ಶಶಾಂಕಣ
shashidhara.halady@gmail.com
ಆಕ್ರಮಣ ಮಾಡಲು ಬಂದ ಡಚ್ ಸೈನ್ಯವನ್ನು ಸೋಲಿಸಿ, ೨೦ಕ್ಕೂ ಅಧಿಕ ಡಚ್ ಸೇನಾಧಿಕಾರಿಗಳನ್ನು ಸೆರೆಹಿಡಿದು, ನಂತರ ಅವರನ್ನು ಕೆಲಸಕ್ಕಿಟ್ಟು ಕೊಂಡ ಒಬ್ಬ ಅಸಾಧಾರಣ ಧೀರರಾಜನ ವಿಚಾರ ವಿಸ್ಮಯ ಹುಟ್ಟಿಸುತ್ತದೆ! ಭಾರತದ ರಾಜರುಗಳು ಹೆಮ್ಮೆ ಪಡುವಂಥ ಸಾಧನೆ ಮಾಡಿ, ಯುರೋಪಿ ಯನ್ ಇತಿಹಾಸಕಾರರಿಂದ ಹೀಗೆ ಮೆಚ್ಚುಗೆಗೆ ಒಳಗಾದ ರಾಜನೇ ಮಾರ್ತಾಂಡ ವರ್ಮ. ಅಸಾಧಾರಣ ದೂರದರ್ಶಿತ್ವ, ಚಾತುರ್ಯ ಹಾಗೂ ಶೌರ್ಯದ ಪ್ರತಿರೂಪವಾಗಿದ್ದ ರಾಜನೀತ.
ಹದಿನೆಂಟನೆಯ ಶತಮಾನದಲ್ಲಿ ಯುರೋಪಿಯನ್ ದೇಶಗಳ ಆಕ್ರಮಣಕಾರಿ ಶಕ್ತಿಯ ಎದುರು ಯಶಸ್ವಿಯಾಗಿ ಹೋರಾಡಿದ ದೇಶದ ಒಬ್ಬ ರಾಜನನ್ನು ನಾವು ಬಹುಪಾಲು ಮರೆತೇ ಬಿಟ್ಟಿದ್ದೇವೆ ಎನ್ನಬಹುದು. ಈ ರಾಜ ಅದೆಂಥ ದೂರದರ್ಶಿತ್ವವನ್ನು, ಶೌರ್ಯವನ್ನು ಹೊಂದಿದ್ದ ಎಂದರೆ, ತನ್ನನ್ನು ಆಕ್ರಮಿಸಲು ಬಂದ ಯುರೋಪಿಯನ್ ಸೈನ್ಯ ವನ್ನು ಸೋಲಿಸಿದ್ದು ಮಾತ್ರವಲ್ಲ, ಹಲವು ಯುರೋಪಿಯನ್ ಸೈನಿಕರನ್ನು ಮತ್ತು ಅಧಿಕಾರಿಗಳನ್ನು ಸೆರೆ
ಹಿಡಿದು, ಜೈಲಿನಲ್ಲಿ ಕೂರಿಸಿ, ಅವರನ್ನು ಬಗ್ಗಿಸಿ, ಮುಂದೆ ಅವರನ್ನೇ ತನ್ನ ಉದ್ಯೋಗಿಗಳನ್ನಾಗಿ ನೇಮಿಸಿಕೊಂಡಿದ್ದ!
ವಸಾಹತುಶಾಹಿ ಶಕ್ತಿಯೊಂದು ಪೂರ್ತಿ ಸೋತುಹೋದ ಅಂಥದೊಂದು ಸನ್ನಿವೇಶವು ಅದೇಕೋ ನಮ್ಮ ಜನರ ನೆನಪಿನಿಂದ ಬಹುಪಾಲು ಮಾಸಿ ಹೋಗಿದೆ! ಹೀಗೆ, ಭಾರತದ ರಾಜರುಗಳು ಹೆಮ್ಮೆ ಪಡುವಂಥ ಸಾಧನೆ ಮಾಡಿ, ಯುರೋಪಿಯನ್ ಇತಿಹಾಸಕಾರರಿಂದ ಮೆಚ್ಚುಗೆಗೆ ಒಳಗಾದ ರಾಜನೇ ಮಾರ್ತಾಂಡ ವರ್ಮ. ಈತ ತಿರುವನಂತಪುರದಲ್ಲಿ ೧೭೨೯ರಿಂದ ೧೭೫೮ರ ತನಕ ಆಳ್ವಿಕೆ ನಡೆಸಿ, ಕೇರಳದ ಇತಿಹಾಸದಲ್ಲಿ ಅತ್ಯಪೂರ್ವ ಸಾಧನೆ ಮಾಡಿದ ವ್ಯಕ್ತಿಯಾಗಿ ಹೆಸರಾಗಿದ್ದಾನೆ. ೧೭೨೯ರಿಂದ ಆರಂಭಿಸಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕುವ ತನಕ ಅಸ್ತಿತ್ವದಲ್ಲಿದ್ದ ತಿರುವಾಂಕೂರು ರಾಜ್ಯ
ವನ್ನು ಸ್ಥಾಪಿಸಿದ್ದೇ ರಾಜಾ ಮಾರ್ತಾಂಡ ವರ್ಮ.
ಹಿಂದೆ ವೇನಾಡು ಎಂಬ ಹೆಸರಿನಲ್ಲಿದ್ದ ರಾಜ್ಯವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ, ತಿರುವಾಂಕೂರು ಸಂಸ್ಥಾನವನ್ನಾಗಿ ರೂಪಿಸಿ, ಬಲಿಷ್ಠ ರಾಜ್ಯವನ್ನು ಕಟ್ಟಿದ ಮಾರ್ತಾಂಡನು, ಮೊಘಲರೊಂದಿಗೆ ಹೊಂದಾಣಿಕೆಯನ್ನೂ ಸಾಧಿಸಿದ್ದನು. ೧೭೫೮ರಲ್ಲಿ ಮರಣಹೊಂದುವ ತನಕ ಆತನೇ ತಿರುವಾಂಕೂರು ರಾಜನಾಗಿದ್ದು, ಹಲವು ದಾಖಲೆಗಳನ್ನು ನಿರ್ಮಿಸಿದ್ದಾನೆ.
ದಕ್ಷಿಣ ಭಾರತದ ಇಂದಿನ ಕೇರಳ ರಾಜ್ಯದಲ್ಲಿ ಆಡಳಿತ ನಡೆಸಿದ ಮಾರ್ತಾಂಡ ವರ್ಮನ ಹಲವು ಸಾಧನೆಗಳಲ್ಲಿ ಅಪ್ರತಿಮ ಎನಿಸಿರುವ ಸಾಧನೆ ಎಂದರೆ, ಡಚ್ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯವನ್ನು ಸೋಲಿಸಿದ್ದು! ಜತೆಗೆ, ಡಚ್ ಸೈನಿಕರನ್ನು ಮತ್ತು ಕಮಾಂಡರ್‌ನನ್ನು ಸೆರೆಹಿಡಿದು, ಬಂಧಿಸಿ, ಅವರನ್ನು ತಾನು ಹೇಳಿದಂತೆ ಕೇಳುವಂತೆ ಮಾಡಿದ್ದು! ಅದಾಗಲೇ ಇಂಡೋನೇಷ್ಯಾ ಮತ್ತು ಸಿಲೋನ್‌ನಲ್ಲಿ ಪ್ರಬಲರಾಗಿದ್ದ ಡಚ್ಚರು, ನಮ್ಮ ದೇಶ ದಲ್ಲೂ ತಮ್ಮ ವಸಾಹತನ್ನು ಸ್ಥಾಪಿಸಿ, ಆಡಳಿತವನ್ನು ಮಾಡಲು ನಡೆಸಿದ ಪ್ರಯತ್ನಗಳು ಒಂದೆರಡಲ್ಲ; ಆದರೆ, ಮಾರ್ತಾಂಡ ವರ್ಮನ ಸೈನ್ಯದಿಂದ ಸೋತ ನಂತರ, ಡಚ್ಚರು ಭಾರತದಲ್ಲಿ ತಮ್ಮ ದುಸ್ಸಾಹಸಗಳನ್ನು ಮುಂದುವರಿಸಲಿಲ್ಲ; ಆನಂತರ ಅವರು ಭಾರತವನ್ನು ತೊರೆದರು.
ಇದೊಂದು ವಿಶೇಷ ವಿದ್ಯಮಾನ. ಏಕೆಂದರೆ, ಆ ದಿನಗಳಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪನಿಯು ಜಗತ್ತಿನ ಅತಿ ಪ್ರಬಲ ಮತ್ತು ಶ್ರೀಮಂತ ಕಂಪನಿ ಗಳಲ್ಲಿ ಒಂದಾಗಿತ್ತು!
ಡಚ್ ಈಸ್ಟ್ ಇಂಡಿಯಾ ಕಂಪನಿಯು ಬಲಿಷ್ಠವಾಗಿದ್ದ ಸಮಯದಲ್ಲಿ, ಅಂದರೆ ಸುಮಾರು ೧೭೪೧ರಲ್ಲಿ ತಿರುವಾಂಕೂರು ಸಂಸ್ಥಾನದ ಮೇಲೆ ಕಣ್ಣು ಹಾಕಿತು. ಆ ಯುರೋಪಿಯನ್ ಸೈನ್ಯವನ್ನು ಮಾರ್ತಾಂಡ ವರ್ಮ ರಾಜನು ಸೋಲಿಸಿದ ಕಥೆ ಸ್ವಾರಸ್ಯಕರವಾಗಿದೆ. ಅದಕ್ಕೂ ಮುಂಚೆ, ಪಶ್ಚಿಮ ಸಮುದ್ರ ದಲ್ಲಿ ಮಾರ್ತಾಂಡ ವರ್ಮನ ನೌಕಾಪಡೆಯು ಸಾಕಷ್ಟು ಬಲಿಷ್ಠವಾಗಿಯೇ ಇತ್ತು. ಮುಖ್ಯವಾಗಿ ವಿದೇಶಿ ವರ್ತಕರೊಂದಿಗೆ ವ್ಯಾಪಾರ ಮಾಡುವ ಉದ್ದೇಶ ದಿಂದ, ಯೋಧರನ್ನೂ ಒಳಗೊಂಡಿದ್ದ ಅವನ ನೌಕಾದಳವು ಕರಾವಳಿಯಲ್ಲಿ ಸಕ್ರಿಯವಾಗಿತ್ತು. ಅಂದು ಕೇರಳ ಮತ್ತು ಕರ್ನಾಟಕದಿಂದ ಯುರೋಪಿನ ದೇಶಗಳಿಗೆ ರಫ್ತಾಗುತ್ತಿದ್ದ ವಸ್ತು ಗಳಲ್ಲಿ ಮೆಣಸಿನ ಕಾಳು ಮತ್ತು ಇತರ ಸಂಬಾರ ಪದಾರ್ಥಗಳು ಬಹುಮುಖ್ಯ ಎನಿಸಿದ್ದವು.
ಅದಾಗಲೇ ಇಂಡೋನೇಷ್ಯಾವನ್ನು ವಶಪಡಿಸಿಕೊಂಡು, ಅಲ್ಲಿ ಮೆಣಸಿನ ವ್ಯಾಪಾರ ನಡೆಸುತ್ತಿದ್ದ ಡಚ್ಚರು, ಕೇರಳ ಕರಾವಳಿಯ ಮೇಲೆ ಕಣ್ಣು ಹಾಕಿ ದರು. ಮಾರ್ತಾಂಡ ವರ್ಮನು, ದೋಣಿ ಮತ್ತು ಹಡಗುಗಳ ಮೂಲಕ ಮೆಣಸಿನ ಕಾಳನ್ನು ರಫ್ತು ಮಾಡುವುದನ್ನು ಕಂಡ ಡಚ್ಚರು, ಆ ಎಲ್ಲಾ ಹಡಗುಗಳನ್ನು ಕಳುಹಿಸುವಾಗ ತಮಗೆ ಸುಂಕ ಕೊಡಬೇಕು, ಇಲ್ಲವಾದರೆ ಹಡಗುಗಳನ್ನು ಮುಳುಗಿಸುವುದಾಗಿ ಬೆದರಿಕೆ ಹಾಕಿದರು! ಡಚ್ಚರ ಬಳಿ ದೊಡ್ಡ
ಹಡಗುಗಳಿದ್ದವು, ಅಧಿಕ ಪ್ರಮಾಣದ ಮದ್ದುಗುಂಡು ಗಳಿದ್ದವು. ಹಡಗುಗಳನ್ನು ತಿರುವಾಂಕೂರಿನಾಚೆಯ ಸಮುದ್ರದಲ್ಲಿ ಓಡಾಡಿಸುತ್ತಾ, ಸ್ಥಳೀಯ ಹಡಗುಗಳನ್ನು, ದೋಣಿಗಳನ್ನು ಅವರು ಬೆದರಿಸುತ್ತಿದ್ದರು.
ಡಚ್ಚರ ಈ ಕಾನೂನುಬಾಹಿರ ಚಟುವಟಿಕೆಗೆ ಕಡಿವಾಣ ಹಾಕಲು ಮಾರ್ತಾಂಡವರ್ಮ ಕಾರ್ಯಪ್ರವೃತ್ತನಾದನು. ಆತ ಅಧಿಕಾರ ವಹಿಸಿಕೊಂಡ ನಂತರ
ಮೊದಲು ಮಾಡಿದ್ದೆಂದರೆ, ಕೇರಳದ ಹಲವು ಸಣ್ಣಪುಟ್ಟ ರಾಜರುಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡದ್ದು. ಅವರೆಲ್ಲರಿಂದ ಡಚ್ ಈಸ್ಟ್ ಇಂಡಿಯಾ ಕಂಪನಿಯು, ಕಡಿಮೆ ದರದಲ್ಲಿ ಮೆಣಸಿನ ಕಾಳನ್ನು ಖರೀದಿಸುತ್ತಿತ್ತು. ಅವರೆಲ್ಲರೂ ಮಾರ್ತಾಂಡವರ್ಮನ ಆಡಳಿತವನ್ನು ಒಪ್ಪಿ ಕೊಂಡದ್ದರಿಂದ, ಡಚ್ಚರು ಮೆಣಸಿನ ಕಾಳನ್ನು ಅಗ್ಗದ ದರದಲ್ಲಿ ಖರೀದಿಸಲು ತೊಡಕುಂಟಾಯಿತು. ಆ ರಾಜರುಗಳು ತಮಗೇ ಮೆಣಸಿನ ಕಾಳನ್ನು ಮಾರಬೇಕು ಎಂದು ಡಚ್ಚರು ತಾಕೀತು ಮಾಡಿದ್ದನ್ನು, ಮಾರ್ತಾಂಡ ವರ್ಮನ ಸೈನ್ಯ ಸವಾಲೆಂದು ಸ್ವೀಕರಿಸಿತು. ಸ್ಥಳೀಯ ನಾವಿಕರನ್ನು ಒಗ್ಗೂಡಿಸಿ, ಅದಾಗಲೇ ಮಾರ್ತಾಂಡ ವರ್ಮನು ಒಂದು ನೌಕಾದಳವನ್ನು ಕಟ್ಟಿದ್ದನು.
ಡಚ್ ಈಸ್ಟ್ ಇಂಡಿಯಾ ಕಂಪನಿಯ ಹಡಗುಗಳು ಸಲೀಸಾಗಿ ಓಡಾಡದಂತೆ ಈ ಸ್ಥಳೀಯ ನೌಕಾದಳ ತಡೆ ಒಡ್ಡಿತು. ಮಾರ್ತಾಂಡ ವರ್ಮನ ಬಲವನ್ನು ಗುರುತಿಸಿ, ೧೭೩೯ ರಲ್ಲಿ ಡಚ್ಚರು ಒಪ್ಪಂದಕ್ಕೆ ಬರಲು ಸಿದ್ಧರಾದರು. ‘ನಮ್ಮ ವ್ಯಾಪಾರಕ್ಕೆ ತಡೆ ಒಡ್ಡಬೇಡಿ, ಇಲ್ಲವಾದರೆ ತಿರುವಾಂಕೂರಿನ ಮೇಲೆ ಆಕ್ರಮಣ ಮಾಡುತ್ತೇವೆ’ ಎಂದು ಬೆದರಿಕೆ ಯನ್ನೂ ಹಾಕಿದರು. ಬಲಿಷ್ಠ ಡಚ್ಚರ ಬೆದರಿಕೆಗೆ ಮಾರ್ತಾಂಡ ವರ್ಮನು ಸೊಪ್ಪುಹಾಕಲಿಲ್ಲ. ದೂರದ
ದೇಶದಿಂದ ಇಲ್ಲಿಗೆ ಬಂದು ಬೆದರಿಕೆ ಹಾಕುವುದನ್ನು ಬಿಡಿ ಎಂದು ತಾಕೀತು ಮಾಡಿದನು.
ಮಾತ್ರವಲ್ಲ, ‘ತಿರುವಾಂಕೂರಿನ ನೌಕಾದಳ ಸಾಕಷ್ಟು ಬಲಶಾಲಿಯಾಗಿದೆ; ನಾವೇ ಒಂದು ದಿನ ಯುರೋಪಿನ ದೇಶಗಳ ಮೇಲೆ ದಂಡಯಾತ್ರೆ ಕೈಗೊಳ್ಳಲು ಯೋಚಿಸಿದ್ದೇವೆ’ ಎಂದು ಹೇಳಿದನು! ಒಪ್ಪಂದ ಮುರಿದುಬಿದ್ದ ಕೋಪದಲ್ಲಿ ಡಚ್ ಸೈನ್ಯವು ೧೭೩೯ರ ಕೊನೆಯ ಭಾಗದಲ್ಲಿ ತಿರುವಾಂಕೂ ರಿನ ಮೇಲೆ ಯುದ್ಧ ಘೋಷಿಸಿತು. ಇಂಡೋನೇಷ್ಯಾ, ಸಿಲೋನ್ ನಲ್ಲಿದ್ದ ಸೈನಿಕರನ್ನು ಕರೆಯಿಸಿ, ಕೊಲ್ಲಂ ಬಳಿ ಮಾರ್ತಾಂಡ ವರ್ಮನ ಸೈನ್ಯವನ್ನು ಹಿಮ್ಮೆಟ್ಟಿಸಿತು. ಸನಿಹದ ಎಡವಾದಲ್ಲಿ ಆಡಳಿತ ನಡೆಸಿದ್ದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಗಳು, ಡಚ್ಚರನ್ನು ಅಭಿನಂದಿಸಿದರು ಮತ್ತು ತಮ್ಮ ವಸಾಹತಿನ ಮೇಲೆ ಆಕ್ರಮಣ ಮಾಡದೇ ಇರುವಂತೆ ಮನವಿ ಮಾಡಿದರು!
೧೭೪೧ರಲ್ಲಿ ಮುಂದುವರಿದ ಡಚ್ಚರ ಆಕ್ರಮಣವು, ಆರಂಭದಲ್ಲಿ ತಿರುವಾಂಕೂರು ಸಂಸ್ಥಾನದ ಹಲವು ಪ್ರದೇಶಗಳನ್ನು ವಶಪಡಿಸಿಕೊಂಡಿತು. ೧೦.೨.೧೭೪೧ ರಂದು ಏಳು ದೊಡ್ಡ ಹಡಗುಗಳು ಮತ್ತು ಇತರ ದೋಣಿಗಳಲ್ಲಿ ಬಂದ ಡಚ್ಚರ ಸೈನ್ಯ, ಕೋಲಾಚಲ್ ಹತ್ತಿರ ಲಂಗರು ಹಾಕಿತು. ಇನ್ನಷ್ಟು ಸೈನ್ಯವನ್ನು ಕರೆಸಿಕೊಂಡು, ತಿರುವಾಂಕೂರಿನ ಮೇಲೆ ದಾಳಿ ಮಾಡುವುದು ಡಚ್ ಕರ್ನಲ್‌ನ ಉದ್ದೇಶವಾಗಿತ್ತು. ಆದರೆ, ಆ ಸಮಯದಲ್ಲಿ, ಜಾವಾ ಯುದ್ಧದಲ್ಲಿ ಡಚ್ ಸೈನ್ಯ ತೊಡಗಿತ್ತು. ಜತೆಗೆ, ಸಿಲೋನಿನಿಂದ ಕನಿಷ್ಠ ೩೦೦ರಿಂದ ೪೦೦ ಜನರನ್ನಾದರೂ ಕಳುಹಿಸಿ ಎಂದು ಕಮಾಂಡರ್ ವಾನ್ ಗೊಲೆನಿಸ್ ಮನವಿ ಮಾಡಿದ್ದ, ಆದರೆ ಅವರು ಸಕಾಲದಲ್ಲಿ ಬರಲಿಲ್ಲ.
ನಿಧಾನವಾಗಿ ಮುಂದುವರಿಯುತ್ತಿದ್ದ ಡಚ್ಚರ ಸೈನ್ಯ ವನ್ನು ಕಂಡು, ಮಾರ್ತಾಂಡವರ್ಮ ಸುಮ್ಮನೆ ಕೂರಲಿಲ್ಲ. ಸುಮಾರು ೫೦,೦೦೦ ಬಲದ ಸೈನ್ಯ ವನ್ನು ಆತ ಸಿದ್ಧಪಡಿ ಸಿದ್ದ. ಮುಖ್ಯವಾಗಿ, ಸಮುದ್ರದಲ್ಲಿ ನಡೆಯುವ ಸೆಣಸಾಟಕ್ಕಾಗಿ, ಮುಕ್ಕುವರ್ ಎಂಬ ಕಡಲವೀರರ ಪಡೆಯನ್ನು ಸಿದ್ಧಪಡಿಸಿದ್ದ. ಸಣ್ಣ ಮತ್ತು ದೊಡ್ಡ ದೋಣಿಗಳಲ್ಲಿ ಪಯಣಿಸಿ, ಎದುರಾಳಿಗಳನ್ನು ಮಣ್ಣುಮುಕ್ಕಿಸುವಲ್ಲಿ ಇವರು ಪರಿಣತರು. ಈ ವಿಚಾರವು ಡಚ್ ಕಮಾಂಡರ ನಿಗೂ ಗೊತ್ತಿತ್ತು. ಆದ್ದರಿಂದ, ಅವನು ತನ್ನ ಏಜೆಂಟರುಗಳನ್ನು ಕಳುಹಿಸಿ, ಮುಕ್ಕುವರ್ ಯೋಧರನ್ನು ತಮ್ಮ ಕಡೆಗೆ ಸೆಳೆಯಲು ಪ್ರಯತ್ನಿಸಿದ. ಹಣ ಮತ್ತು ಇತರ ಆಮಿಷವನ್ನು ಒಡ್ಡಲಾಯಿತು. ಆದರೆ, ಮುಕ್ಕುವರ್ ಯೋಧರು ಯಾವುದೇ ಸಂದರ್ಭದಲ್ಲೂ ರಾಜನ ಕೈ ಬಿಡಲಿಲ್ಲ.
ಈ ನಡುವೆ, ಡಚ್ಚರು ತಿರುವಾಂಕೂರಿನ ಮೇಲೆ ಆಕ್ರಮಣವನ್ನು ಮುಂದುವರಿಸಿದರು. ಅಪಾರ ಪ್ರಮಾಣದ ಆಹಾರ ಧಾನ್ಯವನ್ನು, ನೀರನ್ನು ಸಂಗ್ರಹಿಸಿ
ಟ್ಟುಕೊಂಡು, ಮಾರ್ತಾಂಡ ವರ್ಮನ ಸೇನೆಗೆ ದಿಗ್ಬಂಧನ ವಿಽಸಿದರು. ಆಗ ನಡೆದ ಒಂದು ಆಕಸ್ಮಿಕವು ಡಚ್ ಸೈನ್ಯದ ಬೆನ್ನುಮೂಳೆಯನ್ನೇ ಮುರಿಯಿತು.
ತಿರುವಾಂಕೂರು ಸೈನಿಕರು ಹಾರಿಸಿದ ಒಂದು ಫಿರಂಗಿ ಗುಂಡು ನೇರವಾಗಿ ಡಚ್ಚರು ಸಂಗ್ರಹಿಸಿದ್ದ ಮದ್ದುಗುಂಡುಗಳಿದ್ದ ಗೋದಾಮಿನ ಮೇಲೆ ಬಿದ್ದು, ಸಂಗ್ರಹದ ಒಂದು ದೊಡ್ಡ ಭಾಗವು ಸೋಟಿಸಿತು. ಅದರ ಜತೆಯಲ್ಲೇ, ಡಚ್ಚರು ಸಂಗ್ರಹಿಸಿದ್ದ ಅಕ್ಕಿ ಮತ್ತು ಆಹಾರವು ಸಂಪೂರ್ಣ ಅಗ್ನಿಗೆ ಆಹುತಿ ಯಾಯಿತು.
ಈ ಸಮಯದಲ್ಲೇ, ತಿರುವಾಂಕೂರಿನ ಸೈನ್ಯವು ಡಚ್ಚರನ್ನು ಸಂಪೂರ್ಣ ಸುತ್ತುವರಿಯಿತು. ಇದು ನಡೆದದ್ದು ೫.೮.೧೭೪೧ರಂದು. ಎರಡು ದಿನದ ನಂತರ, ಡಚ್ ಸೈನ್ಯವು ಮಾರ್ತಾಂಡ ವರ್ಮನಿಗೆ ಶರಣಾಯಿತು. ಇದೊಂದು ಅಭೂತಪೂರ್ವ ದಿನ. ಯುರೋಪಿಯನ್ ಸೈನ್ಯವು ನಮ್ಮ ದೇಶ
ದವರಿಗೆ ಸೋತ ಕೆಲವೇ ಅಪರೂಪದ ಸಂದರ್ಭಗಳಲ್ಲಿ ಇದೂ ಒಂದು. ಡಚ್ ಸೈನ್ಯವು ತಿರುವಾಂಕೂರು ರಾಜರಿಗೆ ಶರಣಾದ ಖಚಿತ ದಿನಾಂಕದ ಕುರಿತು ಒಂದೆರಡು ವಾರಗಳ ಅಂತರದ ಸಣ್ಣ ಗೊಂದಲವಿದೆ; ಆದರೆ, ಡಚ್ ಕಮಾಂಡರ್ ಮತ್ತು ಸೈನಿಕರು ಶರಣಾಗಿ, ತಿರುವಾಂಕೂರಿನ ಜೈಲನ್ನು ಸೇರಿದ್ದು ಮಾತ್ರ ಇತಿಹಾಸದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.
ಡಚ್ ಸೈನಿಕರು ಒಂದು ಷರತ್ತು ಹಾಕಿದ್ದರು- ‘ನಾವು ಶರಣಾಗುತ್ತೇವೆ, ದಯವಿಟ್ಟು ನಮ್ಮನ್ನು ಕನ್ಯಾಕುಮಾರಿಗೆ ಹೋಗಲು ಅನುಮತಿ ಕೊಡಿ’ ಎಂದು. ಆದರೆ, ಮಾರ್ತಾಂಡ ವರ್ಮನು ಈ ಷರತ್ತನ್ನು ತಿರಸ್ಕರಿಸಿ, ಅವರು ಕೋಟೆಯಿಂದ ಹೊರಬಂದ ಕೂಡಲೇ ನೇರವಾಗಿ ಜೈಲಿಗೆ ಕಳಿಸಿದ. ಜತೆಗೆ, ಡಚ್ಚರ ಬಳಿಯಿದ್ದ ತುಪಾಕಿ ಮತ್ತು ಫಿರಂಗಿಗಳನ್ನು ವಶಪಡಿಸಿಕೊಂಡ. ಶರಣಾದ ೨೪ ಯುರೋಪಿಯನ್ ಸೈನಿಕರನ್ನು ಉದಯಗಿರಿ ಕೋಟೆಯಲ್ಲಿ ಬಂಧಿಸ ಲಾಯಿತು. ಕೆಲವು ಕಾಲದ ನಂತರ, ಅವರ ಶಸ್ತ್ರಗಳನ್ನು ವಾಪಸ್ ನೀಡಲಾಯಿತು ಮತ್ತು ತಿರುವಾಂಕೂರಿನ ಸೈನ್ಯದಲ್ಲಿ ಕೆಲಸ ನೀಡಲಾಯಿತು. ಡಚ್ ಅಡ್ಮಿರಲ್ ಡಲನೋಯ್ ಮತ್ತು ಇತರ ೨೮ ಮಂದಿ ಹಿರಿಯ ಅಽಕಾರಿಗಳು ಈ ಈ ಕೆಲಸವನ್ನು ಒಪ್ಪಿಕೊಂಡು, ಎರಡು ದಶಕಗಳ ಕಾಲ ತಿರುವಾಂಕೂ ರಿನ ರಾಜನ ಕೈಕೆಳಗೆ ಕೆಲಸ ಮಾಡಿದರು. ಈ ಸಮಯದಲ್ಲಿ, ಮಾರ್ತಾಂಡ ವರ್ಮನು ಅವರ ಸೇವೆಯನ್ನು ಉಪಯೋಗಿಸಿಕೊಂಡು, ಬಲವಾದ ಕೋಟೆಗಳನ್ನು ಕಟ್ಟಿಸಿದನು.
ಡ ಲನೋಯ್ ಎಂಬ ಹಿರಿಯ ಅಧಿಕಾರಿಯು ಬಡ್ತಿಯನ್ನೂ ಪಡೆದನು; ಆತನು ತಿರುವಾಂಕೂರು ಸೈನ್ಯವನ್ನು ಆಧುನೀಕರಣಗೊಳಿಸಿದನು ಮತ್ತು ಹಲವು ಕೋಟೆಗಳನ್ನು ಕಟ್ಟಿಸಿದನು. ೧೭೮೯ರಲ್ಲಿ ಮೈಸೂರಿನಿಂದ ಆಕ್ರಮಿಸಿ ಬಂದ ಟಿಪ್ಪುಸುಲ್ತಾನನ ಸೈನ್ಯವನ್ನು ಈ ಕೋಟೆಗಳ ಸರಣಿಯು ಸಶಕ್ತ ವಾಗಿ ತಡೆಯಿತು. ಡಚ್ ಸೇನಾಧಿಕಾರಿ ಡಲನೋಯ್ ಕೊನೆಯ ತನಕವೂ ಮಾರ್ತಾಂಡವರ್ಮನಿಗೆ ಆಭಾರಿಯಾಗಿದ್ದನು; ಆತ ನಿಧನನಾದಾಗ, ಉದಯಗಿರಿ ಕೋಟೆಯಲ್ಲಿ ಆತನ ಅಂತ್ಯಕ್ರಿಯೆಯನ್ನು ಮಾಡಲಾಯಿತು. ಆತನ ನೆನಪಿನಲ್ಲಿ ಕನ್ಯಾಕುಮಾರಿಯಲ್ಲಿರುವ ಆ ಕೋಟೆಯನ್ನು ಡಿಲ್ಲಾನೈ ಕೋಟೆ ಎಂದು ಇಂದಿಗೂ ಕರೆಯುತ್ತಾರೆ!
ಡಚ್ ಸೈನ್ಯವನ್ನು ೧೭೪೧ರಲ್ಲಿ ತಿರುವಾಂಕೂರು ಸೈನ್ಯವು ಸೋಲಿಸಿದ ನಂತರ, ಡಚ್ಚರು ನಮ್ಮ ದೇಶದಲ್ಲಿ ಕಾಲೂರಲು ಸಾಧ್ಯವಾಗಲೇ ಇಲ್ಲ; ಮುಂದಿನ ಕೆಲವು ವರ್ಷಗಳ ಕಾಲ ಆ ಸುತ್ತಲಿನಲ್ಲಿ ಅವರು ಸಣ್ಣಪುಟ್ಟ ಉಪಟಳ ನಡೆಸಿ, ಕೆಲವು ಕೋಟೆಗಳನ್ನು ವಶಪಡಿಸಿಕೊಳ್ಳಲು ಯತ್ನಿಸಿದರೂ, ಇಡೀ ಭಾರತದಲ್ಲಿ ತಮ್ಮ ಆಧಿಪತ್ಯವನ್ನು ಸ್ಥಾಪಿಸಬೇಕೆಂಬ ಅವರ ಅಭಿಲಾಷೆ ಕೊನೆಗೂ ಈಡೇರಲಿಲ್ಲ. ಇಂಡೋನೇಷ್ಯಾ, ಜಾವಾ ಮೊದಲಾದ ಕಡೆ ಅವರು ತಮ್ಮ ಅಧಿಕಾರವನ್ನು ಮುಂದುವರಿಸಿದರು. ಇದಾದ ಒಂದು ದಶಕದ ಅವಧಿಯಲ್ಲಿ, ಮೆಣಸಿನ ಕಾಳಿನ ವ್ಯಾಪಾರದ ಸಂಪೂರ್ಣ ಹತೋಟಿಯು ತಿರುವಾಂಕೂರು ರಾಜನ ಕೈಗೆ ಬಂತು. ಇದರಿಂದ ಡಚ್ಚರ ಅಧಿಕ ಲಾಭದಾಸೆಗೆ ಭಂಗಬಂದಿದ್ದಂತೂ ನಿಜ. ೧೭೫೩ ರಲ್ಲಿ ಡಚ್ಚರು ಮತ್ತು ತಿರುವಾಂಕೂ ರು ರಾಜನ ನಡುವೆ ಒಪ್ಪಂದವೇರ್ಪಟ್ಟು, ರಾಜನ ಆಡಳಿತದಲ್ಲಿ ತಾವು ತಲೆ ಹಾಕುವುದಿಲ್ಲ ಎಂದು ಒಪ್ಪಿಕೊಂಡರು ಮತ್ತು ತಿರುವಾಂಕೂರು ಸೈನ್ಯಕ್ಕೆ ಶಸ್ತ್ರ, ಮದ್ದು ಗುಂಡುಗಳನ್ನು ನೀಡು ವುದಾಗಿ ಒಪ್ಪಿಕೊಂಡರು. ಇಲ್ಲಿಗೆ ಡಚ್ಚರು ಭಾರತದ ಮೇಲಿನ ತಮ್ಮ ಹಿಡಿತವನ್ನು ಕಳೆದುಕೊಂಡರು; ಆದರೆ, ಇತ್ತ ಬ್ರಿಟಿಷರು ೧೭೯೯ರಲ್ಲಿ ಟಿಪ್ಪುಸುಲ್ತಾನನ್ನು ಸೋಲಿಸುವ ಮೂಲಕ, ದಕ್ಷಿಣ ಭಾರತದಲ್ಲಿ ತಮ್ಮ ಹಿಡಿತವನ್ನು
ಬಿಗಿಗೊಳಿಸಿದರು.
ರಾಜ ಮಾರ್ತಾಂಡವರ್ಮನ ಒಂದು ‘ದಾನ’ವು ಶ್ರೇಷ್ಠದಾನ ಎನಿಸಿದೆ. ತಿರುವಾಂಕೂರಿನ ಅನಂತಪದ್ಮನಾಭನಿಗೆ (ದೇವರಿಗೆ) ತನ್ನ ಇಡೀ ರಾಜ್ಯವನ್ನು ಆತ ದಾನ ಮಾಡಿದ. ಇದು ನಡೆದದ್ದು ೧೭೫೦ರಲ್ಲಿ. ಆ ನಂತರ, ಆತ ತನ್ನನ್ನು ‘ಪದ್ಮನಾಭ ದಾಸ’ ಎಂದು ಕರೆದು ಕೊಂಡು, ದೇವರ ನಿರ್ದೇಶನದಂತೆ ರಾಜ್ಯಭಾರ ಮಾಡುವುದಾಗಿ ನಿರ್ಧರಿಸಿದ. ಇಂದು ಕೇರಳವನ್ನು ‘ದೇವರ ಸ್ವಂತ ರಾಜ್ಯ’ ಎನ್ನುವಾಗ, ರಾಜಾಮಾರ್ತಾಂಡ ವರ್ಮನ ಈ ಅಪೂರ್ವ ಕೊಡುಗೆ ನೆನಪಾಗುತ್ತದೆ.