Saturday, 12th October 2024

ಮಹೋದಧಿಯಲ್ಲಿ ಮುಳುಗಿರುವ ಮಹಾದ್ವೀಪ

ಅಲೆಮಾರಿಯ ಡೈರಿ

mehandale100@gmail.com

ಗುಜರಾತ್ ತನ್ನ ಅಪರೂಪದ ಪ್ರವಾಸಿ ಸ್ಥಳಗಳನ್ನು ಜಗತ್ತಿಗೆ ‘ವೈಬ್ರಂಟ್ ಗುಜರಾತ್’ ಹೆಸರಿನಲ್ಲಿ ಅಮಿತಾಭ್ ಬಚ್ಚನ್‌ರಿಂದ ಜಾಹೀರಾತು ಮಾಡಿಸಿತಲ್ಲ, ಆಗ ಅಲ್ಲಿನ ಪ್ರವಾಸೋದ್ಯಮ ಮೈಕೊಡವಿ ಎದ್ದುನಿಂತಿತು. ಅಲ್ಲಿನ ಪ್ರವಾಸಿ ಸ್ಥಳಗಳ ಖದರ್ರೇ ಬದಲಾಯಿತು.

ಅದು ನಿಜಕ್ಕೂ ಅವಶ್ಯಕತೆ ಇತ್ತಾ ಇಲ್ಲವಾ ನನಗೆ ಗೊತ್ತಿಲ್ಲ. ಐತಿಹ್ಯ ಮಾತ್ರ ಇದ್ದಿದ್ದು ಹೌದು. ಹೋದಷ್ಟೂ ದೂರ ಸಿಕ್ಕಿದಷ್ಟೂ ಅಗಲ ಪರಿಧಿಯನ್ನು ಸುತ್ತುವರಿದ ಸಮುದ್ರ ಮಧ್ಯದಲ್ಲಿ ಉಳಿದುಹೋದ ದ್ವೀಪಕಲ್ಪದ ಅವಶೇಷ ಅದು. ಸಾಲುಸಾಲಾಗಿ ಪರ್ವತದ ತಲೆಯಿಂದ ನುಸುಳುವ ಸಣ್ಣಪುಟ್ಟ ಕಿರಿದಾದ ಮತ್ತು ತೋಪೆದ್ದ ಧೂಳು ಸಹಿತದ ಅಲ್ಲಲ್ಲಿ ಕೆಸರಾಗಿರುವ ದಾರಿಗಳೂ ಸಿಗುತ್ತವಲ್ಲ ಅವೆಲ್ಲ ultimately ಒಳಭಾಗ ದಲ್ಲಿಳಿಯುವ ನಮಗೆ ಮುಳುಗಿಹೋಗಿದ್ದೂ ಗೊತ್ತಾಗುತ್ತಿರುತ್ತದೆ.

ಪೌರಾಣಿಕ ಮಹತ್ವ ಪಡೆದಿರುವ ಮತ್ತು ದಂಡೆಯಿಂದ ಅನಾಮತ್ತು 10-12 ಕಿ.ಮೀ. ದೂರದಲ್ಲಿದ್ದು ಸಮುದ್ರ ಮಧ್ಯದಲ್ಲಿ ತಾವು ಕಂಡುಕೊಂಡಿರುವ ದ್ವೀಪಕಲ್ಪಕ್ಕೆ ಅಕಸ್ಮಾತ್ ಇಂಥದ್ದೊಂದು ಹಿನ್ನೆಲೆ ಇಲ್ಲದೇ ಇದ್ದಿದ್ದರೆ, ಇವತ್ತು ಇದಕ್ಕೆ ಈ ರೇಂಜಿನ
ಬಿಲ್ಡಪ್ ಸಿಗುತ್ತಿರಲಿಲ್ಲವೇನೋ. ಆದರೆ, ಅದಕ್ಕಿರುವ ಮಹತ್ವ ಮತ್ತು ಅಗಾಧವಾದ ನಂಬಲರ್ಹವೇ ಆದ ಕಥಾನಕದ ಐತಿಹ್ಯ ದಿಂದ ಪ್ರಾಣದ ಹಂಗು ತೊರೆದು ಜನ, ಪ್ರವಾಸಿಗರು, ಯಾತ್ರಾರ್ಥಿಗಳು, ಆಸಕ್ತರು ಈ ದ್ವೀಪಕಲ್ಪಕ್ಕೆ ಕಾಲಿಟ್ಟು ಬರುತ್ತಾರೆ.

ಅವ್ಯವಸ್ಥೆಯ ಆಗರದಲ್ಲಿ ಒಮ್ಮೆ ಹಿಂದಿರುಗಿ ಬಂದ ಮೇಲೆ ಜೀವಸಹಿತ ಹಿಂದಿರುಗಿದೆವಲ್ಲ ಎನ್ನುವಂತಾಗುವುದೂ ಸಹಜ. ದುಡ್ಡಿದ್ದವರಿಗೆ, ತಮ್ಮದೇ ಆದ ಖಾಸಗಿ ವ್ಯವಸ್ಥೆ ಮಾಡಿಕೊಳ್ಳುವವರಿಗೆ ಈ ಮುಳುಗಿರುವ ದ್ವೀಪ ದೊಡ್ಡ ಮಾತಲ್ಲ, ಭಯವನ್ನೂ
ಹುಟ್ಟಿಸಲಾರದು. ಆದರೆ ನನ್ನಂತೆ ಲೆಕ್ಕಾಚಾರದಲ್ಲಿ ತಿರುಗಾಟ ಮಾಡುವವನಿಗೆ ಒಮ್ಮೆ ಬದುಕಿ ಬಂದೆವೆನ್ನಿಸುತ್ತದೆ ಈ
ಅಪಾಯ ಕಾರಿ ಪಯಣ ಮುಗಿದಾಗ.

ಗುಜರಾತ್‌ನ ಸೋಮನಾಥ ಮತ್ತು ದ್ವಾರಕೆ ಹೇಳಿ ಮಾಡಿಸಿದ ಜೋಡಿ ಪ್ರವಾಸಗಳು. ಅದರಲ್ಲೂ ಇವೆರಡೂ ಇತ್ತೀಚಿನ 10 ವರ್ಷ ದಲ್ಲಿ ಆದ ಬದಲಾವಣೆಗೆ ತೆರೆದುಕೊಂಡಿರುವ ಪರಿಯಿಂದಾಗಿ ಗುಜರಾತ್ ತನ್ನ ಅಪರೂಪದ ಪ್ರವಾಸಿ ಸ್ಥಳಗಳನ್ನು ಜಗತ್ತಿಗೆ ‘ವೈಬ್ರಂಟ್ ಗುಜರಾತ್’ ಹೆಸರಿನಲ್ಲಿ ಅಮಿತಾಭ್ ಬಚ್ಚನ್‌ರಿಂದ ಅಡ್ವರ್ಟೈಸ್ ಮಾಡಿಸಿತಲ್ಲ, ಅಲ್ಲಿಗೆ ಇದ್ದಕ್ಕಿದ್ದಂತೆ ಗುಜರಾತ್ ಪ್ರವಾಸೋದ್ಯಮ ಮೈಕೊಡವಿ ಎದ್ದುನಿಂತಿತು ನೋಡಿ.

ಇವೆಲ್ಲ ಪ್ರವಾಸಿ ಸ್ಥಳಗಳ ಖದರ್ರೇ ಬದಲಾಯಿತು. ಅದರಲ್ಲೂ ಸೌರಾಷ್ಟ್ರ ಟೂರ್ ಎಂಬ ಹೆಸರಿನಲ್ಲಿ ಗುಜರಾತಿನ ಮತ್ತೊಂದು
ತುದಿಗೆ ಜನ ತಿರುಗಾಟಕ್ಕೆ ಇಳಿದರು ನೋಡಿ, ಮಹೋದಧಿಯಲ್ಲಿದ್ದ ಈ ಮಹಾದ್ವೀಪವೂ ಮೈ ಕೊಡವಿತ್ತು. ಜನಕ್ಕೆ ಮತ್ತೊಮ್ಮೆ ಐತಿಹ್ಯದ ಹಿನ್ನೆಲೆ ಮುನ್ನರಿವಿಗೆ ಬಂದಿತ್ತು. ಬೆಟ್ ದ್ವಾರಕ… ದ್ವಾರಕೆಯ ನಗರಿ ಮುಗಿದಾದ ಮೇಲೆ ಸಮುದ್ರದ ಕೊಟ್ಟ ಕೊನೆ ಯಲ್ಲಿ ಜೀವ ಕೈಯಲ್ಲಿ ಹಿಡಿದು ದೊಡ್ಡ ದೋಣಿ ಏರಿದರೆ ಹೋಗಿ ಇಳಿಯುವುದೇ ಈ ದ್ವೀಪಕಲ್ಪದ ತಲೆಯ ಮೇಲೆ. ಶಂಕೋ ಧರಾ ಎಂದೂ ಕರೆಸಿಕೊಳ್ಳುವ ಓಖಾದ ಸಮುದ್ರ ತೀರದಲ್ಲಿ ಕಚ್ ಪ್ರದೇಶದ ತುತ್ತಾನು ತುದಿಯ ಒಂದು ಜನವಸತಿ ಇರುವ ದ್ವೀಪವಾಗಿ ಗುರುತಿಸಿಕೊಂಡಿರುವ, ಅನಾಮತ್ತು ಸುಮಾರು 15 ಕಿ.ಮೀ. ಅಗಲಕ್ಕೆ ಒಂದೈದು ಕಿ.ಮೀ. ವ್ಯಾಪ್ತಿಗೆ ಹರಡಿ ಕೊಂಡಿದ್ದು, ಮೂಲ ದ್ವಾರಕೆಯಿಂದ 30 ಕಿ.ಮೀ. ದೂರಕ್ಕೆ ಸಮುದ್ರದಲ್ಲಿದೆ.

ಇದನ್ನು ಆಗಸದಿಂದ ನೋಡಿದಾಗ ಶಂಖದ ರೂಪದಲ್ಲಿ ಕಾಣುತ್ತದಾದ್ದರಿಂದ ಶಂಕೋಧರಾ ಎಂದು ಕರೆದರೆ, ಕೃಷ್ಣ ಯಾದವ ರನ್ನೆಲ್ಲ ರಕ್ಷಿಸಲು ತನ್ನ ಮೇಲಿನ ದಾಳಿಯ ಉಪಟಳ ತಡೆಯಲು, ಪೂರ್ತಿ ಭೂಮಿಯನ್ನೇ ತೊರೆದನಲ್ಲ ಆಗ ಬಂದು ಸುರಕ್ಷಿತ ವಾದ ತಾಣ ಎಂದು ಈ ಸಾಗರ ಮಧ್ಯದ ದ್ವೀಪಕ್ಕೆ ಸಂಪೂರ್ಣ ಯಾದವ ಕುಲವನ್ನೇ ಸ್ಥಳಾಂತರಿಸಿ ಸಂರಕ್ಷಿಸಿದ್ದ. ದ್ವಾಪರ ಯುಗ ಮುಗಿದು ಕಲಿಯುಗ ಯಾವಾಗ ಕಾಲಿಟ್ಟಿತೋ, ಬೀಳುಬಿದ್ದ ಕೃಷ್ಣನ ದ್ವೀಪಕಲ್ಪ ಅದ್ಯಾವಾಗ ಸಾಗರದ ಆಪೋಶನಕ್ಕೆ ತುತ್ತಾ ಯಿತೋ ಗೊತ್ತೇ ಆಗಲಿಲ್ಲ.

ಕಾರಣ ಕೃಷ್ಣನೇ ದ್ವಾರಕೆ ಬಿಟ್ಟ ಮೇಲೆ ಅನೂ ಉಳಿಯಲಿಲ್ಲವಂತೆ, ಅವನ ದ್ವೀಪ ಕೂಡ. ಅದರಲ್ಲೂ ಅದು ಆಗಿನ ಮೊದಲ ಗುಜರಾತಿನ ಮೊದಲ ರಾಜಧಾನಿ ಕೂಡ. ಅದಾವುದೂ ಇನ್ನಾರಿಗೂ ಸಿಗದಿರಲಿ ಮತ್ತು ಅದಕ್ಕೆ ಕೃಷ್ಣನಿಗಿಂತ ಅರ್ಹರು ಇನ್ನಾರೂ ಇಲ್ಲ ಎಂದು ಸಮುದ್ರವೇ, ಆ ಕಾಲದ ಪಾವಿತ್ರ್ಯ ಹಾಗೇ ಉಳಿದುಕೊಳ್ಳಲಿ ಎಂದು ಉಕ್ಕೇರಿ ಅದನ್ನೆಲ್ಲ ತನ್ನೊಳಗೆ ಸೇರಿಸಿಕೊಳ್ಳು ವಷ್ಟು ಎತ್ತರದವರೆಗೂ ಸರಿದು ನಿಂತಿದೆಯಂತೆ. ಹಾಗಾಗಿ ಮೇಲಿಂದ ಈಗಲೂ ಶಂಖದಾಕೃತಿಯ ನೆಲವಿದ್ದರೆ ಉಳಿದೆಲ್ಲ ಸಮುದ್ರದೊಳಗೆ ಸೇರಿಹೋಗಿದೆ ಎನ್ನುವ ಕತೆ ದಕ್ಕುತ್ತದೆ.

ಕಾರಣ ಸಾವಿರಾರು ವರ್ಷಗಳ ಪ್ರಕೋಪದಲ್ಲಿ ಬದಲಾದ ಜಲಸಂಧಿಗಳ ಸಮೀಕರಣದಲ್ಲಿ ದ್ವೀಪದ ತಲೆಭಾಗ ಮಾತ್ರ ಈಗ ಹೊರಗುಳಿದಿದ್ದು ಬೆಟ್ ದ್ವಾರಕ ನಾಡಿನ ಆಕರ್ಷಕ ಪ್ರವಾಸಿ ಕೇಂದ್ರವಾಗಿದೆ. ದ್ವಾರಕಾಧೀಶ ಮತ್ತು ಶ್ರೀಕೃಷ್ಣನ ದೇವಸ್ಥಾನಗಳು
ಪ್ರಮುಖ ಆಕರ್ಷಣೆ ಆಗಿರುವ ಈ ಐತಿಹ್ಯ ದ್ವೀಪದ ದಂಡೆಯಿಂದ ನೀಲಸಾಗರ ಅಗಾಧವಾದ ಅಲೆಗಳನ್ನೆಬ್ಬಿಸುತ್ತ ಹೊಯ್ದಾ ಡುತ್ತದಲ್ಲ, ಆಗ ಮೊದಮೊದಲಿಗೆ ಸ್ಥಳೀಯ ಯೋಜನೆ ಪ್ರಕಾರ ಹೋಗುವ ದೊಡ್ಡ ಗಾತ್ರದ ಹಡಗು ಏರಿಬಿಡುತ್ತೇವೆ. ಆದರೆ ಕ್ರಮೇಣ ಹವಾ ಟೈಟ್.

ನೋಡುತ್ತಿದ್ದಂತೆ ತೇಲುತ್ತಿದ್ದ ದೋಣಿ ನಿಧಾನವಾಗಿ ಕೆಳಗಿಳಿಯುತ್ತದೆ. ಕೊನೆ ಕೊನೆಗೆ ತೀರ ಮಾರ್ಜಿನಲ್ ಎತ್ತರವೂ ಉಳಿಯದೆ
ಸೈಡಿನ ಅಂಚುಗಳಿಂದ ನೀರ ನೇರನ್ನು ಮುಟ್ಟುವಷ್ಟು ಭಾರಕ್ಕೆ ಕೆಳಕ್ಕಿಳಿದಿರುತ್ತದೆ. ಕಾರಣ ವಾರದಲ್ಲಿ ಒಂದೋ ಎರಡೋ ಸಾರಿ ಪಾಳಿ ಬರುವುದರಿಂದ ಕಾಯ್ದು ನಿಂತಿದ್ದ ದೋಣಿಗಳು ಆದಷ್ಟೂ ಹೆಚ್ಚು ಜನರನ್ನು ತುಂಬಲು, ಆ ಮೂಲಕ ಆಮದನಿ ಹೆಚ್ಚಿಸಿ ಕೊಳ್ಳಲು ನೋಡುವುದು ಸಹಜ.

ಹಾಗಾಗಿ ಬಹಳ ಎಂದರೆ 200-300 ಜನ ತುಂಬುವ ದೋಣಿಗೆ ಏನಿಲ್ಲ ಎಂದರೂ 500ಕ್ಕೂ ಹೆಚ್ಚು ಜನರನ್ನು ಏರಿಸಿ ಬಿಡುತ್ತಾರೆ. ದೋಣಿ ಏದುಸಿರುಬಿಡುತ್ತ ಹೊಯ್ದಾಡುತ್ತದೆ. ಎರಡೂ ಕಡೆಗೆ ಬೀಳದಂತೆ ಬಿಗಿದ ಹಗ್ಗವೂ ಏತಕ್ಕೂ ಸಾಲುವುದಿಲ್ಲ. ಜನರು ಮಧ್ಯ ನಿಲ್ಲಲು ಅದಕ್ಕೆ ಹಿಡಿದುಕೊಳ್ಳಲು ಹಾಕಿದ ಹಾಯಿಯ ಕೋಲಿನಂತಹ ಆಧಾರ ಬಿಡಿ, ಮಧ್ಯದ ಸ್ಟೆಮ್ ಕೋಲಿನ
ಮೇಲೂ ಜನ ಹತ್ತಿ ಕೂರುತ್ತಾರೆ. ಕ್ರಮೇಣ ದೊಡ್ಡ ದನಿಯಲ್ಲಿ ಶಬ್ದಿಸಿ ಹೊರಡುವ ದೋಣಿಯಲ್ಲಿ ಇದ್ದವರು ಹೊಯ್ದಾಡು
ತ್ತಿದ್ದರೆ, ಅರ್ಧ ದಾರಿ ಕ್ರಮಿಸಿದಾಗ ಏರಿಳಿಯುವ ಹೊಡೆತಕ್ಕೆ ದಿಕ್ಕು ತಪ್ಪುತ್ತದೆ.

ಬದುಕಿದ್ದರೆ ಭಿಕ್ಷೆ ಬೇಡಿ ತಿಂದೇನು ಈ ದೋಣಿ ಸಹವಾಸ ಬೇಡ ಎನ್ನಿಸದಿದ್ದರೆ ಕೇಳಿ. ಅದೃಷ್ಟ ಕೆಟ್ಟಿದ್ದು ಏನಾದರೂ ದೋಣಿ ತಾಳ ತಪ್ಪಿತೋ, ದೇವ್ರಾಣೆ ಆ ದ್ವಾರಕಾಧೀಶನೂ ನಿಮ್ಮನ್ನು ಕಾಪಾಡಲ್ಲ. ಅಂಥ ಆಳವಾದ ಸಮುದ್ರ ದಾಟುವಾಗ ಕೇವಲ ಸರದಿ ಬರುತ್ತಿಲ್ಲ ಆಮದನಿ ಸಾಲುತ್ತಿಲ್ಲ ಎಂದು ಲೆಕ್ಕ ಹಾಕುತ್ತಾರಲ್ಲ, ನಿಂತವನಿಗೆ ಎದೆ ಒಡೆಯದಿರಲು ಕಾರಣ ಭಗವಂತನ ದರ್ಶನಕ್ಕೆ ತೆರಳುತ್ತಿರುವ ಬಗ್ಗೆ ಇರುವ ನಂಬಿಕೆ ಮತ್ತು ಅದೇ ಕುರುಡುಧೈರ್ಯ ಮಾತ್ರ.

ಸಮುದ್ರದ ಭೋರ್ಗರೆವ ಹೊಡೆತಕ್ಕೆ ಯಾವಾಗ ಮಗುಚಿದರೆ ಏನಾದೀತು ಎನ್ನುವ ಒಂದು ಯೋಚನೆ ಸುಳಿದಿದ್ದೇ ತಡ, ಯಾಕಾದರೂ ಬಂದೇವೋ ಎನ್ನಿಸುತ್ತದೆ. ಕಾರಣ ಯಾವ ಲೆಕ್ಕದಲ್ಲೂ ಯಾವ ಗಾರ್ಡೂ ನಿಮ್ಮನ್ನು ಆ ಕ್ಷಣಕ್ಕೆ ಬಂದು ರಕ್ಷಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಸಾಮಾನ್ಯ ರೀತಿಯ ದೋಣಿಪ್ರವಾಸ ಈ ಭಯಕ್ಕೆ ದೂಡುವುದಂತೂ ಸತ್ಯ.

ಅಂದ ಹಾಗೆ, ಇಲ್ಲಿಯವರೆಗೆ ಆ ಲೆಕ್ಕದಲ್ಲಿ ಏನಾದರೂ ಆಗಿದೆಯಾ ಎಂದರೆ ದುರಂತದ ಉದಾಹರಣೆಗಳಿಲ್ಲವೇ ಇಲ್ಲ ಎನ್ನುವುದು ಸಮಾಧಾನಕ್ಕೆ ಕಾರಣವಾಗುತ್ತದೆ. ದ್ವಾರಕೆಯಿಂದ ಇಲ್ಲಿಗೆ ಬರುವುದು ಅಥವಾ ಇಲ್ಲಿಗೇ ಮೊದಲು ಬಂದು ದ್ವಾರಕೆಗೆ ಹೋಗು ವುದು ಹೇಗಾದರೂ ಸರಿಯೇ. ಆದರೆ ದ್ವಾರಕೆಯಲ್ಲಿ ಪ್ರಮುಖ ದೇವಸ್ಥಾನದ ಜತೆಗೆ ಪುರಾತನ ನಂಬಿಕೆಯ ತಾಣಗಳಾದ ಗೋಪಿ ತಲಾಬ್, ಭದ್ರಕೇಶ್ವರ ದೇವಸ್ಥಾನ, ರುಕ್ಮಿಣಿ ದೇವಸ್ಥಾನ ಮತ್ತು ಕೆಲವೇ ಕಿ.ಮೀ. ದೂರದಲ್ಲಿರುವ ನಾಗೇಶ್ವರ ಜ್ಯೋತಿ ರ್ಲಿಂಗ ಎಲ್ಲ ಸೇರಿ ನಿಮಗೆ ಎರಡೂವರೆ ಮೂರು ತಾಸು ಸಾಕಾಗುತ್ತದೆ.

ಹಾಗಾಗಿ ದ್ವಾರಕೆಯಿಂದ ಹೊರಡುವ ಮುನ್ನ ಇದಿಷ್ಟು ಮುಗಿಸಿಕೊಂಡರೆ ನೇರವಾಗಿ ಬೆಟ್ ದ್ವಾರಕೆ ಹೊರಡುವ ಜೆಟ್ಟಿ ತೀರದಲ್ಲಿ ಇರಬಹುದು. ಹೊರಗೆ ವರ್ಷವಿಡೀ ಬೆವರಿಳಿಸುವ ಸೆಕೆಯಿದ್ದರೂ ಕಡ್ಲೆ ಹಿಟ್ಟಿನ ಬಿಸಿಬಿಸಿ ಗುಜರಾತಿ ತಿನಿಸುಗಳು ಮತ್ತು ಚಹ ಒಮ್ಮೆ ತಿರುಗಾಡಿದ ಸುಸ್ತೆಲ್ಲ ಇಳಿಯುವುದಕ್ಕೆ ಮzಗಬಲ್ಲವು. ಗುಜರಾತಿ ತಿನಿಸುಗಳು ಅದರಲ್ಲೂ ಸೌರಾಷ್ಟ್ರದ ಪ್ರಮುಖ ಕಡ್ಲೆ
ಹಿಟ್ಟಿನ ತಿನಿಸುಗಳಾದ ಪಾಖ್ರಾ, ಆಲೂ ಪೋಹಾ, ಜಿಲೇಬಿ ಮತ್ತು ಖಮನ್ ಅತಿದೊಡ್ಡ ಆಕರ್ಷಣೆ. ಅದರಲ್ಲೂ ನೈಲಾನ್
ಖಮನ್ ಎನ್ನುವ ಮೆರುಗಿನ ತಿನಿಸು ಕೈಬೀಸಿ ಕರೆಯುತ್ತದೆ.

ನಮ್ಮ ಘಾಟೆಯನ್ನು ಹೋಲುವ, ಕೈಯಿಂದ ಹೊಸೆದು ಕರಿದಿರಿಸುವ ಮತ್ತು ಅದಕ್ಕೆ ಉಪ್ಪು ಬೆರೆಸಿದ ಉದ್ದನೆಯ ಹಸಿ ಮೆಣಸಿನ ಕಾಯಿ ಕರಿದು ಕೊಡುವುದಿದೆಯಲ್ಲ ಅದರ ರುಚಿ ಬಾಯಲ್ಲಿ ನೀರು ಬರದಿದ್ದರೆ ಕೇಳಿ. ದಪ್ಪ ದಪ್ಪ ಘಾಟೆ ಮತ್ತು ಖಾರದ ಚಟ್ನಿಯ ಜತೆ ಒಂದು ಕಡಕ್ ಚಹ ಒಮ್ಮೆ ಕಾಯ್ದು ನಿಂತು ಕುಡಿಯುವ ರೇಂಜಿಗಿದೆ. ಡೌಟೇ ಬೇಡ. ಸಾಲುಸಾಲು ನಮ್ಮನಮ್ಮ ಜೇಬಿನ ರೇಟಿಗೆ ಪಕ್ಕಾಗುವ ಖಾಸಗಿ ದೋಣಿಗಳ ಸೇವೆ ಕೂಡ ಇದ್ದು, ಮೂರರಿದ ಹತ್ತು ಹದಿನೈದು ಜನರ ಗುಂಪಿನ ಮೋಟಾರ್ ಚಾಲಿತ ದೋಣಿಗಳ ವ್ಯವಸ್ಥೆ ಇದ್ದರೂ ಅತೀವ ಬೆಲೆ ಇರುವುದರಿಂದ ಜನ ಕಾಮನ್ ಸರ್ವೀಸ್‌ನಲ್ಲಿ ಹೊರಡುತ್ತಾರೆ.

ಎಲ್ಲಿಯ 200-300 ಚಾರ್ಜು, ಎಲ್ಲಿಯ ಒಂದು ಸೀಟಿಗೆ 1500ರ ಬೆಲೆ. ಸರಕಾರಿ ಪ್ರಾಯೋಜಿತ ವ್ಯವಸ್ಥೆ ಇದಕ್ಕೆ ಇದ್ದಂತೆ ಕಾಣ ಲಿಲ್ಲ. ಕೇವಲ ಪರ್ಮಿಟ್ ಕೊಡುವುದಕ್ಕೆ ಮಾತ್ರ ಇಲಾಖೆ ಸನ್ನದ್ಧವಾಗಿದ್ದಂತೆ ಕಾಣಿಸಿತೇ ಹೊರತಾಗಿ ಬಾಕಿ ಎಲ್ಲ ಸಾಲುಸಾಲು ದೋಣಿ ನಿಲ್ಲಿಸಿಕೊಂಡು ಟ್ರಿಪ್ಪು ಹೊಡೆಯುವವರದ್ದೇ ಡಾಮಿನೇಷನ್ನು. ಒಟ್ಟಾರೆ ಹಲವು ರೀತಿಯ ಅನುಭವಕ್ಕೂ ಬಿಸಿಲಿಗೂ ಸೆಕೆಗೂ ತೆರೆದುಕೊಳ್ಳುತ್ತಲೇ ಹಾರುವ ಸೀಗಲ್‌ಗಳ ಮಜಕ್ಕೂ ನಮ್ಮನ್ನು ದೂಡುವ ದ್ವಾರಕೆಯ ಒಂದು ಭೇಟಿ ಮಾಡಲೇಬೇಕು. ಬೇರೇನಕ್ಕೆ ಅಲ್ಲದಿದ್ದರೂ ಅಕಸ್ಮಾತ್ ಈ ಜೆಟ್ಟಿ ಮುಳುಗಿದರೆ ಎಂಬ ಭಯಮಿಶ್ರಿತ ಜರ್ನಿ ಇದೆಯಲ್ಲ ಅದನ್ನು ಅನುಭವಿಸ ಲಾದರೂ ಒಮ್ಮೆ ಈ ದಾರಿಯಲ್ಲಿ ಹೊಯ್ದಾಡುತ್ತಾ ಹೋಗಿಬನ್ನಿ. ಜೀವ ಝನ್ನುತ್ತ ಹೊಯ್ದಾಡದಿದ್ದರೆ ಕೇಳಿ.