Thursday, 12th December 2024

ಮಹಾರಾಷ್ಟ್ರದಲ್ಲಿ ಅಕ್ಕ-ತಂಗಿಯರು ಬಿಜೆಪಿಯ ಕೈ ಹಿಡಿಯುತ್ತಾರಾ ?

ಸಂಗತ

ಡಾ.ವಿಜಯ್ ದರಡಾ

ಇಡೀ ದೇಶದ ಕಣ್ಣು ಈಗ ಜಮ್ಮು ಮತ್ತು ಕಾಶ್ಮೀರದ ಚುನಾವಣೆ ಮೇಲೆ ನೆಟ್ಟಿದೆ. ಆದರೆ, ವಿರೋಧ ಪಕ್ಷಗಳ ಕಣ್ಣು ಮಹಾರಾಷ್ಟ್ರದ ಮೇಲೆ ನೆಟ್ಟಿದೆ. ಏಕೆಂದರೆ, ಮಹಾರಾಷ್ಟ್ರದಲ್ಲಿ ಚುನಾವಣೆ ಮುಂದಕ್ಕೆ ಹೋಗಿದೆ. ಕಾಶ್ಮೀರದಲ್ಲಿ ಮತಪೆಟ್ಟಿಗೆಯಿಂದ ಶಾಂತಿಯ ಸಂದೇಶ ಬರುತ್ತದೆಯೇ? ಮಹಾರಾಷ್ಟ್ರದಲ್ಲಿ ಹೆಣ್ಮಕ್ಕಳು ಯಾರಿಗೆ ಜೈ ಎನ್ನುತ್ತಾರೆ?

ನಾನೊಬ್ಬನೇ ಅಲ್ಲ, ಎಲ್ಲರೂ, ಎಲ್ಲಾ ರಾಜಕೀಯ ಪಕ್ಷಗಳೂ ದೀಪಾವಳಿಗಿಂತ ಮೊದಲೇ ಮಹಾರಾಷ್ಟ್ರ ಮತ್ತು ಹರಿಯಾಣದ ವಿಧಾನಸಭೆಗಳಿಗೆ ಚುನಾವಣೆ ನಡೆಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದುದುಂಟು. ಇವೆರಡೂ ರಾಜ್ಯಗಳಿಗೆ ಒಟ್ಟಿಗೇ ಚುನಾವಣೆ ನಡೆಯಲಿದೆ ಎಂಬ ಲೆಕ್ಕಾಚಾರ ಏಕೆ ನಮ್ಮ ಮನದಲ್ಲಿತ್ತು ಅಂದರೆ, ಈ ಹಿಂದೆ ೨೦೦೯, ೨೦೧೪ ಮತ್ತು ೨೦೧೯ರಲ್ಲಿ ಈ ಎರಡೂ ರಾಜ್ಯಗಳಿಗೆ ಒಟ್ಟಿಗೇ ವಿಧಾನಸಭೆ ಚುನಾವಣೆ ನಡೆದಿತ್ತು. ಆದರೆ ಈ ಬಾರಿ ಚುನಾವಣಾ ಆಯೋಗ ಬೇರೆಯದೇ ರೀತಿಯಲ್ಲಿ ಯೋಚನೆ ಮಾಡಿದೆ.

ವ್ಯಾಪಕ ಮಳೆಯಿಂದಾಗಿ ಮಹಾರಾಷ್ಟ್ರದ ಕೆಲ ಭಾಗಗಳಲ್ಲಿ ಪ್ರವಾಹ ಬಂದಿದೆ. ಹೀಗಾಗಿ ಜನರು ಸಂಕಷ್ಟದಲ್ಲಿದ್ದಾರೆ. ಸರಕಾರ ನೆರೆ ಪರಿಹಾರ ಕಾರ್ಯಾ ಚರಣೆಗಳ ಬಗ್ಗೆ ಗಮನ ಹರಿಸಬೇಕು. ಹೀಗಾಗಿ ಚುನಾವಣೆ ನಡೆಸುವುದಕ್ಕೆ ಇದು ಸರಿಯಾದ ಸಮಯವಲ್ಲ ಎಂದು ಆಯೋಗಕ್ಕೆ ಅನ್ನಿಸಿರಬೇಕು. ಹಾಗೆಯೇ, ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಅಂದರೆ ಅದೊಂದು ರೀತಿಯಲ್ಲಿ ಸಂಭ್ರಮಾಚರಣೆ ಕೂಡ ಹೌದು. ಆದರೆ, ನೆರೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರು ಸಂಭ್ರಮಾಚರಣೆ ನಡೆಸುವುದು ಎಲ್ಲಿ ಬಂತು!

ಹೀಗಾಗಿ ಮಹಾರಾಷ್ಟ್ರವನ್ನು ಬಿಟ್ಟು, ಹರಿಯಾಣದ ವಿಧಾನಸಭೆ ಚುನಾವಣೆಯ ಜತೆಗೆ ಜಮ್ಮು ಮತ್ತು ಕಾಶ್ಮೀರದಲ್ಲೂ ಚುನಾವಣೆ ನಡೆಸಲು ಚುನಾ ವಣಾ ಆಯೋಗವು ನಿರ್ಧರಿಸಿದೆ. ಮಹಾರಾಷ್ಟ್ರದಲ್ಲಿ ಚುನಾವಣೆ ತುಸು ಮುಂದಕ್ಕೆ ಹೋಗಿದೆ. ಮಹಾರಾಷ್ಟ್ರದ ವಿಧಾನಸಭೆಯ ಅವಧಿ ನವೆಂಬರ್ ೨೬ಕ್ಕೆ ಮುಗಿಯಲಿದೆ. ಹರಿಯಾಣದ ವಿಧಾನಸಭೆ ಅವಧಿ ನವೆಂಬರ್ ೩ಕ್ಕೆ ಮುಗಿಯಲಿದೆ. ಬೇರೆ ಬೇರೆ ರಾಜ್ಯಗಳಲ್ಲಿ ವಿಧಾನಸಭೆಯ ಅವಧಿ ಮುಕ್ತಾಯದ ಅಂತರ ಕಡಿಮೆ ಇದ್ದಾಗ ಸಾಮಾನ್ಯವಾಗಿ ಚುನಾವಣಾ ಆಯೋಗವು ಆ ರಾಜ್ಯಗಳ ಚುನಾವಣೆಯನ್ನು ಒಟ್ಟಿಗೇ ನಡೆಸುವುದು ವಾಡಿಕೆ.
ಹೀಗಾಗಿಯೇ ಕಳೆದ ಮೂರೂ ಚುನಾವಣೆಗಳನ್ನು ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಒಟ್ಟಿಗೇ ನಡೆಸಲಾಗಿತ್ತು. ಆದರೆ, ಈ ಬಾರಿ ಚುನಾವಣಾ ಆಯೋಗ ಬೇರೆ ರೀತಿಯಲ್ಲಿ ಯೋಚಿಸಿದ್ದರಿಂದ ವಿರೋಧ ಪಕ್ಷಗಳು ಪ್ರಶ್ನೆಗಳನ್ನು ಎತ್ತುವುದು ಸಹಜವೇ ಆಗಿದೆ.

ಹಿಂದೆ ಸತತ ಮೂರು ಬಾರಿ ಒಟ್ಟಿಗೇ ವಿಧಾನಸಭೆ ಚುನಾವಣೆಗಳನ್ನು ನಡೆಸಿ, ಈ ಬಾರಿ ಏಕೆ ಬೇರೆ ಬೇರೆ ಸಲ ನಡೆಸಲು ಮುಂದಾಗಿದ್ದೀರಿ ಎಂದು ಅವು
ಕೇಳುತ್ತವೆ. ಹರಿಯಾಣದಲ್ಲೂ ಹಬ್ಬಗಳಿವೆಯಲ್ಲ! ಆದರೂ ಅಲ್ಲಿ ಈಗಲೇ ಚುನಾವಣೆ ನಡೆಸಲಾಗುತ್ತಿದೆ. ಇದಕ್ಕೆ ಚುನಾವಣಾ ಆಯೋಗವು ಭದ್ರತಾ ಕಾರಣಗಳನ್ನು ನೀಡುತ್ತದೆ. ಕೆಲ ರಾಜ್ಯಗಳಲ್ಲಿ ಒಟ್ಟಿಗೇ ಚುನಾವಣೆ ನಡೆಸಿದರೆ, ಆ ರಾಜ್ಯಗಳಲ್ಲಿನ ಕಾನೂನು-ಸುವ್ಯವಸ್ಥೆ ಸೂಕ್ಷ್ಮವಾಗಿದ್ದರೆ, ಆಗ ಅಲ್ಲಿಗೆ ಹೆಚ್ಚು ಭದ್ರತಾ ಪಡೆಗಳನ್ನು ನಿಯೋಜಿಸಬೇಕಾಗುತ್ತದೆ. ಆದರೆ ಅಷ್ಟು ಭದ್ರತಾ ಸಿಬ್ಬಂದಿ ಲಭ್ಯವಿರುವುದಿಲ್ಲ.

ಹೀಗಾಗಿ ಬೇರೆ ಬೇರೆ ಸಮಯದಲ್ಲಿ, ಹೆಚ್ಚು ಹಂತಗಳಲ್ಲಿ ಚುನಾವಣೆ ನಡೆಸುವುದು ಉಂಟು. ಆದರೆ, ಪ್ರಧಾನ ಮಂತ್ರಿಗಳು ಇಡೀ ದೇಶದಲ್ಲಿ ಒಂದೇ ಸಲ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ನಡೆಸುವ ಬಗ್ಗೆ ಮಾತನಾಡುತ್ತಾರೆ. ಮೂರ್ನಾಲ್ಕು ರಾಜ್ಯಗಳಿಗೆ ಒಟ್ಟಿಗೇ ಚುನಾವಣೆ ನಡೆಸುವುದಕ್ಕೇ ನಿಮ್ಮಲ್ಲಿ ಭದ್ರತಾ ಸಿಬ್ಬಂದಿಯ ಕೊರತೆ ಇದೆ ಅಂತಾದರೆ ಇಡೀ ದೇಶದ ಎಲ್ಲಾ ರಾಜ್ಯಗಳಿಗೂ ಒಟ್ಟಿಗೇ ಚುನಾವಣೆ ನಡೆಸಲು ಹೇಗೆ ಸಾಧ್ಯ ಎಂದು ಖಂಡಿತ ವಿರೋಧ ಪಕ್ಷಗಳು ಕೇಳುತ್ತವೆ.

ವಿರೋಧ ಪಕ್ಷಗಳು ಅತಿಹೆಚ್ಚು ಹಾಗೂ ಅತ್ಯಂತ ಗಂಭೀರವಾಗಿ ಆರೋಪ ಮಾಡುತ್ತಿರುವುದು ‘ಲಡ್ಕಿ ಬೆಹೆನ್’ ಯೋಜನೆಯ ಬಗ್ಗೆ. ಈ ಯೋಜನೆಯ ಬಗ್ಗೆ ಇಡೀ ದೇಶಕ್ಕೆ ತಿಳಿದಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಹಿಂದಿ ರಾಜ್ಯಗಳಲ್ಲಿ ಇದು ಜನಪ್ರಿಯ ಯೋಜನೆ. ಮೂಲತಃ ಅಸ್ಸಾಂ ಮುಖ್ಯ ಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಕನಸಿನ ಕೂಸಿದು. ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯರಿಗೆ ಸರಕಾರದಿಂದ ಹಣ ನೀಡುವ ಈ ಯೋಜನೆಯನ್ನು ಜಾರಿಗೆ ತಂದರು.

ನಂತರ ನಡೆದ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಹಾಗೂ ಲೋಕಸಭೆ ಚುನಾವಣೆಯಲ್ಲಿ ಇದು ಬಿಜೆಪಿಯ ನೆರವಿಗೂ ಬಂದಿತು. ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಬಿಜೆಪಿಗೆ ಹಿನ್ನಡೆ ಉಂಟಾದರೂ ಮಧ್ಯಪ್ರದೇಶದಲ್ಲಿ ಅದರ ಪ್ರದರ್ಶನ ಉತ್ತಮವಾಗಿಯೇ ಇದ್ದುದಕ್ಕೆ ಈ ಯೋಜನೆ ಕೂಡ ಕಾರಣ. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ ಮೈತ್ರಿಕೂಟದ ಪಕ್ಷಗಳು ಒಟ್ಟು ೪೮ ಲೋಕಸಭೆ ಸ್ಥಾನಗಳ ಪೈಕಿ ೩೧ ಸ್ಥಾನ ಗೆದ್ದಿದ್ದವು. ಎನ್‌ಡಿಎ ಗೆದ್ದಿದ್ದು ೧೭ ಸ್ಥಾನ ಮಾತ್ರ. ಚುನಾವಣೆಯ ಫಲಿತಾಂಶವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಕಂಡುಬಂದಿದ್ದು ಏನೆಂದರೆ,
ಮಹಾರಾಷ್ಟ್ರದ ೨೮೮ ವಿಧಾನಸಭೆ ಕ್ಷೇತ್ರಗಳ ಪೈಕಿ ೧೫೪ ಕ್ಷೇತ್ರಗಳಲ್ಲಿ ಮಹಾ ವಿಕಾಸ ಅಘಾಡಿ ಮೈತ್ರಿಕೂಟ ಮುನ್ನಡೆ ಸಾಧಿಸಿತ್ತು.

ಅದರಲ್ಲಿ ಕಾಂಗ್ರೆಸ್ ಪಕ್ಷ ೬೩ ಕ್ಷೇತ್ರಗಳಲ್ಲಿ, ಶಿವಸೇನೆ (ಉದ್ಧವ್ ಠಾಕ್ರೆ ಬಣ) ೫೭ ಕ್ಷೇತ್ರಗಳಲ್ಲಿ ಹಾಗೂ ಎನ್‌ಸಿಪಿ (ಶರದ್ ಪವಾರ್ ಬಣ) ೩೪ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದವು. ಎನ್‌ಡಿಎ ಮುನ್ನಡೆ ಸಾಧಿಸಿದ ೧೨೭ ಕ್ಷೇತ್ರಗಳ ಪೈಕಿ ಬಿಜೆಪಿ ೮೦ ಕ್ಷೇತ್ರಗಳಲ್ಲಿ, ಶಿವಸೇನೆ (ಶಿಂಧೆ ಬಣ) ೩೭ ಕ್ಷೇತ್ರಗಳಲ್ಲಿ ಹಾಗೂ ಅಜಿತ್ ಪವಾರ್ ಅವರ ಎನ್‌ಸಿಪಿ ಕೇವಲ ೬ ಕ್ಷೇತ್ರಗಳಲ್ಲಿ ಮುಂದಿದ್ದವು. ಇದು ಲೋಕಸಭೆ ಚುನಾವಣೆಯಲ್ಲಿ ಕಂಡ ಸನ್ನಿವೇಶ. ಆದರೆ, ಲೋಕಸಭೆ
ಚುನಾವಣೆಗೂ ವಿಧಾನಸಭೆ ಚುನಾವಣೆಗೂ ವ್ಯತ್ಯಾಸವಿದೆ ಎಂಬುದು ನನಗೆ ಗೊತ್ತು. ಈ ಎರಡೂ ಚುನಾವಣೆಗಳಲ್ಲಿ ಮತದಾರರು ಬೇರೆ ಬೇರೆ ರೀತಿ ಯೋಚಿಸುತ್ತಾರೆ. ಇದಕ್ಕೆ ಈ ಹಿಂದಿನ ಸಾಕಷ್ಟು ನಿದರ್ಶನಗಳನ್ನು ನೀಡಬಹುದು.

ಕುತೂಹಲಕರ ಸಂಗತಿಯೆಂದರೆ, ಕಳೆದ ಮೂರು ಬಾರಿ ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ವಿಧಾನಸಭೆ ಚುನಾವಣೆಗಳನ್ನು ಲೋಕಸಭೆ ಚುನಾವಣೆಯ ಬಳಿಕ ಒಟ್ಟಿಗೇ ನಡೆಸಿದಾಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ರಾಜಕೀಯ ಪಕ್ಷಕ್ಕೇ ಹೆಚ್ಚು ಅನುಕೂಲವಾಗಿತ್ತು. ಈ ಬಾರಿ ಎನ್‌ಡಿಎ ಅಧಿಕಾರದಲ್ಲಿದೆ. ಆದರೆ, ಬಿಜೆಪಿಗೆ ಸ್ವಂತ ಬಹುಮತ ಇಲ್ಲ. ಹೀಗಾಗಿ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆದಾಗ ಏನಾಗುತ್ತದೆ ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಹೀಗಾಗಿಯೇ, ಬಿಜೆಪಿಯವರು ಮಹಾರಾಷ್ಟ್ರದಲ್ಲೂ ಮಧ್ಯಪ್ರದೇಶದ ಲಡ್ಕಿ ಬೆಹೆನ್ ಯೋಜನೆಯನ್ನು ಜಾರಿಗೊಳಿಸಿ ಮತದಾರರ ಮನ ಗೆಲ್ಲಲು ಯತ್ನಿಸುತ್ತಿದ್ದಾರೆ. ಈ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸುವುದಕ್ಕೆ ಆಗಸ್ಟ್ ೩೧ ಕೊನೆಯ ದಿನ. ಆದರೆ, ಆಗಸ್ಟ್ ೧೪ರ ವೇಳೆಗೇ ೧.೬೨ ಕೋಟಿ ಮಹಿಳೆಯರು ಯೋಜನೆಗೆ ಹೆಸರು ನೋಂದಾಯಿಸಿಕೊಂಡಿದ್ದರು.

ಅವರ ಪೈಕಿ ೮೦ ಲಕ್ಷ ಮಹಿಳೆಯರಿಗೆ ೩೦೦೦ ರುಪಾಯಿ ಹಣ ಪಾವತಿಯೂ ಆಗಿದೆ. ಪ್ರತಿ ತಿಂಗಳು ೧,೫೦೦ ರುಪಾಯಿ ನೀಡುವ ಈ ಯೋಜನೆಯ ಎರಡು ತಿಂಗಳ ಹಣವನ್ನು ಅವರ ಖಾತೆಗೆ ಒಟ್ಟಿಗೇ ಮುಂಗಡವಾಗಿ ಜಮೆ ಮಾಡಲಾಗಿದೆ. ವಿರೋಧ ಪಕ್ಷಗಳಿಗೆ ಅನುಮಾನ ಬಂದಿರುವುದೇ ಇಲ್ಲಿ. ಲಡ್ಕಿ ಬೆಹೆನ್ ಯೋಜನೆಯ ಹಣವನ್ನು ಹೆಚ್ಚು ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಿದರೆ ಚುನಾವಣೆಯಲ್ಲಿ ಹೆಚ್ಚು ಅನುಕೂಲವಾಗುತ್ತದೆ ಎಂಬ ಕಾರಣದಿಂದಲೇ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರಕಾರ ಚುನಾವಣಾ ಆಯೋಗದ ಮೇಲೆ ಪ್ರಭಾವ ಬೀರಿ ಮಹಾರಾಷ್ಟ್ರದ ಚುನಾವಣೆ ಯನ್ನು ತಡ ಮಾಡುತ್ತಿದೆ ಎಂದು ಅವು ಆರೋಪಿಸುತ್ತಿವೆ.

ಆದರೆ, ನಿಜವಾದ ಪ್ರಶ್ನೆಯಿರುವುದು ಏನೆಂದರೆ, ಈ ಯೋಜನೆಯಿಂದ ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಅನುಕೂಲವಾಗುತ್ತ ದೆಯೇ ಎಂಬುದು. ಏಕೆಂದರೆ, ಕೇಂದ್ರ ಸರಕಾರವು ಲೋಕಸಭೆ ಚುನಾವಣೆಗೂ ಮೊದಲು ಇಡೀ ದೇಶದ ೮೦ ಕೋಟಿ ಜನರಿಗೆ ಉಚಿತವಾಗಿ ಪಡಿತರ ನೀಡುತ್ತಿತ್ತು. ಅದರಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಯಿತೇ? ಹೀಗಾಗಿ ಮಹಾರಾಷ್ಟ್ರದಲ್ಲಿ ಲಡ್ಕಿ ಬೆಹೆನ್ ಯೋಜನೆಯಿಂದ ಲಾಭವಾಗುತ್ತದೆಯೋ ಇಲ್ಲವೋ ಎಂಬುದು ಸದ್ಯಕ್ಕೆ ಪ್ರಶ್ನಾರ್ಹವೇ ಆಗಿದೆ.

ಈಗ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆಗೆ ಬರೋಣ. ೨೦೧೪ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆದಿಲ್ಲ. ಕಳೆದ ಬಾರಿ ಚುನಾವಣೆ ನಡೆದಾಗ ಜಮ್ಮು ಮತ್ತು ಕಾಶ್ಮೀರ ರಾಜ್ಯವಾಗಿತ್ತು. ಅದರಲ್ಲಿ ೮೭ ವಿಧಾನಸಭೆ ಕ್ಷೇತ್ರಗಳಿದ್ದವು. ಅವುಗಳ ಪೈಕಿ ೪ ಕ್ಷೇತ್ರ
ಲಡಾಕ್‌ನಲ್ಲಿತ್ತು. ಲಡಾಕ್ ಕೂಡ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಭಾಗವಾಗಿತ್ತು. ಆದರೆ, ಈಗ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಎರಡೂ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿವೆ. ಇವುಗಳ ನಡುವೆ ವ್ಯತ್ಯಾಸಗಳಿವೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ೯೦ ವಿಧಾನಸಭಾ
ಕ್ಷೇತ್ರಗಳನ್ನು ರಚಿಸಲಾಗಿದೆ.

ಕ್ಷೇತ್ರ ಪುನರ್ ವಿಂಗಡಣೆಯ ವೇಳೆ ಜಮ್ಮು ಪ್ರದೇಶಕ್ಕೆ ೬ ಕ್ಷೇತ್ರಗಳು ಹೆಚ್ಚುವರಿಯಾಗಿ ಲಭಿಸಿವೆ. ಆದರೆ, ಕಾಶ್ಮೀರಿ ಕಣಿವೆಗೆ ಕೇವಲ ೧ ಹೆಚ್ಚುವರಿ
ಕ್ಷೇತ್ರವನ್ನು ನೀಡಲಾಗಿದೆ. ವಿಧಾನಸಭೆಗೆ ರಾಜ್ಯಪಾಲರು ಐವರು ಸದಸ್ಯರನ್ನು ನಾಮನಿರ್ದೇಶನ ಮಾಡುತ್ತಾರೆ. ೨೦೧೯ರಲ್ಲಿ ಜಮ್ಮು ಮತ್ತು ಕಾಶ್ಮೀರ ಕ್ಕಿದ್ದ ವಿಶೇಷ ಸ್ಥಾನಮಾನವನ್ನು ಸಂವಿಧಾನದ ೩೭೦ನೇ ವಿಽಯನ್ನು ರದ್ದುಪಡಿಸುವ ಮೂಲಕ ಹಿಂಪಡೆಯಲಾಯಿತು. ನಂತರದ ಐದು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಲ್ಲಿ ಹೊಸ ಸೂರ್ಯೋದಯವಾಗಿದೆ.

ಪ್ರದೇಶದಲ್ಲಿ ಅಭಿವೃದ್ಧಿಯ ಚಟುವಟಿಕೆಗಳು ಹೆಚ್ಚಾಗಿವೆ. ಅದು ನೆರೆಯ ಪಾಕಿಸ್ತಾನದ ಕಣ್ಣನ್ನು ಕೆಂಪಾಗಿಸಿದೆ. ಹೀಗಾಗಿ ಪಾಕಿಸ್ತಾನವು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸಿದೆ. ಅವರನ್ನು ಹಿಮ್ಮೆಟ್ಟಿಸಲು ನಮ್ಮ ಸೇನಾಪಡೆಯ ಯೋಧರು ಶಕ್ತಿಮೀರಿ ಯತ್ನಿಸುತ್ತಿದ್ದಾರೆ. ಭಯೋತ್ಪಾದಕರು ಸತ್ತ ಸುದ್ದಿಗಳಷ್ಟೇ ಮಾಧ್ಯಮದಲ್ಲಿ ಹೆಚ್ಚು ಪ್ರಚಾರ ಪಡೆಯುತ್ತಿವೆ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾಪಡೆಗಳ ಸಾಕಷ್ಟು ಅಽಕಾರಿಗಳು ಹಾಗೂ ಸೈನಿಕರೂ ಹುತಾತ್ಮರಾಗುತ್ತಿದ್ದಾರೆ. ಇದು ಹೆಚ್ಚು ಸುದ್ದಿಯಾಗುತ್ತಿಲ್ಲ. ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಪಡೆಗಳ ಮಾಜಿ ಮುಖ್ಯಸ್ಥ ಎಸ್ .ಪಿ.ವೈದ್ ಅವರ ಪ್ರಕಾರ ಕಾಶ್ಮೀರಿ ಕಣಿವೆಗೆ ಪಾಕಿಸ್ತಾನದಿಂದ ೬೦೦ಕ್ಕೂ ಹೆಚ್ಚು ಭಯೋತ್ಪಾದಕರು ನುಸುಳಿದ್ದಾರೆ.

ಅವರನ್ನು ನಮ್ಮ ಸೇನಾಪಡೆಗಳು ನೋಡಿಕೊಳ್ಳುತ್ತವೆ ಬಿಡಿ. ಆದರೆ ನಿಜವಾದ ಪ್ರಶ್ನೆ ಏನೆಂದರೆ- ‘ಕಾಶ್ಮೀರಿ ಕಣಿವೆಯ ಜನರು ಭಯೋತ್ಪಾದಕರನ್ನು ಹೇಗೆ ನೋಡಿಕೊಳ್ಳುತ್ತಾರೆ?’ ಜಮ್ಮು ಮತ್ತು ಕಾಶ್ಮೀರದಲ್ಲಿ ಆಗುತ್ತಿರುವ ಅಭಿವೃದ್ಧಿ, ಇಷ್ಟು ದಿನ ಇದ್ದ ರಾಷ್ಟ್ರಪತಿ ಆಳ್ವಿಕೆ ಮುಗಿದು ಈಗ ಚುನಾವಣೆ ನಡೆಯುತ್ತಿರುವುದು, ಜನರಿಗೆ ಲಭಿಸುತ್ತಿರುವ ಉದ್ಯೋಗಾವಕಾಶಗಳು ಮತ್ತು ಕಣಿವೆಯಲ್ಲಿ ಹೆಚ್ಚುತ್ತಿರುವ ಬಂಡವಾಳ ಹೂಡಿಕೆ ಇವುಗಳನ್ನೆಲ್ಲ ಗಮನಿಸಿದರೆ ಕಾಶ್ಮೀರಕ್ಕೆ ಈಗ ತೆರೆದು ಕೊಂಡಿರುವುದು ಸುವರ್ಣಾವಕಾಶವಲ್ಲದೆ ಬೇರೇನೂ ಅಲ್ಲ. ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಜನರ ಕೈಲಿದೆ.

(ಲೇಖಕರು ಹಿರಿಯ ಪತ್ರಿಕೋದ್ಯಮಿ)