ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ಬುರ್ಜ್ ಖಲೀಫಾದ ೧೪೮ನೇ ಮಹಡಿಯಲ್ಲಿ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಟೈಟಲ್ ರಿವೀಲ್ ಆಗಿರೋದು ನೋಡಿ ಕನ್ನಡ ಚಿತ್ರರಂಗ ತುಂಬಾ ಎತ್ತರಕ್ಕೆ ಹೋಗಿದೆ ಎಂದು ಎಲ್ಲರೂ ಮಾತಾಡುತ್ತಿದ್ದಾರೆ.
ಇದರ ಜತೆ ೨ ಸಾವಿರ ಅಡಿ ಎತ್ತರದ ವರ್ಚುವಲ್ ಪೋಸ್ಟರ್ ರಿಲೀಸ್ ಆಗಿದೆ. ಅಲ್ಲದೆ ಸುದೀಪ್ ಅವರ ೨೫ ವರ್ಷಗಳ ಸಿನಿ ಪಯಣದ ೩ ನಿಮಿಷದ ವಿಡಿಯೋ ಕೂಡಾ ಪ್ಲೇ ಆಗಿದೆ. ೩ ನಿಮಿಷಗಳ ಕಾಲ ಬುರ್ಜ್ ಖಲೀಫಾದಲ್ಲಿ ಕನ್ನಡ ಮತ್ತು ವಿಕ್ರಾಂತ್ ರೋಣನ ಜತೆ ಕಿಚ್ಚ ಸುದೀಪ್ ಅವರ ವೈಭವ ಕಂಡುಬಂದಿದೆ. ಈ ಸಂದರ್ಭದಲ್ಲಿ ಕಿಚ್ಚನಿಗೆ ಚಿತ್ರರಂಗದ ಹಲವಾರು ಗಣ್ಯರು ಶುಭಕೋರಿದ್ದಾರೆ. ಆದರೆ ಇದರ ಜತೆಗೆ ಅಷ್ಟೆ ಖರ್ಚು ಮಾಡಿ ಹಣ ವೇಸ್ಟ್ ಮಾಡಿದ್ದಾರೆ, ಅದನ್ನು ಬಡವರಿಗೆ ಕೊಡಬಹುದಾಗಿತ್ತು ಎಂಬ ಕುಹಕಗಳಿಗೇನೂ ಕಮ್ಮಿ ಇಲ್ಲ.
ಇಂಥವೆಲ್ಲ ಇದ್ದಿದ್ದೇ ಬಿಡಿ. ಹೇಳಿ ಕೇಳಿ ಚಿತ್ರರಂಗ ಅಂದ್ರೆ ವೈಭವಯುತ ರಂಗ. ಅಲ್ಲಿ ಹಣ ಖರ್ಚು ಮಾಡಿ ಹಣ ತೆಗೆಯೋದು ಒಂದು ಕಲೆ. ಅದಕ್ಕೂ ಕೊಂಕು ಮಾತಾಡಿದರೆ ಏನು ಹೇಳೋದು. ಹಾಗೆ ನೋಡಿದರೆ ನಮ್ಮ ದೇಶದಲ್ಲಿ ಅದೆಷ್ಟು ಜನ ಶ್ರೀಮಂತರ ತಮ್ಮ ಹಣವನ್ನು ನಾನಾ ಕಾರಣಗಳಿಗೆ ದುಂದುವೆಚ್ಚ ಮಾಡುತ್ತಿಲ್ಲ. ಇದೇ ಮಾತನ್ನು ಅವರೆಲ್ಲರಿಗೂ ಹೇಳ ಲಾಗುತ್ತದೆಯೇ. ಹೋಗಲಿ ಬಿಡಿ, ಆದರೆ ಇದರೆಲ್ಲದರ ಆಚೆಗೂ ವಿಕ್ರಾಂತ್ ರೋಣನ ಅಸಲಿ ಯಶಸ್ಸು ದುಬೈ ಜನರಿಗೆ ಸಲ್ಲುತ್ತದೆ ಎಂದರೆ ತಪ್ಪೇನಿಲ್ಲ.
ನಮ್ಮ ಕರ್ನಾಟಕದ ಬೆಳಗಾವಿಯ ಪಾಲಿಕೆಯ ಮುಂದೆ ಕನ್ನಡದ ಧ್ವಜ ಹಾರಿದರೆ ಮರಾಠಿಗರು ಕಿರಿಕ್ ಮಾಡುತ್ತಾರೆ. ಚೆನ್ನೆ ನಲ್ಲಿ ಕನ್ನಡ ಮಾತಾಡಿದರೆ ತಮಿಳರು ಕನ್ನಡಿಗರ ಜತೆ ಹೊಡೆದಾಡುತ್ತಾರೆ. ಅಷ್ಟೇ ಯಾಕೆ, ನಮ್ಮ ಕರ್ನಾಟಕದಲ್ಲೂ ಹಿಂದಿ ಬೋರ್ಡ್ ಕಾಣಿಸಿದರೆ ನಾವು ಹಿಂದಿ ಹೇರಿಕೆ ಎನ್ನುತ್ತೇವೆ. ಆದರೆ ದುಬೈ ಜನ, ತಮ್ಮ ದೇಶದ ಪ್ರತಿಷ್ಠೆಗಳಲ್ಲಿ ಅತ್ಯುನ್ನತವಾದ ಸ್ಥಾನ ಹೊಂದಿರುವ ಬುರ್ಜ್ ಖಲೀಫಾ ಕಟ್ಟಡ, ಇನ್ಯಾವುದೋ ದೇಶದ, ಒಂದು ರಾಜ್ಯದ ಧ್ವಜದ ಕೆಂಪು ಹಳದಿ ಬಾವುಟವನ್ನು ಹೊದ್ದು ಮಿನುಗುತ್ತಿದ್ದರೆ ಅದಕ್ಕೆ ಯಾವ ತಕರಾರನ್ನೂ ಮಾಡಲಿಲ್ಲ.
ಬದಲಾಗಿ ಅದನ್ನು ಜತೆಯಾಗಿ ಸಂಭ್ರಮಿಸಿದ್ದಾರೆ. ಇದು ನಿಜಕ್ಕೂ ಸಂತಸ ಮತ್ತು ಸೌಹಾರ್ದತೆಯ ಪ್ರತೀಕ. ಇದಕ್ಕಾಗಿ ದುಬೈ ಜನತೆಗೆ ಕನ್ನಡಿಗರು ಧನ್ಯವಾದ ಹೇಳಬೇಕಿದೆ.
ನೆಟ್ ಪಿಕ್
ದೊಡ್ಡ ಸಾಹುಕಾರನಾಗಿದ್ದ ಖೇಮುಗೆ ಅರ್ಜೆಂಟ್ ಆಗಿ ಒಂದು ಮೇಜರ್ ಆಪರೇಷನ್ ಆಗಬೇಕಿತ್ತು. ಡಾಕ್ಟರ್ ಅದಕ್ಕೆ ಬೇಕಾದ ಎಲ್ಲ ತಯಾರಿಯನ್ನೂ ಮಾಡಿಕೊಂಡಿದ್ದರು. ಖೇಮು ಕೂಡ ಸಾಹುಕಾರನಾಗಿದ್ದುದರಿಂದ ಆಪರೇಷನ್‌ಗೆ ಬೇಕಾದ ದುಡ್ಡನ್ನೆ ಸುಲಭವಾಗಿ ಹೊಂದಿಸಿಬಿಟ್ಟಿದ್ದ. ಆದರೆ ಒಂದು ಸಮಸ್ಯೆ ಎದುರಾಗಿತ್ತು. ಖೇಮುದು ಒಂದು ಅಪರೂಪದ ಬ್ಲಡ್ ಗ್ರೂಪ್ ಆಗಿತ್ತು. ಆಪರೇಶನ್ ಸಮಯದಲ್ಲಿ ಬ್ಲಡ್ ತುಂಬಾ ಹೋಗುತ್ತೆ. ಆ ಗ್ರೂಪ್ ಬ್ಲಡ್ ಸ್ಟಾಕ್ ಇರಬೇಕು ಅಂದ್ರು ಡಾಕ್ಟರ್. ಆದರೆ ದಾನಿಗಳು ಯಾರೂ ಸಿಗಲಿಲ್ಲ. ಕೊನೆಗೆ ಒಬ್ಬ ಸೇಟು ತಾನು ಬ್ಲಡ್ ಕೊಡ್ತೀನಿ ಅಂತ ಮುಂದೆ ಬಂದ. ಖೇಮುಗೆ ಸಮಾಧಾನ ಆಯ್ತು. ಆಗ
ತನಗೆ ಕಷ್ಟಕಾಲದಲ್ಲಿ ಸಹಾಯ ಮಾಡುತ್ತಿರುವ ಸೇಟುಗೆ ಏನಾದ್ರೂ ಕೊಡಬೇಕು ಅಂತ ಖೇಮು ಅವನಿಗೆ ಒಂದು ಬೆಂಜ್ ಕಾರು, ೫೦ ಲಕ್ಷ ಕ್ಯಾಶ್, ಅವನ ಹೆಂಡತಿಗೆ ಒಂದು ಡೈಮಂಡ್ ನೆಕ್ಲೇಸ್ ಅನ್ನು ಗಿಫ್ಟ್ ಆಗಿ ಕೊಟ್ಟ. ಆಪರೇಷನ್ ಆಯ್ತು.
ಖೇಮು ಸುಧಾರಿಸಿಕೊಂಡ. ಆದರೆ ಕೆಲವೇ ದಿನಗಳಲ್ಲಿ ಖೇಮುಗೆ ಮತ್ತೆ ಹುಷಾರು ತಪ್ಪಿ ಮತ್ತೆ ಆಪರೇಷನ್ ಮಾಡಬೇಕಾಯ್ತು. ಈ ಬಾರಿ ಕೂಡ ಸೇಟು ಬ್ಲಡ್ ಕೊಟ್ಟ. ಆಪರೇಷನ್ ನಂತರ ಖೇಮು ಸೇಟುಗೆ ಒಂದು ಥ್ಯಾಂಕ್ ಯೂ ಕಾರ್ಡ್ ಜತೆಗೆ ಒಂದು ಸಣ್ಣ ಚಾಕೋಲೇಟ್ ಬಾಕ್ಸ್ ಕಳುಹಿಸಿದ. ಸೇಟುಗೆ ಬೇಜಾರಾಯ್ತು. ಅವನು ಖೇಮುಗೆ ಕಾಲ್ ಮಾಡಿ ಏನಿದು, ಕಳೆದ ಬಾರಿ ನೋಡಿದ್ರೆ, ಬೆಂಜ್ ಕಾರು, ೫೦ ಲಕ್ಷ ಕ್ಯಾಶ್, ನನ್ನ ಹೆಂಡತಿಗೆ ಒಂದು ಡೈಮಂಡ್ ನೆಕ್ಲೇಸ್ ಕೊಟ್ಟಿದ್ರಿ, ಈ ಸಲ ಬರೀ ಕಾರ್ಡ್, ನಾಲಕ್
ಚಾಕಲೇಟು ಅಷ್ಟೇನಾ? ಅಂದ. ಅದಕ್ಕೆ ಖೇಮು ಹೇಳಿದ ಏನ್ ಮಾಡೋದು ಬ್ರದರ್, ಈಗ ನನ್ನ ಮೈಯಲ್ಲಿ ಹರೀತಿರೋದು ಸೇಟು ರಕ್ತ.
ಲೈನ್ ಮ್ಯಾನ್
ಎಣ್ಣೆ ಹೊಡೆದು ಮಾಡೋ ವಿಡಿಯೋ ಕಾಲ್
ಝೂಮ್ ಕಾಲ್
ದುಬೈನಲ್ಲಿ ಹಾಲು ಮಾರೋನು
ಮಿಲ್ಕ ಶೇಖ್
ಲೈಟ್ ಹಾರ್ಟೆಡ್ ಮನುಷ್ಯ ಅಂದ್ರೆ ಯಾರು?
ಎದೆಯಲ್ಲಿ ಜ್ಞಾನದ ಹಣತೆ ಇರೋನು
ಕಿಡ್ನ್ಯಾಪ್ ಡೌಟ್
ದೊಡ್ಡವರನ್ನ ಅಪಹರಣ ಮಾಡಿದರೂ ಅದನ್ನ ಕಿಡ್ ನ್ಯಾಪ್ ಅಂತಾರೆ ಯಾಕೆ?
ರಿಯಾಲಿಟಿ ಶೋ ಆಂಕರ್‌ಗೆ ಕಿವಿಯಲ್ಲಿ ಕೊಡೋ ಪ್ರಾಂಪ್ಟ್
ಕಿವಿಮಾತು
ಲೈಫಲ್ಲಿ ನಗು ಇಲ್ಲದಿದ್ರೆ ಏನಾಗುತ್ತೆ ?
ನಾಲ್ಕು ಜನ ನಮ್ಮನ್ನ ನೋಡಿ ನಗ್ತಾರೆ ಅನ್ನೋ ಭಯ ಇರಲ್ಲ
ಮಂಜು ಸುರಿದು ಆಗುವ ನೋವಿಗೆ ಕಾರಣ
‘ಸ್ನೋ’ ಪಾಯಿಸನ್
ಇನ್ಸ್ಪೆಕ್ಟರ್ ವಿಕ್ರಂ ಬಿಡುಗಡೆ
ಖೇಮು – ಇನ್ಸ್ಪೆಕ್ಟರ್‌ನ ಯಾಕೆ ಜೈಲಿಗೆ ಹಾಕಿದ್ರು?
ಒಂಡೇ ಮ್ಯಾಚ್ ಆಡುವ ಕೆಲ ಆಟಗಾರರನ್ನ ಟೆಸ್ಟ್‌ನಲ್ಲಿ ಯಾಕೆ ಆಡಿಸೊಲ್ಲ
ಯಾಕಂದ್ರೆ ‘ಎವ್ವೆರಿ ಡೇ ಈಸ್ ನಾಟ್ ಒನ್ ಡೇ’
ಹಾಸಿಗೆಯಲ್ಲಿ ಕಕ್ಕ ಮಾಡಿಕೊಳ್ಳುವ ಪುಟ್ಟ ಮಗ
‘ಮಲ’ ಮಗ
ಲೂಸ್ ಟಾಕ್
ಕಂಗನಾ ಅವ್ರೇ ಏನ್ರೀ ಅದು ನಿಮ್ಮ ಟ್ವಿಟ್ಟರ್ ಗಲಾಟೆ?
ಏನಿಲ್ಲ ಅಮಿತಾಭ್ ಬಚ್ಚನ್ ಅವರ ಮೇರೆ ಅಂಗನೇ ಮೇ ತುಮ್ಹಾರಾ ಕ್ಯಾ ಕಾಮ್ ಹೈ ಹಾಡು
ನಂಗಿಷ್ಟ. ಇಂಡಿಯಾ ಬಗ್ಗೆ ಮಾತಾಡ್ತಾ ಇರೋರಿಗೆ ಅದನ್ನೇ ಹೇಳಿದೆ ಅಷ್ಟೇ.
ಮಿಯಾ ಖಲೀ- ಕೂಡ ಈಗ ನಿಮ್ಮ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅದಕ್ಕೇನ್ ಹೇಳ್ತೀರ?
ಏನ್ ಮಾಡಕ್ಕಾಗಲ್ಲ ಕಣ್ರೀ, ಆಕೆ ದೊಡ್ಡ ಹಿಪೋಕ್ರೈಟ್. ಇಂಥವರ ನಿಜವಾದ ಮುಖ ತೋರಿಸಿ ಸಮಾಜದ ಮುಂದೆ ಅವರನ್ನ ಬೆತ್ತಲು ಮಾಡ್ತೀನಿ.
ಮಿಯಾ ಖಲೀಫನಾ ಬೆತ್ತಲು ಮಾಡ್ತೀರಾ, ಸರಿ, ಸರಿ. ಈ ರಿಹಾನಾ ಮೇಲೂ ಉರ್ಕೊಂಡು ಬಿದ್ದಿದೀರಲ್ಲ, ಯಾಕೆ ಹೃತಿಕ್ ರೋಷನ್ ಜೊತೆ ಜಗಳ ಆಡಿ ಬೋರಾಯ್ತಾ?
ನೋಡ್ರಿ ನಂದು ಹೃತಿಕ್ ರೋಷನ್ ದು, ನಮ್ಮಿಬ್ಬರ ಮಧ್ಯೆ ಇರೋ ಇಂಟರ್ನಲ್ ಅಫೇರ್ ನೀವು ಅದರಲ್ಲಿ ತಲೆ ಹಾಕ್ಬೇಡಿ.
ಯಾವಾಗ್ಲೂ ಬರೀ ಇದೇ ಮಾತಾಡ್ತೀರ, ಎಕ್ಸ್ ಟರ್ನಲ್ ಅಫೇರ್ ಮಿನಿಸ್ಟರ್ ಥರ ನಿಮ್ಮನ್ನ ಇಂಟರ್ನಲ್ ಅಫೇರ್ ಮಿನಿಸ್ಟರ್ ಮಾಡಿದ್ರೆ ಚೆನ್ನಾಗಿರುತ್ತೆ ಅಲ್ವಾ?
ಅದೆ ಗೊತ್ತಿಲ್ಲ. ಆದ್ರೆ ಸಚಿನ್ ತೆಂಡೂಲ್ಕರ್ ಅವರನ್ನ ಪೆಟ್ರೋಲಿಯಂ ಮಿನಿಸ್ಟರ್ ಮಾಡಿ ಅಂತ ಮೋದಿ ಅವರಿಗೆ ಹೇಳಿದ್ದೀನಿ, ಅಟ್ ಲೀಸ್ಟ್ ನರ್ವಸ್ ನೈಂಟಿ ಆಗಿ ಪೆಟ್ರೋಲ್ ರೇಟು ೯೦ರಿಂದ ನೂರು ಆಗೋದು ಸ್ವಲ್ಪ ನಿಧಾನನಾದ್ರೂ ಆಗುತ್ತೆ.
ಒಳ್ಳೆ ಐಡಿಯಾ..ಇದಕ್ಕೆ ಸಚಿನ್ ಅವರತ್ರ ಮಾತಾಡಿದ್ರಾ, ಏನಂದ್ರು?
ಅವರು ಒಪ್ಪಿಕೊಂಡಿzರೆ. ಅಷ್ಟೇ ಅಲ್ಲ ಈ ಸಲ ಮುಂಬೈ ಇಂಡಿಯನ್ಸ್ ಟೀಮಲ್ಲಿ ಫಾರಿನ್ ಪ್ಲೇಯರ್ಸ್ ಆಡಿಸಲ್ವಂತೆ. ಯಾಕಂದ್ರೆ ಹೊರಗಿನವರು ಬರೀ ಸ್ಪೆಕ್ಟೇಟರ್ಸ್ ಆಗಿರಬೇಕು, ಪಾರ್ಟಿಸಿಪೇಟ್ ಮಾಡಂಗಿಲ್ಲ ಅಂತ ಅವರೇ ಹೇಳಿದ್ದೀರಲ್ಲ.