Thursday, 12th December 2024

ಮಂಗಳ ಬರುವನು ಸನಿಹಕ್ಕೆ, ಬಿಡದೆ ಕಣ್ತುಂಬಿಕೊಳ್ಳಿ

ಸಾಂದರ್ಭಿಕ

ಗುರುರಾಜ್ ಎಸ್‌.ದಾವಣಗೆರೆ

ನಿಮಗೆ ರಾತ್ರಿಯ ಆಕಾಶ ವೀಕ್ಷಣೆಯ ಹವ್ಯಾಸವಿದೆಯೆ? ಹಾಗಿದ್ದರೆ ಈ ಅಕ್ಟೋಬರ್ ತಿಂಗಳಿನ ಪ್ರತಿ ರಾತ್ರಿಯೂ ನಿಮ್ಮ ಪಾಲಿಗೆ
ವರ್ಣಮಯ ಇರುಳಾಗಲಿದೆ. ಎರಡು ಹುಣ್ಣಿಮೆಗಳು, ಅದರಲ್ಲೊಂದು ಬ್ಲ್ಯೂ ಮೂನ್, ಹಲವು ಉಲ್ಕಾಪಾತಗಳು ಮತ್ತು ಭೂಮಿಯ ಅತೀ ಸಮೀಪ ಬರುವ ಮಂಗಳ ಗ್ರಹ ನಿಮ್ಮ ಆಕಾಶ ವೀಕ್ಷಣೆಯ ಹವ್ಯಾಸಕ್ಕೆ ಹೊಸ ಹುರುಪು ಮತ್ತು ಅನುಭವ ನೀಡಲಿವೆ.

ಖಗೋಳ ವಿಜ್ಞಾನಿಗಳು, ಖಗೋಳಾಸಕ್ತರು ಸದಾ ಕಾಯ್ದು ಕಾತರಿಸುವ ಅಕ್ಟೋಬರ್ ತಿಂಗಳಿನಲ್ಲಿ ಹಲವು ಆಕಾಶ ವಿಸ್ಮಯಗಳು ಸಂಭವಿಸಲಿವೆ. ಇದೇ 13ರಂದು ಸೂರ್ಯ, ಭೂಮಿ ಮತ್ತು ಮಂಗಳ ಗ್ರಹಗಳು ಒಂದೇ ಸರಳ ರೇಖೆಯಲ್ಲಿದ್ದು ‘ಮಾರ‍್ಸ್ ಅಪೊಸಿ ಶನ್’ (Mars Opposition)  ಎಂಬ ಖಗೋಳ ವಿದ್ಯಮಾನ ಸಂಭವಿಸುತ್ತದೆ. ಯಾವುದೇ ಗ್ರಹ ಅಥವಾ ಆಕಾಶಕಾಯ ಸೂರ್ಯನ ಎದುರಿಗೆ ಬರುವುದನ್ನು ಅಪೊಸಿಶನ್ ಎನ್ನುತ್ತಾರೆ. ಸೂರ್ಯ ಮತ್ತು ಮಂಗಳ ಗ್ರಹದ ನಡುವೆ ಭೂಮಿ ಬಂದಾಗ ಹವಳದಂತೆ ಕೆಂಪಗೆ ಹೊಳೆಯುವ ಮಂಗಳ ಗ್ರಹ ಭೂಮಿಯಿಂದ ನೋಡುವವರಿಗೆ ನಿಚ್ಚಳವಾಗಿ ಬರಿಯ ಕಣ್ಣಿಗೇ ಕಾಣಿಸುತ್ತದೆ!

ಮಂಗಳವಾರ ಮಂಗಳನ ಹುಣ್ಣಿಮೆ. ಇಡೀ ಮಂಗಳ ಗ್ರಹ ಸೂರ್ಯನ ಬೆಳಕಿನಿಂದ ತುಂಬಿ ಹೋಗಿ ಅದು ಭೂಮಿಗೆ ಪ್ರತಿಫಲನ ಗೊಳ್ಳುತ್ತದೆ. ಸೂರ್ಯಾಸ್ತದ ವೇಳೆಯಿಂದ ಶುರುವಾಗಿ, ಸೂರ್ಯೋದಯದವರೆಗೂ ಪೂರ್ವ ಆಕಾಶದಲ್ಲಿ ಕಾಣಿಸುವ ಮಂಗಳ ಗ್ರಹ ಮಧ್ಯ ರಾತ್ರಿಯ ವೇಳೆ ಅತ್ಯಂತ ಎತ್ತರದಲ್ಲಿ ಪ್ರಖರವಾಗಿರುತ್ತದೆ. ಸೂರ್ಯನನ್ನು ಸುತ್ತಲು ಭೂಮಿ 365 ದಿನ ತೆಗೆದು ಕೊಂಡರೆ ಮಂಗಳಗ್ರಹಕ್ಕೆ 687 ದಿನಗಳು ಬೇಕು.

ಸೂರ್ಯನಿಂದ ಸುಮಾರು 24 ಕೋಟಿ ಕಿ.ಮೀ. ದೂರದಲ್ಲಿರುವ ಮಂಗಳ ಗ್ರಹ ಮತ್ತು ಹದಿನೈದು ಕೋಟಿ ಕಿ.ಮೀ. ದೂರವಿರುವ ಭೂಮಿ ಸೂರ್ಯನ ಸುತ್ತ ದೀರ್ಘ ವೃತ್ತಾಕಾರದಲ್ಲಿ ಸುತ್ತುತ್ತಾ ಎರಡು ವರ್ಷ ಐವತ್ತು ದಿನಗಳಿಗೊಮ್ಮೆ ಒಂದಕ್ಕೊಂದು ಹತ್ತಿರ ಬಂದು ಒಂದೇ ಸರಳ ರೇಖೆಯಲ್ಲಿರುತ್ತವೆ. ಅಕ್ಟೋಬರ್ 13ರಂದು ಮಂಗಳ ಗ್ರಹ ಭೂಮಿಯಿಂದ ಕೇವಲ 6.2 ಕೋಟಿ ಕಿ.ಮೀ ದೂರದಲ್ಲಿದ್ದು, ಗುರು, ಶುಕ್ರಗ್ರಹಗಳನ್ನೂ ಮಂಕು ಮಾಡಿ ಅತ್ಯಂತ ಹೊಳಪುಳ್ಳ ನಕ್ಷತ್ರ ಸಿರಿಯಸ್‌ಗಿಂತ ಮೂರು ಪಟ್ಟು ಹೆಚ್ಚಿನ ಹೊಳಪಿನಿಂದ ಕಂಗೊಳಿಸುತ್ತದೆ.

ಸೂರ್ಯಸ್ತವಾಗುತ್ತಿದ್ದಂತೆ ಪೂರ್ವ ಆಕಾಶದಲ್ಲಿ ದರ್ಶನ ನೀಡುವ ಮಂಗಳಗ್ರಹ ಕೆಂಪು ಬಣ್ಣದಿಂದ ಹೊಳೆಯುತ್ತ, ಇಡೀ ತಿಂಗಳು ನೋಡಲು ಬರಿಗಣ್ಣಿಗೇ ಸಿಗುತ್ತದೆ. ಈ ಹಿಂದೆ ಜುಲೈ 27, 2018ರಂದು ಭೂಮಿಗೆ ಹತ್ತಿರ ಬಂದಿದ್ದ ಗ್ರಹ ಮತ್ತೆ ಹತ್ತಿರಕ್ಕೆ ಬರುವುದು ಡಿಸೆಂಬರ್ 8, 2022ರಂದು. ಅಂದರೆ ಈ ಅಪರೂಪದ ವಿದ್ಯಮಾನ ಗೋಚರಿಸುವುದು ಇಪ್ಪತ್ತಾರು ತಿಂಗಳಿ ಗೊಮ್ಮೆ. ಹೆಚ್ಚಿನ ಸಾಮರ್ಥ್ಯದ ದೂರದರ್ಶಕದ ಸಹಾಯದಿಂದ ಮಂಗಳನ ಅಂಗಳದ ಹಲವು ವಿವರಗಳನ್ನು ಕಲೆಹಾಕಲು ಕಾದು ಕುಳಿತಿರುವ ಖಗೋಳ ವಿಜ್ಞಾನಿಗಳು’ ಈ ಅವಕಾಶ ಭೂಮಿಯ ಉತ್ತರಗೋಳಕ್ಕೆ ಮಾತ್ರ ಸಿಗುತ್ತಿದೆ, ನವೆಂಬರ್ ಮಧ್ಯದ ವೇಳೆಗೆ 39 ಕೋಟಿ ಕಿಲೋಮೀಟರ್ ದೂರ ಚಲಿಸಿ, ಮಸುಕಾಗಿ ಬಿಡುತ್ತದೆ’ ಅದಕ್ಕೂ ಮುನ್ನ ಈ ಅಪರೂಪದ ಅವಕಾಶವನ್ನು ಮಿಸ್‌ ಮಾಡಿಕೊಳ್ಳಬೇಡಿ ಎಂದಿದ್ದಾರೆ.

ಹೀಗೆ ಹತ್ತಿರ ಬರುವ ಮಂಗಳನಲ್ಲಿ ಬಾಹ್ಯಾಕಾಶ ನೌಕೆ ಇಳಿಸಲು ಇದು ಪ್ರಶಸ್ತ ಕಾಲ ಎಂದು ಗೊತ್ತಿರುವ ಅನೇಕ ರಾಷ್ಟ್ರಗಳು ಹಲವು ಉಡಾವಣೆ ಮಾಡುತ್ತವೆ. ‘ರೆಡ್ ಪ್ಲಾನೆಟ್’ ಎಂದೇ ಕರೆಯಿಸಿಕೊಳ್ಳುವ ಮಂಗಳನತ್ತ ಹೊರಟಿರುವ ನಾಸಾದ ‘ಪರ್ಸಿವ ರೆನ್ಸ್’ ನೌಕೆ 2021 ರ ಫೆಬ್ರವರಿ 18 ರಂದು ಮಂಗಳ ಗ್ರಹದಲ್ಲಿ ಇಳಿಯಲಿದೆ. ಇದೇ ಜುಲೈ 20ರಂದು ಸೌದಿ ಅರೇಬಿಯ ಜಪಾನ್‌ನ ನೆರವಿನಿಂದ ಮಂಗಳನನ್ನು ಶೋಧಿಸುವ ತನ್ನ ಯೋಜನೆ ‘ಹೋಪ್’ ನ್ನು ಗಗನ ನೌಕೆ ಅಲ್-ಅಮಲ್‌ನ ಮೂಲಕ ಉಡಾಯಿ ಸಿದ್ದು ಎಲ್ಲವೂ ಯೋಜಿಸಿದಂತೆ ನಡೆಯುತ್ತದೆ.

ಚೀನಾ ತನ್ನ ಬಾಹ್ಯಾಕಾಶ ಯೋಜನೆ ತೈಯನ್‌ವೆನ್ -1ನ್ನು ಮಂಗಳ ಗ್ರಹ ಶೋಧನೆಗೆ ಉಡಾಯಿಸಿದ್ದು ಅದು ಮುಂದಿನ ವರ್ಷ ದಲ್ಲಿ ಮಂಗಳನ ಕಕ್ಷೆಗೆ ಸೇರಿಕೊಳ್ಳಲಿದೆ. ಆದರೆ ೨೦೦೩ರಲ್ಲಿ ಮಂಗಳಗ್ರಹ ಭೂಮಿಯಿಂದ ಅತೀ ಹತ್ತಿರ ಅಂದರೆ 5.5 ಕೋಟಿ ಕಿ.ಮೀ ದೂರವಿತ್ತು. ಇದರ ಪುನರಾವರ್ತನೆಯಾಗುವುದು ೨೨೮೭ರಲ್ಲಿ ಮಾತ್ರ!. ವಿಜ್ಞಾನಿಗಳಿಂದ ಹಿಡಿದು ಶಾಸ್ತ್ರ ಹೇಳುವ ಪಂಡಿತರು, ವಿಜ್ಞಾನದ ವಿದ್ಯಾರ್ಥಿಗಳು ಮತ್ತು ಹವ್ಯಾಸಿ ಆಕಾಶ ವೀಕ್ಷಕರಿಗೆ ಮಂಗಳನ ಬಗ್ಗೆ ಭಾರೀ ಕುತೂಹಲವಿದೆ.ಈಗಾಗಲೇ ಅಲ್ಲಿಗೆ ಹಲವು ಬಾರಿ ಮಾನವ ರಹಿತ ನೌಕೆ ಕಳಿಸಿ, ಯಂತ್ರಗಳನ್ನಿಳಿಸಿ ಅಲ್ಲಿನ ಚಿತ್ರ ತೆಗೆದು, ಅಲ್ಲಿ ಗಾಳಿ ಇದೆ, ಹೊಂಡಗಳಿವೆ, ನೀರಿನ ಪಸೆಯಿದೆ ಎಂಬ ಮಾಹಿತಿಯನ್ನೆಲ್ಲಾ ಕಲೆ ಹಾಕಿದ್ದೇವೆ.

ಈಗ ಮನುಷ್ಯನನ್ನು ಕಳಿಸಿ, ನಡೆದಾಡಿಸಿ ಏನೇನಿದೆ ಎಂದು ಪತ್ತೆ ಹಚ್ಚುವತ್ತ ತಯಾರಿ ನಡೆದಿದೆ. ಒಂದು ವಿಷಯ ನೆನಪಿನ ಲ್ಲಿರಲಿ. ಗ್ರಹಗಳು ನಕ್ಷತ್ರಗಳಂತೆ ಮಿನುಗುವುದಿಲ್ಲ. ಮಂಗಳ ಗ್ರಹ ಹತ್ತಿರ ಬರುತ್ತದೆ ಎಂದ ಮಾತ್ರಕ್ಕೆ ಬರಿಗಣ್ಣಿಗೆ ಹುಣ್ಣಿಮೆಯ ಚಂದ್ರನಷ್ಟು ದೊಡ್ಡದಾಗಿ ಕಾಣಿಸುವುದಿಲ್ಲ. ಚಂದ್ರನಷ್ಟು ಹೊಳಪನ್ನೂ ಹೊಂದಿರುವುದಿಲ್ಲ. ಆದರೆ 80 ಸಾಮರ್ಥ್ಯದ ಟೆಲಿಸ್ಕೋಪ್ ಬಳಸಿ ನೋಡಿದರೆ ಹುಣ್ಣಿಮೆಯ ಚಂದ್ರನಷ್ಟೇ ದೊಡ್ಡದಾಗಿ ಗೋಚರಿಸುತ್ತದೆ. ಮಂಗಳನ ಹೊಳಪಿನ ಪ್ರಮಾಣ ಮೈನಸ್ 2.6 ರಷ್ಟಿದ್ದರೆ ಚಂದ್ರನದ್ದು ಮೈನಸ್ 13 ಇರುತ್ತದೆ.