Friday, 13th December 2024

ಮಲ್ಲಿತಮ್ಮ ಎಂಬ ಮಹಾನ್ ಶಿಲ್ಪಿ

ಶಶಾಂಕಣ

ಶಶಿಧರ ಹಾಲಾಡಿ

ಕರ್ನಾಟಕದ ವಾಸ್ತು ಮತ್ತು ಶಿಲ್ಪ ಎಂದು ನೆನಪಾದಾಗ, ಅದರ ಅತಿ ಸುಂದರ ಅಂಶದ ಕುರಿತು ಗಮನ ಹರಿದಾಗ, ಮೊದ ಮೊದಲು ನೆನಪಾಗುವ ಶಿಲ್ಪಗಳು ಎಂದರೆ ಬೇಲೂರಿನ ಸಾಲಭಂಜಿಕೆಗಳು, ಹೊಯ್ಸಳ ಕಾಲದ ವಾಸ್ತು ಶಿಲ್ಪಗಳು.

ಹೊಯ್ಸಳ ರಾಜ್ಯದ ಸರಹದ್ದಿನಲ್ಲಿ ದೊರಕುತ್ತಿದ್ದ ಬಳಪದ ಕಲ್ಲು ಎಂಬ, ನಯವಾಗಿ ಕೆತ್ತನೆ ಮಾಡಲು ಬರುತ್ತಿದ್ದ ಕಲ್ಲಿನಲ್ಲಿ ಆ ಕಾಲದ ಶಿಲ್ಪಿಗಳು ತಲುಪಿದ ಪರಿಣತಿಯು ಅದ್ಭುತ ವಾದದ್ದು. ಬೇಲೂರಿನ ಸಾಲಭಂಜಿಕೆ ವಿಗ್ರಹಗಳನ್ನು ಅದೆಷ್ಟು ಚಂದವಾಗಿ ಆ ಕಾಲದ ಶಿಲ್ಪಿಗಳು ಕೆತ್ತಿರುವ ರೆಂದರೆ, ಕಲ್ಲನ್ನು ಮಾಧ್ಯಮವನ್ನಾಗಿ ಉಪಯೋಗಿಸಿ, ಇಷ್ಟು ಉತ್ಕೃಷ್ಟ ಮಟ್ಟದ ಕಲೆಯನ್ನು ಕಂಡರಿಸುವುದು ನಿಜಕ್ಕೂ ಸಾಧ್ಯವೇ ಎನಿಸುವಷ್ಟು.

ಆ ಸಾಲಭಂಜಿಕೆಯರ ಅಲಂಕರಣೆಯಂತೂ, ಕೆಲವು ಕಡೆ ಮೂರು ಆಯಾಮ ಗಳ ಸ್ವರೂಪ ಪಡೆದು, ಅದೆಂಥ ಕೈಚಳಕ ಎಂದು ನೋಡುಗರು ವಿಸ್ಮಯಪಡುವಂತಿದೆ. ಸಾ.ಶ.1119ರಲ್ಲಿ ನಿರ್ಮಾಣಗೊಂಡ ಬೇಲೂರಿನ ವಿಜಯನಾರಾಯಣ ದೇಗುಲದ ಹೊರ ಮೈ ಮತ್ತು ಒಳಭಾಗದಲ್ಲಿ ಅಳವಡಿಸಲಾಗಿರುವ ಕಲ್ಲಿನ ಸಾಲಭಂಜಿಕೆಯರು ಮಧ್ಯಕಾಲೀನ ವಾಸ್ತುವಿನ ವಿಸ್ಮಯಗಳು ಎನ್ನಬಹುದು.

ಈ ಶಿಲ್ಪಗಳನ್ನು ರಚಿಸಿದವರ‍್ಯಾರು? ಅಂದಿನ ರಾಜರು, ಮಾಂಡಲಿಕರು, ಅಧಿಕಾರಿಗಳ ಆದೇಶದಂತೆ, ನಾಡಿನಾದ್ಯಂತ ಸಾವಿರಾರು ಶಿಲ್ಪಗಳನ್ನು, ವಾಸ್ತು ರಚನೆ ಗಳನ್ನು ರಚಿಸಿದ ನಿರ್ದಿಷ್ಟ ಶಿಲ್ಪಿಗಳು, ಸ್ಥಪತಿಗಳು, ವಾಸ್ತು ತಜ್ಞರು ಯಾರು? ವಿಶ್ವ ಕರ್ಮ ಜನಾಂಗಕ್ಕೆ ಸೇರಿದ ಆ ಶಿಲ್ಪಿಗಳ ಹೆಸರೇನು, ಅವರ ಊರು ಯಾವುದು, ಅವರ ಜೀವನದ ವಿವರವೇನು, ಅವರ ಕುಟುಂಬ ಹೇಗಿತ್ತು? ಎಷ್ಟು ಜನ ಪ್ರಖ್ಯಾತ ಶಿಲ್ಪಿಗಳು ಹೊಯ್ಸಳರ ಕಾಲದಲ್ಲಿ ಅಥವಾ ಚಾಲುಕ್ಯರ ಕಾಲದಲ್ಲಿದ್ದರು? ಇಂತ ಪ್ರಶ್ನೆಗಳಿಗೆ
ತಕ್ಷಣ ಉತ್ತರ ಹೇಳಲು ಜನಸಾಮಾನ್ಯರಿಗೆ ಕಷ್ಟ.

ಆಗಿನ ಕಾಲದ ಸಾಮ್ರಾಟರ, ಅವರ ಹೆಂಡಿರ, ಮಾಂಡಲಿಕರ ಮತ್ತು ಸೇನಾಧಿಪತಿಗಳ ವಿವರ ಸ್ವಲ್ಪ ಪರಿಚಿತ ಗೊಂಡಿದ್ದರೂ, ಶಿಲ್ಪಿಗಳ ಹೆಸರು ತುಸು ಅಪರಿಚಿತ ಎಂದೇ ಹೇಳಬಹುದು. ಇದಕ್ಕೆ ಮುಖ್ಯ ಕಾರಣ ಆ ಶಿಲ್ಪಿಗಳ ಕುರಿತು ಇರುವ ಅವಜ್ಞೆ ಎಂದು ಹೇಳಬಹುದಾದರೂ, ನಮ್ಮ ನಾಡಿನ ವಾಸ್ತುವಿನ ಕುರಿತು ನಮ್ಮ ಜನರನ್ನು ಆವರಿಸಿರುವ ಒಟ್ಟಾರೆ ವಿಸ್ಮೃತಿಯೂ ಇನ್ನೊಂದು ಕಾರಣ ಎನ್ನಬಹುದು. ಈಚಿನ ದಶಕಗಳಲ್ಲಿ ನಮ್ಮ ನಾಡಿನ ಶಿಲ್ಪಿಗಳ ಕೊಡುಗೆಯನ್ನು ಗುರುತಿಸುವ, ಸಂಶೋಧಿಸುವ ಕೆಲಸ ವಾಗಿದ್ದು, ಕೆಲವು ಶಿಲ್ಪಿಗಳ ಹೆಸರನ್ನಾದರೂ ನಾವು ಇಂದು ತಿಳಿಯಲು ಸಾಧ್ಯ ಎನಿಸಿದೆ.

ಹೊಯ್ಸಳರ ಕಾಲದ ವಾಸ್ತುರತ್ನಗಳ ಮತ್ತು ಸಾಲಭಂಜಿಕೆ ರಚನೆಯಲ್ಲಿ ತೊಡಗಿಕೊಂಡಿದ್ದು,  ಮನಾರ್ಹ ಕೊಡುಗೆ ನೀಡಿದ ಶಿಲ್ಪಿಗಳ ಕುರಿತು ಕುತೂಹಲ ಮೂಡಿದ್ದು, ‘ಸ್ಥಪತಿ’ ಪುಸ್ತಕವನ್ನು ತಿರುವಿಹಾಕಿದಾಗ. ನಮ್ಮ ನಾಡಿನ ಖ್ಯಾತ ಸಂಶೋಧಕ,
ಚಿಂತಕ, ನಿಜಾರ್ಥದ ‘ನಾಡೋಜ’ ಎನಿಸಿರುವ ಷ. ಶೆಟ್ಟರ್ ಅವರು ಬರೆದ ಪ್ರಮುಖ ಬರೆಹಗಳ ಸಂಗ್ರಹವು ‘ಸ್ಥಪತಿ’ ಎಂಬ ಹೆಸರಿನಲ್ಲಿ ಈಚೆಗೆ ಪ್ರಕಟಗೊಂಡಿದೆ. ಷ. ಶೆಟ್ಟರ್ ಅವರು ಈ ಹಿಂದೆ ರಚಿಸಿರುವ ಹಲವು ಅಮೂಲ್ಯ ಪುಸ್ತಕಗಳನ್ನು ಹೊರ ತಂದಿರುವ ‘ಅಭಿನವ’ ಪ್ರಕಾಶನ ದವರೇ ಪ್ರಕಟಿಸಿರುವ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದವರು ಶಾಂತಿನಾಥ ದಿಬ್ಬದ ಅವರು.

ಶಿಲ್ಪಿಗಳ ಕುರಿತು, ಶಾಸನಗಳನ್ನು ಬರೆಯುವ ಕುಶಲಕರ್ಮಿಗಳ ಕುರಿತು ಇರುವ ಇಲ್ಲಿನ ವಿದ್ವತ್‌ಪೂರ್ಣ ಬರಹಗಳು ಅ ವೆಷ್ಟು ಅಪರೂಪದ ಸಂಗತಿಗಳನ್ನು ಒಳಗೊಂಡಿವೆಯೆಂದರೆ, ಮೊದಲ ಬಾರಿಗೆ ಕನ್ನಡದ ಶ್ರೀಸಾಮಾನ್ಯ ಓದುಗನಿಗೆ ಈ ವಲಯದ ಜ್ಞಾನದ ನಿಧಿಯೇ ತೆರೆದಂತಾಗಿದೆ. ಇತಿಹಾಸ ತಜ್ಞರಾಗಿರುವ ಷ.ಶೆಟ್ಟರ್ ಅವರ ಆಳವಾದ ಸಂಶೋಧನೆಯು ಈ ಪುಸ್ತಕದ
ಬೆನ್ನೆಲುಬಾಗಿದ್ದು, ಇತಿಹಾಸವನ್ನು ವಿಭಿನ್ನ ದೃಷ್ಟಿಕೋನ ದಿಂದ, ಸಿದ್ಧ ಮಾರ್ಗಕ್ಕಿಂತ ಬೇರೆಯಾಗಿ ನೋಡುವ ಅವರ ಚಿಂತನೆಯು ಬೆರಗು ಮೂಡಿಸುತ್ತದೆ. ಜತೆಗೆ ಓದುಗರಲ್ಲೂ ಚಿಂತನೆಯನ್ನು ಹುಟ್ಟಿಸುತ್ತದೆ.

ನೂರಾರು ವರ್ಷಗಳ ಹಿಂದೆ ಸುಂದರವಾದ ಅಕ್ಷರಗಳನ್ನು ಶಿಲಾಶಾಸನಗಳ ಮೇಲೆ ಕೊರೆಯುವ ಕೌಶಲ್ಯ ಹೊಂದಿದ್ದ, ಸುಂದರ ಶಿಲ್ಪ ನಿರ್ಮಿಸುವ ಪರಿಣತಿ ಹೊಂದಿದ್ದ ವಿಶ್ವಕರ್ಮ ಪಂಗಡದ ಕೊಡುಗೆಯನ್ನು ಅವರು ಗುರುತಿಸಿ, ವಿಶ್ಲೇಷಿಸಿದ ರೀತಿಯೇ ‘ಪಾತ್ ಬ್ರೇಕಿಂಗ್’. ನಮ್ಮ ನಾಡಿನಾದ್ಯಂತ ಹರಡಿರುವ ಶಾಸನಗಳಲ್ಲಿ, ವೀರಗಲ್ಲುಗಳಲ್ಲಿ ಸ್ಪಷ್ಟವಾದ ಸುಂದರ ಕನ್ನಡ ಅಕ್ಷರ ಕೆತ್ತುವ ಸಾಮರ್ಥ್ಯ ಹೊಂದಿದ್ದ ಆ ಜನರು, ಅಂದಿನ ಸಮಾಜದಲ್ಲಿ ಸಾಕಷ್ಟು ಗೌರವವನ್ನು ಹೊಂದಿದ್ದರು.

ಶಾಸನ ರಚಿಸಿ, ಅದರ ಮೇಲೆ ಅಕ್ಷರ ಮೂಡಿಸಿದ ಕಲಾಕಾರರು ಉತ್ತಮ ಗೌರವಧನವನ್ನು ಸಹ ಪಡೆಯುತ್ತಿದ್ದರು ಎಂದು ಷ.ಶೆಟ್ಟರ್ ದಾಖಲಿಸಿದ್ದಾರೆ. ‘ನಮ್ಮ ನಾಡಿನ ಶಿಲ್ಪಿಗಳ ಕುರಿತು ಶ್ರೀಸಾಮಾನ್ಯನಿಗೆ ಮಾಹಿತಿಯೇ ಇಲ್ಲ, ಅಂಥ ಮಾಹಿತಿಯನ್ನು ನಮ್ಮ ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕಿತ್ತು’ ಎಂದು ಇದೇ ಅಂಕಣದಲ್ಲಿ ಕೆಲವು ತಿಂಗಳುಗಳ ಹಿಂದೆ ಬರೆಯಲಾಗಿತ್ತು.
ದೂರದ ಇಟೆಲಿಯ ಕಲಾವಿದ ಮೈಕೆಲೆಂಜಲೋ ಸಾಧನೆ ನಮ್ಮ ಮಕ್ಕಳಿಗೆ ಗೊತ್ತು, ಆದರೆ ಇಲ್ಲೇ ಸುತ್ತಮುತ್ತ ವಾಸಿಸಿದ್ದ, ನಮ್ಮ ರಾಜ್ಯದ ಮಹಾನ್ ಶಿಲ್ಪಿ ಮಲ್ಲಿತಮ್ಮನ ವಿಚಾರ ನಮ್ಮವರಿಗೆ ಗೊತ್ತಿಲ್ಲ ಎಂದು ಆ ಬರಹದಲ್ಲಿ ಹಳಹಳಿಸಿದ್ದೆ.

ಆ ಅಂಕಣ ಪ್ರಕಟಗೊಂಡ ಕೆಲವು ತಿಂಗಳುಗಳಲ್ಲಿ, ಅಂದರೆ ಈಗ ಷ.ಶೆಟ್ಟರ್ ಅವರ ‘ಸ್ಥಪತಿ’ ಪುಸ್ತಕ ಬೆಳಕು ಕಂಡಿದೆ. ನಮ್ಮ ನಾಡಿನ ಹಲವು ಶಿಲ್ಪಿಗಳ ಕುರಿತು ‘ಸ್ಥಪತಿ’ ಬೆಳಕು ಚೆಲ್ಲುತ್ತದೆ. ಇಲ್ಲಿನ ಬರೆಹಗಳನ್ನು ಷ.ಶೆಟ್ಟರ್ ಅವರು ಇಂಗ್ಲಿಷ್‌ನಲ್ಲಿ ಈ ಮುಂಚೆಯೇ ಬರೆದಿದ್ದರು. ಅವು ಇಂದು ಶಾಂತಿನಾಥ ದಿಬ್ಬದ ಅವರ ಉತ್ತಮ ಅನುವಾದದೊಂದಿಗೆ ನನ್ನಂಥ ‘ಲೇ ಮ್ಯಾನ್’ಗೆ
ತಲುಪಿದೆ. ಇಂತಹ ಅಪರೂಪದ ಮಾಹಿತಿಯನ್ನು, ವಿಶ್ಲೇಷಣೆಯನ್ನು ಹೊಂದಿರುವ ಪುಸ್ತಕವನ್ನು ಹೊರತಂದಿರುವ ‘ಅಭಿನವ’ದವರು ಸಹ ಅಭಿನಂದನಾರ್ಹರು.

‘ಸ್ಥಪತಿ’ ಪುಸ್ತಕದಲ್ಲಿ ದಾಸೋಜ, ಚಾವಣ ಮತ್ತು ಮಲ್ಲಿತಮ್ಮನ ಕುಕರಿತು ಷ.ಶೆಟ್ಟರ್ ಅವರು ಬರೆದಿರುವ ವಿಚಾರಗಳು ಬಹು ಪ್ರಮುಖ ಎನಿಸಿದ್ದು, ಅವಶ್ಯವಾಗಿ ಅವು ಸಹ ನಮ್ಮ ಪಠ್ಯಗಳಲ್ಲಿ ಸೇರಲೇಬೇಕು ಎನಿಸುತ್ತಿದೆ. ಸಾ.ಶ.11119ರಲ್ಲಿ ಲೋಕಾ ರ್ಪಣೆಗೊಂಡ ಬೇಲೂರಿನ ವಿಜಯನಾರಾಯಣ ದೇಗುಲದಲ್ಲಿ 44 ಸಾಲಭಂಜಿಕೆ ಗಳಿದ್ದವು. ಅವುಗಳಲ್ಲಿ ಎರಡು ಕಣ್ಮರೆ ಯಾಗಿವೆ. ಈಗ ಉಳಿದಿರುವ 42 ಸಾಲಭಂಜಿಕೆಗಳ ಪೈಕಿ, ನಾಲ್ಕು ಅತ್ಯಪೂರ್ವ ಎನಿಸುವ ಸಾಲಭಂಜಿಕೆಗಳು ನವರಂಗ
ದಲ್ಲಿವೆ.

ಉಳಿದವು ದೇಗುಲದ ಹೊರಭಿತ್ತಿಯಲ್ಲಿ  ಪ್ರದರ್ಶನಗೊಂಡಿವೆ. ಈ ಸುಂದರ, ಮೋಹಕ, ಅದ್ಭುತ, ಅತ್ಯಪರೂಪ ಮತ್ತು ವಿಶ್ವಪ್ರಸಿದ್ಧ ಸಾಲಭಂಜಿಕೆಗಳಲ್ಲಿ ಎಂಟು ರಚನೆಗಳನ್ನು ಬಳ್ಳಿಗಾವೆಯ ದಾಸೋಜ ಮತ್ತು ಆತನ ಮಗ ಚಾವಣ ನಿರ್ಮಿಸಿದರು. ಅವುಗಳಲ್ಲಿ ಒಂದೆಂದರೆ ನಾಟ್ಯರಾಣಿ ಶಾಂತಲಾಳದ್ದು ಎನ್ನಲಾದ ಸುಂದರ ರಚನೆ. ಇಂದಿನ ಶಿವಮೊಗ್ಗ ಜಿಲ್ಲೆಯ
ಬಳ್ಳಿಗಾವೆಯು ಅದಾಗಲೇ ಚಾಲುಕ್ಯ ಶೈಲಿಯ ವಾಸ್ತು ನಿರ್ಮಾಣಗಳ ತವರು. ಬೇಲೂರು ದೇಗುಲವನ್ನು ನಿರ್ಮಿಸಿದ ಹೊಯ್ಸಳ ರಾಜ ವಿಷ್ಣುವರ್ಧನನ ಮಡದಿ ಶಾಂತಳಾಲ ತವರು ಸಹ ಬಳ್ಳಿಗಾವೆ.

ಆಕೆಯ ಆಹ್ವಾನದ ಮೇರೆಗೆ ಶಿಲ್ಪಿಗಳಾದ ದಾಸೋಜ ಮತ್ತು ಆತನ ಮಗ ಚಾವಣರು ಬೇಲೂರಿಗೆ ಬಂದು, ದೇಗಲ ನಿರ್ಮಾಣ ದಲ್ಲಿ ತೊಡಗಿಕೊಂಡಿರಬೇಕು. ಬಳ್ಳಿಗಾವೆ ಮಾತ್ರವಲ್ಲ, ಗದಗ, ಲಕ್ಕುಂಡಿ ಮೊದಲಾದ ಪ್ರದೇಶಗಳಿಂದ ಸ್ಥಪತಿಗಳು, ಶಿಲ್ಪಿಗಳು ಬೇಲೂರಿಗೆ ಬಂದು ದೇಗುಲ ನಿರ್ಮಾಣದಲ್ಲಿ ತೊಡಗಿಕೊಂಡರು. ಹಾಗಾಗಿ ಚಾಲುಕ್ಯ ಶೈಲಿಯಲ್ಲಿ ಪರಿಣಿತರಾದ ರೂವಾರಿಗಳು, ಹೊಯ್ಸಳ ವಾಸ್ತುಶೈಲಿಯಲ್ಲಿ ತಮ್ಮ ಕೈಚಳಕ ತೋರುವಂತಾಯಿತು ಎಂದು ಷ.ಶೆಟ್ಟರ್ ಬರೆದಿದ್ದಾರೆ.

ಬೇಲೂರಿನಲ್ಲಿನ 42 ಸಾಲಭಂಜಿಕೆಯರಲ್ಲಿ ಎಂಟನ್ನು ದಾಸೋಜ ಮತ್ತು ಚಾವಣ ರಚಿಸಿದ್ದು, ಇತರ ಕೆಲವು ಸಾಲಭಂಜಿಕೆ ಗಳನ್ನು ರಚಿಸಿದವರೆಂದರೆ ಕುಮಾರ ಮಲೋಜ, ಮಲ್ಲಿಯಯ, ವಚಣ್ಣ, ಕಾಡೋಜ, ಭವಭೋಜ ಮೊದಲಾದವರು.
ಹಂಪೆಯ ಸೀಮೆಯಿಂದ ಬಂದಿರಬಹುದಾದ ಚಿಕ್ಕ ಹಂಪ ಎಂಬಾತ ಎರಡು ಸಾಲಭಂಜಿಕೆಯರನ್ನು ಕೆತ್ತಿದ್ದ. ಬೇಲೂರಿನ 21 ಸಾಲಭಂಜಿಕೆಗಳ ಮೇಲೆ ಶಿಲ್ಪಿಯ ಹೆಸರು ಬರೆದಿಲ್ಲ. ಅವರನ್ನು ಅನಾಮಿಕ ಶಿಲ್ಪಿಗಳು ಎನ್ನಬಹುದೆ!

ನಮ್ಮ ನಾಡಿನ ಹೊಯ್ಸಳ ಮತ್ತು ಇತರ ವಾಸ್ತುಶೈಲಿಯ ಕಲಾಕೃತಿಗಳು ಉತ್ತುಂಗ ತಲುಪಿ, ಕಲಾರಸಿಕರ ಮನತಣಿಸಲು ಕಾರಣೀಕರ್ತರಾದ ವಿಶ್ವಕರ್ಮ ಸಮುದಾಯದ ಕುರಿತು ‘ಸ್ಥಪತಿ’ ಪುಸ್ತಕದಲ್ಲಿ ಹಲವು ಕಡೆ ಅಭಿಮಾನದ ಮಾತುಗಳು ಬರುತ್ತವೆ. ತಮ್ಮ ಸ್ವಂತ ಊರನ್ನು ವರ್ಷಗಟ್ಟಲೆ ತೊರೆದು, ವಾಸ್ತು ನಿರ್ಮಾಣದ ಜಾಗದಲ್ಲೇ ನಾಲ್ಕಾರು ವರ್ಷ ವಾಸಿಸುತ್ತಾ, ಸುಂದರ ಕಲಾಕೃತಿಗಳನ್ನು ರಚಿಸಿದ ಆ ಶಿಲ್ಪಿಗಳು, ಒಂದರ್ಥದಲ್ಲಿ ನಮ್ಮ ನಾಡಿನ ಕಲೆಯ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು, ತ್ಯಾಗ ಮಾಡಿದವರು.

‘ಇಡೀ ಪ್ರಾಚೀನ ಮತ್ತು ಮಧ್ಯಕಾಲೀನ ಭಾರತದ ಶಿಲ್ಪಕಲಾ ಇತಿಹಾಸದಲ್ಲಿ ಯಾವ ಶಿಲ್ಪಿಯೂ ಮಾಡಲಾರದ ಶ್ರೇಷ್ಠ ಸಾಧನೆ ಮತ್ತು ದಾಖಲೆಯಾಗಿದೆ’ (ಪುಟ 205) ‘ವೈಷ್ಣವಮೂರ್ತಿ ಶಿಲ್ಪಶಾಸ್ತ್ರದಲ್ಲಿ ಪರಮ ಜ್ಞಾನವನ್ನು ಪಡೆದವನಾಗಿದ್ದನು’ (ಪುಟ 206). ಈ ವಾಕ್ಯಗಳನ್ನು ಷ. ಶೆಟ್ಟರ್ ಅವರು ಹೇಳಿದ್ದು ಮಹಾನ್ ಶಿಲ್ಪಿ ಮಲ್ಲಿತಮ್ಮನ ಕುರಿತು. ಆ ಪ್ರಕಾಂಡ ಶಿಲ್ಪಿಯ ಸಾಧನೆಯ ವಿವರಗಳನ್ನು ಕಂಡರೆ, ಆಧುನಿಕ ಯುಗದಲ್ಲೂ ಅಂತಹ ಸಾಧನೆ ಮಾಡಿದ ಆರ್ಕಿಟೆಕ್ಟ್ ವಿರಳ ಎಂದೆನ್ನಬಹುದು.

ಮಲ್ಲಿತಮ್ಮನ ಜೀವನದ ವಿವರಗಳನ್ನು ಓದಿದರೆ ಯಾರಾದರೂ ರೋಮಾಂಚನಗೊಳ್ಳಲೇಬೇಕು. ತನ್ನ ಸುದೀರ್ಘ ಜೀವಿತಾವಧಿ ಯಲ್ಲಿ ಮಲ್ಲಿತಮ್ಮನು 84 ವಿಷ್ಣುವಿಗ್ರಹಗಳನ್ನು ರಚಿಸಿದ್ದು, ಆಗಮ ಶಾಸ್ತ್ರ ಪರಿಣಿತರು ಇಂದಿಗೂ ಅವುಗಳನ್ನು ಅಧ್ಯಯನ ಮಾಡುವಷ್ಟು ಶಾಸ್ತ್ರಬದ್ಧವಾಗಿವೆ. ಅವನು ರಚಿಸಿದ ವಿಷ್ಣು ವಿಗ್ರಹಗಳು ಬೇರೆ ಬೇರೆ ಕಡೆ ಹರಡಿವೆ; ಅರಸಿಕೆರೆ ಸನಿಹದ ಹಾರನಹಳ್ಳಿಯಲ್ಲಿ 28, ನುಗ್ಗೆಹಳ್ಳಿಯಲ್ಲಿ 18, ಜಾವಗಲ್ಲಿನಲ್ಲಿ 13, ಸೋಮನಾಥಪುರದಲ್ಲಿ 22 ವಿಗ್ರಹಗಳಿವೆ.

ಮಲ್ಲಿತಮ್ಮನ ಮತ್ತೊಂದು ಮಹಾನ್ ಸಾಧನೆಯೆಂದರೆ, ಕನಿಷ್ಠ ಆರು ಹೊಯ್ಸಳ ದೇಗುಲಗಳ ನಿರ್ಮಾಣದಲ್ಲಿ ಆತ ಪ್ರಮುಖ ಪಾತ್ರ ವಹಿಸಿದ್ದ. ಅವೆಂದರೆ (1) ಅಮೃತಾಪುರದ ಅಮೃತೇಶ್ವರ , ಸಾ.ಶ.1196 (2) ಹಾರನಹಳ್ಳಿಯ ಲಕ್ಷ್ಮೀನರಸಿಂಹ, ಸಾ.ಶ.1235 (3) ಗೋವಿಂದನಹಳ್ಳಿಯ ಪಂಚಲಿಂಗೇಶ್ವರ, ಸಾ.ಶ.1238 (4) ನುಗ್ಗೆಹಳ್ಳಿಯ ಲಕ್ಷ್ಮೀನರಸಿಂಹ, ಸಾ.ಶ.1237-1246 (5) ಜಾವಗಲ್‌ನ ಲಕ್ಷ್ಮೀನರಸಿಂಹ, ಸಾ.ಶ.1246 (6) ಸೋಮನಾಥಪುರದ ಚನ್ನಕೇಶವ, ಸಾ.ಶ.1268.

ಜತೆಗೆ ತುಮಕೂರು ಜಿಲ್ಲೆಯ ನಾಗಲಾಪುರದ ಚನ್ನಕೇಶವ ದೇಗುಲದ(ಸಾ.ಶ.1260) (ಅಪೂರ್ಣ) ನಿರ್ಮಾಣದಲ್ಲೂ ಈತನ ಕೊಡುಗೆ ಇತ್ತು. ಮಲ್ಲಿತಮ್ಮನು ಈ ಅಪರೂಪದ ಮಹಾನ್ ಸಾಧನೆಯನ್ನು ಗುರುತಿಸಲು ಸಹಾಯ ಮಾಡಿದ್ದು ಆತನು ಹಲವು ಕಡೆ ಕೊರೆದಿಟ್ಟ ತನ್ನ ಹೆಸರು. ಈ ಆರು ದೇವಾಲಯಗಳಲ್ಲಿ ಒಟ್ಟು 134 ಕಡೆ ಆತ ತನ್ನ ಹೆಸರನ್ನು ಬರೆದಿಟ್ಟಿದ್ದಾನೆ ಎಂದು ಷ. ಶೆಟ್ಟರ್ ಗುರುತಿಸಿದ್ದಾರೆ. ಆತನ ಮೇಲ್ವಿಚಾರಣೆಯಲ್ಲಿ ನಿರ್ಮಾಣಗೊಂಡ ವಾಸ್ತು ರತ್ನ ಎನಿಸಿದ ಸೋಮನಾಥಪುರದ ತ್ರಿಕೂಟಾಚಲ ದೇಗುಲದಲ್ಲಿ 60 ಕಡೆ ಆತನ ಹೆಸರಿದೆ.

ಮಲ್ಲಿತಮ್ಮ, ಮಲ್ಲಿತಮ, ಮಲ್ಲಿ, ಮ ಎಂದು ಹಲವೆಡೆ ಆತನ ಹೆಸರಿದ್ದು, ಸೋಮನಾಥ ಪುರದ ನಿರ್ಮಾಣ ಸಮಯದಲ್ಲಿ ಆತ ವಯೋವೃದ್ಧ ಮತ್ತು ಅನುಭವಿ ಹಿರಿಯ ಶಿಲ್ಪಯಾಗಿದ್ದ. ಆತನ ಸುದೀರ್ಘ ಜೀವನಾವಽಯನ್ನು ಕಂಡು, ಕೆಲವು ಇತಿಹಾಸ
ತಜ್ಞರು ಇಬ್ಬರು ಮಲ್ಲಿತಮ್ಮ ಇರಬಹುದೇ ಎಂದು ಸೂಚಿಸಿದ್ದರೂ, ಶೆಟ್ಟರ್ ಅವರು ಮಲ್ಲಿತಮ್ಮ ಒಬ್ಬನೇ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ವಾಸ್ತುಶಾಸ, ಆಗಮಶಾಸದಲ್ಲಿ ಪರಿಣಿತನಾಗಿದ್ದ ಮಲ್ಲಿತಮ್ಮನನ್ನು 13ನೆಯ ಶತಮಾನದ ಶ್ರೇಷ್ಟ ಶಿಲ್ಪಿ ಎಂದು ಷ.ಶೆಟ್ಟರ್ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಹಾಸನದಹತ್ತಿರದ ಪಾಂಚಜನ್ಯಪುರ (ಸಾಲಿಗಾಮೆ ಅಥವಾ ಸಿದ್ದಾಪುರ) ಈತನ ಊರಾಗಿದ್ದು, 330 ಕಿಮೀ ದೂರ ವ್ಯಾಪ್ತಿಯ ನಾಲ್ಕಾರು ಊರುಗಳಲ್ಲಿ ಆತ ದೇವಾಲಯ ನಿರ್ಮಾಣ ಮಾಡಿದ ವಿಷಯವೇ ಇಂದು ಒಂದು
ಅದ್ಭುತವಾಗಿ ಕಾಣಿಸುತ್ತಿದೆ. ಪ್ರತಿ ಊರಿನಲ್ಲೂ ಆತ ನಾಲ್ಕಾರು ವರ್ಷ ವಾಸಿಸಿ, ವಾಸ್ತುಶಾಸದ ತನ್ನ ಅನುಭವವನ್ನು ಅಲ್ಲಿ ಧಾರೆಯೆರೆದು, ತನ್ನ ವೈಯಕ್ತಿಕ ಜೀವನವನ್ನು ಶಿಲ್ಪಕಲೆಗೇ ಮುಡಿಪಾಗಿಟ್ಟ ಮಹಾನ್ ಕಲಾವಿದ ಎನಿಸಿದ್ದಾನೆ.

ತನ್ನ ಜೀವಿತಾವಧಿಯಲ್ಲಿ ಸುಮಾರು 22 ಇತರ ಪ್ರಖ್ಯಾತ ಶಿಲ್ಪಿಗಳೊಂದಿಗೆ ಮತ್ತು ನೂರಾರು ಸಾಮಾನ್ಯ ಶಿಲ್ಪಿಗಳೊಂದಿಗೆ ದುಡಿದ ಆತ ನಿಜಾರ್ಥದ ಮಹಾನ್ ಶಿಲ್ಪಿ. ಷ.ಶೆಟ್ಟರ್ ಅವರು ಸೋಮನಾಥಪುರದ ದೇವಾಲಯದಲ್ಲೇ ಹಲವು ದಿನ ತಂಗಿ, 1960ರ ದಶಕದಲ್ಲಿ ಅಲ್ಲಿನ ಇಂಚಿಂಚನ್ನೂ ಅಧ್ಯಯನ ಮಾಡಿ, ಮಲ್ಲಿತಮ್ಮನವರು.

‘ಸ್ಥಪತಿ’ ಪುಸ್ತಕದಲ್ಲಿ ಸೋಮನಾಥಪುರ ದೇಗುಲ ನಿರ್ಮಿಸಿದ ಮಲ್ಲಿತಮ್ಮನ ಸಾಧನೆಯ ವಿವರ ನೀಡಿದ್ದರ ಜತೆ, ಇತರ ಹಲವು ಪ್ರಮುಖ ವಿಷಯಗಳ ಕುರಿತು ಪಾಂಡಿತ್ಯಪೂರ್ಣ ಬರೆಹಗಳನ್ನು ಅಡಕಗೊಳಿಸಲಾಗಿದೆ. ಅಶೋಕನ ಕಾಲದ ಚಪಡ ಎಂಬ ಅಕ್ಷರಕಾರ ಅಪಘಾನಿಸ್ತಾನ ಪ್ರದೇಶದಿಂದ ಕರ್ನಾಟಕಕ್ಕೆ ಬಂದು ಶಾಸನ ಕೆತ್ತಿದ್ದು, ಬೌದ್ಧ ಮತ್ತು ಜೈನರಿಂದಾಗಿ ಶ್ರೀಸಾಮಾನ್ಯ ನಿಗೆ ಅಕ್ಷರ ಪರಿಚಯ ದೊರೆತದ್ದು, ಪ್ರಾಚೀನ ಭಾರತದ ಕಲೆಗಾರರ ಕುರಿತು, ಹೊಯ್ಸಳ ಮತ್ತು ಚಾಲುಕ್ಯರ ಕಾಲದ ಶಿಲ್ಪಿಗಳ ಕುರಿತು, ಮತ್ತು ಇತರ ವಿಷಯಗಳ ಕುರಿತು ಹಲವು ಬರಹಗಳು ಇಲ್ಲಿವೆ.

ನಮ್ಮ ನಾಡಿನ ಶಿಲ್ಪಗಳ, ಶಿಲ್ಪಿಗಳ, ಕಲಾವಿದರ, ವಿವಿಧ ಐತಿಹಾಸಿಕ ವಿಚಾರಗಳ ಕುರಿತ ಹಲವು ಒಳನೋಟಗಳುಳ್ಳ ಪುಸ್ತಕ ‘ಸ್ಥಪತಿ’. ಹದಿಮೂರನೆಯ ಶತಮಾನದ ಮಹಾನ್ ಶಿಲ್ಪಿ ಮಲ್ಲಿತಮ್ಮನ ಜೀವನ ಮತ್ತು ಸಾಧನೆಯ ಹೆಚ್ಚಿನ ವಿವರಗಳನ್ನು ಕರ್ನಾಟಕದ ಪಠ್ಯಗಳಲ್ಲಿ ಅಡಕಗೊಳಿಸಿದರೆ, ಷ.ಶೆಟ್ಟರ ಅವರ ಸಂಶೋಧನೆಯ ಕೆಲವು ಭಾಗವನ್ನಾದರೂ ಶ್ರೀ ಸಾಮಾನ್ಯನಿಗೆ ತಲುಪಿಸಿದಂತಾಗುವುದು, ಅಂಥ ಕೆಲಸ ಬೇಗ ಆಗಬೇಕು.