Friday, 13th December 2024

ಗಾಂಧೀಜಿ ಬದುಕಿನ ಸುತ್ತ ವಿಧಿಯ ಆಟ !

ಗಾಂಧಿಗಿರಿ

ಮಲ್ಲಿಕಾರ್ಜುನ ಹೆಗ್ಗಳಗಿ

ವಾಸ್ತವಿಕವಾಗಿ ಗಾಂಧೀಜಿಯವರ ಪರಿಸ್ಥಿತಿಯು ಬಹಳ ಸೂಕ್ಷ್ಮವಾಗಿತ್ತು. ಬಹಳ ಬಳಲಿದರೂ ಅವರಲ್ಲಿ ತುಂಬಿದ್ದ ಅದಮ್ಯ ಶ್ರದ್ಧೆ, ಛಲ ಅವರನ್ನು
ಮುನ್ನಡೆಸುತ್ತಿತ್ತು. ಬ್ರಿಟಿಷ್ ಅಧಿಕಾರಿಗಳು ನೀಡಿದ್ದ ಗ್ರಹಿಕೆಯ ವರದಿ ದಂಡಿ ಯಾತ್ರೆಗೆ ನಿಜಕ್ಕೂ ಬಹುದೊಡ್ಡ ವರವಾಗಿ ಪರಿಣಮಿಸಿತು.

‘ಗಾಂಧಿ ಸಾವಿಗೆ ಹೆದರುವರಾಗಿರಲಿಲ್ಲ, ತಾನು ನಂಬಿದ ತತ್ವಕ್ಕಾಗಿ ಸಾಯಲು ದೃಢವಾಗಿ ಸಿದ್ಧನಾದ ಮನುಷ್ಯ ಮಾತ್ರ ಗಾಂಧಿಯಾಗಬಲ್ಲ’ ಎಂದು ಅವರ ಪರಮಶಿಷ್ಯ ವಿನೋಬಾ ಭಾವೆ ಅನೇಕ ಕಡೆ ಉಲ್ಲೇಖಿಸಿದ್ದಾರೆ. ಆದರೆ ಗಾಂಧೀಜಿಯವರ ಬದುಕನ್ನು ಸುತ್ತುವರಿದಿದ್ದ ಸಾವು ಎಂಬ ವಿಧಿಯ ಆಟ ತುಂಬಾ ವಿಚಿತ್ರವಾದದ್ದು. ಅಂಥ ಮೂರು ಹೃದಯ ಕಲಕುವ ಸಂಗತಿಗಳು ಇಲ್ಲಿವೆ.

ಗಾಂಽಜಿಯವರ ನೇತೃತ್ವದಲ್ಲಿ ಮಾರ್ಚ್ 12, 1930ರಿಂದ ಏಪ್ರಿಲ್ 6 ರವರೆಗೆ 24 ದಿನಗಳ ಉಪ್ಪಿನ ಸತ್ಯಾಗ್ರಹ ದಂಡಿ ಯಾತ್ರೆ ನಡೆಯುತ್ತಿತ್ತು, ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ 78 ಕಾರ್ಯಕರ್ತರಲ್ಲಿ ಗಾಂಧೀಜಿಯವರೇ ಅತ್ಯಂತ ಹಿರಿಯರು. ಆಗ ಅವರಿಗೆ 61 ವರ್ಷ ವಯಸ್ಸಾ ಗಿತ್ತು. ಉಳಿದವರೆಲ್ಲ 30 ವರ್ಷದ ಒಳಗಿನವರಾಗಿದ್ದರು. ಆ ದಿನಗಳಲ್ಲಿ ಗಾಂಧೀಜಿಯವರಿಗೆ ಬಿಪಿ ತೊಂದರೆ ಕಾಣುತ್ತಿತ್ತು. ಸುಮಾರು 240 ಮೈಲು ದೂರ  ವಿದ್ದ ದಂಡಿ ಯಾತ್ರೆಗೆ ಗಾಂಧೀಜಿ ನಡೆಯಬೇಕಾಗಿತ್ತು. ಅವರಿಗೆ ತೊಂದರೆಯಾದರೆ, ಮುನ್ನಡೆಯಲು ಕುದುರೆ ಸವಾರಿ ವ್ಯವಸ್ಥೆ ಕೂಡ ಮಾಡಲಾ ಗಿತ್ತು. ಆದರೆ, ಯಾತ್ರೆಯ ಉದ್ದಕ್ಕೂ ಕುದರೆ ಇದ್ದರೂ ಗಾಂಧೀಜಿ ಬಳಸಲಿಲ್ಲ.

ಬ್ರಿಟಿಷ್ ಅಧಿಕಾರಿಗಳು ಗಾಂಧೀಜಿ ಅವರ ಪಾದ ಯಾತ್ರೆಯನ್ನು ತಡೆಯಬಹುದಾಗಿತ್ತು. ಅವರನ್ನು ಬಂಧಿಸಿ ಜೈಲಿಗೂ ಕಳಿಸುವ ಶಕ್ತಿಯಿತ್ತು. ಇದಾವುದನ್ನು ಸರಕಾರ ಯಾಕೆ ಮಾಡಲಿಲ್ಲವೆಂದರೆ, ಇಬ್ಬರು ಬ್ರಿಟಿಷ್ ಅಧಿಕಾರಿಗಳು ಸರಕಾರಕ್ಕೆ ಪತ್ರ ಬರೆದು ಗಾಂಧೀಜಿ ಆರೋಗ್ಯ ಸರಿ ಇಲ್ಲ,
ಅವರು ವಿಪರೀತ ಬಿಪಿಯಿಂದ ಬಳಲುತ್ತಿದ್ದಾರೆ. ಅವರು ಯಾವುದೇ ಗಳಿಗೆಯಲ್ಲಿ ವಿಧಿವಶರಾಗಬಹುದು. ಅವರನ್ನು ಬಂಧಿಸುವ ಅವಶ್ಯಕತೆ ಇಲ್ಲ ಎಂದು ಲಿಖಿತ ವರದಿ ನೀಡಿದ್ದರು. ವಾಸ್ತವಿಕವಾಗಿ ಗಾಂಧೀಜಿಯವರ ಪರಿಸ್ಥಿತಿಯು ಬಹಳ ಸೂಕ್ಷ್ಮವಾಗಿತ್ತು. ಬಹಳ ಬಳಲಿದರೂ ಅವರಲ್ಲಿ
ತುಂಬಿದ್ದ ಅದಮ್ಯ ಶ್ರದ್ಧೆ, ಛಲ ಅವರನ್ನು ಮುನ್ನಡೆಸುತ್ತಿತ್ತು. ಬ್ರಿಟಿಷ್ ಅಧಿಕಾರಿಗಳು ನೀಡಿದ್ದ ಗ್ರಹಿಕೆಯ ವರದಿ ದಂಡಿಯಾತ್ರೆಗೆ ನಿಜಕ್ಕೂ ಬಹುದೊಡ್ಡ ವರವಾಗಿ ಪರಿಣಮಿಸಿತು.

ಮಧ್ಯದಲ್ಲಿ ಗಾಂಧೀಜಿಯವರನ್ನು ತಡೆಯದೇ ದಂಡಿಯಾತ್ರೆ ಯಶಸ್ವಿಯಾಯಿತು. ಗಾಂಧೀಜಿ ಎಪ್ರಿಲ್ ೬ ರಂದು ದಂಡಿಯಲ್ಲಿ ಮುಸುಕಿನಲ್ಲಿ
ತಮ್ಮ ಕೈಯಲ್ಲಿ ಒಂದು ಹಿಡಿ ಉಪ್ಪು ಹಿಡಿದು ಎತ್ತಿ ಬ್ರಿಟಿಷರ ಉಪ್ಪಿನ ಕಾನೂನು ಭಂಗ ಮಾಡಿದರು. ಇದು ಜಗತ್ತಿನ ತುಂಬಾ ಇದು ಪ್ರಮುಖ ಸುದ್ದಿ ಆಯಿತು. ಎಲ್ಲಕ್ಕಿಂತಲೂ ಮುಖ್ಯವಾಗಿ ಇದು ಭಾರತದಾದ್ಯಂತ ಪ್ರಮುಖ ಚಳವಳಿಯಾಗಿ ಬೆಳೆಯಿತು.

ದಂಡಿಯಾತ್ರೆಯಿಂದ ಕುಪಿತಗೊಂಡ ಬ್ರಿಟಿಷ್ ಸರಕಾರ ವರದಿ ನೀಡಿದ್ದ ಅಧಿಕಾರಿಗಳಿಗೆ ಬ್ರಿಟಿಷ್ ಆಡಳಿತ ನೋಟಿಸು ನೀಡಿತು. ವಿವರಣೆ ಕೊಡಲು ಈ ಅಧಿಕಾರಿಗಳು ತುಂಬಾ ಪೇಚಾಡಬೇಕಾಯಿತು. ಕೊನೆಗೆ ಆ ಅಧಿಕಾರಿಗಳನ್ನು ಇಂಗ್ಲೆಂಡಿಗೆ ವಾಪಸ್ ಕರೆಸಿಕೊಳ್ಳಲಾಯಿತು.

ಎರಡನೆಯ ಘಟನೆ: ಗಾಂಧೀಜಿ ಹಾಗೂ ಕಸ್ತೂರ ಬಾ ಅವರನ್ನು 1944 ರಲ್ಲಿ ಪುಣೆ ಆಗ ಖಾನ್ ಜೈಲಿನಲ್ಲಿಯೇ ಇಡಲಾಗಿತ್ತು. ಆಗ ಗಾಂಧೀಜಿಯ ವರ ಆರೋಗ್ಯ ತೀರ ಕ್ಷೀಣಿಸಿತ್ತು. ಆಗ ಮತ್ತೆ ಗಾಂಧೀಜಿ ಯಾವುದೇ ಗಳಿಗೆಯಲ್ಲಿ ಅಸುನೀಗಬಹುದು ಎಂದು ಬ್ರಿಟಿಷ್ ಸರಕಾರ ಭಾವಿಸಿ ಅವರ ಅಂತ್ಯಸಂಸ್ಕಾರಕ್ಕೆ ಜೈಲಿನಲ್ಲಿ ರಹಸ್ಯವಾಗಿ ವ್ಯವಸ್ಥೆ ಮಾಡಿತ್ತು. ಇದಕ್ಕಾಗಿ ಗಂಧದಕಟ್ಟಿಗೆ ತಂದು ಸಂಗ್ರಹಿಸಿ ಇಡಲಾಗಿತ್ತು. ವಿಽಯ ವಿಚಿತ್ರ ಆಟ, ಕಸ್ತೂರ್ ಬಾ ಹಠಾತ್ತನೆ ನಿಧನ ಹೊಂದಿದರು. ಗಾಂಧೀಜಿಯ ಚಿತೆಗೆ ಎಂದು ತಂದಿದ್ದ ಗಂಧದ ಕಟ್ಟಿಗೆ ಬಳಸಿ ಕಸ್ತೂರ್ ಬಾ ಸಂಸ್ಕಾರ
ನಡೆಸಲಾಯಿತು.

ಮುರನೇ ಘಟನೆ: ಭಾರತದ ಸ್ವಾತಂತ್ರ್ಯ ನಂತರ ಸರಕಾರದೊಳಗಿರುವವರ ಮತ್ತು ಸರಕಾರದೊಳಗೆ ಸೇರದೆ ರಚನಾತ್ಮಕ ಕೆಲಸದಲ್ಲಿ ಮುಂದುವರಿದವರ ನಡುವೆ ಒಂದು ಸಂವಾದ ಏರ್ಪಡಿಸಬೇಕು ಎಂಬುದು ಗಾಂಧೀಜಿಯವರ ಚಿಂತನೆಯಾಗಿತ್ತು .ಅದಕ್ಕಾಗಿ ಅವರು ೧೯೪೮ ಫೆಬ್ರವರಿ ೨ರಂದು ಸೇವಾ ಗ್ರಾಮದಲ್ಲಿ ಸಭೆ ಕರೆದಿದ್ದರು. ಪ್ರಧಾನಿ ನೆಹರು, ರಾಜೇಂದ್ರ ಪ್ರಸಾದ್, ವಿನೋಬಾ ಮುಂತಾದ ಗಣ್ಯರನ್ನು ಸಭೆಗೆ ಆಹ್ವಾನಿಸಲಾಗಿತ್ತು. ಆದರೆ ಜನವರಿ ೩೦ರಂದು ಗಾಂಽಜಿಯವರ ಹತ್ಯೆ ನಡೆಯಿತು. ಕೊನೆಗೆ ಅವರು ಕರೆದ ಸಭೆ ಅವರ ನುಡಿ ನಮನ ಸಭೆಯಾಗಿ
ಮಾರ್ಪಟ್ಟದ್ದು ವಿಧಿಯ ಕ್ರೂರ ಆಟ.

ಗಾಂಧಿ ಹೋದರು: ನಮಗೀಗ ದಿಕ್ಕು ತೋರುವವರು ಯಾರು? ಎಂದು ವಿಷಯ ಮಾರ್ಪಾಡು ಮಾಡಿ ನುಡಿ ನಮನ ಸಭೆ ನಡೆಸಲಾಯಿತು. ಡಾ ರಾಜೇಂದ್ರ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ನೆಹರು, ಸಿ ರಾಜಗೋಪಾಲಾಚಾರಿ ಗಾಂಧೀಜಿಯವರ ಪುತ್ರ ದೇವದಾಸ್ ಗಾಂಧಿ, ಕರ್ನಾಟಕದ
ಆರ್‌ಆರ್ ದಿವಾಕರ್ ಒಳಗೊಂಡಂತೆ ಸುಮಾರು ೩೦೦ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.