ದಾಸ್ ಕ್ಯಾಪಿಟಲ್
ಟಿ.ದೇವಿದಾಸ್, ಬರಹಗಾರ, ಶಿಕ್ಷಕ
ಪುಣೆಯ ಪಕ್ಕದಲ್ಲಿ ರಾಂಝಿಯಾ ಎಂಬ ಹಳ್ಳಿಯ ಪಟೇಲನೊಬ್ಬ ಓರ್ವ ವಿಧವೆಯನ್ನು ಮಾನಭಂಗ ಮಾಡಿದ ಸುದ್ದಿ ಆ ಪ್ರಾಂತದ ಉಸ್ತುವಾರಿ ಹೊತ್ತಿದ್ದ, ಬಿಜಾಪುರದ ಸರದಾರನೊಬ್ಬನ ಮಗನ ಕಿವಿಗೆ ಬಿತ್ತು.
ವಿಧರ್ಮೀಯರ ದುರಾಡಳಿತದಿಂದಾಗಿ ಇಂಥ ಹೀನಕೃತ್ಯಗಳು ಮಾಮೂಲಾಗಿದ್ದಂಥ ಆ ಸಂದರ್ಭದಲ್ಲಿ ತನ್ನನ್ನು ಕೇಳುವ ರಾರು? ಎಂಬ ಗರ್ವ ಆ ಪಟೇಲನದು. ಆದರೆ ಕೂಡಲೆ ಸರದಾರನ ಮಗನ ಆಜ್ಞೆ ಹೊರಟಿತು. ಕಾವಲು ಪಡೆಯವರು ಹಳ್ಳಿಗೆ ಧಾವಿಸಿ ಆ ಪಾಪಿಯನ್ನು ನ್ಯಾಯಸ್ಥಾನಕ್ಕೆ ಎಳೆದು ತಂದರು. ಸರದಾರನ ಮಗ ತನ್ನ ತಾಯಿ, ಗುರು, ಪ್ರಧಾನಿ ಮತ್ತು ಪುರಜನರು ಸೇರಿದ್ದ ನ್ಯಾಯಸಭೆಯಲ್ಲಿ ಪಟೇಲನ ವಿಚಾರಣೆ ನಡೆಸಿದ.
ಪಟೇಲನ ತಪ್ಪು ಸಾಬೀತಾಯಿತು, ಇನ್ನು ಶಿಕ್ಷೆಯನ್ನು ಪ್ರಕಟಿಸುವುದೊಂದೇ ಬಾಕಿ. ಎಲ್ಲರ ಚಿತ್ತವೂ ಸರದಾರನ ಮಗನ ಕಡೆಯೇ. ಗಾದಿಯ ಮೇಲಿಂದ ತೀಕ್ಷ್ಣವಾದ ದನಿಯಲ್ಲಿ ತೀರ್ಪು ಹೊರಬಿತ್ತು. ಅಪರಾಧಿಯ ಎರಡೂ ಕೈ ಮತ್ತು ಕಾಲುಗಳನ್ನು ಕತ್ತರಿಸಿ ಹಾಕಿ. ಕ್ಷಣಕಾಲ ಎಲ್ಲರೂ ಬೆಚ್ಚಿದರು! ಇಂಥ ಕಠೋರ ತೀರ್ಪಿತ್ತ ಸರದಾರನ ಮಗನ ವಯಸ್ಸಾದರೂ ಎಷ್ಟು ಗೊತ್ತೇನು? ಕೇವಲ ಹದಿನಾಕು.
ಅಬ್ಬಾ! ಹದಿನಾಕನೇ ವಯಸ್ಸಿಗೆ ಇಂಥ ಪಾಪಕೃತ್ಯಗಳಿಗೆ ಸರಿಸಮನಾದ, ಭವಿಷ್ಯದಲ್ಲಿ ಯಾವೊಬ್ಬನೂ ಇಂಥ ಹೀನಕೃತ್ಯಕ್ಕೆ ಕೈಹಾಕಬಾರದೆಂಬ ಪಾಠವನ್ನು ಸಾರುವಂಥ ದೂರದೃಷ್ಟಿಯುಳ್ಳ ತೀರ್ಪನ್ನು ನೀಡುವ ಬುದ್ಧಿಮತ್ತೆ! ಸೀಯನ್ನು ಮಾತೃಸ್ಥಾನ ದಲ್ಲಿಟ್ಟು ಪೂಜಿಸುವ ಈ ಪವಿತ್ರನೆಲದ ಶ್ರೇಷ್ಠ ಸಂಸ್ಕೃತಿಯನ್ನು ಧಿಕ್ಕರಿಸುವವರಿಗೆ ತನ್ನ ತೀರ್ಪಿನ ಮೂಲಕವೆ ಎಚ್ಚರಿಕೆಯನ್ನು ಸ್ಪಷ್ಟವಾಗಿ ರವಾನಿಸಿದ ಹದಿನಾಕರ ಆ ಪೋರನೇ ಶಿವಾಜಿ!
ಶಿವಾಜಿಯ ಕಾಲ 17ನೇ ಶತಮಾನ. ಆಗಿನ ಕಾಲಘಟ್ಟದಲ್ಲಿ ನಿಂತು ಅವನನ್ನು ಕಾಣಬೇಕು. ಯಾವ ನೆಲದಲ್ಲಿ ಸ್ತ್ರೀಯನ್ನು, ಗೋಮಾತೆಯನ್ನು ಪೂಜ್ಯಭಾವನೆ ಯಿಂದ ಕಾಣಲಾಗುತ್ತಿತ್ತೋ, ಅಂಥ ಪುಣ್ಯಭೂಮಿಯಲ್ಲಿ ವಿಧರ್ಮೀಯರ ಆಕ್ರಮಣ ಹಾಗೂ ದುರಾಡಳಿತದ ಫಲವಾಗಿ ಮಹಿಳೆಯರ ಮಾನಭಂಗ, ದೇವಳಗಳ ಧ್ವಂಸ, ಗೋವಧೆಗಳು ಎಗ್ಗಿಲ್ಲದೆ ನಡೆಯುತ್ತಿದ್ದದ್ದು ಒಂದೆಡೆ, ಇನ್ನೂ ಹೇಸಿಗೆಯೆಂಬಂತೆ ಈ ದುಷ್ಕೃತ್ಯಗಳನ್ನೆಲ್ಲ ನೋಡಿಯೂ ವಿದೇಶಿ, ವಿಧರ್ಮೀರಾಜರ ಪಾದ ಚಪ್ಪರಿಸುತ್ತಿದ್ದ ರಜಪೂತ
ದೊರೆಗಳು ಮತ್ತೊಂದೆಡೆ.
ಇಂಥ ವಿಷಮ ಪರಿಸ್ಥಿತಿಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿ, ಸ್ವದೇಶಿ ಬಾಂಧವರಿಗೆ ತಮ್ಮತನದ ಅರಿವನ್ನು ಮೂಡಿಸಿ, ಧರ್ಮ ಜಾಗೃತಿಯನ್ನು ಬಡಿದೆಬ್ಬಿಸುವ ಆವಶ್ಯಕತೆಯನ್ನು ಮನಗಂಡು 13ನೆಯ ವಯಸ್ಸಿಗೆ ಗೆಳೆಯರೊಡಗೂಡಿ ಸ್ವರಾಜ್ಯದ ಧೃಢ ಸಂಕಲ್ಪವನ್ನು ತೊಟ್ಟವ ಶಿವಾಜಿ. ಬಾಲ್ಯದಲ್ಲಿ ತಾಯಿಯಿಂದ ಪುರಾಣದ ವೀರಕಥೆಗಳನ್ನು ಕೇಳುತ್ತಾ, ತನ್ನ ಗೆಳೆಯರಾದ ಮಾವಳಿ ಹುಡುಗರೊಡನೆ ಕಾಡು-ಮೇಡು ಅಲೆದು ಆಡುತ್ತಾ ಬೆಳೆದ ಶಿವಾಜಿಯ ವೀರತ್ವವನ್ನು, ನಾಲ್ಕು ಗೋಡೆಗಳ ನಡುವೆ
ಮೂರ್ಖಪೆಟ್ಟಿಗೆಯ ಎದುರು ಕಾರ್ಟೂನುಗಳನ್ನು ನೋಡಿ ಬೆಳೆದ ನಾವುಗಳು ಕೇಳಿದಾಗ ಆಶ್ಚರ್ಯವಾಗುವುದು ಸಹಜವೆ ತಾನೆ? ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ.
ಶಿವಾಜಿಯ ತಂದೆ ಶಹಾಜಿ, ಬಿಜಾಪುರ ಬಾದಶಹನ ಅಡಿಯಲ್ಲಿದ್ದ ಹಿರಿಯ ಸರದಾರ. ಬೆಂಗಳೂರು, ಪುಣೆ ಸೇರಿದಂತೆ ಪ್ರಮುಖ ಜಹಗೀರುಗಳ ಉಸ್ತುವಾರಿ ಹೊತ್ತವನು. ಜಹಗೀರನ ಮಗನಾಗಿ ಅಪ್ಪನ ಹೆಸರಲ್ಲಿ ವೈಭವಯುತ ಜೀವನವನ್ನು ನಡೆಸುವುದರ ಬದಲು, ಕಾಡಿನಲ್ಲಿರುವ ಅರಬೆತ್ತಲೆ ಮಾವಳಿ ಹುಡುಗರೊಂದಿಗೆ ಕಾಡುಗಳನ್ನು ಸುತ್ತುತ್ತಾ ಆಟಗಳನ್ನಾಡಿ ಬೆಳೆಯುತ್ತಲೇ
ಸಮಾಜ ಯಾರನ್ನು ಕೈಲಾಗದವರೆಂದು ದೂರವಿರಿಸಿತ್ತೋ ಅಂತವರಿಂದಲೆ ಸ್ವರಾಜ್ಯ ಸ್ಥಾಪನೆ ಸಾಧ್ಯವೆಂದು ತೋರಿಸಿದವ ಶಿವಾಜಿ.
ಹೌದು, ಇಂದಿನ ಕಾಲಘಟ್ಟದಲ್ಲಿ ಶಿವಾಜಿ ಎಷ್ಟು ಪ್ರಸ್ತುತ? ಎಂಬ ಪ್ರಶ್ನೆ ನಮ್ಮಲ್ಲಿ ಮೂಡಬಹುದು. ಭಾರತದಲ್ಲಿ ಇಂದು ಅಫ್ಜಲ್ಖಾಲನರಿಲ್ಲ, ಬಿಜಾಪುರದ ಬಾದಶಾಹರಿಲ್ಲ, ಬ್ರಿಟಿಷ್, ಡಚ್, ಪೋರ್ಚುಗೀಸರಿಲ್ಲ, ಔರಂಗಜೇಬನೂ ಇಲ್ಲ. ಆದರೆ,
ಇವರೆಲ್ಲರ ಜಾಗದಲ್ಲಿ ಇಂದು ಭಯೋತ್ಪಾದನೆ, ಅಸಮಾನತೆ, ಜಾತೀಯತೆ, ಬಡತನ, ಭ್ರಷ್ಟಾಚಾರ, ಹೊಲಸು ರಾಜಕಾರಣ, ಅರಾಷ್ಟ್ರೀಯತೆಗಳು ತಳವೂರಿವೆ.
ಹೌದು, ಇಂದು ಶಿವಾಜಿಯ ಖಡ್ಗದ ಅವಶ್ಯಕತೆಯಿಲ್ಲದಿರಬಹುದು, ಆದರೆ ಈ ಸಮಸ್ಯೆಗಳನ್ನು ಸಂಹರಿಸಲು, ಸಮಾಜದ ನೋವಿಗೆ ಶೀಘ್ರ ಸ್ಪಂದಿಸುವ, ಈ ಸಮಾಜವೂ ತನ್ನದೆ ಎಂದು ಭಾವಿಸುವ, ಸ್ವರಾಜ್ಯದ ಮಾದರಿಯ ವಿಶ್ವಗುರು ಭಾರತದ ನಿರ್ಮಾಣಕ್ಕೆ ಕಂಕಣಬದ್ಧರಾಗಬಲ್ಲಂಥ ಮನಸ್ಥಿತಿಯಿರುವ ಶಿವಾಜಿಗಳ ಅವಶ್ಯಕತೆಯಿದ್ದೇ ಇದೆ. ಮುಖ್ಯವಾಗಿ, ಶಿವಾಜಿ
ಮಹಾರಾಜರನ್ನು ಕೇವಲ ಒಂದು ರಾಜ್ಯಕ್ಕೆ, ಒಂದು ಪಕ್ಷಕ್ಕೆ, ಒಂದು ಧರ್ಮಕ್ಕೆ, ಒಂದು ಜಾತಿಗೆ ಸೀಮಿತಗೊಳಿಸದೆ ಅವರ
ಸಾಹಸದ ಜೀವನ ಇಂದಿಗೆಷ್ಟು ಪ್ರಸ್ತುತವೆಂಬುದರ ಕುರಿತು ತಾರ್ಕಿಕವಾದ, ನಿಷ್ಪಕ್ಷಪಾತವಾದ ಅಧ್ಯಯನವಾಗಬೇಕು.
ಕೇವಲ ಶಿವಾಜಿಯ ಹೆಸರಲ್ಲಿ ದೊಡ್ಡ ದೊಡ್ಡ ಕಟೌಟ್‌ಗಳನ್ನು ಹಾಕುವುದು, ಪ್ರತಿಮೆಗಳನ್ನು ಕಟ್ಟುವುದಷ್ಟೇ ಅಲ್ಲದೆ
ಶಿವಾಜಿಯ ಆದರ್ಶಗಳನ್ನು ಅನುಸರಿಸಬೇಕಿದೆ. ಶಿವಾಜಿ ನಮ್ಮ ಮನೆ-ಮನಗಳನ್ನು ಪ್ರವೇಶಿಸಬೇಕು. ಜೀಜಾಬಾಯಿಯಂತೆ ಪ್ರತಿಮನೆಯಲ್ಲೂ ತಾಯಂದಿರು ಮಕ್ಕಳಿಗೆ ಪುರಾಣೇತಿಹಾಸಗಳ ಕಥೆಗಳನ್ನು ಹೇಳುವ ಅಭ್ಯಾಸ ಬೆಳೆಸಿಕೊಳ್ಳಬೇಕಿದೆ.
ಕಾಶೀ ಕೀ ಕಲಾ ಜಾತೀ, ಮಥುರಾ ಕೀ ಮಸ್ಜಿದ್ ಬನ್ ತೀ, ಅಗರ್ ಶಿವಾಜಿ ನಾ ಹೋತೇತೋ ಸಬ್ ಕೀ ಸುನ್ನತ್ ಹೋತೀ- ಇದು ಕವಿ ಭೂಷಣರು ಆಡಿದ ಮಾತು. ಕಾಶೀ ಕಳಾಹೀನವಾಗುತ್ತಿತ್ತು, ಮಥುರಾ ಮಸೀದಿಯಾಗುತ್ತಿತ್ತು, ಅಕಸ್ಮಾತ್ ಶಿವಾಜಿ ಹುಟ್ಟದೇ ಇರುತ್ತಿದ್ದರೆ ಈ ರಾಷ್ಟ್ರ ಆಕ್ರಮಣಕಾರಿಗಳ ಅಟ್ಟಹಾಸಕ್ಕೆ ತುತ್ತಾಗಿ ಮುಸಲ್ಮಾನ ಸಂತತಿಯನ್ನು ಅನುಸರಿಸಿರುತ್ತಿತ್ತು. ಈ ಸಮಯದಲ್ಲಿ ಹಿಂದೂ ಸಾಮ್ರಾಜ್ಯದ ಉದ್ಧಾರಕ್ಕಾಗಿ ಎದ್ದು ಬಂದ ಶಿವಾಂಶ ಆತ ಎಂದು ಹೇಳಿದ್ದರು. ಈ ಮಾತನ್ನು ಸಿಡಿಲ ಸಂತ ಸ್ವಾಮಿ ವಿವೇಕಾನಂದರೂ ಉಲ್ಲೇಖಿಸಿದ್ದರು.
ಶಿವಾಜಿಯ ಜೀವನವೇ ಒಂದು ಅದ್ಭುತ. ಮೀರಿಸಲಾಗದ ವ್ಯಕ್ತಿತ್ವ. ಭರತಖಂಡ ಮಾತ್ರವಲ್ಲದೆ ಇಡೀ ಜಗತ್ತೇ ಶಿವಾಜಿಯ ಈ
ಅಪ್ರತಿಮ ಸಾಧನೆಯನ್ನು ಇಂದಿಗೂ ತನ್ನ ಆಡಳಿತದಲ್ಲಿ ಪಾಲಿಸುತ್ತಿದೆಯೆಂದರೆ ಅಚ್ಚರಿಯಾದೀತು! ವಿಯೆಟ್ನಾಂ ಯುದ್ಧ ವನ್ನು ಗೆಲ್ಲಲು ಶಿವಾಜಿಯ ಗೆರಿಲ್ಲಾ ಯುದ್ಧತಂತ್ರವನ್ನು ಅನುಸರಿಸಿತ್ತು. ಶಿವಾಜಿ ಎಂದಾಕ್ಷಣ ನೆನಪಾಗುವುದು ಕೆಚ್ಚೆದೆಯ ಹೋರಾಟ, ಹಿಂದೂ ಸಾಮ್ರಾಜ್ಯವನ್ನು ಮರುಸ್ಥಾಪನೆ, ಮೊಘಲರ ಹುಟ್ಟಡಗಿಸಿದ್ದು, ಔರಂಗಜೇಬನ ಆಸ್ಥಾನಕ್ಕೆ ನುಗ್ಗಿ ಮೋಸ ದಿಂದ ಕೊಲ್ಲಲು ಬಂದವನ ಎದೆಬಗೆದು ಸಂಹಾರ ಮಾಡಿದ ರೋಚಕ ಕಥೆಗಳು ಮಾತ್ರವಲ್ಲದೆ ಶಿವಾಜಿಯು ತನ್ನ ತಾಯಿ ಯೊಂದಿಗೆ ಇಟ್ಟುಕೊಂಡಿದ್ದ ತಾದಾತ್ಮ್ಯ, ಮಾತೃಧರ್ಮ, ಮಾತೃವಚನ ಪಾಲನೆ, ಮಾತೃವಾತ್ಸಲ್ಯವನ್ನು ನೆನಪಿಸಬೇಕು.
ತಾಯ ಹಂಬಲದಂತೆ, ಮೊಘಲರ ಎದೆಬಗೆದು ಅಲ್ಲಿ ಕೇಸರಿ ಧ್ವಜವನ್ನು ನೆಟ್ಟು ಹಿಂದೂ ಸ್ವರಾಜ್ಯವನ್ನು ಪ್ರತಿಷ್ಠಾಪಿಸಿದವನು ಶಿವಾಜಿ. ಹಿಂದೂ ಧರ್ಮ ಪ್ರತಿಷ್ಠಾಯೇ ಸಿದ್ಧ ಖಡ್ಗ ಸದಾವಯಂ-ಅಂದರೆ ಹಿಂದೂ ಧರ್ಮವನ್ನು ಈ ಭಾರತದಲ್ಲಿ ಮತ್ತೆ ಪ್ರತಿಷ್ಠಾಪನೆ ಮಾಡಲು ನನ್ನ ಖಡ್ಗ ಸದಾ ಸಿದ್ಧವಾಗಿರುತ್ತದೆ. ಶಿವಾಜಿ ಯಾವತ್ತೂ ತಮ್ಮ ಸಿಂಹಾನಕ್ಕೆ ಅಂಟಿ ಕುಳಿತವನಲ್ಲ. ಶಿವಾಜಿಗೆ ಸಮರ್ಥ ರಾಮದಾಸರು ಎಂಬ ಓರ್ವ ಶ್ರೇಷ್ಟ ಗುರುಗಳಿದ್ದರು.
ಇಬ್ಬರ ಒಡನಾಟ ಬಹು ಅದ್ಭುತ. ಶಿವಾಜಿಗೆ ಗುರುಗಳ ಮೇಲೆ ಬಲು ಭಕ್ತಿ, ಗೌರವ, ಅನನ್ಯವಾದ ಪ್ರೀತಿ. ತಾನೊಬ್ಬ ರಾಜನೆಂಬ ಅಹಂಕಾರವೇ ಇಲ್ಲದೆ ಸಮರ್ಥ ರಾಮದಾಸರ ಬಳಿ ಶಿವಾಜಿ ಆಶೀರ್ವಾದವನ್ನು ಬೇಡುತ್ತಿದ್ದ. ಸಾಮ್ರಾಜ್ಯಕ್ಕಿಂತ ಗುರುಗಳ
ಮೇಲಿನ ಪ್ರೇಮವೇ ಹೆಚ್ಚಿತ್ತು. ಗುರುವಿಗಾಗಿ ಯಾವ ಕಾರ್ಯಕ್ಕೂ, ಯಾವ ತ್ಯಾಗಕ್ಕೂ ಶಿವಾಜಿ ಸಿದ್ದನಿದ್ಧ. ಅನೇಕ ಬಾರಿ ಶಿವಾಜಿಗೆ ಜೀವನದಲ್ಲಿ ವೈರಾಗ್ಯ ಕಾಡುತ್ತಿತ್ತಂತೆ. ಸನ್ಯಾಸತ್ವದ ವಾಂಛೆ. ವೈರಾಗ್ಯ ಬಂದಾಗಲೆ ತನ್ನ ಪರಮ ಗುರುಗಳಾದ ಸಮರ್ಥ ರಾಮ ದಾಸರ ಬಳಿ ಹೋಗಿ ನಾನು ನಿಮ್ಮ ಬಳಿ ಬರುತ್ತೇನೆ. ದಯವಿಟ್ಟು ನನ್ನನ್ನು ಕರೆದುಕೊಂಡು ಹೋಗಿ ಎನ್ನುತ್ತಿದ್ದನಂತೆ. ಆದರೆ ಸಮರ್ಥ ರಾಮದಾಸರಿಗೆ ಶಿವಾಜಿಯಿಂದ ಯಾವ ಕೆಲಸ ಆಗೋದಿದೆ ಎಂಬ ಸ್ಪಷ್ಟ ಅರಿವಿತ್ತು.
ಈ ಕಾರಣಕ್ಕಾಗಿಯೇ ಸಮರ್ಥ ರಾಮದಾಸರು ಶಿವಾಜಿಯ ಈ ಮಾತನ್ನು ನಯವಾಗಿಯೇ ತಿರಸ್ಕರಿಸುತ್ತಿದ್ದರು. ಆದರೆ ಶಿವಾಜಿ ಮಾತ್ರ ಗುರುಗಳ ಅಪ್ಪಣೆಗೆ ಕಾಯುತ್ತಲೇ ಇದ್ದ. ರಾಮದಾಸರು, ಶಿವಾಜಿಗೆ ಒಂದು ಭರವಸೆಯನ್ನು ನೀಡಿದ್ದರು. ನೀನು ನನ್ನ ಜತೆ
ಬರೋದು ಬೇಡ. ನಾನು ಬೇಕೆಂದಾಗ ನನ್ನನ್ನು ಧ್ಯಾನಿಸು, ನಾನೇ ಪ್ರತ್ಯಕ್ಷನಾಗುತ್ತೇನೆ ಎಂದು.
ಒಂದಿನ ಶಿವಾಜಿಗೆ ವೈರಾಗ್ಯ ಕಾಡತೊಡಗಿ, ಗುರುಗಳೇ ಎಂದು ಕರೆದ. ಶಿವಾಜಿ ಕರೆಯುವಷ್ಟರಲ್ಲಿ ಆಸ್ಥಾನದ ಹೊರಗಡೆ ಭವತಿ ಭಿಕ್ಷಾಂದೇಹಿ ಎಂಬ ದನಿ ಕೇಳಿತು. ಈ ದನಿಯನ್ನು ಕೇಳಿದ ಕ್ಷಣಮಾತ್ರದ ಶಿವಾಜಿ ಓಡಿಬಂದ. ಗುರುಗಳನ್ನು ಕಂಡ. ಖುಷಿಯನ್ನು ತಾಳಲಾರದೆ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸಿದ. ಭಿಕ್ಷುಕರಾಗಿ ಬಂದ ಗುರುಗಳು ಸಾಮ್ರಾಟನ ಮುಂದೆ ಭಿಕ್ಷೆ ಕೇಳುತ್ತಾರೆ. ಶಿವಾಜಿಗೆ ಅತೀವ ಸಂತೋಷವಾಗಿ, ಈಗಲಾದರೂ ಗುರುಗಳೊಂದಿಗೆ ಕಾವಿ ತೊಟ್ಟು ಹೊರಡಬಹುದೆಂದು, ಒಳಗೆ ಹೋಗಿ ಇಡೀ
ಸಾಮ್ರಾಜ್ಯವನ್ನೇ ಬರೆದು ತಂದು ಗುರುಗಳ ಭಿಕ್ಷೆಯ ಜೋಳಿಗೆಗೆ ಹಾಕಿ ಇದೆಲ್ಲವೂ ನಿಮ್ಮ ಆಶೀರ್ವಾದದಿಂದಲೇ ಸಂಪಾದಿಸಿ ದ್ದೇನೆ.
ಇನ್ನೇನು ಕೊಡಲಿ ನಿಮಗೆ. ಇದೇ ನನ್ನ ಭಿಕ್ಷೆ ಎಂದ. ತನ್ನ ಜೋಳಿಗೆಗೆ ಹಾಕಿದ್ದ ಆ ಭಿಕ್ಷೆಯನ್ನು ಹೊರತೆಗೆದು ನೋಡಿದ ಗುರು ಗಳು ಬಹಳ ಸಂತೋಷದಿಂದ ಅದನ್ನು ಶಿವಾಜಿಯ ಕೈಗೆ ಇಟ್ಟು, ಮಗು ಶಿವಬಾ, ನಾನು ಭಿಕ್ಷೆ ಕೇಳಿದ್ದೆ. ಆದರೆ ನೀನು ಸಾಮ್ರಾಜ್ಯ ವನ್ನೇ ನನಗೆ ಭಿಕ್ಷೆಯಾಗಿ ನೀಡಿದ್ದೀಯಾ. ಈಗ ಇವಿಷ್ಟೂ ನನ್ನದೇ, ತೆಗೆದುಕೋ ನನ್ನೀ ಸಾಮ್ರಾಜ್ಯವನ್ನು ನಿನ್ನ ಜವಾಬ್ಧಾರಿಯಲ್ಲಿ ಇಡುತ್ತಿದ್ದೇನೆ. ಚೆನ್ನಾಗಿ ನೋಡಿಕೋ ಎನ್ನುತ್ತಾರೆ.
ಏನಿದರ ಸಂದೇಶ? ಒಂದು ಸಮರ್ಥ ಹಿಂದೂ ರಾಷ್ಟ್ರವನ್ನು ಕಟ್ಟುವಂಥ ಪ್ರೇರಣೆ ನೀಡಿ, ಶಿವಾಜಿಗೆ ಕರ್ತವ್ಯಪ್ರಜ್ಞೆಯನ್ನು
ಎಚ್ಚರಿಸಿದ್ದು. ತನ್ನ 16ನೇ ವಯಸ್ಸಿನ ಮುಸಲ್ಮಾನರಿಗೆ ಸೆಡ್ಡು ಹೊಡೆದು ಮೊದಲ ಯುದ್ಧ ಗೆದ್ದು ಹಿಂದವಿ ಸ್ವರಾಜ್ಯದ ಕನಸು ನನಸು ಮಾಡಿದ್ದ ಶಿವಾಜಿ. ಇಸ್ಲಾಮೀಕರಣದ ವಿರುದ್ಧ ತೊಡೆತಟ್ಟಿ ಧರ್ಮ ಪ್ರತಿಷ್ಠಾಪನೆಗಾಗಿ ಖಡ್ಗ ಜಳಪಿಸುತ್ತಲೇ ಹಿಂದೂ
ರಾಷ್ಟ್ರವನ್ನಾಗಿಸಿದವ ಶಿವಾಜಿ.
ಮತಾಂಧ ಇಸ್ಲಾಮಿಕ್ ಭಯೋತ್ಪಾದಕ ಅಫ್ಜಲ್ ಖಾನನನ್ನು ಸಂಹಾರ ಮಾಡಿ ಶಿವಾಜಿ 16ನೇ ವಯಸ್ಸಿನ ತೋರಣಗಡವನ್ನು ಸೇರಿ ಒಟ್ಟು 280 ದುರ್ಗಗಳನ್ನು ಗೆದ್ದಿದ್ದ. ಶಿವಾಜಿ ಮೊಳಗಿಸಿದ ಹಿಂದವೀ ಸ್ವರಾಜ್ಯ ಮಂತ್ರ ಕೇವಲ ಮಹಾರಾಷ್ಟ್ರಕ್ಕೆ ಮಾತ್ರವಲ್ಲ, ಇಡೀ ಭಾರತಕ್ಕೆ. ಶಿವಾಜಿ 1680 ಏಪ್ರಿಲ್ 3ರಂದು ನಿಧನನಾದ. ಸಾಮಾನ್ಯರಲ್ಲಿ ಅಸಾಮಾನ್ಯರಾಗಿ ಬೆಳೆದ ಶಿವಾಜಿ ರಜಪೂತರಂಥ ರಾಜಮನೆತನಗಳು ಅಲುಗಾಡಿಸಲಾಗದ ಮೊಘಲ ಸಾಮ್ರಾಜ್ಯವನ್ನು ಸಾಮಾನ್ಯ ಸಾಮಂತನ ಮಗನಾಗಿ ಪರಾಕ್ರಮ, ಯುಕ್ತಿಯಿಂದ ಬುಡಮೇಲು ಮಾಡಿದ್ದ. ಶಿವಾಜಿಯ ಅ ನಂತರ ಇಸ್ಲಾಮಿಕ್ ಭಯೋತ್ಪಾದಕರ ಎದೆಯ ಮೇಲೆ ಕೇಸರಿ ಧ್ವಜ ನೆಡಲು ಸಿದ್ಧನಾದವನೇ ಸಾಂಭಾಜಿ.
ಸಾಂಭಾಜಿ ಅಸಾಮಾನ್ಯ ತಾಕತ್ತುಳ್ಳವ. ಹೋರಾಡಿದ 128 ಯುದ್ಧಗಳಲ್ಲಿ ಒಂದೂ ಯುದ್ಧವನ್ನು ಸೋಲದೇ ತಂದೆಯ ಮತ್ತು ಹಿಂದೂ ಧರ್ಮದ ಕೀರ್ತಿಯನ್ನು ಉತ್ತುಂಗಕ್ಕೆ ಹಾರಿಸಿದವ. ಮೊಘಲರ ಆಡಳಿತವಿದ್ದಾಗ ದೆಹಲಿ ಕೆಂಪುಕೋಟೆಯ ಮೇಲೆ ಭಗವಾ ಧ್ವಜ ಹಾರಿಸಿದವ. ಕುತಂತ್ರಕ್ಕೆ ಒಳಗಾಗಿ ಮೋಸದಿಂದ ಸಾಂಭಾಜಿಯನ್ನು ಬಂಧಿಸಿದ ನಿಜಾಮ ನಿರಂತರ ಒಂದು ತಿಂಗಳ ಘೋರವಾಗಿ ಶಿಕ್ಷಿಸಿ ದಿನಕ್ಕೆ ಒಂದು ಬೆರಳುಗಳನ್ನು ಕಿತ್ತೆಸೆಯುತ್ತಿದ್ದ. ಬೆರಳುಗಳು ಮುಗಿದ ಮೇಲೆ ಕೈ ಆಮೆಲೆ ಕಾಲು ಹೀಗೆ ದಿನಾಲು ಹಿಂಸಿಸಿದ. ಜತೆಗೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗು ನಿನಗೆ ನಿನ್ನ ರಾಜ್ಯ ಬಿಟ್ಟು ಕೊಡ್ತಿನಿ ಅಂತ ಆಮಿಷ ಒಡ್ಡುತ್ತಿದ್ದ.
ಆದರೆ,ಸಾಂಭಾಜಿ ನನ್ನಲ್ಲಿ ಹರಿಯುತ್ತಿರೋದು ಶಿವಾಜಿಯ ರಕ್ತ, ಅದು ಎಂದಿಗೂ ತನ್ನ ಧರ್ಮ ಬಿಟ್ಟು ಇನ್ನೊಂದಕ್ಕೆ ಶರಣಾ ಗಲ್ಲ ಎಂದಿದ್ದ. ನಿನ್ನ ರಾಜ್ಯ ಬಿಟ್ಟು ಕೊಟ್ಟರೂ ನಿನ್ನ ಧರ್ಮಕ್ಕೆ ಬರಲ್ಲ. ಒಂದು ತಿಂಗಳವರೆಗೂ ಜೀವ ಸವೆಸಿದನೆ ಹೊರತು ಧರ್ಮ ಬಿಡಲಿಲ್ಲ. 22 ದಿನಗಳವರೆಗೆ ಅವರನ್ನು ವಿವಿಧ ರೀತಿಯಲ್ಲಿ ಹಿಂಸಿಸಿದ ಆ ಪಾಪೀ ಔರಂಗಜೇಬ ಅವನ ಕಣ್ಣು ಕುಕ್ಕಿಸಿ, ನಾಲಿಗೆ ಕತ್ತರಿಸಿದರೂ ಮೃತ್ಯುವು ರಾಜನನ್ನು ಸ್ಪರ್ಶಿಸಲಿಲ್ಲ. ದುಷ್ಟ ಮೊಘಲ ಸರದಾರರು ಅವರಿಗೆ ಪ್ರಚಂಡ ಯಾತನೆ ನೀಡಿದರು. ಧರ್ಮಾಭಿಮಾನದಿಂದಾಗಿ ಅವನು ಈ ಎಲ್ಲ ಕಷ್ಟಗಳನ್ನು ಅನುಭವಿಸಲೇಬೇಕಾಯಿತು.
ಕೊನೆಗೆ ಅರೆಜೀವವಿರುವ ಸ್ಥಿತಿಯಲ್ಲಿ ಅವರ ದೇಹವನ್ನು ವಡೂ ಎಂಬ ಹಳ್ಳಿಯ ಕಾಡಿಗೆ ತರಲಾಯಿತು. ಅಲ್ಲಿ ಸಂಭಾಜಿಯನ್ನು ಕೊಡಲಿಯಿಂದ ಕಾಲಿನಿಂದ ಹಿಡಿದು ಎಲ್ಲ ಅಂಗಗಳನ್ನು ತುಂಡರಿಸಲಾಯಿತು. ಹಿಂದೂಗಳ ಹಬ್ಬದಂದು ಅವರನ್ನು ಅಪಮಾನಗೊಳಿಸಲು ಮಾರ್ಚ್ 11 ಫಾಲ್ಗುಣ ಅಮಾವಾಸ್ಯೆಯಂದು ಸಂಭಾಜಿ ಕೊಲೆ ಮಾಡಲಾಯಿತು. ಅವನ ಮಸ್ತಕ ವನ್ನು ಬರ್ಚಿಗೆ ಚುಚ್ಚಿ ಮೊಘಲರು ಅವನನ್ನು ಅಪಮಾನಗೊಳಿಸಿ ಮೆರವಣಿಗೆ ಮಾಡಿದರು. ಈ ರೀತಿ ಫೆಬ್ರವರಿ ಒಂದರಿಂದ
ಮಾರ್ಚ್ ಹತ್ತರವರೆಗೆ ಹೀಗೆ 39 ದಿನಗಳ ಯಮಯಾತನೆಯನ್ನು ಸಹಿಸಿ ಸಂಭಾಜಿ ಹಿಂದುತ್ವದ ತೇಜವನ್ನು ಬೆಳಗಿಸಿದನು.
ಧರ್ಮಕ್ಕಾಗಿ ಬಲಿದಾನ ಮಾಡಿದ ಈ ರಾಜನು ಇತಿಹಾಸದಲ್ಲಿ ಅಮರನಾದ. ಆಗಿನ್ನು ಸಾಂಭಾಜಿಗೆ ವಯಸ್ಸು ಬರೀ 31 ವರ್ಷ. ಅವನ ಕಠಿಣ ದಿನಗಳನ್ನು ಮಹಾರಾಷ್ಟ್ರದ ಜನತೆ ಇನ್ನೂ ಮರೆಯದೆ ಆ ಒಂದು ತಿಂಗಳ ಮಟ್ಟಿಗೆ ಆಹಾರ ಮುಟ್ಟದೆ, ಕಾಲಿಗೆ ಚಪ್ಪಲಿ ಧರಿಸದೇ ಕಠಿಣ ವೃತಗೈಯುತ್ತದೆ. ಸಂಭಾಜಿ ಬಲಿದಾನದಿಂದ ಮರಾಠರ ಸ್ವಾಭಿಮಾನವು ಪುನಃ ಜಾಗೃತವಾಯಿತು! ಭಾರತ ಎದ್ದುನಿಂತಿತು!