Sunday, 15th December 2024

ಮನುಷ್ಯ ಮಾತ್ರ ಏಕೆ ಬುದ್ಧಿವಂತ?

ಹಿಂದಿರುಗಿ ನೋಡಿದಾಗ

ಆಧುನಿಕ ವಿಜ್ಞಾನದ ನೆರವಿನಿಂದ ಚಿಂಪಾಂಜಿ ಮತ್ತು ಮನುಷ್ಯನ ನಡುವೆ ವಂಶವಾಹಿಗಳಲ್ಲಿ ಶೇ.೯೮.೮ರಷ್ಟು ಏಕರೂಪವಾಗಿವೆ ಎನ್ನುವ ಸತ್ಯವನ್ನು
ಮನಗಂಡಿದ್ದೇವೆ. ಅಂದರೆ ವೈಜ್ಞಾನಿಕವಾಗಿ ಮಾತನಾಡುವುದಾದರೆ, ಚಿಂಪಾಂಜಿ ಮತ್ತು ಮನುಷ್ಯನ ನಡುವೆ ಇರುವ ವ್ಯತ್ಯಾಸ ಶೇ.೧.೨ರಷ್ಟು ಮಾತ್ರ!

ನಮ್ಮ ಭೂಮಿಯ ಮೇಲೆ ೮೭ ಲಕ್ಷಕ್ಕೂ ಹೆಚ್ಚಿನ ಜೀವಪ್ರಭೇದಗಳು (ಜೀವರಾಶಿಗಳು) ಇವೆ. ಇವೆಲ್ಲವೂ ಒಂದೇ ಒಂದು ಜೀವಕೋಶದ ಸರಳ ಏಕಕಣ ಜೀವಿಗಳಿಂದ ರೂಪುಗೊಂಡವು ಎಂದರೆ ನಂಬಲು ಕಷ್ಟವಾಗುತ್ತದೆ. ಆದರೆ ಏಕಕಣ ಜೀವಿಗಳೇ ವಿಕಾಸವಾಗಿ ಬಹುಕಣ ಜೀವಿಗಳಿಗೆ ಜನ್ಮ ನೀಡಿ, ಆ ಬಹುಕಣ ಜೀವಿಗಳೇ ಮನುಷ್ಯನಂಥ ಸಂಕೀರ್ಣ ಜೀವಿಗಳಿಗೆ ಜನ್ಮ ನೀಡಿದವು ಎನ್ನುವುದು ಜೀವವಿಕಾಸ ಸಿದ್ಧಾಂತದ ಸಾರ.

ಏಕಕಣ ಜೀವಿಗಳು ಹೇಗೆ ವಿಕಾಸವಾಗಿ ಬಹುಕಣ ಜೀವಿಗಳಿಗೆ ಜನ್ಮನೀಡಿದವು ಎನ್ನುವುದನ್ನು ವಿವರಿಸುವ ಜ್ಞಾನಶಾಖೆಯೇ ಜೀವವಿಕಾಸವಾದ. ನಮಗೆ ಈ ವಾದದ ಸಮಗ್ರ ಚಿತ್ರಣ ದೊರೆಯಲು ಅನೇಕ ವಿಜ್ಞಾನಿಗಳು ಕಾರಣ. ಅವರಲ್ಲಿ ಚಾರ್ಲ್ಸ್ ಡಾರ್ವಿನ್, ಆಲ್ರೆಡ್ ರಸೆಲ್ ವ್ಯಾಲೇಸ್, ಹ್ಯೂಗೋ ಡಿ ರೀಸ್, ಜೀನ್ ಬ್ಯಾಪ್ಟಿಸ್ಟ್ ಲಮಾರ್ಕ್, ಗ್ರೆಗೋರ್ ಮೆಂಡಲ್, ಹರ್ಬರ್ಟ್ ಸ್ಪೆನ್ಸರ್ ಮುಂತಾದವರು ಮುಖ್ಯರಾದವರು. ಇವರೆಲ್ಲರ ಸಿದ್ಧಾಂತಗಳ ತಿರುಳನ್ನು ಸಂಗ್ರಹಿಸಿ ದರೆ ಜೀವವಿಕಾಸವಾದದ ಸಮಗ್ರಚಿತ್ರ ನಮಗೆ ದೊರೆತೀತು.

ನಮ್ಮ ಭೂಮಿಯ ಮೇಲೆ ಹುಟ್ಟುವ ಪ್ರತಿಯೊಂದು ಜೀವಿಯ ಬದುಕಿನ ಮೂಲ ಉದ್ದೇಶ ಸಂತಾನವರ್ಧನೆ ಯಾಗಿರುತ್ತದೆ. ಸಂತಾನವರ್ಧನೆ ಮಾಡಲು ಹಾಗೂ ಹೆತ್ತ ಸಂತಾನವನ್ನು ರಕ್ಷಿಸಲು ಅಗತ್ಯವಾದ ಶಕ್ತಿಗಾಗಿ ಅವು ನಿಯತವಾಗಿ ಆಹಾರ ಸೇವಿಸಬೇಕಾಗುತ್ತದೆ. ಪ್ರತಿಯೊಂದು ಜೀವಿಯು ತನ್ನ ಅಸ್ತಿತ್ವಕ್ಕಾಗಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಇತರ ಜೀವಿಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಬದುಕು ಎನ್ನುವುದು ಒಂದು ಹೋರಾಟವಾಗಿರುವ ಕಾರಣ, ಕೊಂದು ತಿನ್ನುವುದು ಈ ಭೂಮಿಯ ನ್ಯಾಯ ಎಂದರೆ ತಪ್ಪಾಗಲಾರದು.

ಪ್ರತಿಯೊಂದು ಜೀವಿಯು ಬದುಕಲು ಹೋರಾಟವನ್ನು ನಡೆಸಬೇಕಾಗುತ್ತದೆ. ಈ ಹೋರಾಟದಲ್ಲಿ ಬಲಶಾಲಿಯಾದದ್ದು ಬದುಕುತ್ತದೆ ಹಾಗೂ ದುರ್ಬಲವಾದದ್ದು ಅಳಿಯುತ್ತದೆ. ಪ್ರತಿಯೊಂದು ಜೀವಿಯ ಗುಣಲಕ್ಷಣಗಳನ್ನು ಅದರ ಕ್ರೋಮೋಸೋಮುಗಳು ಹಾಗೂ ಕ್ರೋಮೋಸೋಮುಗಳಲ್ಲಿರುವ ವಂಶವಾಹಿಗಳು ನಿರ್ಧರಿ ಸುತ್ತವೆ. ವಂಶವಾಹಿಗಳು ಪಿತೃಗಳಿಂದ ಸಂತಾನಗಳಿಗೆ ಆನುವಂಶಿಕವಾಗಿ ಹರಿದುಬರುತ್ತವೆ. ವಂಶವಾಹಿಗಳು ಅರ್ಧ ಮಾತೃಜೀವಿಯಿಂದ ಹಾಗೂ ಅರ್ಧ ಪಿತೃಜೀವಿಯಿಂದ ಹರಿದುಬರುವ ಕಾರಣ, ಸಂತಾನ ದಲ್ಲಿ ಮಾತಾಪಿತೃ ಜೀವಿಗಳೆರಡರ ಲಕ್ಷಣಗಳೆರಡೂ ಸಮ್ಮಿಳಿತವಾಗಿರುತ್ತವೆ. ವಿಕಾಸವಾದವನ್ನು ತಿಳಿಯಲು ಪ್ರಭೇದ ಎಂದರೆ ಏನು ಎನ್ನುವುದನ್ನು ತಿಳಿಯಬೇಕಾಗುತ್ತದೆ.

ತನ್ನದೇ ಆದ ವಿಶೇಷ ಗುಣಲಕ್ಷಣಗಳನ್ನು ಪಡೆದಿದ್ದು, ತನ್ನಂಥ ಇತರ ಜೀವಿಗಳೊಡನೆ ಮಾತ್ರ ಸಂತಾನವರ್ಧನೆಯನ್ನು ನಡೆಸಲು ಸಾಮರ್ಥ್ಯವಿರುವ ಜೀವಿಯನ್ನು ಪ್ರಭೇದ ಎನ್ನಬಹುದು. ಹೊಸ ಹೊಸ ಪ್ರಭೇದಗಳು, ಈಗಾಗಲೇ ಅಸ್ತಿತ್ವದಲ್ಲಿರುವ ಪ್ರಭೇದಗಳಿಂದಲೇ ಹುಟ್ಟುತ್ತವೆ. ಪ್ರಭೇದದ ವಂಶವಾಹಿಗಳಲ್ಲಿ ಉತ್ಪರಿವರ್ತನೆಗಳು ಅಂದರೆ ಹಠಾತ್ ಬದಲಾ ವಣೆಗಳು (ಮ್ಯುಟೇಶನ್ಸ್) ಉಂಟಾದಾಗ ಹೊಸ ಗುಣ ಲಕ್ಷಣಗಳ ವಂಶವಾಹಿಗಳು ರೂಪುಗೊಳ್ಳುತ್ತವೆ. ಇವು ಜೀವಿಗೆ ಪೂರಕವಾಗಿರಬಹುದು ಇಲ್ಲವೇ ಮಾರಕವಾಗಿರಬಹುದು. ಈ ಹೊಸ ಹೊಸ ಜೀವಿಗಳ (ಪ್ರಭೇದಗಳ) ಉಗಮವು ನೈಸರ್ಗಿಕ ಆಯ್ಕೆಯ ಮೂಲಕ ನಡೆಯುತ್ತದೆ.

ನೈಸರ್ಗಿಕ ಆಯ್ಕೆಯ ಮೂಲಕ ರೂಪುಗೊಂಡ ಪ್ರಭೇದಗಳು ಮುಂದಿನ ತಲೆಮಾರುಗಳಿಗೆ ತಮ್ಮ ವಂಶವಾಹಿಗಳನ್ನು ರವಾನಿಸುತ್ತವೆ. ನೈಸರ್ಗಿಕ ಆಯ್ಕೆ ಎನ್ನುವ ಪರಿಕಲ್ಪನೆಯನ್ನು ಒಂದು ಉದಾಹರಣೆಯ ಮೂಲಕ ಅರ್ಥ ಮಾಡಿಕೊಳ್ಳಬಹುದು. ಇಲಿಗಳಲ್ಲಿ ಕಪ್ಪು ಇಲಿಗಳಿವೆ ಹಾಗೂ ಕಂದು ಇಲಿಗಳಿವೆ.
ಇಲಿಗಳನ್ನು ಹಿಡಿದು ತಿನ್ನುವ ಕಾಗೆ, ಹದ್ದು ಮುಂತಾದ ಹಕ್ಕಿಗಳಿವೆ. ಈ ಹಕ್ಕಿಗಳ ಕಣ್ಣಿಗೆ, ಕಪ್ಪು ಬಣ್ಣದ ಇಲಿಗಳಿಗಿಂತ ಕಂದು ಬಣ್ಣದ ಇಲಿಗಳು ಮೊದಲು ಎದ್ದು ಕಾಣುತ್ತವೆ. ಹಾಗಾಗಿ ಹಕ್ಕಿಗಳು ಕಪ್ಪುಬಣ್ಣದ ಇಲಿಗಳಿಗಿಂತ ಕಂದು ಬಣ್ಣದ ಇಲಿಗಳನ್ನು ಹಿಡಿದು ತಿನ್ನುವ ಸಾಧ್ಯತೆಯು ಹೆಚ್ಚಿರುತ್ತದೆ. ಇದು ಅವ್ಯಾಹತವಾಗಿ ಮುಂದುವರಿದರೆ, ಒಂದಲ್ಲ ಒಂದು ದಿನ ನಮ್ಮ ಭೂಮಿಯ ಮೇಲೆ ಒಂದೂ ಕಂದು ಇಲಿಯು ಇಲ್ಲದೇ ಹೋಗಬಹುದು. ಅಂದರೆ ನಿಸರ್ಗವು ಈ ಭೂಮಿಯ ಮೇಲೆ ಕಪ್ಪು ಇಲಿಗಳನ್ನು ಆಯ್ಕೆ ಮಾಡಿ ಕೊಂಡು, ಬದುಕಲು ಅವುಗಳಿಗೆ ಹೆಚ್ಚಿನ ಅವಕಾಶವನ್ನು ಮಾಡಿಕೊಟ್ಟಿದೆ ಎನ್ನುವ ನಿರ್ಧಾರಕ್ಕೆ ಬರಬಹುದು.

ಕಪ್ಪು ಹಾಗೂ ಕಂದು ಇಲಿಗಳ ಉದಾಹರಣೆಯಲ್ಲಿ ನಾವು ಕೇವಲ ಒಂದು ಅಂಶವನ್ನು, ಚರ್ಮದ ಬಣ್ಣವನ್ನು ಮಾತ್ರ ಪರಿಗಣಿಸಿದ್ದೇವೆ. ಆದರೆ ಪ್ರಕೃತಿಯು ಯಾವಾಗಲೂ ಒಂದೇ ಅಂಶವನ್ನು ಪರಿಗಣಿಸುತ್ತದೆ ಎನ್ನಲು ಸಾಧ್ಯವಿಲ್ಲ. ಹಾಗಾಗಿ ಒಂದಕ್ಕಿಂತ ಹಲವು ಅಂಶಗಳು ಪ್ರಬಲವಾಗಿದ್ದಾಗ, ಆ ಜೀವಿಯು ಯಶಸ್ವಿಯಾಗಿ ಬದುಕುಳಿಯುತ್ತದೆ. ಉಳಿದವು ಸದ್ದಿಲ್ಲದೇ ವಿಕಾಸಪಥದಿಂದ ಮರೆಯಾಗುತ್ತವೆ. ಒಂದು ‘ಎ’ ಜೀವಿಯಲ್ಲಿ ಉತ್ಪರಿವರ್ತನೆಯಾಗಿ ‘ಬಿ’
ಜೀವಿಯು ಹುಟ್ಟಿದರೆ, ಎರಡೂ ಜೀವಿಗಳು ಒಟ್ಟಿಗೆ ಬದುಕತ್ತಿರುತ್ತವೆ.

‘ಬಿ’ ಜೀವಿಯಲ್ಲಿ ಮತ್ತೆ ಉತ್ಪರಿವರ್ತನೆಯಾಗಿ ‘ಸಿ’ ಜೀವಿಯು ಹುಟ್ಟಿದರೆ, ‘ಎ’, ‘ಬಿ’ ಮತ್ತು ‘ಸಿ’ ಮೂರೂ ಜೀವಿಗಳು ಏಕಕಾಲದಲ್ಲಿ ಬದುಕಿರುವ ಸಾಧ್ಯತೆಯಿರುತ್ತದೆ. ಆದರೆ ‘ಎ’ಗಿಂತ ‘ಬಿ’, ‘ಬಿ’ಗಿಂತ ‘ಸಿ’, ಹೆಚ್ಚು ಬುದ್ಧಿವಂತ ಜೀವಿಯಾಗಿರುವ ಸಾಧ್ಯತೆಯು ಹೆಚ್ಚಾಗಿರುತ್ತದೆ. ಹಾಗಾಗಿ ‘ಎ’ಗಿಂತ ‘ಸಿ’ ಜೀವಿಯು ಬದುಕಿನ ಹೋರಾಟದಲ್ಲಿ ಯಶಸ್ವಿಯಾಗಿ ಬದುಕುಳಿಯುವುದು ಮಾತ್ರವಲ್ಲದೆ, ಭೂಮಿಯ ಎಲ್ಲ ಕಡೆಗೆ ತನ್ನ ಸಂತಾನವನ್ನು ಹರಡುವಲ್ಲಿ
ಸಮರ್ಪಕವಾಗಿರುತ್ತದೆ.

ಮನುಷ್ಯರು ಹಾಗೂ ನರವಾನರಗಳನ್ನು ಒಟ್ಟಿಗೆ ಅಗ್ರ ಸ್ತನಿಗಳು (ಪ್ರೈಮೇಟ್ಸ್) ಎಂದು ಕರೆಯುತ್ತೇವೆ. ನರವಾನರಗಳಲ್ಲಿ ಗಿಬ್ಬನ್, ಒರಾಂಗುಟನ್, ಗೊರಿಲ್ಲ ಮತ್ತು ಚಿಂಪಾಂಜಿ ಗಳು ಇಂದು ಬದುಕಿವೆ. ಇಂದಿಗೆ ಸುಮಾರು ೯-೧೩ ದಶಲಕ್ಷ ವರ್ಷಗಳ ಹಿಂದೆ (ಎಂವೈಎ = ಮಿಲಿಯನ್ ಇಯರ್ಸ್ ಎಗೊ) ಅಗ್ರಸ್ತನಿಗಳಿಗೆ ಜನ್ಮ ನೀಡಿದ ಮಾತೃಜೀವಿಯು ಬದುಕಿತ್ತು. ೮.೫-೧೨ ದಶಲಕ್ಷ ವರ್ಷಗಳ ಹಿಂದೆ ಈ ಮಾತೃಜೀವಿಯಿಂದ ಒಂದು ಕವಲು ಹೊರಟು ಗೊರಿಲ್ಲಗಳಿಗೆ ಜನ್ಮ
ನೀಡಿತು. ೫.೫-೭ ದಶಲಕ್ಷ ವರ್ಷಗಳ ಹಿಂದೆ ಮತ್ತೆರಡು ಪ್ರಧಾನ ಕವಲುಗಳು ಕಾಣಿಸಿಕೊಂಡು ಒಂದು ಕವಲು ಮನುಷ್ಯನ ಪೂರ್ವಜನಿಗೆ ಜನ್ಮನೀಡಿದವು. ಮತ್ತೊಂದು ಕವಲು ಚಿಂಪಾಂಜಿಗಳು ಹುಟ್ಟಲು ಕಾರಣವಾದವು.

ಕವಲು ಒಡೆಯುವುದು ಎಂದರೆ ಏನು? ಮಾತೃಜೀವಿಗಳ ಕ್ರೋಮೋಸೋಮುಗಳಲ್ಲಿ ಸಂಭವಿಸುವ ಉತ್ಪರಿವರ್ತನೆ. ಹಾಗಾಗಿ ಮಾತೃಜೀವಿಗಿಂತ ಗೊರಿಲ್ಲ ಬದುಕುವ ಹೋರಾಟ ದಲ್ಲಿ ಯಶಸ್ವಿಯಾಯಿತು. ಗೊರಿಲ್ಲಗಳಿಂದ ಕವಲೊಡೆದ ಚಿಂಪಾಂಜಿಗಳು ಗೊರಿಲ್ಲಗಿಂತ ಹೆಚ್ಚು ಬುದ್ಧಿವಂತ ಜೀವಿಗಳಾಗಿದ್ದು ಯಶಸ್ವಿ ಬದುಕನ್ನು ನಡೆಸುತ್ತಿವೆ. ಮನುಷ್ಯರೂಪಿ ಪೂರ್ವಜ ಜೀವಿಯ ಕ್ರೋಮೋ ಸೋಮುಗಳಲ್ಲಿ ಕಂಡುಬಂದ ಉತ್ಪರಿವರ್ತನೆಯು ಆರ್ಡೆಪಿಥಿಕಸ್ ರಾಮಿಡಸ್ ಎಂಬ ಮಾನವ ಪ್ರಪಿತಾಮಹನಿಗೆ ಜನ್ಮವಿತ್ತಿತು. ನಂತರ ಕಂಡುಬಂದ ಉತ್ಪರಿವರ್ತನೆಗಳ ಕಾರಣ ಆಸ್ಟ್ರಲೋಪಿಥಿಕಸ್ ಅನಾಮೆನ್ಸಿಸ್, ಆಸ್ಟ್ರಲೋಪಿಥಿಕಸ್ ಅ-ರೆ
ನ್ಸಿಸ್, ಆಸ್ಟ್ರಲೋಪಿಥಿಕಸ್ ಆಫ್ರಿಕಾನಸ್, ಹೋಮೋ ಹ್ಯಾಬಿಲಿಸ್, ಹೋಮೋ ಎರೆಕ್ಟಸ್, ಹೋಮೋ ನಿಯಾಂದರಥಾ ಲೆನ್ಸಿಸ್ ಮುಂತಾದ ಮಾನವಪೂರ್ವಜ ಜೀವಿಗಳು ಹುಟ್ಟಿ ಕೊನೆಗೆ ಹೋಮೋ ಸೆಪಿಯನ್ಸ್, ಅಂದರೆ ನಾವು ಹುಟ್ಟಿದೆವು.

ಆಧುನಿಕ ವಿಜ್ಞಾನದ ನೆರವಿನಿಂದ ಚಿಂಪಾಂಜಿ ಮತ್ತು ಮನುಷ್ಯನ ನಡುವೆ ವಂಶವಾಹಿಗಳಲ್ಲಿ ಶೇ.೯೮.೮ರಷ್ಟು ಏಕರೂಪವಾಗಿವೆ ಎನ್ನುವ ಸತ್ಯವನ್ನು ಮನಗಂಡಿದ್ದೇವೆ. ಅಂದರೆ ವೈಜ್ಞಾನಿಕವಾಗಿ ಮಾತನಾಡುವುದಾದರೆ, ಚಿಂಪಾಂಜಿ ಮತ್ತು ಮನುಷ್ಯನ ನಡುವೆ ಇರುವ ವ್ಯತ್ಯಾಸ ಶೇ.೧.೨ರಷ್ಟು ಮಾತ್ರ!
ಈ ಅಲ್ಪವ್ಯತ್ಯಾಸವು ಮನುಷ್ಯನನ್ನು ಚಂದ್ರನ ಮೇಲೆ ಹೆಜ್ಜೆಯಿರಿಸಿ, ಮಂಗಳನತ್ತ ನೆಗೆಯಲು ಸಾಮರ್ಥ್ಯವನ್ನು ನೀಡಿದೆ ಎಂದರೆ, ಅದನ್ನು ನಂಬುವುದಕ್ಕೆ ಕಷ್ಟವಾಗುತ್ತದೆ.

ಚಿಂಪಾಂಜಿ ಮತ್ತು ಮನುಷ್ಯನ ದೇಹರಚನೆ ಹಾಗೂ ದೇಹ ಕಾರ್ಯಗಳಲ್ಲಿ ಪಾಲುಗೊಳ್ಳುವ ಧಾತುಗಳು ಎಲ್ಲವೂ ಏಕರೂಪವಾಗಿವೆ. ಅಂದರೆ ಚಿಂಪಾಂಜಿಗಳು ಹೆಚ್ಚು ಕಡಿಮೆ ಮನುಷ್ಯನಷ್ಟೇ ಬುದ್ಧಿವಂತ ಜೀವಿಗಳಾಗಿರಬೇಕಾಗಿತ್ತು. ಆದರೆ ಹಾಗಿಲ್ಲ ಎನ್ನುವುದು ಕಟುವಾಸ್ತವ. ಚಿಂಪಾಂಜಿಯೂ ಹೈದರಾಬಾದ್ ದಮ್ ಬಿರಿಯಾನಿ ಅಲ್ಲದಿದ್ದರೂ ಅನ್ನ- ಸಾರನ್ನಾದರೂ ಮಾಡಲು ಕಲಿಯಬೇಕಿತ್ತು. ಪಿ.ಬಿ.ಶ್ರೀನಿವಾಸ್ ಅವರ ಹಾಗೆ ಹಾಡದಿದ್ದರೂ, ಗಾರ್ದಭ ಸೋದ
ರನಾದ ನನ್ನ ಹಾಗಾದರೂ ಹಾಡಬೇಕಿತ್ತು! ಎಕೆ-೪೭ನಂಥ ಬಂದೂಕನ್ನು ತಯಾರಿಸದಿದ್ದರೂ ಒಂದು ಚಾಕು ಚೂರಿಯನ್ನಾದರೂ ಮಾಡಲು ಬರಬೇಕಿತ್ತು. ಆದರೆ ಅವುಗಳ ಬುದ್ಧಿವಂತಿಕೆಯ ಮಟ್ಟವು ಮನುಷ್ಯನ ಬುದ್ಧಿಶಕ್ತಿಗಿಂತ ತುಂಬಾ ತುಂಬಾ ಕೆಳಮಟ್ಟದಲ್ಲಿದೆ.

ಹಾಗಿದ್ದರೆ ಎಲ್ಲಿ ನಮ್ಮ ತರ್ಕವು ದಾರಿ ತಪ್ಪಿದೆ ಎನ್ನುವುದನ್ನು ಹುಡುಕಬೇಕಾಗುತ್ತದೆ. ಮನುಷ್ಯನ ಬುದ್ಧಿವಂತಿಕೆಗೆ ಕಾರಣವಾದ ವಂಶವಾಹಿಗಳ ಪ್ರಮಾಣ ಶೇ.೧.೨ರಷ್ಟು ಮಾತ್ರ ಎನ್ನುವ ಕಟುವಾಸ್ತವವನ್ನು ನಾವು ಅರಿತಿದ್ದೇವೆ. ಪ್ರಕೃತಿಯು ಈ ಶೇ.೧.೨ರಷ್ಟು ವಂಶ ವಾಹಿಗಳ ಕ್ರಮಗತಿ ಹಾಗೂ ಜೋಡಣೆಯ ವ್ಯತ್ಯಾಸವನ್ನು  ಮಾಡಿ, ಕೆಲವನ್ನು ಅಳಿಸಿಹಾಕಿ, ಮತ್ತೆ ಕೆಲವನ್ನು ಹೊಸದಾಗಿ ಸೃಜಿಸಿ, ಸಾಟಿಯಿಲ್ಲದಂಥ ಮಾನವ ಜೀವಿಯನ್ನು ಸೃಜಿಸಿರುವುದು ನಿಜಕ್ಕೂ ಚೋದ್ಯ. ಇದನ್ನು ಅರ್ಥ ಮಾಡಿಕೊಳ್ಳಲು ಮತ್ತೊಂದು ಉದಾಹರಣೆ ನೋಡೋಣ.

ಒಂದು ಸಲ ಪ್ರತಿಷ್ಠಿತ ಚೀನಿ ಹೋಟೆಲಿಗೆ ಹೋದೆ. ಅಲ್ಲಿ ಕೊಟ್ಟ ಮೆನುವಿನಲ್ಲಿ ನೂರು ಭಕ್ಷ್ಯಗಳಿದ್ದವು. ಅದನ್ನು ನೋಡುತ್ತಲೇ ನನಗೆ ಕುತೂಹಲವುಂಟಾಯಿತು. ನೂರು ಭಕ್ಷ್ಯಗಳು ಎಂದರೆ, ಈ ಹೋಟೆಲಿನ ಅಡುಗೆ ಮನೆಯಲ್ಲಿ ನೂರು ಒಲೆಗಳಿವೆಯೇ ಎಂದು ಅನುಮಾನ ಬಂತು. ಹಾಗೆ ಇರುವುದೇ ಆದರೆ ಆ ಅಡುಗೆ ಮನೆ ಎಷ್ಟು ದೊಡ್ಡದಿರಬೇಕು, ಎಷ್ಟು ಮಂದಿ ಬಾಣಸಿಗರಿರಬೇಕು ಎಂದು ಊಹಿಸಲಾರಂಭಿಸಿದೆ. ಕುತೂಹಲ ತಡೆಯಲಾಗದೆ ಮಾಲೀಕನ ಅನುಮತಿ ಪಡೆದು
ಅಡುಗೆ ಮನೆಗೆ ಹೋದೆ! ಅಲ್ಲಿದ್ದದ್ದು ಬರೀ ೧೦ ಒಲೆಗಳು! ಅವುಗಳ ಮೇಲಿದ್ದ ಹತ್ತು ಮಸಾಲೆಯ ಪಾತ್ರೆಗಳು! ಈ ಹತ್ತು ಮಸಾಲೆಗಳ ವಿವಿಧ ಕ್ರಮಗತಿ ಮತ್ತು ಸಂಯೋ ಜನೆಯಿಂದ ಭಿನ್ನ ಭಿನ್ನ ರುಚಿಯ ೧೦೦ಕ್ಕಿಂತಲೂ ಹೆಚ್ಚು ಭಕ್ಷ್ಯಗಳನ್ನು ತಯಾರಿಸಬಹುದು ಎಂದು ಬಾಣಸಿಗ ಹೇಳಿದ!

ಆಗ ನಾನು ಚಕಿತಗೊಂಡೆ! ಪ್ರಕೃತಿಯು ಶೇ.೧.೨ರಷ್ಟು ವಂಶವಾಹಿಗಳ ವೈವಿಧ್ಯ ಮಯ ಕ್ರಮಗತಿ ಹಾಗೂ ಜೋಡಣೆಗಳನ್ನು ಮಾಡಿತು. ವಿವಿಧ ಪ್ರಮಾಣದ ಬುದ್ಧಿವಂತಿಕೆಯ ಹಲವು ಮಾನವ ಪೂರ್ವಜರನ್ನು ರೂಪಿಸಿತು. ಪ್ರಕೃತಿಯು ಅತ್ಯಂತ ಬುದ್ಧಿವಂತ ಜೀವಿಯನ್ನು ಸೃಜಿಸಬೇಕು ಎಂಬ ಮಹದಾಸೆ ಹೊಂದಿದ್ದ ಕಾರಣ, ಕೊನೆಗೆ ಮನುಷ್ಯನಂಥ ಮಹಾಬುದ್ಧಿವಂತನನ್ನು ಹುಟ್ಟಿಸಿತು. ಇದರಿಂದ ಉತ್ಪರಿವರ್ತನೆಯ ಸಾಮರ್ಥ್ಯದ ಕಲ್ಪನೆ ನಮಗೆ ದೊರೆಯುತ್ತದೆ. ಚಿಂಪಾಂ
ಜಿಯಲ್ಲಿ ಹೆಚ್ಚಿನ ಬದಲಾವಣೆಗಳಾಗದೇ ಉಳಿದಿರುವ ಶೇ.೧.೨ರಷ್ಟು ವಂಶವಾಹಿಗಳಲ್ಲಿ ಉತ್ಪರಿವರ್ತನೆಯಾದರೆ, ಅವೂ ನಮ್ಮ ಹಾಗೆ ಅಥವಾ ನಮಗಿಂತಲೂ ಬುದ್ಧಿವಂತ ಜೀವಿಗಳಾಗಬಹುದೇನೋ! ಆದರೆ ಅವುಗಳ ಬುದ್ಧಿ ವಂತಿಕೆಯು ಮೊದಲ ಹೆಜ್ಜೆಯಲ್ಲೇ ಸ್ಥಗಿತವಾಗಿವೆ.

ಆದರೆ ಮನುಷ್ಯನ ಬುದ್ಧಿವಂತಿಕೆಯು ಮಾತ್ರ ಬುರ್ಜ್ ಖಲೀಫಾವನ್ನು ಮೀರಿ ಬೆಳೆಯುತ್ತಲೇ ಇದೆ! ಮನುಷ್ಯನು ಛಲದಂಕ ಮಲ್ಲ! ಪ್ರಕೃತಿಯಲ್ಲಿರುವ ರಹಸ್ಯಗಳನ್ನು ಒಂದೊಂದಾಗಿ ಬಿಡಿಸುವ ನಿಶಿತಮತಿ ಅವನಿಗಿದೆ. ಹಾಗಾಗಿ ಈಗ ತನ್ನ ಬಗ್ಗೆ ತಾನು ಪಡೆದುಕೊಂಡಿರುವ ಕೆಲವು ಒಳನೋಟಗಳು ಹಾಗೂ
ಆಧುನಿಕ ತಂತ್ರಜ್ಞಾನದ ನೆರವಿನಿಂದ, ಜೀವಜಗತ್ತಿನಲ್ಲಿ ಮನುಷ್ಯನು ಮಾತ್ರ ಏಕೆ ಬುದ್ಧಿವಂತನಾಗಿದ್ದಾನೆ ಎನ್ನುವುದನ್ನು ತಿಳಿಯುವ ಪ್ರಯತ್ನಗಳನ್ನು ನಡೆಸಿದ್ದಾನೆ.