Saturday, 14th December 2024

ಪ್ಯೂಮ ಕಲಿಸಿದ ಮಲೇರಿಯ ಚಿಕಿತ್ಸೆ

ಹಿಂದಿರುಗಿ ನೋಡಿದಾಗ

ಅನಾದಿ ಕಾಲದಿಂದಲೂ ಮಲೇರಿಯ ಗುಣಪಡಿಸುವ ಒಂದು ಪ್ರಮಾಣಬದ್ಧ ಔಷಧವಿರಲಿಲ್ಲ. ಮಲೇರಿಯ ಬಂದವರನ್ನು ಉಪವಾಸ ಕೆಡವುತ್ತಿದ್ದರು. ಭೇದಿ ಮಾಡಿಸುತ್ತಿದ್ದರು. ಅವರ ಶರೀರದಿಂದ ರಕ್ತವನ್ನು ಹೊರಹರಿಸುತ್ತಿದ್ದರು. ಜೇಡರ ಬಲೆ ತಿನ್ನಿಸುತ್ತಿದ್ದರು. ಅಂಗ ಮರ್ಧನ ಮಾಡುತ್ತಿದ್ದರು. ಪಥ್ಯವಿಡುತ್ತಿದ್ದರು. ಅಂಗ ವಿಚ್ಛೇದಿಸುತ್ತಿದ್ದರು. ಹೀಗೆ ಹಲವು ರೀತಿಯ ಅವೈಜ್ಞಾನಿಕ ಚಿಕಿತ್ಸೆಗಳು ಸಾಮಾನ್ಯವಾಗಿದ್ದವು. ಹಾಗಾಗಿ ಮಲೇರಿಯ

ಪೀಡಿತರು ಸಾಯುವುದು ಅನಿವಾರ್ಯವಾಗಿತ್ತು.

ನಮ್ಮ ಭೂಮಿಯ ಪೌರ್ವಾಸ್ತ್ಯ ಗೋಳದಲ್ಲಿರುವ ದೇಶಗಳನ್ನು ಹಳೆಯ ಜಗತ್ತು (ಓಲ್ಡ್ ವರ್ಲ್ಡ್) ಮತ್ತು ಪಾಶ್ಚಾತ್ಯ ಗೋಳದಲ್ಲಿರುವ ದೇಶಗಳನ್ನು ಹೊಸ ಜಗತ್ತು (ನ್ಯೂ ವರ್ಲ್ಡ್) ಎಂದು ವಿಂಗಡಿಸುವುದುಂಟು. ನಮ್ಮ ಪೂರ್ವಜರಿಗೆ ಏಷ್ಯಾ, ಯೂರೋಪ್ ಮತ್ತು ಆಫ್ರಿಕ ಖಂಡಗಳಲ್ಲಿ ರುವ ದೇಶಗಳ ಪರಿಚಯವಿತ್ತು. ಹಾಗಾಗಿ ಅವನ್ನು ಹಳೆಯ ಜಗತ್ತು ಎಂದು ಕರೆದರು. ಉತ್ತರ ಅಮೆರಿಕ ಹಾಗೂ ದಕ್ಷಿಣ ಅಮೆರಿಕವನ್ನು ಸರಿಸುಮಾರು ೫೦೦ ವರ್ಷಗಳ ಹಿಂದೆಯಷ್ಟೇ ಕಂಡುಹಿಡಿದರು. ಹಾಗಾಗಿ ಅಮೆರಿಕದ ಎರಡು ಖಂಡಗಳನ್ನು ಹೊಸ ಜಗತ್ತು ಎಂದು ಕರೆಯುವ ವಾಡಿಕೆಯಿದೆ.

ಈ ಹೊಸಜಗತ್ತಿಗೆ ಸೇರಿದ ದಕ್ಷಿಣ ಅಮೆರಿಕದ ಆಂಡೀಸ್ ಮತ್ತು ಅಮೇಜ್ಹಾನ್ ಕಾಡಿನಲ್ಲಿ (ವೆನಿಜೂವೆಲ, ಕೊಲಂಬಿಯ, ಯೂಕಡರ್, ಪೆರು, ಬೊಲೀವಿಯ, ಚಿಲಿ ಮತ್ತು ಅರ್ಜೆಂಟೀನ) ಮಲೇರಿಯವನ್ನು ಗುಣಪಡಿಸಬಲ್ಲ ಸಿಂಕೋನ ಮರಗಳು ಬೆಳೆಯುತ್ತಿದ್ದವು. ಆದರೆ ಮಲೇರಿಯ
ದಕ್ಷಿಣ ಅಮೆರಿಕದಲ್ಲಿ ಇರಲೇ ಇಲ್ಲ! ದಕ್ಷಿಣ ಅಮೆರಿಕಕ್ಕೆ ಲಗ್ಗೆಯಿಟ್ಟ ಯೂರೋಪಿಯನ್ನರು ಹಾಗೂ ಅವರೊಡನೆ ಕೆಲಸ ಮಾಡಲು ಕರೆದುಕೊಂಡು ಹೋದ ಆಫ್ರಿಕದ ಗುಲಾಮರು ಮಲೇರಿಯವನ್ನು ಉತ್ತರ ಮತ್ತು ದಕ್ಷಿಣ ಅಮೆರಿಕಗಳಲ್ಲಿ ಹರಡಿದರು.

ಮಲೇರಿಯವು ಯೂರೋಪಿಯನ್ನರ ಮೂಲಕ ಅಮೆರಿಕದ ಎರಡು ಖಂಡಗಳಿಗೆ ಹರಡಿತು ಎಂದ ಮೇಲೆ, ಸಿಂಕೋನ ಮರದ ತೊಗಟೆಯು
ಮಲೇರಿಯವನ್ನು ಗುಣಪಡಿಸಬಲ್ಲುದು ಎನ್ನುವ ವಿಚಾರವನ್ನು ಯಾರು ಮೊದಲು ಗಮನಿಸಿದರು ಎನ್ನುವ ಪ್ರಶ್ನೆಯು ಪ್ರಶ್ನೆಯಾಗಿಯೇ ಉಳಿಯುತ್ತದೆ. ಆದರೆ ತಾರ್ಕಿಕವಾಗಿ ಆಲೋಚಿಸಿದಾಗ, ಬಹುಶಃ ಆಂಡಿಯನ್ ಪರ್ವತದ ತಪ್ಪಲಿನಲ್ಲಿ ವಾಸಿಸುತ್ತಿದ್ದ ಬುಡಕಟ್ಟಿನ ನಾಟಿವೈದ್ಯರಿಗೆ ಸಿಂಕೋನ ಮರದ ಉಪಯುಕ್ತತೆ ತಿಳಿದಿರುವ ಸಾಧ್ಯತೆಯು ಹೆಚ್ಚಿತ್ತು ಎನ್ನಬಹುದು. ಕ್ವೆಚುವ ಭಾಷೆಯಲ್ಲಿ ಇವರನ್ನು ಕ್ ಎಂ ಹಾಗೂ ಅಯ್ಮಾರ ಭಾಷೆಯಲ್ಲಿ ಇವರನ್ನು ಕ್ವಿಲ್ಲರಿ ಎಂದು ಕರೆಯುತ್ತಿದ್ದರು. ಚಿಲಿ, ಪೆರು, ಬೊಲೀವಿಯ ಮುಂತಾದ ಪ್ರದೇಶಗಳನ್ನು ಆಕ್ರಮಿಸಿದ ಸ್ಪ್ಯಾನಿಶರು, ಇವರನ್ನು ಕ್ಯುರಾಂಡೋಸ್ ಎಂದು ಕರೆದರು.

ಇತ್ತೀಚೆಗೆ ಕೊಲಂಬಿಯದಲ್ಲಿ ದೊರೆತ ಕೆಲವು ವಸ್ತುಗಳು, ಸಮಕಾಲೀನ ಯೂರೋಪಿಯನ್ನರ ಬರಹಗಳು ಹಾಗೂ ಆಂಡಿಯನ್ ಬುಡಕಟ್ಟಿನವರ ನಾಟಿ ಔಷಧಗಳನ್ನು ವಿವರವಾಗಿ ಅಧ್ಯಯನ ಮಾಡಿದ ಮೇಲೆ, ಅಲ್ಲಿನ ನಾಟಿವೈದ್ಯರಿಗೆ ಸಿಂಕೋನ ಮರದ ಉಪಯೋಗ ತಿಳಿದಿರಬೇಕು ಎನ್ನುವ ತೀರ್ಮಾನಕ್ಕೆ ಬರಲಾಗಿದೆ. ಅವರು ಬಹುಶಃ ಸ್ಥಳೀಯವಾಗಿ ಕಾಡುತ್ತಿದ್ದ ಚಳಿಜ್ವರಗಳ ಚಿಕಿತ್ಸೆಯನ್ನು ಇದನ್ನು ಬಳಸುತ್ತಿದ್ದಿರಬೇಕು.

೧೬೨೦-೧೬೩೦. ಪೆರು ಪ್ರದೇಶದಲ್ಲಿ ಸ್ಪ್ಯಾನಿಶ್ ಜೆಸ್ಯೂಟ್ ಮಿಷನರೀಸ್ ಸ್ಥಳೀಯ ಬುಡಕಟ್ಟು ಜನಗಳ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಆಸಕ್ತಿಯನ್ನು ತಳೆದು, ಅದನ್ನು ಕಲಿಯಲಾರಂಭಿಸಿದರು. ಬಾರ್ನಬೆ ಕೋಬೊ (೧೫೮೨-೧೬೫೭) ಎಂಬ ಒಬ್ಬ ಜೆಸ್ಯೂಟ್ ಪಾದ್ರಿಯಿದ್ದ. ಈತನು ಮೆಕ್ಸಿಕೊ ಮತ್ತು ಪೆರು ದೇಶಗಳ ವಿಸ್ತೃತ ಅನ್ವೇಷಣೆ-ಅಧ್ಯಯನ ನಡೆಸಿದ್ದ. ಈತನು ಸ್ಥಳೀಯವಾಗಿ ದೊರೆಯುತ್ತಿದ್ದ ಕ್ವಿನಾಕ್ವಿನಾ ಮರದ ತೊಗಟೆಯು ಚಳಿಜ್ವರವನ್ನು ಗುಣಪಡಿಸುತ್ತದೆ ಎನ್ನುವುದನ್ನು ಸ್ಥಳೀಯರಿಂದ ಕಲಿತ. ಇವನು ಪೆರುವಿನ ಲೀಮ ಪ್ರದೇಶದಲ್ಲಿ ಸಿಂಕೋನ ತೊಗಟೆಯನ್ನು ಅಪಾರ ಪ್ರಮಾಣದಲ್ಲಿ ಸಂಗ್ರಹಿಸಿ, ಅದನ್ನು ಸ್ಪೇಯಿನ್ ದೇಶಕ್ಕೆ ತಂದ. ನಂತರ ರೋಮ್ ಹಾಗೂ ಇಟಲಿಯ ಇತರ ನಗರಗಳಿಗೆ ಪೂರೈಸಿದ.

ಯೂರೋಪಿನಲ್ಲಿ ಸಿಂಕೋನ ತೊಗಟೆಯ ಪ್ರವೇಶವಾಯಿತಾದರೂ ಅದು ಯಾವುದೇ ನಾಟಕೀಯ ಪರಿಣಾಮವನ್ನು ಬೀರಲಿಲ್ಲ. ಪೆರುವಿನಲ್ಲಿ ಲೋಕ್ಸಾ ಎನ್ನುವ ಪ್ರದೇಶ. ಆ ಪ್ರದೇಶದ ಗರ್ವರ್ನರ್ ಹೆಸರು ಯುವಾನ್ ಲೋಪೆಜ಼್‌ದ ಕ್ಯಾನಿಜ಼ರೆಸ್. ಆತನಿಗೆ ಮೂರರ ಚಳಿಜ್ವರವು (ಟೆರ್ಷಿಯನ್
ಫೀವರ್) ಅಂಟಿಕೊಂಡಿತು. ಆಗ ಒಬ್ಬ ಜೆಸ್ಯೂಟ್ ಪಾದ್ರಿಯು, ಸ್ಥಳೀಯರಿಂದ ತಾನು ಕಲಿತಿದ್ದ ಕ್ವಿನಾಕ್ವಿನಾ ಮರದ ತೊಗಟೆಯ ಪುಡಿಯನ್ನು ಗವರ್ನರನಿಗೆ ನೀಡಿದ. ಆಗ ಗವರ್ನರನ ಮೂರರ ಚಳಿಜ್ವರವು ಗುಣವಾಯಿತು.

ಪೆರು ಪ್ರದೇಶದ ವೈಸರಾಯ್ ಹೆಸರು, ಸ್ಪೇಯಿನ್ ದೇಶದ ಚಿಂಚೋನ್ ಪ್ರಾಂತ್ಯದ ನೆಯ ೪ನೆಯ ಕೌಂಟ್ ಆಗಿದ್ದ ಲೂಯೀಸ್ ಜೆರೋನಿಮೊ ದಿ ಕ್ಯಾಬ್ರೆರ (೧೫೮೯-೧೬೪೭). ಈತನು ೧೬೨೯ರಲ್ಲಿ ಪೆರು ಪ್ರಾಂತದ ವೈಸರಾಯ್ ಆಗಿ ನೇಮಕವಾದ. ಈತನ ಮಡದಿ ಚಿಂಚೋನಿನ ಕೌಂಟೆಸಳಿಗೆ ಮೂರರ ಚಳಿಜ್ವರವು ಬಂದಿತು. ಆಗ ಲೋಕ್ಸಾ ಗವರ್ನರ್ ಯುವಾನ್ ಲೋಪೆಜ಼್‌ದ ಕ್ಯಾನಿeರೆಸ್ ವೈಸರಾಯನಿಗೆ ಒಂದು ಪತ್ರ ಬರೆದ. ತಾನು ಹೇಗೆ ತಾನು ಮೂರರ ಚಳಿಜ್ವರದಿಂದ ಗುಣಮುಖನಾದೆ ಎಂಬುದನ್ನು ವಿವರಿಸಿದ.

ಆಗ ವೈಸರಾಯನು, ಕ್ಯಾನಿಜ಼ರೆಸನಿಗೆ ತನ್ನ ಜೆಸ್ಯೂಟ್ ಪಾದ್ರಿಯ ಜತೆಯಲ್ಲಿ ಲೀಮಕ್ಕೆ ಬರಹೇಳಿದ. ಜೆಸ್ಯೂಟ್ ಪಾದ್ರಿಯು ಕ್ವಿನಾಕ್ವಿನಾ ಮರದ ತೊಗಟೆಯ ಪುಡಿಯನ್ನು ತನ್ನ ಜತೆಯಲ್ಲಿ ತಂದ. ವೈಸರಾಯಿಣಿಯ ಖಾಸಗಿ ವೈದ್ಯ ಯುವಾನ್‌ದ ವೇಗ ಪುಡಿಯ ಕಷಾಯವನ್ನು ಕುಡಿಸಿದ.
ಕೆಲವು ದಿನಗಳಲ್ಲಿ ವೈಸರಾಯಿಣಿ ಪೂರ್ಣಗುಣಮುಖಳಾ ದಳು. ಈ ಘಟನೆಯ ನಂತರ ಒಮ್ಮೆಲೆ ಕ್ವಿನಾಕ್ವಿನಾ ಮರದ ಪುಡಿಯು ಪ್ರಸಿದ್ಧಿಗೆ ಬಂದಿತು. ಚಿಂಚೋನ್ ಪ್ರಾಂತದ ಈ ವೈಸರಾಯ್ ದಂಪತಿಗಳ ನೆನಪಿನಲ್ಲಿ ಈ ಮರವನ್ನು ಆಯಿತೆಂಬ ವಿವರಣೆಯಿದೆ.

ವೈಸರಾಯಿಣಿಯು ಸಿಂಕೋನ ಮರದ ತೊಗಟೆಯ ಪುಡಿಯನ್ನು ಸಂಗ್ರಹಿಸಿ, ತಾನಿದ್ದ ಲೀಮ ಪ್ರದೇಶದ ಮಲೇರಿಯ ಪೀಡಿತರಿಗೆ ತಾನೇ ಹಂಚಿ
ದಳು. ಹಾಗೆಯೇ ಜೆಸ್ಯೂಟ್ ಪಾದ್ರಿಗಳ ಮೂಲಕವೂ ಈ ಪುಡಿಯನ್ನು ಅಗತ್ಯವಿದ್ದವರಿಗೆ ಉಚಿತವಾಗಿ ವಿತರಿಸಿದಳು. ೧೬೪೦ರಲ್ಲಿ ಈಕೆಯು ಯೂರೋಪಿಗೆ ಹಿಂದಿರುಗಿದಳು. ಜತೆಯಲ್ಲಿ ಸಿಂಕೋನ ಮರದ ತೊಗಟೆಯ ಪುಡಿಯನ್ನು ಅಪಾರ ಪ್ರಮಾಣದಲ್ಲಿ ತಂದಳು. ಯೂರೋಪಿನಲ್ಲಿ ಈ
ಜೆಸ್ಯೂಟ್ ತೊಗಟೆ / ಸಿಂಕೋನ ತೊಗಟೆ / ಪೆರೂವಿಯನ್ ತೊಗಟೆಯು ಮಲೇರಿಯವನ್ನು ಗುಣಪಡಿಸುವ ರಾಮ ಬಾಣ ಎಂದು ಜನಪ್ರಿಯವಾಯಿತು.

ಈ ಎಲ್ಲ ಕಥೆಯನ್ನು ೧೬೬೩ರಲ್ಲಿ ಇಟಾಲಿಯನ್ ವೈದ್ಯ ಸೆಬಾಸ್ಟಿಯನ್ ಬಾಡೊ (೧೬೪೩-೧೬೭೬) ಬರೆದ. ಇದು ಕಟ್ಟುಕಥೆ ಎಂದು ವಾದಿಸುವವರು ಸಾಕಷ್ಟು ಜನರಿದ್ದಾರೆ. ಅದು ಪ್ರತ್ಯೇಕ ವಿಚಾರ. ಫ್ರೆಂಚ್ ವಿಜ್ಞಾನಿ ಚಾರ್ಲ್ಸ್ ಮೇರಿ ದೆ ಲ ಕಾಂಡಮೈನ್ (೧೭೦೧-೧೭೭೪) ಮತ್ತೊಂದು ಕುತೂಹಲಕರ ಕಥೆಯನ್ನು ೧೭೩೮ ರಲ್ಲಿ ಹೇಳಿದ. ಪ್ಯೂಮ ಎನ್ನುವ ಬೆಕ್ಕಿನ ಜಾತಿಯ ಪ್ರಾಣಿಯು ಜ್ವರ ಪೀಡಿತವಾದಾಗ, ಅದು ಸಿಂಕೋನ ಮರದ ತೊಗಟೆಯನ್ನು ಜಗಿದು ತಿನ್ನುವುದನ್ನು ಸ್ಥಳೀಯರು ನೋಡಿದರಂತೆ. (ಇದು ಜ಼ೂ-ರ್ಮಕಗ್ನಸಿ ಎಂದು ಪ್ರಸಿದ್ಧ. ಎಂದರೆ ಪ್ರಾಣಿಗಳು ನಡೆಸಿಕೊಳ್ಳುವ ಸ್ವಯಂ ವೈದ್ಯಕೀಯವನ್ನು ಅಧ್ಯಯನ ಮಾಡುವುದು) ಹಾಗಾಗಿ ಅವರೂ ಸಹ ಚಳಿಜ್ವರ ಬಂದಾಗ ಸಿಂಕೋನ ಮರದ ತೊಗಟೆಯನ್ನು ಬಳಸುವುದಕ್ಕೆ ಆರಂಭಿಸಿದರಂತೆ.

ಈತನು ೧೭೩೬ ರಿಂದ ೧೭೪೩ರವರೆಗೆ ಪೆರು ಪ್ರದೇಶದಲ್ಲಿ ಸಂಚಾರವನ್ನು ನಡೆಸಿದ. ಅವನು ಯೂರೋಪಿಗೆ ಹಿಂದಿರುಗಿ ಬರುವಾಗ ಎರಡು
ಸಸ್ಯಗಳನ್ನು ತನ್ನೊಡನೆ ತಂದ. ಮೊದಲನೆಯದು ನೈಜ ರಬ್ಬರನ್ನು ನೀಡುವ ಮರ, ಹೀವಿಯ ಹಾಗೂ ಮಲೇರಿಯವನ್ನು ಗುಣಪಡಿಸುವ ಘಟಕವನ್ನು ಒಳಗೊಂಡ ಸಿಂಕೋನ. ಬಾರ್ಥಲೋಮಿ ಥಾ-ರ್ ಎಂಬ ಜೆಸ್ಯೂಟ್ ಪಾದ್ರಿಯು ಪೆರುವಿನಿಂದ ಯೂರೋಪಿಗೆ ಸಿಂಕೋನ ತೊಗಟೆಯನ್ನು ರಫ್ತು ಮಾಡುವ ಕೆಲಸವನ್ನು ನಿಯಮಿತವಾಗಿ ನಡೆಸಿದ. ಪೋಪಿನ ಖಾಸಗಿ ವೈದ್ಯ ಗೇಬ್ರಿಯಲ್ -ನೆಸ್ಕ (೧೬೬೮ ರಿಂದ ೧೬೭೪ರ ನಡುವೆ ಮರಣ) ಈ ಪುಡಿಯ ಬಗ್ಗೆ ಶಿಫಾರಸನ್ನು ಮಾಡಿದ.

ಅಂದಿನ ಶ್ಕೆಡ್ಯೂಲ್ ರೋಮಾನ ಎಂಬ ಔಷಧಿಯ ಗ್ರಂಥದಲ್ಲಿ ಮಲೇರಿಯ ಪೀಡಿತರಿಗೆ ಸಿಂಕೋನ ಪುಡಿಯನ್ನು ಕೊಡುವ ವಿಧಿ ವಿಧಾನಗಳು ದಾಖಲಾದವು. ಜೆಸ್ಯೂಟ್ ಪಾದ್ರಿಗಳು ಮಲೇರಿಯ ಪೀಡಿತರಿಗೆ ನಿಯಮಿತವಾಗಿ ಸಿಂಕೋನ ತೊಗಟೆಯ ಪುಡಿಯ ಚಿಕಿತ್ಸೆಯನ್ನು ಯಶಸ್ವಿಯಾಗಿ ನೀಡಲಾರಂಭಿಸಿದರು. ಪ್ರಾಟಿಸ್ಟಾಂಟ್ ಕ್ರೈಸ್ತರಿಗೆ ಸಿಂಕೋನ ತೊಗಟೆಯ ಪುಡಿಯನ್ನು ವಿರೋಧಿಸಿ ದರು. ಪ್ರತಿಭಟಿಸಿದರು. ಈ ಪವಾಡ ಸದೃಶ ಪುಡಿಯನ್ನು (ಮಿರಾಕಲ್ ಕ್ಯೂರ್) ತೆಗೆದುಕೊಳ್ಳಬಾರದು ಎಂದು ಪ್ರಚಾರವನ್ನು ಮಾಡಿದರು. ಬ್ರಿಟನ್ನಿನ ಸಿವಿಲ್ ವಾರ್ ಅವಧಿಯಲ್ಲಿ ಬ್ರಿಟಿಶ್ ಸೇನೆಯ ಕಮಾಂಡರ್ ಮತ್ತು ಲೆಫ್ಟಿನಂಟ್ ಜನರಲ್ ಆಗಿದ್ದ ಅಲಿವರ್ ಕ್ರಾಮ್ವೆಲ್ (೧೫೯೯-೧೬೫೮) ಈ ಶೈತಾನನ ಪುಡಿಯನ್ನು ಸೇವಿಸಲು ನಿರಾಕರಿಸಿದ. ಅವನ ಮಲೇರಿಯ ಉಗ್ರವಾಯಿತು. ೧೬೫೮ರಲ್ಲಿ ಮರಣಿಸಿದ.

ಥಾಮಸ್ ಸಿಡೆನ್‌ಹ್ಯಾಮ್ (೧೬೨೪-೧೬೮೯) ಕ್ರಾಮ್ವೆಲ್ ಸೈನ್ಯದಲ್ಲಿ ಕ್ಯಾಪ್ಟನ್ ಆಗಿದ್ದ. ಇವನೂ ಸಹ ಸಿಂಕೋನ ಪುಡಿಯನ್ನು ಒಪ್ಪಲಿಲ್ಲ. ಆದರೆ ಸಿಡೆನ್‌ಹ್ಯಾಮ್ ಮೂಲತಃ ವೈದ್ಯ ನಾಗಿದ್ದ ಕಾರಣ, ಸಿಂಕೋನ ತೊಗಟೆಯು ಹೇಗೆ ಮಲೇರಿಯವನ್ನು ನಿಗ್ರಹಿಸುತ್ತದೆ ಎನ್ನುವುದನ್ನು ಕಣ್ಣಾರೆ
ಕಂಡ. ಈ ಪುಡಿಯ ಬಳಕೆಯನ್ನು ಒಪ್ಪಿದ. ರಾಬರ್ಟ್ ಟಾಲ್ಬರ್ (೧೬೪೨-೧೬೮೧) ತನ್ನದೇ ಆದ ಮಲೇರಿಯ ರೋಧಕ ಔಷಧವನ್ನು ರೂಪಿಸಿದ. ಅವನು ಮಾಡಿದ್ದು ಇಷ್ಟೆ.

ಸಿಂಕೋನ ಪುಡಿಗೆ ಒಂದಷ್ಟು ಅಪೀಮನ್ನು ಬೆರೆಸಿ, ಅವೆರಡನ್ನೂ ವೈಟ್ ವೈನ್‌ನಲ್ಲಿ ಕರಗಿಸಿದ. ಇವನು ಔಷಧಾಗಾರದಲ್ಲಿ (ಅಪೋಥಿಕರಿ) ಔಷಧಗಳ ತಯಾರಿಕೆಯನ್ನು ಕಲಿಯುತ್ತಿದ್ದ. ಆದರೆ ಯಾವಾಗ ತನ್ನದೇ ಆದ ಮಲೇರಿಯ ರೋಧಕ ಔಷಧವನ್ನು ರೂಪಿಸಿದನೋ, ಆಗ ತನ್ನ ಕಲಿಕೆಯನ್ನು ನಿಲ್ಲಿಸಿದ. ಎಸೆಕ್ಸ್ ಪ್ರಾಂತದ ಜೌಗು ಪ್ರದೇಶದಲ್ಲಿ ಮಲೇರಿಯ ವಿಪರೀತವಾಗಿತ್ತು. ಅಲ್ಲಿ ಚಿಕಿತ್ಸೆಯನ್ನು ನೀಡಲಾರಂಭಿಸಿದ. ಅತ್ಯಲ್ಪ ಕಾಲದಲ್ಲಿ ಶ್ರೀಮಂತಿಕೆಯ ಜತೆಯಲ್ಲಿ ಖ್ಯಾತಿಯನ್ನು ಗಳಿಸಿದ. ಇಂಗ್ಲಂಡಿನ ಅರಸ ಚಾರ್ಲ್ಸ್-೨ (೧೬೩೦-೧೬೮೫) ನಿಗೆ ಮಲೇರಿಯವು ಬಂದಾಗ, ಅವನನ್ನು
ಗುಣಪಡಿಸಿದ. ಅರಸನು, ಟಾಲ್ಬರನಿಗೆ ನೈಟ್‌ಹುಡ್ ಗೌರವವನ್ನು ನೀಡಿ ಗೌರವಿಸಿದ. ೧೬೭೨ರಲ್ಲಿ ಇಂಗ್ಲಂಡಿನ ಅರಸೊತ್ತಿಗೆಯ ಖಾಸಗಿ ವೈದ್ಯನಾಗಿ ಆಯ್ಕೆಯಾದ.

ಯೂರೋಪಿನಲ್ಲಿದ್ದ ವೈದ್ಯರು ಮಲೇರಿಯವನ್ನು ಗುಣ ಪಡಿಸಲು ಹೊಸ ಹೊಸ ಔಷಧಗಳ ಅನ್ವೇಷಣೆಯಲ್ಲಿ ತೊದಗಿದರು. ಏಕೆಂದರೆ ಅಂದು ಸಿಂಕೋನ ಪುಡಿಯ ಬೆಲೆ ದುಬಾರಿ ಯಾಗಿತ್ತು ಹಾಗೂ ಮುಕ್ತವಾಗಿ ದೊರೆಯುತ್ತಿರಲಿಲ್ಲ. ಜೊತೆಗೆ ಅದನ್ನು ದಕ್ಷಿಣ ಅಮೆರಿಕದಿಂದ ಆಮದು ಮಾಡಿಕೊಳ್ಳಬೇಕಾಗಿತ್ತು. ಸ್ಯಾಮ್ಯುವಲ್ ಜೇಮ್ಸ್ (೧೭೬೩- ೧೮೩೧) ಎಂಬ  ಬ್ರಿಟಿಶ್ ವೈದ್ಯನು ವಿಲ್ಲೋ ಮರದ (ಸ್ಯಾಲಿಕ್ಸ್ ನೈಗ್ರ)ತೊಗಟೆ ಯನ್ನು ತೆಗೆದುಕೊಂಡ. ಪುಡಿ ಮಾಡಿದ. ಕಷಾಯ ಮಾಡಿ ಮಲೇರಿಯ ಪೀಡಿತರಿಗೆ ನೀಡಿದ. ಮಲೇರಿಯ ಗುಣ ವಾಗಲಿಲ್ಲ. ಆದರೆ ಮಲೇರಿಯದಲ್ಲಿ ಕಂಡುಬಂದ ಜ್ವರವು ಮಾತ್ರ ಪರಿಣಾಮಕಾರಿಯಾಗಿ ಇಳಿಯಿತು.

ಮುಂದಿನ ದಿನಗಳಲ್ಲಿ ವಿಲ್ಲೋ ಮರದ ತೊಗಟೆಯಲ್ಲಿ ಸ್ಯಾಲಿಸಿಲಿಕ್ ಆಸಿಡ್ ಎಂಬ ರಾಸಾಯನಿಕವಿರುವುದು ತಿಳಿದುಬಂದಿತು. ಇದುವೇ ಮುಂದೆ ಆಸ್ಪಿರಿನ್ ಎಂಬ ಬಹುಪಯೋಗಿ ಔಷಧವಾಗಿ ಇಂದಿಗೂ ಮನುಕುಲಕ್ಕೆ ಉಪಕಾರವನ್ನು ಮಾಡುತ್ತಿದೆ.