Wednesday, 11th December 2024

ಎಷ್ಟೋ ಸಲ ನಮ್ಮ ಮಾತುಗಳೇ ಜುಗುಪ್ಸೆ ಮೂಡಿಸುತ್ತವೆ !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

ಯೋಗಿ ದುರ್ಲಭಜೀ ಮೌನಧರಿಸಿ ಸುಮಾರು ಹದಿಮೂರು ತಿಂಗಳುಗಳಾಗಿದ್ದವು. ಅವರು ಮೌನಕ್ಕೆ ಜಾರುವುದು ಹೊಸತೇನೂ ಅಲ್ಲ. ಮೊದಲಾಗಿದ್ದರೆ ವರ್ಷದಲ್ಲಿ ಒಂದೆರಡು ತಿಂಗಳು ಅವರು ಮೌನವ್ರತ ಮಾಡುತ್ತಿದ್ದರು. ಆದರೆ, ಈ ಸಲ ಸತತ ಹದಿಮೂರು ತಿಂಗಳು ಮೌನಧಾರಿಗಳಾಗಿದ್ದುದು ವಿಶೇಷವೇ. ‘ಯಾಕೆ ಯೋಗಿಜೀ, ಯಾರ ಮೇಲೆ ಕೋಪ? ಹೇಳದೇ ಕೇಳದೇ ಹೀಗೆ ಇಷ್ಟೊಂದು ದೀರ್ಘ ಅವಧಿಗೆ ಮೌನಕ್ಕೆ ಹೋದರೆ, ನಿಮ್ಮ ಜತೆ ಮಾತಾಡಲು ತವಕಿಸುವ ನನ್ನಂಥವರಿಗೆ ಏನಾಗಬೇಡ?’ ಎಂದು ಕೇಳಿದೆ.

ಯೋಗಿಜೀ ತಕ್ಷಣ ಏನನ್ನೂ ಹೇಳದೇ ನಿಧಾನವಾಗಿ ಮೌನ ಮುರಿದರು. ‘ನನಗೆ ಮಾತಿಗಿಂತ ಮೌನವೇ ಹೆಚ್ಚು ಆಪ್ತ ಎಂದು ಅನಿಸುತ್ತಿದೆ. ಅರ್ಥವಿಲ್ಲದ್ದೆಂದರೆ ಮಾತು. ನಮ್ಮ ಮಾತಿನಲ್ಲಿ ಅರ್ಧಕ್ಕರ್ಧ ಅವಾಸ್ತವಿಕ ಅಥವಾ ಸುಳ್ಳು. ಆದರೆ ನಮ್ಮ ಮೌನ ಸಂಪೂರ್ಣ ಸತ್ಯ. ಮೌನದ ಬಗ್ಗೆ ಅನೇಕರಿಗೆ ತಪ್ಪು ಕಲ್ಪನೆಯಿದೆ. ಮೌನವೆಂದರೂ ಮಾತುಕತೆಯೇ. ಆದರೆ ಅದು ನಾನು ನನ್ನ ಜತೆಗಷ್ಟೇ ನಡೆಸುವ ಸಂಭಾಷಣೆ. ಆಗ ನಮ್ಮ ಸಂಭಾಷಣೆಯನ್ನು ಯಾರೂ ಕೇಳಿಸಿಕೊಳ್ಳುವುದಿಲ್ಲ. ನಾನು ನನಗೆ ಸುಳ್ಳು ಹೇಳಬೇಕಾಗಿಲ್ಲ. ನಾನು ಅಪದ್ಧ ನುಡಿದು ನನ್ನನ್ನು ನಂಬಿಸಿಕೊಳ್ಳಬೇಕಿಲ್ಲ.

ಮೌನದಲ್ಲಿದ್ದಾಗ ಅಂದರೆ ಮೌನ ಸಂಭಾಷಣೆಯಲ್ಲಿದ್ದಾಗ ನಾನು ನನಗೆ ಸತ್ಯವಾಗಿರುತ್ತೇನೆ, ನಿಜವಾಗಿರುತ್ತೇನೆ. ಅಲ್ಲಿ ಕಲ್ಮಶ ಗಳಿರುವುದಿಲ್ಲ. ನನ್ನನ್ನು ಮೆಚ್ಚಿಸುವುದಕ್ಕಾಗಿ ನಾನು ಏನನ್ನೂ ಅತಿರಂಜಿತವಾಗಿ ಬಣ್ಣಿಸುವುದಿಲ್ಲ. ನನ್ನ ಬಗ್ಗೆ ಪೌರುಷ ಕೊಚ್ಚಿಕೊಳ್ಳುವುದಿಲ್ಲ. ನಾನು ಯಾರು ಎಂಬುದು ನನಗೆ ಹೆಚ್ಚು ಅರ್ಥವಾಗುವುದು ಮೌನದ’ ಎಂದು ಯೋಗಿಜೀ ಹೇಳಿದರು.
ಅವರು ಹೇಳುವುದೆಲ್ಲವನ್ನೂ ಕೇಳಿಸಿಕೊಂಡೆ, ಆದರೆ ಪ್ರತಿಕ್ರಿಯಿಸಲಿಲ್ಲ. ಒಂದು ನಿಮಿಷ ನಮ್ಮಿಬ್ಬರ ಮಧ್ಯೆ ಮೌನ ಆವರಿಸಿತು.

ಯೋಗಿಜೀ ಮಾತು ಮುಂದುವರಿಸಿದರು – ‘ನೋಡಿ, ತಕ್ಷಣ ನೀವು ನಿಮ್ಮ ಮನಸ್ಸಿನಲ್ಲಿ ಒಂದು ಕ್ಷಣ ಮೌನವನ್ನು ಸೃಷ್ಟಿ ಮಾಡಿ ಕೊಂಡಿರಿ. ಅದು ನಿಜವಾದ ನಿಮ್ಮ ಕ್ಷಣಗಳು. ಅದೇ ಮಾತಿಗಿಳಿದರೆ ಅದು ಕೃತಕ, ನಾಟಕ, ಅತಿರಂಜಕ. ನಮ್ಮನ್ನು ಭ್ರಮಿಸಿ ಕೊಳ್ಳುತ್ತೇವೆ. ಬೇರೆಯವರನ್ನು ಇಂಪ್ರೆಸ್ ಮಾಡಲು ನಾವು ಮಾತಾಡುತ್ತೇವೆ. ಆಗ ಅಯಾಚಿತವಾಗಿ ಸುಳ್ಳುಗಳು, ಕಪಟಗಳು ಹೊರಬರುತ್ತವೆ.

ನಮಗೆ ಗೊತ್ತಿಲ್ಲದೇ, ಮುಖವಾಡಗಳನ್ನು ಧರಿಸಿಕೊಳ್ಳುತ್ತೇವೆ. ಆರಂಭದ ಮಾತುಗಳು ಬೆಳೆಯುತ್ತಾ ಬೆಳೆಯುತ್ತಾ ಸುಳ್ಳುಗಳಾಗಿ ಪರಿವರ್ತಿತವಾಗುತ್ತವೆ. ಮಾತುಗಳು ನಮ್ಮದಲ್ಲದ ವ್ಯಕ್ತಿತ್ವವನ್ನು ರೂಪಿಸುತ್ತವೆ. ನಮ್ಮ ಮಾತಿನಿಂದ ನಮಗೆ ಬೇರೆಯ ಸ್ವರೂಪ ಬರುತ್ತದೆ.’ ನಾನು ಏನೂ ಮಾತಾಡಲಿಲ್ಲ ‘ನಿಮ್ಮ ಬಿಳಿಗಿರಿರಂಗನ ಬೆಟ್ಟದಲ್ಲಿ ನಿರ್ಮಲಾನಂದ ಎಂಬ ಸಂತರಿದ್ದರು. ಅವರು ತಮ್ಮನ್ನು ಪರಮಸುಖಿ ಎಂದು ಕರೆದುಕೊಳ್ಳುತ್ತಿದ್ದರು. ಅಲ್ಲಿಯೇ ಒಂದು ಸಣ್ಣ ಆಶ್ರಮ ಕಟ್ಟಿಕೊಂಡಿದ್ದರು. ಅವರು ಮೂಲತಃ ಸೇನೆಯಲ್ಲಿದ್ದು ಅಲ್ಲಿಗೆ ಬಂದವರು. ಅವರ ಆಶ್ರಮದಲ್ಲಿ ಒಂದು ಜಿಂಕೆಯ ಹೊರತಾಗಿ ನರಮನುಷ್ಯರಿರಲಿಲ್ಲ.

ಅವರು ಸುಮಾರು ಹದಿನೆಂಟು ವರ್ಷ ಯಾರ ಜತೆಯೂ ಮಾತಾಡಲಿಲ್ಲ. ಅವರು ಹೊರ ಜಗತ್ತಿನೊಂದಿಗೆ ಸಂಪರ್ಕದಲ್ಲಿದ್ದರು. ಆದರೆ ಯಾರ ಜತೆಯೂ ಮಾತಾಡುತ್ತಿರಲಿಲ್ಲ. ಅವರ ಆಶ್ರಮದಲ್ಲಿ ಅವರಿಗಾಗಿಯೇ ಒಂದು ಪೋಸ್ಟ್ ಡಬ್ಬವನ್ನು ಅಂಚೆ
ಇಲಾಖೆ ಇಟ್ಟಿತ್ತು. ಅವರನ್ನು ನೋಡಲು ಪ್ರತಿದಿನ ಕೆಲವರು ಬರುತ್ತಿದ್ದರು. ಅವರು ಯಾರ ಜತೆಯೂ ಮಾತಾಡುತ್ತಿರಲಿಲ್ಲ. ಬಂದವರನ್ನು ನೋಡಿ ಮಂದ ನಗು ಬೀರುತ್ತಿದ್ದರು. ಅದೇ ಅವರ ಸಂದೇಶವಾಗಿತ್ತು. ಏನಾದರೂ ಹೇಳಿ ಅಂದರೆ, ಸುಮ್ಮನೆ ನೋಡಿ ಲಘು ನಗೆ ಬೀರುತ್ತಿದ್ದರು. ಅವರ ಜತೆ ಎಷ್ಟು ಹೊತ್ತು ಬೇಕಾದರೂ ಇರಬಹುದಿತ್ತು.’ ಎಂದು ಯೋಗಿಜೀ ಹೇಳಲಾ ರಂಭಿಸಿದರು.

‘ನಿರ್ಮಲಾನಂದರು ಮೌನ ಸಡಿಲಿಸಿದ (ಮುರಿದ) ಸಂದರ್ಭದಲ್ಲಿ ನಾನು ಅವರನ್ನೊಮ್ಮೆ ಭೇಟಿ ಮಾಡಿದ್ದೆ. ನಾನು ಮೌನ ಮುರಿದು ತಪ್ಪು ಮಾಡಿದೆ. ನನ್ನ ಮೌನವನ್ನು ಮುಂದುವರಿಸಬೇಕಿತ್ತು. ಮಾತು ಬಹಳ ಹಿಂಸೆ. ಮೌನ ನೆಮ್ಮದಿ, ಮೌನ ಸಾಕ್ಷಾತ್ಕಾರ ಎಂದು ಹೇಳುತ್ತಿದ್ದರು. ಈ ದಿನಗಳಲ್ಲಿ ನಿಮಗೆ ನಿಮಗೆ ಏನೂ ಸಮಸ್ಯೆ ಆಗಲಿಲ್ಲವೇ? ಎಂದು ನಾನು ಕೇಳಿದ್ದಕ್ಕೆ, ‘ನಾನು ಮೌನವಾಗಿದ್ದೆ ಅಂತ ಯಾರು ಹೇಳಿದರು? ನಾನು ಪ್ರಕೃತಿಯ ಜತೆ ಮಾತಾಡುತ್ತಿದ್ದೆ. ಗಾಳಿ, ನೀರು, ಬೆಳಕು, ಬೆಂಕಿ, ಪ್ರಾಣಿ-ಪಕ್ಷಿಗಳ ಜತೆ ಮಾತಾಡುತ್ತಿದ್ದೆ. ನನಗೆ ಈ ಕಾಡಿನಲ್ಲಿ ಒಂಟಿ ಎಂದು ಅನಿಸಲೇ ಇಲ್ಲ. ಸಮಸ್ಯೆಯಾಗುವುದೇ ಮಾತಿನಿಂದ.
ದೇವರು ನಮಗೆ ಮಾತನ್ನು ಕೊಡದಿದ್ದರೆ, ನಾವಿರುವ ಗತ್ತು ಹೇಗಿರುತ್ತಿತ್ತು ಎಂದು ಕಲ್ಪನೆ ಮಾಡಿಕೊಳ್ಳಿ. ಆದರೂ ಮನುಷ್ಯ ಬಹಳ ವಿಚಿತ್ರ. ಮೊನ್ನೆ ಇಲ್ಲಿಗೆ ಮಾತೇ ಬರದ ಗಂಡ – ಹೆಂಡತಿ ಬಂದಿದ್ದರು.

ಅವರಿಬ್ಬರೂ ಪರಸ್ಪರ ಬೇರೆಯಾಗಲು ನಿರ್ಧರಿಸಿರುವುದಾಗಿ ಹೇಳಿದರು. ನನಗೆ ಜೋರು ನಗೆ ಬಂತು’ ಎಂದು ನಿರ್ಮಲಾನಂದರು
ಹೇಳಿದರು. ಮೊದಲ ಎರಡು ದಿನಗಳ ಮೌನದ ನಂತರ, ಅದೇ ಹೆಚ್ಚು ಆಪ್ತವಾಗುತ್ತಾ ಹೋಗುತ್ತದೆ. ಸಂವಹನ ಬೇಡ ಎನಿಸಲಾ ರಂಭಿಸುತ್ತದೆ. ಇದು ನಿಜವಾದ bliss’ ಎಂದು ಯೋಗಿಜೀ ಹೇಳಿದರು.

‘ಯೋಗಿಜೀ ಇಡೀ ಜಗತ್ತು ಮಾತು ನಿಲ್ಲಿಸಿ ಮೌನಕ್ಕೆ ಶರಣಾದರೆ ಏನಾಗುತ್ತದೆ?’ ಎಂದು ಮುಗ್ಧನಂತೆ ಕೇಳಿದೆ. ‘ನೋಡಿ, ಕರೋನಾ ವೈರಸ್ ಭೀತಿಯಿಂದ ಜನ ಮನೆಯಿಂದ ಹೊರ ಬರುತ್ತಿಲ್ಲ. ಇದರಿಂದ ನೂರಾರು ಕೋಟ್ಯಂತರ ವಾಹನಗಳು ಹೊಗೆ ಉಗುಳು ವುದು ನಿಂತಿದೆ. ತೈಲ ದಾಸ್ತಾನು ವೃದ್ಧಿಸಿದೆ. ಪರಿಸರದ ಮೇಲಿನ ಅನಗತ್ಯ ಒತ್ತಡ ಕಡಿಮೆಯಾಗುತ್ತಿದೆ. ಮನೆಯಲ್ಲಿ ಹೆಂಡತಿ – ಮಕ್ಕಳ ಜತೆ ಮಾತಾಡಲು ಪುರುಸೊತ್ತಿಲ್ಲದವರು ಈಗ ಮನೆಯಲ್ಲಿಯೇ ಉಳಿಯುವಂತಾಗಿದೆ. ಮನೆ ಅಡುಗೆ ರುಚಿಸಲಾರಂಭಿ ಸಿದೆ.

ಮೊಬೈಲ್ ಸಂಭಾಷಣೆ ಕಡಿಮೆಯಾಗಿದೆ. ಜನರು ಗಾಢವಾಗಿ ಯೋಚಿಸಲಾರಂಭಿಸಿದ್ದಾರೆ. ಇದು ಪ್ರಕೃತಿಯು ತನ್ನ ಮಟ್ಟವನ್ನು ಕಾಪಾಡುವ ರೀತಿ ಎಂದು ಜನರಿಗೆ ಅನಿಸಲಾರಂಭಿಸಿದೆ. ಮನುಷ್ಯರಿಗೆ ಮೌನದ ಮಹತ್ವ ಗೊತ್ತಿಲ್ಲದಿರುವುದೇ ಗದ್ದಲಕ್ಕೆ ಕಾರಣ.’
‘ಮೌನ ಇದ್ದಲ್ಲಿ ಕಲಹ ಇರಲು ಸಾಧ್ಯವೇ ಇಲ್ಲ. ಮೌನವಾಗಿ ಇರಲಾರದವನು ಮಾತಾಡುತ್ತಾನೆ. ಮಾತಾಡಲು ಬಾರದವನು ಜಗಳವಾಡುತ್ತಾನೆ. ಜಗಳವಾಡಲು ಬಾರದವನು ಹೊಡೆದಾಡುತ್ತಾನೆ. ಹೊಡೆದಾಡಲು ಬಾರದವನು ಯುದ್ಧಕ್ಕೆ ನಿಲ್ಲುತ್ತಾನೆ. ಆಗ ಸಾವು-ನೋವುಗಳಾಗುತ್ತವೆ.

ಆಗಲೂ ಯುದ್ಧ ನಿಲ್ಲದಿದ್ದರೆ ಪರಸ್ಪರರು ತಮ್ಮನ್ನೇ ನಾಶ ಮಾಡಿಕೊಳ್ಳುತ್ತಾರೆ. ಇದನ್ನು ನಾವು ಚರಿತ್ರೆಯಲ್ಲಿ ಆಗಾಗ
ಮರು ಕಳಿಸಿದ್ದನ್ನು ನೋಡಿದ್ದೇವೆ. ಮೌನವೇ ಎಡೆ ಆವರಿಸಿದರೆ, ಇವ್ಯಾವುದಕ್ಕೂ ಅವಕಾಶವೇ ಇಲ್ಲ. ಹಾಗಂತ ಯಾವತ್ತೂ ಮೌನವಾಗಿರು ವುದು ಈಗಿನ ಸಂದರ್ಭದಲ್ಲಿ ಸಾಧ್ಯವಿಲ್ಲ. ಆದರೆ ಮೌನದ ಮಹತ್ವ ಗೊತ್ತಾದರೆ, ಮಾತು ಹೆಚ್ಚು ಅರ್ಥವಂತಿಕೆ ಪಡೆಯುತ್ತಾ ಹೋಗುತ್ತದೆ. ಅದಕ್ಕಾಗಿ ನಾವು ವರ್ಷದಲ್ಲಿ ಕೆಲ ದಿನಗಳಾದರೂ ಮೌನಕ್ಕೆ ಶರಣಾಗಬೇಕು.’ ಎಂದು ಯೋಗಿಜೀ ಸರಳವಾಗಿ ವಿವರಿಸುತ್ತಿದ್ದರೆ ನಾನು ಮೌನಕ್ಕೆ ಜಾರಿದ್ದೆ.

‘ಮೌನ ರೂಢಿಯಾದರೆ ಮಾತು ವಜ್ಜೆ ಎನಿಸುತ್ತದೆ. ನಮ್ಮ ಮಾತೇ ನಮಗೆ ಅಸಹ್ಯ ಎನಿಸಲಾರಂಭಿಸುತ್ತದೆ. ಮಾತು ಕಲ್ಮಶ ಅಥವಾ ಶಬ್ದ ಮಾಲಿನ್ಯ ಎಂದೆನಿಸಲಾರಂಭಿಸುತ್ತದೆ. ಅದರಲ್ಲೂ ನಾವು ಆಡಿದ ಮಾತುಗಳೆಲ್ಲ ನಮ್ಮ ಸುತ್ತ ಮುತ್ತ ಶಾಶ್ವತವಾಗಿ ಇರುವಂತಿದ್ದರೆ ಅವು ಅದೆಂಥ ಕಸದ ರಾಶಿಯನ್ನು ಸೃಷ್ಟಿಸುತ್ತಿದ್ದವು? ಪ್ರಾಯಶಃ ಆ ರಾಶಿ ಮೌಂಟ್ ಎವರೆಸ್ಟ್ ಪರ್ವತಕ್ಕಿಂತ ಎತ್ತರಕ್ಕೆ ಬೆಳೆದಿರುತ್ತಿತ್ತು. ಅದನ್ನು ಮಾತಿನಲ್ಲಿಯೇ ಅರಮನೆ ಕಟ್ಟುವವ, ಪರಮ ಮಾತಿನ ಶೂರ ಮಾತ್ರ ಏರಲು ಮುಂದಾಗು ತ್ತಿದ್ದನೇನೋ? ಮಾತು ಜಾಡ್ಯ. ಮಾತು ಕಾಯಿಲೆ. ಅದೊಂದು ವಾಸಿಯಾಗದ ರೋಗ. ಕರೋನಾ ವೈರಸ್ ಇನ್ನು ಎರಡು ತಿಂಗಳಲ್ಲಿ ಕಾಲಕೇಳಬಹುದು. ಆದರೆ ಮಾತು ಹಾಗಲ್ಲ. ಅದು ಸದಾ ಇರುತ್ತದೆ. ಅದು ಇರುವ ತನಕ ಸಮಸ್ಯೆ ತಪ್ಪಿದ್ದಲ್ಲ. ಹಾಗೆಂದು ಯಾರೂ ಮಾತೇ ಆಡಬಾರದು ಎಂದು ಹೇಳುವುದಿಲ್ಲ.

ಮಾತು ಮತ್ತು ಮೌನದ ನಡುವೆ ಎಲ್ಲಾ ಒಂದು ಕಡೆ ನಾವು ಆಶ್ರಯ ಪಡೆಯಬಹುದು ಎಂದೆನಿಸುತ್ತದೆ. ಅದು ಸಾಧ್ಯವಿದೆ. ಒಂದು ವೇಳೆ ಸಾಧ್ಯವಿಲ್ಲದಿದ್ದರೆ ಸಾಧ್ಯ ಮಾಡಿಕೊಳ್ಳಬೇಕು.’ ಎಂದು ಯೋಗಿಜೀ ಹೇಳಿದರು. ‘ಈ ಹದಿಮೂರು ತಿಂಗಳಲ್ಲಿ ನೀವು ಬಹಳ ಮಿಸ್ ಮಾಡಿಕೊಂಡಿದ್ದೇನು?’ಎಂದು ಕೇಳಿದೆ. ‘ಏನೂ ಇಲ್ಲ. ನನ್ನ ಸಹಾಯಕರು ಆರಂಭದಲ್ಲಿ ನನ್ನ ಬಳಿ ಮೊಬೈಲ್ ‌ನ್ನು ಆಫ್ ಮಾಡಿ ಇಟ್ಟಿರುತ್ತಿದ್ದರು. ನಾನು ಸಿಮ್ ಕಾರ್ಡನ್ನು ಎಸೆದುಬಿಟ್ಟೆ. ನನಗೆ ಯಾರೂ ಫೋನ್ ಮಾಡುವುದಾಗಲಿ, ನಾನು ಬೇರೆಯವರಿಗೆ ಫೋನ್ ಮಾಡುವುದಾಗಲಿ ಅದರಿಂದ ನಿಂತು ಹೋಯಿತು. ವೈಫೈ ಸಂಪರ್ಕವನ್ನೂ ಕಡಿದು ಹಾಕುವಂತೆ ಹೇಳಿದೆ. ನನಗೆ ಅದರ ಅಗತ್ಯವೇ ಕಾಣಲಿಲ್ಲ.’

‘ಹಾಗಂತ ನನಗೆ ಜಗತ್ತಿನಲ್ಲಿ ನಡೆಯುವ ಎಲ್ಲ ವಿದ್ಯಮಾನಗಳೂ ಗೊತ್ತಾಗುತ್ತಿದ್ದವು. ಕೆಲವು ವಿದ್ಯಮಾನಗಳು ತಡವಾಗಿ ತಿಳಿಯು ತ್ತಿದ್ದವು. ಯಾವ ಕಂಪನಿಯ ಷೇರು ಎಷ್ಟು ಹೆಚ್ಚಿದೆ, ಕಮ್ಮಿಯಾಗಿದೆ ಎಂಬುದನ್ನು ಆ ಕ್ಷಣದಲ್ಲಿಯೇ ತಿಳಿದುಕೊಂಡು ನಾನು ಏನು ಮಾಡಬೇಕು? ಪ್ರಾಯಶಃ ಆ ಮಾಹಿತಿ ಷೇರು ಪೇಟೆಯಲ್ಲಿ ಹಣ ತೊಡಗಿಸುವವರಿಗೆ ಬೇಕಾದೀತು. ನನಗೆ ಅದರ ಅಗತ್ಯ ವಿಲ್ಲ.

ಡೊನಾಲ್ಡ ಟ್ರಂಪ್ ಮಾತಾಡಿದರೆ ಅದನ್ನು ಆ ಕ್ಷಣದಲ್ಲಿಯೇ ತಿಳಿದುಕೊಂಡು ನಾನೇನು ಮಾಡಬೇಕು? ಎಲ್ಲಾ ಮಾಹಿತಿ ಮೊದಲೇ ತಿಳಿದುಕೊಂಡು ನನಾಗೇನಾಗಬೇಕು? ಬಹಳ ಜನರಿಗೆ ಇಂಥ ಮಾಹಿತಿಯಿಂದ ಏನೂ ಪ್ರಯೋಜನ ಇಲ್ಲ. ಆದರೆ ಎಲ್ಲರಿಗೂ ಮೊದಲು ತಮಗೆ ಗೊತ್ತಾಗಬೇಕೆಂಬ ಚಪಲ. ಅದಕ್ಕಾಗಿ ಎಷ್ಟು ಖರ್ಚು ಮಾಡಲು ಸಹ ಹಿಂದೇಟು ಹಾಕುವುದಿಲ್ಲ.’
‘ಬಹುತೇಕ ಮಾಹಿತಿ ನಮಗೆ ಪ್ರಯೋಜನ ಇಲ್ಲದ್ದು.

ಅವನ್ನು ತಿಳಿದು ನಾವು ಮಾಡುವಂಥದ್ದೇನೂ ಇಲ್ಲ. ನಿಮ್ಮಂಥ ಪತ್ರಿಕಾ ಸಂಪಾದಕರಿಗೆ ಎಲ್ಲಾ ವಿಷಯಗಳೂ ಬೇಕಾಗಬಹುದು. ಅದಕ್ಕಾಗಿ ನೀವು ಊರ, ಜಗತ್ತಿನ ವಿಷಯಗಳನ್ನೆ ಕೊಡುತ್ತೀರಿ. ನಿಮ್ಮದು ಒಂಥರಾ ಸೂಪರ್ ಬಜಾರ್ ಇದ್ದ ಹಾಗೆ. ಗ್ರಾಹಕರು ಬೇಕಾಗಿದ್ದಕ್ಕಿಂತ ಅಲ್ಲಿ ಬೇಡವಾಗಿದ್ದನ್ನೂ ಖರೀದಿಸುತ್ತಾರೆ. ಪತ್ರಿಕೆಯಲ್ಲಿ ನೀವು ನೀಡುವ ಎ ಸುದ್ದಿ ನನಗೆ ಬೇಕಿಲ್ಲ. ನೀವು ಕೊಟ್ಟಿದ್ದೀರೆಂದು ನಾವು ಓದುತ್ತೇವೆ. ಅವನ್ನೆ ತಿಳಿದುಕೊಂಡು ನನಗೇನಾಗಬೇಕು?’ ‘ನನಗೆ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ವಿಧಿವಶರಾದ ಸಂಗತಿಯೇ ಗೊತ್ತಿರಲಿಲ್ಲ. ಮೊನ್ನೆಯಷ್ಟೇ ತಿಳಿಯಿತು.

ನಾನು ಅವರ ಸ್ಮರಣೆಯಲ್ಲಿದ್ದೆ. ನನಗೆ ಅದರಿಂದ ಏನೂ ಹಾನಿ ಆಗಲಿಲ್ಲ. ಒಂದು ವೇಳೆ ಅವರು ವಿಧಿವಶರಾದ ದಿನವೇ ತಿಳಿದಿ ದ್ದರೆ, ನನ್ನಲ್ಲಿ ಈಗ ಅಂಥ ವ್ಯತ್ಯಾಸ ಇರುತ್ತಿರಲಿಲ್ಲ. ಕೆಲವು ವಿಷಯ ತಿಳಿದುಕೊಂಡರೆ, ತಿಳಿದುಕೊಳ್ಳದಿದ್ದರೆ ಹೇಳಿಕೊಳ್ಳುವಂಥ ವ್ಯತ್ಯಾಸ ಆಗುವುದಿಲ್ಲ. ಆದರೆ ಈ ಮೊಬೈಲ್ ಬಂದ ನಂತರ ಎಲ್ಲರಲ್ಲೂ ‘ಮೊದಲು ಮ್ಮ’ ಎಂದು ಹೇಳುವ ಟಿವಿ ಚಾನಲ್ಲು ಗಳಂತೆ, ಮೊದಲು ನನಗೆ ಗೊತ್ತಾಗಬೇಕು ಎಂದು ಪೈಪೋಟಿಗೆ ಬಿದ್ದವರಂತೆ, ವರ್ತಿಸುತ್ತಿದ್ದೇವೆ. ಹೀಗಾಗಿ ಜನ ಸದಾ ಮೊಬೈಲ,
ವಾಟ್ಸಪ್‌ನಲ್ಲಿ ಮುಳುಗಿರುತ್ತಾರೆ. ಅದರಿಂದ ನೆಮ್ಮದಿ ಹಾಳು. ಸಮಯ ಪೋಲು. ಹೀಗಾಗಿ ಎಲ್ಲರೂ ಬ್ಯುಸಿ.

ಯಾರ ಬಳಿಯೂ ಸಮಯ ಇಲ್ಲ. ಸಮಾಧಾನವೂ ಇಲ್ಲ. ರಾತ್ರಿಯೆ ಮೊಬೈಲಿನಲ್ಲಿ ಕಾಲ ಕಳೆಯುತ್ತಿರುತ್ತಾರೆ. ಮಾತು ತನ್ನ ಅಸಹ್ಯದ ಪರಮಾವಽ ಮೀರಿಸಿದ ಖ್ಯಾತಿ ಮತ್ತು ಅಪಖ್ಯಾತಿ ಮೊಬೈಲ್‌ಗೆ ಸೇರಬೇಕು.’ ‘ಮೊಬೈಲಿನಲ್ಲಿ ಎಲ್ಲರೂ ಸುಳ್ಳಿನಿಂದಲೇ ಮಾತು ಆರಂಭಿಸುತ್ತಾರೆ. ತಾವು ಇರುವ ಜಾಗದ ಬಗ್ಗೆ ಎಲ್ಲರೂ ಸುಳ್ಳು ಹೇಳುತ್ತಾರೆ. ಜನರಿಗೆ ಹೊಸ ಹೊಸ ರೀತಿಯಲ್ಲಿ ಹೇಗೆ ಸುಳ್ಳು ಹೇಳಬೇಕು ಎಂಬುದನ್ನು ಕಲಿಸಿದ್ದೇ ಮೊಬೈಲ. ಜನ ಎಗ್ಗಿಲ್ಲದೇ ಸುಳ್ಳು ಹೇಳಿಯೂ ತಮ್ಮ ಬಗ್ಗೆ ಅಭಿಮಾನಪಟ್ಟು ಕೊಳ್ಳುವಂತೆ ಮಾಡಿದ್ದೂ ಈ ಮೊಬೈಲೇ. ಮೊದಲಾಗಿದ್ದರೆ ಸುಳ್ಳು ಹೇಳಿದರೆ ಅಪರಾಽ ಪ್ರಜ್ಞೆ ಕಾಡುತ್ತಿತ್ತು. ಆದರೆ ಈಗ ಹಾಗಲ್ಲ. ಜನ ಸರಣಿ ಸುಳ್ಳುಗಳನ್ನು ಹೇಳುತ್ತಾರೆ ಮತ್ತು ಅದರಿಂದ ಬೀಗುತ್ತಾರೆ. ಮೊಬೈಲ್ ಅವರಿಂದ ಹೇಳಬಾರದ ಮಾತುಗಳನ್ನು ಹೇಳಿಸುತ್ತಿದೆ.’

‘ಮಾತು ತನ್ನ ಸಭ್ಯತೆ ಮೀರುತ್ತಿದೆ. ತನ್ನ ಉದ್ದೇಶ ಕಳೆದುಕೊಳ್ಳುತ್ತಿದೆ. ಒಂದು ಸುಳ್ಳು ಒಂದು ಕೊಲೆಗೆ ಸಮಾನ ಎಂಬ ನಿಯಮ ಇದ್ದಿದ್ದರೆ, ಇಂದು ಒಬ್ಬೊಬ್ಬರು ಪ್ರತಿದಿನ ಕನಿಷ್ಠ ಮೂವತ್ತು – ನಲವತ್ತು ಮರ್ಡರ್ ಮಾಡಿರುತ್ತಿದ್ದರು. ಜಗತ್ತಿನ ಜನಸಂಖ್ಯೆ ಇಷ್ಟೊತ್ತಿಗೆ ಅರ್ಧದಷ್ಟು ಮಟಾಷ್! ಆದರೆ ಯಾರಿಗೂ ಏನೂ ಅನಿಸುತ್ತಿಲ್ಲ. ಎಲ್ಲರೂ ಅದೇ ಸರಿಯಾದ ವಿಧಾನ ಎಂದುಕೊಂಡಿ ದ್ದಾರೆ.

ಹೀಗಾಗಿ ಮಾತು ಹೆಚ್ಚು ಹೆಚ್ಚು ಅಸಹನೀಯವಾಗುತ್ತಿದೆ. ನಮ್ಮೆಲ್ಲ ವಿಕಾರಗಳಿಗೆ ಅತಿಯಾದ ಮಾತು ಸಹ ಮುಖ್ಯ ಕಾರಣ ವಾಗಿದೆ. ಕೈಯಲ್ಲಿ ಮೊಬೈಲ್ ಇದ್ದರೆ, ಮಾತಿಗೆ ನಿಂತವನು ಸ್ಥಳದ ಎಷ್ಟು ಸುಳ್ಳುಗಳನ್ನಾದರೂ ಸೃಷ್ಟಿಸಬಲ್ಲ. ಇದು ತೀವ್ರ
ಅಪಾಯಕಾರಿ ನಡೆ. ಮೊಬೈಲ್ ಸುಳ್ಳು ಹೇಳಲು ಕಲಿಸುತ್ತದೆ ಮತ್ತು ಪ್ರೇರೇಪಿಸುತ್ತದೆ. ಇದರಲ್ಲಿ ಖುಷಿ ಕಾಣುವಂತೆ ಮಾಡುತ್ತದೆ. ಇದರ ವ್ಯಾಮೋಹಕ್ಕೆ ಬಿದ್ದು ಜನ ಸುಳ್ಳು ಹೇಳುವುದನ್ನೇ ಚಟ ಅಥವಾ ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಈ ಸುಳ್ಳು ಕರೋನಾ ಗಿಂತ ಅಪಾಯಕಾರಿ.

ಕಾರಣ ಯಾರು ಯಾರಿಗೆ ಬೇಕಾದರೂ ಎಂಥ ಸುಳ್ಳುಗಳನ್ನು ಹೇಳಬಹುದು. ಸಂದರ್ಭ, ಅವಕಾಶ ನೋಡಿ ನೀವು ಬೆಂಗಳೂರಿ ನಲ್ಲಿದ್ದು ಕಾಶ್ಮೀರದಲ್ಲಿದ್ದೇನೆ ಎಂದು ಹೇಳಬಹುದು ಮತ್ತು ಅದನ್ನು ನಿಜ ಎಂದು ನಂಬಿಸಬಹುದು. ಮನೆಯಲ್ಲಿದ್ದು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಬಹುದು. ಮನಸ್ಸಿಗೆ ಬಂದ ಸುಳ್ಳು ಹೇಳಿ ದಕ್ಕಿಸಿಕೊಳ್ಳಬಹುದು. ಮಾತಿಗೆ ಬೇಕಾದ ಶಿಸ್ತು, ಪ್ರಾಮಾಣಿಕತೆ, ಬದ್ಧತೆ ಕಳೆದು ಹೋಗುತ್ತಿದೆ.

ಈ ಕಾರಣದಿಂದ ನನಗೆ ಮೌನ ವಿಪರೀತ ಇಷ್ಟ ಮತ್ತು ಅನಿವಾರ್ಯ ಅಗತ್ಯ ಎಂದೆನಿಸುತ್ತಿದೆ.’ ಯೋಗಿಜೀ ಮಾತು ನಿಲ್ಲಿಸಿದರು. ನಾನು ಮಾತು ಕಳೆದುಕೊಂಡಿದ್ದೆ. ನಂತರ ಇಬ್ಬರ ನಡುವೆ ಮೌನವಿತ್ತು.