Saturday, 27th July 2024

ಗಹನ ತತ್ವದ ಗಾದೆಗಳು

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

ನಾವು ಏನೇ ಬರೆಯಲಿ, ಏನೇ ಮಾತನಾಡಲಿ, ಏನೇ ಓದಲಿ ಅದನ್ನು ಅರ್ಥೈಸಿಕೊಳ್ಳಲು, ಮನ-ಬುದ್ಧಿಗಳಿಗೆ ನಾಟಲು, ನೆನಪಿಟ್ಟುಕೊಳ್ಳಲು, ಮರೆಯದಂತೆ ಮಾಡಲು ನಡು ನಡುವೆ ನೀಡುವ ಉದಾಹರಣೆಗಳು, ಉಪಮೆಗಳು, ಶ್ಲೋಕಗಳು, ಗಾದೆಮಾತುಗಳು, ಕಡೆಗೆ ಸಂಬಂಧಿಸಿದ ಒಂದು ಜೋಕ್ ಆಗಲಿ ಬೇಕೇ ಬೇಕು. ನಿರಂತರ ಇವು ಯಾವನ್ನೂ ಬಳಸದೇ ಆಡಿದ್ದೇ ಆಡುವ ಮಾತಾಗಲೀ, ಬರಹವಾಗಲಿ, ತತ್ವ ಸಿದ್ಧಾಂತಗಳಾಗಲೀ ಕೇಳುಗರ, ಓದುಗರ ತಲೆಗೆ
ಹೋಗುವುದಿಲ್ಲ.

ಅದಕ್ಕೆಂದೇ ಮಂಕುತಿಮ್ಮನ ಕಗ್ಗದಲ್ಲಿ ಡಿ.ವಿ.ಜಿಯವರು
‘ತರಣಿ ದರ್ಶನಕ್ಕಿಂತ ಕಿರಣಾನುಭವ ಸುಲಭ
ಪರಮಶಾಸಕ್ಕಿಂತ ಸರಿಯುದಾಹರಣೆ |
ಪರಮತತ್ವವ ಕಂಡ ಗುರುವನರಸುವದೆಲ್ಲಿ?
ದೊರೆತಂದು ನೀಂ ಧನ್ಯ ಮಂಕುತಿಮ್ಮ ||’ ಎಂದಿದ್ದಾರೆ.

ನನಗಂತೂ ಉದಾಹರಣೆಗಳಿಲ್ಲದ, ಜೀವನಾನು ಭವಗಳಿಲ್ಲದ ಸಾಹಿತ್ಯವನ್ನು ಓದಲು ಮನಸ್ಸೇ ಆಗುವುದಿಲ್ಲ. ನನ್ನ ಬಾಲ್ಯದಲ್ಲಿ ಕೀರ್ತನೆ, ಹರಿಕಥೆ, ಪುರಾಣ ಗಳಿಗೆ ನಾನು ಹೋಗುತ್ತಿದ್ದುದೇ ಆ ಶಾಸ್ತ್ರಿಗಳು ಮಧ್ಯೆ ಮಧ್ಯೆ ಹೇಳುತ್ತಿದ್ದ ಹಾಸ್ಯ, ಅಡ್ಡಕಥೆ, ಗಾದೆಮಾತುಗಳಿಗಾಗಿ ಆಗಿನ ದಿನಗಳಲ್ಲೇ ನಾನು ಅವುಗಳಿಗೆ ಹೋಗುವಾಗ ಪೆನ್ನು, ನೋಟು ಬುಕ್ಕುಗಳನ್ನು ಒಯ್ಯುತ್ತಿದ್ದೆ. ಅವರು ಮಧ್ಯೆ ಮಧ್ಯೆ ಹೇಳುವಾಗಲೇ ಬರೆದಿಟ್ಟುಕೊಳ್ಳುತ್ತಿದ್ದೆ. ಆ ನೋಟು ಬುಕ್ಕುಗಳು ಕಳೆದ ಮೂವತ್ತು, ನಲವತ್ತು ವರ್ಷಗಳಿಂದ ಇನ್ನೂ ನನ್ನ ಬಳಿಯೇ ಇವೆ.

ಪ್ರೊ. ಅ.ರಾ. ಮಿತ್ರರ ಮಿತ್ರಾವಲೋಕನ ಪುಸ್ತಕ ಓದುತ್ತಿದ್ದೆ. ಅದರಲ್ಲಿ ಸರ್ವಜ್ಞನ ಉಪಮೆಗಳು ಎಂಬ ಲೇಖನ ದಲ್ಲಿ ಈ ಒಂದು ಉಪಮೆ ಕಣ್ಣಿಗೆ ಬಿದ್ದು, ಇಡೀ ದೇಹ ಆ ಕಲ್ಪನೆಯ ಉದಾಹರಣೆಗೆ ಪುಳಕಗೊಂಡಿತು. ಎಂಥ ಸುಂದರ ಈ ಕಲ್ಪನೆ, ಅದೆಂಥಾ ಪದ ಚಮತ್ಕಾರ ಎನಿಸಿತು. ‘ಏರಿ ಮೇಲಣ ಪಂಜು ನೀರೊಳಗೆ ಉರಿದಂತೆ’ ಎಷ್ಟು ಅದ್ಭುತ ಉಪಮೆ ಗೊತ್ತೆ? ಉರಿಯುವ ಪಂಜನ್ನು ಹಿಡಿದು ಒಬ್ಬನು ಕೆರೆಯ ಏರಿಯ ಮೇಲೆ ಹೋಗುತ್ತಿದ್ದರೆ, ಅದರ ಪ್ರತಿಬಿಂಬ ಕೆರೆಯ ನೀರೊಳಗೂ ಕಾಣಿಸುತ್ತದೆ ತಾನೆ. ಆ ಕೆರೆಯ ನೀರಲ್ಲೂ ಪಂಜು ಉರಿಯುತ್ತಿರುವಂತೆಯೂ ಕಾಣುತ್ತದೆ.

ಇದು ಭ್ರಮೆಗೆ ಸಂಬಂಧಪಟ್ಟ ವಿಷಯ. ಈಗಿನ ಗಂಡುಗಳು ಕಂಡ ಹೆಣ್ಣುಗಳನ್ನೆಲ್ಲ ಪ್ರೀತಿಸುತ್ತಾರೆ, ಅವಳೊಮ್ಮೆ ತನ್ನ ಕಡೆ ನೋಡಿದರೆ, ನಕ್ಕರೆ ಸಾಕು ಆ ನಾರಿಯ ಒಲುಮೆ ತನಗೇ ಎಂದೇ ಬೀಗುತ್ತಾರೆ. ಅವಳು ಯಾರಿಗೆ ಮೀಸಲಾಗಿದ್ದಾಳೋ ಎಂಬ ಕಲ್ಪನೆಯೂ ಇಲ್ಲದ ಅವನು ಹಿಗ್ಗುವುದರಿಂದಲೇ ಅವನು ಕೆರೆಯಿದ್ದಂತೆ, ಏರಿಯ ಮೇಲಿನ ಪಂಜಿನ ಬೆಳಕು ನೀರಿನ ಮೇಲಿನ ಪ್ರತಿಬಿಂಬ ಇವನ ಎದೆಯೊಳಗೆ ಮಾತ್ರ ಎಂದು ಅರ್ಥ. ಎಂಥ ಅಪರೂಪದ ಅಭೂತಪೂರ್ವ ಉಪಮೆ ಇದಲ್ಲವೇ? ಈಗ ಹೆಣ್ಣನ್ನು ಪೀಸು, ಮಾಲು, ಡಗಾರ್, ಐಟಂ ಎಂದು ಕರೆಯುವ ಗಂಡುಗಳಿಗೆ ಇಂತಹ ಉಪಮೆಗಳು ಕಿವಿಗಾದರೂ ಬಿದ್ದಾವೆಯೇ? ಬಿದ್ದರೂ ಅರ್ಥವಾದಾವೆಯೇ? ಅರ್ಥವಾದರೂ ಪುಳಕಗೊಳ್ಳದ ಪುಂಪಶುಗಳಿವು.

ಭಗವದ್ಗೀತೆಯನ್ನು ಸುಟ್ಟ ಬುದ್ಧಿಜೀವಿಗಳು ದ್ವಾಪರಯುಗದ ಕಂಸನಿದ್ದಂತೆ, ಕಂಸನು ತಂಗಿಗೆ ಹುಟ್ಟುವ ಎಂಟನೆಯ ಮಗುವೇ ನನಗೆ ಸಾವು ತರಲಿದೆ ಎಂದು ಹುಟ್ಟಿದವುಗಳನ್ನೆಲ್ಲ ಕೊಲ್ಲುತ್ತಾ ಬರುತ್ತಾನೆ. ಆಗ ವಸುದೇವ ಅನೇಕ ದೃಷ್ಟಾಂತಗಳ ಮೂಲಕ ಕಂಸನಿಗೆ ಬುದ್ಧಿ ಹೇಳುತ್ತಾನೆ. ಕಂಸನಿಗೆ ಒಂದೂ ನಾಟುವುದಿಲ್ಲ. ಅದಕ್ಕೆ ಉದಾಹರಣೆಯಾಗಿ ಪಾಪಿಗೆ ಪರರ ದುಃಖ ತಿಳಿಯುವುದೇ? ಕೋಪಿಗಳಿಗೆ ಶಾಂತಿಯಿಂದ ಸದ್ಗುಣವೆಂಬ ತತ್ವ ತಿಳಿದೀತೆ? ಕತ್ತೆಗೆ ಕಸ್ತೂರಿ ಪರಿಮಳ ತಿಳಿದೀತೆ? ಕೋಣನಿಗೆ ವೀಣಾವಾದನದಿಂದ ರೋಮಾಂಚನವಾದೀತೆ?, ಮುಳ್ಳನ್ನೇ ಮೆಲ್ಲುವ ಒಂಟೆ, ತನ್ನ ನಾಲಿಗೆಯ ರಕ್ತದ ರುಚಿಯನ್ನೇ ಮುಳ್ಳಿನ
ರುಚಿಯೆಂದು ಭಾವಿಸುತ್ತಾ ಅದನ್ನೇ ಮೆಲ್ಲುವಂತೆ ಎಂದು ಉದಾಹರಿಸುತ್ತಾರೆ.

ಮುಂದುವರೆದು, ಪುರಂದರದಾಸರು ಉಗಾಭೋಗವೆಂಬ ಸಾಹಿತ್ಯ ಪ್ರಕಾರದಲ್ಲಿ ಉದಾರಣೆಗಳ ಮಳೆಯನ್ನೇ ಸುರಿಸಿದ್ದಾರೆ. ಇವನ್ನು ನಮ್ಮ ಮಾತುಗಳಲ್ಲಿ
ಬಳಸಲು ಪ್ರಯತ್ನಿಸಬೇಕು. ‘ವಿಶ್ರಾಂತಿಗಾಗಿ ಮುಳ್ಳಿನ ಬೇಲಿಯ ಮೇಲೆ ಮಲಗಿದರೆ ಸುಖನಿದ್ದೆ ಬಂದೀತೆ?, ಹಸಿದ ಬೆಕ್ಕು ಹತ್ತಿಯನ್ನು ಮೆದ್ದಂತೆ, ಮಳೆಗೆ ಅಂಜಿ ಮರದ ಕೆಳಗೆ ನಿಂತಂತೆ, ಬಿಸಿಲಿಗೆ ಬೆದರಿ ಬಂಡೆ ಮೇಲೆ ಕುಳಿತಂತೆ, ಹುಳಕ್ಕೆ ಅಂಜಿ ಹುತ್ತದಲಿ ಅಡಗಿಕೊಂಡಂತೆ, ಚಂದ್ರ ಕಿರಣಕೆ ಚಂದ್ರಕಾಂತಿ ಎಂಬ ಕಲ್ಲು ಒಸರುವಂತೆ, ಗೋರಿಗಿಟ್ಟ ಕಲ್ಲು ಒಸರುವುದೇ’ ಎಂಥೆಂಥ ಉಪಮೆ, ದೃಷ್ಟಾಂತಗಳು!

‘ಕರ್ಮಣ್ಯೆ ವಾಧಿಕಾರಸ್ತೆ ಮಾಫಲೇಷು ಕದಾಚನ’ ಎಂಬ ಈ ನುಡಿಯೊಳಗಿನ ಆಳಕ್ಕಿಳಿಯದೇ, ಕೆಲಸ ಮಾಡಿ ಕೂಲಿ ಕೇಳಬಾರದೆ? ಎಂದು ಅದನ್ನು ಸುಟ್ಟರು. ಇದು ಅದಲ್ಲ, ವಿದ್ಯಾರ್ಥಿ ಪರೀಕ್ಷೆಯಲ್ಲಿ ಚೆನ್ನಾಗಿ ಓದಿ ಸರಿಯಾದ ಉತ್ತರಗಳನ್ನು ತನಗೆ ಕೇಳಿದ ಎಲ್ಲ ಪ್ರಶ್ನೆಗೆ ಬರೆದು ಬರುವುದಷ್ಟೇ ಅವನ ಕರ್ತವ್ಯ ಹೊರತು, ತಾನು ಬರೆದ ಆ ಉತ್ತರಗಳಿಗೆ ತಾನೇ ಮಾರ್ಕ್ಸ್ ಹಾಕಿಕೊಳ್ಳಲು ಸಾಧ್ಯವೇ? ಹಾಕಿಕೊಳ್ಳಲು ಬಿಟ್ಟರೆ ಅದು ಪರೀಕ್ಷೆಯೇ? ಇಲ್ಲಿ ಶ್ರದ್ಧೆಯಿಂದ ನಿನ್ನ ಕೆಲಸ ನೀನು ಮಾಡು, ಒಳ್ಳೆ ಫಲ ಇದೆಯೆಂಬುದೇ ಹೊರತು ಕೂಲಿ, ಸಂಬಳದ ಮಾತು ಇಲ್ಲಿ ಇಲ್ಲವೇ ಇಲ್ಲ ಎನ್ನುತ್ತವೆ ತತ್ವಜ್ಞಾನ, ಧರ್ಮ.

ಇದನ್ನು ಅರ್ಥೈಸಿಕೊಳ್ಳದ ಅಪ್ರಬುದ್ಧ ಅರಸಿಕರು, ಶಾಸ್ತ್ರಗ್ರಂಥಗಳನ್ನೆ ಸುಟ್ಟು ಹಿಗ್ಗುತ್ತಾರೆ. ಆದರೆ ಬೂದಿ ಆಗುವುದು ಸುಟ್ಟ ವಸ್ತು, ಪುಸ್ತಕಗಳಲ್ಲ, ಸುಟ್ಟವನ ಸಂಸ್ಕಾರ. ಸರ್ವಜ್ಞ ಕವಿ ನೂರಾರು ವರ್ಷಗಳ ಹಿಂದೆ ಗತಿಸಿದರೂ ಜನರ ಮನೆ, ಮನ, ಮಾತುಗಳಲ್ಲಿ ಉಳಿಯಲು ಕಾರಣ ಆತ ಶಾಸ್ತ್ರ ಗ್ರಂಥಗಳಿಗಿಂತ
ಜನರ ಜೀವನದಲ್ಲಿ ಹಾಸು ಹೊಕ್ಕಾಗಿರುವ ಉದಾಹರಣೆಗಳನ್ನೇ ತನ್ನ ಸಾಹಿತ್ಯದಲ್ಲಿ ಬಳಸಿರುವುದೇ ಆಗಿದೆ. ದೇವರ ದಯೆ ಆದರೆ ಸಾಕು, ಉಳಿದೆಲ್ಲ ತಾನೇ ತಾನಾಗಿ ನಮ್ಮ ಹಿಂದೆ ಬರುತ್ತೆ ಎಂಬುದಕ್ಕೆ ಸರ್ವಜ್ಞ ಅದೆಷ್ಟು ಚೆಂದದ ಉದಾಹರಣೆ ಕೊಟ್ಟಿದ್ದಾನೆ ಗೊತ್ತೆ? ಸಕಲರಿಗೂ ಆರಾಧ್ಯ ದೈವ ಶಂಭು, ಶಿವ, ಶಂಕರ ಇರುವಾಗ ಅನ್ಯದೇವರುಗಳ ಗೊಡವೆ ಏಕೆ ಎಂದು ಹೇಳುವಾಗ ‘ಉಂಬಳಿಯು ಇದ್ದವರು ಕಂಬಳಿಯ ಹೊದೆಯುವರೆ?’ ಎಂಬ ಗಾದೆ ಮೂಲಕ ಉದಾಹರಣೆ ಕೊಡುತ್ತಾರೆ.

ಅಂದರೆ ಜಹಗೀರು, ಜಮೀನು ಹೇರಳವಾಗಿದ್ದವರು ಜಮೀನುದಾರ ಶ್ರೀಮಂತರು ರೇಷ್ಮೆ ವಸ್ತ್ರ ಹೊದೆಯುತ್ತಾರಾಗಲೀ, ಅಂಥ ಸಾಹುಕಾರ ಕಂಬಳಿ
ಹೊದೆಯುವುದಿಲ್ಲ ಎನ್ನುವಲ್ಲಿ ಶಿವಭಕ್ತರೆಲ್ಲ ಶಂಭುವಿನ ಉಪಾಸಕರಲ್ಲ, ಭಾವಧನಿಕರು ಎಂಬ ಧ್ವನಿ ತಿಳಿಸುತ್ತಾನೆ, ನೋಡಿದಿರಾ? ಒಂದು ಸರಳ ಉಪಮೆ ಎಂಥ ಗಹನ ತತ್ವವ ಹೇಳಿತು!

ಹಾಗೆಯೇ, ನಾವು ಪಂಡಿತರು, ಶಾಸ್ತ್ರಜ್ಞರು, ಮೇಧಾವಿಗಳೆಂದು ತಿಳಿದು ಗೌರವಿಸುತ್ತಿರುವವರು ಒಮ್ಮೊಮ್ಮೆ ಹೀನಾತಿ ಹೀನವಾಗಿ ಕೆಳಗುರುಳುವುದನ್ನು ನೋಡುತ್ತೇವೆ ಅಲ್ಲವೆ. ಹೀಗೆ ಹೇಳಿದರೆ ಸರಿ ಎಂದುಬಿಡುತ್ತೇವೆ. ಆದರೆ, ಸರ್ವಜ್ಞ ಮಹಾಕವಿ ಸಾಮಾನ್ಯರಿಗೂ ತಿಳಿಯುವಂಥ ಈ ಉದಾಹರಣೆಗಳನ್ನು ಕೊಟ್ಟಿರುವುದನ್ನು ನೋಡಿ, ‘ಅಟ್ಟ ಅಡಿಗೆಯ ರುಚಿಯ ಸಟ್ಟುಗವು ಬಲ್ಲದೇ? ಶ್ರೇಷ್ಠರುಗಳೆಂದು ಎನಬೇಡ, ಅರಿವಿನ ಬಟ್ಟೆಯೇ ಬೇರೆಂದ ಸರ್ವಜ್ಞ’ ಮಾಡಿದ ಸಾರಿನ ರುಚಿಯನ್ನು ಅದರೊಳಗೆ ತಿರುಗಿಸಿದ, ಕಲೆಸಿದ, ಎತ್ತಿ ಎತ್ತಿ ಹಾಕಿದ ಸೌಟು ಬಲ್ಲದೆ? ಆ ಸೌಟು ಅಷ್ಟೆಲ್ಲ ಸಾರಿನ ಪಾತ್ರೆಯೊಳಗೆ ತಿರುಗಾಡಿ ಬಳಲಿದ್ದು ಸಾರಿನ ರುಚಿ ನೋಡಲೆಂದೇ ಪಾಪ! ಆದರೆ, ಅದಕ್ಕೆ ರುಚಿ ತಿಳಿಯಿತೇ? ತಿಳಿದರೂ ಅದನ್ನು ಕುಡಿದೀತೆ? ಇಲ್ಲ, ಹಾಗೆಯೇ ಶಾಸ್ತ್ರ ಜ್ಞಾನ ಉಳಿದವರೆಲ್ಲ ಜ್ಞಾನದ, ಮೋಕ್ಷದ ದಾರಿಯನ್ನು ಬಲ್ಲವರೆಂದು ಹೇಳುವಂತಿಲ್ಲ.

ಏಕೆಂದರೆ, ತಿಳುವಳಿಕೆಯ ಆ ಜ್ಞಾನದ ದಾರಿಯೇ ಬೇರೆ, ಅದಕ್ಕೆ ಗಿಳಿ ಓದು ಪುಸ್ತಕದ ಜ್ಞಾನ, ಹಂಸ ಕ್ಷೀರ ನ್ಯಾಯವೆಂಬುದೇ ಶ್ರೇಷ್ಠ. ಇದಕ್ಕೆ ಹೊಂದುವಂತೆಯೇ ಮತ್ತೊಂದು ಅಪರೂಪದ ಉಪಮೆ ಚಾಮರಸನ ಪ್ರಭುಲಿಂಗ ಲೀಲೆ ಪ್ರಭಾವ ಸರ್ವಜ್ಞನ ಮೇಲಾದ ಉದಾಹರಣೆ ಇಲ್ಲಿದೆ. ಕುರಿಯು ಕಬ್ಬಿನ ಗದ್ದೆಯನ್ನು ಹೊಕ್ಕರೂ, ಕಬ್ಬಿನ ತನಿರಸವ ಸವಿಯುವುದಿಲ್ಲ ಕಬ್ಬಿನ ರಕ್ಷಣೆಗಿರುವ ಹೊರಗಿನ ನಿಸ್ಸಾರವಾದ ಸೋಗೆಯನ್ನೇ ತಿನ್ನುತ್ತದೆ, ಅದಕ್ಕೆ ಚಾಮರಸನ ಈ ಪದ್ಯ ಅತ್ಯುತ್ತಮ ಉದಾಹರಣೆ: ಕುರಿ ಕಬ್ಬಿನೊಳ ಹೊಕ್ಕರೂ ಅರಿಯುವುದೇ ತನಿರಸವ? ಹೊರಗಿನ ಸೋಗೆಯನೇ ಅದು ಅಗಿಯುವಂತೆ, ಜ್ಞಾನದ ಕುರುಹೇ ಬೇರೆ.

ಸರ್ವಜ್ಞ ನಮ್ಮ ಇಂದಿನ ಶಿಕ್ಷಣ ಪದ್ಧತಿಯಲ್ಲಿ ಕಂಠಪಾಠ, ಮನೆಪಾಠ, ನೆನಪಿಟ್ಟುಕೊಳ್ಳಲು ಉರು ಹೊಡೆದು ವಾರ್ಷಿಕ ಪರೀಕ್ಷೆಯಲ್ಲಿ ಪೇಪರ್ ಮೇಲೆ ಅದನ್ನು ಕಾರಿಕೊಂಡರೆ ಆಯಿತು ನಾವು ಜ್ಞಾನಿಗಳಾದೆವು ಎಂಬ ಭ್ರಮೆಯಲ್ಲಿಯೇ ಹೊರ ಪ್ರಪಂಚಕ್ಕೆ ಬಂದು ವ್ಯವಹಾರ, ಜನರ ಸ್ನೇಹಗಳಲ್ಲಿರುವ ಮೋಸಕ್ಕೆ ಮಾರು ಹೋಗಿ ಹುಚ್ಚರಾಗುತ್ತಿರುವುದೇ ಈ ಕಾರಣಕ್ಕೆ. ಈ ಗಾದೆ ಮಾತುಗಳು ನಮ್ಮನ್ನು ನಮಗರಿಯದ ಬೇರೊಂದು ಪ್ರಪಂಚವನ್ನು ನಮಗೆ ತೋರಿಸುತ್ತವೆ. ಓದು ಒಕ್ಕಾಲು, ಬುದ್ಧಿ ಮುಕ್ಕಾಲು ಎಂಬುದೇ ಇದಕ್ಕೆ. ನಮ್ಮ ಮಕ್ಕಳು ಇಂದು ಓದುತ್ತಿರುವ ಶಾಲಾ ಪುಸ್ತಕಗಳಲ್ಲಿ ಆಳುವ ಪಕ್ಷಗಳ ಹಸ್ತಕ್ಷೇಪ, ಇತಿಹಾಸಗಳ ತಿರುಚುವಿಕೆ, ಆದರ್ಶ ವ್ಯಕ್ತಿಗಳನ್ನು ಖಳನಾಯಕನಂತೆಯೂ, ಖಳನಾಯಕರನ್ನು ವಿಧ್ವಂಸಕರನ್ನು ಧ್ರುವತಾರೆಗಳಂತೆ ಬಿಂಬಿಸುವುದೇ ಇಂದಿನ ಈ ದೇಶದ
ದುರಂತವಾಗಿದೆ.

ದಾಸರು, ಶರಣರು, ಸಂತರು ಶತಮಾನಗಳ ಹಿಂದೆ ಇದ್ದವರನ್ನೆ ಇಂದಿಗೂ ಸ್ಮರಿಸುತ್ತಿದ್ದೇವಾಗಲಿ, ಮತ್ತೆ ನಮ್ಮ ನಡುವೆ ಈಗ ಸಂತರೇ ಇಲ್ಲ, ಸಂತೆ ಸೇರುವವರಿದ್ದಾರೆ. ಸೇರಿದ ಸಂತೆಯಲ್ಲಿ ಗಂಟುಕಳ್ಳರೂ ಇದ್ದಾರೆ ಅಥವಾ ಆ ಗಂಟುಕಳ್ಳರೇ ಸಂತೆ ಏರ್ಪಡಿಸುತ್ತಿದ್ಧಾರೆ. ಸೇವೆ ಮಾಡಲು ಅಧಿಕಾರವೇ ಬೇಕು ಎನ್ನುವ ಮಟ್ಟಿಗೆ ಜನ ಕೆಟ್ಟುಹೋಗಿದ್ದಾರೆ. ಹರಿಯುವ ನದಿ, ಹಳ್ಳ, ಕಾಲುವೆಗಳಿಗೆ ಹರಿ ಎಂದವರಾರು? ರಸ್ತೆ ಬದಿಯ, ಕಾಡಿನ ಮರ, ಗಿಡಗಳಿಗೆ ಬೆಳೆದು ನೆರಳು ನೀಡೆಂದವರು ಯಾರು? ನಾವಿಂದು ಅಧಿಕಾರಕ್ಕಾಗಿ ರಕ್ತ ಹರಿಸುತ್ತಿದ್ದೇವೆ, ರೌಡಿಗಳನ್ನು, ಗೂಂಡಾಗಳನ್ನು ದಾರಿಯುದ್ದಕ್ಕೂ ಮರಗಳನ್ನು ಬೆಳೆಸುವಂತೆ ಬೆಳೆಸುತ್ತಿದ್ದೇವೆ.

ಉದಾಹರಣೆ ಕೊಡಲು ನಾವು ಮತ್ತೆ ಎಂಟು, ಹನ್ನೆರಡನೆಯ ಶತಮಾನದ ವ್ಯಕ್ತಿಗಳನ್ನೇ ಆರಿಸಿ ಕೊಳ್ಳಬೇಕಾಗಿದೆಯಾಗಲೀ, ನಮ್ಮ ಕಣ್ಣು, ಧ್ವನಿಗಳ ಅಳತೆಯಲ್ಲಿ ಯಾರೂ ಇಲ್ಲ, ಬಹುಶಃ ನಮ್ಮ ಮುಂದಿನ ಪೀಳಿಗೆಯವರಿಗೆ ಕೆಟ್ಟದಕ್ಕೆ ಉದಾಹರಣೆಯಾಗಿ ಬೇಕಷ್ಟು ಜನ ಸಿಗುತ್ತಿದ್ದಾರೆ. ತ್ರೇತಾಯುಗದಲ್ಲಿ ರಾವಣ, ದ್ವಾಪರದಲ್ಲಿ ಕಂಸ, ದುರ್ಯೋಧನ, ದುಶ್ಯಾಸನ ಇರುವಂತೆ ನಮ್ಮ ಈ ಕಲಿಯುಗದಲ್ಲಿ ಒಂದೊಂದು ಮತಕ್ಷೇತ್ರಕ್ಕೂ ಒಬ್ಬೊಬ್ಬ ಖಳನಾಯಕರು ಸಿಗುತ್ತಿದ್ದಾರೆ. ದುರಂತವೆಂದರೆ, ಒಳ್ಳೆಯವರನ್ನು ಆರಿಸುವ ಆಯ್ಕೆಯೇ ಉಳಿದಿಲ್ಲ, ಇದ್ದುದರಲ್ಲಿಯೇ ಕಡಿಮೆ ಕೆಟ್ಟವನನ್ನು, ಕಮ್ಮಿ ದುಷ್ಟರನ್ನು ಆರಿಸಬೇಕಿದೆ.

ಇದನ್ನು ಸರ್ವಜ್ಞನ ಈ ದೃಷ್ಟಾಂತ ನಮ್ಮ ಇಂದಿನ ಜೀವನಕ್ಕೆ ಹೋಲಿಸಿದ ಈ ವಚನದೊಂದಿಗೆ ಕೊನೆಯಿಲ್ಲದ ಈ ಲೇಖನ ಮುಗಿಸುತ್ತೇನೆ.

‘ಒಳ್ಳೆಯವರು ಇರದ ಊರು|
ಕಳ್ಳನೊಡನಾಟ, ಸುಳ್ಳನ ಮಾತು,
ಈ ಮೂರು ಕೆಸರೊಳಗೆ ಮುಳ್ಳು ತುಳಿದಂತೆ
ಸರ್ವಜ್ಞ ||’
ಸಾತ್ವಿಕ, ಸಜ್ಜನರೆಲ್ಲರೂ ಈಗ ಅನುಭವಿಸುತ್ತಿರುವ ಈ ವ್ಯಥೆ ಉಪಮಾತೀತ| ಅದಕ್ಕೆ ಸುಭಾಷಿತ, ನಾಣ್ಣುಡಿ, ಗಾದೆಮಾತುಗಳನ್ನು ಏಕೆ ಹೆಚ್ಚು ಓದಬೇಕೆಂದರೆ,
ಅನುಭವ ಇರುವಲ್ಲಿಯೇ ಅಮೃತತ್ವ ಇರುತ್ತದೆ.

ನಾವೇ ಬಿದ್ದು ಗಾಯ ಮಾಡಿಕೊಂಡು ಅಳುವುದಕ್ಕಿಂತ ಬಿದ್ದು ಎದ್ದವರ ಅನುಭವಗಳನ್ನು ಕೇಳುವುದರಿಂದ, ಕಂಡವರಿಂದ ನಾವು ಕೇಳಬೇಕಾದದ್ದು ಬಹಳಷ್ಟು ಇರುತ್ತದೆ. ಗಾದೆ ಮಾತುಗಳೆಂದರೆ ಕೇವಲ ಮಧ್ಯೆ ಸೇರಿಸುವ ಮಾತಲ್ಲ, ಗಹನ ತತ್ವಗಳನ್ನೂ ಹೇಳುತ್ತವೆ. ಕರಿಯಂ ಕನ್ನಡಿಯಲ್ಲಿ ತೋರ್ಪಂತೆ ಅಂದರೆ
ಆನೆಯನ್ನು ಕನ್ನಡಿಯಲ್ಲಿ ತೋರಿಸುವ ಕೆಲಸ ಗಾದೆಗಳು ಮಾಡುತ್ತವೆ.

Leave a Reply

Your email address will not be published. Required fields are marked *

error: Content is protected !!