Friday, 22nd November 2024

Martin Movie:ರಾಜೇಂದ್ರ ಭಟ್‌ ಅಂಕಣ: ವಿಮರ್ಶೆ ಮಾಡುವ ಅಧಿಕಾರ ಕಿತ್ತುಕೊಳ್ಳುವ ಮಂದಿಗೆ ಧಿಕ್ಕಾರ!

martin kannada movie

ಸ್ಫೂರ್ತಿಪಥ ಅಂಕಣ: ಮಾರ್ಟಿನ್ ಸಿನೆಮಾ ಬಗ್ಗೆ ನೆಗೆಟಿವ್ ಪೋಸ್ಟ್ – ಬರೆದವರ ಬಂಧನವೇಕೆ?

Rajendra Bhat K
  • ರಾಜೇಂದ್ರ ಭಟ್ ಕೆ.

ಮಾರ್ಟಿನ್ ಸಿನೆಮಾ (Martin movie) ತುಂಬಾ ಕೆಟ್ಟದಾಗಿದೆ ಎಂದು ಪೋಸ್ಟ್ ಮಾಡಿದ ಯು ಟ್ಯೂಬರ್ (Youtuber) ಒಬ್ಬರ ಬಂಧನವಾಗಿದೆ. ಮಾರ್ಟಿನ್ ಸಿನೆಮಾದ ಹೀರೋನ ಅಭಿಮಾನಿಗಳು ಕೊಟ್ಟ ದೂರನ್ನು ಪರಿಗಣಿಸಿ ಪೊಲೀಸರು ಆತನನ್ನು ಬಂಧಿಸಿ ಪೋಸ್ಟ್ ಡಿಲೀಟ್ ಮಾಡಿಸಿದ್ದಾರೆ! ಈ ಮಟ್ಟಿಗೆ ಮಾರ್ಟಿನ್ ಸಿನೆಮಾ ಒಂದು ಕೆಟ್ಟ ದಾಖಲೆಯನ್ನು ಮಾಡಿದೆ!

ವಿಮರ್ಶೆ ಮಾಡುವ ಅಧಿಕಾರ ಅಭಿವ್ಯಕ್ತಿ ಸ್ವಾತಂತ್ರ್ಯ ಅಲ್ಲವೇ?

ಸಿನೆಮಾ ಇಂದು ಇಂಡಸ್ಟ್ರಿ ಎಂದು ಕರೆಸಿಕೊಂಡು ತುಂಬಾ ದಶಕಗಳೇ ಆಯಿತು. ಹಾಗಿರುವಾಗ ಒಂದು ಸಿನೆಮಾ ಒಂದು ‘ಮಾರುಕಟ್ಟೆಯ ಉತ್ಪನ್ನ’ ಆಗುತ್ತದೆ ಹೌದಲ್ವಾ? ಒಂದು ಉತ್ಪನ್ನ ಮಾರುಕಟ್ಟೆಗೆ ಬಂದ ನಂತರ ಅದು ಚೆನ್ನಾಗಿದೆ, ಅದು ಚೆನ್ನಾಗಿಲ್ಲ ಎನ್ನುವ ಅಧಿಕಾರ ಇರುವುದು ಯಾರಿಗೆ? ಉತ್ಪಾದಕರಿಗೋ ಅಥವಾ ಗ್ರಾಹಕರಿಗೋ? ಗ್ರಾಹಕರು ನಿಮ್ಮ ಉತ್ಪನ್ನದ ಬಗ್ಗೆ ಹೊಗಳಿ ಬರೆದರೆ, ಉತ್ಪ್ರೇಕ್ಷೆ ಮಾಡಿ ಬರೆದರೆ ನಿಮಗೆ ಖುಷಿ ಆಗ್ತದೆ ಅಲ್ಲವೇ? ಹಾಗೆಯೇ ನೆಗೆಟಿವ್ ಫೀಡ್ ಬ್ಯಾಕ್ ಕೊಟ್ಟರೆ ನಿಮಗೆ ಯಾಕೆ ಬೇಜಾರು ಆಗಬೇಕು? ಬರೀ ಹೊಗಳಿಕೆ ಬೇಕು ಅಂತಾದರೆ ಈ ಕ್ಷೇತ್ರಕ್ಕೆ ಯಾಕೆ ಬರ್ತೀರಾ? ದುಡ್ಡು ಕೊಟ್ಟು ವಂದಿ ಮಾಗಧರನ್ನು ನೇಮಕ ಮಾಡಿಕೊಳ್ಳಿ. ತೆಗಳಿಕೆ ಬರಬಾರದು ಅಂದರೆ ಸಿನೆಮಾ ಮಾಡಬೇಡಿ.

ಫೇಸ್ ಬುಕ್ಕಿಗೆ ನೀವು ಬಂದ ನಂತರ ನಿಮ್ಮ ಮುಖ ಚೆನ್ನಾಗಿದೆ ಆಂದರೂ ನೀವು ಕೇಳಬೇಕು, ಚೆನ್ನಾಗಿಲ್ಲ ಅಂದರೂ ನೀವು ಕೇಳಬೇಕು! ನೆಗೆಟಿವ್ ಮಾತು ಬರಬಾರದು ಅಂದರೆ ಫೇಸ್ಬುಕ್ಕಿಗೆ ಬರಬಾರದು ಅಷ್ಟೇ!

ರಸ್ತೆಯಲ್ಲಿ ನಿಮ್ಮ ಚಂದದ ಹೆಂಡತಿಯ ಜೊತೆಗೆ ನೀವು ನಡೆದುಕೊಂಡು ಹೋಗುವಾಗ ಖುಶಿ ಆಗಬೇಕು. ಅದು ಬಿಟ್ಟು ಯಾರೋ ಕೆಲವರು ನಿಮ್ಮ ಹೆಂಡತಿಯನ್ನು ಕೆಕ್ಕರಿಸಿ ನೋಡಿದರು ಅಂದರೆ ಸಿಟ್ಟು ಮಾಡಿಕೊಳ್ಳಬಾರದು ಅಲ್ಲವೇ? ನಿಂದಕರು ಇರಬೇಕು ಎಂದು ದಾಸರು ಹೇಳಿದ್ದು ಸರಿ ಇದೆ ಅಲ್ವ?

ತೆಗಳಿಕೆಯ ಬಗ್ಗೆ ರವಿ ಬೆಳಗೆರೆ ಹೇಳಿದ್ದೇನು?

ನನ್ನ ಪುಸ್ತಕ ಬರೆದು ಪಬ್ಲಿಷ್ ಮಾಡುವತನಕ ಅದು ನನ್ನ ಪುಸ್ತಕ. ಅದು ಪಬ್ಲಿಷ್ ಆದ ನಂತರ ಅದು ನನ್ನ ಓದುಗರ ಸೊತ್ತು. ಅದು ಚೆನ್ನಾಗಿಲ್ಲ ಅಂತ ನನಗೆ ಬೈದು ಉಪ್ಪಿನಕಾಯಿ ಹಾಕಿದರೂ ನನಗೆ ಡಿಫರೆನ್ಸ್ ಆಗುವುದಿಲ್ಲ. ಏಕೆಂದರೆ ಅದು ನನ್ನ ಓದುಗರ ಸೊತ್ತು ಅಂದಿದ್ದರು ಬೆಳಗೆರೆ!

ಕನ್ನಡದ ವರನಟ ಡಾಕ್ಟರ್ ರಾಜಕುಮಾರ್ ಅವರ ಒಂದು ಸಿನೆಮಾ ನೋಡಿ ಖ್ಯಾತ ಲೇಖಕಿ ಗೌರಿ ಲಂಕೇಶ್ ಸಿಕ್ಕಾಪಟ್ಟೆ ಬೈದು ಲೇಖನ ಬರೆದಿದ್ದರು. ಆಗ ರಾಜಕುಮಾರ್ ಒಂದಿಷ್ಟೂ ಬೇಜಾರು ಮಾಡಿಕೊಳ್ಳದೆ ‘ಆ ಹೆಂಗಸು ಬರೆದ ಮಾತುಗಳು ಸರಿ ಇದೆ ಅನ್ನಿಸ್ತಾ ಇದೆ. ಅವರನ್ನು ಕರೆದು ಸನ್ಮಾನ ಮಾಡಿ ‘ ಎಂದು ತನ್ನ ಮಕ್ಕಳಿಗೆ ಹೇಳಿದ್ದರು!

ಸಿನೆಮಾ ನೋಡಿ ಒಬ್ಬ ಹಳ್ಳಿ ಹೆಂಗಸು ವಜ್ರಮುನಿ ಮುಖಕ್ಕೆ ಥೂ ಎಂದಿತ್ತು!

ಕನ್ನಡದ ಖ್ಯಾತ ಖಳನಟ ವಜ್ರಮುನಿ ಒಂದು ಟೆಂಟ್ ಥಿಯೇಟರಿನಲ್ಲಿ ತನ್ನದೇ ಸಿನೆಮಾ ‘ಪ್ರೇಮದ ಕಾಣಿಕೆ’ ನೋಡಲು ಹೋಗಿದ್ದರು. ಅದರಲ್ಲಿ ಅವರದ್ದು ಅತ್ಯಂತ ಕ್ರೂರವಾದ ಖಳನಾಯಕ ಪಾತ್ರ. ಸಿನೆಮಾವನ್ನು ಮುಗಿಸಿ ಹೊರಬರುವಾಗ ಒಬ್ಬಳು ಹಳ್ಳಿಯ ಮುದುಕಿ ವಜ್ರಮುನಿಯವರ ಹತ್ತಿರ ಬಂದು ಅವರ ಕಾಲರ್ ಹಿಡಿದು ಕೆನ್ನೆಗೆ ಎರಡು ಏಟು ಹೊಡೆದರಂತೆ. ‘ಹೆಣ್ಣು ಮಕ್ಕಳಿಗೆ ಹಾಗೆಲ್ಲ ತೊಂದರೆ ಕೊಡ್ತೀಯಾ?’ ಎಂದು ಬೈದೇ ಬಿಟ್ಟರಂತೆ.

ವಜ್ರಮುನಿ ತನ್ನ ಕೈಗಳನ್ನು ಮುಗಿದು ‘ನೀನು ಮಹಾತಾಯಿ. ನನ್ನ ತಪ್ಪುಗಳನ್ನು ತಿದ್ದಲು ಅವಕಾಶ ಮಾಡಿಕೊಟ್ಟದಕ್ಕೆ ನಿನಗೆ ಧನ್ಯವಾದ. ಇದು ನನಗೆ ಸಿಕ್ಕಿದ ನಿಜವಾದ ಪ್ರಶಸ್ತಿ ‘ ಎಂದು ಕಾಲು ಹಿಡಿದು ನಮಸ್ಕಾರ ಮಾಡಿದರಂತೆ. ಅವರು ಲೆಜೆಂಡ್ ಆಗಲು ಇಂತಹ ನೂರಾರು ನಿದರ್ಶನಗಳು ನಮ್ಮ ಕಣ್ಣಮುಂದಿವೆ.

ಮಾರ್ಟಿನ್ ಅಭಿಮಾನಿಗಳು ಮಾಡಿದ್ದು ಸರಿ ಎಂದಾದರೆ…

೧) ಒಂದು ಸಿನೆಮಾ ಚೆನ್ನಾಗಿಲ್ಲ ಎಂದು ಹೇಳಿದ, ಬರೆದ ಎಲ್ಲರ ಮೇಲೂ ಅವರು ಕೇಸ್ ಹಾಕಿ ಅರೆಸ್ಟ್ ಮಾಡಬಹುದು.

೨) ಒಂದು ಕಾದಂಬರಿ ಚೆನ್ನಾಗಿಲ್ಲ ಎಂದು ಬರೆದ, ಹೇಳಿದ ಯಾವುದೇ ವ್ಯಕ್ತಿಯ ಮೇಲೆ ಕಾದಂಬರಿಕಾರರು ಕೇಸ್ ಜಡಿದು ಬಂಧಿಸಬಹುದು.

೩) ಒಂದು ಹಾಡು ಚೆನ್ನಾಗಿಲ್ಲ ಎಂದು ಬರೆದ ವ್ಯಕ್ತಿಯ ಮೇಲೆ ಗಾಯಕರು, ಸಂಗೀತ ಸಂಯೋಜಕರು ಕೇಸ್ ಹಾಕಿ ಬಂಧಿಸಬಹುದು!

೫) ನಾನು ಮಾಡಿದ ಭಾಷಣ ಬರೇ ಓಳು ಎಂದು ಯಾರಾದರೂ ಹೇಳಿದರೆ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಹಾಕಿದರೆ ನಾನು ಆತನ ಮೇಲೆ ಪೊಲೀಸರಲ್ಲಿ ದೂರು ದಾಖಲಿಸಬಹುದು ಅಥವಾ ಅರೆಸ್ಟ್ ಮಾಡಿಸಬಹುದು.

೬) ಹೀಗೆ ಟೀಕೆ ಮಾಡಿದ, ವಿಮರ್ಶೆ ಮಾಡಿದ ಎಲ್ಲರ ಬಾಯಿ ಮುಚ್ಚಿಸುತ್ತ ಹೋಗೋದು ಅಂದರೆ ಎಷ್ಟು ಮಂದಿಯ ಬಾಯಿ ಮುಚ್ಚಿಸಬಹುದು?

೭) ಎಷ್ಟೋ ಬಾರಿ ಈ ರೀತಿಯ ಬೈಗುಳ, ಟೀಕೆ ನಮಗೆ ಪ್ರಚಾರ ಆಯ್ತು ಎಂದು ಹೇಳುವವರು ಇದ್ದಾರೆ. ಇದು ಸಮಸ್ಯೆಯ ಇನ್ನೊಂದು ಮುಖ. ನನಗೆ ಅಂತವರ ಬಗ್ಗೆ ಅಯ್ಯೋ ಪಾಪ ಎಂದೇ ಅನ್ನಿಸುತ್ತದೆ. ಯಾಕೆಂದರೆ ಅವರಿಗೆ ಅವರ ಉತ್ಪನ್ನಗಳ ಮೇಲೆ ಭರವಸೆ ಇಲ್ಲ ಎಂದಾಯಿತು.

೮) ಎಷ್ಟೋ ಬಾರಿ ನೆಗೆಟಿವ್ ವಿಮರ್ಶೆ ಪಡೆದರೂ ಸಿನೆಮಾ ಹಿಟ್ ಆದ ನೂರಾರು ಉದಾಹರಣೆ ಇವೆ. ಗಾಳಿಪಟ ಸಿನೆಮಾ ರಿಲೀಸ್ ಆದಾಗ ಅದು ‘ಹರಿದ ಗಾಳಿಪಟ ‘ ಎಂದು ಒಂದು ಪತ್ರಿಕೆಯು ವಿಮರ್ಶೆ ಬರೆದಿತ್ತು. ಆದರೆ ಮುಂದೆ ಆ ಸಿನೆಮಾ ಸೂಪರ್ ಹಿಟ್ ಆಯಿತು. ಹಾಗೆಯೇ ಮುಂಗಾರು ಮಳೆ, ರಂಗಿತರಂಗ, ಬಂಗಾರದ ಮನುಷ್ಯ ಸಿನಿಮಾಗಳೂ ಆರಂಭದಲ್ಲಿ ನೆಗೆಟಿವ್ ವಿಮರ್ಶೆ ಪಡೆದಿದ್ದವು. ಬಂಗಾರದ ಮನುಷ್ಯ ಸಿನೆಮಾದಲ್ಲಿ ಕ್ಲೈಮಾಕ್ಸ್ ಇಲ್ಲ, ಇದೆಂತಹ ಕೆಟ್ಟ ಸಿನೆಮಾ ಎಂದು ವಿಮರ್ಶಕರು ಬರೆದಿದ್ದರು. ಮುಂದೆ ಈ ಸಿನೆಮಾಗಳು ಯಾವ ಲೆವೆಲ್ಲಿಗೆ ಹಿಟ್ ಆದವು ಎಂದು ನಮಗೆಲ್ಲ ಗೊತ್ತಿದೆ! ಪ್ರೇಕ್ಷಕರು ಇಂದು ಬುದ್ಧಿವಂತರು ಆಗಿದ್ದಾರೆ. ಅವರಿಗೆ ಒಳ್ಳೆ ಸಿನೆಮಾ ಯಾವುದು, ಕೆಟ್ಟ ಸಿನಿಮಾ ಯಾವುದು ಎಂದು ನಿರ್ಧಾರ ಮಾಡಲು ಗೊತ್ತಿದೆ. ಯಾವುದನ್ನು ಗೆಲ್ಲಿಸಬೇಕು, ಯಾವುದನ್ನು ಸೋಲಿಸಬೇಕು ಎಂದು ಕನ್ನಡದ ಪ್ರೇಕ್ಷಕರಿಗೆ ಚೆನ್ನಾಗಿ ಗೊತ್ತಿದೆ.

ತಮ್ಮ ಸಿನೆಮಾಗಳ ಮೇಲೆ ನಂಬಿಕೆ ಇದೆ ಎಂದಾದರೆ ಅವರು ವಿಮರ್ಶೆಗಳಿಗೆ ಯಾಕೆ ಹೆದರಬೇಕು? ಆದ್ದರಿಂದ ವಿಮರ್ಶೆ ಮಾಡಿದರೂ ಎಂಬ ಒಂದೇ ಕಾರಣಕ್ಕೆ ಪೊಲೀಸ್ ದೂರು ಕೊಡುವ ಮಂದಿಗೆ, ಅವರ ದೂರಿಗೆ ರೆಸ್ಪಾಂಡ್ ಮಾಡುವ ಪೊಲೀಸರಿಗೆ ನಾನು ಹೇಳುವ ಒಂದೇ ಮಾತು – ನಮಗೆ ಭಾರತೀಯ ಸಂವಿಧಾನವೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೊಟ್ಟಿರುವಾಗ ನೀವ್ಯಾರು ಪ್ರಶ್ನೆ ಮಾಡೋರು? ಧಿಕ್ಕಾರವಿದೆ ನಿಮಗೆ!

ಹಾಗೆಯೇ ಸಿನೆಮಾ ನೋಡದೆ ವಿಮರ್ಶೆ ಬರೆಯುವವರಿಗೆ, ಒಂದು ಸಿನೆಮಾ ಸೋಲಿಸಬೇಕು ಎಂದು ಪೋಸ್ಟ್ ಹಾಕುವವರಿಗೆ, ಒಂದು ಪುಸ್ತಕದ ಮುಖಪುಟ ಮಾತ್ರ ನೋಡಿ ವಿಮರ್ಶೆ ಬರೆಯುವವರಿಗೆ, ನಿಮ್ಮ ಬಗ್ಗೆ ಇರುವ ಅಸಹನೆಯನ್ನು ನಿಮ್ಮ ಸೃಜನಶೀಲ ಕೃತಿಯ ಮೇಲೆ ಇಳಿಸುವವರಿಗೂ ನಾನು ಅದೇ ಮಾತನ್ನು ಹೇಳುತ್ತೇನೆ – ಧಿಕ್ಕಾರ ಇದೆ ನಿಮಗೆ!

ಇದನ್ನೂ ಓದಿ: Archimedes: ರಾಜೇಂದ್ರ ಭಟ್‌ ಅಂಕಣ: ‘ಯುರೇಕಾ ಯುರೇಕಾ’ ಎಂದು ಬಟ್ಟೆ ಹಾಕದೆ ಓಡಿದವನ ಕತೆ!