Monday, 4th November 2024

ಮಂಕುತಿಮ್ಮನ ಕಗ್ಗ ಮತ್ತು ಧರ್ಮ

ಅವಲೋಕನ

ವಿಶ್ವನಾಥ್ ಎನ್‌.ನೇರಳಕಟ್ಟೆ

ಶ್ರೀಯುತ ಡಿ.ವಿ.ಗುಂಡಪ್ಪನವರಿಂದ ರಚಿತವಾದ ‘ಮಂಕುತಿಮ್ಮನ ಕಗ್ಗ’ ಕೃತಿಯು ಸಾರ್ವತ್ರಿಕವಾದ – ಸಾರ್ವಕಾಲಿಕವಾದ ಹಲವು ವಿಚಾರಧಾರೆಗಳನ್ನು ಒಳಗೊಂಡಿದೆ. ಈ ಕೃತಿಯು ಡಿ.ವಿ.ಜಿ.ಯವರ ಜೀವನಾನುಭವ ಹಾಗೂ ಬಹುಮುಖೀ ನೆಲೆಯ
ಅಧ್ಯಯನಗಳ ಸಮ್ಮಿಶ್ರಣವಾಗಿದೆ.

ಸಮಾಜದ ದೋಷಗಳನ್ನು ಸರಿಪಡಿಸಲು ನೆರವಾಗಬಲ್ಲ ಮಾರ್ಗದರ್ಶಕ ಗ್ರಂಥವಾಗಿ ಇದು ಪ್ರಾಮುಖ್ಯತೆಯನ್ನು ಪಡೆದು ಕೊಂಡಿದೆ. ಇಂಥ ಕೃತಿಯು ‘ಧರ್ಮ’ವನ್ನು ಪರಿಭಾವಿಸಿಕೊಂಡ ಬಗೆಯನ್ನು ಗಮನಿಸಿಕೊಳ್ಳುವುದು ಪ್ರಸ್ತುತ ಸಂದರ್ಭಕ್ಕೆ
ಸೂಕ್ತವಾಗಿದೆ. ಪ್ರಪಂಚ ಕಂಡ ಹಲವಾರು ಚಿಂತಕರು ಧರ್ಮವನ್ನು ಹಲವು ಆಯಾಮಗಳಲ್ಲಿ ವ್ಯಾಖ್ಯಾನಿಸಿದ್ದಾರೆ.

ಧರ್ಮ ಎನ್ನುವುದು ಒಂದು ಅಫೀಮು ಇದ್ದಂತೆ ಎನ್ನುವ ಕಾರ್ಲ್‌ಮಾರ್ಕ್ಸ್ ಸಮಾಜದ ಉನ್ನತಿಗಾಗಿ ಧರ್ಮದ ಅಸ್ತಿತ್ವವನ್ನೇ ನಿರಾಕರಿಸಿದ್ದಾರೆ. ಗಾಂಧೀಜಿ, ಬುದ್ಧ, ಅಂಬೇಡ್ಕರ್ ಮೊದಲಾದವರು ಧರ್ಮವನ್ನು ಮಾನವೀಯತೆಯ ಜೊತೆಗೆ ಸಮೀಕರಿಸಿದ್ದಾರೆ. ಧರ್ಮದ ಪರಿಕಲ್ಪನೆಯು ಕಾಲದ ಅಗತ್ಯ – ಅನಿವಾರ್ಯತೆಗಳಿಗೆ ತಕ್ಕಂತೆ ಮರುವ್ಯಾಖ್ಯಾನಗೊಳ್ಳುತ್ತಲೇ ಬಂದಿದೆ. ಅತ್ಯಂತ ಆಧುನಿಕವೆಂದು ಗುರುತಿಸಲ್ಪಡುವ 21ನೇ ಶತಮಾನದಲ್ಲಿಯೂ ಕೂಡಾ ಧರ್ಮವು ಸಮಾಜವನ್ನು
ಪ್ರಭಾವಿಸುತ್ತಿದೆ.

ಜತೆಗೆ ವ್ಯಕ್ತಿಗತವಾದ ಪರಿಣಾಮಗಳನ್ನೂ ಉಂಟುಮಾಡುತ್ತಿದೆ. ಧರ್ಮವನ್ನು ಋಣಾತ್ಮಕವಾಗಿ ಗ್ರಹಿಸಿಕೊಂಡ ಸಮುದಾಯ ಗಳು ಸಮಾಜವಿರೋಧಿ ಶಕ್ತಿಗಳಾಗಿ ರೂಪುಗೊಂಡಿವೆ. ಇಂಥ ಸಂದರ್ಭದಲ್ಲಿ ಧರ್ಮವನ್ನು ಪುನರ್ ವಿಮರ್ಶೆಗೆ ಒಳಪಡಿಸ ಬೇಕಾಗಿದೆ. ಧರ್ಮದ ಸ್ವರೂಪವನ್ನು ನಿರ್ದಿಷ್ಟಪಡಿಸಿಕೊಳ್ಳಬೇಕಾಗಿದೆ. ಈ ಮೂಲಕ ಜಗತ್ತಿಗೆ ಹಿತಕಾರಿಯಾಗುವ ಧಾರ್ಮಿಕತೆ ಯನ್ನು ರೂಢಿಸಿಕೊಳ್ಳಬೇಕಾದದ್ದು ಇಂದಿನ ಕಾಲಘಟ್ಟದ ತುರ್ತಾಗಿದೆ.

ಈ ಪ್ರಕ್ರಿಯೆಯಲ್ಲಿ ಮಂಕುತಿಮ್ಮನ ಕಗ್ಗವು ಪ್ರಮುಖವಾದ ದಿಗ್ಸೂಚಿ ಗ್ರಂಥವಾಗಿದೆ. 945 ಕಗ್ಗಗಳನ್ನು ಈ ಗ್ರಂಥವು
ಒಳಗೊಂಡಿದ್ದು, ಅವುಗಳಲ್ಲಿ 26 ಕಗ್ಗಗಳು ಧರ್ಮದ ಕುರಿತಾದ ಗ್ರಹಿಕೆಗಳನ್ನು ಒದಗಿಸಿಕೊಡುತ್ತವೆ. ‘ಇಳೆಯ ಬಿಟ್ಟಿನ್ನು ಮೆತ್ತಲುಮೈದದ…’ ಎನ್ನುವ ಕಗ್ಗದಲ್ಲಿ ಧರ್ಮದ ಕುರಿತಾದ ದ್ವಂದ್ವ ಮನೋಭಾವ ವ್ಯಕ್ತಗೊಂಡಿದೆ. ಅನ್ಯದೇಶದವರ ಆಕ್ರಮಣಕ್ಕೆ ಒಳಗಾದ ಭಾರತವು ಅನ್ಯಧರ್ಮದ ನಂಬಿಕೆ – ಆಚರಣೆಗಳನ್ನು ಅಳವಡಿಸಿಕೊಂಡಿತು.

ಪಾಶ್ಚಾತ್ಯ ಸಂಸ್ಕೃತಿಯು ದೇಶವನ್ನು ಪ್ರಭಾವಿಸತೊಡಗಿತು. ಅನ್ಯ ಸಂಸ್ಕೃತಿಯನ್ನು ಸಂಪೂರ್ಣವಾಗಿ ಸ್ವೀಕರಿಸಲಾರದೇ, ಮೂಲ ಸಂಸ್ಕೃತಿ ಯನ್ನು ನಿರಾಕರಿಸಲಾಗದೇ ಇರುವ ಕಾರಣದಿಂದಾಗಿ ರೂಪುಗೊಂಡ ಅತಂತ್ರ ಸನ್ನಿವೇಶದ ವಿವರಣೆಯನ್ನು ಈ ಕಗ್ಗ ಒಳಗೊಂಡಿದೆ. ಪುರಾತನ ಧರ್ಮವನ್ನು ನಿರಾಕರಿಸಿದ ಭಾರತೀಯ ಸಮಾಜವು ಹೊಸ ಧರ್ಮವನ್ನು ಒಪ್ಪಿಕೊಳ್ಳಲಾಗದೆ ಧಾರ್ಮಿಕ ಅತಂತ್ರತೆಗೆ ಒಳಗಾದುದನ್ನು ಹೇಳಲಾಗಿದೆ.

‘ವಕ್ರಋಜುಶ್ರ ಜಗವದರ ಶೋಧನೆ…’ ಕಗ್ಗದಲ್ಲಿ ಧರ್ಮದ ವ್ಯಾಖ್ಯಾನ ಕಂಡುಬರುತ್ತದೆ. ಒಳಿತು- ಕೆಡುಕುಗಳ ಮಿಶ್ರಣವಾಗಿರುವ ಜಗತ್ತನ್ನು ಶೋಧಿಸುವುದೇ ಧರ್ಮ. ಸಂಸ್ಕಾರ ರಹಿತವಾದ ಯೋಚನೆಗಳನ್ನು ಹೋಗಲಾಡಿಸಿ, ಸುವ್ಯವಸ್ಥೆಯನ್ನು ನಿರ್ಮಾಣ ಗೊಳಿಸುವ ಧರ್ಮವು ಸತ್ಯದ ಅರಿವನ್ನು ಮೂಡಿಸಿ, ಮನುಷ್ಯ ಸಮಾಜದಲ್ಲಿ ಜಾಗೃತಿಯನ್ನು ಉಂಟುಮಾಡುತ್ತದೆ ಎಂಬ ಅಭಿಪ್ರಾಯ ಕಗ್ಗದಲ್ಲಿದೆ. ಈ ಕಗ್ಗದಲ್ಲಿ, ವ್ಯಕ್ತಿತ್ವವನ್ನು ಪರಿಪೂರ್ಣಗೊಳಿಸುವ ಮೂಲಕ ಸಮಾಜವನ್ನು ಶುದ್ಧೀಕರಿಸುವ ನೆಲೆಯಲ್ಲಿ ಧರ್ಮವನ್ನು ಪರಿಕಲ್ಪಿಸಿಕೊಳ್ಳ ಲಾಗಿದೆ.

ಧರ್ಮವನ್ನು ‘ಸ್ವಭಾವ’ ಎನ್ನುವ ಅರ್ಥದಲ್ಲಿ ಪರಿಭಾವಿಸಿಕೊಳ್ಳುವ ‘ಬೀಳುವುದ ನಿಲ್ಲಿಪುದು, ಬಿದ್ದುದನು ಕಟ್ಟುವುದು…’ ಕಗ್ಗವು ಮನುಷ್ಯ ಬದುಕಿನ ಹೊಣೆಗಾರಿಕೆಯನ್ನು ಮನಗಾಣಿಸುತ್ತದೆ. ಬೀಳುವುದನ್ನು ನಿಲ್ಲಿಸುವುದು, ಬಿದ್ದು ಹೋಗಿರುವುದನ್ನು ಕಟ್ಟುವುದು, ಒಡೆದ ಹಾಲನ್ನು ಮೊಸರಾಗಿಸುವುದು – ಮೊದಲಾಗಿ ವಿವರಣೆಯನ್ನೊದಗಿಸುವ ಕಗ್ಗವು ನಾಶದೆಡೆಗೆ ಸಾಗುತ್ತಿರುವ
ಸಮಾಜವನ್ನು ಅನಾಶಿಯಾಗಿಸುವ ಕಾಣ್ಕೆಯನ್ನು ಒದಗಿಸಿಕೊಡುತ್ತದೆ.

ಮುರಿದುದನ್ನು ಕಟ್ಟುವ, ಹಳತನ್ನು ನವೀನ ಶೈಲಿಯಲ್ಲಿ ರೂಪಿಸಿಕೊಳ್ಳುವ ಜೀವನ ವಿಧಾನವನ್ನೇ ಮನುಷ್ಯ ಧರ್ಮವಾಗಿ ಕಾಣಲಾಗಿದೆ. ಕಗ್ಗದ ಕೊನೆಯಲ್ಲಿ ಡಿ.ವಿ.ಜಿ.ಯವರು ಇಂಥ ಮನುಷ್ಯ ಧರ್ಮವನ್ನು ಚಿರಧರ್ಮ ಎಂದು ಕರೆದಿದ್ದಾರೆ. ವ್ಯಕ್ತಿಯ ಬದುಕಿನ ಉನ್ನತಿಯಲ್ಲಿ ಧರ್ಮದ ಅಸ್ತಿತ್ವವನ್ನು ಕಾಣುವ ಪ್ರಯತ್ನ ಈ ಕಗ್ಗದ ಮೂಲಕ ಸಾಕಾರಗೊಂಡಿದೆ.

‘ಅಂದಂದಿಗಾದನಿತು ಬುಡ ಕಟ್ಟಿ ಕಳೆ ತೆಗೆದು…’ ಕಗ್ಗವು ಸಾಂಕೇತಿಕತೆಯ ಮೂಲಕ ಧರ್ಮದ ಸ್ವರೂಪವನ್ನು ತಿಳಿಸಿಕೊಡುತ್ತದೆ. ಧರ್ಮವು ಜಗತ್ತಿಗೆ ಪೂರಕವಾಗಿರಬೇಕು ಎಂಬ ಭಾವನೆ ಕಗ್ಗದಲ್ಲಿ ಸ್ಪಷ್ಟವಾಗಿ ವ್ಯಕ್ತಗೊಂಡಿದೆ. ಸಸಿಯೊಂದು ಬೃಹತ್ ವೃಕ್ಷವಾಗಿ ರೂಪುಗೊಳ್ಳುವ ರೂಪಕತೆಯನ್ನು ಜಗತ್ತು ಹಾಗೂ ಧರ್ಮದ ನಡುವಿನ ಅಂತರ್‌ಸಂಬಂಧಕ್ಕೆ ಪೂರಕವಾಗಿ ಅನ್ವಯಿಸಿಕೊಳ್ಳ ಲಾಗಿದೆ.

ಸಮಾಜದ ಮೂಲವನ್ನು ಬಲಪಡಿಸಿ, ಕೆಟ್ಟ ವಿಚಾರಗಳನ್ನು ಹೋಗಲಾಡಿಸಿ, ಬೆಳೆವಣಿಗೆಗೆ ಕಾರಣವಾಗಬಲ್ಲ ಸಂಗತಿಗಳನ್ನು ಕಾಲಕಾಲಕ್ಕೆ ತಕ್ಕಂತೆ ಧರ್ಮವು ಒದಗಿಸಿಕೊಡುತ್ತಿರುವ ರೀತಿಯನ್ನು ಹೇಳಲಾಗಿದೆ. ‘ಜಗದಶ್ವತ್ಥ ಸೇವೆಯಲಿ ನಿಂದಿರುವುದಲೆ ಧರ್ಮ’ ಎಂಬ ಸಾಲು ಧರ್ಮದ ಕುರಿತಾದ ಒಳನೋಟವನ್ನು ನೀಡುತ್ತದೆ. ಜಗದ ಸದೃಢತೆಗೆ ನೆರವಾಗುವ  ನೆಲೆಗಟ್ಟಿನಲ್ಲಿ ಧರ್ಮವನ್ನು ಗುರುತಿಸಿ ಕೊಳ್ಳಲಾಗಿದೆ.

ಸಹಜವಾದ ಬಾಳ್ವೆಯನ್ನು ಧರ್ಮವಾಗಿ ಕಾಣುವ ಪ್ರಯತ್ನ ‘ಗೋಳಾಡಲುಂ ಬೇಡ…’ ಕಗ್ಗದಲ್ಲಿದೆ. ಕಗ್ಗವು ಮನುಷ್ಯನ ಬಾಳನ್ನು ದೇವರ ಲೀಲಾನೋದವಾಗಿ ಪರಿಗಣಿಸಿದೆ. ಎದುರಾದ ದುಃಸ್ಥಿತಿಗೆ ಗೋಳಾಡದೇ, ಬದುಕಿನ ಕುರಿತು ಅತಿಯಾದ ಆಸಕ್ತಿಯನ್ನೂ ಇರಿಸಿಕೊಳ್ಳದೆ ಬದುಕು ನಡೆಸುವಂತೆ ಪ್ರೇರೇಪಿಸುತ್ತದೆ. ಪರಚೇತನದ ನಾಟಕದಲ್ಲಿ ಪಾಲು ಪಡೆದುಕೊಂಡಂತೆ ಬದುಕನ್ನು ನಡೆಸುವುದೇ ಧರ್ಮ ಎಂದು ಹೇಳಲಾಗಿದೆ.

‘ಸತ್ಯವೆಂಬುದದೇನು ಸೈನಿಕನ ಜೀವನದಿ?…’ ಕಗ್ಗದಲ್ಲಿ ಮೌಲ್ಯಯುತವಾದ ವಿಚಾರಗಳನ್ನು ಧರ್ಮವಾಗಿ ಪರಿಭಾವಿಸಲಾಗಿದೆ. ಕಗ್ಗವು ಸಮಾಜದ ಸಮಸ್ತರನ್ನೂ ಸೈನಿಕರಾಗಿ ಗ್ರಹಿಸಿಕೊಂಡಿದೆ. ಅಸ್ತಿತ್ವದ ಉಳಿಕೆಗಾಗಿ ಬಾಹ್ಯ ನೆಲೆಯಲ್ಲಿ ನಡೆಯುವ ಹೋರಾಟ ಹಾಗೂ ಮನದ ತಳಮಳಗಳ ನಿವಾರಣೆಗಾಗಿ ನಡೆಯುವ ಆಂತರಂಗಿಕ ಹೋರಾಟ – ಈ ಎರಡನ್ನೂ ಗೆಲ್ಲಬೇಕಾದರೆ ಸತ್ಯ ಎನ್ನುವ ಆಯುಧ ಬೇಕು. ಇಂಥ ಸತ್ಯವನ್ನೇ ಧರ್ಮವಾಗಿ ಕಾಣಲಾಗಿದೆ.

ಮನುಷ್ಯನಲ್ಲಿರುವ ಸದ್ವಿಚಾರಗಳ ಮೂರ್ತರೂಪವೆಂಬಂತೆ ಧರ್ಮವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಈ ಕಗ್ಗದಲ್ಲಿದೆ.
ಧರ್ಮವು ರೂಪುಗೊಳಿಸಿದ ಆಸ್ತಿಕತೆಯನ್ನು ‘ಕತ್ತಲೆಯೊಳೇನನೋ ಕಂಡು ಬೆದರಿದ ನಾಯಿ…’, ‘ನರರ ಭಯಬಯಕೆಗಳೆ…’ ಹಾಗೂ ‘ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ…’ ಎಂಬ ಮೂರು ಕಗ್ಗಗಳಲ್ಲಿ ನಿಕಷಕ್ಕೆ ಒಡ್ಡಲಾಗಿದೆ. ಭಯದ ಕಾರಣದಿಂದಾಗಿ ರೂಪುಗೊಂಡ ಆಸ್ತಿಕತೆಯ ವೈ-ಲ್ಯವನ್ನು ಮೊದಲ ಎರಡು ಕಗ್ಗಗಳು ಹೇಳುತ್ತವೆ. ಆಸ್ತಿಕತೆ ಹಾಗೂ ನಾಸ್ತಿಕತೆಯ ನಡುವಿನ ಇಬ್ಬಂದಿತನವು ವ್ಯಕ್ತಿಯ ಬದುಕನ್ನು ನಿರರ್ಥಕಗೊಳಿಸುತ್ತದೆ ಎಂಬ ಅಭಿಪ್ರಾಯ ಮೂರನೇ ಕಗ್ಗದಲ್ಲಿದೆ. ಲೌಕಿಕ

ವಿಚಾರಗಳ ಪ್ರೇರಣೆಗಳಿಗೆ ಒಳಗಾಗಿ ಧರ್ಮ- ದೇವರುಗಳ ಕುರಿತು ಆಸಕ್ತಿ ಬೆಳೆಸಿಕೊಳ್ಳುವವರು ಅಲೌಕಿಕ ನೆಲೆಯ ಪರಮೋಚ್ಛ ಸ್ಥಿತಿ(ಮೋಕ್ಷ)ಯನ್ನು ಹೊಂದಲಾರರು ಎಂಬ ಅಂಶ ಈ ಕಗ್ಗಗಳಲ್ಲಿದೆ. ಧಾರ್ಮಿಕಾಸಕ್ತಿಯು ವ್ಯಕ್ತಿಸಹಜ ಗುಣವಾಗಿ ಹೊರ ಹೊಮ್ಮಬೇಕೆಂಬ ಮಾರ್ಗದರ್ಶನ ಕಗ್ಗದಲ್ಲಿದೆ. ಧಾರ್ಮಿಕ ನಂಬಿಕೆ ಇರಿಸಿಕೊಳ್ಳದೆಯೂ ಮೋಕ್ಷವನ್ನು ಗಳಿಸಿಕೊಂಡ ಹಿರಣ್ಯ ಕಶಿಪುನ ಉಲ್ಲೇಖವನ್ನು ನೀಡುವ ಮೂರನೆಯ ಕಗ್ಗ, ಸಮಾಜದಲ್ಲಿ ನಾಸ್ತಿಕತೆಯ ಅಸ್ತಿತ್ವಕ್ಕೂ ಅವಕಾಶ ನೀಡುವ ಪ್ರತಿಪಾದನೆ ನಡೆಸುತ್ತದೆ.

ಒಟ್ಟಾರೆಯಾಗಿ ಈ ಮೂರೂ ಕಗ್ಗಗಳು ಮನುಷ್ಯನ ವೈಯಕ್ತಿಕ ಕಾಮನೆ- ವೈಫಲ್ಯಗಳ ಪರಿಧಿಯಿಂದಾಚೆಗೆ ದೇವರನ್ನು
ದರ್ಶಿಸುವ ಧಾರ್ಮಿಕತೆಯನ್ನು ಸಮರ್ಥಿಸಿಕೊಂಡಿವೆ. ‘ಹೊಸ ಚಿಗುರು ಹಳೆ ಬೇರು…’ ಕಗ್ಗದ ಎರಡನೆಯ ಸಾಲು ಧರ್ಮದ ನಮ್ಯತೆಯ ಗುಣವನ್ನು ಸೂಚಿಸುತ್ತದೆ. ’ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ’ ಎಂಬ ಸಾಲಿನಲ್ಲಿ ಆಧುನಿಕ ಕಾಲಘಟ್ಟದಲ್ಲಿ ಧರ್ಮವು ಹೊಂದಬೇಕಾದ ಸ್ವರೂಪವನ್ನು ಹೇಳಲಾಗಿದೆ.

ಪರಂಪರಾನುಗತವಾಗಿ ಬಂದ ತತ್ತ್ವಾದರ್ಶಗಳನ್ನು ಬೌದ್ಧಿಕತೆಯ ಆಧಾರದಲ್ಲಿ ಅನುಲಕ್ಷಿಸಿಕೊಂಡು ಮುಂದುವರಿಯಬೇಕಾದ ಸಾಧ್ಯತೆಯನ್ನು ಇಲ್ಲಿ ಹೇಳಲಾಗಿದೆ. ಹಳೆಯ ತತ್ತ್ವಗಳನ್ನು ಉಳಿಸಿಕೊಂಡು ಬುದ್ಧಿಪೂರ್ವಕವಾಗಿ ಆಲೋಚಿಸಿ ಬದುಕಿನಲ್ಲಿ
ಅಳವಡಿಸಿಕೊಳ್ಳಬೇಕೆಂಬ ಅಂಶ ಈ ಕಗ್ಗದಲ್ಲಿದೆ. ಧರ್ಮ ಮತ್ತು ಲೋಕಾನುಭವಗಳ ನಡುವಿನ ಅಂತರ್ ಸಂಬಂಧವನ್ನು ಕೆಲವಾರು ಕಗ್ಗಗಳು ತಿಳಿಸಿಕೊಟ್ಟಿವೆ.

‘ಪಿರಿದೆಲ್ಲ ಮತನೀತಿಗಳಿಗಿಂತ ಜೀವಿತವು…’, ’ಅನುಭವದ ಪಾಲೊಳು ವಿಚಾರಮಂಥನವಾಗೆ…’ ಹಾಗೂ ’ಬುದ್ಧಿಪ್ರಕಾಶ ದಿಂದಂತರ ನುಭವಶೋಧೆ…’- ಈ ನೆಲೆಯಲ್ಲಿ ಹೆಸರಿಸಬಹುದಾದ ಕಗ್ಗಗಳಾಗಿವೆ. ಧರ್ಮ ಸೂಕ್ಷ್ಮಗಳನ್ನು ಜೀವನ ಸೂತ್ರದ
ಭಾಗವಾಗಿಸಿಕೊಳ್ಳುವ ಬಗೆಯನ್ನು ಇಲ್ಲಿ ಹೇಳಲಾಗಿದೆ. ಪುಸ್ತಕದ ಜ್ಞಾನವನ್ನು ಮಾತ್ರವಲ್ಲದೆ ಜೀವನಾನುಭವದ ಮೂಲಕ ಧರ್ಮವನ್ನು ದರ್ಶಿಸಬೇಕೆಂಬ ಬೋಧನೆ ಇಲ್ಲಿದೆ.

ಲೋಕಾನುಭವವನ್ನು ಬೌದ್ಧಿಕ ಪರಿಶೀಲನೆಗೆ ಒಳಪಡಿಸಿದಾಗ ಉಂಟಾಗುವ ತಿಳಿವಳಿಕೆಯು ಸತ್ಯದರ್ಶನಕ್ಕೆ ಎಡೆಮಾಡಿ ಕೊಡುತ್ತದೆ. ಈ ಸತ್ಯವನ್ನು ಬದುಕಿನ ಹಲವಾರು ಗೊಂದಲಮಯ ಸನ್ನಿವೇಶಗಳಲ್ಲಿ ಅನ್ವಯಿಸಿಕೊಳ್ಳುವುದೇ ಧರ್ಮ ಎಂಬ ಅಭಿಪ್ರಾಯವನ್ನು ಕಗ್ಗದ ಮೂಲಕ ಗುರುತಿಸಿಕೊಳ್ಳಬಹುದು. ಸಮಾಜದಲ್ಲಿ ವ್ಯಕ್ತಿಗಳು ಹೊಂದಿರುವ ಸ್ಥಾನಮಾನ, ಅನುಕೂಲತೆ, ಅನಿವಾರ್ಯತೆಗಳಿಗೆ ತಕ್ಕ ಹಾಗೆ ಸಂದರ್ಭ- ಔಚಿತ್ಯಗಳನ್ನು ಅರಿತು ಬದುಕು ನಡೆಸುವುದನ್ನು ಧರ್ಮ
ಎನ್ನುವುದಾಗಿ ಡಿ.ವಿ.ಜಿ. ವ್ಯಾಖ್ಯಾನಿಸಿದ್ದಾರೆ.

‘ದೊರೆಯ ವೇಷವ ಧರಿಸಿ ಮರೆಯುವೆಯ ಸೆಯನು?…’ ಕಗ್ಗವು ಈ ಮಾದರಿಯಲ್ಲಿದೆ. ಸಮಯ, ಸಂದರ್ಭ, ಕಾಲಮಿತಿಯನ್ನು
ಪರಿಗಣಿಸಿ, ಅದಕ್ಕನುಗುಣವಾಗಿ ಹೊಂದಿಕೊಂಡು ಬದುಕುವುದನ್ನು ಧರ್ಮವಾಗಿ ಕಾಣಲಾಗಿದೆ. ಸಾಮಾನ್ಯ ಧರ್ಮಾಚರಣೆಯೇ ಮೋಕ್ಷವನ್ನು ಒದಗಿಸಿಕೊಡುತ್ತದೆ ಎಂಬ ಅನಿಸಿಕೆ ‘ಮೋಕ್ಷದಾಶೆಯೊಳಮತ್ಯಾತುರತೆಯೊಳಿತ ಲ್ಲ…’ ಎಂಬ ಕಗ್ಗದಲ್ಲಿದೆ.

ಸಮಾಜದ ಜನರಿಗೆ ಒಳಿತನ್ನು ಮಾಡುತ್ತಾ, ಮಾನವೀಯತೆಯನ್ನು ಒಳಗೊಂಡು ಬದುಕು ನಡೆಸುವುದನ್ನು ಧರ್ಮ ಎಂದು ವ್ಯಾಖ್ಯಾನಿಸಲಾಗಿದೆ. ‘ಧರಿಸಿರ್ಪುದಲ ಧರ್ಮ? ಧರಿಸು ಜೀವನದುರವ…’ ಕಗ್ಗದಲ್ಲಿ ವ್ಯಕ್ತಿಗಳು ಸಮಾಜಮುಖಿಯಾಗಬೇಕೆಂಬ
ಸೂಚನೆಯಿದೆ. ಬದುಕಿನ ಹಾದಿಯಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸುತ್ತಾ, ಇತರರ ಕಷ್ಟಗಳಿಗೂ ಸ್ಪಂದಿಸುತ್ತಾ ಮುನ್ನಡೆಯಬೇಕೆಂದು ಹೇಳಲಾಗಿದೆ. ಈ ಮೂಲಕ ಧರ್ಮದ ವ್ಯಾಪ್ತಿಯ ವಿಸ್ತಾರವನ್ನು ಕಗ್ಗವು ತಿಳಿಸಿಕೊಟ್ಟಿದೆ. ‘

ಗೃಹದಿ ರಾಷ್ಟ್ರದಿ ಸಮಾಜದಿ ಲೋಕಸಂಗತದಿ…’ ಕಗ್ಗದಲ್ಲಿ ವೈಯಕ್ತಿಕ – ಸಾಮಾಜಿಕವಾದ ಹೊಣೆಗಳ ನಿಭಾವಣೆಯನ್ನು ಧರ್ಮದೊಂದಿಗೆ ಸಮನ್ವಯಗೊಳಿಸಲಾಗಿದೆ. ಮನೆ, ಕುಟುಂಬ, ಸಮಾಜ, ದೇಶ ಹೀಗೆ ಎಲ್ಲದರಲ್ಲಿಯೂ ವ್ಯಕ್ತಿಗೆ ನಿಯೋಜಿಸ ಲ್ಪಟ್ಟ ಸ್ಥಾನಮಾನ ಹಾಗೂ ಜವಾಬ್ದಾರಿಗಳಿರುತ್ತವೆ. ಇಂಥ ಜವಾಬ್ದಾರಿಗಳ ನಿರ್ವಹಣೆಯ ಮೂಲಕ ಲೌಕಿಕತೆ ಮತ್ತು ಅಲೌಕಿಕತೆಯ ನಡುವೆ ಸಮನ್ವಯತೆ ಸಾಧ್ಯವಾಗುತ್ತದೆ. ಈ ಸಮನ್ವಯತೆಯನ್ನು ಸಾಧಿಸುವ ಧಾನವೇ ಧರ್ಮ ಎಂದು
ಡಿ.ವಿ.ಜಿ.ಯವರು ಅಭಿಪ್ರಾಯಪಟ್ಟಿದ್ದಾರೆ. ‘ಸೆರೆಬಿದ್ದು ಧರ್ಮಪಾದಪ…’ ಎಂಬ ಕಗ್ಗವು ಧರ್ಮಾತೀತ ಸ್ಪಂದನೆಯನ್ನೇ ಧರ್ಮದ ಮೂಲತತ್ತ್ವವಾಗಿ ಗುರುತಿಸಿದೆ.

ಕೇವಲ ಧಾರ್ಮಿಕ ಸಂಸ್ಥೆಗಳಿಂದಾಗಿ (ಮಠ, ಮಸೀದಿ, ಚರ್ಚು ಮೊದಲಾದವುಗಳು) ಧರ್ಮವೆಂಬ ವೃಕ್ಷ ಬೆಳೆಯುವುದಿಲ್ಲ. ಪ್ರಪಂಚದ ಜೀವನ ವಿಧಾನದಲ್ಲಿ ಧರ್ಮವು ಬೆರೆತಾಗ ಅದು ವಿಶ್ವಮಾನ್ಯವಾಗುತ್ತದೆ ಎಂಬ ಅಭಿಪ್ರಾಯ ಈ ಕಗ್ಗದಲ್ಲಿದೆ. ‘ಮೆರೆಯುವವು ನೂರಾರು ಮೈಮೆಗಳು…’ ಕಗ್ಗದಲ್ಲಿ ಹಲವಾರು ಸಾಧನೆಗಳನ್ನು ಉಲ್ಲೇಖಿಸಿರುವ ಗುಂಡಪ್ಪನವರು ಧರ್ಮಯುಕ್ತ ವಾದ ಪ್ರೀತಿಯ ಜೊತೆಗೆ ಅರಿವು ಸೇರಿಕೊಂಡಾಗ ಅದು ಅತೀ ಉತ್ತಮವಾದ ಸಾಧನೆ ಯಾಗುತ್ತದೆ ಎಂದಿದ್ದಾರೆ.

’ನೆರಳನಿನಿತನು ಕೊಡುವ…’ ಕಗ್ಗದಲ್ಲಿ ಮನೆಯ ಒಳಗೆ ಮತ್ತು ಹೊರಗೆ ಉಪಕಾರಿಯಾಗಿ ಬೆಳೆಯಬೇಕೆಂಬ ಸಂದೇಶದೆ. ಇಂಥ ಜೀವನಶೈಲಿಯನ್ನು ಧರ್ಮವಾಗಿ ಪರಿಭಾವಿಸಿಕೊಳ್ಳಲಾಗಿದೆ. ಜಗದ ಜನರಿಗೆ ಬೋಧಕ ರಾಗುವ ಅರ್ಹತೆಯನ್ನು ಗುರುತಿಸುವ ಕಗ್ಗವೊಂದು ಹೀಗಿದೆ-

‘ಗರ್ವಪಡದುಪಕಾರಿ, ದರ್ಪ ಬಿಟ್ಟಧಿಕಾರಿ|
ನಿರ್ವಿಕಾರದ ನಯನದಿಂ ನೋಳ್ಪುದಾರಿ||
ಸರ್ವಧರ್ಮಾಧಾರಿ, ನಿರ್ವಾಣಸಂಚಾರಿ|
ಉರ್ವರೆಗೆ ಗುರುವವನು- ಮಂಕುತಿಮ್ಮ||’

ಇಲ್ಲಿ ಹಲವಾರು ಶ್ರೇಷ್ಠ ಮೌಲ್ಯಗಳನ್ನು ಗುರುತಿಸುತ್ತಲೇ ಸರ್ವಧರ್ಮಗಳಿಗೂ ಆಧಾರವಾಗಿ ಇರುವುದನ್ನು ಒಂದು ಮೌಲ್ಯ ವಾಗಿ ಗುರುತಿಸಲಾಗಿದೆ. ಇಂಥ ಮೌಲ್ಯ ಉಳ್ಳವರನ್ನು ಇತರರಿಗೆ ಗುರುವೆನಿಸಿಕೊಳ್ಳುವ ಯೋಗ್ಯತೆ ಹೊಂದಿದವರು ಎಂದು ಕರೆಯಲಾಗಿದೆ.

ಹೀಗೆ, ‘ಮಂಕುತಿಮ್ಮನ ಕಗ್ಗ’ ಗ್ರಂಥವು ಧಾರ್ಮಿಕ ನೆಲೆಯಿಂದ ಮಾರ್ಗದರ್ಶನವನ್ನು ನೀಡಬಲ್ಲ ಹಲವಾರು ಸಂಗತಿಗಳನ್ನು ಒಳಗೊಂಡಿದೆ. ಸ್ವಾರ್ಥವಿಲ್ಲದ ಧರ್ಮಾಚರಣೆಯನ್ನು ಈ ಕೃತಿಯು ಉತ್ತೇಜಿಸಿದೆ.