Thursday, 12th December 2024

ಬಿಜೆಪಿಯಲ್ಲಿ ಶುರುವಾಯಿತು ಬಹು ನಾಯಕತ್ವದ ’ಶಕೆ’

ಮೂರ್ತಿಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ದಶಕಗಳ ಕಾಲ ಏಕನಾಯಕತ್ವಕ್ಕೆ ಅಂಟಿಕೊಂಡಿದ್ದ ಬಿಜೆಪಿ ಈಗ ಬಹುನಾಯಕತ್ವದ ಕಡೆ ಮುಖ ಮಾಡಿದೆ. ಇತ್ತೀಚೆಗೆ ಕೇಂದ್ರ ಮಂತ್ರಿ ಮಂಡಲಕ್ಕೆ ಸೇರಿದ
ನಾರಾಯಣಸ್ವಾಮಿ, ಭಗವಂತ ಖೂಬಾ, ಶೋಭಾ ಕರಂದ್ಲಾಜೆ ಮತ್ತಿತರರು ಕರ್ನಾಟಕದ ಕಡೆ ಮುಖ ಮಾಡಿರುವುದೇ ಇದಕ್ಕೆ ಸಾಕ್ಷಿ.

ಅವರು ಜನಾಶೀರ್ವಾದ ಯಾತ್ರೆ ಆರಂಭಿಸಿರುವುದರ ಉದ್ದೇಶ ಸ್ಪಷ್ಟ. ಅಂದ ಹಾಗೆ ಈ ಸಾಮೂಹಿಕ ನಾಯಕತ್ವದ ಪರಿಕಲ್ಪನೆಗೆ ಜೀವ ಕೊಟ್ಟಿದ್ದು ಬಿಜೆಪಿ ಹೈಕಮಾಂಡ್. ಯಾಕೆಂದರೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಗೊಳಿಸಲು ಮುಂದಾದ ಸಂದರ್ಭದಲ್ಲಿ ಆದಕ್ಕೆ ಕಹಿ ಅನುಭವ ಆಗಿತ್ತು. ಅಧಿಕಾರಾವಧಿಯ ಎರಡು ವರ್ಷ ಪೂರೈಸಿದ ಕೂಡಲೇ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಡಲು ಸಜ್ಜಾಗಿ ಅಂತ ಸಂದೇಶ ಕಳಿಸಿದರೆ, ಯಡಿಯೂ ರಪ್ಪ ತಿರುಗಿ ಬೀಳುವ ಲಕ್ಷಣ ತೋರಿಸತೊಡಗಿದರು. ರಾಜ್ಯದ ಪ್ರಬಲ ಲಿಂಗಾಯತ ಸಮುದಾಯಕ್ಕೆ ನಾನೇ ನಿರ್ವಿವಾದ ನಾಯಕ. ಅದಕ್ಕೆ ಪೂರಕ ವಾಗಿ ಈ ಸರಕಾರ ಅಸ್ತಿತ್ವಕ್ಕೆ ಬರಲು ನಾನು ಕಾರಣ ಎಂಬುದು ಅವರ ವಾದವಾಗಿತ್ತು.

ಹೀಗಾಗಿಯೇ ಅವಽ ಪೂರ್ಣಗೊಳಿಸುವವರೆಗೆ ನನ್ನನ್ನೇ ಸಿಎಂ ಹುದ್ದೆಯಲ್ಲಿ ಮುಂದುವರಿಸಿ ಎಂದವರು ವರಿಷ್ಠ ರಿಗೆ ಪದೇಪದೆ ಸಂದೇಶ ರವಾನಿಸತೊಡಗಿದರು. ವರಿಷ್ಠರು ಇದರಿಂದ ಮುಜುಗರಗೊಂಡರೂ ಸಮಾಧಾನ ದಿಂದಲೇ ಯಡಿಯೂರಪ್ಪ ಅವರ ಜತೆ ವ್ಯವಹರಿಸತೊಡಗಿದರು. ರಾಜ್ಯದಲ್ಲಿ ಪಕ್ಷವನ್ನು ಏಕನಾಯ ಕತ್ವದ ಬದಲು ಬಹುನಾಯಕತ್ವದಲ್ಲಿ ಸಂಘಟಿಸಬೇಕು ಎಂಬ ಯೋಚನೆ ಅವರಲ್ಲಿ ಗಟ್ಟಿಯಾಗಿದ್ದಕ್ಕೆ ಇದೇ ಮುಖ್ಯ ಕಾರಣ. ಹೀಗಾಗಿಯೇ ಆಪರೇಷನ್ ಯಡಿಯೂರಪ್ಪ ಕಾರ್ಯಾಚರಣೆ ಜಾರಿಯಲ್ಲಿರುವಾಗಲೇ ಅವರು ಬಹುನಾಯಕತ್ವದ ಕಲ್ಪನೆಗೆ ರೂಪ ಕೊಡಲು ಶುರುವಿಟ್ಟುಕೊಂಡರು.

ಕೇಂದ್ರ ಮಂತ್ರಿಮಂಡಲ ವಿಸ್ತರಿಸುವಾಗ ಕರ್ನಾಟಕದ ಎಲ್ಲ ಭಾಗಗಳಿಗೂ ಆದ್ಯತೆ ನೀಡಿ, ಜಾತಿವಾರು ಪ್ರಾಮುಖ್ಯತೆ ನೀಡಿದರು. ಲಿಂಗಾಯತ ಸಮುದಾಯದ ಭಗವಂತ ಖೂಬಾ, ದಲಿತರ ಪೈಕಿ ಎಡಗೈನ ನಾರಾಯಣಸ್ವಾಮಿ ಸೇರಿದಂತೆ ಹಲವರನ್ನು ಆಯ್ಕೆ ಮಾಡಿದ್ದು ಹೀಗೆ. ಕರ್ನಾಟಕದಲ್ಲಿ ಪಕ್ಷವನ್ನು ಏಕ ನಾಯ ಕತ್ವದ ಕಪಿಮಷ್ಟಿಯಿಂದ ಬಿಡಿಸಿ, ಬಹುನಾಯಕತ್ವದ ಹೆಗಲ ಮೇಲಿಡುವ ಕೆಲಸ ಶುರುವಾದರೂ, ಯಡಿಯೂರಪ್ಪ ಪಟ್ಟು ಬಿಡಲಿಲ್ಲ. ಮುಂದಿನ ಚುನಾವಣೆಯ ವರೆಗೆ ಇರಲು ಅವಕಾಶ ಕೊಟ್ಟರೆ ಕನಿಷ್ಠ ನೂರೈವತ್ತು ಸೀಟುಗಳನ್ನು ಗೆಲ್ಲಿಸಿಕೊಂಡು ಬರುತ್ತೇನೆ. ಆ ಮೂಲಕ 2024 ರಲ್ಲಿ ಪುನಃ ಮೋದಿಯವರ ಸರಕಾರ ಬರಲು ಪೂರಕವಾಗಿ ಇಪ್ಪತ್ತೈದು ಲೋಕಸಭಾ ಕ್ಷೇತ್ರಗಳಲ್ಲಿ ನಮ್ಮ ಕ್ಯಾಂಡಿಡೇಟುಗಳು ಗೆಲ್ಲುವಂತೆ ನೋಡಿಕೊಳ್ಳುತ್ತೇನೆ.

ಒಂದು ವೇಳೆ ನೀವು ನನ್ನನ್ನಿಳಿಸಿದರೂ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಆದರೆ ಯಶಸ್ಸಿನ ವಿಷಯದಲ್ಲಿ ಮಾತ್ರ ಗ್ಯಾರಂಟಿ ಕೊಡುವುದಿಲ್ಲ ಎಂದು ಯಾವಾಗ ಯಡಿಯೂರಪ್ಪ ಹೇಳತೊಡಗಿದರೋ. ಆಗ ಬಹುನಾಯಕತ್ವದ ವಿಷಯದಲ್ಲಿ ವರಿಷ್ಠರ ನಿಲುವು ಮತ್ತಷ್ಟು ಸ್ಪಷ್ಟವಾಗುತ್ತಾ ಹೋಯಿತು. ಅಂದ ಹಾಗೆ ಬಿಜೆಪಿ ಈ ಹಿಂದೆ ಬಹುನಾಯಕತ್ವದ ಕಲ್ಪನೆಯ ನಡೆದು ಬಂದ ಪಕ್ಷ. ಎ.ಕೆ.ಸುಬ್ಬಯ್ಯ, ಬಿ.ಬಿ.ಶಿವಪ್ಪ, ಮಲ್ಲಿಕಾರ್ಜುನಯ್ಯ, ಅನಂತ ಕುಮಾರ್, ಯಡಿಯೂರಪ್ಪ ಸೇರಿದಂತೆ ಹಲವರು ಪಕ್ಷ ಕಟ್ಟಲು ಶ್ರಮಿಸುತ್ತಾ ಬಂದಿದ್ದರು.

ಆದರೆ ಜನತಾದಳ ಒಡೆದು ಸಂಯುಕ್ತ ಜನತಾದಳ ಮತ್ತು ಜೆಡಿಎಸ್ ಮೇಲೆದ್ದು ನಿಂತಾಗ ಬಿಜೆಪಿಯ ಗ್ರಾಫ್ ಮೇಲೇರತೊಡಗಿತು. ಈ ಸಂದರ್ಭದಲ್ಲಿ ಮೇಲೆದ್ದು ನಿಂತ ಇಬ್ಬರು ನಾಯಕರೆಂದರೆ ಯಡಿಯೂರಪ್ಪ ಮತ್ತು ಅನಂತಕುಮಾರ್. ಅಂದ ಹಾಗೆ ಇವರ ಪೈಕಿ ಮೊದಲು ಮುಖ್ಯಮಂತ್ರಿ ಹುದ್ದೆಯವರೆಗೆ ನಡೆದುಕೊಂಡು
ಹೋಗಲು ಅವಕಾಶ ಪಡೆದವರು ಅನಂತಕುಮಾರ್. ರಾಜ್ಯಾಧ್ಯಕ್ಷರಾಗಿ 2004 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಿದ ಅನಂತಕುಮಾರ್ ಅವರು ಪ್ರತಿಪಕ್ಷಗಳ ನೆತ್ತಿಯ ಮೇಲೆ ಬಾರಿಸುವ ಟೆಕ್ನಿಕ್ ಅನುಸರಿಸಿದರು.

ಅದುವರೆಗೂ ರೈತ ಪರ ಪಕ್ಷ ಅಂತಿದ್ದ ಬ್ರ್ಯಾಂಡ್ ನೇಮ್ ಬದಲಿಸಿ, ಪಕ್ಷದ ರಸ್ತೆಯಲ್ಲಿ ಮತಬ್ಯಾಂಕುಗಳನ್ನು ಸ್ಥಾಪಿಸತೊಡಗಿದರು. ಹಿಂದುಳಿದ ವರ್ಗಗಳ ನಾಯಕ ಎಸ್.ಬಂಗಾರಪ್ಪ, ದಲಿತರ ಪೈಕಿ ಎಡಗೈನ ರಮೇಶ್ ಜಿಗಜಿಣಗಿ, ಗೋವಿಂದ ಕಾರಜೋಳ ಅವರನ್ನು ಪಕ್ಷಕ್ಕೆ ಸೆಳೆದ ಅನಂತಕುಮಾರ್ ಅವರು, ಸಂಯುಕ್ತ ಜನತಾದಳದ ಬೋರ್ಡ್ ಹಿಡಿದುಕೊಂಡು ಬಿಜೆಪಿ ಕಡೆ ಬಂದಿದ್ದ ಬಹುತೇಕರು ಇಲ್ಲೇ ನೆಲೆಯಾಗುವಂತೆ ನೋಡಿಕೊಂಡರು. ಪರಿಣಾಮ? 2004ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿತು.

ಅವತ್ತು ಬಿಜೆಪಿ 79 ಸೀಟು ಪಡೆದಿದ್ದರೆ, ಕಾಂಗ್ರೆಸ್ 65 ಮತ್ತು ಜೆಡಿಎಸ್ 58 ಸೀಟುಗಳನ್ನು ಪಡೆದಿದ್ದವು. ಈ ಸಂದರ್ಭದಲ್ಲಿ ಉಳಿದೆಲ್ಲರಿಗಿಂತ ಮುಂಚೆ ಕಾರ್ಯ
ಪ್ರವೃತ್ತರಾದ ಅನಂತಕುಮಾರ್ ಜೆಡಿಎಸ್ ಜತೆ ಕೈಗೂಡಿಸಿ ಸಮ್ಮಿಶ್ರ ಸರಕಾರವನ್ನು ರಚಿಸಲು ಬಯಸಿದರು. ಇದಕ್ಕೆ ಪೂರಕವಾಗಿ ಹಿರಿಯ ಪತ್ರಕರ್ತರಾದ ಟಿ.
ವೆಂಕಟೇಶ್ ಅವರ ನಿವಾಸದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಮೈತ್ರಿ ಮಾತುಕತೆ ನಡೆಯಿತು. ಅವತ್ತು ಬಿಜೆಪಿ ವತಿಯಿಂದ ಅನಂತಕುಮಾರ್ ಮತ್ತು ಅರುಣ್ ಜೇಟ್ಲಿ ಇದ್ದರಾದರೆ, ಜೆಡಿಎಸ್ ವತಿಯಿಂದ ದೇವೇಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಿದ್ದರು.

ಅವತ್ತು ಮಾತುಕತೆಯ ಸಂದರ್ಭದಲ್ಲಿ ಅನಂತಕುಮಾರ್ ಮುಂದಿಟ್ಟ ಪ್ರಸ್ತಾಪ ಕುಮಾರಸ್ವಾಮಿ ಅವರಿಗೂ ಇಷ್ಟವಾಗಿತ್ತು. ಮೈತ್ರಿ ಸರಕಾರದ ಮೊದಲಾರ್ಧದಲ್ಲಿ
ಕುಮಾರಸ್ವಾಮಿಯವರೇ ಸಿಎಂ ಆಗಲಿ, ಎರಡನೇ ಅವಧಿಯಲ್ಲಿ ನನಗೆ ಅಧಿಕಾರ ಬಿಟ್ಟುಕೊಡಲಿ ಎಂಬುದು ಅನಂತಕುಮಾರ್ ಪ್ರಸ್ತಾಪವಾಗಿತ್ತು. ಈ ಮಾತುಕ ತೆಗೆ ತಾರ್ಕಿಕ ಅಂತ್ಯ ದೊರಕಿದ್ದರೆ ಬಿಜೆಪಿ ವತಿಯಿಂದ ಮೊದಲ ಸಿಎಂ ಆಗುತ್ತಿದ್ದವರು ಅನಂತಕುಮಾರ್.

ಆದರೆ ಮಾತುಕತೆ ಸ-ಲವಾಗಲಿಲ್ಲ. ಯಾಕೆಂದರೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರಿಗೆ ಸೆಕ್ಯುಲರ್ ಇಮೇಜ್ ಬೇಕಾಗಿತ್ತು. ಅದೇ ರೀತಿ ಬಲಿಷ್ಠ ನಾಯಕ ರಾಗಿ ಹೊರಹೊಮ್ಮಿದ್ದ ಸಿದ್ಧರಾಮಯ್ಯ ಅವರನ್ನು ನಿರ್ಲಕ್ಷಿಸಿ, ಮಗನಿಗೆ ಪಟ್ಟಾಭಿಷೇಕ ಮಾಡುವ ಸ್ಥಿತಿಯಲ್ಲಿ ಅವರಿರಲಿಲ್ಲ. ಹೀಗೆ ಮುಖ್ಯಮಂತ್ರಿ ಹುದ್ದೆಯ ಸನಿಹ ಬಂದು ಹಿಂತಿರುಗಿದರೂ, ರಾಜ್ಯ ಬಿಜೆಪಿಯ ಮೇಲಿನ ಹಿಡಿತ ಕಳೆದುಕೊಳ್ಳಲು ಅನಂತಕುಮಾರ್ ಬಯಸಲಿಲ್ಲ. ಹೀಗಾಗಿಯೇ ವಿಧಾನಸಭೆಯ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ಅವರನ್ನು ತಂದು ಕೂರಿಸಲು ಬಯಸಿದರು.

ಆದರೆ ಈ ಬೆಳವಣಿಗೆಯಿಂದ ಕ್ರುದ್ಧರಾದ ಯಡಿಯೂರಪ್ಪ ಕೂಡಾ ಜಾತಿಗಣಿತ ಶಾಸದ ಫಾರ್ಮುಲಾ ಬಳಸಿದರು. ತಮ್ಮ ಹುಟ್ಟು ಹಬ್ಬದ ಹೆಸರಿನಲ್ಲಿ ಸಮಾರಂಭ
ಏರ್ಪಡಿಸಿ ಲಿಂಗಾಯತ ಮಠಾಽಪತಿಗಳನ್ನು ಕರೆಸಿದರು. ಅವತ್ತು ಈ ಸಮಾರಂಭಕ್ಕೆ ಬಂದ ಲಿಂಗಾಯತ ಮಠಾಧಿಪತಿಗಳು, ಸಮುದಾಯವನ್ನು ನಿರ್ಲಕ್ಷಿಸಿದರೆ
ಬಿಜೆಪಿ ಅಪಾಯ ಎದುರಿಸುವುದು ನಿಶ್ಚಿತ ಎಂದು ಗುಡುಗಿದರು. ಯಾವಾಗ ಈ ಬೆಳವಣಿಗೆ ನಡೆಯಿತೋ? ಆಗ ಬಿಜೆಪಿಯ ದುರ್ಬಲ ಹೈಕಮಾಂಡ್ ಮಣಿಯಿತು.
ಯಡಿಯೂರಪ್ಪ ಇಲ್ಲಿಗೆ; ಅನಂತಕುಮಾರ್ ದಿಲ್ಲಿಗೆ ಎಂಬ ಸೂತ್ರ ರೂಪಿಸಿ ತಣ್ಣಗಾಯಿತು.

ಅವತ್ತು ಬಿಜೆಪಿಯ ಏಕನಾಯಕನ ಪೋಷಾಕು ಧರಿಸಿದ ಯಡಿಯೂರಪ್ಪ 2021 ರ ಜುಲೈ 26 ರವರೆಗೆ ಅದೇ ಡ್ರೆಸ್ಸಿನಲ್ಲಿದ್ದರು. ಇಂತಹ ಏಕನಾಯಕತ್ವದ ಪೋಷಾಕನ್ನು ಬಯಸಿ, ಬಯಸಿ ಕಳಚಿ ಹಾಕಿದ ಬಿಜೆಪಿ ವರಿಷ್ಟರು ಇದೀಗ ಬಹುನಾಯಕತ್ವದ ಮಾರ್ಗವನ್ನು ವಿಸ್ತಾರಗೊಳಿಸಲು ಹೊರಟಿದ್ದಾರೆ. ಕೇಂದ್ರ ಮಂತ್ರಿ ಮಂಡಲಕ್ಕೆ ಸೇರಿದ ವಿವಿಧ ಜಾತಿಗಳ ನಾಯಕರು ಈಗ ಜನಾಶೀರ್ವಾದ ಯಾತ್ರೆ ನಡೆಸಿರುವುದು ಇದೇ ಉದ್ದೇಶಕ್ಕಾಗಿ. ಅರ್ಥಾತ್,ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಬಿಜೆಪಿಯ ದಂಡ ನಾಯಕರಾಗಿ ಇರುವುದಿಲ್ಲ.

ಬದಲಿಗೆ, ಪ್ರದೇಶವಾರು ಸೈನ್ಯಗಳ ಮುಂಚೂಣಿಯಲ್ಲಿ ಹಲವು ಸೇನಾಧಿಪತಿಗಳಿರುತ್ತಾರೆ. ಆದರೆ ಬಹುನಾಯಕತ್ವ ತಮ್ಮನ್ನು ಗೆಲುವಿನ ದಡಕ್ಕೆ ಕರೆದೊಯ್ಯು ತ್ತದಾ? ಎಂಬುದು ಕಮಲ ಪಾಳೆಯದ ಬಹುತೇಕ ಶಾಸಕರ ಆತಂಕ. ಮುಂದೇನೋ?