Saturday, 27th July 2024

ಭಾಷಾಭಿಮಾನ ಮೆರೆದ ಮೈಪಿ ಕ್ಲಾರ್ಕ್‌

ವೀಕೆಂಡ್ ವಿತ್ ಮೋಹನ್

camohanbn@gmail.com

ನ್ಯೂಜಿಲೆಂಡ್ ದೇಶದ ಸಂಸತ್ತಿನಲ್ಲಿ ಕಿರಿಯ ವಯಸ್ಸಿನ ಸಂಸದೆಯೊಬ್ಬರು ಮಾಡಿದ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ವೈರಲ್ ಆಗಿತ್ತು. ಆಕೆ ತನ್ನ ಮಾತೃಭಾಷೆಯಲ್ಲಿ ಮಾತನಾಡಿದ್ದರಿಂದ ಹಲವರಿಗೆ ಆಕೆಯ ಮಾತು ಅರ್ಥವಾಗಿರಲಿಲ್ಲ. ಸಾಮಾನ್ಯ
ವಾಗಿ ನ್ಯೂಜಿಲೆಂಡ್ ಎಂದರೆ ಇಂಗ್ಲಿಷ್ ನೆನಪಿಗೆ ಬರುತ್ತದೆ, ಆದರೆ ಆಕೆ ಸಂಸತ್ತಿನಲ್ಲಿ ಇಂಗ್ಲಿಷ್ ಬಳಸಲಿಲ್ಲ.

ಆದರೆ ಮಾತಾಡುವಾಗ ಆಕೆಯಲ್ಲಿ ಭಾರಿ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ಮೊದಮೊದಲಿಗೆ ಆಕೆಯ ಮಾತು ಅರ್ಥ ವಾಗದಿದ್ದಾಗ ಹಲವರು ಆಕೆಯ ಭಾಷಣವನ್ನು ಹಾಸ್ಯಾಸ್ಪದ ವಾಗಿ ನೋಡಿದ್ದುಂಟು. ಆದರೆ ಆ ಭಾಷೆಯ ಹಿಂದೆ ದೊಡ್ಡ ಹೋರಾಟದ ಕಥೆಯೇ ಇತ್ತು. ೨೧ರ ಹರೆಯದ ಮೈಪಿ ಕ್ಲಾರ್ಕ್ ೨೦೨೩ರಲ್ಲಿ ನ್ಯೂಜಿಲೆಂಡ್ ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ‘ಟೆ ಪಾಟಿ ಮಾವರಿ’ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾದರು. ಸುಮಾರು ೧೭೦ ವರ್ಷಗಳ ನಂತರ ಹೀಗೆ ಆಯ್ಕೆಯಾದ ಅತ್ಯಂತ ಕಿರಿಯ ಸಂಸದೆ ಎನಿಸಿಕೊಂಡಿದ್ದಾರೆ ಈಕೆ. ಈ ಹಿಂದೆ ೧೮೫೩ರಲ್ಲಿ ಆಯ್ಕೆಯಾದ ಜೇಮ್ಸ್ ಸ್ಟುವರ್ಟ್ ವರ್ಟ್ಲಿಯವರು ಅತಿಕಿರಿಯ ಸಂಸದೆ ಎನಿಸಿಕೊಂಡಿದ್ದರು (೨೦ ವರ್ಷ ೭ ತಿಂಗಳು). ಮೈಪಿ ಕ್ಲಾರ್ಕ್‌ರ ತಂದೆ ಪೊಟಕ ಮೈಪಿ, ಮಾವೊರಿ ಭಾಷೆಯ ಪರವಾಗಿ ಹೋರಾಡುತ್ತಿದ್ದ ಕಾರ್ಯಕರ್ತ. ಇವರ ಪೂರ್ವಜರು ಸುಮಾರು ೧೫೦ ವರ್ಷಗಳಿಂದಲೂ ನ್ಯೂಜಿಲೆಂಡ್‌ನ ಈ ಪ್ರಾಚೀನ ಭಾಷೆಯ
ಪರವಾಗಿ ಹೋರಾಡುತ್ತ ಬಂದವರೇ.

೨೦೨೨ರ ಸೆಪ್ಟೆಂಬರ್‌ನಲ್ಲಿ ಮೈಪಿ ಸಂಸತ್ ಭವನದ ಮೆಟ್ಟಿಲ ಮೇಲೆ ಮಾವೊರಿ ಭಾಷೆಯಲ್ಲಿ ಭಾಷಣ ಮಾಡಿದ್ದರು. ಆಕೆಯ ವಾಕ್ಚಾತುರ್ಯ ಕಂಡ ಹಲವು ರಾಜಕೀಯ ಪಕ್ಷಗಳು ತಮ್ಮೊಂದಿಗೆ ಸೇರುವಂತೆ ಕೋರಿದ್ದವು. ೨೦೨೩ರ ಅಕ್ಟೋಬರ್ ೧೪ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಕ್ಷದ ನಾನೈಯಾ ಮಹುತಾ ಅವರನ್ನು ಮೈಪಿ ೨,೯೧೧ ಮತಗಳ ಅಂತರದಿಂದ ಸೋಲಿಸಿದರು. ನ್ಯೂಜಿಲೆಂಡ್‌ನ ಒಟ್ಟಾರೆ ಜನಸಂಖ್ಯೆ ಕೇವಲ ೫೦ ಲಕ್ಷ
ದಷ್ಟಿರುವುದರಿಂದ, ಅಲ್ಲಿ ಅಭ್ಯರ್ಥಿಗಳ ಗೆಲುವಿನ ಅಂತರ ಕೆಲವೇ ಸಾವಿರಗಳಲ್ಲಿರುತ್ತದೆ.

ಚುನಾವಣೆ ಗೆದ್ದ ನಂತರ ೨೦೨೩ರ ಡಿಸೆಂಬರ್‌ನಲ್ಲಿ ಮಾಡಿದ ತನ್ನ ಚೊಚ್ಚಲ ಭಾಷಣದಲ್ಲಿ ಮೈಪಿ, ನ್ಯೂಜಿಲೆಂಡ್‌ನಲ್ಲಿ ಅಸ್ತಿತ್ವದಲ್ಲಿರುವ ಸಮ್ಮಿಶ್ರ
ಸರಕಾರವನ್ನು ಟೀಕಿಸಿ, ‘ನಮ್ಮ ಪೂರ್ವಜರು ಉಳಿಸಿಕೊಂಡು ಬಂದಿರುವ ಇಡೀ ನಾಗರಿಕತೆಯ ಮೇಲೆ ಈ ಸರಕಾರವು ಮೂಲೆ ಮೂಲೆಯಿಂದಲೂ ದಾಳಿ ಮಾಡಿದೆ’ ಎಂದರು. ಮಾವೊರಿ ಎಂಬುದು ನ್ಯೂಜಿಲೆಂಡ್‌ನ ಮುಖ್ಯ ಭೂ ಭಾಗದ ಸ್ಥಳೀಯರಾದ ಮಾವೊರಿ ಜನರು ಮಾತಾಡುವ ಪೂರ್ವ ಪಾಲಿನೇಷಿಯನ್ ಭಾಷೆ. ಮಾವೊರಿ ಭಾಷಾ ಕಾಯಿದೆ ೧೯೮೭ರ ಅನುಸಾರ ಈ ಭಾಷೆಗೆ ನ್ಯೂಜಿಲೆಂಡ್‌ನ ಅಧಿಕೃತ ಭಾಷೆಗಳಲ್ಲಿ ಒಂದೆಂದು ಮಾನ್ಯತೆ ನೀಡಲಾಯಿತು.

೧೯೪೫ರಿಂದ ಈ ಭಾಷಿಕರ ಸಂಖ್ಯೆ ತೀವ್ರವಾಗಿ ಇಳಿಯತೊಡಗಿತ್ತು; ಆದರೆ ೨೦ನೇ ಶತಮಾನದ ಉತ್ತರಾರ್ಧದಿಂದ ಪ್ರಾರಂಭವಾದ ಮಾವೊರಿ ಭಾಷೆಯ ಪುನರುಜ್ಜೀವನದ ಯತ್ನವು ಅದರ ಅವನತಿಯನ್ನು ನಿಧಾನಗೊಳಿಸಲು ನೆರವಾಗಿದೆ. ೨೦೧೮ರ ನ್ಯೂಜಿಲೆಂಡ್ ಜನಗಣತಿಯ ಪ್ರಕಾರ, ಸುಮಾರು ೧,೮೬,೦೦೦ ಜನರು (ಶೇ.೪ರಷ್ಟು ಭಾಗ) ತಮ್ಮ ದೈನಂದಿನ ವ್ಯವಹಾರಗಳನ್ನು ಮಾವೊರಿ ಮೂಲಕ ನಿರ್ವಹಿಸುತ್ತಾರೆ.

ಇತಿಹಾಸವನ್ನು ಗಮನಿಸಿದರೆ, ಮಾವೊರಿಯು ಸುಮಾರು ೧೮೦೦ನೇ ಇಸವಿಯಲ್ಲಿ ನ್ಯೂಜಿಲೆಂಡ್‌ನ ಪ್ರಧಾನ ಭಾಷೆಯಾಗಿತ್ತು. ೧೮೬೦ರ ದಶಕದಲ್ಲಿ ಇದು ಅನೇಕ ವಸಾಹತುಗಾರರು, ಮಿಷನರಿಗಳು, ಚಿನ್ನದ ಅನ್ವೇಷಕರು ಮತ್ತು ವ್ಯಾಪಾರಿಗಳು ಮಾತಾಡುವ, ಇಂಗ್ಲಿಷ್ ನೆರಳಿನಲ್ಲಿನ ಅಲ್ಪಸಂಖ್ಯಾತ ಭಾಷೆಯಾಯಿತು. ೧೯ನೇ ಶತಮಾನದ ಕೊನೆಯಲ್ಲಿ, ನ್ಯೂಜಿಲೆಂಡ್ ಮತ್ತು ಅದರ ಪ್ರಾಂತ್ಯಗಳ ವಸಾಹತುಶಾಹಿ ಸರಕಾರಗಳು ನ್ಯೂಜಿಲೆಂಡ್ ನಾಗರಿಕ ರಿಗೆ ಇಂಗ್ಲಿಷ್ ಶೈಲಿಯ ಶಿಕ್ಷಣ ವ್ಯವಸ್ಥೆಯನ್ನು ಪರಿಚಯಿಸಿದರು.

೧೯ನೇ ಶತಮಾನದ ಮಧ್ಯಭಾಗದಿಂದ ಸ್ಥಳೀಯ ಶಾಲೆಗಳಲ್ಲಿ ಜಾರಿಗೆ ತಂದ ಕಾಯಿದೆಗಳು ಮತ್ತು ಬೋಧನಾ ಕ್ರಮದಿಂದಾಗಿ, ಮಾವೊರಿ ಬಳಕೆಯನ್ನು ಪಠ್ಯಕ್ರಮದಿಂದ ನಿಧಾನವಾಗಿ ಕೈಬಿಡಲಾಯಿತು. ಪರಿಣಾಮ ಮಾವೊರಿ ಜನರು ಬ್ರಿಟಿಷರಿಂದ ಇಂಗ್ಲಿಷ್ ಕಲಿತರು. ನ್ಯೂಜಿಲೆಂಡ್‌ನ ಮೂಲಭಾಷೆ ನಶಿಸಿಹೋಗುವಂತಾಯಿತು. ೧೯೦೦ರ ಹೊತ್ತಿಗೆ ಮಾವೊರಿ ಸಂಸದರು ನಿರರ್ಗಳವಾಗಿ ಇಂಗ್ಲಿಷ್ ಮಾತಾಡಬಲ್ಲವರಾಗಿದ್ದರು. ಈ ಅವಧಿಯಲ್ಲಿ ಮಾವೊರಿ ಬದಲು ಇಂಗ್ಲಿಷ್ ಕಲಿಕೆಗೆ ಒತ್ತು ನೀಡಲಾಯಿತು. ಆದರೆ ೨ನೇ ಮಹಾಯುದ್ಧದ ನಂತರ ಮಾವೊರಿ ಜನರು ನಗರ ಪ್ರದೇಶಗಳಿಗೆ ವಲಸೆ ಹೋದ ನಂತರವಂತೂ ಮಾವೊರಿ ಭಾಷೆ ಮಾತಾಡುವವರ ಸಂಖ್ಯೆ ಶೀಘ್ರವಾಗಿ ಕ್ಷೀಣಿಸತೊಡಗಿತು.

ಈ ಅವಧಿಯಲ್ಲಿ ಮಾವೊರಿಯನ್ನು ಅನೇಕ ಶಾಲೆಗಳಲ್ಲಿ ನಿಷೇಽಸಲಾಯಿತು ಮತ್ತು ಈ ಭಾಷೆಯನ್ನು ಬಳಸುವವರನ್ನು ದೈಹಿಕವಾಗಿ ಶಿಕ್ಷಿಸುವ ಕಾನೂನನ್ನು ಜಾರಿಗೆ ತರಲಾಯಿತು. ಇತ್ತೀಚಿನ ವರ್ಷಗಳಲ್ಲಿ ಕೆಲವು ಪ್ರಮುಖ ಮಾವೊರಿಗಳು, ಶಾಲೆಯಲ್ಲಿ ಮಾವೊರಿ ಭಾಷೆಯಲ್ಲಿ ಮಾತಾಡಿದ್ದಕ್ಕೆ ತಮ್ಮ ಕುಟುಂಬದ ಸದಸ್ಯರನ್ನು ಬೆತ್ತದಿಂದ ಹೊಡೆದಿದ್ದನ್ನು ದುಃಖದಿಂದ ಹೇಳಿಕೊಂಡಿದ್ದಾರೆ. ೧೯೩೯-೧೯೪೫ರ ನಡುವಿನ ೨ನೇ ಮಹಾಯುದ್ಧ ದವರೆಗೆ, ನ್ಯೂಜಿಲೆಂಡ್‌ನ ಹೆಚ್ಚಿನ ಜನರು ಮಾವೊರಿಯನ್ನು ಮೊದಲ ಭಾಷೆಯಾಗಿ ಮಾತಾಡುತ್ತಿದ್ದರು, ಅದರಲ್ಲೇ ಪೂಜೆ ಮಾಡುತ್ತಿದ್ದರು.

ಈ ಭಾಷೆಯಲ್ಲೇ ರಾಜಕಾರಣಿಗಳೂ ರಾಜಕೀಯ ಸಭೆಗಳನ್ನು ನಡೆಸುತ್ತಿದ್ದರು, ಅನೇಕ ಪತ್ರಿಕೆಗಳೂ ಪ್ರಕಟವಾಗುತ್ತಿದ್ದವು. ಮಾವೊರಿಯು ಮನೆಮನೆಗಳ ದಿನನಿತ್ಯದ ಭಾಷೆಯಾಗಿತ್ತು. ೧೯೫೦ರ ಹೊತ್ತಿಗೆ ಕೆಲವು ಮಾವೊರಿ ನಾಯಕರು ತಮ್ಮ ಮೂಲಭಾಷೆ ನಶಿಸುತ್ತಿರುವ ಅಪಾಯದ ಮುನ್ಸೂಚನೆಯನ್ನು ಗ್ರಹಿಸಿ, ೧೯೭೦ರ ವೇಳೆಗೆ ಅದನ್ನು ಉಳಿಸಲು ಹಲವು ತಂತ್ರಗಳನ್ನು ಬಳಸಿದರು. ಇದು ೧೯೮೨ ರಿಂದ, ಶೈಶವಾವಸ್ಥೆಯಿಂದ ಶಾಲಾ ಕಲಿಕೆಯವರೆಗೆ ಮಾವೊರಿ ಭಾಷೆಯನ್ನು ಕಲಿಸುವಂಥ, ಮಾವೊರಿಯ ಪುನರುಜ್ಜೀವನದ ಕಾರ್ಯಕ್ರಮಗಳನ್ನು ಒಳಗೊಂಡಿತ್ತು.

೧೯೮೫ರಲ್ಲಿ ಮಾವೊರಿ-ಮಾಧ್ಯಮದ ಶಿಕ್ಷಣ ವ್ಯವಸ್ಥೆ ಜಾರಿಗೆ ಬಂತು. ಪರಿಣಾಮ, ಅಳಿವಿನಂಚಿನಲ್ಲಿದ್ದ ಮಾವೊರಿ ನಿಧಾನವಾಗಿ ಪುನರುಜ್ಜೀವನ ಗೊಳ್ಳತೊಡಗಿತು. ೨೦೧೫ರ ಹೊತ್ತಿಗೆ  ಅದು ನ್ಯೂಜಿಲೆಂಡ್‌ನ ರಾಷ್ಟ್ರೀಯ ಪರಂಪರೆಯಾಗಿ ಹೆಚ್ಚು ಜನಪ್ರಿಯವಾಯಿತು. ೨೦೧೮ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಮಾವೊರಿ ಭಾಷೆಯು ಪ್ರಸ್ತುತ ಆ ಸಮಾಜದಲ್ಲಿ ಉನ್ನತ ಸ್ಥಾನಮಾನ ವನ್ನು ಹೊಂದಿದೆ ಮತ್ತು ಮಾವೊರಿಗಳಲ್ಲದ ಹೆಚ್ಚಿನ
ನ್ಯೂಜಿಲೆಂಡಿಗರಿಂದಲೂ ಸಕಾರಾತ್ಮಕವಾಗಿ ಸ್ವೀಕರಿಸಲ್ಪಟ್ಟಿದೆ. ಹೀಗೆ ಭಾಷೆಯ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾದಂತೆ, ಭಾಷಾವರ್ಗಗಳ ಬೇಡಿಕೆಯೂ ಹೆಚ್ಚಿತು. ಗೂಗಲ್, ಮೈಕ್ರೋಸಾಫ್ಟ್, ವೊಡಾಫೋನ್‌ನಂಥ ಪ್ರತಿಷ್ಠಿತ ಕಂಪನಿ ಗಳು ನ್ಯೂಜಿಲೆಂಡಿಗರ ಈ ಪ್ರವೃತ್ತಿಯನ್ನು ಕ್ಷಿಪ್ರವಾಗಿ
ಅಳವಡಿಸಿಕೊಂಡು ಮಾವೊರಿ ಭಾಷೆಯನ್ನು ತಮ್ಮ ಉತ್ಪನ್ನಗಳಲ್ಲಿ ಹೆಚ್ಚೆಚ್ಚು ಬಳಸಿದವು. ಮಾಧ್ಯಮಗಳು ಮತ್ತು ರಾಜಕೀಯದಲ್ಲಿ ಈ ಭಾಷೆ ಹೆಚ್ಚು ಕೇಳಿಬರತೊಡಗಿತು.

ಪ್ರಧಾನಿ ಜಸಿಂದಾ ಅರ್ಡೆರ್ನ್ ತಮ್ಮ ಮಗಳ ಹೆಸರಿನ ಮಧ್ಯದಲ್ಲಿ ‘ಮಾವೊರಿ’ಯನ್ನು ಸೇರಿಸುವ ಮೂಲಕ ಉತ್ತಮ ಸಂದೇಶ ನೀಡಿ, ತಾವು ಮಾವೊರಿ ಮತ್ತು ಇಂಗ್ಲಿಷ್ ಎರಡನ್ನೂ ಕಲಿಯುವುದಾಗಿ ಹೇಳಿದರು. ೨೦೧೮ರಲ್ಲಿ ಅವರು ಮಾವೊರಿ ಭಾಷೆಯ ಗಾದೆಯೊಂದಿಗೆ ಕಾಮನ್ ವೆಲ್ತ್ ದೇಶದ ನಾಯಕ ರನ್ನು ಹುರಿದುಂಬಿಸಿದಾಗ, ಇಡೀ ದೇಶವೇ ಚಪ್ಪಾಳೆ ತಟ್ಟಿತ್ತು. ಇದಕ್ಕೂ ಮುನ್ನ ೨೦೧೭ರ ಆಗಸ್ಟ್‌ನಲ್ಲಿ, ನ್ಯೂಜಿಲೆಂಡ್‌ನ ರೊಟೊರುವಾ ನಗರವು, ಮಾವೊರಿ ಮತ್ತು ಇಂಗ್ಲಿಷ್ ಭಾಷೆಗಳ ಸಂಗಮದಿಂದ ಗುರುತಿಸಿಕೊಂಡ ಮೊದಲ ದ್ವಿಭಾಷಾ ನಗರವಾಯಿತು. ಅದೇ ವರ್ಷದಲ್ಲಿ ‘ಮೊವಾನಾ’ ಹಾಗೂ ‘ದಿ ಲಯನ್ ಕಿಂಗ್’ ಸಿನಿಮಾಗಳು ಮಾವೊರಿ ಭಾಷೆ ಯಲ್ಲಿ ಡಬ್ ಆಗಿ ಆಕ್ಲೆಂಡ್‌ನಲ್ಲಿ ಪ್ರಥಮ ಪ್ರದರ್ಶನ ಕಂಡವು.

೨೦೧೯ರಲ್ಲಿ ನ್ಯೂಜಿಲೆಂಡ್ ಸರಕಾರವು, ೨೦೪೦ರ ವೇಳೆಗೆ ಒಂದು ಮಿಲಿಯನ್ ಜನರು ಮಾವೊರಿ ಭಾಷೆ ಮಾತಾಡುವಂತಾಗುವ ಗುರಿಯೊಂದಿಗೆ ಭಾಷೆಯ ಪುನರುಜ್ಜೀವನದ ಕಾರ್ಯತಂತ್ರವನ್ನು ಪ್ರಾರಂಭಿಸಿತು. ಅದೇ ವರ್ಷ ಆಕ್ಲೆಂಡ್ ವಿಶ್ವವಿದ್ಯಾಲಯದ ಮುದ್ರಣ ವಿಭಾಗವು ಪ್ರತಿಷ್ಠಿತ ಹ್ಯಾರಿ ಪಾಟರ್ ಪುಸ್ತಕಗಳನ್ನು ಮಾವೊರಿ ಭಾಷೆಯಲ್ಲಿ ಪ್ರಕಟಿಸಿ, ಜತೆಗೆ ಮಾವೊರಿ ಭಾಷೆಯಲ್ಲಿನ ಅಂತಾರಾಷ್ಟ್ರೀಯ ಸಾಹಿತ್ಯಗಳ ಇನ್ನೂ ಅನೇಕ ಪುಸ್ತಕ ಗಳನ್ನು ಒಳಗೊಂಡ ಗ್ರಂಥಾಲಯವನ್ನು ನಿರ್ಮಿಸಲು ಮುಂದಾಯಿತು. ಇಂಗ್ಲಿಷ್‌ನ ಸ್ಥಳನಾಮಗಳನ್ನು ಮೂಲ ಮಾವೊರಿ ಹೆಸರುಗಳಿಂದ ಬದಲಿಸುವ ಬಗ್ಗೆ ಚರ್ಚೆಗಳಾಗಿ, ಮಾವೊರಿ ಭಾಷೆ ಮತ್ತು ಗ್ರಾಫಿಕ್ಸ್ ಹೊಂದಿರುವ ಪೊಲೀಸ್ ಕಾರುಗಳು ರಸ್ತೆಗಿಳಿದವು; ಭಾರತದಲ್ಲಿನ ಟೀಕಾಕಾರರಂತೆ
ಅಲ್ಲಿಯೂ ಇಂಗ್ಲಿಷ್ ಭಾಷಾ ಪ್ರೇಮಿಗಳು ಮಾವೊರಿಯ ಪುನರುಜ್ಜೀವನವನ್ನು ಟೀಕಿಸಿದರು, ನ್ಯಾಯಾಲಯಗಳ ಮೊರೆಹೋದರು, ಪತ್ರಿಕೆಗಳಲ್ಲಿ ಟೀಕಿಸಿ ಬರೆದರು.

ಮಾವೊರಿ ಭಾಷಾ ಪುನರುಜ್ಜೀವನವನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆಯೆಂದು ದೂರಿದರು. ೨೦೨೧ರಲ್ಲಿ ಅಲ್ಲಿನ ‘ಬ್ರಾಡ್‌ ಕಾಸ್ಟಿಂಗ್ ಸ್ಟಾಂಡರ್ಡ್ಸ್ ಅಥಾರಿಟಿ’ ಇನ್ನು ಮುಂದಿನ ಪ್ರಸಾರಗಳಲ್ಲಿ ಮಾವೊರಿ ಭಾಷೆಯ ಬಳಕೆಯ ಬಗ್ಗೆ ಬರುವ ದೂರುಗಳನ್ನು ಪರಿಗಣಿಸುವುದಿಲ್ಲವೆಂದು
ಗಟ್ಟಿಯಾಗಿ ಹೇಳುವ ಮೂಲಕ ತನ್ನ ದೇಶದ ಮೂಲ ಸಂಸ್ಕೃತಿಯ ಪರವಾಗಿ ನಿಂತಿತು. ಜಗತ್ತಿನ ಬಹುತೇಕ ದೇಶಗಳು ಯುರೋಪಿನ ವಸಾಹತು ಶಾಹಿಗಳ ದಾಳಿಗೆ ಸಿಲುಕಿ, ತಮ್ಮ ಮೂಲಭಾಷೆ, ಸಂಸ್ಕೃತಿ, ಪರಂಪರೆಯನ್ನು ಮರೆತು, ಬ್ರಿಟಿಷರ ಮನಸ್ಥಿತಿಯಲ್ಲೇ ದಶಕಗಳಿಂದ ಆಡಳಿತ ನಡೆಸುತ್ತಿವೆ.

ವಸಾಹತುಶಾಹಿಗಳು ತಂತಮ್ಮ ದೇಶಗಳಿಗೆ ಮರಳಿದ ನಂತರವೂ, ಅವರು ಬಿಟ್ಟುಹೋಗುವ ಕುರುಹುಗಳು ಮಾತ್ರ ನೂರಾರು ವರ್ಷ ಜೀವಂತವಿರುತ್ತವೆ. ಭಾರತ ಮಾತ್ರವಲ್ಲ, ಜಗತ್ತಿನ ಅನೇಕ ದೇಶಗಳೂ ಇದಕ್ಕೆ ಹೊರತಲ್ಲ. ಬ್ರಿಟಿಷರು ದೇಶ ಬಿಟ್ಟ ನಂತರ ತಮ್ಮ ಮೂಲಸಂಸ್ಕೃತಿಯೆಡೆಗೆ ಮರಳುವ ಪ್ರಕ್ರಿಯೆಯು ಬೆರಳೆಣಿಕೆಯಷ್ಟು ದೇಶಗಳಲ್ಲಿ ಮಾತ್ರ ಕಾಣಸಿಗುತ್ತದೆ. ನ್ಯೂಜಿಲೆಂಡ್‌ನ ಮೂಲಭಾಷೆಯನ್ನೇ ನಶಿಸುವಂತೆ ಮಾಡಿ ಇಂಗ್ಲಿಷನ್ನು ಹೇರಿದ್ದ ಬ್ರಿಟಿಷರ ದಬ್ಬಾಳಿಕೆ ಮನಸ್ಥಿತಿಯ ವಿರುದ್ಧ ಚಾಲನೆ ನೀಡಿದ ಹೋರಾಟವೇ ಮಾವೊರಿ ಭಾಷೆಯ ಅಸ್ತಿತ್ವದ ಹೋರಾಟ. ದಶಕಗಳ ಈ ಹೋರಾಟದ
-ಲವಾಗಿ ಇಂದು ನ್ಯೂಜಿಲೆಂಡ್‌ನಲ್ಲಿ ಅಳಿವಿನಂಚಿನಲ್ಲಿದ್ದ ಮಾವೊರಿ ಭಾಷೆ ಪುನರುಜ್ಜೀವನಗೊಳ್ಳುತ್ತಿದೆ.

ತಮ್ಮ ಮೂಲ ಸಂಸ್ಕೃತಿಯನ್ನು ಮರೆತರೆ ಅಧಿಕಾರಕ್ಕೆ ಬರುವುದು ಕಷ್ಟವೆಂಬುದು ಅಲ್ಲಿನ ರಾಜಕೀಯ ಪಕ್ಷಗಳಿಗೆ ಅರಿವಾಗಿದೆ. ಜಗತ್ತಿನ ಬಹುತೇಕ ದೇಶಗಳಲ್ಲಿ ಮೂಲಸಂಸ್ಕೃತಿಯ ಪುನರುಜ್ಜೀವನವೇ ಪ್ರಮುಖ ವಿಷಯವಾಗಿದೆ. ನ್ಯೂಜಿಲೆಂಡಿನ ಕಿರಿಯ ಸಂಸದೆ ಮೈಪಿ ಕ್ಲಾರ್ಕ್ ಸಂಸತ್ತಿನಲ್ಲಿ ತನ್ನ ಮೂಲ ಭಾಷೆ ಮಾವೊರಿಯಲ್ಲಿ ಮಾಡಿದ ಭಾಷಣವು, ಜಗತ್ತಿನ ಇತರ ದೇಶಗಳೂ ತಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿ ಕೊಳ್ಳುವ ನಿಟ್ಟಿನಲ್ಲಿ ಮೇಲ್ಪಂಕ್ತಿಯಾಗಬೇಕಿದೆ.

Leave a Reply

Your email address will not be published. Required fields are marked *

error: Content is protected !!