Wednesday, 9th October 2024

ರಾಜತಾಂತ್ರಿಕತೆ ಎಂಬ ರಾಣಿಹೆಜ್ಜೆ ಇಟ್ಟ ಭಾರತ

ವೀಕೆಂಡ್ ವಿತ್ ಮೋಹನ್

camohanbn@gmail.com

ಚದುರಂಗದಲ್ಲಿ ಸೈನಿಕ ಕೇವಲ ಒಂದು ಹೆಜ್ಜೆಯನ್ನಿಡಬಹುದು. ಕುದುರೆಯದ್ದು ಅಡ್ಡ ಮತ್ತು ಉದ್ದದ ಚಲನೆ. ಆನೆಯದ್ದು ಹಿಂದೆ, ಮುಂದೆ,
ಎಡಗಡೆ, ಬಲಗಡೆ ಇಡಬಹುದಾದಂಥ ಲೆಕ್ಕವಿಲ್ಲದಷ್ಟು ಹೆಜ್ಜೆ. ರಾಣಿಗೆ ಮಾತ್ರ ೮ ದಿಕ್ಕುಗಳಲ್ಲೂ ಹಿಂದೆ ಮುಂದೆ ಚಲಿಸಬಹುದಾದ ಸ್ವಾತಂತ್ರ್ಯ. ಹೀಗಾಗಿ ರಾಣಿಯದ್ದು ಚದುರಂಗದಾಟದಲ್ಲಿ ಅತ್ಯಂತ ಬಲಶಾಲಿ ಪಾತ್ರ.

ಕೊನೆಯವರೆಗೂ ರಾಣಿಯನ್ನು ಉಳಿಸಿಕೊಂಡರೆ, ಎದುರಾಳಿ ಯಾವ ಹೆಜ್ಜೆಯಿಟ್ಟರೂ ಗೆಲುವು ಕಟ್ಟಿಟ್ಟಬುತ್ತಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ, ರಾಜತಾಂತ್ರಿಕ ವಿಷಯಗಳಲ್ಲಿ ಕೈಗೊಳ್ಳಬೇಕಾದ ನಿಲುವುಗಳೂ ಸುಲಭದ್ದಾಗಿರುವುದಿಲ್ಲ, ಅದೂ ಚದುರಂಗ ದಾಟವಿದ್ದಂತೆ. ಕಳೆದ ಕೆಲವು ತಿಂಗಳಿಂದ ಅಂತಾರಾಷ್ಟ್ರೀಯ ವಿದ್ಯಮಾನ ಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಭಾರತ, ಎಲ್ಲರೊಂದಿಗೆ ಕೈಜೋಡಿಸಿ ಹೆಜ್ಜೆಯಿಡುತ್ತಿದೆ. ರಷ್ಯಾ ಮತ್ತು
ಉಕ್ರೇನ್ ಯುದ್ಧದ ಸಂದರ್ಭದಲ್ಲಿ ದಶಕಗಳ ಸ್ನೇಹಿತ ರಷ್ಯಾದ ಪರವಾಗಿ ಭಾರತ ನಿಂತಿತ್ತು, ಜತೆಗೆ ಉಕ್ರೇನ್ ದೇಶದಲ್ಲಿನ ನಾಗರಿಕರ ಮೇಲಿನ ದಾಳಿಯನ್ನೂ ಖಂಡಿಸಿತ್ತು.

೨೦೨೩ -ಬ್ರವರಿ ೨೩ರ ರಷ್ಯಾ-ಉಕ್ರೇನ್ ಸಮರದ ಮೊದಲ ವಾರ್ಷಿಕೋತ್ಸವದ ಮುನ್ನಾದಿನದಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಯುದ್ಧವನ್ನು ಕೊನೆಗೊಳಿಸಲು ಕರೆ ನೀಡುವ ನಿರ್ಣಯವನ್ನು ಅಂಗೀಕರಿಸಿತು. ಈ ನಿರ್ಣಯವನ್ನು ೧೪೧ ಸದಸ್ಯ ದೇಶಗಳು ಬೆಂಬಲಿಸಿದರೆ, ೭ ದೇಶಗಳು ವಿರೋಧಿಸಿ ದವು ಮತ್ತು ತಟಸ್ಥ ನಿಲುವು ತೋರುವ ಮೂಲಕ ೩೨ ದೇಶಗಳು ಗೈರಾದವು. ಹೀಗೆ ಗೈರಾದ ದೇಶಗಳಲ್ಲಿ ಭಾರತವೂ ಒಂದಾಗಿತ್ತು. ಇದು ರಷ್ಯಾ ಮತ್ತು ಉಕ್ರೇನ್ ನಡುವಿನ ಬಿಕ್ಕಟ್ಟಿನ ಬಗ್ಗೆ ಭಾರತವು ಮೊದಲಿನಿಂದಲೂ ತಳೆಯುತ್ತಿರುವ ನಿರ್ಧಾರಕ್ಕೆ ಅನುಗುಣವಾಗಿತ್ತು. ಅಂದರೆ, ರಷ್ಯಾ ಸಾರಿದ ಯುದ್ಧ ವನ್ನು ಸಾರಾಸಗಟಾಗಿ ಖಂಡಿಸಲಿಲ್ಲ, ಅತ್ತ ಪಾಶ್ಚಾತ್ಯ ದೇಶಗಳು ರಷ್ಯಾದ ಮೇಲೆ ಹೇರಿದ ನಿರ್ಬಂಧಗಳನ್ನೂ ಒಪ್ಪಲಿಲ್ಲ.

ಬದಲಾಗಿ ರಿಯಾಯಿತಿ ದರದಲ್ಲಿ ರಷ್ಯಾದಿಂದ ಇಂಧನವನ್ನು ಖರೀದಿಸಿತ್ತು ಹಾಗೂ ರಷ್ಯಾ-ಉಕ್ರೇನ್ ನಡುವಿನ ಯುದ್ಧದ ವಿಷಯದಲ್ಲಿ ವಿಶ್ವಸಂಸ್ಥೆಯ ಮತಪ್ರಕ್ರಿಯೆಯಿಂದ ಸತತವಾಗಿ ದೂರ ಉಳಿಯಿತು. ಭಾರತದ ಈ ರಾಜತಾಂತ್ರಿಕ ನಿಲುವು ಪಾಶ್ಚಾತ್ಯ ದೇಶಗಳಲ್ಲಿ ತೀಕ್ಷ್ಣ ಪ್ರತಿಕ್ರಿಯೆಗಳನ್ನು ಹುಟ್ಟು ಹಾಕಿತ್ತು. ಯುದ್ಧದ ಮೊದಲು ಪಾಶ್ಚಾತ್ಯ ದೇಶಗಳೊಂದಿಗಿನ ತನ್ನ ಸಂಬಂಧವನ್ನು ಗಟ್ಟಿಮಾಡುವೆಡೆಗೆ ಹೊರಟಿದ್ದ ಭಾರತ, ಯುದ್ಧ ಪ್ರಾರಂಭ
ವಾದ ನಂತರ ರಷ್ಯಾವನ್ನೇಕೆ ಖಂಡಿಸಲಿಲ್ಲ ಎಂದು ಹಲವು ದೇಶಗಳು ಅಚ್ಚರಿಪಟ್ಟವು. ಮತ್ತೆ ಕೆಲ ದೇಶಗಳು, ರಷ್ಯಾದಿಂದ ತೈಲ ಖರೀದಿಸುವ ಮೂಲಕ ಭಾರತವು ವ್ಲಾಡಿಮಿರ್ ಪುಟಿನ್ ಅವರ ಯುದ್ಧಕ್ಕೆ ಆರ್ಥಿಕ ನೆರವು ನೀಡುತ್ತಿದೆ ಎಂದೂ ಜರಿದವು.

ಭಾರತವು ತನ್ನ ಪಾಶ್ಚಾತ್ಯ ಪಾಲುದಾರ ದೇಶಗಳಿಗಿಂತ ವಿಭಿನ್ನವಾದ ಮಾರ್ಗವನ್ನು ಅನುಸರಿಸಿ ತಟಸ್ಥ ನಿಲುವು ತೆಗೆದುಕೊಂಡಿದ್ದನ್ನು ಜಗತ್ತೇ ಬೆಕ್ಕಸ ಬೆರಗಾಗಿ ನೋಡಿತ್ತು. ಉಕ್ರೇನ್ ಬಿಕ್ಕಟ್ಟನ್ನು ರಾಜತಾಂತ್ರಿಕತೆ ಮತ್ತು ಮಾತುಕತೆಯ ಮೂಲಕವಷ್ಟೇ ಬಗೆಹರಿಸಬೇಕೆಂದು ಭಾರತ ಪ್ರತಿಪಾದಿಸುತ್ತಾ ಬಂದಿದೆ. ೨೦೨೩ರ ಮೇ ತಿಂಗಳಲ್ಲಿ ಜಪಾನಿನ ಹಿರೋಷಿಮಾದಲ್ಲಿ ನಡೆದ ಜಿ-೭ ಶೃಂಗಸಭೆಯ ವೇಳೆ ಪ್ರಧಾನಿ ಮೋದಿಯವರು ಉಕ್ರೇನ್ ಅಧ್ಯಕ್ಷ
ಝೆಲೆನ್ಸ್ಕಿ ಅವರೊಂದಿಗೆ ಖಾಸಗಿ ಮಾತುಕತೆ ನಡೆಸಿ, ‘ಸಂಘರ್ಷಕ್ಕೆ ಪರಿಹಾರ ಕಂಡುಹಿಡಿಯಲು ಭಾರತ ಸಾಧ್ಯ ವಿರುವ ಎಲ್ಲವನ್ನೂ ಮಾಡಲಿದೆ’ ಎಂದಿದ್ದರು.

ಕಳೆದ ವರ್ಷದ ಸೆಪ್ಟೆಂಬರ್ ೧೬ರಂದು, ಉಜ್ಬೆಕಿಸ್ತಾನದ ಸಮರ್ಕಂಡ್ ನಗರದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಜತೆ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಮೋದಿ ಯವರು, ‘ಇದು ಯುದ್ಧದ ಯುಗವಲ್ಲ, ಸಂಘರ್ಷವನ್ನು ಕೊನೆಗೊಳಿಸುವುದು ಸೂಕ್ತ’ ಎಂದಿದ್ದರು. ವಿಶ್ವಸಂಸ್ಥೆಯ ನಿಯಮಗಳು ಮತ್ತು ಅಂತಾರಾ ಷ್ಟ್ರೀಯ ಕಾನೂನಿನಲ್ಲಿ ಪ್ರತಿಪಾದಿಸಲಾದ ತತ್ವಗಳ ಆಧಾರದ ಮೇಲೆ ಭಾರತವು ರಷ್ಯಾ ಮತ್ತು ಉಕ್ರೇನ್ ಕುರಿತಾಗಿ ತನ್ನ ನಿಲುವನ್ನು ತಳೆಯುತ್ತಾ ಬಂದಿದೆ. ಎಲ್ಲಾ ದೇಶ ಗಳ ಸಾರ್ವಭೌಮತ್ವವನ್ನು ವಿನಾಯಿತಿ ಇಲ್ಲದೆ ಎತ್ತಿಹಿಡಿದು, ಮಧ್ಯಸ್ತಿಕೆಯ ಮೂಲಕ ಶಾಂತಿ ಪ್ರಯತ್ನಗಳನ್ನು ನ್ಯಾಯ ಯುತವಾಗಿ ಮಾಡಿ, ನಿರಂತರ ಪರಿಹಾರವನ್ನು ಕಂಡುಕೊಳ್ಳಬೇಕೆಂಬುದು ಭಾರತದ ಗಟ್ಟಿನಿಲುವಾಗಿದೆ.

ಇಸ್ರೇಲ್ ಮತ್ತು ಪ್ಯಾಲೆಸ್ತೀನಿಯರ ನಡುವಿನ ಯುದ್ಧದ ವಿಷಯದಲ್ಲಿ ಭಾರತ ತೆಗೆದುಕೊಂಡ ನಿಲುವುಗಳನ್ನೂ ಸೂಕ್ಷ್ಮವಾಗಿ ಗಮನಿಸಬೇಕು. ಹಮಾಸ್ ಉಗ್ರರು ಇಸ್ರೇಲ್‌ನ ನಾಗರಿಕರನ್ನು ಗುರಿಯಾಗಿಸಿಕೊಂಡು ಇದ್ದಕ್ಕಿದ್ದಂತೆ ನಡೆಸಿದ ರಾಕೆಟ್ ದಾಳಿಯನ್ನು ಭಾರತ ತೀಕ್ಷ್ಣವಾಗಿ ಖಂಡಿಸಿತ್ತು. ಇಸ್ರೇಲ್ ತನ್ನ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳಲು ಪ್ಯಾಲೆಸ್ತೀನಿಯರ ಮೇಲೆ ನಡೆಸಿದ್ದ ಪ್ರತಿದಾಳಿಯನ್ನು ಭಾರತ ಬೆಂಬಲಿಸಿತ್ತು. ಯುದ್ಧಕ್ಕೂ ಮುನ್ನ ಮೋದಿ
ಯವರು ೨೦೧೮ರಲ್ಲಿ ಮೊಟ್ಟಮೊದಲ ಬಾರಿಗೆ ಪ್ಯಾಲೆಸ್ತೀನಿಗೆ ಭೇಟಿನೀಡಿ, ಅಲ್ಲಿನ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು.

ಜತೆಗೆ ಇಸ್ರೇಲ್‌ಗೂ ಮೋದಿ ಭೇಟಿನೀಡುತ್ತಲೇ ಇದ್ದಾರೆ. ಅವರು ಅಧಿಕಾರಕ್ಕೆ ಬಂದ ನಂತರ ಇಸ್ರೇಲ್ ಜತೆ ಗಿನ ರಾಜತಾಂತ್ರಿಕ ಸಂಬಂಧಗಳು ಮತ್ತಷ್ಟು ಗಟ್ಟಿಯಾಗಿವೆ, ತಂತ್ರಜ್ಞಾನ ಹಂಚಿಕೆ, ದೈನಂದಿನ ವ್ಯವಹಾರ, ರಕ್ಷಣಾ ಸಲಕರಣೆಗಳ ಒಪ್ಪಂದಗಳು ಹೆಚ್ಚಾಗಿವೆ. ಆದರೆ, ವಿವಾದಿತ ಜೆರುಸಲೇಂ ಅನ್ನು ಇಸ್ರೇಲಿನ ರಾಜಧಾನಿಯಾಗಿಸಬೇಕೆಂದು ಅಮೆರಿಕ ೨೦೧೭ರಲ್ಲಿ ಹೇಳಿದಾಗ ಭಾರತ ಅದಕ್ಕೊಪ್ಪದೆ ಅದರ ವಿರುದ್ಧ ಮತ ಹಾಕಿತ್ತು. ಹಾಗಂತ ಭಾರತ-ಇಸ್ರೇಲ್ ನಡುವಿನ ರಾಜತಾಂತ್ರಿಕ ಸಂಬಂಧವೇನೂ ಹದಗೆಟ್ಟಿಲ್ಲ.

ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ವಿಷಯದಲ್ಲಿ ಭಾರತದ ನಿಲುವು ಸ್ಪಷ್ಟವಾಗಿದೆ. ಹಮಾಸ್ ಉಗ್ರರು ಇಸ್ರೇಲಿನ ಮೇಲೆ ನಡೆಸುವ ಕೃತ್ಯವನ್ನು ಭಾರತವು ಸಹಿಸುವುದಿಲ್ಲ. ಹಮಾಸ್ ಉಗ್ರರನ್ನು ಕಟ್ಟಿಹಾಕುವ ಹೊಣೆ ಪ್ಯಾಲೆಸ್ತೀನ್ ಹೆಗಲ ಮೇಲಿದೆ; ಹಾಗಂತ ಯುದ್ಧದ ಹೆಸರಿನಲ್ಲಿ ನಿರಂತರವಾಗಿ
ಪ್ಯಾಲೆಸ್ತೀನಿ ನಾಗರಿಕರ ಮೇಲಾಗುವ ದಾಳಿಯನ್ನು ಸಹಿಸುವುದಿಲ್ಲ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ವಿಷಯದಲ್ಲಿ ಭಾರತವು ಮೊದಲಿಂದಲೂ ಎರಡು ದೇಶಗಳ ಸೃಷ್ಟಿಯ ಪರಿಹಾರವನ್ನೇ ಬೆಂಬಲಿಸುತ್ತಾ ಬಂದಿದೆ. ಮೋದಿಯವರು ೨೦೧೮ರಲ್ಲಿ ಪ್ಯಾಲೆಸ್ತೀನಿಗೆ ತೆರಳಿದಾಗ ವೆಸ್ಟ್ ಬ್ಯಾಂಕ್‌ಗೆ ಭೇಟಿನೀಡುವ
ಮೂಲಕ ಭಾರತದ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದರು.

ಭಾರತವು ಇಸ್ರೇಲಿನ ಪರವಾಗಿ ಮತ್ತು ಪ್ಯಾಲೆಸ್ತೀನಿಯರ ವಿರುದ್ಧವಾಗಿ ನಿಂತರೆ ಕೊಲ್ಲಿ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಕಚ್ಚಾತೈಲ ಪೂರೈಕೆ ವಿಷಯದಲ್ಲಿ ಭಾರತವು ಕೊಲ್ಲಿ ರಾಷ್ಟ್ರಗಳನ್ನು ಹೆಚ್ಚು ಅವಲಂಬಿಸಿದೆ. ಇಷ್ಟಾಗಿಯೂ, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ವಿಷಯದಲ್ಲಿ ಭಾರತ ತಳೆದಿರುವ ಸ್ಪಷ್ಟ ರಾಜತಾಂತ್ರಿಕ ನಿಲುವು, ಕೊಲ್ಲಿ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ಹಾಳುಮಾಡಲಿಲ್ಲ. ಬದಲಾಗಿ, ಸೌದಿ ಅರೇಬಿಯಾ ದೇಶದೊಂದಿಗಿನ ಭಾರತದ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಇತ್ತೀಚಿನ ‘ಭಾರತ-ಕೊಲ್ಲಿ ರಾಷ್ಟ್ರಗಳು-ಯುರೋಪ್’ ಆರ್ಥಿಕ
ಕಾರಿಡಾರ್ ಇದಕ್ಕೆ ಕಣ್ಣಮುಂದಿರುವ ಉದಾಹರಣೆ. ಈ ಕಾರಿಡಾರ್ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋದರೂ, ಭಾರತದ ಪರವಾಗಿ ನಿಂತಿದೆ ಸೌದಿ ಅರೇಬಿಯಾ. ಭಾರತ ಒಂದೆಡೆ ಇಸ್ರೇಲಿನ ಸಾರ್ವಭೌಮತ್ವದ ಪರವಾಗಿ ನಿಂತು, ಮತ್ತೊಂದೆಡೆ ಇಸ್ರೇಲಿನ ಮಿಲಿಟರಿ ದಾಳಿಗೆ ತುತ್ತಾಗಿ ಕಷ್ಟದಲ್ಲಿರುವ ನಾಗರಿಕರಿಗೆ ೬,೫೦೦ ಕೆ.ಜಿ. ಯಷ್ಟು ಔಷಧ ಮತ್ತು ೩೨,೦೦೦ ಕೆ.ಜಿ.ಯಷ್ಟು ಪರಿಹಾರ ಸಾಮಗ್ರಿಗಳನ್ನು ಕಳಿಸಿದೆ.

ಪ್ಯಾಲೆಸ್ತೀನಿ ನಿರಾಶ್ರಿತರಿಗಾಗಿ ೨೯.೫೦ ಮಿಲಿಯನ್ ಡಾಲರ್‌ನಷ್ಟು ನೆರವು ನೀಡುವ ಮೂಲಕ ಭಾರತವು ಅವರಿಗೆ ಹೆಗಲಾಗಿ ನಿಂತಿದೆ. ಆದರೆ ಈ
ನೆರವುಗಳ ನಡುವೆಯೂ, ಇಸ್ರೇಲ್ ಮೇಲೆ ಹಮಾಸ್ ಉಗ್ರರಿಂದಾದ ದಾಳಿಯನ್ನು ಖಂಡಿಸಿರುವ ಭಾರತವು ತನ್ಮೂಲಕ ಇಸ್ರೇಲಿನ ಪ್ರತಿಕ್ರಿಯೆಯನ್ನು ಬೆಂಬಲಿಸಿದೆ. ದಾರಿ ತಪ್ಪಿದ ದೇಶ ಪಾಕಿಸ್ತಾನ ದಿವಾಳಿಯಂಚಿಗೆ ಬಂದು ನಿಂತಿದ್ದರೂ ತನ್ನ ನರಿಬುದ್ಧಿಯನ್ನು ಬಿಟ್ಟಿಲ್ಲ; ಕಾಶ್ಮೀರ ವಿಷಯದಲ್ಲಿ ಮೂಗು ತೂರಿಸುತ್ತಲೇ ಇದೆ. ಭಾರತದ ಗಡಿಯೊಳಗೆ ಉಗ್ರರನ್ನು ಕಳುಹಿಸುವ ಕುಕೃತ್ಯವನ್ನು ನಡೆಸುತ್ತಲೇ ಇದೆ. ತನ್ನನ್ನು ಸುತ್ತುವರಿದಿರುವ ದೇಶಗಳ ಶತ್ರುತ್ವ ಕಟ್ಟಿಕೊಂಡಿರುವ ಪಾಕಿಸ್ತಾನ, ಚೀನಾದ ಭಿಕ್ಷೆಯಿಂದ ಉಸಿರಾಡುತ್ತಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವಿದ್ದರೂ ಪಾಕಿಸ್ತಾನದ ನೆಲದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುವುದನ್ನು ಬಿಟ್ಟಿಲ್ಲ. ಅತ್ತ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಪಾಕ್ ವಿರುದ್ಧದ ಬಲೂಚಿಗಳ ಹೋರಾಟ ದಿನದಿನಕ್ಕೆ ತಾರಕಕ್ಕೇರುತ್ತಿದೆ. ಬಲೂಚಿಗಳು ಪಾಕ್ ಆಕ್ರಮಿತ ಕಾಶ್ಮೀರದ
ವಿಷಯದಲ್ಲಿ ಭಾರತದ ಪರವಾಗಿದ್ದಾರೆ. ಪಾಕಿಸ್ತಾನದ ೯೦೦ ಕಿ.ಮೀ. ಉದ್ದದ ಬೇಲಿಯಿಲ್ಲದ ಗಡಿಭಾಗ ಬಲೂಚಿಗಳ ಪ್ರಮುಖ ಹೋರಾಟಸ್ಥಳ. ಬಲೂಚಿಗಳು ಅತ್ತ ಇರಾನ್ ಮತ್ತು ಪಾಕಿಸ್ತಾನದ ಗಡಿಯಲ್ಲೂ ಇದ್ದಾರೆ. ಇತ್ತೀಚಿಗೆ ಪಾಕಿಸ್ತಾನದ ಭೂಭಾಗದೊಳಗೆ ಬಲೂಚಿಗಳನ್ನು ಗುರಿಯಾಗಿಸಿ ಕೊಂಡು ಇರಾನ್ ಕ್ಷಿಪಣಿದಾಳಿ ನಡೆಸಿತ್ತು. ಈ ದಾಳಿ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ದೊಡ್ಡ ಅವಮಾನವಾಗಿತ್ತು.

ಪ್ರತ್ಯುತ್ತರವಾಗಿ ಪಾಕಿಸ್ತಾನವು ಇರಾನ್ ಮೇಲೆ ದಾಳಿ ನಡೆಸಿದೆ. ಇರಾನ್-ಪಾಕಿಸ್ತಾನ-ಬಲೂಚಿಗಳ ನಡುವಿನ ಸಂಘರ್ಷದಲ್ಲಿ ಭಾರತವು, ಇರಾನ್ ಬಲೂಚಿಗಳ ಮೇಲೆ ಪಾಕಿಸ್ತಾನದಲ್ಲಿ ನಡೆಸಿದ ದಾಳಿಯನ್ನು ರಾಜತಾಂತ್ರಿಕವಾಗಿ ಬೆಂಬಲಿಸಿದೆ. ಪಾಕ್ ಅಕ್ರಮಿತ ಕಾಶ್ಮೀರದ ವಿಷಯದಲ್ಲಿ ಬಲೂಚಿಗಳು ಭಾರತದ ಪರವಿದ್ದರೂ, ಇರಾನ್ ಸ್ವತಂತ್ರ ದೇಶವಾಗಿರುವ ಕಾರಣ ಅದರ ಸಾರ್ವಭೌಮತ್ವವನ್ನು ಬೆಂಬಲಿಸಿದೆ. ಬಲೂಚಿಗಳಿಗೆ ಸ್ವತಂತ್ರವಾದ ಪ್ರತ್ಯೇಕ
ರಾಷ್ಟ್ರವಿಲ್ಲದ ಕಾರಣ ಅವರ ಪರವಾಗಿ ನಿಲ್ಲಲು ಸಾಧ್ಯವಿಲ್ಲ.

ಪಾಕಿಸ್ತಾನದ ವಿಷಯದಲ್ಲಿ ಕಠಿಣ ನಿಲುವನ್ನು ಜಗತ್ತಿನ ಮುಂದೆ ಪ್ರದರ್ಶಿಸುತ್ತಿರುವ ಭಾರತ ಜಗತ್ತಿನ ಬಹುತೇಕ ರಾಷ್ಟ್ರಗಳಿಂದ ಪಾಕಿಸ್ತಾನವನ್ನು ‘ಐಸೋಲೇಟ್’ ಮಾಡಿದೆ. ಚೀನಾದ ಕೈಗೊಂಬೆಯಾಗಿ ಚುನಾವಣೆ ಗೆದ್ದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅಧಿಕಾರಕ್ಕೆ ಬಂದ ನಂತರ
ಭಾರತದ ಸೈನ್ಯವನ್ನು ಮಾಲ್ಡೀವ್ಸ್‌ನಿಂದ ವಾಪಾಸ್ ಪಡೆಯುವಂತೆ ಹೇಳಿದ್ದರು. ಪ್ರವಾಸೋದ್ಯಮವೇ ಮಾಲ್ಡೀವ್ಸ್ ದೇಶದ ಮೂಲ ಆದಾಯ. ಮಾಲ್ಡೀವ್ಸ್‌ಗೆ ಆಗಮಿಸುತ್ತಿದ್ದಂಥ ಪ್ರವಾಸಿಗರಲ್ಲಿ ಭಾರತೀಯರದ್ದೇ ಸಿಂಹಪಾಲಿತ್ತು.

ನರೇಂದ್ರ ಮೋದಿಯವರು ಲಕ್ಷದ್ವೀಪಕ್ಕೆ ಪ್ರವಾಸ ಕೈಗೊಂಡು, ಅಲ್ಲಿನ ಚಿತ್ರಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ನಂತರ ಮಾಲ್ಡೀವ್ಸ್ ದೇಶದ ಮಂತ್ರಿಗಳಿಬ್ಬರು ಭಾರತಕ್ಕೆ ಅಪಮಾನ ಮಾಡಿ ಟ್ವೀಟ್ ಮಾಡಿದ್ದರು. ನಂತರ ಇಡೀ ದೇಶವೇ ಮಾಲ್ಡೀವ್ಸ್ ವಿರುದ್ಧ ತಿರುಗಿ ಬಿದ್ದು, ಮಾಲ್ಡೀವ್ಸ್ ಪ್ರವಾಸವನ್ನೇ ಬಹಿಷ್ಕರಿಸಿತು. ಮಾಲ್ಡೀವ್ಸ್ ಅಧ್ಯಕ್ಷರು ಚೀನಾದ ಮಾತುಗಳನ್ನು ಕೇಳಿ, ‘ಭಾರತವು ಮಾಲ್ಡೀವ್ಸ್ ದೇಶವನ್ನು ಬೆದರಿಸುತ್ತಿದೆ’ ಎಂಬ ಹೇಳಿಕೆ ಯನ್ನು ನೀಡಿದ್ದರು.

ಚೀನಾವನ್ನು ನಂಬಿ ಶ್ರೀಲಂಕಾ, ನೇಪಾಳ ಮತ್ತು ಪಾಕಿಸ್ತಾನ ದೇಶಗಳು ದಿವಾಳಿಯಾಗಿವೆ. ಈಗ ಮುಂದಿನ ಸರದಿ ಮಾಲ್ಡೀವ್ಸ್‌ನದು. ರಾಜತಾಂತ್ರಿಕವಾಗಿ ಮಾಲ್ಡೀವ್ಸ್ ಮಾಡಿಕೊಂಡಿರುವ ಗಾಯದ ಬಗ್ಗೆ ಭಾರತ ತಲೆ ಕೆಡಿಸಿಕೊಂಡಿಲ್ಲ. ಬದಲಾಗಿ ನಮ್ಮೊಳಗಿನ ಪ್ರವಾಸೋದ್ಯಮವನ್ನು ಹೆಚ್ಚಾಗಿ ಪ್ರಚಾರ ಮಾಡಿದೆ. ದೆಹಲಿಯಲ್ಲಿ ನಡೆದ ಜಿ-೨೦ ಶೃಂಗಸಭೆಯಲ್ಲಿ ಜಗತ್ತಿನ ಪ್ರಬಲ ದೇಶಗಳು ಭಾಗವಹಿಸುವ ಮೂಲಕ ಭಾರತದ ರಾಜತಾಂತ್ರಿಕತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಪ್ಪಿಕೊಂಡಂತಾಯಿತು. ರಷ್ಯಾ-ಉಕ್ರೇನ್, ಇಸ್ರೇಲ್-ಪ್ಯಾಲೆಸ್ತೀನ್, ಇರಾನ್ -ಪಾಕಿಸ್ತಾನ ಇವುಗಳ ನಡುವೆ ಹುಟ್ಟಿಕೊಂಡಿರುವ ಸಂಘರ್ಷ, ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ಹೇರಿರುವ ನಿಷೇಧಗಳ ನಡುವೆಯೂ, ಭಾರತವು ವಿಶ್ವಸಂಸ್ಥೆಯಲ್ಲಿ ಪಾಕಿ ಸ್ತಾನವನ್ನು ಬಿಟ್ಟು ಉಳಿದ ಅಷ್ಟೂ ದೇಶಗಳೊಂದಿಗೆ ಚದುರಂಗದಲ್ಲಿ ರಾಣಿ ನಡೆಯುವ ಹಾಗೆ ಅಷ್ಟ ದಿಕ್ಕುಗಳಲ್ಲೂ ತನ್ನ ರಾಜತಾಂತ್ರಿಕ ನಿಲುವನ್ನು ಸ್ಪಷ್ಟವಾಗಿ ಹೇಳಿ ತನ್ನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ.