Sunday, 15th December 2024

ಮಾನಗಢ್‌ ಧಾಮ್‌ ಸಾಹಸಗಾಥೆಯ ಸ್ಮರಣೆ

ಸಂಸ್ಕೃತಿ

ಅರ್ಜುನ್ ರಾಮ್ ಮೇಘವಾಲ್

(ಕೇಂದ್ರ ಸಂಸ್ಕೃತಿ ಮತ್ತು ಸಂಸದೀಯ ವ್ಯವಹಾರಗಳ

ಸಹಾಯಕ ಸಚಿವರು ಮತ್ತು ಬಿಕಾನೇರ‍್ ಕ್ಷೇತ್ರದ ಸಂಸದರು)

ರಾಷ್ಟ್ರವು ಬಹು ಆಯಾಮದ ಮುನ್ನಡೆಗಳನ್ನು ಕಾಣುತ್ತಿದೆ, ನಾಗರಿಕರ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ದಾಪುಗಾಲಿಡುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವವು ಆತ್ಮಾವಲೋಕನಕ್ಕೆ ಮತ್ತು ರಾಷ್ಟ್ರಕ್ಕಾಗಿ ಹೊಸ ಗುರಿಗಳನ್ನು ಸಾಧಿಸುವ ಪ್ರಜ್ಞೆಯನ್ನು ಜನಸಾಮಾನ್ಯರಲ್ಲಿ ಮೂಡಿಸಲು ಸೂಕ್ತ ಸಂದರ್ಭ.

ಸ್ವಾತಂತ್ರ್ಯ ಹೋರಾಟವು ರಾಷ್ಟ್ರೀಯ ಚಳುವಳಿಯಲ್ಲಿನ ಎಲ್ಲ ಪಾಲುದಾರರ ಚಟುವಟಿಕೆಗಳ ವ್ಯಾಪ್ತಿಯನ್ನು ವಿಸ್ತರಿಸಿದ, ಹೋರಾಟಗಾರರ ಜಾಗೃತ ಪ್ರಜ್ಞೆಯನ್ನು ಪ್ರತಿಬಿಂಬಿಸುವ ಹಲವು ಸಾಹಸಗಾಥೆಗಳನ್ನು ಹೊಂದಿದೆ. ತಾಯ್ನೆಲದ ಪ್ರತಿಷ್ಠೆಗಾಗಿ ಅನಾಮಧೇಯ ವೀರರು ಪ್ರಾಣತ್ಯಾಗ ಮಾಡಿದ್ದಾರೆ. ನವೆಂಬರ್ 15 ರಂದು ಆಚರಿಸಲಾದ ನೇ ’ಜನಜಾತೀಯ ಗೌರವ ದಿವಸ್’, ಅಂದರೆ ಬಿರ್ಸಾ ಮುಂಡಾ ಅವರ ಜಯಂತಿ ಬುಡಕಟ್ಟು ಸ್ವಾತಂತ್ರ್ಯ ಹೋರಾಟ ಗಾರರ ಶೌರ್ಯ ಮತ್ತು ಸಾಹಸ ಕಾರ್ಯಗಳನ್ನು ನೆನಪಿಸುತ್ತದೆ. ನವೆಂಬರ್ ೧೭, ಗೋವಿಂದ ಗುರು ಅವರ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಸಾಹಸಿ ಬುಡಕಟ್ಟು ಹುತಾತ್ಮರ ತ್ಯಾಗವನ್ನು ಸ್ಮರಿಸುವ ದಿನವಾಗಿದೆ.

ರಾಜಸ್ಥಾನದ ಡುಂಗರ್‌ಪುರ-ಬನ್ಸ್ವಾರಾ ಪ್ರದೇಶದಲ್ಲಿ ಅಲೆಮಾರಿ ಕುಟುಂಬದಲ್ಲಿ ಜನಿಸಿದ ಗೋವಿಂದ್ ಗುರು, ಸ್ವಾಮಿ ದಯಾನಂದ ಸರಸ್ವತಿಯವರ ತತ್ವಗಳನ್ನು ಅಳವಡಿಸಿಕೊಂಡರು. ತಮ್ಮ ಸಾಮಾಜಿಕ-ಧಾರ್ಮಿಕ ಉನ್ನತಿಯ ಮೂಲಕ ಭಿಲ್ ಬುಡಕಟ್ಟುಗಳನ್ನು ಒಂದುಗೂಡಿಸಿದರು. ಭಾರತೀಯ ಸಂಪ್ರದಾಯ ಮತ್ತು ಆದರ್ಶಗಳ ಪ್ರಖರ ಪ್ರಚಾರಕರು
ಇವರು. 1883ರಲ್ಲಿ ೨೫ನೇ ವಯಸ್ಸಿನಲ್ಲಿ, ಬುಡಕಟ್ಟು ಜನಾಂಗದವರಲ್ಲಿ ಏಕತೆ ಮತ್ತು ಸಾಮರಸ್ಯವನ್ನು ಉತ್ತೇಜಿಸಲು ’ಸಂಪ್ ಸಭಾ’ವನ್ನು ಸ್ಥಾಪಿಸಿದರು. ಈ ಸಾಮಾಜಿಕ ಆರ್ಥಿಕ ಕ್ರಮಗಳು ಬ್ರಿಟಿಷ್ ರಾಜ್‌ನ ಸಂಘಟಿತ ಲೂಟಿ ಮತ್ತು ಸ್ಥಳೀಯರು ಮತ್ತು ದೇಶೀಯ ಜನರ ಕಾಳಜಿಗೆ ಭಾರತದ ಏಕಕಾಲದ ಪ್ರತಿಕ್ರಿಯೆಯಾಗಿದ್ದವು.

1903ರಿಂದ, ಮಾನಗಢ್ ಬೆಟ್ಟವು ಈ ಪ್ರದೇಶದ ಭಿಲ್ಲರು ಮತ್ತು ಇತರ ಬುಡಕಟ್ಟು ಜನಾಂಗದವರು ಜಾತ್ರೆಯ ರೂಪದಲ್ಲಿ ಸೇರುವ ವಾರ್ಷಿಕ ಸಭೆಗೆ ಪ್ರಸಿದ್ಧಿ ಪಡೆಯಿತು. ಭಾರತದಲ್ಲಿ ಸ್ವಯಂ-ಆಡಳಿತದ ಬೇಡಿಕೆ ೨೦ನೇ ಶತಮಾನದ ಮೊದಲ ದಶಕದಲ್ಲಿ ಅಗಾಧ ಬೆಂಬಲ ಪಡೆಯಿತು. ಒಡೆದು ಆಳುವ ನೀತಿಯ ಪರಿಣಾಮವಾಗಿ ಬಂಗಾಳ ವಿಭಜನೆ ಮತ್ತು ಸಂಪತ್ತನ್ನು ದೋಚುವ  ಕಾರ್ಯವಿಧಾನವು ಬ್ರಿಟಿಷ್ ಆಡಳಿತದ ನೈತಿಕ ಅಡಿಪಾಯವನ್ನು ಅಲ್ಲಾಡಿಸಿದವು.

ಕ್ಷಾಮ ಪೀಡಿತ ಸಂದರ್ಭಗಳಲ್ಲಿ ಬುಡಕಟ್ಟು ಜನಾಂಗದವರ ತೆರಿಗೆ ಹೊರೆ ತಗ್ಗಿಸುವಂತೆ ಹಾಗೂ ಧಾರ್ಮಿಕ ಸ್ವಾತಂತ್ರ್ಯ
ಮತ್ತು ಭಾರತದ ಸಾಂಸ್ಕೃತಿಕ ಅಂಶಗಳ ಮೇಲೆ ಅತಿಕ್ರಮಣ ನಿಲ್ಲಿಸುವಂತೆ ಗೋವಿಂದ ಗುರುಗಳು ಬ್ರಿಟಿಷರ ಮುಂದೆ ಬೇಡಿಕೆ ಇಟ್ಟರು. ಸ್ವಾತಂತ್ರ್ಯ ಹೋರಾಟದ ಭಾಗವಾಗಿ, ಭಿಲ್ಲರು ಮತ್ತು ಇತರ ಬುಡಕಟ್ಟು ಜನಾಂಗದವರು ಬ್ರಿಟಿಷರೊಂದಿಗೆ
ಸುದೀರ್ಘ ಹೋರಾಟದಲ್ಲಿ ತೊಡಗಿದರು. 1913ರಲ್ಲಿ, ನವೆಂಬರ್ ೧೭ರ ಹುಣ್ಣಿಮೆಯ ದಿನದಂದು, ಗುರುವಿಗೆ ತಮ್ಮ ನಿಷ್ಠೆಯನ್ನು ತೋರಿಸಲು, ಆಧ್ಯಾತ್ಮಿಕ ಚಟುವಟಿಕೆಗಳಿಗಾಗಿ ಮತ್ತು ಬ್ರಿಟಿಷ್ ಪ್ರಾಬಲ್ಯವನ್ನು ಕೊನೆಗೊಳಿಸುವ ಮಾರ್ಗ ಹುಡುಕಲು ಮಾನಗಢ್ ಬೆಟ್ಟದಲ್ಲಿ ೧.೫ ಲಕ್ಷಕ್ಕೂ ಹೆಚ್ಚು ಭಿಲ್ ಜನರು ಸೇರಿದರು.

ಅಕ್ರಮ ತೆರಿಗೆ ಸಂಗ್ರಹವು ಬ್ರಿಟಿಷರ ದಬ್ಬಾಳಿಕೆ ಮತ್ತು ಅನ್ಯಾಯದ ಸ್ಪಷ್ಟ ಪ್ರದರ್ಶನವಾಗಿದ್ದವು. ’ಭುರೆತಿಯಾ ನ್ಹಿ ಮಾನು ರೇ’ (ಬಿಳಿಯರ, ಅಂದರೆ ಬ್ರಿಟಿಷರ ದಬ್ಬಾಳಿಕೆಯ ಆಡಳಿತವನ್ನು ನಾನು ಒಪ್ಪಿಕೊಳ್ಳುವುದಿಲ್ಲ) ಹಾಡು ಬುಡಕಟ್ಟು ಜನರ ಮುಖವಾಣಿಯಾಯಿತು. ಹೀಗಾಗಿ, ಅನ್ಯಾಯ ಎದುರಿಸಲು ಗೋವಿಂದ ಗುರುಗಳು ನೀಡಿದ ಕರೆ ಬ್ರಿಟಿಷ್ ಆಳ್ವಿಕೆಯ ವಿರುದ್ಧ ನಾಗರಿಕರ ಅಸಹಕಾರ ಚಳವಳಿಗೆ ಅಡಿಪಾಯ ಹಾಕಿತು.

ಇಷ್ಟು ದೊಡ್ಡ ಪ್ರಮಾಣದ ಸಭೆಯನ್ನು ಗ್ರಹಿಸಿದ ಬ್ರಿಟಿಷರು, ಇಡೀ ಮಾನಗಢ್ ಬೆಟ್ಟವನ್ನು ಸುತ್ತುವರಿಯಲು ಏಳು ಕಂಪನಿ ಗಳನ್ನು ನಿಯೋಜಿಸಿದರು. ಗುಂಡು, ಫಿರಂಗಿಗಳ ಬೆದರಿಕೆಯೊಡ್ಡಿ ಬುಡಕಟ್ಟು ಆಂದೋಲನವನ್ನು ಹತ್ತಿಕ್ಕಲು ಪ್ರಯತ್ನಿಸಿದರು. ಆಧ್ಯಾತ್ಮದಿಂದ ಜಾಗೃತವಾದ ಜನಸಾಮಾನ್ಯರು ಬೆಟ್ಟ ಪ್ರದೇಶವನ್ನು ತೆರವು ಮಾಡುವಂತೆ ಬ್ರಿಟಿಷರು ಹೊರಡಿಸಿದ ಆದೇಶ ಪಾಲಿಸಲು ಒಪ್ಪಿಕೊಳ್ಳಲಿಲ್ಲ. ಆತ್ಮವಿಶ್ವಾಸ ಮತ್ತು ಮಾತೃಭೂಮಿಯನ್ನು ರಕ್ಷಿಸುವ ಧ್ಯೇಯದ ಮುಂದೆ ಬೆದರಿಕೆ ಕೆಲಸ ಮಾಡಲಿಲ್ಲ. ಸೂಕ್ಷ್ಮತೆ ಮರೆತ ಬ್ರಿಟಿಷರು ಸಾಮೂಹಿಕ ಗುಂಡಿನ ದಾಳಿಗೆ ಆದೇಶಿಸಿದರು.

ಘಟನೆಯಲ್ಲಿ ೧೫೦೦ ಕ್ಕೂ ಹೆಚ್ಚು ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರು ಪ್ರಾಣ ಅರ್ಪಿಸಿದರು. ಮಾನಗಢ್ ಬೆಟ್ಟದ ಘಟನೆಯ ಆರು ವರ್ಷಗಳ ನಂತರ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆಯಿತು. ಭಾರತದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯನ್ನುಮುರಿಯಲು ಅನುಸರಿಸಿದ ಅಮಾನವೀಯ ವಿಧಾನಗಳು ಮತ್ತು ಕ್ರಮಗಳಿಂದ ಬ್ರಿಟಿಷರ ನೈತಿಕ
ಅಧಃಪತನ ಆರಂಭವಾಯಿತು.

ಸ್ವಾತಂತ್ರ್ಯ ಹೋರಾಟದ ಈ ಅಪ್ರತಿಮ ವೀರರ ತ್ಯಾಗಗಳು ರಾಷ್ಟ್ರೀಯತೆ, ನೈತಿಕತೆಯನ್ನು ಹೆಚ್ಚಿಸಿದವು. ಈ ಮನೋಭಾ ವವು ಸ್ವತಂತ್ರ ಭಾರತವನ್ನು ಪಡೆಯಲು ತಮ್ಮ ಸಕ್ರಿಯ ಪಾತ್ರವನ್ನು ಕರ್ತವ್ಯವಾಗಿ ನಿರ್ವಹಿಸುವಂತೆ ಎಲ್ಲರನ್ನೂ ರೂಪಿಸಿತು. ಸ್ವಾತಂತ್ರ್ಯದ ೭೫ ವರ್ಷಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು, ಅಭಿವೃದ್ಧಿ ಹೊಂದಿದ
ಭಾರತದ ಗುರಿಯೊಂದಿಗೆ ವಸಾಹತುಶಾಹಿ ಮನಸ್ಥಿತಿಯ ಕುರುಹುಗಳನ್ನು ತೊಡೆದುಹಾಕಿ, ನಮ್ಮ ಬೇರುಗಳು, ಏಕತೆ ಮತ್ತು ಕರ್ತವ್ಯ ಪ್ರeಯನ್ನು ಬೆಳೆಸುವ ಅಮೃತ ಕಾಲದ ಪಂಚಪ್ರಾಣಕ್ಕೆ ಸ್ಪಷ್ಟವಾದ ಕರೆ ನೀಡಿದ್ದಾರೆ.

ಸ್ವಾತಂತ್ರ್ಯ ಹೋರಾಟದಿಂದ ರಾಷ್ಟ್ರ ನಿರ್ಮಾಣದವರೆಗೆ ಆದಿವಾಸಿಗಳ ಅವಿಸ್ಮರಣೀಯ ಪಾತ್ರವು ಸ್ಫೂರ್ತಿದಾಯಕ ಕಥೆಯಾಗಿದೆ. ಬುಡಕಟ್ಟು ಸಂಸ್ಕೃತಿ, ಪ್ರಕೃತಿಯೊಂದಿಗೆ ಸಾಮರಸ್ಯ ಮತ್ತು ಸುಸ್ಥಿರತೆ, ಪರಿಸರ ಸ್ನೇಹಿ ಜೀವನಶೈಲಿ ಮತ್ತು ನಿಸರ್ಗವನ್ನು ರಕ್ಷಿಸುವ ಅವರ ಮನೋಭಾವವು ಅನುಕರಣೀಯವಾಗಿದೆ. ಗಣ್ಯ ವರ್ಗ ಮತ್ತು ಅಭಿವೃದ್ಧಿ ಹೊಂದಿದ ದೇಶಗಳಿಗೆ ಇಂಗಾಲದ ಹೆಜ್ಜೆಗುರುತುಗಳನ್ನು ಕಡಿಮೆ ಮಾಡುವ ಮಾರ್ಗಗಳು ಮತ್ತು ಕ್ರಮಗಳಿಗೆ ಪಾಠವೂ ಆಗಿದೆ.

ನವೆಂಬರ್ ೧ ರಂದು ಮಾನಗಢ್ ಬೆಟ್ಟದಲ್ಲಿ ಇತ್ತೀಚೆಗೆ ನಡೆದ ’ಮಾನ್‌ಗಢ್ ಧಾಮ್ ಕಿ ಗೌರವ ಗಾಥಾ’ ಕಾರ್ಯಕ್ರಮವು ಪ್ರಧಾನಿ ನರೇಂದ್ರ ಮೋದಿ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಗುಜರಾತ್ ಮುಖ್ಯಮಂತ್ರಿಗಳು ಮತ್ತು ಮುಖ್ಯವಾಗಿ, ೧೯೧೩ ರಲ್ಲಿ ಅದೇ ಬೆಟ್ಟದ ಮೇಲೆ ಸಮಾವೇಶಗೊಂಡಿದ್ದ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಂಶಸ್ಥರ ಉಪಸ್ಥಿತಿಗೆ
ಸಾಕ್ಷಿಯಾಯಿತು. ಈಗ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯ ಸರಕಾರಗಳ ಸಹಕಾರದೊಂದಿಗೆ ಮಾನಗಢ್ ಧಾಮ್ ಅನ್ನು ಬುಡಕಟ್ಟು ಪರಂಪರೆ ಮತ್ತು ಅವರ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುವ ಮೂಲಕ ರಾಷ್ಟ್ರೀಯ ಸ್ಮಾರಕವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ.

ರಾಷ್ಟ್ರೀಯ ಬುಡಕಟ್ಟು ತಾಣವಾಗಿ ಅದರ ಅಭಿವೃದ್ಧಿಯು ರಾಷ್ಟ್ರ ನಿರ್ಮಾಣದಲ್ಲಿ ಬುಡಕಟ್ಟು ಸಮುದಾಯದ ಕೊಡುಗೆಯನ್ನು ಗುರುತಿಸುವಲ್ಲಿ ಮಹತ್ವದ ಮೈಲಿಗಲ್ಲಾಗುತ್ತದೆ. ಅಲ್ಲದೇ, ಬುಡಕಟ್ಟು ಜನರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಗುರುತಿ ಸಲು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಅವರ ತ್ಯಾಗವನ್ನು ಸ್ಮರಿಸಲು ಸರಕಾರವು ಈಗಾಗಲೇ ಹತ್ತು ರಾಜ್ಯಗಳಲ್ಲಿ ಅಂದರೆ ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ಮಧ್ಯಪ್ರದೇಶ, ಛತ್ತೀಸ್ ಗಢ, ಜಾರ್ಖಂಡ್, ಗುಜರಾತ್, ಆಂಧ್ರಪ್ರದೇಶ, ಗೋವಾ ಮತ್ತು ಕೇರಳದಲ್ಲಿ ಬುಡಕಟ್ಟು ವಸ್ತು ಸಂಗ್ರಹಾಲಯಗಳನ್ನು ಸ್ಥಾಪಿಸಿದೆ.

ಭಾರತದ ಬೆಳವಣಿಗೆಯ ಪಥದಲ್ಲಿ, ಬುಡಕಟ್ಟು ಪರಂಪರೆಯನ್ನು ಬಿಟ್ಟರೆ ಅರ್ಧ ತುಂಬಿದ ಲೋಟವಾಗುತ್ತದೆ. ಇದೀಗ ಮೋದಿ ಸರಕಾರ ಕೈಗೊಂಡಿರುವ ಉಪಕ್ರಮಗಳಿಂದ ಆದಿವಾಸಿಗಳು ಮುಖ್ಯವಾಹಿನಿಯ ಅಭಿವೃದ್ಧಿ ಕಾರ್ಯಸೂಚಿಯಲ್ಲಿ
ಹೆಗಲು ಕೊಟ್ಟು ಹೆಜ್ಜೆ ಹಾಕುತ್ತಿದ್ದಾರೆ. ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾದ ಮೊದಲನೇ ಬುಡಕಟ್ಟು ನಾಯಕಿ ಎಂದು ದೇಶವು ಸಂಭ್ರಮಿಸುತ್ತಿದೆ.

ಕೇಂದ್ರ ಸಂಪುಟದಲ್ಲಿ ಎಂಟು ಬುಡಕಟ್ಟು ಮಂತ್ರಿಗಳಿದ್ದಾರೆ. ಬಡವರ ಪರವಾದ ಕಲ್ಯಾಣ ಕ್ರಮ, ಜನ-ಕೇಂದ್ರಿತ ನೀತಿಗಳು ಮತ್ತು ಉದ್ದೇಶಿತ -ಲಾನುಭವಿಗಳಿಗೆ ಸೌಲಭ್ಯಗಳನ್ನು ವಿಸ್ತರಿಸುವ ಸಂಪೂರ್ಣ ಗುರಿ ಸಾಧನೆಯ ಆಡಳಿತ ವಿಧಾನವು ಅವರ
ಜೀವನವನ್ನು ಸುಲಭಗೊಳಿಸಿದೆ. ಏಕಲವ್ಯ ಮಾದರಿ ವಸತಿ ಶಾಲೆಯ ನಿರ್ಮಾಣ, ಆದಿವಾಸಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮೀಸಲಾದ ವಿದ್ಯಾರ್ಥಿವೇತನ ಯೋಜನೆ, ಸಿಕಲ್ ಸೆಲ್ ಅನೀಮಿಯಾ-ರಕ್ತಹೀನತೆ ನಿವಾರಣೆ, ಮಿಷನ್
ಇಂದ್ರಧನುಷ್, ಬುಡಕಟ್ಟು ಸಂಶೋಧನಾ ಸಂಸ್ಥೆಯ ಮೂಲಕ ಅಭಿವೃದ್ಧಿ, ಬಿದಿರನ್ನು ಮರವೆಂಬ ಪರಿಗಣನೆಯಿಂದ ತೆಗೆದು ಹಾಕುವುದು, ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತಿತರ ಯೋಜನೆಗಳು ಬುಡಕಟ್ಟು ಜನರ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತಿವೆ. ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯನ್ನು ತಿದ್ದುಪಡಿಗಳ
ಮೂಲಕ ಬಲಪಡಿಸಿರುವುದು ಅವರ ವಿರುದ್ಧದ ದೌರ್ಜನ್ಯಗಳನ್ನು ಪರಿಣಾಮಕಾರಿಯಾಗಿ ತಡೆಯುವಂತೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರ ದೂರದರ್ಶಿ ನಾಯಕತ್ವದಲ್ಲಿ ಸಾಮಾಜಿಕ ನ್ಯಾಯದ ಕಲ್ಪನೆ ಹೊಸ ಅರ್ಥವನ್ನು ಪಡೆಯುತ್ತಿದೆ.

ಇಂದು ನಾವು ಅನಾಮಧೇಯ ಸ್ವಾತಂತ್ರ್ಯ ಹೋರಾಟಗಾರರ ಅತ್ಯುನ್ನತ ತ್ಯಾಗವನ್ನು ಸ್ಮರಿಸುವ ಮೂಲಕ ಮಾನಗಢ್ ಹುತಾತ್ಮರಿಗೆ ನಮನ ಸಲ್ಲಿಸುತ್ತೇವೆ. ಸಮಕಾಲೀನ ಅಂತಾರಾಷ್ಟ್ರೀಯ ಸವಾಲುಗಳಿಗೆ ಸಮಸ್ಯೆ ನಿವಾರಕನಾಗಿ ಹೊರ ಹೊಮ್ಮುತ್ತಿರುವ ಜಾಗತಿಕ ನಾಯಕ, ನವ ಭಾರತವನ್ನು ನಿರ್ಮಿಸಲು ಸ್ವಾತಂತ್ರ್ಯ ಹೋರಾಟಗಾರರ ಮೌಲ್ಯಗಳೊಂದಿಗೆ ನಮ್ಮ ನೈತಿಕತೆಯನ್ನು ಬೆಸೆಯೋಣ. ನಮ್ಮ ಭೂತಕಾಲವನ್ನು ಅಳಿಸೋಣ, ಅದಮ್ಯ ಪರಂಪರೆಯನ್ನು ಮುನ್ನಡೆಸೋಣ ಮತ್ತು ಉಜ್ವಲ ಭವಿಷ್ಯವನ್ನು ಗಳಿಸಲು ಸಾಂಸ್ಕೃತಿಕ ಮೌಲ್ಯಗಳಿಂದ ಕಲಿಯೋಣ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಬಗ್ಗೆ ಚಿಂತನಶೀಲರಾಗುವ ಮತ್ತು ಕಾರ್ಯತತ್ಪರರಾಗುವ ಸಮಯ ಇದಾಗಿದೆ.