Thursday, 12th December 2024

ಮಾವಿನ ರೋದನ, ಕೇಳಲು ಯಾರಿಗೆ ವ್ಯವಧಾನ ?

ಶಿಶಿರ ಕಾಲ

shishirh@gmail.com

ನಮ್ಮಲ್ಲಿನ ಕಾಡುಗಳಲ್ಲಿ ಸಹಜ ಮಾವಿನ ಮರಗಳು ಸಾಕಷ್ಟಿವೆ. ಅಂದರೆ ಸ್ವಾಭಾವಿಕವಾಗಿ ಬೆಟ್ಟಗಳಲ್ಲಿ ಹುಟ್ಟಿಕೊಂಡವು ನೂರಾರಿವೆ. ಒಂದೊಂದು ಮಾವಿನ ಮರದ ಜಾತಿ ಒಂದೊಂದು. ಹಾಗಾಗಿ ಅವನ್ನೆಲ್ಲ ಒಟ್ಟಾಗಿ ಕಾಟುಮಾವು ಎಂದು ಕರೆಯುವುದು. ಅವನ್ನು ಶಾಸೀಯವಾಗಿ ವರ್ಗೀಕರಿಸಲಿಕ್ಕೆ ಸಾಧ್ಯವೇ ಇಲ್ಲ- ಅಸಂಖ್ಯ. ಆ ಕೆಲಸಕ್ಕೆ ಮುಂದಾದರೆ ಪ್ರತಿ ಮರಕ್ಕೂ ವೈಜ್ಞಾನಿಕ ಉಪನಾಮಗಳನ್ನು ಕೊಡಬೇಕಾಗಬಹುದು.

ಮಾಮಾರ ಅವನ ಹೆಸರು. ಅವನದು ನಮ್ಮೂರಿನಲ್ಲಿ ಮರಕಸುಬು. ಬಡಗಿ ಯಲ್ಲ. ತೆಂಗಿನ ಮರವೇರಿ ಕಾಯಿ ಕೊಯ್ಯುವುದು, ಅಡಕೆ ಗೊನೆ ಕೊಯ್ಯುವುದು, ಅಡಕೆ ಮರಗಳಿಗೆ ಶಿಲೀಂಧ್ರ ದಾಳಿಯಾಗದಂತೆ ಮೈಲುತುತ್ತ ಮದ್ದು ಹೊಡೆಯುವುದು ಇತ್ಯಾದಿ. ಈ ರೀತಿ ಮರವೇರಿ ಕೆಲಸ ಮಾಡುವವರನ್ನು ಕೊನೆ ಗೌಡ ಎಂದು ಕರೆಯುವುದು. ಮಾರನದು ಮಾರನ ಮೈಕಟ್ಟು. ಶಾಲೆಗೆ ಹೋದವನಲ್ಲ. ಶಿಸ್ತಿನ ಮನುಷ್ಯ. ಅವನನ್ನು ನಾವೆಲ್ಲ ಕರೆಯುತ್ತಿದ್ದುದು ಮಾವಿನ ಹಣ್ಣು ಮಾರ! ನಮ್ಮೂರಿನಲ್ಲಿ ಒಂದಿಷ್ಟು ಹೆಸರುಗಳು ಸಾಮಾನ್ಯ. ಅದೇ ಹೆಸರಿನ ಅನೇಕರಿರುತ್ತಾರೆ.

ಹಾಗಾಗಿ ಪ್ರತ್ಯೇಕ ಗುರುತಿಸಲಿಕ್ಕೆಂದು ಅವರ ಹೆಸರಿನ ಜತೆ ಮನೆಯ ಹೆಸರನ್ನೋ, ಅಥವಾ ಇನ್ನೇನೋ ಒಂದನ್ನು ಸೇರಿಸಿ ಸಂಬೋಧಿಸುವುದು ರೂಢಿಗತ ಅಭ್ಯಾಸ. ಮೇಲಿನ ಮನೆಯ ವೆಂಕಟ್ರಮಣ, ಮಾಳಿಗೆ ಮನೆಯ ವೆಂಕಟ್ರಮಣ, ಹೀಗೆ. ಕೆಲವೊಮ್ಮೆ ಒಂದೇ ಹೆಸರಿದ್ದರೆ ಬೇರೆ ಬೇರೆ ರೀತಿಯಲ್ಲಿ ಹೆಸರನ್ನು ಅಪಭ್ರಂಶಿಸಿ ಉಚ್ಚರಿಸಿ ಕರೆದು ಪ್ರತ್ಯೇಕಿಸುವುದಿದೆ. ಕೆಲವರ ಹೆಸರುಗಳಿಗೆ ಏನೇನೋ ಕಾರಣದಿಂದ ಯಾವ್ಯಾವುದೋ ಶಬ್ದ ಸೇರಿಕೊಳ್ಳುವುದಿದೆ. ಸದಾ ಎಣ್ಣೆಯೇರಿಸಿ ಮತ್ತಲ್ಲಿರುವ ರಾಮಪ್ಪ ಎಣ್ಣೆ ರಾಮಪ್ಪನಾದರೆ ಎತ್ತಿನ ಗಾಡಿ ಇಟ್ಟುಕೊಂಡವನು ಗಾಡಿ ರಾಮಪ್ಪ.

ಇದೇ ರೀತಿ ನಮ್ಮ ಮಾರನನ್ನು ಉಳಿದ ಮಾರರಿಂದ ಪ್ರತ್ಯೇಕಿಸಲು ಅವನ ಹೆಸರಿನ ಜತೆ ಸೇರಿಕೊಂಡಿದ್ದು ಮಾವಿನ ಹಣ್ಣು! ಮಾರನಿಗೆ ಮಾವಿನ
ಹಣ್ಣೆಂದರೆ ಪ್ರಾಣ. ಹಾಗಾಗಿ ಅವನು ಮಾಯ್ನಣ್ ಮಾರ. ಮಾವಿನ ಹಣ್ಣಿನ ಸೀಸನ್ ಬಂದರೆ ಊಟ ಕೊಡದಿದ್ದರೂ ಪರವಾಗಿಲ್ಲ, ಅವನಿಗೆ ಮಾವಿನ ಹಣ್ಣಿನ ವ್ಯವಸ್ಥೆ ಮಾಡಿರ ಬೇಕು. ಅವನ ಮನೆಯಿದ್ದದ್ದು ನಮ್ಮನೆಯ ಒಂದು ಗುಡ್ಡದಾಚೆಯ ಊರಿನಲ್ಲಿ. ಮನೆಯ ಹಿಂದಿನ ಎತ್ತರದ ಗುಡ್ಡ ಹತ್ತಿ
ಅತ್ತ ಕಡೆ ಇಳಿದರೆ ಅವನೂರು. ರಸ್ತೆಯಲ್ಲಿ ಬಂದರೆ ನಾಲ್ಕಾರು ಕಿಲೋಮೀಟರ್ ಆಗಬಹುದು. ಆದರೆ ಗುಡ್ಡದ ಮಾರ್ಗದಲ್ಲಿ ಒಂದೇ ಕಿಲೋಮೀಟರ್. ನಮ್ಮ ಕಡೆ ರಸ್ತೆಗಳು ಕೇವಲ ವಾಹನಕ್ಕೆ. ನಡೆದು ಓಡಾಡುವವರು ಒಂದೋ ತೋಟದ ದಾರಿ ಹಿಡಿಯುತ್ತಾರೆ, ಇಲ್ಲವೇ ಬೆಟ್ಟದ ದಾರಿ.

ಅವು ನಮ್ಮಲ್ಲಿಯ ಷಾರ್ಟ್ ಕಟ್. ಮಾರ ನಿತ್ಯ ಬರುವ ಕಾಡುದಾರಿಯಲ್ಲಿ ಹತ್ತಿಪ್ಪತ್ತು ಮಾವಿನ ಮರಗಳಿದ್ದವು. ಬಲಿತು ಉದುರಿ ಬಿದ್ದ ಅವುಗಳ ಹಣ್ಣುಗಳನ್ನು ಆಯ್ದು ನಮ್ಮನೆಗೆ ತರುತ್ತಿದ್ದ. ಆ ಹಣ್ಣುಗಳಿಂದ ತನಗೆ ಬೇಕಾದ ಅಡುಗೆ ಮಾಡಿ ಹಾಕುವಂತೆ ಅಮ್ಮನಿಗೆ ಹೇಳುತ್ತಿದ್ದ. ಮಾರ ಮನೆಗೆ ಕೆಲಸಕ್ಕೆ ಬಂದನೆಂದರೆ ಆ ದಿನ ಮಾವಿನ ಹಣ್ಣಿನ ರಸಾಯನ, ಗೊಜ್ಜು, ತಂಬುಳಿ ನಮ್ಮ ಮನೆಯ ಅಡುಗೆ. ಊಟವಾದ ಮೇಲೆಯೂ ನಾಲ್ಕು ಮಾವಿನ ಹಣ್ಣು ತಿಂದೇ ಆತ ವಿಶ್ರಮಿಸುತ್ತಿದ್ದುದು. ಮಾರ ಮಾವಿನ ಹಣ್ಣನ್ನು ತಿನ್ನುವುದಕ್ಕೊಂದು ಚಂದವಿತ್ತು.

ಹಣ್ಣಿನ ಅಂಚಲ್ಲಿ ಹಲ್ಲಿನಿಂದ ತೂತು ಮಾಡಿ ಅದರ ರಸವನ್ನು ಹೀರುವುದು. ಒಂದು ಹುಂಡೂ ಕೆಳಕ್ಕೆ ಬೀಳದಂತೆ, ಮೈಕೈಗೆ ತಾಕದಂತೆ. ಅಷ್ಟೇ ಅಲ್ಲ, ಮಾವಿನ ಒರಟೆಯನ್ನು ಸ್ವಚ್ಛವಾಗಿ ತಿನ್ನುತ್ತಿದ್ದ. ವಿಶ್ವೇಶ್ವರ ಭಟ್ಟರ ಸ್ವಚ್ಛ ಬಾಳೆಲೆ ಅಭಿಯಾನದಂತೆ, ಇವನದು ಸ್ವಚ್ಛ ಒರಟೆ ಅಭಿಯಾನ. ಒರಟೆ ತೊಳೆದಿಟ್ಟಷ್ಟು ಸ್ವಚ್ಛವಾಗುತ್ತಿತ್ತು. ಅವನಲ್ಲೊಂದು ವಿಶೇಷವಿತ್ತು. ಈ ಒರಟೆಗಳನ್ನು ಅವನು ಎಲ್ಲೆಂದರಲ್ಲಿ ಎಸೆಯುತ್ತಿರಲಿಲ್ಲ, ಒಂದು ಕಡೆ
ಶೇಖರಿಸಿಟ್ಟುಕೊಳ್ಳುತ್ತಿದ್ದ. ಅಲ್ಲದೆ ಅಡುಗೆ ಮಾಡಿದ ಮಾವಿನ ಹಣ್ಣುಗಳ ಒರಟೆಯನ್ನು ಕೂಡ ಅಮ್ಮನಿಂದ ಕೇಳಿ ಪಡೆಯುತ್ತಿದ್ದ.

ಅದೆಲ್ಲವನ್ನು ತಾನು ತಂದಿದ್ದ ಚೀಲದಲ್ಲಿ ಹಾಕಿಕೊಂಡು ಮನೆಗೆ ಹೊರಡುತ್ತಿದ್ದ. ಅದೇಕೆ ಎಂದು ಪ್ರಶ್ನಿಸಿದರೆ ‘ಔಷಧಕ್ಕೆ, ಒರಟೆಯಿಂದ ಎಣ್ಣೆ ತೆಗೆಯಬಹುದು, ಅದನ್ನು ಬಿರಿಯುವ ಹಿಮ್ಮಡಿಗೆ ಹಚ್ಚಿದರೆ ಕಾಲು ಒಡೆಗೆ ರಾಮಬಾಣ’ ಎನ್ನುತ್ತಿದ್ದ. ನನಗೋ, ಅನುಮಾನ. ಒಂದು ದಿನ ಸಂಶಯ
ಪರಿಹಾರಾರ್ಥಂ ಅವನನ್ನು ಹಿಂಬಾಲಿಸಿದೆ. ಮಾರ ಒಂದಿಷ್ಟು ಮಾರು ಕಾಡುದಾರಿ ಕಳೆದದ್ದೇ ಒಂದೊಂದೇ ಒರಟೆಯನ್ನು ಚೀಲದಿಂದ ತೆಗೆದು ಗಿಡ ಪೊದೆಗಳ ಮಧ್ಯೆ ಎಸೆಯುವುದು ಕಾಣಿಸಿತು. ಒಂದು ಕಿಲೋಮೀಟರ್ ಉದ್ದಕ್ಕೂ ಇವನದು ಇದೇ ಕೆಲಸ. ಅಲ್ಲಲ್ಲಿ ನಿಲ್ಲುವುದು, ಒರಟೆಯನ್ನು ಕಾಡಿನ
ಪೊದೆಗಳೊಳಗೆ ಎಸೆಯುವುದು.

ಮಾರನೇ ದಿನ ಆತನ ಈ ವಿಚಿತ್ರ ನಡವಳಿಕೆಗೆ ಸ್ಪಷ್ಟನೆಯನ್ನು, ಅಂಗಳವೆಂಬ ಕಟಕಟೆಯಲ್ಲಿ ನಿಲ್ಲಿಸಿ ಕೇಳಲಾಯಿತು. ಮಾರ ತಪ್ಪೊಪ್ಪಿಕೊಂಡ. ‘ಏನಿಲ್ಲ ಹೆಗಡೇರೆ, ಒರಟೆ ಎಸೆದರೆ ಮಳೆಗಾಲದಲ್ಲಿ ಮಾವಿನ ಗಿಡಗಳು ಹುಟ್ಟಿಕೊಳ್ಳುತ್ತವೆ. ಅವು ಮರವಾಗಿ ಹಣ್ಣು ಬಿಟ್ಟರೆ ಜೀವಾದಿಗಳು ತಿಂದು ಕೊಳ್ಳುತ್ತವೆ. ಅಷ್ಟೇ ಅಲ್ಲ, ಇದರಿಂದ ಮಂಗಗಳು ಇಲ್ಲಿಯೇ ಬೆಟ್ಟದಲ್ಲಿ ಹೊಟ್ಟೆ ತುಂಬಿಕೊಳ್ಳುವುದರಿಂದ ತೋಟಕ್ಕೆ ನುಗ್ಗಿ ಹಾವಳಿಯೆಬ್ಬಿಸುವುದು ಕಡಿಮೆಯಾಗುತ್ತದೆ’ ಎಂದ. ಒಂದು ಕ್ಷಣ ಅವನ ಈ ಪರಿಸರ ಪ್ರeಯಿಂದ ಅವಾಕ್ಕಾದೆ. ಅವನ ಅಜ್ಜ ಇದೇ ಕೆಲಸ ಮಾಡುತ್ತಿದ್ದನಂತೆ, ತಂದೆಯೂ ಅದನ್ನು ಮುಂದುವರಿಸಿ ಈ ಒರಟೆ ಎಸೆಯುವ ಕಾಯಕ ಪಾರಂಪರಿಕವಾಗಿ ಮಾರನು ನಡೆಸಿಕೊಂಡು ಬಂದಿದ್ದಾನೆ.

ಅವನ ಕುಟುಂಬದ ಪರಿಸರ ಪ್ರೇಮ ಮತ್ತು ಸೂಕ್ಷ್ಮತೆ ಕಂಡು ಬಹಳ ಸಂತೋಷ, ಹೆಮ್ಮೆಯಾಯಿತು. ಮಾರನಿಗೆ ಅವನು ಮಾಡುತ್ತಿದ್ದುದು ಪರಿಸರ ಸಂರಕ್ಷಣೆಯ ಕೆಲಸ ಎಂಬುದರ ಅರಿವಿತ್ತು. ಆದರೆ ಅವನಿಗೆ ಅದೊಂದು ದೊಡ್ಡ ವಿಷಯವೆನಿಸಿರಲಿಲ್ಲ. ಪರಿಸರ ಕಾಳಜಿ ಅವನಲ್ಲಿ ತೀರಾ ಸಹಜವಾಗಿ ಹಾಗೆಯೇ ಇತ್ತು, ಶಾಲೆಯಲ್ಲಿ ಕಲಿತದ್ದಲ್ಲ. ನಾನು ಪ್ರತಿ ಬಾರಿ ಭಾರತಕ್ಕೆ ಬಂದಾಗಲೂ ನಮ್ಮೂರಿನ, ಸುತ್ತಲಿನ ಕಾಡುಗಳಲ್ಲಿ ಸುತ್ತಾಡುವ ಅವಕಾಶ ವನ್ನು ತಪ್ಪಿಸಿ ಕೊಳ್ಳುವುದಿಲ್ಲ.

ಊರು ಬಿಟ್ಟು ಎರಡು ದಶಕವೇ ಕಳೆದರೂ ಮನೆಯ ಸುತ್ತಲಿನ ದಟ್ಟ ಕಾಡಿನಲ್ಲಿ ಅದೆಷ್ಟೋ ಪರಿಚಯದ ಮರಗಳಿವೆ. ಅವುಗಳ ಜತೆಯಾದಾಗ ಸಂವ ಹಿಸುತ್ತವೆ. ಕಾಡಿನ ಕಾಲುದಾರಿಯಲ್ಲಿ ಒಂದು ಹತ್ತು ನಿಮಿಷ ನಡೆದರೆ ಏನಿಲ್ಲವೆಂದರೂ ಒಂದೈವತ್ತು ಬಗೆಯ ಸಸ್ಯವೈವಿಧ್ಯವನ್ನು ಹಾದು ಹೋಗಿಯಾ ಗಿರುತ್ತದೆ. ನಮ್ಮಲ್ಲಿನ ಕಾಡುಗಳಲ್ಲಿ ಸಹಜ ಮಾವಿನ ಮರಗಳು ಸಾಕಷ್ಟಿವೆ. ಸಹಜವೆಂದರೆ ಸ್ವಾಭಾವಿಕವಾಗಿ ಬೆಟ್ಟಗಳಲ್ಲಿ ಹುಟ್ಟಿಕೊಂಡವು ನೂರಾರಿವೆ. ಒಂದೊಂದು ಮಾವಿನ ಮರದ ಜಾತಿ ಒಂದೊಂದು.

ಹಾಗಾಗಿ ಅವನ್ನೆಲ್ಲ ಒಟ್ಟಾಗಿ ಕಾಟು ಮಾವು ಎಂದು ಕರೆಯುವುದು. ಅವುಗಳನ್ನು ಶಾಸ್ತ್ರೀಯವಾಗಿ ವರ್ಗೀಕರಿಸಲಿಕ್ಕೆ ಸಾಧ್ಯವೇ ಇಲ್ಲ- ಅಸಂಖ್ಯ.
ಹಾಗೊಮ್ಮೆ ಆ ಕೆಲಸಕ್ಕೆ ಮುಂದಾದರೆ ಪ್ರತಿಯೊಂದು ಮರಕ್ಕೂ ಅದರದೇ ಆದ ವೈಜ್ಞಾನಿಕ ಉಪನಾಮಗಳನ್ನು ಕೊಡಬೇಕಾಗಬಹುದು. ಕೆಲವು ಮಾವಿನ ಮರಗಳು ಐವತ್ತು ಅಡಿಗಳಷ್ಟು ವಿಸ್ತಾರ ಹರಡಿಕೊಂಡಿದ್ದರೆ, ಇನ್ನು ಕೆಲವು ನೇರ, ಐವತ್ತು ಅಡಿ ಎತ್ತರಕ್ಕೆ ಬೆಳೆದವು. ಕೆಲವೊಂದಕ್ಕೆ ರೆಂಬೆ ಕೊಂಬೆಗಳೇ ತುಂಬಿದ್ದರೆ ಇನ್ನು ಕೆಲವು ತೆಂಗಿನ ಮರಗಳಂತೆ. ಕೆಲವು ಮರಗಳ ಹಣ್ಣು ಸಕ್ಕರೆಯಷ್ಟು ಸಿಹಿಯಾದರೆ ಇನ್ನು ಕೆಲವು ಹುಳಸೆ ಗಿಂತ ಹುಳಿ. ರುಚಿಯಿಲ್ಲದ ಸಪ್ಪೆ ಮಾವಿನ ಹಣ್ಣು ಕೊಡುವ ಮರಗಳೂ ಇವೆ. ಸಿಹಿ, ಹುಳಿಯಲ್ಲಿಯೇ ಪ್ರತ್ಯೇಕತೆ ಇದೆ.

ಒಂದೊಂದು ಮರದ ಹಣ್ಣಿನ ಪರಿಮಳವೂ ಬೇರೆ ಬೇರೆ. ಕೆಲವು ಮಾವಿನ ಮರಗಳಲ್ಲಿ ಕಾಯಿ-ಹಣ್ಣು ಪ್ರತಿ ವರ್ಷ ಬಂದರೆ ಇನ್ನು ಕೆಲವು ದ್ವೈವಾರ್ಷಿಕ. ಒಂದು ವರ್ಷ ೮-೧೦ ಸಾವಿರ ಕಾಯಿ ಬಿಟ್ಟು ಒಳ್ಳೆಯ ಇಳುವರಿಯಾದರೆ, ಇನ್ನೊಂದು ವರ್ಷ ಕೈಲೆಕ್ಕಕ್ಕೆ ಸಿಗುವಷ್ಟು ಮಾತ್ರ ಕಾಯಿಗಳು. ಇನ್ನು ಕೆಲವು ಮಾವಿನ ಮರಗಳ ಹಣ್ಣು ತಿನ್ನಲು ಸಾಧ್ಯವೇ ಇಲ್ಲ. ಅವುಗಳ ಕಾಯಿ ಉಪ್ಪಿನಕಾಯಿಗೆ ಮಾತ್ರ. ಕೆಲವು ಮರಗಳ ಕಾಯಿಯ ಉಪ್ಪಿನಕಾಯಿ ನಾಲ್ಕಾರು ವರ್ಷ ಹಾಳಾಗುವುದಿಲ್ಲ. ಇನ್ನು ಕೆಲವು ಮರದ ಕಾಯಿಯ ಉಪ್ಪಿನ ಕಾಯಿಯಲ್ಲಿ ನೀರಿನಂಶ ಜಾಸ್ತಿ; ಹಾಗಾಗಿ ತಯಾರಿಸಿದ ಉಪ್ಪಿನಕಾಯಿಯನ್ನು ತಿಂಗಳೆರಡರ ಒಳಗೆ ಬಳಸಿಬಿಡಬೇಕು, ಇಲ್ಲದಿದ್ದರೆ ಹಾಳಾಗಿಬಿಡುತ್ತದೆ. ನಿಮಗೆ ಅಪ್ಪೆ ಮಿಡಿ ಗೊತ್ತಿರುತ್ತದೆ.

ಅದು ಉಪ್ಪಿನಕಾಯಿಗೆ ಹೆಸರುವಾಸಿ ಮಾವಿನ ಪ್ರಭೇದ. ಇದು ಕೇವಲ ಉತ್ತರ ಕನ್ನಡ, ಅರೆ ಮಲೆನಾಡಿನಲ್ಲಿ ಮಾತ್ರ ಸಿಗುವ, ಬೆಳೆಯುವ ವಿಶೇಷ ಪ್ರಭೇದ. ನಮಗೆಲ್ಲ ಆಪೂಸ್, ಮಲ್ಲಿಕಾ ಇತ್ಯಾದಿ ಒಂದಿಷ್ಟು ಪ್ರಭೇದದ ಮಾವಿನ ಹಣ್ಣು ಗೊತ್ತಿರುತ್ತದೆ. ನಾನು ಇಲ್ಲಿ ಹೇಳುತ್ತಿರುವುದು ಈ ರೀತಿ ತೋಟಗಳಲ್ಲಿ ಬೆಳೆಯುವ ಮಾವಿನ ಹಣ್ಣಿನ ಬಗ್ಗೆ ಅಲ್ಲ, ಬದಲಿಗೆ ಪಶ್ಚಿಮ ಘಟ್ಟದ ಅಸಂಖ್ಯ ಮಾವಿನ ಪ್ರಭೇದಗಳ ಬಗ್ಗೆ. ಅವುಗಳ ವೈವಿಧ್ಯಗಳ ಬಗ್ಗೆ.
ಅದರ ವಿಶೇಷತೆಯ ಕುರಿತು ನಮಗಿರುವ ಅಲ್ಪಜ್ಞಾನದ ಬಗ್ಗೆ. ಅಪ್ಪೆ ಮಿಡಿ ಮಾವಿನಕಾಯಿ ಎಂದೆನಲ್ಲ, ಅದರಲ್ಲಿಯೇ ನೂರೆಂಟು ಬಗೆ ಇದೆ. ಜೀರಿಗೆ ಪರಿಮಳದ್ದು, ಅರಿಸಿನ ಪರಿಮಳದ್ದು ಹೀಗೆ ಬೇರೆ ಬೇರೆ ಸ್ವಾದದ ಅಪ್ಪೆಮಿಡಿಗಳಿವೆ.

ಒಂದನ್ನು ತಿಂದರೆ ನಿದ್ರೆ ಬರುತ್ತದೆ, ಇನ್ನೊಂದನ್ನು ತಿಂದರೆ ದೇಹ ಜಾಗೃತವಾಗುತ್ತದೆ. ಇವುಗಳ ಸೋನೆ ಕೂಡ ಪರಿಮಳ. ಮಾವಿನ ಕಾಯಿಯನ್ನು ಕೊಯ್ಯುವಾಗ ಅದರ ಚೊಟ್ಟಿನಲ್ಲಿರುವ ಹೀಣನ್ನು ಶೇಖರಿಸಿಟ್ಟು ಬಳಸುವುದಿದೆ. ಶುದ್ಧ ಅಪ್ಪೆಮಿಡಿಯ ಹೀಣಿಗೆ ಬೆಂಕಿ ಹತ್ತಿಸಬಹುದು. ಅಷ್ಟು
ಆಸಿಡಿಕ್ ಅದು. ಇನ್ನು ಕೆಲವು ವಿಚಿತ್ರ ಗುಣವಿರುವ ಮಾವಿನ ಹಣ್ಣುಗಳಿವೆ. ನಮ್ಮ ಮನೆಯ ಬಳಿ ಒಂದು ಮಾವಿನ ಹಣ್ಣಿನ ರುಚಿ ಮಾವಿನದು, ಪರಿಮಳ ಏಲಕ್ಕಿಯದು. ಹಲಸಿನ ಹಣ್ಣಿನ ಪರಿಮಳ, ದಾಲ್ಚಿನ್ನಿ, ಮಲ್ಲಿಗೆ ಹೀಗೆ ನಾನಾ ರೀತಿಯ ವಾಸನೆಯ ವಿಶೇಷ ಮಾವಿನ ಕಾಯಿ ಬಿಡುವ ಮರಗಳು
ನಮ್ಮ ಊರಿನಲ್ಲಿಯೇ ಇವೆ.

ನನ್ನದು ಪಶ್ಚಿಮ ಘಟ್ಟದ ತಪ್ಪಲಿನ, ಕರಾವಳಿಯಂಚಿನ ಚಿಕ್ಕ ಊರು. ಆ ಚಿಕ್ಕ ಊರಿನ ಸುತ್ತಮುತ್ತಲೇ ಇಷ್ಟು ವೈವಿಧ್ಯದ ಮಾವು ಇರುವಾಗ ಘಟ್ಟದ ಬೆಟ್ಟದಲ್ಲಿ ಇನ್ನೆಷ್ಟು ವಿವಿಧತೆಯ ಮಾವು ಇರಬಹುದು? ಸರಕಾರಿ ಲೆಕ್ಕ ಐಇಅ ಪ್ರಕಾರ ಸುಮಾರು ೨೦೫ ಮಾವಿನ ವೈವಿಧ್ಯವನ್ನು ಪಶ್ಚಿಮ ಘಟ್ಟದಲ್ಲಿ
ಗುರುತಿಸಿ ಪಟ್ಟಿ ಮಾಡಲಾಗಿದೆ. ಆದರೆ ಅದು ಪೂರ್ಣಲೆಕ್ಕ ಎನ್ನುವುದು ಕಷ್ಟ. ಏಕೆಂದರೆ ಇನ್ನೊಂದು ಲೆಕ್ಕಾಚಾರದ ಪ್ರಕಾರ, ಪ್ರಪಂಚದಲ್ಲಿ ಸುಮಾರು ಒಂದು ಸಾವಿರದಷ್ಟು ಮಾವಿನ ಪ್ರಭೇದಗಳಿವೆ. ಅವುಗಳಲ್ಲಿ ಶೇ.೭೫ರಷ್ಟು ಕರ್ನಾಟಕ ಮತ್ತು ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಇವೆ ಎಂಬುದು
ನ್ಯಾಷನಲ್ ಜಿಯೋಗ್ರಾಫಿ ಸಂಸ್ಥೆಯ ಲೆಕ್ಕ. ಅದೇನೇ ಇರಲಿ, ೨೦೫ ಕೂಡ ಚಿಕ್ಕ ಸಂಖ್ಯೆಯಲ್ಲ.

ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಹಾರ್ಟಿಕಲ್ಚರ್ ರಿಸರ್ಚ್ ಸಂಸ್ಥೆಯ ವರದಿಯೊಂದನ್ನು ನೋಡುತ್ತಿದ್ದೆ. ಅವರು ಅಪ್ಪೆ ಮಾವಿನಲ್ಲಿಯೇ ಸುಮಾರು ೩೫ ವಿವಿಧ ಪ್ರಭೇದಗಳನ್ನು ಗುರುತಿಸಿ ಪಟ್ಟಿ ಮಾಡಿದ್ದಾರೆ. ಕೆಲವು ಫೇಮಸ್ ಮಾವಿನ ಹಣ್ಣಿನ ಪ್ರಭೇದಗಳನ್ನು ಬಿಟ್ಟರೆ ಉಳಿದ ಮಾವಿನ ಗಿಡಗಳನ್ನು ಬೆಳೆಸುವುದು ಸುಲಭದ ಕೆಲಸ ವಲ್ಲ. ಒಂದೊಳ್ಳೆ ಸಿಹಿಯಾದ ಮಾವಿನ ಕಾಯಿಯ ಒರಟೆಯನ್ನು ಕಾಡಿನಿಂದ ತಂದು ನೆಟ್ಟರೆ ಅದಕ್ಕೆ ಕಾಯಿ ಬಿಡುತ್ತದೆ
ಎಂಬ ಖಚಿತತೆ ಇಲ್ಲ. ಅಷ್ಟೇ ಅಲ್ಲ, ಸಿಹಿ ಹಣ್ಣಿನ ಒರಟೆಯಿಂದ ಹುಟ್ಟಿದ ಮಾವಿನ ಗಿಡದ ಹಣ್ಣು ಕೆಟ್ಟ ಹುಳಿಯಾಗಿರಬಹುದು.

ಒಳ್ಳೆಯ ಪರಿಮಳದ ಅಪ್ಪೆ ಮಿಡಿಯ ಸಸಿ ನೆಟ್ಟರೆ ಅದರ ಕಾಯಿ ಅದ್ಯಾವ ಗುಣವಿಶೇಷವನ್ನೂ ಹೊಂದದೆ ಇರಬಹುದು. ಈ ಮಾವಿನ ಪ್ರಭೇದಗಳು ಇಷ್ಟಾಗಿ ಇರುವ ಜಾಗ ದಲ್ಲಿ ಅಡ್ಡ ಪರಾಗಸ್ಪರ್ಶ ಸಾಮಾನ್ಯ. ಇದರಿಂದಾಗಿ ಹುಟ್ಟುವ ಗಿಡಗಳು ಬೇರೆಯದೇ ಗುಣವನ್ನು ಹೊಂದಿರುವ ಸಾಧ್ಯತೆ
ಅತಿ ಹೆಚ್ಚು. ಕಾಯಿ-ಹಣ್ಣಿನ ವೈವಿಧ್ಯಕ್ಕೆ ಇದು ಒಂದು ಕಾರಣವಾದರೆ ಮಣ್ಣು ಮತ್ತು ವಾತಾವರಣ ಕೂಡ ಫಲದ ರುಚಿಯನ್ನು ನಿರ್ಧರಿಸುತ್ತವೆ. ಇಲ್ಲಿ ತೀರಾ ವೈಜ್ಞಾನಿಕ ವಿವರಣೆ ಬೇಡ. ಒಟ್ಟಾರೆ ಮಾವಿನ ಹಣ್ಣಿನ ರುಚಿಗೆ ಮತ್ತು ಮಣ್ಣಿಗೆ, ಆ ಮರವಿರುವ ವಾತಾವರಣಕ್ಕೆ, ಅಲ್ಲಾಗುವ ಮಳೆಯ ಪ್ರಮಾಣಕ್ಕೆ ನೇರ ಸಂಬಂಧವಿದೆ. ಹಾಗಾಗಿ ಪಶ್ಚಿಮ ಘಟ್ಟದ ಯಾವುದೋ ಒಂದೊಳ್ಳೆ ಮಾವಿನ ಹಣ್ಣನ್ನು ಇನ್ನೆಲ್ಲಿಯೋ ಒಯ್ದು ನೆಟ್ಟರೆ ಅದು ಅದೇ ರುಚಿಯ ಹಣ್ಣನ್ನು ಕೊಡುವುದು ಸಾಮಾನ್ಯವಾಗಿ ಅಸಂಭವ.

ನೀವು ಬಹುತೇಕ ಹಣ್ಣುಗಳನ್ನು ನೋಡಿ. ಅವುಗಳ ರುಚಿ, ಬಣ್ಣ, ಗಾತ್ರಗಳಲ್ಲಿನ ವ್ಯತ್ಯಾಸವು ಅವು ಬೆಳೆಯುವ ಸ್ಥಳದಿಂದಾಗಿ ನಿರ್ಧರಿತವಾಗುತ್ತದೆ. ಆದರೆ ಮಾವಿನ ಮಟ್ಟಿಗೆ ಅವೆಷ್ಟು ಸೂಕ್ಷ್ಮವೆಂದರೆ ತಾಯಿ ಗಿಡದ ಕೂಗಳತೆ ದೂರದಲ್ಲಿಯೇ ನೆಟ್ಟರೂ ಅದು ವಿಭಿನ್ನ ತಳಿಯ ಮಾವಿನ ಗಿಡವಾಗಿ ಬೆಳೆಯಬಹುದು. ಅದರ ಕಾಂಡ, ಎಲೆಯ ಗಾತ್ರ ವಿಭಿನ್ನವಾಗಿರಬಹುದು. ಹಣ್ಣುಗಳಲ್ಲಿ ಇಷ್ಟೊಂದು ವೈವಿಧ್ಯವಾಗಿರುವ ಹಣ್ಣುಗಳು ಕಡಿಮೆ. ಜಗತ್ತಿನಲ್ಲಿ ಸುಮಾರು ೭೫೦೦ ವೈವಿಧ್ಯದ ಸೇಬನ್ನು ಬೆಳೆಸಲಾಗುತ್ತದೆಯಂತೆ. ಆದರೆ ಅವುಗಳಲ್ಲಿ ಬಹತೇಕ ಮಾನವ ನಿರ್ಮಿತ ತಳಿಗಳು. ಹೊಸ ಸೇಬಿನ ತಳಿಯನ್ನು ನಿರಂತರ ಪ್ರಯೋಗ ಮಾಡಿ ಅಭಿವೃದ್ಧಿಪಡಿಸಲಾಗುತ್ತದೆ.

ಆದರೆ ಪಶ್ಚಿಮ ಘಟ್ಟದ ಮಾವು ಹಾಗಲ್ಲ. ಇಲ್ಲಿ ಈ ಸಸ್ಯ ಸಹಜವಾಗಿಯೇ ಸಹಸ್ರ ವೈವಿಧ್ಯವನ್ನು ಹೊಂದಿದೆ. ಇದು ತೀರಾ ಅಪರೂಪ ಮತ್ತು ವಿಶೇಷ.
ಭಾರತದಿಂದ ಹೇರಳ ಪ್ರಮಾಣದಲ್ಲಿ ಮಾವಿನ ಹಣ್ಣು ರಫ್ತಾಗುತ್ತದೆ. ಅವು ಹೆಚ್ಚಾಗಿ ಗುಜರಾತ್, ಆಂಧ್ರಪ್ರದೇಶ, ಕರ್ನಾಟಕದಲ್ಲಿ ಬೆಳೆದ ಹಣ್ಣುಗಳು. ಆದರೆ ಪ್ರಮಾಣದ ಲೆಕ್ಕದಲ್ಲಿ ಇದು ತೀರಾ ಚಿಕ್ಕ ವಹಿವಾಟು. ಕೇವಲ ೪೦೦ ಕೋಟಿ ರುಪಾಯಿ ಮೌಲ್ಯದ ಮಾವಿನ ಹಣ್ಣನ್ನು ನಾವು ರಫ್ತು ಮಾಡು ವುದು. ಇವುಗಳಲ್ಲಿ ಕೇಸರ್, ಅಲಾನ್ಸೋ ಹೀಗೆ ಕೆಲವೇ ಜಾತಿಯ ಹಣ್ಣನ್ನು ತೋಟದಲ್ಲಿ ಬೆಳೆಯುವುದು. ಉಳಿದ ಅದೆಷ್ಟೋ ಮಾವಿನ ಪ್ರಭೇದಗಳು ಅದನ್ನು ಬೆಳೆಸಲಿರುವ ಸವಾಲುಗಳಿಂದಾಗಿ ತೋಟದ ಗಿಡಗಳಾಗಿಲ್ಲ.

ಈ ಹೆಸರಿಲ್ಲದ ಮಾವುಗಳ ತಳಿಯನ್ನು ಅಭಿವೃದ್ಧಿಪಡಿಸುವುದು ಕಷ್ಟದ ಕೆಲಸ ಹೌದು. ಏಕೆಂದರೆ ಈಗಾಗಲೇ ಹೇಳಿದಂತೆ ಗಿಡದ ಆನುವಂಶಿಕತೆಯ ಜತೆ ವಾತಾವರಣ, ಮಣ್ಣಿನ ಗುಣಗಳು ಕೂಡಿ ಬರಬೇಕಲ್ಲ. ಆದರೆ ಈ ೨೦೫ ಪ್ರಭೇದಗಳಲ್ಲಿ ಕೆಲವೊಂದಿಷ್ಟಾದರೂ ತಳಿ ಅಭಿವೃದ್ಧಿ ಸಾಧ್ಯ. ಸಹಜವಾಗಿರುವ
ಈ ಮಾವಿನ ತಳಿಗಳು ಹತ್ತಿಪ್ಪತ್ತು ವರ್ಷ ಕಾಯಿ ಬಿಡುವುದಿಲ್ಲ. ಹಾಗಾಗಿ ಅವುಗಳನ್ನು ಬೆಳೆಸುವುದೆಂದರೆ ಕಾಯುವುದು. ಆರ್ಥಿಕವಾಗಿ ಇದು ಫಲಕಾರಿ, ಕೃಷಿ ಸಾಧ್ಯ ಅಲ್ಲ. ಆದರೆ ಈ ತಳಿಗಳಲ್ಲಿ ಕೆಲವೊಂದಿಷ್ಟನ್ನು ಕಸಿ ಮಾಡುವುದರ ಮೂಲಕ, ಮಣ್ಣಿನ ಪರೀಕ್ಷೆ ಮಾಡಿ ಕೃಷಿಗೆ ಜಾಗ ಆಯ್ಕೆ ಮಾಡಿ
ಕೊಳ್ಳುವುದರ ಮೂಲಕ- ಒಟ್ಟಾರೆ ವೈಜ್ಞಾನಿಕವಾಗಿ ಅಭ್ಯಸಿಸಿ ನಂತರ ಬೆಳೆಯುವುದು ಸಾಧ್ಯವಿದೆ.

ಆ ನಿಟ್ಟಿನಲ್ಲಿ ಕೃಷಿ ಅಭಿವೃದ್ಧಿ ಇಲಾಖೆ ಕೆಲಸವನ್ನು ಮಾಡುತ್ತಿಲ್ಲವೆಂದಲ್ಲ. ಅದೆಷ್ಟೋ ತಳಿಗಳು ಅಭಿವೃದ್ಧಿಯಾಗಿವೆ. ಆದರೆ ಆ ತಳಿಗಳಿಗೆ ಸೂಕ್ತವಾದ ಮಾರುಕಟ್ಟೆ, ಅದನ್ನು ದೇಶವಿದೇಶಕ್ಕೆ ರಫ್ತು ಮಾಡುವ ವ್ಯವಸ್ಥೆ ಅಷ್ಟು ಸಮರ್ಥವಾಗಿ ಇಲ್ಲವಾಗಿದೆ. ಅದರಲ್ಲಿಯೂ ಕರ್ನಾಟಕದ ಅರೆಮಲೆನಾಡು ಮತ್ತು ಕರಾವಳಿಯಲ್ಲಿ ಮಾವನ್ನು ಒಂದು ಬೆಳೆ ಎಂದು ಪರಿಗಣಿಸುವ ಪರಿಸ್ಥಿತಿಯೇ ಇಲ್ಲ. ಇನ್ನು ಈ ಭಾಗದ ಕೃಷಿಕರನ್ನು ಹುರಿದುಂಬಿಸುವ ಕೆಲಸವೂ ಅಷ್ಟಕ್ಕಷ್ಟೇ. ಇಷ್ಟು ವೈವಿಧ್ಯವುಳ್ಳ ಪಶ್ಚಿಮ ಘಟ್ಟದಲ್ಲಿ ಇಂದು ಮಾವಿನ ಬೆಳೆಯ ಪ್ರಮಾಣವು ಅಡಕೆಗೆ ಹೋಲಿಸಿದರೆ ಏನೂ ಅಲ್ಲ. ತಳಿಯನ್ನು ಅಲ್ಲಲ್ಲಿ ಒಬ್ಬೊಬ್ಬರು ಶ್ರದ್ಧೆಯಿಂದ ನರ್ಸರಿಯಲ್ಲಿ ಮಾಡುತ್ತಿದ್ದಾರೆ.

ಆದರೆ ಆ ಪ್ರಭೇದಗಳು ಕೇವಲ ಹವ್ಯಾಸಕ್ಕೆ, ಮನೆಗೊಂದರಂತೆ ನೆಡುವುದೇ ಜಾಸ್ತಿ. ಯಾವುದೂ ತೋಟವಾಗುವುದಿಲ್ಲ. ಒಟ್ಟಾರೆ ಇಲ್ಲಿರುವ ಆರ್ಥಿಕ ಅವಕಾಶವನ್ನು ನಾವು ಬಳಸಿ ಕೊಳ್ಳಲು ಬೇಕಾದ ವ್ಯವಸ್ಥೆಯಿಲ್ಲ. ಹಾಗಾಗಿ ಸಹಜ ಯೋಗ್ಯವಾದ ವಾತಾವರಣವಿದ್ದರೂ ಅಲ್ಲಿ ಇದು ಬೆಳೆಯಾಗಿ
ಬೆಳೆದಿಲ್ಲ. ಈಗ ನಮ್ಮೂರ ಕಾಡಿನಲ್ಲಿ ಅದೇ ಹಳೆಯ, ಎತ್ತೆತ್ತರದ ಮಾವಿನ ಮರಗಳಿವೆ. ಆದರೆ ಅಲ್ಲೆಲ್ಲಿಯೂ ಹೊಸ ಮಾವಿನ ಗಿಡಗಳು ಕಾಣಿಸುವುದಿಲ್ಲ. ಈಗ ಅಲ್ಲೆಲ್ಲಾ ಅಕೇಶಿಯಾ ಗಿಡಗಳೇ ತುಂಬಿಬಿಟ್ಟಿವೆ. ಅಕೇಶಿಯಾ ಹಾವಳಿ ಎಷ್ಟೆಂದರೆ ಅದು ಮಾವು ಬಿಡಿ, ಇನ್ಯಾವುದೇ ಸ್ಥಳೀಯ ಗಿಡಗಳನ್ನು
ಬೆಳೆಯಲಿಕ್ಕೂ ಬಿಡುತ್ತಿಲ್ಲ. ಇದರಿಂದ ಸದ್ದಿಲ್ಲದೆ ಅದೆಷ್ಟೋ ಸಸ್ಯ ಪ್ರಭೇದಗಳ ಜತೆ ಮಾವಿನ ತಳಿಗಳು ಕ್ರಮೇಣ ಮರೆಯಾಗುತ್ತಿವೆ.

ಅಷ್ಟೇ ಅಲ್ಲ, ಮಾವಿನ ಇಳುವರಿ ವರ್ಷ ಕಳೆದಂತೆ ಕ್ಷೀಣಿಸುತ್ತಿದೆ. ಅದಕ್ಕೆ ಗಣನೀಯವಾಗಿ ಮರೆಯಾಗುತ್ತಿರುವ ಕೀಟ ಪ್ರಭೇದಗಳೇ ಕಾರಣ. ಅಲ್ಲದೆ ಮಾವಿನ ಹೂವು ಬಿಟ್ಟಾಗ ಅಕಾಲ ಮಳೆಯಾದರೆ ಹೂವು ಉದುರಿ ಆ ವರ್ಷ ಕಾಯಿ ಬಿಡುವುದೇ ಇಲ್ಲ. ಇದು ಪರಿಸರ ಮಾಲಿನ್ಯ, ವ್ಯತ್ಯಯದ ಪರಿಣಾಮ. ಇದೆಲ್ಲ ಕಾಣುವಾಗ ಮಾರ ಮತ್ತೆ ನೆನಪಾಗುತ್ತಾನೆ. ಆತನಲ್ಲಿರುವ ಪರಿಸರ ಸೂಕ್ಷ್ಮ ಪ್ರಜ್ಞೆ ನಮ್ಮನ್ನಾಳುವವರಿಗೆ ಇಲ್ಲವಲ್ಲ ಎಂದು ವ್ಯಥೆಯಾಗುತ್ತದೆ. ಒಟ್ಟಾರೆ ಪಶ್ಚಿಮ ಘಟ್ಟದ ಮಾವಿನದು ಅರಣ್ಯರೋದನ. ಕೇಳಲಿಕ್ಕೆ ಯಾರಿಗಿದೆ ವ್ಯವಧಾನ?