Saturday, 14th December 2024

ಮಹಿಷನಗರಿಯ ದೀಪಗಳ ಹಾದಿಯಲ್ಲಿ…

ಯಶೋ ಬೆಳಗು

ಯಶೋಮತಿ ಬೆಳಗೆರೆ

ನವ ಅಂದರೆ ನವೀನ, ಹೊಸತು, ಆರಂಭ ಅನ್ನುವ ಅರ್ಥದ ಜತೆಗೆ ಒಂಭತ್ತು ಅನ್ನುವ ಅರ್ಥವೂ ಕೂಡುತ್ತದೆ. ಸಂಖ್ಯೆಗಳಲ್ಲಿರುವ ಒಂದರಿಂದ ಒಂಭತ್ತು ಏಕಾಂಕಗಳು, ನವಧಾನ್ಯ, ನವರತ್ನ, ನವಗ್ರಹ, ನವರಂಧ್ರ, ನವಮಾಸ, ನವಶಕ್ತಿ…. ಆಶ್ಚರ್ಯವೆಂದರೆ ನವರಾತ್ರಿಯ ಸಮಯದಲ್ಲಿ ಈ ಸಲದ ನನ್ನ ಈ ಅಂಕಣ ಬರಹವೂ ಕೂಡ ಒಂಭತ್ತನೆಯದ್ದಾಗಿರುವುದು ಎಂಥಾ coincidence!

ನವರಾತ್ರಿ ಅಂದಕೂಡಲೇ ನಮಗೆಲ್ಲ ನೆನಪಿಗೆ ಬರುವುದು ಅಶ್ವಯುಜ ಮಾಸದ ಶರದೃತುವಿನಲ್ಲಿ, ನವಶಕ್ತಿಯ ರನ್ನು ಆರಾಧಿಸುವ ಶರನ್ನವರಾತ್ರಿ ಮಾತ್ರ. ಆದರೆ ವರ್ಷದಲ್ಲಿ ಋತುಗಳಿಗನುಗುಣವಾಗಿ ನಾಲ್ಕು ನವರಾತ್ರಿ ಗಳನ್ನು ಆಚರಿಸಲಾಗುತ್ತದೆ. ಚೈತ್ರ ನವರಾತ್ರಿ ಆಷಾಡ ನವರಾತ್ರಿ, ಶರನ್ನವರಾತ್ರಿ ಹಾಗೂಮಾಘನವರಾತ್ರಿ.

ಗಮನಿಸಿ ನೋಡಿ: ವರ್ಷಪೂರ್ತಿ ಕಾಲಕ್ಕೆ  ತಕ್ಕಂತೆ ನಮ್ಮೆಲ್ಲರ ಆಹಾರ ಶೈಲಿಗಳೂ ಬದಲಾಗುತ್ತಿರುತ್ತವೆ. ಚಳಿ, ಗಾಳಿ ಹಾಗೂ ಮಳೆಗಾಲದಲ್ಲಿ ಹೆಚ್ಚು ಶಾಖೋತ್ಪನ್ನದ ಆಹಾರಗಳನ್ನೂ, ಬೇಸಿಗೆಕಾಲದಲ್ಲಿ ತಂಪಾಗಿರುವ ಆಹಾರವನ್ನೂ ರೂಢಿಸಿಕೊಳ್ಳುತ್ತೇವೆ ನಾವೆಲ್ಲ. ಜೀರ್ಣಕ್ರಿಯೆಯಗುವ ಅಸಮತೋಲನವನ್ನು ಸರಿಪಡಿಸಿ ಕೊಂಡು ಹಾಗೂ ಹವಾಮಾನದಲ್ಲಾಗುವ ಏರಿಳಿತಗಳ ಪ್ರಭಾವ ಹೆಚ್ಚಾಗಿ ಹೆಣ್ಣುಮಕ್ಕಳನ್ನು ಮಾನಸಿಕವಾಗಿ ನಲುಗಿಸುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವ ವೈeನಿಕ ದೃಷ್ಟಿಯಿಂದ ನಮ್ಮ ಪೂರ್ವಜರು ಋತು ಬದಲಾವಣೆಯ ಆರಂಭದಲ್ಲಿ ಒಂಭತ್ತು ದಿನಗಳ ಕಾಲ ಉಪವಾಸ ಹಾಗೂ ಅಲ್ಪಾಹಾರ ಸೇವನೆಯ ಮೂಲಕ ಶರೀರದ ಸಮತೋಲನವನ್ನು ರಕ್ಷಿಸಿಕೊಳ್ಳುವ ತಂತ್ರವನ್ನು ಹುಡುಕಿಕೊಂಡರು.

ಪೌರಾಣಿಕವಾಗಿ, ಐತಿಹಾಸಿಕವಾಗಿ, ಹಿಂದೂ ಸಂಸ್ಕೃತಿಯ ಪ್ರತೀಕವಾಗಿ, ವೈಭವದ ಸಂಕೇತವಾಗಿ ಆಚರಿಸುವ ಹಬ್ಬವಾದ ನವರಾತ್ರಿಯಲ್ಲಿ ಶಕ್ತಿ ಸ್ವರೂಪಿಣಿಯಾದ ದೇವಿಯ ಒಂಭತ್ತು ಅವತಾರ ಗಳನ್ನು ಭಕ್ತಿಪೂರ್ವಕವಾಗಿ ದಿನಕ್ಕೊಂದರಂತೆ ಆಚರಿಸುತ್ತಾ, ಪರಂಪರೆಯನ್ನು ಉಳಿಸಿ ಬೆಳೆಸು ತ್ತಿರುವ ನಮ್ಮ ಇಂದಿನ ಶ್ರೀಗಂಧದ ನಾಡಾದ ಮೈಸೂರಿನ ದಸರ ಅಂದಕೂಡಲೇ ನೆನಪಾಗುವುದು ಸಹಸ್ರಾರು ವಿದ್ಯುತ್ ದೀಪಗಳಿಂದ ಅಲಂಕೃತ ಗೊಂಡು ಬಂಗಾರ ವರ್ಣದಲ್ಲಿ ಕಂಗೊಳಿಸುವ ಅರಮನೆ ಹಾಗೂ ವಿಶಾಲವಾದ ಸಾಲು ಸಾಲು ರಸ್ತೆಗಳು.

ಬೆಳಕಿನ ಹಾದಿಯಲ್ಲಿ ಒಂದಷ್ಟು ದೂರ ಸುಮ್ಮನೇ ನಡೆಯುವುದೇ ಎಂಥಾ ದಿವ್ಯ ಅನುಭವ. ಅರಮನೆಗಳ ನಾಡಾದ ಮೈಸೂರಿನಲ್ಲಿ ಸುಮಾರು
ಇಪ್ಪತ್ತೆರಡು ಅರಮನೆಗಳಿವೆ ಎನ್ನುವ ವಿಷಯ ಸಾಕಷ್ಟು ಜನರಿಗೆ ತಿಳಿದೇ ಇಲ್ಲ. ಕೆಲವು ಪಾಳುಬಿದ್ದಿವೆ, ಕೆಲವು ವಸ್ತುಸಂಗ್ರಹಾಲಯವಾಗಿವೆ, ಇನ್ನು ಕೆಲವು ಐಷಾರಾಮಿ ಹೊಟೇಲುಗಳಾಗಿ, ಪರಿವರ್ತಿತಗೊಂ ಡಿವೆ.

ಸುಮಾರು ಹದಿನಾಲ್ಕನೇ ಶತಮಾನದಲ್ಲಿ ಕಟ್ಟಿದ್ದ ಅರಮನೆಗೆ 1638ರಲ್ಲಿ ಸಿಡಿಲು ಬಡಿದ ಕಾರಣ ಅರಮನೆಯ ಸ್ವಲ್ಪ ಭಾಗ ಶಿಥಿಲಗೊಳ್ಳುತ್ತದೆ. ಅದನ್ನು ಸರಿಪಡಿಸಿದರೂ ಸಹ ಹೆಚ್ಚಿನ ಕಾಲ ಉಳಿಯದೇ ಹೋದಾಗ ಅದನ್ನು ಸಂಪೂರ್ಣ ಕೆಡವಿ ಅದೇ ಜಾಗದಲ್ಲಿ 1803ರಲ್ಲಿ ಮತ್ತೊಂದು ಅರಮನೆಯನ್ನು ಕಟ್ಟಲಾಗುತ್ತದೆ. ಆದರೆ ಅದೇನು ದುರ್ದೈವವೋ ನಾಲ್ವಡಿ ಕೃಷ್ಣರಾಜ ಒಡೆಯರ ಸಹೋದರಿಯಾದ ಜಯಲಕ್ಷ್ಮೀಯವರ ವಿವಾಹದ ಸಮಯದಲ್ಲಿ ಪುನಃ ಬೆಂಕಿಗೆ ಆಹುತಿಯಾಗುತ್ತದೆ ನೂತನ ಅರಮನೆ. ಆಗ ತಾತ್ಕಾಲಿಕವಾಗಿ ಸಮೀಪದಲ್ಲಿದ್ದ ಜಗನ್ಮೋಹನ ಅರಮನೆಗೆ ಸ್ಥಳಾಂತರ ಗೊಂಡ ನಂತರ ಅಂದಿನ ಮಹಾರಾಣಿಯಾಗಿದ್ದ ಕೆಂಪ ನಂಜಮ್ಮಣ್ಣಿಯವರು ಬ್ರಿಟೀಷ್ ಇಂಜಿನಿಯರ್ ಆಂಡ್ರಿ ಎರಿವಿನ್ಸ್‌ರನ್ನು ನೇಮಿಸಿ 1912ರಲ್ಲಿ ನೂತನ ಶೈಲಿಯಲ್ಲಿ ಮತ್ತೊಮ್ಮೆ ಅರಮನೆಯನ್ನು ನಿರ್ಮಿಸುತ್ತಾರೆ.

ಅದೇ ಇಂದಿನ  ಪ್ರಮುಖ ಆಕರ್ಷಣೀಯ ಅರಮನೆಯಾದ ಅಂಬಾ ವಿಲಾಸ ಅರಮನೆ. ಮೈಸೂರು ಸಂಸ್ಥಾನವನ್ನು ಸುಮಾರು ಇಪ್ಪತ್ತೇಳು ಒಡೆಯರ್ ವಂಶಸ್ಥರು ಆಳ್ವಿಕೆ ನಡೆಸಿzರೆಂಬ ಇತಿಹಾಸವಿರುವ ಈ ಒಡೆಯರ್‌ರ ಮೂಲ ಎಲ್ಲಿಯದು? ಎಂದು ಹುಡುಕುತ್ತಾ ಹೊರಟಾಗ ದೊರೆತ ಮಾಹಿತಿ 1399ರಲ್ಲಿ ಉತ್ತರದ ದ್ವಾರಕೆಯಿಂದ ಬಂದ ಯದುರಾಯ ಮೈಸೂರು ಸಂಸ್ಥಾನದ ಮೂಲ ಪುರುಷ. ಯಾದವೀ ಕಲಹದ ನಂತರ ಅವನತಿಗೊಂಡು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿಹೋದ ದ್ವಾರಕೆಯನ್ನು ಕಂಡ ಕೃಷ್ಣ, ದೇವಿ ಪಾರ್ವತಿಯ ಬಳಿ ತನ್ನ ವಂಶಸ್ಥರು ದಕ್ಷಿಣದ ಯದುಶೈಲದಲ್ಲಿ (ಈಗಿನ ಮೇಲುಕೋಟೆ) ರಾಜ್ಯ ಸ್ಥಾಪನೆ ಮಾಡಿ ಪ್ರಗತಿಗೆ ಬರಬೇಕೆಂದು ಕೇಳಿಕೊಂಡಾಗ ಕೃಷ್ಣನ ಇಚ್ಛೆಯಂತೆ ಪಾರ್ವತಿಯು ಕೃಷ್ಣನ ವಂಶಜ ನನ್ನು ದ್ವಾರಕೆಯಿಂದ ಚಾಮುಂಡಿಯ ಮಡಿಲಿಗೆ ತಂದಾಗ ಅಲ್ಲಿಂದ ಆರಂಭಗೊಂಡಿದ್ದೇ ಮೈಸೂರು ಸಂಸ್ಥಾನ ಅನ್ನುವ ಮಾತಿದೆ.

ಆದರೆ ಇತಿಹಾಸತಜ್ಞರ ಸಂಶೋಧನೆಯ ಪ್ರಕಾರ ೧೩೨೭ರಲ್ಲಿ ಮೊಘಲರ ದಾಳಿಯಿಂದ ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಳೇಬೀಡು
ಆಕ್ರಮಿತಗೊಂಡ ಸಂದರ್ಭದಲ್ಲಿ ಹೊಯ್ಸಳ ವಂಶಸ್ಥರು ಮೇಲುಕೋಟೆಯ ಸಮೀಪದ ತೊಣ್ಣೂರು(ಈಗಿನ ತೊಂಡನೂರು) ಪ್ರಾಂತ್ಯಕ್ಕೆ ವಲಸೆ ಹೋಗಿ ವಿಜಯನಗರದ ಅರಸರಿಂದ ನೇಮಿಸಲ್ಪಟ್ಟ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾ ನೆಲೆಗೊಳ್ಳುತ್ತಾರೆ.

ಆಗ ಮೈಸೂರಿನ ಸಣ್ಣ ಪ್ರಾಂತ್ಯದ ಅರಸನಾಗಿದ್ದ ಚಾಮರಾಜನ ಅಕಾಲಿಕ ಮರಣದಿಂದಾಗಿ ಉಂಟಾದ ಅವಕಾಶವನ್ನು ದುರುಪಯೋಗಪಡಿಸಿಳ್ಳಲು ಹವಣಿಸುತ್ತಿದ್ದಾಗ ಅವನನ್ನು ಕೊಂದು, ಮಹಾರಾಣಿ ದೇವಾ ಜಮ್ಮಣ್ಣಿ ಹಾಗೂ ಯುವರಾಣಿಯಾಗಿದ್ದ ಚಿಕ್ಕ ದೇವರಸಿಯನ್ನು ರಕ್ಷಣೆ ಮಾಡುತ್ತಾನೆ. ಗಂಡು ಮಕ್ಕಳಿಲ್ಲದ ಕಾರಣ ದೇವಾಜಮ್ಮಣ್ಣಿ ತನ್ನ ಮಗಳಾದ ಚಿಕ್ಕದೇವರಸಿಯನ್ನು ಯದುರಾಯನಿಗೇ ಕೊಟ್ಟು ವಿವಾಹ ಮಾಡಿಕೊಡುತ್ತಾರೆ. ಯದು ರಾಯ ತನ್ನ ಸಹೋದರನಾದ ಕೃಷ್ಣರಾಯನೊಂದಿಗೆ ಮೈಸೂರು ರಾಜ್ಯವನ್ನು ವಿಸ್ತರಿಸುತ್ತಾನೆ. ಎಲ್ಲವೂ ಒಂದು ಹಂತಕ್ಕೆ ಬಂದಾಗ, ಮಾರನಾಯಕನ ನಿವಾರಣೆಗೆ ಸಹಕರಿಸಿದ  ದೇವರಸಯ್ಯ ಹಾಗೂ ನಾರಾಣಯ್ಯರ ಜತೆಗೆ ಭವಿಷ್ಯಕ್ಕೆ ದಾರಿ ತೋರಿದ ಜಂಗಮ ಸ್ವಾಮಿಯನ್ನೂ ಕರೆದು ಬೆಲೆಬಾಳುವ ಉಡುಗೊರೆಗಳನ್ನಿತ್ತು ಸನ್ಮಾನ ಮಾಡುತ್ತಾನೆ. ಆ ಸಂದರ್ಭದಲ್ಲಿ ಜಂಗಮ ಸ್ವಾಮಿಯು ಯದುರಾಯನಿಗೆ ಕಾವಿಧ್ವಜವನ್ನು ಕೊಟ್ಟು ಮುಂದೆ ಈ ವಂಶದಲ್ಲಿ ಹುಟ್ಟುವ ಮಕ್ಕಳಿಗೆ ಒಡೆಯರ್ ಎಂದು ನಾಮಕರಣ ಮಾಡುವಂತೆ ಆದೇಶಿಸುತ್ತಾರೆ.

ಆದರೆ ಮದುವೆಯಾಗಿ ಸುಮಾರು ಒಂಭತ್ತು ವರ್ಷಗಳಾದರೂ ಯದುರಾಯ ದಂಪತಿಗೆ ಮಕ್ಕಳಾಗುವುದೇ ಇಲ್ಲ. ಆಗ ದೇವರಲ್ಲಿ ಮೊರೆ ಹೋದ ನಂತರ ಎರಡು ಗಂಡು ಸಂತಾನವಾಗುತ್ತದೆ. ಹಿರಿಯ ಬೆಟ್ಟದ ಚಾಮರಾಜ ಹಾಗೂ ಚಾಮರಾಜ ಎಂಬ ಹೆಸರಿನ ಜತೆಗೆ ಮೊತ್ತ ಮೊದಲ ಬಾರಿಗೆ ಒಡೆಯರ್ ಎಂಬ ಹೆಸರು ಬೆಳಕಿಗೆ ಬರುತ್ತದೆ. ಮುಂದೆ ಹಿರಿಯ ಬೆಟ್ಟದ ಚಾಮರಾಜ ಒಡೆಯರ್‌ಗೆ ಪಟ್ಟ ಕಟ್ಟಿದ ದಿನವೇ ಯದುರಾಯ ಕೊನೆಯುಸಿರೆಳೆಯುತ್ತಾನೆ.

ಹೈದರ್‌ಅಲಿ ಹಾಗೂ ಟಿಪ್ಪು ಸುಲ್ತಾನರನ್ನು ಹೊರತುಪಡಿಸಿ ಇಂದಿಗೂ ಮೈಸೂರಿನ ಒಡೆಯರ್ ರಾಜಮನೆತನ ಮುಂದುವರಿಕೆಯ ಭಾಗ ವಾಗಿ ನಮ್ಮೊಂದಿಗಿದ್ದಾರೆ ಯದುವೀರ ಒಡೆಯರ್! ನವರಾತ್ರಿಯ ಆಚರಣೆ ನೇಪಾಳವೂ ಸೇರಿದಂತೆ ದೇಶದ ವಿವಿಧೆಡೆಗಳಲ್ಲಿದೆ. ಆದರೆ ಗೊಂಬೆಹಬ್ಬ ಮಾತ್ರ
ಮೊದಲೆಲ್ಲ ಕೇವಲ ಮೈಸೂರಿಗೆ ಮಾತ್ರ ಸೀಮಿತವಾಗಿತ್ತು. ಈಗೀಗ ಬೆಂಗಳೂರಿನಲ್ಲೂ ಕಾಣಬಹುದು. ಗೊಂಬೆಗಳಿಗೆ ಅದರಲ್ಲೂ ಮರದಗೊಂಬೆಗಳಿಗೆ ಪ್ರಸಿದ್ಧಿಯಾದ ಗೊಂಬೆಗಳ ನಾಡು ಚೆನ್ನಪಟ್ಟಣದಲ್ಲಿ ತಯಾರಾಗುವ ಗೊಂಬೆಗಳನ್ನು ತಂದು ಅಲಂಕರಿಸಿ ಪಟ್ಟಕ್ಕೇರಿಸಿ, ವಿವಿಧ ಬಗೆಯ ಭಕ್ಷ್ಯಾಹಾರ ಗಳನ್ನು ತಯಾರಿಸಿ ನೈವೇದ್ಯ ಮಾಡುತ್ತ ಗೌರವದ ಪ್ರತೀಕವಾಗಿ ಅರಮನೆ ಗಳಲ್ಲಿ ನಡೆಯುತ್ತಿದ್ದ ರಾಜರ ದರ್ಬಾರನ್ನು ಗೊಂಬೆಗಳ ಮೂಲಕ ಮನೆಮನೆ ಯಲ್ಲೂ ಇಂದಿಗೂ ಕಾಣಬಹುದು. ಇಂದು ಕರುನಾಡಿನ ಪ್ರತಿಷ್ಠೆಯಾಗಿ ಕಂಗೊಳಿಸುತ್ತಿರುವ ದಸರಾ ಹಬ್ಬ ಮೊದಲು ಆಚರಣೆ ಗೆ ಬಂದದ್ದು
ವಿಜಯನಗರದಲ್ಲಿ.

ನಂತರ ಅದು ಮೈಸೂರಿನಲ್ಲಿ ಆಚರಣೆಗೆ ಬರುತ್ತದಾದರೂ ದಸರಾ ಅಂದ ಕೂಡಲೇ ಎಲ್ಲರಿಗೂ ನೆನಪಾಗುವುದು ಮೊದಲಿಗೆ ಮೈಸೂರೇ! ಆದರೆ ನವರಾತ್ರಿಗೆ ದಸರಾ ಎಂಬ ಹೆಸರೇಕೆ? ಚೈತ್ರ ನವರಾತ್ರಿಯ ಒಂಭತ್ತನೇ ದಿನದಲ್ಲಿ ಹುಟ್ಟಿದ ಶ್ರೀ ರಾಮಚಂದ್ರನು, ಸೀತೆಯನ್ನು ರಕ್ಷಿಸಲು ದಶಕಂಠನಾ
ದ ರಾವಣನನ್ನು ಹತ್ಯೆಮಾಡಿದ್ದ ಕಾರಣವಾಗಿ ದಶಹರ ಎಂಬುದು ದಸರಾ ಆಗಿ ಪ್ರಚಲಿತಗೊಂಡಿದೆ.

ಇನ್ನು ನಾಲ್ಕುನೂರು ವರ್ಷಗಳ ಇತಿಹಾಸವಿರುವ ಮೈಸೂರು ದಸರದ ಮತ್ತೊಂದು ಮಹತ್ವದ ಆಕರ್ಷಣೆ ಯಾದ ಏಳುನೂರೈವತ್ತು ಕೇಜಿಯ ರತ್ನಖಚಿತ ಚಿನ್ನದ ಅಂಬಾರಿ ಮೊದಲಿದ್ದದ್ದು ಮಹಾರಾಷ್ಟ್ರದ ದೇವಗಿರಿ ಯಲ್ಲಿ. ದೇವಗಿರಿ ಸಂಸ್ಥಾನದ ಅವನತಿಯ ನಂತರ ದೇವಗಿರಿಯ ರಾಜ,
ಕಂಪಿಲದ ರಾಜನಾಗಿದ್ದ ಮುಮ್ಮಡಿ ಸಿಂಗ ನಾಯಕನಿಗೆ ಹಸ್ತಾಂತರಿಸಿ ಅದನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿಕೊಳ್ಳುತ್ತಾನೆ. ಆದರೆ ಮುಮ್ಮಡಿ ಸಿಂಗ ನಾಯಕನು ವಿದೇಶೀಯರ ದಾಳಿಗೆ ಹೆದರಿ ಅದನ್ನು ಬಳ್ಳಾರಿಯ ಬಳಿಯ ರಾಮದುರ್ಗದ ಕೋಟೆಯಲ್ಲಿ ಮುಚ್ಚಿಟ್ಟು ಬಿಡುತ್ತಾನೆ. ನಂತರ ಸುಮಾರು ಹದಿನಾಲ್ಕನೆಯ ಶತಮಾನದಲ್ಲಿ ಮುಮ್ಮಡಿ ಸಿಂಗನಾಯಕನ ಪುತ್ರ ಕಂಪಿಲ ರಾಯ ರಾಜ್ಯವನ್ನು ವಿಸ್ತರಿಸಿದ ಸಮಯದಲ್ಲಿ ಕೊಪ್ಪಳದ ಕಮ್ಮಟ ದುರ್ಗವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ದುರ್ಗಾ ದೇವಿಯನ್ನು ಸ್ಥಾಪಿಸಿ ಅಂಬಾರಿಗೆ ಪೂಜೆಯನ್ನು ಮಾಡುತ್ತಿರುತ್ತಾನೆ ಎನ್ನುವುದು
ಇತಿಹಾಸದ ಪುಸ್ತಕಗಳಲ್ಲಿ ದಾಖಲಾಗಿದೆ.

ಕ್ರಿ.ಶ.1327ರಲ್ಲಿ ದೆಹಲಿಯ ಸುಲ್ತಾನರ ದಾಳಿಗೆ ಸಿಕ್ಕ ಕಂಪಿಲ ರಾಜ್ಯ ಸಂಪೂರ್ಣ ನಾಶವಾಗಿ ಕಂಪಿಲ ರಾಯ ದಾರುಣವಾಗಿ ಸಾವನ್ನಪ್ಪುತ್ತಾನೆ. ಆ ಸಮಯದಲ್ಲಿ ಅರಮನೆಯ ಭಂಡಾರ ರಕ್ಷಕರಾಗಿದ್ದ ಹಕ್ಕಬುಕ್ಕರು ಅಂಬಾರಿಯನ್ನು ಹುತ್ತವೊಂದರಲ್ಲಿ ಮುಚ್ಚಿಟ್ಟು ಅಲ್ಲಿಂದ ಕಣ್ಮರೆಯಾಗುತ್ತಾರೆ. ಕ್ರಿ.ಶ. ೧೩೩೬ರ ವೇಳೆಗೆ ದೆಹಲಿಯ ಸುಲ್ತಾನರ ಅವನತಿಯ ನಂತರ ಪುನಃ ರಾಜ್ಯವನ್ನು ಸ್ಥಾಪಿಸುವುದಕ್ಕೆ ಹಕ್ಕಬುಕ್ಕರು ಮುಂದಾಗಿ ಆನೆಗುಂದಿಯಲ್ಲಿ ವಿಜಯನಗರದ ಸ್ಥಾಪನೆ ಮಾಡಿ, ಅಂಬಾರಿಯನ್ನು ಅಲ್ಲಿಗೆ ಸ್ಥಳಾಂತರ ಮಾಡುತ್ತಾರೆ.

ಸಂಗಮ, ಸೌಳವ, ತುಳುವ ಹಾಗೂ ಅರವೀಡು ವಂಶಗಳು ವಿಜಯನಗರ ಸಾಮ್ರಾಜ್ಯವನ್ನು ಆಳ್ವಿಕೆ ಮಾಡುತ್ತಾ ಅಂಬಾರಿಯನ್ನು ಜೋಪಾನ
ಮಾಡಿರುತ್ತಾರೆ. ಆದರೆ ನಂತರ ವಿದೇಶೀಯರ ದಾಳಿಯಿಂದ ರಕ್ಷಿಸಲು ಆಂಧ್ರದ ಪೆನುಗೊಂಡಕ್ಕೆ ಸ್ಥಳಾಂತರಗೊಂಡು ಅಲ್ಲಿಂದ ಶ್ರೀರಂಗಪಟ್ಟಣ
ತಲುಪುತ್ತದೆ. ಕೊನೆಯದಾಗಿ ಮೈಸೂರಿನಲ್ಲಿ ಸ್ಥಿರವಾಗಿ ನೆಲೆಯೂರಿದ್ದು ಯದುವಂಶಜರು ಅದನ್ನು ಸಂರಕ್ಷಣೆ ಮಾಡಿಕೊಂಡು ಬರುತ್ತಿದ್ದಾರೆ. ಮೈಸೂರಿನ ಅರಸರು ಅಂಬಾರಿಯಲ್ಲಿ ಕೂತು ಪ್ರಜೆಗಳಿಗೆ ದರ್ಶನ ನೀಡುತ್ತಿದ್ದರು. 1974ರಲ್ಲಿ ಜಯಚಾಮರಾಜೇಂದ್ರ ಒಡೆಯರ್‌ರ ನಿಧನದ ನಂತರ ನಾಡ ದೇವಿಯಾದ ಚಾಮುಂಡೇಶ್ವರಿಯನ್ನು ಕೂರಿಸಿ ಮೆರವಣಿಗೆ ಮಾಡುತ್ತಿದ್ದಾರೆ ಇಂದಿಗೂ.

ಈ ಬಾರಿಯ ಅಂಬಾರಿಯಲ್ಲಿ ಅರ್ಜುನನ ಬದಲಿಗೆ ಅಭಿಮನ್ಯು ಎಂಬ ಗಜರಾಜನ ಬೆನ್ನೇರಲಿದ್ದಾಳೆ ತಾಯಿ ಚಾಮುಂಡಿ. ನವ ರಾತ್ರಿಯ ಪ್ರತಿ ದಿನಕ್ಕೂ ವಿಶೇಷವಾದ ಹಿನ್ನೆಲೆಯಿದೆ. ಚಂಡಮುಂಡರೆಂಬ ರಾಕ್ಷಸರನ್ನು ವಧಿಸಿದ್ದರಿಂದಾಗಿ ಚಾಮುಂಡಾ ಎಂಬ ಹೆಸರಿನಿಂದ ಪ್ರಸಿದ್ಧಳಾಗಿರುವ ಬೆಟ್ಟದ ತಾಯಿ ಚಾಮುಂಡಿ, ಒಡೆಯರ್ ವಂಶದ ಆರಾಧ್ಯ ದೈವವಾಗಿ ನಾಡಿನ ಅಧಿದೇವತೆಯಾಗಿರುವ ಅಷ್ಟಭುಜಧಾರಿಯಾದ ಚಾಮುಂಡೇಶ್ವರಿಯ ಮೂಲಸ್ಥಾಪನೆ ಮಾಡಿದ್ದು ಮಾರ್ಕಂಡೇಯ ಋಷಿ. ಮೊದಲಿಗೆ ಪ್ರಾಣಿ ಬಲಿ, ಮಾನವ ಬಲಿಯನ್ನು ನೀಡುತ್ತಿದ್ದ ದೇವಿಗೆ ೧೮ನೇ ಶತಮಾನದಲ್ಲಿ ಅದಕ್ಕೆ ಕಡಿವಾಣ ಬಿದ್ದು ಈಗ ಕೇವಲ ಫಲ, ಪುಷ್ಪಗಳ ನೈವೇದ್ಯ ಮಾತ್ರ ನಡೆಯುತ್ತಿದೆ.

ದೇವಾಲಯಕ್ಕೆ ಹೊಯ್ಸಳ, ವಿಜಯನಗರ ಹಾಗೂ ಮೈಸೂರು ಅರಸರು ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಇಂದಿನ ಮೈಸೂರಿಗೆ ಹಿಂದೆ ಮಹಿಷೂರು, ಮಹಿಷಪುರ, ಮಹಿಷನಾಡು ಮಾಹಿಷ್ಮತಿ ಎಂದು ಹೆಸರು ಬರಲು ಕಾರಣ ಅಲ್ಲಿನ ಕಶ್ಯಪ ಋಷಿಯ ಮೊಮ್ಮಗನಾದ, ಮಹಿಷಿಯ ಮಗನಾದ ಮಹಿಷ ಎಂಬ ಅಸುರ. ಎಲ್ಲ ಅಸುರರಂತೆ ಮಹಿಷನೂ ಅಮರತ್ವದ ಬಯಕೆಯಿಂದಾಗಿ ಉಗ್ರ ತಪಸ್ಸು ಮಾಡಿ ಈ ಭೂಮಿಯ ಮೇಲಿರುವ ಯಾವುದೇ ಪ್ರಾಣಿ ಹಾಗೂ ಮನುಷ್ಯನಿಂದ ಸಾವು ಬರದಂತೆ ವರವನ್ನು ಪಡೆದು ದೇವಾನುದೇವತೆಗಳಿಗೆಲ್ಲ ತೊಂದರೆ ಕೊಡುವಾಗ ದುರ್ಗೆಯು ಸಿಂಹವಾಹಿನಿಯಾಗಿ ಬಂದು ಮಹಿಷನನ್ನು ವಧಿಸಿ ಮಹಿಷಾಸುರ ಮರ್ಧಿನಿಯಾದ ಕತೆ ಎಲ್ಲರಿಗೂ ಗೊತ್ತಿರುವಂಥದ್ದೇ.

ಪಾಂಡವರು ವನವಾಸಕ್ಕೆ ತೆರಳುವಾಗ ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲ ಬನ್ನಿಮರದೊಳಗೆ ಅವಿತಿಟ್ಟು ವನವಾಸ, ಅಜ್ಞಾತವಾಸಗಳಿಂದ ಮರಳಿ ಬಂದು ಅದೇ
ಶಸಾಸಗಳನ್ನು ತೆಗೆದುಕೊಂಡು ಕೌರವರೊಡನೆ ಯುದ್ಧವಾಡಿ ಜಯ ಗಳಿಸಿದರು ಹೀಗಾಗಿ ಒಂಭತ್ತನೆಯ ದಿನ ಆಯುಧಪೂಜೆಯನ್ನೂ ಹಾಗೂ
ಹತ್ತನೇ ದಿನ ವಿಜಯದ ಸಂಕೇತವಾಗಿ ವಿಜಯದಶಮಿಯನ್ನೂ, ಆಚರಿಸುವ ಪದ್ಧತಿ ರೂಢಿಯಲ್ಲಿದೆ. ವಿಜಯದಶಮಿಯಂದು ಶಮೀ ಅಥವಾ ಬನ್ನಿ ವೃಕ್ಷದ ಪೂಜೆಯನ್ನು ಮಾಡಿ, ಶಮೀ ಪತ್ರೆಯನ್ನು ಮನೆಗೆ ತರಲಾಗುತ್ತದೆ. ಇದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುವುದೆಂಬ ನಂಬಿಕೆಯಿದೆ.

ಶಮೀ ಶಮೀಯತೇ ಪಾಪಂ ಶಮೀ ಶತ್ರು
ವಿನಾಶಿನೀಐ
ಅರ್ಜುನಸ್ಯ ಧನುರ್ಧಾರೀ ರಾಮಸ್ಯ
ಪ್ರಿಯದರ್ಶಿನೀಐಐ
ಕರಿಷ್ಯಮಾಣಯಾತ್ರಾಯಾ ಯಥಾಕಾಲಂ
ಸುಖಂ ಮಯಾಐ
ತತ್ವ ನಿರ್ವಿಘ್ನಕತ್ರಿತ್ವಂ ಭವ ಶ್ರೀ ರಾಮಪೂಜಿತಾ