ಹಿಂದಿರುಗಿ ನೋಡಿದಾಗ
ಮನುಕುಲವನ್ನು ಕಾಡಿದ ಹಾಗೂ ಕಾಡುತ್ತಿರುವ ಮಹಾನ್ ರೋಗಗಳಲ್ಲಿ ಮಲೇರಿಯ ಪ್ರಮುಖವಾದದ್ದು. ಕನಿಷ್ಠ ೩೦ ದಶಲಕ್ಷ ವರ್ಷಗಳಷ್ಟು ಹಳೆಯ ಕಾಯಿಲೆಯಿದು.
ಮೂಲತಃ ಅಗ್ರಸ್ತನಿಗಳು, ದಂಶಕಗಳು, ಹಕ್ಕಿಗಳು ಮತ್ತು ಉರಗಗಳಿಗೆ ಬರುವ ಪ್ರಾಣಿಜನ್ಯ ರೋಗ. ಮಲೇರಿಯಾಕ್ಕೆ ಕಾರಣ ಪ್ಲಾಸ್ಮೋಡಿಯಂ ಎಂಬ ಕುಲಕ್ಕೆ ಸೇರಿದ ಆದಿಜೀವಿ (ಪ್ರೋಟೋಜ಼ೋವ). ಪ್ಲಾಸ್ಮೋಡಿಯಂ ಕುಲದ ಐದು ಪ್ರಭೇದಗಳಾದ ಪ್ಲಾ ಫ್ಯಾಲ್ಸಿಫಾರಂ, ಪ್ಲಾ ವೈವಾಕ್ಸ್, ಪ್ಲಾ ಮಲೇರಿಯೆ, ಪ್ಲಾ ಓವೇಲ್ ಹಾಗೂ ಪ್ಲಾ ಕ್ನೋಲೆಸಿ ಮನುಷ್ಯರಲ್ಲಿ ಮಲೇರಿಯಕ್ಕೆ ಕಾರಣವಾಗಿದೆ. ಇತಿಹಾಸ ಪೂರ್ವ ಕಾಲದ ಆಫ್ರಿಕದಲ್ಲಿ ಮನುಷ್ಯ ಅಗ್ರಸ್ತನಿಗಳ
ಜತೆಯಲ್ಲಿ ವಾಸಿಸುತ್ತಿದ್ದ. ಪ್ಲಾ ಫ್ಯಾಲ್ಸಿಫಾರಂ ಗೋರಿಲ್ಲಗಳಲ್ಲಿ, ಪ್ಲಾ ವೈವಾಕ್ಸ್ ಗೊರಿಲ್ಲ ಮತ್ತು ಚಿಂಪಾಂಜ಼ಿ ಗಳಲ್ಲಿ, ಪ್ಲಾ ಮಲೇರಿಯೆ ಚಿಂಪಾಂಜ಼ಿ ಗಳಲ್ಲಿ ಮಲೇರಿಯವನ್ನು ಉಂಟು ಮಾಡುತ್ತಿತ್ತು.
ಪ್ಲಾ ಕ್ನೋಲೆಸಿ ಎನ್ನುವ ಆದಿ ಜೀವಿಯು ಏಷ್ಯಾ ಖಂಡದಲ್ಲಿದ್ದ ಮೆಕಾಕ್ ಮಂಗಗಳಲ್ಲಿ ಮಲೇರಿಯವನ್ನು ಉಂಟು ಮಾಡುತ್ತಿತ್ತು. ಸೊಳ್ಳೆಗಳು ಮಲೇರಿಯ ಪೀಡಿತ ಅಗ್ರಸ್ತನಿಗಳ ರಕ್ತ ಹೀರುವಾಗ, ರಕ್ತದಲ್ಲಿದ್ದ ಪ್ಲಾಸ್ಮೋಡಿಯಂ ಜೀವಿಗಳು, ಸೊಳ್ಳೆಯ ಒಡಲನ್ನು ಸೇರಿ, ಅದರ ಜೊಲ್ಲುಗ್ರಂಥಿಗಳಲ್ಲಿ ಬೀಡುಬಿಟ್ಟು, ಅಲ್ಲಿಯೇ ವಧಿಸಿ ಸಂಖ್ಯೆ ಯಲ್ಲಿ ಬಹುಗುಣಗೊಳ್ಳುತ್ತದೆ. ಅದೇ ಸೊಳ್ಳೆಯು ಆರೋಗ್ಯವಾಗಿರುವ ಅಗ್ರಸ್ತನಿಯನ್ನು ಕಚ್ಚಿದಾಗ, ಜೊಲ್ಲು ಗ್ರಂಥಿಯಲ್ಲಿರುವ ಪ್ಲಾಸ್ಮೋಡಿಯಂ, ಹೊಸ ಜೀವಿಯ ಒಡಲನ್ನು ಸೇರಿ, ಅದರಲ್ಲಿ ಮಲೇರಿಯವನ್ನು ಉಂಟು ಮಾಡುತ್ತದೆ. ಹೀಗೆ ಸೊಳ್ಳೆಯು ಮಧ್ಯವರ್ತಿ ಜೀವಿಯಾಗಿ, ಪ್ಲಾಸ್ಮೋಡಿಯಂ ರೋಗಜನಕವನ್ನು ರೋಗಗ್ರಸ್ತರಿಂದ ಆರೋಗ್ಯವಂತರಿಗೆ ಹರಡುತ್ತದೆ.
ಇದೇ ಸೊಳ್ಳೆ ಆರೋಗ್ಯವಾಗಿರುವ ಮತ್ತೊಂದು ಅಗ್ರಸ್ತನಿಯನ್ನು ಕಚ್ಚುವ ಬದಲು ಮನುಷ್ಯರನ್ನು ಕಚ್ಚಿಬಿಟ್ಟರೆ, ಆ ಪ್ಲಾಸ್ಮೋಡಿಯಂ ಮನುಷ್ಯರ ದೇಹವನ್ನು ಪ್ರವೇಶಿಸಿ ಅವನಲ್ಲಿ ಮಲೇರಿಯವನ್ನು ಉಂಟು ಮಾಡುತ್ತದೆ. ಹೀಗೆ ಮೂಲತಃ ಪ್ರಾಣಿಗಳ ಕಾಯಿಲೆಯಾಗಿದ್ದ ಮಲೇರಿಯ, ಇವತ್ತು
ಮನುಷ್ಯರನ್ನು ಕಾಡುವ ಪ್ರಮುಖ ಕಾಯಿಲೆಯಾಗಿದೆ. ಮಲೇರಿಯ ಇಂದು ಜಾಗತಿಕ ರೋಗ. ಈ ಆಧುನಿಕ ಯುಗದಲ್ಲೂ ಪ್ರತಿವರ್ಷ ೨೦೦ ದಶಲಕ್ಷ ಜನರಿಗೆ ಸೋಂಕನ್ನು ಹರಡಿ, ಅವರಲ್ಲಿ ಸುಮಾರು ೬ಲಕ್ಷ ಜನರನ್ನು ಕೊಲ್ಲುತ್ತಿದೆ.
ಇವರಲ್ಲಿ ಶೇ.೯೦ ಜನರು ಆಫ್ರಿಕವಾಸಿಗಳು. ಅದರಲ್ಲೂ ೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮರಣಿಸುತ್ತಿರುವುದು ಕಟು ವಾಸ್ತವ. ಮಲೇರಿಯ ಮನುಷ್ಯನ ಬುದ್ಧಿವಂತಿಕೆಗೆ ಒಂದು ಸವಾಲನ್ನು ಹಾಕಿದೆ ಎಂದರೆ ತಪ್ಪಾಗಲಾರದು. ಇಂತಹ ಮಾರಕ ಕಾಯಿಲೆಯು ಇತಿಹಾಸದಾದ್ಯಂತ ಮಾನವ ಜನಾಂಗದ ಮೇಲೆ ಮಾಡಿರುವ ಆಕ್ರಮಣದತ್ತ ಒಂದು ಪಕ್ಷಿನೋಟ ಹರಿಸುವುದು ಸೂಕ್ತ. ಮಲೇರಿಯದ ಮೊದಲ ದಾಖಲೆಯು ಚೀನೀಯರಲ್ಲಿ ಕಂಡುಬರುತ್ತದೆ. ಅತ್ಯಂತ ಪ್ರಾಚೀನ ವೈದ್ಯಕೀಯ ಕೃತಿ ಯಾದ ನೀ ಚಿಂಗ್ನಲ್ಲಿ (ಕ್ರಿ.ಪೂ.೨೭೦೦) ಬಿಟ್ಟು ಬಿಟ್ಟು ಬರುವ ಜ್ವರದ ಬಗ್ಗೆ ಹಾಗೂ ಊದಿ ಕೊಂಡಿರುವ ಗುಲ್ಮದ (ಸ್ಪ್ಲೀನ್) ಬಗ್ಗೆ ವಿವರಣೆ ದೊರೆಯುತ್ತದೆ. ಈ ವರ್ಣನೆಯು ಮಲೇರಿಯವನ್ನೇ ಹೋಲುತ್ತದೆ.
ಮೆಸೊಪೊಟೋಮಿಯದ ಜೇಡಿಮಣ್ಣಿನ ಹಲಗೆಯಲ್ಲಿರುವ ಕ್ಯೂನಿಫಾರಂ ಬರಹಗಳಲ್ಲಿ ಮಲೇರಿಯದ ವಿವರಣೆಯಿದೆ. ಕ್ರಿ.ಪೂ.೧೫೭೦ರ ಆಸುಪಾಸಿನ ಈಜಿಪ್ಷಿಯನ್ ವೈದ್ಯಕೀಯ ಗ್ರಂಥಗಳಲ್ಲಿ ಪದೆ ಪದೇ ಮರುಕಳಿಸುವ ಜ್ವರ ಹಾಗೂ ಗುಲ್ಮಾತಿವೃದ್ಧಿಯ ಮಾಹಿತಿ ದೊರೆಯುತ್ತದೆ. -ರೊ ಸ್ನೆ-ರು ರಾತ್ರಿಯಲ್ಲಿ ಮಲಗುವಾಗ ಸೊಳ್ಳೆಪರದೆಯನ್ನು ಬಳಸುತ್ತಿದ್ದನಂತೆ. ಈಜಿಪ್ಟಿನ ಯುವ ಅರಸ ಟೂಟನ್ಕಾಮೆನ್ನ ಮಮ್ಮೀಕೃತ ರಕ್ತವನ್ನು ಪರೀಕ್ಷಿಸಿದಾಗ, ಆ ರಕ್ತದಲ್ಲಿ ಪ್ಲಾಸ್ಮೋಡಿಯಂ ಅಂಶಗಳಿರುವುದು ಪತ್ತೆಯಾಗಿದೆ.
ಪ್ರಾಚೀನ ಈಜಿಪ್ಟಿನ ಕೊನೆಯ -ರೋ ಕ್ಲಿಯೋಪಾತ್ರ-೭ ಸೊಳ್ಳೆಯ ಪರದೆಯ ಒಳಗೇ ಮಲಗುತ್ತಿದ್ದಳಂತೆ. ವೇದ ಮತ್ತು ಉಪನಿಷತ್ತುಗಳಲ್ಲಿ ಮಲೇರಿ
ಯವನ್ನು ಹೋಲುವ ಜ್ವರದ ಪ್ರಸ್ತಾಪವಿದೆಯೆನ್ನಲಾಗಿದೆ. ಧನ್ವಂತರಿಯು (ಕ್ರಿ.ಪೂ.೮೦೦) ಸೊಳ್ಳೆಯ ಕಡಿತದಿಂದಲೇ ಈ ಜ್ವರವು ಹರಡುತ್ತದೆ ಎಂದಿರುವುದು ಗಮನೀಯ. ಚರಕ ಸಂಹಿತೆಯು ಐದು ರೀತಿಯ ಜ್ವರವನ್ನು ವಿವರಿಸುತ್ತದೆ. ಅವುಗಳಲ್ಲಿ ಒಂದು ಮಲೇರಿಯ ಲಕ್ಷಣಗಳನ್ನು ಹೋಲು ತ್ತದೆ. ಸುಶ್ರುತನು ಜ್ವರಕ್ಕೂ ಹಾಗೂ ಕೀಟಕಡಿತಕ್ಕೂ ಸಂಬಂಧವಿರುವುದನ್ನು ಪ್ರಸ್ತಾಪಿಸಿದ್ದಾನೆ. ಚೀನೀ ಗ್ರಂಥ ಹಾಂಗ್ಡಿ ನೀಜಿಂಗ್ ಮಲೇರಿಯದ ನೇರ ನಿರೂಪಣೆ ನೀಡುವುದರ ಜತೆಯಲ್ಲಿ, ಅದನ್ನು ನಿಗ್ರಹಿಸಲು ಖಿಂಗ್-ಹಾವೊ ಮೂಲಿಕೆಯನ್ನು ಬಳಸುವ ಬಗ್ಗೆ ಹೇಳುತ್ತದೆ.
ಆರ್ಟೀಮಿಸಿಯದ ಎಲೆಗಳನ್ನು ತಣ್ಣೀರಿನಲ್ಲಿ ನೆನೆಯಿಸಿ, ಕಿವುಚಿ, ಆ ಕಹಿರಸವನ್ನು ಕುಡಿಸಬೇಕೆನ್ನುವುದು ಚಿಕಿತ್ಸೆಯ ಸಾರಾಂಶ. ಪ್ರಾಚೀನ ಗ್ರೀಕ್ ವೈದ್ಯ ಹಿಪ್ಪೋಕ್ರೇಟ್ಸ್ನ ಬರಹಗಳನ್ನು ಕಾರ್ಪಸ್ ಹಿಪ್ಪೋಕ್ರಟೋರಮ್ ಎಂದು ಕರೆಯುತ್ತಾರೆ. ಹಿಪ್ಪೋಕ್ರೇಟ್ಸ್ ಮಲೇರಿಯದ ಬಗ್ಗೆ ವಿಸ್ತೃತವಾದ ವಿವರಣೆ ನೀಡಿರುವುದು ಗಮನೀಯ. ನಗರದ ತಗ್ಗು ಪ್ರದೇಶಗಳಲ್ಲಿರುವ ಜೌಗು ಭೂಮಿಯಲ್ಲಿ, ಸದಾ ತೇವಾಂಶ ತುಂಬಿರುವಂತಹ ಸ್ಥಳಗಳಲ್ಲಿ ಮಲೇರಿಯ ಹೆಚ್ಚು ಕಂಡುಬರುತ್ತದೆ.
ಇದಕ್ಕೆ ಕಾರಣ ಮಿಯಾಸ್ಮ, ಎಂದರೆ ಜೌಗು ಪ್ರದೇಶದಲ್ಲಿ ಹುಟ್ಟುವ ವಿಷಗಾಳಿ. ವಿಷಗಾಳಿ ಎನ್ನುವ ಶಬ್ದವೇ ಮ್ಯಾಲ್ +ಏರ್=ಮಲೇರಿಯ ಎಂದಾಗಿದೆ ಎನ್ನುವ ವಾದವಿದೆ. ಇದು ಗಾಳಿಯ ಚಲನೆಯಲ್ಲಿ ತಾನೂ ಬೆರೆತು, ಎಲ್ಲೆಡೆ ಹರಡಿ, ಉಸಿರಾಡಿದವರಲ್ಲಿ ಅನಾರೋಗ್ಯವನ್ನು ಉಂಟು ಮಾಡುತ್ತದೆ. ಈ ಕಾಯಿಲೆ ಪ್ರತಿವರ್ಷ ಬೇಸಿಗೆ ಹಾಗೂ ಶರತ್ಕಾಲದಲ್ಲಿ ಮರುಕಳಿಸುತ್ತದೆ. ಎರಡು ರೀತಿಯಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಪ್ರತಿ ಮೂರು ದಿನಗಳಿಗೊಮ್ಮೆ ಜ್ವರ ಮರುಕಳಿಸಬಹುದು ಅಥವಾ ಪ್ರತಿ ನಾಲ್ಕು ದಿನಗಳಿಗೊಮ್ಮೆ ಮರುಕಳಿಸಬಹುದು ಎಂಬ ವಿವರಣೆ ದಾಖಲೆಯಾಗಿದೆ. ಈ ವಿವರಣೆಯಿಂದ ಪ್ರಾಚೀನ ಗ್ರೀಸಿನಲ್ಲಿ ಪ್ಲಾ. ಮಲೇರಿಯೆ ಮತ್ತು ಪ್ಲಾ. ವೈವಾಕ್ಸ್ ರೋಗಜನಕಗಳಾಗಿದ್ದವು ಎನ್ನುವ ತೀರ್ಮಾನಕ್ಕೆ ನಾವು ಬರಬಹುದು. ಈ ಎರಡು
ರೋಗಜನಕಗಳ ಜತೆಯಲ್ಲಿ ಪ್ಲಾ. ಫ್ಯಾಲ್ಸಿಫಾರಂ ಸಹ ಅವರನ್ನು ಕಾಡುತ್ತಿದ್ದಿರಬಹುದು.
ಏಕೆಂದರೆ ಶರತ್ಕಾಲದಲ್ಲಿ ಆವರ್ತ ಜ್ವರ ಕಂಡುಬರುವ ಕೆಲವರು ಇದ್ದಕ್ಕಿದ್ದ ಹಾಗೆ ಪ್ರಜ್ಞೆ ಕಳೆದುಕೊಳ್ಳುತ್ತಿದ್ದರು ಹಾಗೂ ಅದೇ ಸ್ಥಿತಿಯಲ್ಲಿ ಮೃತಪಡು
ತ್ತಿದ್ದರು. ಬಹುಶಃ ಇದು ಮಿದುಳು ಮಲೇರಿಯವನ್ನು ಸೂಚಿಸುತ್ತದೆ ಎಂಬುದು ತಜ್ಞರ ಅನಿಸಿಕೆ. ಏಕೆಂದರೆ ಸಾಮಾನ್ಯವಾಗಿ ಮಿದುಳಿಗೆ ಹರಡಿದ ಮಲೇರಿಯವನ್ನು ಗುಣಪಡಿಸುವುದು ಕಷ್ಟ. ಹಿಪ್ಪೋಕ್ರೇಟ್ಸ್, ಮಲೇರಿಯ ಪೀಡಿತರ ಗುಲ್ಮವು ಅತಿವೃದ್ಧಿಯಾಗುವುದನ್ನೂ ಗುರುತಿಸಿದ್ದ. ಬಹುಶಃ ಹಿಪ್ಪೋಕ್ರೇಟ್ಸ್ ಭಾವಿಸಿದ್ದ ಒಂದು ತಪ್ಪು ವಿಚಾರವೆಂದರೆ, ಒಂದು ಕಡೆ ನಿಂತ ನೀರನ್ನು ಕುಡಿಯುವುದರಿಂದ ಈ ಕಾಯಿಲೆಯು ಬರುತ್ತದೆ ಭಾವಿಸಿದ್ದ. ಇದು ಕೀಟಜನ್ಯ ರೋಗವೆಂಬ ಕಲ್ಪನೆ ಆತನಿಗೆ ಇರಲಿಲ್ಲ.
ಬಹುಶಃ ಮಲೇರಿಯ ಆಫ್ರಿಕ ಖಂಡಕ್ಕೆ ಸೀಮಿತವಾಗಿದ್ದ ರೋಗವಾಗಿದ್ದಿರಬೇಕು. ಮನುಕುಲದ ಉಗಮ ಆಫ್ರಿಕದಲ್ಲಿಯೇ ಆಯಿತು ಎನ್ನುವುದು ಒಪ್ಪಿತ ವಾದ. ನಮ್ಮ ಪೂರ್ವಜರು ತಾವು ವಲಸೆ ಹೋಗುವುದರ ಜತೆಯಲ್ಲಿ ತಮ್ಮೊಡನೇ ಮಲೇರಿಯವನ್ನೂ ಕೊಂಡೊಯ್ದು ವಿಶ್ವದಾದ್ಯಂತ ಹರಡಿದರು. ಹೀಗೆ ಪ್ಲಾಸ್ಮೋಡಿಯಂ ಎನ್ನುವ ರೋಗಜನಕವು ಮನುಷ್ಯನ ಒಡಲನ್ನೇ ತನ್ನ ತವರನ್ನಾಗಿ ಮಾಡಿಕೊಂಡು, ಅವನ ಜತೆ ಜತೆಯಲ್ಲಿ ತಾನೂ ಹೊರಟು,
ಮನುಷ್ಯನ ಹಾಗೆ ಜಾಗತಿಕವಾಗಿ ಹರಡಿದೆ ಎನ್ನುವ ವಿಚಾರ ಆಶ್ಚರ್ಯಕರವಾಗಿದೆ. ಅಲೆಮಾರಿಯಾಗಿದ್ದ ನಮ್ಮ ಪೂರ್ವಜ ಒಂದೆಡೆ ನಿಂತು ಕೃಷಿಯನ್ನು ಆರಂಭಿಸಿದ.
ಕೃಷಿ ಭೂಮಿಗಾಗಿ ಕಾಡನ್ನು ಕಡಿಯಲಾರಂಭಿಸಿದ. ನೀರಾವರಿ ಎಂಬ ಪರಿಕಲ್ಪನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದ. ಕೃಷಿಯು ಈ ಚಟುವಟಿಕೆಗಳು ಮಲೇರಿಯವು ಹರಡಲು ನೆರವಾದವು. ಪ್ರಾಚೀನ ಜಗತ್ತಿನ ಪ್ರಮುಖ ನಗರಗಳಲ್ಲಿ ರೋಮ್ ಸಹ ಒಂದು. ರೋಮ್ ನಗರವನ್ನು ಏಳು ಬೆಟ್ಟಗಳ ಮೇಲೆ ನಿರ್ಮಿಸಿದರು. ಈ ಬೆಟ್ಟಗಳನ್ನು ಬಳಸಿಕೊಂಡು ಟೈಬರ್ ನದಿಯು ಹರಿಯುತ್ತಿತ್ತು ಹಾಗೂ ಇಂದಿಗೂ ಹರಿಯುತ್ತಿದೆ. ಟೈಬರ್ ನದಿಯ ಎರಡೂ ದಡಗಳಲ್ಲಿ ಉತ್ತಮ ಮೆಕ್ಕಲು ಮಣ್ಣು ಇತ್ತು. ಆಗಾಗ್ಗೆ ಟೈಬರ್ನಲ್ಲಿ ಪ್ರವಾಹವು ಬಂದು ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗುತ್ತಿತ್ತು.
ಹಾಗಾಗಿ, ಈ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ತ್ವರಿತವಾಗಿ ಬೆಳೆದವು. ನಗರೀಕರಣ ಹೆಚ್ಚುತ್ತಿದ್ದಂತೆಯೇ ಸುತ್ತಮುತ್ತಲಿನ ಕಾಡನ್ನು ಕಡಿಯುವುದು ಅನಿವಾರ್ಯವಾಯಿತು. ಕಾಡಿನ ಬೃಹತ್ ಮರಗಳ ದಿಮ್ಮಿಗಳನ್ನು ಮನೆಗಳ ನಿರ್ಮಾಣದಲ್ಲಿ ಉಪಯೋಗಿಸಿದರು. ಸಣ್ಣಪುಟ್ಟ ಮರಗಳನ್ನು ಸುಟ್ಟು
ಇದ್ದಿಲನ್ನಾಗಿ ಮಾಡಿದರು. ದಿನನಿತ್ಯದ ಅಡುಗೆಗೆ ಅಗತ್ಯ ಇಂಧನವನ್ನಾಗಿ ಬಳಸಿದರು. ಹಾಗಾಗಿ ರೋಮಿನ ಸುತ್ತಲು ಹರಡಿದ್ದ ಲ್ಯಾಟಿಯಮ್ ಅರಣ್ಯ ನಾಶವಾಯಿತು.
ಯಾವಾಗ ಕಾಡು ನಾಶವಾಯಿತೋ, ಆಗ ಪ್ರವಾಹದ ತೀವ್ರತೆ ಹೆಚ್ಚಿತು. ಇತಿಹಾಸಕಾರರಾದ ಹಿರಿಯ ಪ್ಲೀನಿ ಮತ್ತು ಕಿರಿಯ ಪ್ಲೀನಿಗಳಿಬ್ಬರೂ ಕ್ರಿ.ಪೂ.೧೦೦ ರಿಂದ ಕ್ರಿ.ಶ.೧೦೦ರ ನಡುವೆ ರೋಮ್ ನಗರವು ಪದೇ ಪದೇ ಪ್ರವಾಹಗಳಿಗೆ ತುತ್ತಾಗುತ್ತಿದ್ದುದನ್ನು ದಾಖಲಿಸಿರುವರು. ಏಗರ್ -ಂಪ್ಟಿ ನಸ್ ಎಂದು ಹೆಸರಾಗಿದ್ದ ಕೃಷಿ ಭೂಮಿಯ ತುಂಬಾ ಪ್ರವಾಹದ ನೀರು ಸ್ಥಗಿತವಾಗಿ ಪಾಂಪ್ಟಿನೆ ಪಾಲುಡೀಸ್ ಎಂದರೆ ಪಾಂಟೈನ್ ಜೌಗುಭೂಮಿ ಎಂಬ ಹೆಸರನ್ನು ಪಡೆಯಿತು. ಈ ನೀರು ನಿಂತ ಜೌಗುಭೂಮಿಯು ಅನಾಫಿಲಸ್ ಸೊಳ್ಳೆಯ ಅತ್ಯುತ್ತಮ ವರ್ಧನಾ ಕೇಂದ್ರವಾಗಿ ಪರಿಣಮಿಸಿತು.
ತಗ್ಗು ಪ್ರದೇಶದಲ್ಲಿ ನಿಂತ ನೀರಿನ ಸುತ್ತಮುತ್ತಲೂ ವಾಸಿಸುತ್ತಿದ್ದ ಜನರಲ್ಲಿ ಮಲೇರಿಯವು ಅಽಕವಾಗಿ ಕಂಡುಬರುತ್ತಿದ್ದುದನ್ನು ಗಮನಿಸಿದ ರೋಮನ್ನರು, ನೀರಿಗೂ ಹಾಗೂ ಕಾಯಿಲೆಗೂ ಏನೋ ಸಂಬಂಧವಿರಬೇಕು ಎನ್ನುವುದನ್ನು ತರ್ಕಿಸಿದರು. ಕ್ರಿ.ಪೂ.೨ನೆಯ ಶತಮಾನದಲ್ಲಿ ಜೀವಿಸಿದ್ದ ರೋಮನ್ ರಾಜಕಾರಣಿ ಹಾಗೂ ಸೈನ್ಯಾಧಿಪತಿ ಗೈಸ್ ಟೆರೆನ್ಷಿಯಸ್ ವ್ಯಾರೊ ಮನೆಗಳನ್ನು ಯಾವಾಗಲೂ ಎತ್ತರದ ಪ್ರದೇಶಗಳಲ್ಲಿಯೇ ಕಟ್ಟಬೇಕೆಂದ. ಏಕೆಂದರೆ, ಎತ್ತರ ಪ್ರದೇಶದಲ್ಲಿ ಬೀಸುವ ಗಾಳಿಯು ಕ್ರೂರ ಕಿರುಜೀವಿಗಳನ್ನು (ಲಿಟ್ಲ್ ಬೀಸ್ಟ್) ದೂರ ದೂರಕ್ಕೆ ದೂಡುವುದರಿಂದ, ಮಲೇರಿಯ
ಮುಕ್ತರಾಗಬಹುದು ಎನ್ನುವುದು ಆತನ ತರ್ಕ.
ಲ್ಯೂಶಿಯಸ್ ಜೂನಿಯಸ್ ಮಾಡರೇಟಸ್ ಕಾಲ್ಯುಮೆಲ್ಲ ಈ ಕಚ್ಚುವ ಜೀವಿಗಳು ಜೌಗು ಪ್ರದೇಶದ ಸುತ್ತಮುತ್ತಲೂ ವಾಸಿಸುವ ಜನರಲ್ಲಿ ಮಲೇರಿಯ ಹರಡುತ್ತದೆ ಎಂದ. ರೋಮನ್ ದಾರ್ಶನಿಕ ಔಲಸ್ ಕಾರ್ನೀಲಿಯಸ್ ಸೆಲ್ಸಸ್ ತನ್ನ ಡಿ ಮೆಡಿಸಿನ ಕೃತಿಯಲ್ಲಿ ಮಲೇರಿಯವು ಋತುಗಳಿಗೆ ಹಾಗೂ ಹವಾಮಾನಕ್ಕೆ ಅನುಗುಣವಾಗಿ ಕಂಡುಬರುತ್ತದೆ; ಜೌಗು ಪ್ರದೇಶಕ್ಕೂ ಈ ಕಾಯಿಲೆಗೂ ಸಂಬಂಧವಿದೆ ಎಂದು ದಾಖಲಿಸಿ, ಮೂರು ರೀತಿಯ ಮಲೇರಿಯ ಜ್ವರಗಳನ್ನು, ಅಂದರೆ ತೃತೀಯಕ (ಪ್ಲಾ ವೈವಾಕ್ಸ್) ಚತುರ್ಥಕ (ಪ್ಲಾ ಮಲೇರಿಯೆ) ಮತ್ತು ಮಾರಕ ಅರೆ ತೃತೀಯಕ (ಸೆಮಿಟೆರ್ಷಿ ಯನ್, ಪ್ಲಾ ಫ್ಯಾಲ್ಸಿ ಫಾರಂ) ನಿಖರವಾಗಿ ದಾಖಲಿಸಿದ. ವಾಸ್ತವದಲ್ಲಿ ಮಲೇರಿಯವು ರೋಮಿನ ಪಾಂಟೈನ್ ಜೌಗು ಭೂಮಿಯ ಸ್ಥಳೀಯ ರೋಗವಾಗಿ (ಎಂಡೆಮಿಕ್) ಶತಶತಮಾನಗಳವರೆಗೆ ಅಸ್ತಿತ್ವದಲ್ಲಿತ್ತು.
೨೦ನೆಯ ಶತಮಾನದ ಆರಂಭದಲ್ಲಿ ಮಲೇರಿಯ ಬಗ್ಗೆ ಮನುಷ್ಯನ ತಿಳಿವಳಿಕೆ ಹೆಚ್ಚಿದ ಕಾರಣ, ಸೊಳ್ಳೆಗಳ ವರ್ಧನಾ ಕೇಂದ್ರವಾಗಿದ್ದ ಪಾಂಟೈನ್
ಜೌಗುಭೂಮಿಯಲ್ಲಿ ನಿಂತಿದ್ದ ನೀರನ್ನೆಲ್ಲ ಹೊರಹಾಕಿದರು. ಆಗ ರೋಮಿನಲ್ಲಿ ಮಲೇರಿಯವು ತಹಬಂದಿಗೆ ಬಂದಿತು. ಪ್ರಾಚೀನ ರೋಮ್ ಸಾಮ್ರಾಜ್ಯ ದಲ್ಲಿ ಗುಲಾಮರು ಮತ್ತು ಕಡು ಬಡವರು ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಮಲೇರಿಯಕ್ಕೆ ತುತ್ತಾಗುತ್ತಿದ್ದರು. ಏಕೆಂದರೆ ಬೇಸಿಗೆಯು ಬರುತ್ತಿದ್ದಂತೆಯೇ ಶ್ರೀಮಂತರ ರೋಮ್ ನಗರವನ್ನು ಬಿಟ್ಟು ಎತ್ತರದ ಪ್ರದೇಶಗಳಲ್ಲಿದ್ದ ತಮ್ಮ ಎಸ್ಟೇಟುಗಳಿಗೆ ಹೊರಟುಹೋಗುತ್ತಿದ್ದರು. ಈ ಸೌಲಭ್ಯವಿಲ್ಲದವರು ಅನಿ
ವಾರ್ಯವಾಗಿ ಮಲೇರಿಯಕ್ಕೆ ತುತ್ತಾಗಲೇಬೇಕಿತ್ತು.
ಇದು ಗುಲಾಮರನ್ನು ಕೆರಳಿಸಿತು. ಹಾಗಾಗಿ ರೋಮ್ ಇತಿಹಾಸದಲ್ಲಿ ಮೊದಲ ಬಾರಿಗೆ, ಕ್ರಿ.ಪೂ.೧೯೮ರಲ್ಲಿ ಗುಲಾಮರ ದಂಗೆಯೆದ್ದರು. ಇದು ಮಾನವನ ಇತಿಹಾಸದಲ್ಲಿ ಒಂದು ಅಪರೂಪದ ಘಟನೆಯಾಗಿ ಉಳಿದಿದೆ. ರೋಮ್ ಸಾಮ್ರಾಜ್ಯದಲ್ಲಿ ಒಳಚರಂಡಿ ವ್ಯವಸ್ಥೆಯು ಸುಧಾರಣೆಯಾಗುತ್ತಿರುವಂತೆ ಮಲೇರಿಯ ಪ್ರಮಾಣ ಕಡಿಮೆಯಾಯಿತು. ಆದರೆ ಕ್ರಿ.ಶ.೪೧೦ರಲ್ಲಿ ರೋಮ್ ಸಾಮ್ರಾಜ್ಯದ ಪತನ ದೊಡನೆ ಮಲೇರಿಯ ಮಧ್ಯಯುಗದಲ್ಲಿ
ತಾಂಡವ ವಾಡಿತು.