Thursday, 21st November 2024

ನಡುಗಡ್ಡೆಯ ಸೊಕ್ಕಿಗೆ ಆಲೂಗಡ್ಡೆಯ ಅಸ್ತ್ರ !?

ವಿದೇಶವಾಸಿ

dhyapaa@gmail.com

ಮಾಲ್ಡೀವ್ಸ್‌ನ ಇಂದಿನ ಆರ್ಥಿಕತೆ ನಿಂತಿರುವುದು ಪ್ರವಾಸೋದ್ಯಮ ಮತ್ತು ಸಾಗರ ಉತ್ಪನ್ನಗಳ ಮೇಲೆ. ಅದರಲ್ಲೂ ದೇಶದ ಆರ್ಥಿಕತೆಯ ಶೇ.೯೦ರಷ್ಟು ಆದಾಯ ಪ್ರವಾಸೋದ್ಯಮ ಮತ್ತು ಸಂಬಂಧಿತ ಉದ್ಯಮದಿಂದಲೇ ಬರುತ್ತದೆ. ಇವೆಲ್ಲ ಗೊತ್ತಿದ್ದೂ ಗೊತ್ತಿದ್ದೂ ಮಾಲ್ಡೀವ್ಸ್ ಇತ್ತೀಚೆಗೆ ತನ್ನ ಮೈ ಮೇಲೆ ಇರುವೆ ಬಿಟ್ಟುಕೊಂಡಿತು.

‘ಸುಮ್ಮನೆ ಕುಳಿತುಕೊಳ್ಳಲಾಗದೆ ಮೈಮೇಲೆ ಕೆಂಪು ಇರುವೆ ಬಿಟ್ಟು ಕೊಂಡಂತೆ’ ಎಂಬ ಮಾತಿದೆ. ನಾವು ಸಣ್ಣವರಾಗಿದ್ದಾಗ ತೋಟದ ಕಡೆ ಹೋಗಿ ಆಡುವ ಕೆಲವು ಆಟಗಳಿದ್ದವು. ಅದರಲ್ಲಿ ಮರಕೋತಿ ಆಟವೂ ಒಂದಾಗಿತ್ತು. ನಮ್ಮ ಮಲೆನಾಡಿನಲ್ಲಿ ಹಲಸು, ಕೋಕೋ, ಪೇರಲ, ಜಾಯಿಕಾಯಿ ಮರಗಳಿಗೆ ಏನೂ ಕೊರತೆ ಇಲ್ಲ. ಹಲಸಿನ ಮರ ಸ್ವಲ್ಪ ದೊಡ್ಡದಾಗಿ, ಕಾಂಡ ದಪ್ಪ ಇರುವುದರಿಂದ ಮಕ್ಕಳಿಗೆ ಹತ್ತುವುದು ಸ್ವಲ್ಪ ಕಷ್ಟವಾಗುತ್ತಿತ್ತು ಬಿಟ್ಟರೆ ಅಸಾಧ್ಯವೇನೂ ಆಗಿರಲಿಲ್ಲ. ಬಾಕಿ ಮರಗಳನ್ನು ಹತ್ತುವುದರಲ್ಲಿ ನಮ್ಮ ಕಡೆಯ ಮಕ್ಕಳು ಮಂಗದೊಂದಿಗೂ ಪೈಪೋಟಿ ನಡೆಸುವಷ್ಟು ನಿಷ್ಣಾತರು.

ಆದರೂ ಇವಿಷ್ಟೇ ಮರಗಳ ಹೆಸರನ್ನು ಇಲ್ಲಿ ಹೇಳುವುದಕ್ಕೆ ಕಾರಣವಿದೆ. ಉಳಿದ ಮರಗಳಿಗೆ ಹೋಲಿಸಿದರೆ, ಈ ಮರಗಳಲ್ಲಿ ಚಗಳಿ ಅಥವಾ ಕೆಂಪು ಇರುವೆಗಳು
ಮನೆ ಮಾಡಿಕೊಳ್ಳುವುದು ಹೆಚ್ಚು. ಮೂರು-ನಾಲ್ಕು ಎಲೆಯನ್ನು ಸೇರಿಸಿ, ಕೊಟ್ಟೆ ಮಾಡಿಕೊಂಡು ಅದರಲ್ಲಿ ಈ ಇರುವೆಗಳು ವಾಸ ಮಾಡುತ್ತವೆ. ಆಟ ಆಡಲೆಂದು ಮರದ ಮೇಲೆ ಹೋದ ಮಕ್ಕಳು ಸುಮ್ಮನೆ ಇಳಿದು ಬಂದರೆ ಅವರು ಮಕ್ಕಳೇ ಅಲ್ಲ. ಅದರಲ್ಲೂ ಚಗಳಿ ಗೂಡು ಕಂಡರಂತೂ ಮುಗೀತ್! ಆ ಚಗಳಿ ಹಿಂಡು ತನ್ನ ಗೂಡು, ಗೂಡಿನ ಸುತ್ತಮುತ್ತ ತಾನಾಯಿತು, ತನ್ನ ಕೆಲಸವಾಯಿತು ಎಂದು ಇದ್ದರೂ ನಾವು ಬಿಡುತ್ತಿರಲಿಲ್ಲ. ಇರುವೆಯ ಗೂಡು ಇರುವ ಟೊಂಗೆಯನ್ನು ಮುರಿಯು ವುದು, ಗೂಡನ್ನು ಕಿತ್ತು ಕೆಳಗೆ ಎಸೆಯುವುದು ಇತ್ಯಾದಿ ಚೇಷ್ಟೆ ಮಾಡುತ್ತಿದ್ದೆವು.

ಅದಕ್ಕಿಂತಲೂ, ಒಂದು ಕಡ್ಡಿಯಿಂದ ಗೂಡನ್ನು ಚುಚ್ಚಿ ತೂತು ಮಾಡುವುದು ನಮಗೆ ಹೆಚ್ಚು ಖುಷಿ ಕೊಡುತ್ತಿತ್ತು. ಹಾಗೆ ಚುಚ್ಚಿ ದಾಗ ಹರಿದ ಗೂಡಿನಿಂದ ಒಂದೆರಡು ಇರುವೆಯಾದರೂ ನಮ್ಮ ಮೈ ಮೇಲೆ ಬಿದ್ದು ನಮ್ಮನ್ನು ಕಚ್ಚುತ್ತಿತ್ತು. ಚಗಳಿ ಇರುವೆ ಕಚ್ಚಿದ ಉರಿ ಅನುಭವಿಸಿದವರಿಗೇ ಗೊತ್ತು. ಅದರಲ್ಲೂ ಎಂಟು-ಹತ್ತು ಇರುವೆ
ಗಳು ಒಟ್ಟಿಗೆ ಕಚ್ಚಿದರೆ, ಪರಿಸ್ಥಿತಿ ಹರೋಹರ. ಸುಮ್ಮನಿರಲಾರದೆ ಇರುವೆ ಬಿಟ್ಟುಕೊಳ್ಳುವುದಕ್ಕೆ ಇದು ಒಂದು ಉದಾಹರಣೆ.

ಇತ್ತೀಚೆಗೆ, ಭಾರತದ ಪಶ್ಚಿಮ ದಿಕ್ಕಿನಲ್ಲಿರುವ ಮಾಲ್ಡೀವ್ಸ್ ದೇಶವನ್ನು ನೋಡಿದಾಗ, ಸುಮ್ಮನಿರಲಾಗದೆ ಇರುವೆ ಬಿಟ್ಟುಕೊಂಡಂತೆ ಎಂಬ ಮಾತು ನೆನಪಾಗು ತ್ತದೆ. ಹೇಳಿ-ಕೇಳಿ ಸುಮಾರು ೫ ಲಕ್ಷ ಜನ ಇರುವ ಸಣ್ಣ ದೇಶ ಮಾಲ್ಡೀವ್ಸ್. ಹೇಳಿಕೊಳ್ಳುವುದಕ್ಕೆ ಸಾವಿರಕ್ಕೂ ಹೆಚ್ಚು ದ್ವೀಪಗಳಿದ್ದರೂ, ಜನ ಇರುವುದು ೬೬ ದ್ವೀಪದಲ್ಲಿ ಮಾತ್ರ. ಕೆಲವು ದ್ವೀಪಗಳಲ್ಲಿ ಮನುಷ್ಯ ವಾಸಿಸುವುದು ಬಿಡಿ, ದೋಣಿ ಕಟ್ಟುವುದಕ್ಕೂ ಜಾಗ ಇಲ್ಲ. ರಾಜಧಾನಿ ಮಾಲೆಯಲ್ಲೇ ಒಂದು ಲಕ್ಷಕ್ಕೂ ಹೆಚ್ಚು ಜನ ವಾಸಿಸುತ್ತಾರೆ ಎಂದರೆ ಉಳಿದ ಕಡೆ ಎಷ್ಟಿರಬಹುದು ಯೋಚಿಸಿ.

ಮಾಲ್ಡೀವ್ಸ್ ಬಗ್ಗೆ ಇನ್ನೂ ಹೇಳಬೇಕೆಂದರೆ, ಇಲ್ಲಿಯ ಭೂಪ್ರದೇಶ ಸಮುದ್ರಮಟ್ಟದಿಂದ ೫ ಅಡಿ ಮಾತ್ರ ಎತ್ತರದಲ್ಲಿದೆ. ಅದಕ್ಕಾಗಿಯೇ ಸುನಾಮಿ ಅಪ್ಪಳಿಸಿ
ದಾಗ ೫೭ ದ್ವೀಪಗಳು ತೀವ್ರ ಹಾನಿಗೊಳಗಾಗಿದ್ದವು. ೧೪ ಅಡಿ ಎತ್ತರದ ಸುನಾಮಿ ಅಲೆಗಳು ಬಂದು ಅಪ್ಪಳಿಸಿದರೆ ಹೇಗೆ ತಡೆದುಕೊಂಡೀತು ದ್ವೀಪ!? ಆ
ಒಂದು ಸುನಾಮಿ ಪುಟ್ಟ ದೇಶಕ್ಕೆ ೪೦೦ ಮಿಲಿಯನ್ ಡಾಲರ್ ಪೆಟ್ಟು ಕೊಟ್ಟಿತ್ತು. ಅದು ದೇಶದ ೬೦ ಪ್ರತಿಶತಕ್ಕೂ ಹೆಚ್ಚಾಗಿತ್ತು ಎಂದರೆ ಲೆಕ್ಕ ಹಾಕಿ. ಒಂದು ಕಾಲದಲ್ಲಿ ಸಂಪನ್ಮೂಲ ದೇಶವಾಗಿದ್ದ ಮಾಲ್ಡೀವ್ಸ್‌ನ ಇಂದಿನ ಆರ್ಥಿಕತೆ ನಿಂತಿರುವುದು ಪ್ರವಾಸೋದ್ಯಮ ಮತ್ತು ಸಾಗರ ಉತ್ಪನ್ನಗಳ ಮೇಲೆ. ಅದರಲ್ಲೂ ದೇಶದ ಆರ್ಥಿಕತೆಯ ಶೇ.೯೦ ರಷ್ಟು ಆದಾಯ ಪ್ರವಾಸೋದ್ಯಮ ಮತ್ತು ಅದಕ್ಕೆ ಸಂಬಂಧಿಸಿದ ಉದ್ಯಮದಿಂದಲೇ ಬರುತ್ತದೆ.

ಇವೆಲ್ಲ ಗೊತ್ತಿದ್ದೂ ಗೊತ್ತಿದ್ದೂ ಮಾಲ್ಡೀವ್ಸ್ ಇತ್ತೀಚೆಗೆ ತನ್ನ ಮೈ ಮೇಲೆ ಇರುವೆ ಬಿಟ್ಟುಕೊಂಡಿತು. ಭಾರತದ ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಹೋದದ್ದು, ಸಾಮಾಜಿಕ ಜಾಲತಾಣದಲ್ಲಿ ಅಲ್ಲಿಯ ಫೋಟೋ ಹಂಚಿಕೊಂಡದ್ದು, ಅದಕ್ಕೆ ಮಾಲ್ಡೀವ್ಸ್‌ನ ಮೂವರು ಮಂತ್ರಿಗಳು ಟ್ವಿಟರ್ (ಎಕ್ಸ್) ನಲ್ಲಿ ಕುಹಕವಾಡಿದ್ದು, ಅಲ್ಲಿಯ ಸರಕಾರ ಅವರನ್ನು ವಜಾಗೊಳಿಸಿದ್ದು, ಈ ಕಥೆಗಳೆಲ್ಲ ಎಲ್ಲರಿಗೂ ಗೊತ್ತಿದ್ದದ್ದೇ. ಅಲ್ಲ, ಒಂದು ಟ್ವೀಟ್ ಮಾಡಿದ್ದಕ್ಕೆ ಮೂರು ಮಂತ್ರಿಗಳನ್ನು ಸರಕಾರದಿಂದ ವಜಾ ಮಾಡಬೇಕೇ? ಉಳಿದ ದೇಶಗಳ ಕಥೆ ಬೇರೆ, ಮಾಲ್ಡೀವ್ಸ್‌ನಂಥ ದೇಶದಲ್ಲಿ ಮಾಡಬೇಕು.

ಈಗಾಗಲೇ ಹೇಳಿದಂತೆ ಮಾಲ್ಡೀವ್ಸ್ ಉಸಿರಾಡುತ್ತಿರುವುದೇ ಪ್ರವಾಸೋದ್ಯಮದಿಂದ. ಕಳೆದ ವರ್ಷ ಭಾರತದಿಂದಲೇ ೩ ಲಕ್ಷಕ್ಕೂ ಹೆಚ್ಚು ಜನ ಮಾಲ್ಡೀವ್ಸ್
ಪ್ರವಾಸಕ್ಕೆ ಹೋಗಿ ಬಂದಿದ್ದಾರೆ. ಅಂಥದ್ದರಲ್ಲಿ, ಭಾರತದ ಪ್ರವಾಸಿಗರನ್ನು ಕೆಣಕಿದರೆ ಹೇಗಾಗಬೇಡ? ಅಷ್ಟಕ್ಕೂ ಒಂದು ದೇಶದ ಪ್ರಧಾನಿ ತನ್ನ ದೇಶದ ಸೌಂದರ್ಯವನ್ನು ಹೊಗಳುವುದರಲ್ಲಿ ತಪ್ಪೇ ನಿದೆ? ಭಾರತದ ಪ್ರಧಾನಿ ಮಾಡಿದ್ದು ಅಷ್ಟೇ ತಾನೆ? ಲಕ್ಷದ್ವೀಪಕ್ಕೆ ಹೋದರು, ಅಲ್ಲಿಯ ಸೊಬಗನ್ನು ಇಷ್ಟ
ಪಟ್ಟರು, ಅದನ್ನು ಜನರೊಂದಿಗೆ ಹಂಚಿಕೊಂಡರು.

ಅದರಲ್ಲಿ ಮಾಲ್ಡೀವ್ಸ್‌ನ ವಿಷಯವೇ ಇರಲಿಲ್ಲ. ಹಾಗಾದರೆ ಸಮುದ್ರ ಸೌಂದರ್ಯ ಇರುವುದು ಮಾಲ್ಡೀವ್ಸ್‌ನಲ್ಲಿ ಮಾತ್ರವೇ? ಬೇರೆ ಯಾವ ದೇಶದಲ್ಲೂ ಅದಕ್ಕಿಂತ ಸುಂದರವಾದ ಕಡಲ ತೀರಗಳೇ ಇಲ್ಲವೇ? ಆ ದೇಶಗಳೆಲ್ಲ ಯಾಕೆ ಪ್ರತಿಕ್ರಿಯೆ ನೀಡ ಲಿಲ್ಲ? ಯಾಕೆಂದರೆ ಅದು ನಿಜಕ್ಕೂ ಪ್ರತಿಕ್ರಿಯೆ ನೀಡಬೇಕಾದ ವಿಷಯವೇ ಆಗಿರಲಿಲ್ಲ. ಆದರೆ ಮೂರು ಟ್ವೀಟ್‌ನ ಪರಿಣಾಮ ಏನಾ ಯಿತು ಎಂದರೆ, ಭಾರತದ Ease my trip ಪ್ರವಾಸೋ ದ್ಯಮದ ಸಂಸ್ಥೆ ಭಾರತದಿಂದ ಮಾಲ್ಡೀವ್ಸ್‌ಗೆ ಹೋಗ ಬೇಕಾಗಿದ್ದ ಸಾವಿರಾರು ಪ್ರಯಾಣಿಕರ ವಿಮಾನದ ಟಿಕೆಟ್ ಮತ್ತು ಹೋಟೆಲ್ ಬುಕಿಂಗ್ ಅನ್ನು ರದ್ದುಗೊಳಿಸಿತು. ಬದಲಾಗಿ ಲಕ್ಷದ್ವೀಪಕ್ಕೆ ರಿಯಾಯತಿ ದರದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದಾಗಿ ಹೇಳಿತು. ಅದಕ್ಕೆ ತಕ್ಕಂತೆ ಭಾರತದ ಅನೇಕ ಚಲನಚಿತ್ರ ತಾರೆಯರು, ಕ್ರೀಡಾಪಟುಗಳು ಮಾಲ್ಡೀವ್ಸ್‌ನ ನಡೆಯನ್ನು ಖಂಡಿಸಿ ಲಕ್ಷದ್ವೀಪದ ಪರ ನಿಂತರು. ಅಸಲಿಗೆ ಇದು ಯುದ್ಧದ ವಿಷಯವೇ ಆಗಿರಲಿಲ್ಲ, ಆದರೆ ಮಾಲ್ಡೀವ್ಸ್ ಮಾತ್ರ ಆರಂಭಕ್ಕೂ ಮುನ್ನವೇ ಯುದ್ಧದಲ್ಲಿ ಸೋತಿತ್ತು.

ಇದು ಮೇಲ್ನೋಟಕ್ಕೆ ಪ್ರಕೃತಿ ಸೌಂದರ್ಯ ಮತ್ತು ಟ್ವೀಟ್ ಸಮರದಂತೆ ಕಂಡರೂ ನಿಜ ವಿಷಯ ಬೇರೆಯೇ ಇದೆ. ಮಾಲ್ಡೀವ್ಸ್‌ನಲ್ಲಿ ಈಗ ಅಧಿಕಾರದಲ್ಲಿರುವ ಮೊಹಮ್ಮದ್ ಮುಯಿಝು ಸರಕಾರ ಚೀನಾಕ್ಕೆ ಹತ್ತಿರವಾಗುತ್ತಿದೆ. ಅದಕ್ಕೆ ಆಗಾಗ ಚೀನಾ ವನ್ನು ಹೊಗಳುತ್ತ, ಭಾರತವನ್ನು ಟೀಕಿಸುತ್ತ ದಿನ ಕಳೆಯುತ್ತಿದೆ. ಅವರ ಇಂದಿನ ರಾಜಕೀಯದ ಲೆಕ್ಕಾಚಾರದಲ್ಲಿ ಅವರಿಗೆ ಅದೇ ಸರಿ ಅನಿಸಿರಬಹುದು. ಹಾಗೇನಾದರೂ ಆದರೆ ಇಂದಿನ ಭಾರತ, ಹಿಂದಿನ ಭಾರತವಲ್ಲ ಎಂಬುದನ್ನು ಮಾಲ್ಡೀವ್ಸ್ ಇನ್ನೂ ಅರ್ಥ ಮಾಡಿಕೊಳ್ಳಲಿಲ್ಲ ಎಂದೇ ಹೇಳಬೇಕು.

ಇತ್ತೀಚೆಗೆ ಬಂದ ಒಂದು ವರದಿಯ ಪ್ರಕಾರ, ಭಾರತವು ಮಾಲ್ಡೀವ್ಸ್ ಎಂಬ ನಡುಗಡ್ಡೆಯ ದೇಶಕ್ಕೆ ರಫ್ತು ಮಾಡುತ್ತಿದ್ದ ಆಲೂಗಡ್ಡೆಗೆ ಕಡಿವಾಣ ಹಾಕಿದೆ.
ಇದು ಮಾಲ್ಡೀವ್ಸ್‌ನ ನಿದ್ದೆಗೆಡಿಸಿದೆ. ಏಕೆಂದರೆ ಮಾಲ್ಡೀವ್ಸ್‌ನಲ್ಲಿ ತರಕಾರಿ ಬೆಳೆಯುತ್ತಾರಾದರೂ ಬೇಡಿಕೆ ಇದ್ದಷ್ಟು ಬೆಳೆಯಲು ಆಗುತ್ತಿಲ್ಲ. ಬೇರೆ ದೇಶಗಳಿಂದ ಆಹಾರ ಪದಾರ್ಥಗಳ ಆಮದು ಆ ದೇಶಕ್ಕೆ ಅನಿವಾರ್ಯ. ಭಾರತದಿಂದ ದೊಡ್ಡ ಪ್ರಮಾಣದಲ್ಲಿ ಬೇಳೆ-ಕಾಳು, ಹಣ್ಣು-ತರಕಾರಿ, ಅದರಲ್ಲೂ ಆಲೂಗಡ್ಡೆಯನ್ನು ಆಮದು ಮಾಡಿ ಕೊಳ್ಳುತ್ತದೆ ಮಾಲ್ಡೀವ್ಸ್. ಆ ದೇಶ ಎಲ್ಲಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುವುದೇ ಆಲೂಗಡ್ಡೆಯನ್ನು.

ಇತ್ತ ಭಾರತದಲ್ಲಿ ಆಲೂಗಡ್ಡೆಯ ಬೆಳೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅದಕ್ಕೆ ತಕ್ಕಂತೆಯೇ ರಫ್ತು ಕೂಡ ಹೆಚ್ಚುತ್ತಿದೆ. ಸಣ್ಣ ಲೆಕ್ಕ ಹೇಳುವುದಾದರೆ, ಕಳೆದ ವರ್ಷ ಭಾರತದ ಭೂಮಿಯಲ್ಲಿ ರೈತರು ೬ ಕೋಟಿ ಟನ್ ಬಟಾಟೆ ಬೆಳೆದಿದ್ದಾರೆ. ಅಂದರೆ, ಒಂದು ಚ.ಕಿ.ಮೀ.ಗೆ ೫,೦೦೦ ಟನ್ ಎಂದು ಹಿಡಿದರೂ ೧೨,೦೦೦ ಚ.ಕಿ.ಮೀ. ಬರೀ ಆಲೂಗಡ್ಡೆಯನ್ನೇ ಬೆಳೆ ದಿದ್ದಾರೆ. ಮಾಲ್ಡೀವ್ಸ್ ದೇಶದ ವಿಸ್ತೀರ್ಣ ಹೆಚ್ಚು ಕಮ್ಮಿ ೩೦೦ ಚ.ಕಿ.ಮೀ. ಮಾತ್ರ. ಮಾಲ್ಡೀವ್ಸ್‌ನ ಒಟ್ಟೂ ಭೂಭಾಗ ಮತ್ತು ಭಾರತ ಬಟಾಟೆ ಬೆಳೆಯುವ ಭೂಭಾಗದ ಪ್ರಮಾಣವನ್ನು ಒಮ್ಮೆ ಗಮನ ವಿಟ್ಟು ನೋಡಿ! ಈಗ ಭಾರತ ಮಾಲ್ಡೀವ್ಸ್‌ಗೆ ಆಲೂಗಡ್ಡೆ ರಫ್ತು ಮಾಡುವುದನ್ನು ನಿಲ್ಲಿಸಿದೆ. ಅದರಿಂದ ಭಾರತಕ್ಕೆ ನಷ್ಟವಾಗುವುದಿಲ್ಲವೆ? ಆ ಪ್ರಮಾಣದ ಆಲೂಗಡ್ಡೆಯನ್ನು ಭಾರತ ಏನು ಮಾಡುತ್ತದೆ? ವಿಶ್ವದಲ್ಲಿ ಸದಾ ಬೇಡಿಕೆಯಲ್ಲಿರುವ ವಸ್ತುಗಳಲ್ಲಿ ಆಲೂಗಡ್ಡೆಯೂ ಒಂದು. ಬಟಾಟೆ ಬೆಳೆದವ ಬಡವ ನಾಗಲಾರ.

ನಮ್ಮಲ್ಲಿ ಅಕ್ಕಿ, ಗೋಧಿ ಇರುವಂತೆಯೇ ಪಾಶ್ಚಿಮಾತ್ಯ ದೇಶಗಳಲ್ಲಿ ಆಲೂಗಡ್ಡೆ ಪ್ರಧಾನ ಆಹಾರ. ಎಷ್ಟೋ ಜನರಿಗೆ ಆಲೂಗಡ್ಡೆಯನ್ನು ಬೇಯಿಸಿಕೊಂಡು ತಿಂದರೆ ಅಂದಿನ ಊಟವೇ ಮುಗಿಯಿತು. ಇರಲಿ, ಭಾರತ ಮಾಲ್ಡೀವ್ಸ್‌ಗೆ ರಫ್ತು ಮಾಡುತ್ತಿದ್ದ ಆಲೂಗಡ್ಡೆಯನ್ನು ಏನುಮಾಡುತ್ತಿದೆ ಎಂಬ ಪ್ರಶ್ನೆಗೆ ಉತ್ತರ, ಮಾಲ್ಡೀವ್ಸ್‌ಗೆ ಬದಲಾಗಿ ಬಾಂಗ್ಲಾದೇಶಕ್ಕೆ ಕಳಿಸಿಕೊಡುತ್ತಿದೆ. ಅದಕ್ಕೆಂದು ಭಾರತ ಮತ್ತು ಬಾಂಗ್ಲಾ ನಡುವಿನ ರಫ್ತು ನೀತಿಯನ್ನೂ ಬೇಕೆಂದೇ ಬದಲಾಯಿಸಿಕೊಂಡಿದೆ.
ಭಾರತವು ವಿಶ್ವದ ೫೦ಕ್ಕೂ ಹೆಚ್ಚು ದೇಶಗಳೊಂದಿಗೆ ಆಹಾರ ಪದಾರ್ಥಗಳ ವ್ಯಾಪಾರದ ಒಪ್ಪಂದ ಮಾಡಿ ಕೊಂಡಿದೆ. ಇದರಿಂದ ಭಾರತಕ್ಕೆ ಯಾವ ನಷ್ಟವೂ
ಇಲ್ಲ. ನಷ್ಟವೇನಾದರೂ ಆದರೆ ಅದು ಮಾಲ್ಡೀವ್ಸ್ ದೇಶಕ್ಕೆ.

ಮಾಲ್ಡೀವ್ಸ್‌ನ ಮಿತ್ರದೇಶ ಚೀನಾ ಕೂಡ ಹೆಚ್ಚಿನ ಪ್ರಮಾಣದಲ್ಲಿ ಆಲೂಗಡ್ಡೆ ಬೆಳೆಯುತ್ತದೆ. ಆದರೆ ಮಾಲ್ಡೀವ್ಸ್ ಚೀನಾದಿಂದ ಆಲೂಗಡ್ಡೆ ಆಮದು ಮಾಡಿಕೊಡರೆ, ಸಾಗಾಣಿಕೆಗೆ ಹೆಚ್ಚು ಹಣ ನೀಡ ಬೇಕಾಗುತ್ತದೆ. ಮಾಲ್ಡೀವ್ಸ್‌ನ ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಆಹಾರ ಪದಾರ್ಥಕ್ಕೆ ಹೆಚ್ಚು ಹಣ ವ್ಯಯಿಸುವಂತಿಲ್ಲ. ಹೆಚ್ಚಿನ ಹಣ ಕೊಟ್ಟು ಆಲೂಗಡ್ಡೆಯನ್ನಷ್ಟೇ ಅಲ್ಲ, ಯಾವ ಆಹಾರ ಪದಾರ್ಥಗಳನ್ನೂ ಕೊಂಡುಕೊಳ್ಳಲು ಜನ ಬಯಸುವುದಿಲ್ಲ. ಅಭಿವೃದ್ಧಿಯ ಕೊರತೆ, ಭ್ರಷ್ಟಾಚಾರ ಇತ್ಯಾದಿ ಕಾರಣಗಳಿಗಿಂತ, ಜನ ಹೆಚ್ಚಾಗಿ ಸರಕಾರದ ವಿರುದ್ಧ ತಿರುಗಿ ಬೀಳುವುದು ಆಹಾರ ಪದಾರ್ಥಗಳು ತುಟ್ಟಿಯಾದಾಗ. ಅಲ್ಲಿಯ ಸರಕಾರಕ್ಕೆ ಸದ್ಯ ನಿದ್ದೆಗೆಡಿಸಿರು ವುದು ಈ ಆಲೂಗಡ್ಡೆ ವ್ಯವಹಾರ. ಟ್ವಿಟರ್‌ನಲ್ಲಿ ಹೋದ ಮಾನ ಆಲೂಗಡ್ಡೆಯಲ್ಲೇ ಸಮಾಪ್ತಿ ಯಾಗುತ್ತ ದೆಯೇ ಅಥವಾ ಇನ್ನೂ ಮುಂದುವರಿಯುತ್ತದೆಯೇ ಎಂಬ ಪ್ರಶ್ನೆಗೆ ಸಮಯವೇ ಉತ್ತರಿಸಬೇಕು.

ಇದು ಒಂದು ವಿಚಾರ. ಆದರೆ ಅಷ್ಟಕ್ಕೇ ನಿಲ್ಲಿಸದ ಭಾರತ, ಮಾಲ್ಡೀವ್ಸ್‌ನಲ್ಲಿ ತೊಡಗಿಸಿಕೊಳ್ಳಬೇಕಾಗಿದ್ದ ಇನ್ನೂ ಕೆಲವು ಯೋಜನೆಗಳಿಗೆ ಬ್ರೇಕ್ ಹಾಕುವ
ವಿಚಾರದಲ್ಲಿದೆ. ಅದರಲ್ಲಿ ಪ್ರಮುಖವಾದದ್ದು ಸೌರಶಕ್ತಿಯ ಉತ್ಪಾದನೆ. ಭಾರತ ಮಾಲ್ಡೀವ್ಸ್‌ನಲ್ಲಿ Floating solar park project ಮಾಡಬೇಕಾಗಿತ್ತು. ಅಂದರೆ, ನೀರಿನ ಮೇಲೆ ಸೌರಶಕ್ತಿಯ -ಲಕಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ. ಆದರೆ ಸದ್ಯ ಭಾರತ ಈ ಯೋಜನೆಯನ್ನು ಮಾಲ್ಡೀವ್ಸ್ ಬದಲಾಗಿ ಫ್ರಾನ್ಸ್, ಯುಎಇ ಮತ್ತು ಲಕ್ಷದ್ವೀಪದಲ್ಲಿ ನಿರ್ಮಿಸುತ್ತಿದೆ.

ಮಾಲ್ಡೀವ್ಸ್ ಆಗಲಿ, ಲಕ್ಷದ್ವೀಪವೇ ಆಗಲಿ ದ್ವೀಪಗಳಿಗೆ ಹೆಚ್ಚಿನ ಕೊರತೆ ಇರುವುದು ವಿದ್ಯುತ್ ಮತ್ತು ನೀರು. ಲಕ್ಷದ್ವೀಪದಲ್ಲಿ ಸಮುದ್ರದ ನೀರನ್ನು ಶುದ್ಧೀಕರಿಸಿ ನಿತ್ಯ ಬಳಕೆಗೆ ಸಾಧ್ಯವಾಗಿಸಲು ಇಸ್ರೇಲ್‌ನ ಸಂಸ್ಥೆ ಈಗಾಗಲೇ ಸಿದ್ಧತೆ ನಡೆಸಿದೆ. ಇನ್ನು ಲಕ್ಷದ್ವೀಪಕ್ಕೆ ಬೇಕಾಗಿರುವುದು ಸಂಪರ್ಕ. ಈಗಿರುವ ಪರಿಸ್ಥಿತಿಯಲ್ಲಿ, ವಿಮಾನ ನಿಲ್ದಾಣ ನಿರ್ಮಿಸಲು ಭಾರತಕ್ಕೆ ಹೆಚ್ಚಿನ ಸಮಯವೇನೂ ಬೇಡ. ಇಂದು ಕರ್ನಾಟಕ ರಾಜ್ಯದಲ್ಲೇ ೯ ವಿಮಾನ ನಿಲ್ದಾಣ ಕಾರ್ಯಗತವಾಗಿದ್ದು, ಕೆಲವೇ ತಿಂಗಳಿನಲ್ಲಿ ಈ ಸಂಖ್ಯೆ ಒಂದು ಡಜನ್ ತಲುಪಲಿದೆ. ಹಾಗಿರುವಾಗ ಲಕ್ಷದ್ವೀಪದಲ್ಲಿ ಒಂದೋ ಎರಡೋ ವಿಮಾನ ನಿಲ್ದಾಣ ನಿರ್ಮಿಸುವುದು ಇಂದಿನ ಭಾರತಕ್ಕೆ ದೊಡ್ಡ ವಿಷಯವೇನೂ ಅಲ್ಲ.

‘ಪ್ರತಿಯೊಂದು ಕ್ರಿಯೆಗೂ ಸಮಾನವಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ’ ಎಂಬುದು ನ್ಯೂಟನ್‌ನ ಮೂರನೆಯ ನಿಯಮ. ಇಂದು ಭಾರತ ಕ್ರಿಯೆಗೆ ಸಮನವಾದ ಅಥವಾ ವಿರುದ್ಧ ವಾದ ಪ್ರತಿಕ್ರಿಯೆ ಅಷ್ಟೇ ಅಲ್ಲ, ತೀಕ್ಷ್ಣವಾದ, ತೀವ್ರವಾದ ಪ್ರತಿಕ್ರಿಯೆಯನ್ನು ನೀಡುತ್ತಿದೆ. ಕೆನಡಾಕ್ಕೆ ನೀಡಿದ ಪ್ರತಿಕ್ರಿಯೆಯಾಗಲಿ, ರಷ್ಯಾ- ಉಕ್ರೇನ್ ಯುದ್ಧದ ಸಮಯದಲ್ಲಿ ಯುರೋಪ್ ರಾಷ್ಟ್ರಗಳಿಗೆ ನೀಡಿದ ಉತ್ತರವಾಗಲಿ ಇದನ್ನು ಸಾಬೀತುಪಡಿಸುತ್ತದೆ. ಅದಕ್ಕೂ ಮಿಗಿಲಾಗಿ,
ಪಾಕಿಸ್ತಾನದ ಇಂದಿನ ಪರಿಸ್ಥಿತಿಗೆ ಭಾರತವೂ ಒಂದು ಕಾರಣ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.

ಮಾಲ್ಡೀವ್ಸ್ ಚೀನಾದೊಂದಿಗೆ ಚೆನ್ನಾಗಿರುವುದನ್ನು ಯಾರೂ ಆಕ್ಷೇಪಿಸುವುದಿಲ್ಲ. ಆದರೆ ಚೀನಾದ ಮಾತು ಕೇಳಿ ಭಾರತದ ಜತೆ ಕಿತಾಪತಿಗೆ ಇಳಿದರೆ ಭಾರತ ಸುಮ್ಮನಿರುವುದಿಲ್ಲ. ಗಾಜಿನ ಮನೆಯಲ್ಲಿ ವಾಸಿಸುವವರು ಬೇರೆಯವರ ಮನೆಗೆ ಕಲ್ಲು ಎಸೆಯಬಾರದು ಅಲ್ಲವೇ?