ಸಾಕಷ್ಟು ತಡವಾಗಿತ್ತು. ಅವರು ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿ, ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪ್ರಯತ್ನಿಸಿದರೂ, ಒಬ್ಬ ವ್ಯಕ್ತಿ ಒಂದಿಡೀ ಪಕ್ಷದ ಚುನಾವಣಾ ಭವಿಷ್ಯವನ್ನು ಬದಲು ಮಾಡುವುದು ಕಷ್ಟ. ಮಹಾ ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ತಳಮಟ್ಟದಲ್ಲೇ ಛಿದ್ರವಾಗಿದೆ.
ಆದರೂ ಚೆನ್ನಿತ್ತಲ ಅವರು ಪಟ್ಟ ಪರಿಶ್ರಮ ಶ್ಲಾಘನೀಯ. ಅದರ ಪರಿಣಾಮವಾಗಿಯೇ, ಬಿಜೆಪಿಯ ಪ್ರಬಲವಾದ
ರಾಜಕೀಯ ಅಲೆಯ ನಡುವೆಯೂ ಯವತ್ಮಾಲ್‌ನಲ್ಲಿ ಅನಿಲ್ ಅಲಿಯಾಸ್ ಬಾಳಾಸಾಹೇಬ್ ಮಂಗೂಲ್ಕರ್
ಹಾಗೂ ನಾಗ್ಪುರದಲ್ಲಿ ವಿಕಾಸ್ ಠಾಕ್ರೆಯಂಥ ಕೆಲ ನಾಯಕರು ಗೆಲ್ಲಲು ಸಾಧ್ಯವಾಯಿತು. ಪಕ್ಷ ಸಂಘಟನೆಯ ಬೆಂಬಲವೂ ಇದ್ದಿದ್ದರೆ ಅವರು ಇನ್ನೂ ಹೆಚ್ಚಿನ ಅಂತರದಲ್ಲಿ ಗೆಲ್ಲಬಹುದಿತ್ತು.
ಜಾತಿ ರಾಜಕೀಯ ಮತ್ತು ತಳಮಟ್ಟದಲ್ಲಿನ ಸಂಘಟನೆಯ ಕೊರತೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಾನಿ ಉಂಟು ಮಾಡು ತ್ತಿವೆ. ಹಾಗಂತ ಮಹಾಯುತಿ ಮೈತ್ರಿಕೂಟಕ್ಕೆ ಸಮಸ್ಯೆಗಳೇ ಇರಲಿಲ್ಲ ಎಂದಲ್ಲ. ಅವರೂ ನಾನಾ ಅಡೆತಡೆಗಳನ್ನು ಎದುರಿಸಿದರು. ಸೋಯಾಬೀನ್ ಮತ್ತು ಹತ್ತಿಯ ಬೆಲೆ ಕುಸಿತದ ಬಗ್ಗೆ ರೈತರು ಸಿಟ್ಟಾಗಿದ್ದರು. ಅದರ ಜತೆಗೆ ಮರಾಠ ಮೀಸಲಾತಿ ಹೋರಾಟ ಬೇರೆ. ಆದರೆ ಹಿಂದುತ್ವದ ಅಲೆಯಲ್ಲಿ ಈ ಎಲ್ಲಾ ಸಮಸ್ಯೆಗಳೂ ಕೊಚ್ಚಿ ಹೋದವು. ಬಿಜೆಪಿ ಯವರು ಈ ಬಾರಿ ‘ವೋಟ್ ಜಿಹಾದ್’ಗೆ ಪ್ರತಿಯಾಗಿ ‘ಮತಗಳ ಧರ್ಮಯುದ್ಧ’ಕ್ಕೆ ಕರೆ ನೀಡಿದ್ದರು. ‘ಏಕ್ ಹೈ ತೋ ಸೇಫ್ ಹೈ’, ‘ಬಾಟೇಂಗೇ ತೋ ಕಾಟೇಂಗೇ’ ರೀತಿಯ ಘೋಷಣೆಗಳು ಮತದಾರರ ಮನಸ್ಸನ್ನು ಗೆದ್ದವು.
ಬಿಜೆಪಿ ಮೈತ್ರಿಕೂಟದ ಪರವಾಗಿ ಕೆಲಸ ಮಾಡಿದ ಇನ್ನೊಂದು ಅಂಶವೆಂದರೆ, ‘ಮುಸ್ಲಿಮರು ಮತ್ತು ದಲಿತರು ಒಗ್ಗಟ್ಟಾಗುತ್ತಾರೆ. ಎಂದಾದರೆ ಹಿಂದೂಗಳು ಏಕೆ ಒಗ್ಗಟ್ಟಾಗಬಾರದು’ ಎಂಬ ಚಿಂತನೆ. ಇಂಥದ್ದೊಂದು ನೆರೇಟಿವ್ ಅನ್ನು ಬಿಜೆಪಿಯವರು ಜನರ ಮನಸ್ಸಿನಲ್ಲಿ ಅಚ್ಚೊತ್ತಿಸುವಲ್ಲಿ ಯಶಸ್ವಿಯಾಗಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಅದರ ಮಿತ್ರಸಂಘಟನೆಗಳು 90000 ಕಾರ್ಯಕರ್ತರನ್ನು ಸೇರಿಸಿ 22000ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದವು. ಅವರು ಹಳ್ಳಿ ಹಳ್ಳಿಗಳಲ್ಲಿ ನಡೆಸಿದ ಇಂಥ ಸಭೆಗಳು ಬಿಜೆಪಿಯ ಗೆಲುವಿಗೆ ದೊಡ್ಡ ಕೊಡುಗೆ ನೀಡಿದವು. ಈ ಎಲ್ಲ ಪ್ರಯತ್ನಗಳ ಹೊರತಾಗಿಯೂ, ಬಿಜೆಪಿಗೆ ಇಷ್ಟು ದೊಡ್ಡ ಗೆಲುವು ಲಭಿಸುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.
ಆದರೆ ಒಬ್ಬ ವ್ಯಕ್ತಿ ಮಾತ್ರ ಇಷ್ಟು ದೊಡ್ಡ ಅಂತರದ ಗೆಲುವು ನಿರೀಕ್ಷಿಸಿದ್ದರು. ಅವರೇ ದೇವೇಂದ್ರ ಸರಿತಾ ಗಾಧರ ರಾವ್ ಫಡ್ನವಿಸ್. ಅವರು “ಬಿಜೆಪಿ ಈ ಬಾರಿ ಖಂಡಿತ 135 ಸೀಟುಗಳನ್ನು ಗೆಲ್ಲುತ್ತದೆ” ಎಂದು ಹೇಳಿದ್ದರು. ಅದರಂತೆ ಬಿಜೆಪಿ 132 ಸೀಟು ಗೆದ್ದಿತು. ಶಿವಸೇನೆ 57 ಹಾಗೂ ಎನ್‌ಸಿಪಿ 41 ಸೀಟುಗಳನ್ನು ಗೆದ್ದವು. ಈ ಯಶಸ್ಸಿನ ಕ್ರೆಡಿಟ್ ಅಮಿತ್ ಶಾ ಅವರ ರಾಜಕೀಯ ಚಾಣಾಕ್ಷತೆ, ಫಡ್ನವಿಸರ ಕಠಿಣ ಪರಿಶ್ರಮ, ಚಂದ್ರಶೇಖರ ಬವಾನ್‌ಕುಲೆ ಅವರ ಸಂಘಟನಾ ಚಾತುರ್ಯ, ಏಕನಾಥ್ ಶಿಂಧೆಯವರ ಔದಾರ್ಯ ಹಾಗೂ ‘ಲಡ್ಕಿ ಬಹಿನ್’ ರೀತಿಯ ಯೋಜನೆಗಳಿಗೆ ಸಲ್ಲಬೇಕು.
ಅಜಿತ್ ಪವಾರ್ ಕೂಡ “ನನ್ನನ್ನು ನಂಬಿ, ನಾನೇ ನಿಮ್ಮ ಭವಿಷ್ಯದ ನಾಯಕ” ಎಂಬ ಸಂದೇಶವನ್ನು ಮನವರಿಕೆ
ಮಾಡಿಕೊಡುವಲ್ಲಿ ಯಶಸ್ವಿಯಾದರು. ಇವೆಲ್ಲದರ ನಡುವೆ ಮಹಾರಾಷ್ಟ್ರದಲ್ಲಿ ‘ದೇವ ಭಾವು’ ರೂಪದಲ್ಲಿ ಹೊಸ ಭರವಸೆಯೊಂದು ಉದಯವಾಗಿದೆ. ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವರ ಜತೆಗೆ ಇಬ್ಬರು ಪ್ರಬಲ ನಾಯಕರಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಇದ್ದಾರೆ.
ಫಡ್ನವಿಸ್‌ರ ಮೊದಲ ಅವಧಿಯಲ್ಲಿ ಸಮೃದ್ಧಿ ಮಹಾಮಾರ್ಗ, ಕರಾವಳಿ ರಸ್ತೆಗಳು, ಅಟಲ್ ಸೇತು, ಮೆಟ್ರೋ ಯೋಜನೆಗಳು, ಜಲ ಶಿವರ್ ಯೋಜನೆಗಳು ಮುಂತಾದ ಅನೇಕ ಯಶಸ್ವಿ ಯೋಜನೆಗಳು ಜಾರಿಗೆ ಬಂದಿದ್ದವು. ಜಲ ಶಿವರ್ ಯೋಜನೆಯು ಅನೇಕ ಹಳ್ಳಿಗಳ ನೀರಿನ ಬವಣೆಯನ್ನು ನಿವಾರಿಸಿತ್ತು. ಆದರೆ ಇನ್ನೂ ಸಾಕಷ್ಟು ಕೆಲಸಗಳು ಆಗುವುದು ಬಾಕಿಯಿದ್ದವು. ಅದರಲ್ಲೂ ವಿದರ್ಭದಂಥ ಹಿಂದುಳಿದ ಪ್ರದೇಶದಲ್ಲಿ ಬಹಳ ಸುಧಾರಣೆಯಾಗುವ ಅಗತ್ಯವಿದೆ.
ಅಲ್ಲಿ ಆಟೋಮೊಬೈಲ್ ಉದ್ದಿಮೆ ಸ್ಥಾಪನೆಯಾಗಿ, ಜತೆಗೆ ಇನ್ನಿತರ ಅಭಿವೃದ್ಧಿ ಯೋಜನೆಗಳು ಜಾರಿಗೆ ಬಂದರೆ ಒಳ್ಳೆಯದು. ಜನರು ತಮ್ಮಲ್ಲಿ ಇರಿಸಿದ ನಂಬಿಕೆ ಹಾಗೂ ತೋರಿದ ಪ್ರೀತಿಯನ್ನು ಫಡ್ನವಿಸ್ ಉಳಿಸಿಕೊಳ್ಳಬೇಕಿದೆ.
ಕಾಂಗ್ರೆಸ್ ನಾಯಕರಿಗೆ ನಾನು ಹೇಳುವುದು ಇಷ್ಟೆ: ಪ್ರತಿಯೊಂದಕ್ಕೂ ಗಾಂಧಿ ಕುಟುಂಬದ ಕಡೆಗೇ ನೋಡಬೇಡಿ.
ಇನ್ನೂ ಎಷ್ಟು ದಿನ ಕಾಂಗ್ರೆಸ್ ಪಕ್ಷ ಕೇವಲ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಯವರ ಪ್ರಯತ್ನದಿಂದಲೇ ಜೀವ
ಹಿಡಿದುಕೊಂಡು ಇರಬೇಕು? ಗಾಂಧಿ ಕುಟುಂಬವು ಕಾಂಗ್ರೆಸ್ ಪಕ್ಷದ ಶಕ್ತಿಕೇಂದ್ರ ಎಂಬುದರಲ್ಲಿ ಯಾವುದೇ
ಅನುಮಾನವಿಲ್ಲ.
ಆದರೂ ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ದೀಪ ತಾವೇ ಹಚ್ಚಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ದೇಶದಲ್ಲಿ ಕಾಂಗ್ರೆಸ್ ಪಕ್ಷ ಈ ರೀತಿಯಲ್ಲಿ ದಿನೇದಿನೆ ಅವಸಾನದತ್ತ ಸಾಗುತ್ತಿರುವುದನ್ನು ನೋಡಿದರೆ ಆತಂಕ ವಾಗುತ್ತದೆ. ಪ್ರಜಾಪ್ರಭುತ್ವಕ್ಕೆ ಇದು ಒಳ್ಳೆಯದಲ್ಲ. ಪ್ರಬಲವಾದ ವಿರೋಧ ಪಕ್ಷ ಯಾವತ್ತೂ ಈ ದೇಶಕ್ಕೆ ಬೇಕು.
ಮಹಾರಾಷ್ಟ್ರದಲ್ಲಿ ಈ ಬಾರಿ ಅಽಕೃತವಾಗಿ ವಿರೋಧ ಪಕ್ಷದ ನಾಯಕರೇ ಇರುವುದಿಲ್ಲ. ಆದರೂ ದೇವೇಂದ್ರ ಫಡ್ನವಿಸ್‌ರ ಒಂದು ಹೇಳಿಕೆ ಕೇಳಿ ನನಗೆ ಸಮಾಧಾನವಾಯಿತು.
“ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ. ವೈರತ್ವವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವುದಿಲ್ಲ. ಅದರ ಬದಲಿಗೆ ಮಹಾರಾಷ್ಟ್ರವನ್ನು ರೂಪಾಂತರಗೊಳಿಸುವ ಗುರಿಯೊಂದಿಗೆ ಕೆಲಸ ಮಾಡುತ್ತೇವೆ” ಎಂದು ಅವರು ಹೇಳಿದ್ದಾರೆ. -ಡ್ನವಿಸ್ ಮತ್ತು ಅವರ ತಂಡಕ್ಕೆ ಶುಭವಾಗಲಿ!
(ಲೇಖಕರು ಹಿರಿಯ ಪತ್ರಿಕೋದ್ಯಮಿ)
ಇದನ್ನೂ ಓದಿ: Dr Vijay Darda Column: ದೀಪಾವಳಿ ಮತ್ತು ಚುನಾವಣೆ