Wednesday, 11th December 2024

ಮನುಸ್ಮೃತಿಯ ವಿಕೃತಿ: ಮನಸ್ಸು ಹೊಕ್ಕ ಕೋತಿ !

ಅಭಿವ್ಯಕ್ತ

ತುರುವೇಕೆರೆ ಪ್ರಸಾದ್‌

ನನ್ನ ಕಾಲೇಜು ದಿನಗಳಿಂದಲೂ ಸುಮಾರು ಹೆಚ್ಚು ಕಮ್ಮಿ ೩೫ ವರ್ಷಗಳಿಂದ ನಾನು ಈ ಮನುಸ್ಮೃತಿಯ ಬಗ್ಗೆ ವಿಚಾರವಂತರು, ಪ್ರಗತಿಪರರು ಎನಿಸಿಕೊಂಡವರು ಆಗಾಗ್ಗೆ ಮಾತಾಡುತ್ತಿರುವುದನ್ನು, ಅದರ ಬಗ್ಗೆ ಕಟುಶಬ್ದಗಳಲ್ಲಿ ಟೀಕಿಸುತ್ತಿರುವುದನ್ನು ಕೇಳು
ತ್ತಲೇ ಬಂದಿದ್ದೇನೆ. ಈಗ್ಗೆ ಕೆಲವು ವರ್ಷಗಳಿಂದ ಕೃತಿಯ ಬಗ್ಗೆ ಮಾತಾಡುವುದು ಬಿಟ್ಟು ಯಾವುದೋ ಒಂದು ತಥಾಕಥಿತ ಮುಂದುವರಿದವರು, ಶೋಷಣೆ ಮಾಡುವವರು ಎಂದು ಇದೇ ಚಿಂತನಶೀಲರಿಂದ ಪಟ್ಟಕಟ್ಟಿಸಿಕೊಂಡ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುವುದು ಪ್ರಾರಂಭವಾಗಿದೆ.

ಈ ಸಮುದಾಯ ಮನುಸ್ಮೃತಿಯಿಂದ ಪ್ರೇರಿತರಾದವರು, ಕೊಳಕು ಸಂಕುಚಿತ ಮನು ಮನಸ್ಸಿನವರು, ಪ್ರಗತಿವಿರೋಧಿಗಳು, ಸೀ ವಿರೋಧಿಗಳು, ಮನು ಸಿದ್ಧಾಂತಿಗಳು ಎಂದೆಲ್ಲ ಹಣೆಪಟ್ಟಿ ಹಚ್ಚಿ ಅವರನ್ನು ನಿರ್ಮೂಲನ ಮಾಡಬೇಕು, ಮನುಸ್ಮೃತಿಯನ್ನು ಸುಟ್ಟು ಹಾಕಬೇಕು ಎಂದು ಒಂದು ಘೋಷಿತ ಯುದ್ಧವನ್ನೇ ಸಾರಿ ಬಿಟ್ಟಿದ್ದಾರೆ.

ನಿಜವಾಗಿಯೂ ಯೋಚಿಸುವುದಾದರೆ ಈ ಮನುಸ್ಮೃತಿಯನ್ನೇ ಆಧಾರವಾಗಿಟ್ಟುಕೊಂಡು, ಅದನ್ನೇ ಅವಲಂಬಿಸಿ ಇತರೆ ಜನಾಂಗವನ್ನು ತಪ್ಪುದಾರಿಗೆಳೆಯುತ್ತಿರುವ, ಅವರನ್ನು ಅವಕಾಶಗಳಿಂದ ವಂಚಿತರನ್ನಾಗಿಸುತ್ತಿರುವ, ವಿಚಾರವಂತಿಕೆಯಿಂದ ಹಿಂದೆ ಸರಿಯು ತ್ತಿರುವ ಸಮುದಾಯ ಅಥವಾ ಜನ ಯಾರು ಎಂಬುದು ಮೊದಲು ನಿಷ್ಕರ್ಷೆ ಆಗಬೇಕು. ಇದಕ್ಕೆ ನಾನೊಂದು ಚಿಕ್ಕ ಸಮೀಕ್ಷೆ ಮಾಡಿದೆ. ನಮ್ಮ ಊರಿನಲ್ಲಿ ಎಷ್ಟು ಮನೆಗಳಲ್ಲಿ ಮನುಸ್ಮೃತಿ ಕೃತಿ ಇದೆ? ಎಷ್ಟು ಜನ ಅದನ್ನು ಓದಿದ್ದಾರೆ? ಎಷ್ಟು ಜನ ಅದನ್ನು ಅನುಸರಿಸುತ್ತಿದ್ದಾರೆ? ಎಂಬುದರ ಒಂದು ಚಿಕ್ಕ ಮಾಹಿತಿ ಕಲೆ ಹಾಕಿದೆ. ಆ ಮಾಹಿತಿಯ ಸಾರ ತುಂಬಾ ಸ್ವಾರಸ್ಯಕರವಾಗಿದೆ.

ನಮ್ಮೂರಲ್ಲಿ ಸುಮಾರು ಒಂದು ೫೦ ಬ್ರಾಹ್ಮಣ ಕುಟುಂಬಗಳು, ಒಂದು ೨೦೦ ವೀರಶೈವ ಕುಟುಂಬಗಳೂ ಇವೆ (ನಿಜವಾಗಿಯೂ ಮನುಸ್ಮೃತಿಯನ್ನು ಅನುಸರಿಸುವವರು ಎಂದು ಟಾರ್ಗೆಟ್ ಆಗಿರುವುದೇ ಈ ಎರಡು ಸಮುದಾಯ ಗಳು) ಅಗ್ರಹಾರದ ಬ್ರಾಹ್ಮಣರ ಎರಡು ಮನೆಗಳಲ್ಲಿ ಮಾತ್ರ ಈ ಕೃತಿ ಇದೆ. ಅದರಲ್ಲಿ ಒಂದು ಮನೆಯವರು ತಲೆ ತಲಾಂತರದಿಂದ ಬಂದ ಕೃತಿಯನ್ನು ಹಾಗೇ ಇಟ್ಟುಕೊಂಡಿದ್ದಾರೆ. ಅವರೆಂದೂ ಅದನ್ನು ತಿರುವಿಯೂ ಹಾಕಿಲ್ಲ. ಇನ್ನೊಬ್ಬರು ಇತ್ತೀಚೆಗೆ ಎಲ್ಲರೂ ಈ ಮನುಸ್ಮೃತಿಯನ್ನು ದೂಷಿಸುತ್ತಾರಲ್ಲ, ಅಂಥದ್ದು ಇದರಲ್ಲಿ ಏನಿದೆ? ಎಂಬ (ಕೆಟ್ಟ) ಕುತೂಹಲದಿಂದ ತಂದಿಟ್ಟುಕೊಂಡಿರು ವವರು.

ಇದು ಬಿಟ್ಟರೆ ಮನುಸ್ಮೃತಿ ಸ್ಥಳೀಯ ಸರಕಾರಿ ಗ್ರಂಥಾಲಯದಲ್ಲೂ ಇಲ್ಲ. ಇನ್ನೊಂದು ಖಾಸಗಿ ಗ್ರಂಥಾಲಯದಲ್ಲಿ ಒಂದು ಪ್ರತಿ ಇದ್ದು ಸುಮಾರು ೧೨ ವರ್ಷಗಳಲ್ಲಿ ಈವರೆಗೆ ಯಾರೊಬ್ಬರು ಅದನ್ನು ಒಮ್ಮೆಯೂ ಎರವಲು ಪಡೆದಿಲ್ಲ, ಅಥವಾ ಅಲ್ಲೇ ಕುಳಿತು ಆಕರ ಗ್ರಂಥವಾಗಿ ಬಳಸಿರುವುದು ಸಹ ಗ್ರಂಥಾಲಯ ಮೇಲ್ವಿಚಾರಕರ ಗಮನಕ್ಕೆ ಬಂದಿಲ್ಲ. ಇಲ್ಲಿ ೧೨ ವರ್ಷಗಳಿಂದ ಪ್ರತಿ ತಿಂಗಳೂ ಒಂದು ಪುಸ್ತಕದ ಕುರಿತು ಉಪನ್ಯಾಸ ನಡೆದಿದೆ. ಆದರೆ ಮನುಸ್ಮೃತಿಯ ಬಗ್ಗೆ ಇಲ್ಲಾಗಲೀ, ಬೇರೆ ಯಾವ ವೇದಿಕೆಯಲ್ಲೇ ಆಗಲಿ ಒಂದೇ ಒಂದು ಪ್ರವಚನ, ಭಾಷಣ, ಪರಿಚಯ ಯಾವುದೂ ನಡೆದಿಲ್ಲ.

ಇದು ಹೋಗಲಿ, ಕಟ್ಟಾ ಹಿಂದೂ ಧರ್ಮೀಯರು, ಸನಾತನ ಹಿಂದೂ ಧರ್ಮದ ಪ್ರತಿಪಾದಕರು ಎಂಬುವವರ ಮನೆಗಳಲ್ಲಿ, ಹಿಂದೂ ಸಂಘಟನೆಗಳ ಕಚೇರಿಯಲ್ಲಿ, ಆರ್‌ಎಸ್‌ಎಸ್ ಶಾಖೆಯಲ್ಲಿ ಎಲ್ಲೂ ಈ ಕೃತಿಯ ಒಂದು ಪ್ರತಿ ಇಲ್ಲವೇ ಇಲ್ಲ. ಮನುಸ್ಮೃತಿ ಯನ್ನು ಬೆಂಬಲಿಸುತ್ತವೆಂದು ಹೇಳಲಾಗುವ ರಾಜಕೀಯ ಪಕ್ಷಗಳ ಕಚೇರಿಯಲ್ಲಿಲ್ಲ, ಆ ನಾಯಕರು, ಮುಖಂಡರ ಮನೆಗಳಲ್ಲೂ ಇಲ್ಲ. ವೇದ ವಿದ್ವಾಂಸರು, ಕಟ್ಟಾ ಸಂಪ್ರದಾಯ ವಾದಿಗಳ ಮನೆಯಲ್ಲೂ ಊಹೂಂ. ನಮ್ಮ ಶ್ರದ್ಧೆ, ಭಕ್ತಿ ಪರಂಪರೆಯ ಕೇಂದ್ರ ಗಳೆನಿಸಿದ ದೇವಾಲಯಗಳಲ್ಲೂ ಕಾಣದು. ಇದು ನಮ್ಮೂರಿನ ಕತೆ ಮಾತ್ರವಲ್ಲ, ಬಹುತೇಕ ಗ್ರಾಮೀಣ ಪ್ರದೇಶದ ಎಲ್ಲ ಊರು ಗಳಲ್ಲಿನ ವಾಸ್ತವ!

ಹಾಗಾದರೆ ಈ ಮನುಸ್ಮೃತಿಯ ರಾಡಿಯನ್ನು ಮೈ ಮನಸ್ಸುಗಳಿಗೆ ಬಳಿದುಕೊಂಡಿರುವವರು ಯಾರು? ಮೇಲಿನ ಸಮೀಕ್ಷೆಯಿಂದ ತಿಳಿದು ಬರುವ ಒಂದು ಸತ್ಯ ವೆಂದರೆ ಸದಾ ವಿವಾದದಲ್ಲಿರುವ ಈ ಕೃತಿ ನಮ್ಮ ಹಿಂದೂ ಜನಜೀವನದ ಭಾಗವಾಗಿ ಎಂದಿಗೂ ಇಲ್ಲವೇ ಇಲ್ಲ. ಈ ಪೀಳಿಗೆಯ ಎಷ್ಟೋ ಮಕ್ಕಳಿಗೆ ಮನುಸ್ಮೃತಿ ಹೆಸರೇ ಗೊತ್ತಿಲ್ಲ. ಕೃತಿಯನ್ನು ಅಥವಾ ಕೃತಿಯ ಯಾವುದೇ ಭಾಗವನ್ನು ಯಾವ ಇಯತ್ತೆಗೂ ಪಠ್ಯವಾಗಿ ಇಟ್ಟಿದ್ದು ನನಗಂತೂ ನೆನಪಿಲ್ಲ.

ಅಥವಾ ವೇದ, ಉಪನಿಷತ್‌ಗಳ ಸಾರವನ್ನು ಕೈಪಿಡಿಗಳಾಗಿ ಮಾಡಿದಂತೆ ಈ ಮನುಸ್ಮೃತಿಯ ಸಾರವನ್ನು ಸಂಕ್ಷಿಪ್ತ ಗೊಳಿಸಿ ಪ್ರಚಾರಕ್ಕೆ ಅನುಕೂಲವಾಗುವಂತಹ ಕೈಪಿಡಿಯಾಗಿ ಮರುಪ್ರಕಟಿಸಿಲ್ಲ. (ಕ್ರೈಸ್ತರು ಮತ್ತು ಇತರೆ ಧರ್ಮಗಳಲ್ಲಿ ಈ ತರಹದ ಕೈಪಿಡಿಗಳನ್ನು ಕಾಣಬಹುದು) ‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂದು ಕೊನೆಯಾಗುವ ಒಂದೆರಡು ಶ್ಲೋಕಗಳನ್ನು ಬಿಟ್ಟರೆ ಬೇರ‍್ಯಾವ ಶ್ಲೋಕಗಳೂ ಯಾರಿಗೂ ಗೊತ್ತಿಲ್ಲ.

ಇನ್ನೂ ಹೇಳಬೇಕೆಂದರೆ ರಾಮಾಯಣ, ಮಹಾ ಭಾರತದ ರೀತಿ ಇದನ್ನು ಯಾರೂ ಮನೆಯಲ್ಲಿ ಒಂದು ಪವಿತ್ರ ಗ್ರಂಥವಾಗಿ ಕಾಪಾಡಿ ಇಟ್ಟುಕೊಂಡಿಲ್ಲ. ವೇದಶಾಸ್ತ್ರ ಪಾರಂಗತರು ಪಂಚಾಂಗ ನೋಡುವಂತೆ ಯಾವುದೇ ಸಮಸ್ಯೆಗೆ ಇದನ್ನು ತೆಗೆದು ಅದರಲ್ಲಿನ ಯಾವುದೋ ಶ್ಲೋಕ ವನ್ನೋ ಸಾಲನ್ನೋ ಉದಾಹರಿಸಿ ಈ ರೀತಿ ನಡೆದುಕೊಳ್ಳಬೇಕು ಎಂದು ಫರ‍್ಮಾನು ಹೊರಡಿಸಿಲ್ಲ.

ಸಮಾಜ, ಸಮುದಾಯಗಳನ್ನು ನಾಗರಿಕ ಹಕ್ಕುಗಳಿಂದ ದೂರ ಮಾಡುವ ಕಟ್ಟುಪಾಡುಗಳನ್ನು ವಿಧಿಸಿಲ್ಲ. (ಬೇರೆ ಧರ್ಮೀಯರ ಪವಿತ್ರಗ್ರಂಥಗಳಲ್ಲಿ ಇಂತಹ ಕಟ್ಟುಪಾಡುಗಳಿದ್ದು ಅದನ್ನು ಸೆಕ್ಯುಲಿರಿಸಂ ಹೆಸರಿನಲ್ಲಿ ಆ ಧರ್ಮೀಯರ ಮೇಲೆ ಹೇರಿರುವುದನ್ನು ನಾವು ಕಾಣಬಹುದು) ನಮ್ಮ ತಂದೆ ಯವರ ಕಾಲದಿಂದ ನಾವು ಸರಸ್ವತಿ ಪೂಜೆಗೆ ಮಹಾಭಾರತ, ವಾಲ್ಮೀಕಿ ರಾಮಾಯಣ, ಕುವೆಂಪು ಅವರ ರಾಮಾಯಣ, ಎಸ್.ಎಲ್. ಭೈರಪ್ಪನವರ ಕಾದಂಬರಿ, ಬೇಂದ್ರೆಯವರ ಗಂಗಾವತರಣ, ಅಂಬೇಡ್ಕರ್,  ಕೃತಿಗಳು ಇವನ್ನು ಸರಸ್ವತಿ ಪೂಜೆಗೆ ಇಟ್ಟಿದ್ದೇವೆಯೇ ಹೊರತು ಮನುಸ್ಮೃತಿಯನ್ನು ಇಟ್ಟಿಲ್ಲ, ಹಾಗೆ ಯಾರ ಮನೆಯಲ್ಲಾದರೂ ಇಟ್ಟಿರು ವುದನ್ನೂ ನೋಡಿಲ್ಲ.

ಹೀಗಾಗಿ ಬಹುತೇಕ ಜನ ನೋಡಿರದ, ಕೇಳಿರದ, ಓದದ, ಅದರಲ್ಲಿನ ವಿಷಯ ಗಳನ್ನು ಜೀವನದಲ್ಲಿ ಅನುಸರಿಸದ ಯಾವುದೋ
ಓಬಿರಾಯನ ಕೃತಿಯನ್ನು ನಮ್ಮ ಕೆಲವು ವಿಚಾರವಂತರು ಮಾತ್ರ ತಮ್ಮ ಬಳಿ ಜೋಪಾನವಾಗಿ ಇಟ್ಟುಕೊಂಡಿದ್ದಾರೆ. ಅದರಲ್ಲಿ ಎಷ್ಟು ಒಳ್ಳೆಯದಿದೆಯೋ, ಎಷ್ಟು ಕೆಟ್ಟದ್ದಿದ್ದೆಯೋ ಅದು ಬೇರೆ ವಿಷಯ. ಆದರೆ ಈ ಸೋಕಾಲ್ಡ್ ವಿಚಾರ ವಂತರು ಮಾತ್ರ ತಮ್ಮ ನಾಲಗೆ ಚಪಲಕ್ಕೆ ಮನುಸ್ಮೃತಿ ಹಾಗೂ ಕಪೋಲಕಲ್ಪಿತ ಚರಿತ್ರೆಯನ್ನು ಆವಾಗಾವಾಗ ತಿರುವಿ ಹಾಕುತ್ತ ಜನರ ಮನಸ್ಸನ್ನು ಒಡೆಯುತ್ತ ಸಮಾಜದಲ್ಲಿ ಅಪಶ್ರುತಿ ಮೂಡಿಸುತ್ತಲೇ ಇರುತ್ತಾರೆ.

ಈ ಸಂದರ್ಭದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಹೇಳುವ ಒಂದು ಕತೆ ನೆನಪಿಗೆ ಬರುತ್ತದೆ. ಒಬ್ಬ ವ್ಯಕ್ತಿ ಅತಿಮಾನುಷ ಶಕ್ತಿಯನ್ನು ಸಿದ್ಧಿಸಿಕೊಳ್ಳಲು ಟಿಬೆಟ್ಟಿಗೆ ಹೋದನಂತೆ. ಅಲ್ಲಿನ ಯತಿಗಳೊಬ್ಬರು ಅವನಿಗೆ ಮೂರು ಮಾಮೂಲಿ ಮಂತ್ರಗಳನ್ನು ಉಪದೇಶಿಸಿ ಇವನ್ನು ಹೇಳುವಾಗ ನೀನು ಕೋತಿಯ ನೆನಪು ಮಾಡಿಕೊಳ್ಳದಿದ್ದರೆ ನಿನಗೆ ಅತಿಮಾನುಷ ಶಕ್ತಿಗಳು ಸಿದ್ಧಿಸುತ್ತವೆ ಎಂದು ಹೇಳಿ ಕಳಿಸಿದರಂತೆ. ಇದೇನು ಮಹಾ? ಎಂದು ಬಂದು ಮಂತ್ರಪಠಣಕ್ಕೆ ಕೂತವನಿಗೆ ಮನಸ್ಸಿನ ತುಂಬಾ ಕೋತಿಗಳೇ ಬಂದವಂತೆ.

ಮರೆಯಲು ಹೋದಷ್ಟೂ ಒಂದು ಹತ್ತಾಗಿ, ಹತ್ತು ನೂರಾಗಿ ಕಾಡಿ ಮಂತ್ರಗಳೇ ಮರೆತು ಹೋದವಂತೆ. ಈ ಮನುಸ್ಮೃತಿಯ ಕತೆಯೂ ಹೀಗೇ ಆಗಿದೆ. ಅದು ಈ ಕೆಲವು ಪ್ರಗತಿಪರರು, ವಿಚಾರವಂತರೆನಿಸಿಕೊಂಡವರ ಮನಸ್ಸನ್ನು ಮರ್ಕಟವಾಗಿ ಹೊಕ್ಕಿದೆ. ಅಲ್ಲಿದ್ದ ಒಳ್ಳೆಯ ಸ್ಮೃತಿಗಳನ್ನೆಲ್ಲ ಹಾಳುಗೆಡವಿ ಮಾಡಬೇಕಾದ ರಚನಾತ್ಮಕ ಕೆಲಸಗಳನ್ನು ಮರೆಸಿ ಮಂಗವಾಗಿ ಕುಣಿಯುತ್ತಿವೆ.
ಇದೆಲ್ಲ ಹೇಳಬೇಕಾಗಿ ಬಂದದ್ದು ಏಕೆಂದರೆ ಮೊನ್ನೆ ನಮ್ಮೂರ ಪ್ರಥಮದರ್ಜೆ ಕಾಲೇಜಿಗೆ ಹಿರಿಯ ಮಿತ್ರರೊಬ್ಬರು ವಿಶೇಷ ಉಪನ್ಯಾಸ ನೀಡಲು ಬಂದಿದ್ದರು.

ಮನುಸ್ಮೃತಿಯ ಬಗ್ಗೆ ತಲೆಯೇ ಕೆಡಿಸಿಕೊಳ್ಳದ, ಅದರ ಗಂಧ ಗಾಳಿಯೂ ಇಲ್ಲದೆ ವಿವಾದ ಮುಕ್ತವಾಗಿ ಪ್ರಶಾಂತವಾಗಿದ್ದ ನಮ್ಮೂರಿನ ಕಾಲೇಜು ಹುಡುಗರಿಗೆ ಉಪನ್ಯಾಸ ನೀಡಲು ಬೆಂಗಳೂರಿನಿಂದ ಮನುಸ್ಮೃತಿಯ ಕೃತಿಯೊಂದನ್ನು ತಂದಿದ್ದರು. ಕಾಲೇಜು ಹುಡುಗರ ಅದೃಷ್ಟವೋ? ದುರದೃಷ್ಟವೋ ಅವರು ಅದನ್ನು ಕಾರಿನಲ್ಲೇ ಮರೆತು ಬಂದು ತತ್‌ಕ್ಷಣಕ್ಕೆ ಕೈಗೆ ಸಿಕ್ಕ ಕೃತಿಯೊಂದರಲ್ಲಿನ ಒಂದು ಲೇಖನ ಹಿಡಿದು ಮಾತಾಡಿದರು.

ವಿದ್ಯಾರ್ಥಿಗಳಿಗೆ ಗತಚರಿತ್ರೆ, ಪರಂಪರೆಯ ಬಗ್ಗೆ ಪರಿಚಯ ಮಾಡಿಕೊಡುವುದು ಎಂದರೆ ಮನುಸ್ಮೃತಿಯ ಬಗ್ಗೆ ಹೇಳುವುದಲ್ಲ. ಈಗಿನ ಯುವಕರಿಗೆ ಬೇಕಾಗಿರುವುದು ಮನುಸ್ಮತಿಯ ಮೇಲಿನ ಉಪನ್ಯಾಸಗಳಲ್ಲ, ಅದು ಎಲ್ಲ ಕಡೆಯೂ ಧಾರಾಳವಾಗಿ ಸಿಗುತ್ತದೆ. ಅವರು ಯಾವುದು ಸರಿ, ಯಾವುದು ತಪ್ಪು ಎಂದು ನಿಷ್ಕರ್ಷೆ ಮಾಡುವಷ್ಟು ಪ್ರಬುದ್ಧರಾಗಿದ್ದಾರೆ. ಅವರಿಗೆ ಬದುಕು ಕಟ್ಟಿಕೊಳ್ಳುವ ವಿವೇಕಾನಂದರ ವಿಚಾರಧಾರೆ ಬೇಕು. ಸರ್‌ಎಂವಿ, ಜೆಮ್ ಶೆಡ್‌ಜೀ ಟಾಟಾ, ಅಂತಹವರ ಕತೃತ್ವ ಶಕ್ತಿ, ಸಂಕಲ್ಪ,
ದೃಢತೆಗಳ ಪರಿಚಯ ಮಾಡಿಕೊಡಬೇಕು. ಅವರ ವ್ಯಕಿತ್ವ ನಿರ್ಮಾಣ ಮಾಡುವಂತಹ ವ್ಯಕ್ತಿತ್ವ ವಿಕಸನದ ಪುಸ್ತಕಗಳು
ಬೇಕು. ಇವತ್ತು ಪ್ರಪಂಚದ ಶೇ.೮೫ರಷ್ಟು ಲಕ್ಷಾಧೀಶರು, ಕೋಟ್ಯಧೀಶರು ಮೊದಲನೇ ತಲೆಮಾರಿಗೆ ಸೇರಿದವರು. ಶೇ.೧೫ ಮಂದಿ ಮಾತ್ರ ವಂಶವಾಹಿನಿಯಾಗಿ ಆಸ್ತಿ ಪಡೆದು ಬಂದಿರುವವರು.

ಈ ಯುವ ಪೀಳಿಗೆ ವರ್ಷಕ್ಕೆ ೫೦ ಸೆಲ್ ಹೆಲ್ಪ್ ಪುಸ್ತಕಗಳನ್ನು ಓದುತ್ತಾರೆ. ಆದರೆ ದುರಂತವೆಂದರೆ ಭಾರತದಂತಹ ದೇಶದಲ್ಲಿ ಕೆಲಸಕ್ಕೆ ಬಾರದ ಮನುಸ್ಮೃತಿ ಯಂತಹ ಕೃತಿಗಳ ಬಗ್ಗೆ ತಲೆತಲಾಂತರಗಳಿಂದ ಚರ್ಚೆ ನಡೆಯುತ್ತದೆ. ದೇಶಕ್ಕೆ, ಯುವಕರಿಗೆ ಮಾದರಿ ಆಗಬೇಕಾದ ಉದ್ಯಮಶೀಲತೆ, ಉದ್ಯಮಿಗಳ ಕಾಲೆಳೆದು ವಿಕೃತ ಆನಂದ ಪಡಲಾಗುತ್ತದೆ. ಈಗಲಾದರೂ ನಾವು ಮನುಸ್ಮೃತಿ ಬಿಟ್ಟು ಮನುಷ್ಯತ್ವದ ಸ್ಮೃತಿ ಉಳಿಸಿಕೊಳ್ಳುವ ಕೆಲಸ ಮಾಡಬೇಕಿದೆ.