Saturday, 21st September 2024

ಎಲುಬಿನ ಮಂಡು ನೀಡಿದರೆ ಮದುವೆ ಭಾಗ್ಯ

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

mehandale100@gmail.com

ನೀವು ಒಂದು ತುಂಡು ಎಲುಬಿನ ಕಾಣಿಕೆ ಕೊಟ್ಟರೆ, ಮರು ಮದುವೆಯಾಗಲು ಲಾಯಕ್ಕು. ಅದರಲ್ಲೂ ಹುಡುಗಿ ತೀರಿದ್ದರೆ ಅವಳಪ್ಪ, ಹುಡುಗನೇ ತೀರಿ ಹೋದರೆ ಅವನ ಸಹೋದರರು ಯಾರಾದರೂ ಎದುರಿನವರಿಗೆ ಕಾಣಿಕೆ ಕೊಟ್ಟು ಆ ಅವಘಡ ಮುಗಿಯಿತೆಂದು ಘೋಷಿಸಿ ಊರ ಪಂಚರೆದುರಿಗೆ ಶಾಸ್ತ್ರ ನೆರವೇರಿಸಿದರೆ ಇದ್ದವರಿಗೆ ಮದುವೆ ಭಾಗ್ಯ.

ಹೀಗೊಂದು ಪದ್ಧತಿ ಮೂಲಕ ಮರು ಮದುವೆ ಮತ್ತು ಇದ್ದವರಿಗೆ ಜೀವನ ನೀಡುವ ಶಸ್ತ್ರ ಪೂರೈಸುವ ಪಂಚರು ಉಳಿದ ಆರ್ಥಿಕ ಸ್ಥಿತಿಗತಿ ಇತ್ಯಾದಿಗಳನ್ನೆಲ್ಲ ಆಯಾ ಮನೆ ಮಠ ನೋಡಿ ನಿರ್ಣಯಿಸುತ್ತಾರೆ. ಹಾಗೂ ‘ಮಂಡು’ ಎಂಬ ಸತ್ತವರ ಎಲುಬಿನ ಕಾಣಿಕೆ ತಂದೊಪ್ಪಿಸುವ ಮೂಲಕ ಮತ್ತೆಲ್ಲ ಸುರುಳಿತ. ಇದು ಮಣಿಪುರದ ಬುಡ ಕಟ್ಟೊಂದು ಪಾಲಿಸುತ್ತಿರುವ ಸಂಪ್ರದಾಯ ಮತ್ತು ಆ ಮೂಲಕ ತಮ್ಮ ಅಸ್ಮಿತೆಯಾಗಿ ಮನೆಯ ಎದುರಿಗೆ ಕಾಣುವಂತೆ ‘ಮಂಡು’ ಅತ್ಯಂತ ಚೆಂದ ಮಾಡಿ ತೂಗು ಹಾಕಿಟ್ಟುಕೊಳ್ಳುತ್ತಾರೆ. ಉತ್ತರ ಮಣಿಪುರದ ತೆಮೇನ್‌ ಗ್ಲಾಂಗ್ ಜಿಲ್ಲೆಯಾದ್ಯಂತ ಹೆಚ್ಚಿನ ಜನರು ಒಂದೇ ರೀತಿಯ ಸಂಸ್ಕೃತಿ ಮತ್ತು ಸಾಂಪ್ರದಾಯಿಕತೆ ಒಳಗೊಂಡಿರುವುದು ಕಾಣುತ್ತದೆಯಾದರೂ ಊರೂರಿಗೆ ಪದ್ಧತಿ ಮಡಿ ಮೈಲಿಗೆಗಳ ರಂಪ ರಾಮಾಯಣ.

ಎಲ್ಲಿಯೂ ಈ ಬಗ್ಗೆ ಹೊಂದಾಣಿಕೆ ಮಾತ್ರ ಇಲ್ಲದೆ ಪ್ರತಿ ಪದ್ಧತಿಯನ್ನೂ ಆಚರಿಸಿಕೊಂಡೆ ಮುನ್ನಡೆಯುತ್ತಿರು ವುದು, ಅದಕ್ಕೆಲ್ಲ ಈಗಲೂ ಬದ್ಧವಾಗಿರುವುದು ಹೊರಗಿನ ಪ್ರಪಂಚಕ್ಕೆ ಅಚ್ಚರಿ ಹೌದು. ಪಂಗಡಗಳ ವೇಷ ಭೂಷಣಗಳಲ್ಲಿ ಮೂಲಭೂತ ಭೌತಿಕ ಭಿನ್ನತೆಯೇನೂ ಕಂಡುಬರುವುದಿಲ್ಲ ಆದರೆ ಆಚಾರ  ವಿಚಾರಗಳು ಅಲ್ಲಿದ್ದಿದ್ದು ಇಲ್ಲಿರುವುದಿಲ್ಲ. ಮೂಲತಃ ನಾಗಗಳ ಒಳಪಂಗಡ ಜನಾಂಗವಾಗಿರುವ ‘ಝೇಲಿಯಾಂ ಗ್ರೋಂಗ್’ಗಳು ತೆಮೇನ್‌ಗ್ಲಾಂಗ್‌ನಲ್ಲಿ ಹೆಚ್ಚಿನ ಹಿಡಿತ ಹೊಂದಿವೆ. ಈ ನಾಗಾಗಳ ಮೂಲ ಬುಡಕಟ್ಟುಗಳಾದ ರೋಂಗಾಮೈ, ಲಿಂಗಾಮೈ, ಝೀಮೈ ಮತ್ತು ಪುವಾಮೈಗಳ ಸಮ್ಮಿಶ್ರಣವೇ ಈ ಬುಡಕಟ್ಟು. ಇವೆಲ್ಲದರ ಮೇಲೆ ಆಗಿರುವ ಒಟ್ಟಾರೆ ಪ್ರಭಾವ ಕುಕಿ ಪಂಗಡದ್ದು. ಜತೆಗೆ ಮಾರ್ಸ್, ಖಾಸಿಸ್ ಹಾಗೂ ಚಿರುಗಳೂ ಕೂಡಾ ಇದರಲ್ಲಿದ್ದಾರೆ. ಅದಿನ್ನೆಷ್ಟು ಒಳ ಪಂಗಡ ಎಡ ಬಲ ಇತ್ಯಾದಿಗಳಿವೆಯೋ ದೇವರಿಗೇ ಗೊತ್ತು.

ಈ ಝೇಲಿಯಾಂಗ್ರೋಂಗ್‌ನ ನಾಗಾಬುಡಕಟ್ಟು ಮೂಲತಃ ಟಿಬೆಟ್-ಬರ್ಮನ್(ಇಂಡೊಮೊಂಗೋಲೈಡ್) ಕುಟುಂಬ ಮೂಲದವರೆಂದು ಗುರುತಿಸಲಾಗುತ್ತಿದೆ.
ಚೀನಾದ ಹೂವಾಂಗೋ ಹೋ ನದಿಯ ತೀರ ಪ್ರದೇಶದಿಂದ ಇಲ್ಲಿಗೆ ಅಲೆಮಾರಿಗಳಾಗಿ ಬಂದು ಬೀಡುಬಿಟ್ಟಿರುವ ಮಂಗೋಲಿಯನ್ ಮತ್ತು ಯಾಂಗ್ಟಿಸಿಕಿ ಯಾಂಗ್ ನದಿಯ ಪ್ರದೇಶದ ನಾಗಾಗಳ ವಲಸೆಯ ಮುಂದಿನ ಪೀಳಿಗೆಗಳಿವು. ಈ ಎಲ್ಲ ಇತಿಹಾಸದ ಕಾರಣ ಮಂಡುವಿನಂತಹ ಆಚರಣೆ ಬಂದಿರಲಿಕ್ಕೂ ಸಾಕು. ಈ ಝೇಲಿಯಾಂಗ್ರೋಂಗ್ ನಾಗಾಗಳಲ್ಲಿ ಆರು ಪ್ರಮುಖ ವಿಂಗಡಣೆಗಳಿದ್ದು ಅವುಗಳನ್ನು ಕಮೈ(ಪಾಮೈ) – ಬುಲ ಬುಲ್ ಹಕ್ಕಿ, ಗೊನ್ನಾಮೈ(ನ್ಯೂಮೈ)
– ಹುಲಿ, ಗಂಗಮೈ- ಕಪ್ಪೆ, ಪೆನ್ನಾ ಮೈ – ಹಕ್ಕಿ, ರಿಯೇ ಮೈ ಮತ್ತು ರುಂಗಾ ಮೈ ಹೀಗೆ ಆಯಾ ಪಂಗಡಗನ್ನು ಮಾಹಿತಿಗಾಗಿ ಕೆಲವೊಂದನ್ನು ಪ್ರಾಣಿ ಸೂಚಕ ಮತ್ತು ಹಕ್ಕಿ ಸೂಚಕವಾಗಿ ಗುರುತಿಸಿಡ ಲಾಗಿದೆ.

ಆಯಾ ಬುಡಕಟ್ಟುಗಳು ತಮ್ಮ ಈ ವೈಶಿಷ್ಠ್ಯತೆಯನ್ನು ಗುರುತಿಸಿಕೊಳ್ಳುವ, ಅದೇ ಚಿಹ್ನೆಯ ಮೂಲಕ ಗುರುತು ಮಾಡುವ ಸಲುವಾಗಿ ಆಯಾ ಪ್ರಾಣಿಯ ದೇಹ ದಿಂದಲೇ ತಲೆ ಬಾಗಿಲನ್ನು ಅಲಂಕರಿಸುವ ಸಂಪ್ರದಾಯ ಇದ್ದು, ಹಬ್ಬಗಳಲ್ಲಿ ಪ್ರಾಣಿ ಸೂಚಕ ತಲೆ ಪೇಟ ಕಡ್ಡಾಯ ಗಂಡಸರಿಗೆ, ಹೆಂಗಸರಿಗೆ ಅದರ ಚಿಹ್ನೆಯ ಆಭರಣಗಳು. ಪ್ರತಿ ಪಂಗಡಗಳು ತನ್ನದೇ ಆದ ಪ್ರಾಣಿಗಳ ಚಿಹ್ನೆಯನ್ನು ಹೊಂದಿದ್ದು ಅವುಗಳನ್ನು ಆರಾಧಿಸುವುದೂ ಇದೆ. ಈ ಮೇಲಿನ ಪಂಗಡ ಅಥವಾ ಒಳಜಾತಿಗಳಲ್ಲಿ ಒಳಗೊಳಗೇ ಮದುವೆಗಳು ನಿಷಿದ್ಧ. ಪರಸ್ಪರ ಪಂಗಡಗಳಲ್ಲಿ ಸಮ್ಮತಿ ಇದ್ದು ಬೇರಾವುದೇ ಪಂಚರ ಒಪ್ಪಿಗೆ ಇಲ್ಲದ, ‘ಮಂಡು’ ಹೊರತಾದ ಮದುವೆ ಸಾಮಾಜಿಕವಾಗಿ ನಿಷಿದ್ಧ ಮತ್ತು ಬಹಿಷ್ಕೃತಗೊಳಪಡುತ್ತವೆ.

ಇವತ್ತಿಗೂ ಉತ್ತಮ ಸಾಮಾಜಿಕ ಕಾಳಜಿ, ಬದ್ಧತೆಯನ್ನು ವ್ಯಕ್ತಪಡಿಸುವ, ದಿನವಹಿ ವ್ಯವಹಾರದಲ್ಲಿ ಸಮಾನತೆಯನ್ನು ಪಾಲಿಸುವ ‘ಝೇಲಿಯಾಂಗ್ರೋಂಗ್ ನಾಗಾಗಳ ಪದ್ಧತಿಯಲ್ಲಿ ಸಮಾನತೆ ಗಮನೀಯ ಅಂಶ. ಕುಟುಂಬ ಪದ್ಧತಿಯಲ್ಲಿ ಒಳ ವಿವಾಹಗಳು ಇವೆಯಾದರೂ ಸಮ್ಮತಿಯ ಮದುವೆಗೆ ಹೆಚ್ಚು ಪ್ರಾಶಸ್ತ್ಯ. ಮದುವೆಯನ್ನು ಹೊರತು ಪಡಿಸಿದರೆ ಉಳಿದಂತೆ ಇತರೆ ಬುಡಕಟ್ಟಿನ ಸಾಂಪ್ರದಾಯಗಳೂ ಅಲ್ಲಲ್ಲಿ ಇದೆಯಾದರೂ ಕೆಲವು ಪ್ರಮುಖ ಪದ್ಧತಿಗಳು ಅಭ್ಯಾಸ
ಯೋಗ್ಯ ಜೀವನಕ್ರಮವಾಗಿವೆ.

ಇದರಲ್ಲಿ ‘ಝೇಲಿಯಾಂಗ್ರೋಂಗ್’ ವಿವಾಹ ಪದ್ಧತಿಗಳ ಅಸ್ಮಿತೆ ಬಗ್ಗೆ ನಿಮಗೆ ಗೊತ್ತಿರಬೇಕು. ಮಜಾ ನೋಡಿ ಮದುವೆಗೆ ಮೊದಲೇ ಕೂಡಿ ವಾಸಿಸಿ, ಕಾಯ ವಾಚಾ ಮನಸಾ ಜತೆಗೆ ಎಲ್ಲ ಸರಿ ಹೋದಲ್ಲಿ ಸಂಸಾರ ಮಾಡುವುದು ಇಲ್ಲವಾದರೆ ಹಿಂದಿರುಗುವ ಆಯ್ಕೆ ಬೇರೆಲ್ಲೂ ಇದ್ದಿರಲಿಕ್ಕಿಲ್ಲ. ಎರಡೂ ಕುಟುಂಬಗಳ ಸಮ್ಮತಿಯ ಮೇರೆಗೆ ಹುಡುಗನು ಹುಡುಗಿಯ ಕುಟುಂಬದೊಂದಿಗೆ ಕನಿಷ್ಠ ಮೂರು ವರ್ಷಗಳ ಕಾಲ ಹುಡುಗಿಯ ಮನೆಯಲ್ಲಿ ಕಳೆದು ನಂತರ ಮನೆಗೆ ಹುಡುಗಿ ಯೊಂದಿಗೆ ಹಿಂದಿರುಗುವುದು ಹೆಚ್ಚಿನ ಬಳಕೆಯಲ್ಲಿರುವ ಪದ್ಧತಿಯಾಗಿದೆ. ಈ ಮೂರರಿಂದ ನಾಲ್ಕು ವರ್ಷಗಳ ಕಾಲ ಹುಡುಗಿಯ ಮನೆಯವರಿಗೆ ಅವರಿಬ್ಬರೂ ಗಂಡ ಹೆಂಡತಿಯರಂತೆ ಬದುಕುತ್ತಾ, ಹುಡುಗಿಯನ್ನು ಸಂಪೂರ್ಣ ಸುರಕ್ಷಿತವಾಗಿ ನೋಡಿಕೊಳ್ಳುತ್ತಿದ್ದೇನೆ ಎನ್ನುವ ಗ್ಯಾರಂಟಿ ತೋರಿಸುವ ಹೊಣೆಗಾರಿಕೆ ಹುಡುಗನದ್ದಾ ಗಿರುತ್ತದೆ.

ನಂತರವೇ ಹುಡುಗನ ಕುಟುಂಬಕ್ಕೆ ಹುಡುಗಿ ಹಿಂದಿರುಗುತ್ತಾಳೆ. ಇಲ್ಲದಿದ್ದರೆ ಹುಡುಗ ಬರಿಗೈಯಲ್ಲಿ ವಾಪಸ್ಸು ಮತ್ತು ಅವನಿಗೆ ಕನ್ಯೆ ಸಿಗುವುದು ಕಷ್ಟ. ಅವನು
‘ಮಂಡು’ಗಾಗಿ ಕಾಯಬೇಕಾಗುತ್ತದೆ. ಮಕ್ಕಳಾಗಿಬಿಟ್ಟಿದ್ದರೆ ಅವೂ ಅವನದೇ ಜವಾಬ್ದಾರಿ. ಎರಡನೆಯ ಪದ್ಧತಿಯಲ್ಲಿ ಹುಡುಗಿಯ ಇಚ್ಛೆಗೂ ವಿರುದ್ಧವಾಗಿ ಕುಟುಂಬದ ಒಳಿತಿಗಾಗಿ ಮತ್ತು ಕೆಲವು ನಿಬಂಧನೆಗಳನ್ನು ಎರಡೂ ಕುಟುಂಬಗಳು ಮೀರಲಾಗದ ಸಂವೇದನಾತ್ಮಕ/ಭಾವನಾತ್ಮಕ ಸಂಬಂಧಗಳಿದ್ದಾಗ ಕುಟುಂಬ ಹಿರಿಯರ ಮರ್ಜಿಯ ಮೇರೆಗೆ ನಡೆಯುವ ಮದುವೆ.

ಇದಕ್ಕೆ ಕಾಲಮಿತಿ ಇಲ್ಲ. ಮದುವೆ ಮತ್ತು ಹಿಂದೆಯೇ ಸಂಸಾರ ಆರಂಭ. ಬೇರ್ಪಡೆಗೆ ಇದರಲ್ಲಿ ಅವಕಾಶವೇ ಇಲ್ಲ. ಪ್ರಯತ್ನಿಸಿದಲ್ಲಿ ಸಮುದಾಯ ನಿಷೇಧ ಕಟ್ಟಿಟ್ಟದ್ದು. ಮದುವೆಯ ಬಂಧಕ್ಕಾಗಿ ಮೊದಲ ಮೂರ್ನಾಲ್ಕು ವರ್ಷಗಳನ್ನು ಕಳೆಯುವ ಸಂದರ್ಭದಲ್ಲಿ ಅಕಸ್ಮಾತಾಗಿ ಅಪಘಾತ/ಇನ್ಯಾವುದೋ ಆಕಸ್ಮಿಕದಲ್ಲಿ ಹುಡುಗ ತೀರಿ ಹೋದಲ್ಲಿ ಅವಳನ್ನು ಮನೆಯಲ್ಲಿರುವ ಇನ್ನೊಬ್ಬ ಸಹೋದರ ಮದುವೆಯಾಗಬೇಕು ಮತ್ತು ಆಗಲೇ ಮಕ್ಕಳಾಗಿದ್ದರೆ ಅವನ್ನು ಪೋಷಿಸುವ ಹೊಣೆಯನ್ನು ಹೊರಬೇಕು. ವೈಸಾ ವರ್ಸಾ ನಡೆಯುತ್ತದೆ ಇದು.

ಕೆಲವೊಮ್ಮೆ ಕುಟುಂಬದ ಹೊರತಾಗಿ ಜೋಡಿಯು ಮೊದಲೇ ಪ್ರೀತಿಸಿ ನಿರ್ಧರಿಸಿಕೊಂಡಿದ್ದರೆ ಅದನ್ನು ಕುಟುಂಬಗಳೇ ಹುಡುಗನ ಅರ್ಹತೆಯನ್ನು ನಿರ್ಧರಿಸಿ ನಿಂತು ಮದುವೆ ಮಾಡಿಸಬೇಕು ಎನ್ನುವ ಪದ್ಧತಿಯೂ ಚಾಲ್ತಿಯಲ್ಲಿದೆ. ಇಲ್ಲವಾದರೆ ಹುಡುಗನಿಗೆ ಹೊಣೆಗಾರಿಕೆ ಯನ್ನು ಸಾಬೀತು ಮಾಡುವ ಅವಕಾಶ ನೀಡ ಲಾಗುತ್ತದೆ. ಜವಾಬ್ದಾರಿ ಮತ್ತು ಹೊಣೆಗಾರಿಕೆ ನಿಭಾಯಿಸಬಲ್ಲ ಎನ್ನುವ ಗ್ಯಾರಂಟಿ ಕೊಡಬೇಕಾಗುತ್ತದೆ. ಇತ್ತೀಚಿಗೆ ಪ್ರೇಮಿಸಿ ಓಡಿ ಹೋಗುವ ಪ್ರವೃತ್ತಿ ಯಿಂದಾಗಿ ಅಂಥವರಿಗೆ ಬಹಿಷ್ಕಾರ ಹಾಕುವುದೂ ನಡೆಯುತ್ತಿದೆ.

ಕುಟುಂಬದೊಳಗಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಒಳ ಮದುವೆಗಳು ಅಂದರೆ ಸಹೋದರ/ ದೊಡ್ಡಪ್ಪ ಇತರೆ ಸಂಬಂಧಿಯ ಮಕ್ಕಳಲ್ಲಿ ಸಂಬಂಧ ಕುದುರಿಸಿ ಆ ಮೂಲಕ ಸಂಬಂಧಗಳನ್ನು ಗಟ್ಟಿ ಗೊಳಿಸಿಕೊಳ್ಳುವಿಕೆ. ಇವರಲ್ಲಿ ಹಲವು ರೀತಿಯ ಇದೇ ಸಂಪ್ರದಾಯ ಕಟ್ಟುಪಾಡುಗಳಿದ್ದು ಕೆಲವನ್ನು ಮಾತ್ರ ಅದರಲ್ಲೂ ವಿಶೇಷ ಎನ್ನುವಂತಹದ್ದನ್ನು ಮಾತ್ರ ನಾನು ಇಲ್ಲಿ ಚರ್ಚಿಸಿದ್ದೇನೆ. ಉಳಿದವನ್ನು ಅವರೂ ನಿಮಗೆ ಗುಟ್ಟು ಬಿಟ್ಟುಕೊಡಲಾರರು ಚರ್ಚಿಸಲಾರರು ಕೂಡಾ. ಅವೆಲ್ಲ ಹೊರ ವ್ಯಕ್ತಿಗಳಿಗೆ ತಿಳಿಯಲೇಬಾರದು ಎನ್ನುತ್ತಾರೆ. ಅದರಲ್ಲೂ ಹುಡುಗಿ ವಯಸ್ಕಳಾದಾಗ 21 ದಿನ ಬಟ್ಟೆ ಅಥವಾ ಇನ್ನಾವುದೇ ವಸ್ತ್ರ ಇಲ್ಲದೆ ತಿರುಗಾಡುವ, ಅದರಲ್ಲಿ ನಿಯಮಿತವಾಗಿ ದಿನಕ್ಕೆ ನಾಲ್ಕು ಗಂಟೆಗೆ ಸೂರ್ಯನ ಬಿಸಿಲಿಗೆ ಮೈ ಒಡ್ಡಬೇಕೆನ್ನುವ ಶಾಸ್ತ್ರಗಳನ್ನು ಈಗಲೂ ಪಾಲಿಸಲಾಗುತ್ತಿದೆ. ಅದಕ್ಕಾಗಿ ಬಿಸಿಲಿಗೆ ಬರುವ ಜಾಗ ಮತ್ತು ಅದ ಸುತ್ತಮುತ್ತಲಿನ ಪ್ರದೇಶಕ್ಕೆ ತಡಿಕೆ ನಿರ್ಮಿಸಿ ನಿಷೇಧಿತ ಪ್ರದೇಶವಾಗಿ ಘೋಷಿಸಿರುತ್ತಾರೆ.

ಆಗೆಲ್ಲಾ ಹಾಡಿಗಳಿಗೆ ಪ್ರವೇಶ ನಿಷಿದ್ಧ ಮತ್ತು ಮಾಹಿತಿಯನ್ನೂ ಈಚೆಗೆ ಬಿಡಲಾಗುವುದಿಲ್ಲ. ಇಂಥಾ ಅವರದ್ದೇ ಆದ ಪದ್ಧತಿಗಳು ಪ್ರತಿ ಐವತ್ತು ನೂರು ಕಿ.ಮೀ. ಗೊಮ್ಮೆ ಬದಲಾಗುತ್ತಿರುತ್ತದೆ. ಹುಡುಗಿ ವಯಸ್ಸಿಗೆ ಬರುತ್ತಿದ್ದಂತೆ ಅದಕ್ಕಾಗೆ ಇರುವ ಹೆಂಗಸರನ್ನು ಸೇವೆಗಾಗಿ ನಿಯಮಿಸಿ, ಅವರ ನಿಗಾದಲ್ಲೆ ಮೊದಲ ತಿಂಗಳು ಕಳೆಯಬೇಕಾಗುತ್ತದೆ. ವಿವಸ್ತ್ರ ಜೀವನ ಶೈಲಿಯಲ್ಲಿ ಹುಡುಗಿಯ ಸುತ್ತ ಹೆಣ್ಣು ಮಕ್ಕಳ ಕೋಟೆಯೇ ಇರುತ್ತದಂತೆ ಸಂಪ್ರದಾಯ ಪಾಲನೆಗೆ. ಇದನ್ನು ವಧುವಿನ ರಕ್ತ ಸಂಬಂಽಗಳು ಕೇಳುವ ಎಲುಬಿನ ಕಾಣಿಕೆ ಪದ್ಧತಿಯಲ್ಲಿ ಜನಜನಿತವಾಗಿದೆ. ಹೆಂಡತಿಯು ಅಕಸ್ಮಾತಾಗಿ ತೀರಿ ಹೋದಾಗ ಆಕೆಯ ತಂದೆಯಾದವನು ಆ ಹುಡುಗನ ಅಥವಾ ಆಕೆಯ ಬದುಕಿರುವ ಗಂಡನಿಂದ ಬಯಸುವ ಎಲುಬಿನ ಕಾಣಿಕೆಗೆ ಮಂಡು ಇವತ್ತಿಗೂ ಹಲವು ಅಧ್ಯಯನದ ಆಸಕ್ತಿಯ ವಿಷಯ. ಅಕಸ್ಮಾತಾಗಿ ಹುಡುಗನೂ ತೀರಿದರೆ ಅವರ ಅತ್ಯಂತ ಹತ್ತಿರದ ಸಂಬಂಽಯು ಆಕೆಯ ಎಲುಬನ್ನು ತಂದು ಒಪ್ಪಿಸುವ ಮೂಲಕ ಪದ್ಧತಿಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಇದಕ್ಕೆ ಇರುವ ತಾರ್ಕಿಕ ಮಹತ್ವವೇನು ಗೊತ್ತಾಗಲಿಲ್ಲವಾದರೂ ಕೆಲವರ ಮನೆಯಲ್ಲಿ ಬಂಗಾರದ ತಗಡಿನಲ್ಲಿ ತಾಯತದಂತೆ ಮಾಡಿ ನೇತು ಹಾಕಿದ್ದು ಮಾತ್ರ ಅದಕ್ಕಿರುವ ಕಿಮ್ಮತ್ತೇನೆಂದು ಸೂಚಿಸುತ್ತಿತ್ತು.