Saturday, 14th December 2024

ಮತ್ತೂರು ನಂದಕುಮಾರ್‌ಗೆ ಬ್ರಿಟಿಷ್ ಎಂಪೈರ್‌ ಸದಸ್ಯ ಗೌರವ

ವಿಶೇಷ ಸಂದರ್ಶನ

ರಾಧಾಕೃಷ್ಣ ಎಸ್.ಭಡ್ತಿ

‘ಭಾರತೀಯ ವಿದ್ಯಾಭವನ’ದ ಲಂಡನ್ ಶಾಖೆ ಭಾರತದ ಮೂಲ (ಮುಂಬೈ) ಸಂಸ್ಥೆಯಷ್ಟೇ ಪ್ರಖ್ಯಾತಿ ಹಾಗೂ ಪ್ರಭಾವ ಶಾಲಿ. ಅನುಮಾನವೇ ಇಲ್ಲ, ಇದರ ರೂವಾರಿ ಹೆಮ್ಮೆಯ ಕನ್ನಡಿಗ, ಮಹಾನ್ ವಿದ್ವಾಂಸ ದಿವಂಗತ ಮತ್ತೂರು ಕೃಷ್ಣಮೂರ್ತಿ ಗಳು. ಸಂಸ್ಕೃತದೊಂದಿಗೆ ಭಾರತೀಯ ಸಂಸ್ಕೃತಿಯನ್ನು ಜಗದ್ವಿಖ್ಯಾತಗೊಳಿಸಿದ ಶಿವಮೊಗ್ಗದ ವಿಶಿಷ್ಟ ಅವಳಿ ಗ್ರಾಮ ಮತ್ತೂರು-ಹೊಸಹಳ್ಳಿಯಿಂದ ದೇಶಭಾಷೆಗಳ ಗಡಿ ದಾಟಿ, ದೂರದ ಲಂಡನ್‌ನಲ್ಲಿ ಮಾತ್ರವಲ್ಲ, ಜಗದೆಲ್ಲೆಡೆ ಭಾರತೀಯ ವಿದ್ಯಾಭವನವನ್ನು, ಅದರ ವಿಚಾರ ಗಳನ್ನು ಪ್ರಚುರಪಡಿಸಿದ ಕೀರ್ತಿ ಕೃಷ್ಣಮೂರ್ತಿಗಳಿಗೇ ಸೇರಬೇಕು.

ಅವರ ಮಾರ್ಗದರ್ಶನದಲ್ಲಿಯೇ ಪಳಗಿ, ಅವರೊಂದಿಗೇ ದುಡಿದು ಇವತ್ತು, ಲಂಡನ್‌ನ ಭಾರತೀಯ ವಿದ್ಯಾಭವನವನ್ನು ಮತ್ತೂರು ಕೃಷ್ಣಮೂರ್ತಿಗಳಷ್ಟೇ ಸಮರ್ಥವಾಗಿ ಮುನ್ನಡೆಸುತ್ತಿರುವವರು ‘ಮರಿ ಮತ್ತೂರು’ ಎಂದೇ ಜನಪ್ರಿಯ ರಾಗಿರುವ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ, ಮತ್ತೂರು ಡಾ. ನಂದಕುಮಾರ್. ಇವರು ಕೃಷ್ಣಮೂರ್ತಿಗಳ ಅಳಿಯ ಸಹ ಹೌದು. ದೇಶದೆಲ್ಲೆ ಗಳನ್ನು ಮೀರಿ ಸಂಸ್ಕೃತದ ಜತೆಜತೆಗೇ ಭರತನಾಟ್ಯ, ತಮಿಳು, ಕಥಕ್, ಒಡಿಸ್ಸಿ, ಹಿಂದೂಸ್ತಾನಿ ಗಾಯನ, ಕರ್ನಾಟಕ ಸಂಗೀತ, ಮೃದಂಗ, ತಬಲಾ, ಸಿತಾರ್, ಕೊಳಲು, ಮತ್ತಿತರ ಭಾರತೀಯ ಶಾಸ್ತ್ರೀ ಕಲಾ ಪ್ರಕಾರಗಳು ಮತ್ತು ಭಾಷಾ ಕಲಿಕಾಸಕ್ತರ ನೆಲೆಯನ್ನಾಗಿ ‘ಭವನ’ವನ್ನು ಕಾಪಿಟ್ಟಿದ್ದಾರೆ; ಬೆಳೆಸುತ್ತಿದ್ದಾರೆ.

ಭಾರತೀಯ ಕಲೆಗಳ ಪ್ರಸರಣದಲ್ಲಿ ಭವನ ಇಂದು ಬಹು ಎತ್ತರಕ್ಕೆ ನಿಂತಿದೆ. ಇಂಥ ವಿರಳ ಸಾಂಸ್ಕೃತಿಕ ನಾಯಕತ್ವಕ್ಕಾಗಿ, ಕಲೆ- ಕಲಿಕೆ-ಸಾಹಿತ್ಯದ ಸೇವೆಗಾಗಿ ಡಾ.ನಂದಕುಮಾರ್ ಅವರಿಗೆ ಬ್ರಿಟನ್ ಸರಕಾರದ ಅತ್ಯುಚ್ಚ ನಾಗರಿಕ ಪುರಸ್ಕಾರ ಗಳಲ್ಲೊಂದಾದ ‘ಎಂಬಿಎಂ-ಮೆಂಬರ್ ಆಫ್ ಬ್ರಿಟಿಷ್ ಎಂಪೈರ್’ ಸಂದಿದೆ.

ಬ್ರಿಟಿಷ್ ಸಾಮ್ರಾಜ್ಯದ ಹೆಸರಿನಲ್ಲಿ ಅಲ್ಲಿನ ಸರಕಾರ ಕೊಡ ಮಾಡುವ ಈ ಪ್ರತಿಷ್ಠಿತ ಗೌರವ ಭಾರತೀಯರಲ್ಲೊಬ್ಬರಾದ,
ಅದರಲ್ಲೂ ಕನ್ನಡಿಗ ಡಾ. ನಂದಕುಮಾರ್ ಅವರಿಗೆ ಸಂದಿರುವುದು ಹೆಮ್ಮೆಯ ಸಂಗತಿ. ಈ ಹಿನ್ನೆಲೆಯಲ್ಲಿ ‘ವಿಶ್ವವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಪ್ರಶಸ್ತಿ, ಭಾರತೀಯ ವಿದ್ಯಾಭವನದ ಕಾರ್ಯ ಚಟುವಟಿಕೆಗಳು, ಭಾರತೀಯ ಮೌಲ್ಯಗಳಿತ್ಯಾದಿ ಹಲವು ವಿಷಯಗಳ ಬಗ್ಗೆ ಅವರು ಬೆಳಕು ಚೆಲ್ಲಿದ್ದಾರೆ.

ಸಂದರ್ಶನದ ಪೂರ್ಣಪಾಠ ಇಂತಿದೆ: ಪ್ರಶಸ್ತಿ ಸಂದಿರುವುದಕ್ಕೆ ಅಭಿನಂದನೆಗಳು. ಈ ಪುರಸ್ಕಾರದ ಬಗ್ಗೆ ಹೇಳುತ್ತೀರಾ?
-ಧನ್ಯವಾದಗಳು. ಪುರಸ್ಕಾರದ ಬಗ್ಗೆ ಹೇಳುವುದಾದರೆ, ಇದಕ್ಕೊಂದು ಸುದೀರ್ಘ ಇತಿಹಾಸವಿದೆ. ಬ್ರಿಟಿಷ್ ಆರ್ಡರ್ ಆಫ್  ನೈಟ್‌ಹುಡ್ ಅನ್ನು 1917ರಲ್ಲಿ ಇಲ್ಲಿನ ರಾಜ ಐದನೇ ಜಾರ್ಜ್ ಸ್ಥಾಪಿಸಿದರು. ನಾಗರಿಕ ಮತ್ತು ಮಿಲಿಟರಿ ಯುದ್ಧಕಾಲದ
ಸೇವೆ ಎರಡನ್ನೂ ಈ ಮೂಲಕ ಪುರಸ್ಕರಿಸಲಾಗುತ್ತದೆ.

ಪ್ರಸ್ತುತ ಗೌರವವನ್ನು ಶಾಂತಿಕಾಲದ ಸರಕಾರ- ಸಮಾಜಕ್ಕೆ ಸಲ್ಲಿಸಿದ ಸೇವೆಗಾಗಿ ನೀಡಲಾಗುತ್ತದೆ. ಇದಕ್ಕಿಂತ ಮೇಲೆ ಲಾರ್ಡ್, ಸರ್ ಗೌರವಗಳಿರುತ್ತವೆ. ನಂತರದ ಐದು ಸ್ತರದಲ್ಲಿರುವ ಪ್ರಶಸ್ತಿಗಳೆಂದರೆ, ನೈಟ್ ಮತ್ತು ಡೇಮ್ ಗ್ರ್ಯಾಂಡ್ ಕ್ರಾಸ್ (GBE), ನೈಟ್ ಮತ್ತು ಡೇಮ್ ಕಮಾಂಡರ್ (KBE ಮತ್ತು DBE), ಕಮಾಂಡರ್ (CBE), ಅಧಿಕಾರಿ (OBE), ಮತ್ತು ಸದಸ್ಯ (MBE). ಇವೆಲ್ಲವೂ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಂಬಂಧಿಸಿದ್ದು, ಅಭ್ಯರ್ಥಿಯು ಈಗಾಗಲೇ ನೈಟ್ ಅಥವಾ ಡೇಮ್ ಆಗಿರದಿದ್ದರೆ ಮತ್ತು ಸೂಕ್ತವಾದ ಸರ್ ಅಥವಾ ಡೇಮ ಶೀರ್ಷಿಕೆಯ ಹಕ್ಕನ್ನು ಕೆಲವು ಬಾರಿ ಹೊಂದುತ್ತಾರೆ.

ಭಾರತೀಯ ಪರಿಭಾಷೆಯಲ್ಲಿ ಅರ್ಥ ಮಾಡಿಸುವುದಾದರೆ, ನಮ್ಮಲ್ಲಿನ ಭಾರತರತ್ನ, ಪದ್ಮ ವಿಭೂಷಣ, ಪದ್ಮಭೂಷಣ, ಪದ್ಮಶ್ರೀ ಗೌರವಗಳಿದ್ದಂತೆಯೇ. ನನಗೀಗ ಸಂದಿರುವುದು ನಮ್ಮ ಪ್ರದ್ಮಶ್ರಿಗೆ ಸಮನಲ್ಲದಿದ್ದರೂ ಒಂದು ರೀತಿಯಲ್ಲಿ ಅದೇ ಸ್ವರೂಪದ್ದು.

ಯಾವ ಸೇವೆಗಾಗಿ ತಮಗೆ ಈ ಗೌರವ ಸಂದಿದೆ?
-ಅನುಮಾನವೇ ಇಲ್ಲ, ಇದು ನನಗೆ ವೈಯಕ್ತಿಕವಾಗಿ ಸಂದ ಗೌರವ ಎನ್ನುವುದಕ್ಕಿಂತಲೂ ಭಾರತೀಯ ವಿದ್ಯಾಭವನದ ಒಟ್ಟಾರೆ ಸಾಂಸ್ಕೃತಿಕ ಕೊಡುಗೆಗೆ ಸಂದ ಗೌರವ. ಅದನ್ನು ಅತ್ಯಂತ ಹೆಮ್ಮೆ ಮತ್ತು ವಿನೀತ ಭಾವದಲ್ಲಿ ಸಾಂಕೇತಿಕಾಗಿ ನಾನು ಸ್ವೀಕರಿಸುತ್ತಿದ್ದೇನೆ ಅಷ್ಟೆ. ಲಂಡನ್‌ನಲ್ಲಿ ನನ್ನ ಗುರುಗಳಾದ, ನನ್ನ ಪಿಎಚ್ .ಡಿ. ಮಾರ್ಗದರ್ಶಕರಾದ ಡಾ. ಜಾನ್‌ಮಾರ್
ಅವರು ಸ್ವತಃ ಭಾರತೀಯತೆಯ ಕಟ್ಟಾ ಅನುಪಾಲಕರು, ಅಭಿಮಾನಿಗಳಾಗಿದ್ದವರು. ಈಗ ಕೆಲ ವರ್ಷಗಳ ಹಿಂದಷ್ಟೇ ತೀರಿಕೊಂಡರು. ಬಹುಶ್ರುತ ವಿದ್ವಾಂಸರಾಗಿದ್ದ ಅವರು, ನಮ್ಮ ಸಂಸ್ಕೃತಿಯಿಂದ ಬಹಳಷ್ಟು ಪ್ರಭಾವಿತರಾಗಿ, ಸ್ವತಃ ನಮ್ಮ ಉಡುಪಿಗೆ ಬಂದು, ಅಲ್ಲಿಯೇ ಕೆಲ ಕಾಲ ಇದ್ದು ಕನ್ನಡದ ದಾಸಶ್ರೇಷ್ಠ ಪುರಂದರರ ಬಗ್ಗೆ ಉನ್ನತ ಅಧ್ಯಯನ ಕೈಗೊಂಡಿದ್ದವ ರು.

ತಮಿಳು ಭಾಷೆಯಲ್ಲಿಯೇ ಪಿಎಚ್‌ಡಿ ಮಾಡಿದ್ದರು. ಅವರು ಭಾರತೀಯ ವಿದ್ಯಾಭವನದ ಕೆಲಸಗಳು, ಸಂಸ್ಕೃತಿ ಪ್ರಸಾರದ ಬಗ್ಗೆ ಅಪಾರ ಪ್ರೀತ್ಯಾದರಗಳನ್ನು ಹೊಂದಿದ್ದರು. ಆಗಿಂದಲೇ ‘ಇಂಥದೊಂದು ಗೌರವ ನಿಮಗೆ ಸಲ್ಲಬೇಕು’ ಎಂದು ಕನಸು ಕಂಡಿದ್ದರು. ಪ್ರಯತ್ನ ಮಾಡಿದ್ರು ಸಹ. ಅಂಥವೆಲ್ಲರ ಹಾರೈಕೆ, ಗಣ್ಯರ ಅಭಿಮಾನದ ಶಿಫಾರಸು, ಬಹುಶಃ ಈಗಿನ ಪ್ರಧಾನಿ ಋಷಿ ಸುನಕ್ ಅವರ ಭಾರತೀಯ ಮೂಲ ಎಲ್ಲವೂ ಒಟ್ಟುಗೂಡಿ ‘ಭವನ’ಕ್ಕೆ ಗೌರವ ಸಲ್ಲುವಂತಾಗಿದೆ.

ಭವನದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನಿಮ್ಮ ಗುರಿ-ಸಾಧನೆಗಳೇನು?
-ಉದಾತ್ತ ಸಂದೇಶಗಳೊಂದಿಗೆ ಜನರನ್ನು ತಲುಪುವುದೇ ನನ್ನ ಗುರಿ. ಮತ್ತೂರರು (ಕೃಷ್ಣ ಮೂರ್ತಿ) ಬದುಕಿದ್ದಾಗಿಂದಲೂ ಇದೇ ಮಾರ್ಗದರ್ಶನ ಮಾಡಿಕೊಂಡು ಬಂದಿದ್ದರು. ಅದನ್ನೇ ಪಾಲಿಸುತ್ತಿರುವೆ. ನಮ್ಮ ಋಗ್ವೇದವೇ ಹೇಳಿದೆಯಲ್ಲಾ; ‘ಎಲ್ಲ ಕಡೆಯಿಂದ ಉದಾತ್ತ ಆಲೋಚನೆಗಳು ನಮ್ಮತ್ತ ಬರಲಿ’ ಎಂದು.

ಗಾಂಧಿ ತತ್ವ ಮತ್ತು ಭಾರತೀಯ ಮೌಲ್ಯಗಳೊಂದಿಗೆ ಭವನವನ್ನು ಆರಂಭಿಸಲಾಗಿದೆ. ನಾವು ಭಾರತೀಯ ಸಂಸ್ಕೃತಿ ಮತ್ತು ಕಲೆಗಳ ಅಧಿಕೃತ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದೇವೆ. ಈ ಆಧುನಿಕ ಕಾಲಘಟ್ಟದಲ್ಲಿ, ಅದರಲ್ಲೂ ಪಾಶ್ಚಾತ್ಯ ನೆಲದಲ್ಲಿ
ನಿಂತು ಕಲೆ ಮತ್ತು ಸಂಸ್ಕೃತಿಯ ಕ್ಷೇತ್ರದಲ್ಲಿ ನಾವು ಅಧಿಕೃತ ಶಿಕ್ಷಣ ನೀಡುತ್ತಿದ್ದೇವೆ.

ನಾವು ನಮ್ಮ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ನಿಯಮಿತವಾಗಿ ತರಗತಿಗಳನ್ನು ನಡೆಸುತ್ತಿದ್ದೇವೆ. ಮಾತ್ರವಲ್ಲ, ಇಲ್ಲಿನ
(ಲಂಡನ್) ಮನೆ-ಶಾಲೆಗಳಿಗೂ ಭಾರತೀಯ ಕಲೆ ಮತ್ತು ಸಂಸ್ಕೃತಿಯ ಸಂದೇಶವನ್ನು ತಲುಪಿಸುತ್ತಿದ್ದೇವೆ. ಅದೇ ಗುರಿ, ಹಾಗೂ ಆ ನಿಟ್ಟಿನಲ್ಲಿ ಸೇವೆಯನ್ನೇ ಸಾಧನೆಯೆನ್ನುವುದಾದರೆ ಅದೇ ನನ್ನ ಸಾಧನೆ.

ಲಂಡನ್‌ನಲ್ಲಿ ಭವನದ ಕಾರ್ಯ ಚಟುವಟಿಕೆಗಳೇನು? ನಿಮ್ಮ ಮುಂದಿನ ಯೋಜನೆಗಳೇನು?
-ಸಂಸ್ಕೃತ ಸೇರಿ ಭಾರತೀಯ ಭಾಷಾ ತರಗತಿಗಳು, ಸಂಗೀತ ಕಚೇರಿಗಳು, ಉಪನ್ಯಾಸಗಳು ಮತ್ತು ಕಾರ್ಯಾಗಾರಗಳ ಮೂಲಕ ಯುನೈಟೆಡ್ ಕಿಂಗ್ಡಂ ನಲ್ಲಿ ಕಲೆ, ಸಂಸ್ಕೃತಿ ಮತ್ತು ತತ್ವಶಾಸವನ್ನು ಉತ್ತೇಜಿಸುವ ಏಕೈಕ ಉದ್ದೇಶದಿಂದ ಭವನವು 1972ರಲ್ಲಿ ಪ್ರಾರಂಭವಾಯಿತು. ಕಳೆದ 50 ವರ್ಷಗಳಲ್ಲಿ, ಭವನವು ಕಾರ್ಯಚಟುವಟಿಕೆಯ ಸ್ವರೂಪ ಭಾರತೀಯ ಕಲೆ-ಸಂಸ್ಕೃತಿಯ ಕೊಡುಗೆಯಲ್ಲಿ ಗಣನೀಯವಾಗಿ ಬೆಳೆದಿದೆ. ಇದು ಭಾರತದ ಹೊರಗೆ, ಇಡೀ ಜಗತ್ತಿನಲ್ಲೇ ಒಂದೇ ಸೂರಿನಡಿ ಇರುವ ಅತಿದೊಡ್ಡ ಸಾಂಸ್ಕೃತಿಕ ಸಂಸ್ಥೆ ಎಂಬುದನ್ನು ಯಾರೂ ಒಪ್ಪಲೇ ಬೇಕು. 2025 ವಿದ್ಯಾರ್ಥಿಗಳಿಂದ ಆರಂಭವಾದ
ಭವನ ಕೋವಿಡ್‌ಗೂ ಮುನ್ನ 800-900 ವಿದ್ಯಾರ್ಥಿಗಳಿದ್ದರು.

ಇದೀಗ ಕರೋನಾ ಕಾರಣಕ್ಕೆ ಈ ಸಂಖ್ಯೆ ಶೇ.25ರಷ್ಟು ತಾತ್ಕಾಲಿಕವಾಗಿ ಕುಸಿದಿದೆ. ನಮ್ಮಲ್ಲಿ ೮ ಮಂದಿ ಪೂರ್ಣಕಾಲಿಕ ಶಿಕ್ಷಕರು, 15 ಅರೆಕಾಲಿಕ ಶಿಕ್ಷಕರು ಮತ್ತು ೮-೧೦ ಕಚೇರಿ ಸಿಬ್ಬಂದಿ ಇದ್ದಾರೆ.

ಇದಲ್ಲದೇ ವರ್ಷದಲ್ಲಿ ನೂರಕ್ಕೂ ಹೆಚ್ಚು ವಿವಿಧ ಕಲಾವಿದರು, ಗಣ್ಯರ ಕಾರ್ಯಕ್ರಮ, ಉಪನ್ಯಾಸ, ಕಾರ್ಯಾಗಾರಗಳನ್ನು ಆಯೋಜಿಸುತ್ತಿದ್ದೇವೆ, ಬೇಸಿಗೆ ಶಾಲೆಗಳನ್ನು ಆಯೋಜಿಸಿದ್ದೇವೆ. ಯೂರೋಪಿಯನ್ನರಿಗೆ ನಮ್ಮ ಭಾಷೆ (ಮುಖ್ಯವಾಗಿ ಸಂಸ್ಕೃತ) ಕಲಿಸುವುದು ಹಾಗೂ ಅವರ ಭಾಷೆಯಲ್ಲಿ ನಮ್ಮ ಸಂಸ್ಕೃತಿ-ಕಲೆಗಳನ್ನು ಅವರಿಗೆ ತಲುಪಿಸುವುದು ಎರಡೂ ಕಾರ್ಯ ಆಗುತ್ತಿದೆ.

ಈವರೆಗೆ ಭೇಟಿ ನೀಡಿದ ಗಣ್ಯರು, ಆದ ಕಾರ್ಯಕ್ರಮ, ಅದರ ಸಾರ್ಥ್ಯಕ್ಯದ ಬಗ್ಗೆ ಹೇಳುವುದಾದರೆ?
-ಸ್ವತಃ ಎಂಎಸ್ ಸುಬ್ಬಲಕ್ಷ್ಮಿ ಮತ್ತು ಸಿತಾರ್ ಮಾಂತ್ರಿಕ ರವಿಶಂಕರ್ ಅವರು ಭವನದ ಪೋಷಕರಾಗಿದ್ದರು. ಕಲಾವಿದರ ಪೈಕಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ರವಿಶಂಕರ್ ಭವನಕ್ಕಾಗಿ ಉಚಿತ ಕಾರ್ಯಕ್ರಮ ನೀಡುತ್ತಿದ್ದರೆಂದರೆ ನೀವು ನಂಬ
ಬೇಕು. ನಾವು ಕೇವಲ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸುವುದಿಲ್ಲ – ನಾವು ವಿದ್ಯಾರ್ಥಿಗಳಿಗೆ ಕಲಾ ಪ್ರಕಾರಗಳನ್ನು ಕಲಿಸುತ್ತೇವೆ.

ವಿದ್ಯಾರ್ಥಿಗಳು ಕಲಾ ಕ್ಷೇತ್ರದಲ್ಲಿ ವೃತ್ತಿಪರರಾಗುವಂತೆ ಸಜ್ಜು ಮಾಡುತ್ತೇವೆ. ಹೀಗಾಗಿ ಎಲ್ಲ ಹಿರಿಯ ಕಲಾವಿದರಿಗೆ ಪ್ರೀತಿ. ಲಾಲ್ಗುಡಿ ಜಯರಾಮನ್, ಹರಿ ಪ್ರಸಾದ್ ಚೌರಾಸಿಯಾ ಸೇರಿದಂತೆ ಭಾರತದ ಬಹುತೇಕ ಕಲಾವಿದರು, ವಿದ್ವಾಂಸರು ಭವನಕ್ಕೆ ಬಂದು ಹೋಗಿದ್ದಾರೆ, ಬರುತ್ತಲೂ ಇದ್ದಾರೆ. ಜತೆಗೆ ಭಾರತೀಯ ಪ್ರದರ್ಶನ ಕಲೆಗಳಿಗೆ ಪಾಶ್ಚಾಮಾತ್ಯ ದೇಶಗಳಲ್ಲಿ ಪ್ರೇಕ್ಷಕರನ್ನು ಸೃಷ್ಟಿಸುತ್ತೇವೆ. ನಮ್ಮಲ್ಲಿ ಕಲಿಯುವ ವಿದ್ಯಾರ್ಥಿಗಳಲ್ಲಿ ಶೇ. ೯೫ರಷ್ಟು ವಿದೇಶಿಯರೂ ಇದ್ದಾರೆ. ಸಂಸ್ಕೃತ ತರಗತಿಗಳಲ್ಲಿ ಶೇ.೨೦ ಮಂದಿ ವಿದೇಶಿಗರು.

ಭಾರತೀಯ ಇನ್ ಸ್ಟ್ರುಮೆಂಟಲ್ ತರಗತಿಗಳಲ್ಲಿ ಶೇ.೧೦-೧೫ ವಿದ್ಯಾರ್ಥಿಗಳು ಇಂದಿಗೂ ವಿದೇಶೀಯರು. ಯುರೋಪಿಯನ್ನ
ರಲ್ಲದೇ, ವೆಸ್ಟಿಂಡೀಸ್, ಮಾರಿನಾಮಾ, ಮಾರಿಷಸ್ ನಂಥ ದೇಶಗಳ ಮೂಲದ ಪೋಷಕರು ಸಹ ತಮ್ಮ ಮಕ್ಕಳನ್ನು ಭಾರತೀಯ ಸಂಸ್ಕೃತಿಯ ಕಲಿಕೆಗೆ ಭವನಕ್ಕೆಕಳುಹಿಸುತ್ತಾರೆ. ನಾವು ಏರ್ಪಡಿಸುವ ಕಾರ್ಯಕ್ರಮಗಳಲ್ಲೂ ಶೇ.೨೫ ಪ್ರೇಕ್ಷಕರು ಭಾರತೀಯರಲ್ಲ. ಕೇವಲ ಹಿಂದೂಗಳಿಗೆ ಎಂದಲ್ಲ, ಜಾತಿ- ಮತ-ಪಂಥಗಳನ್ನು ಮೀರಿ ‘ಎಲ್ಲರಿಗಾಗಿ ಭವನ’ ಎಂಬುದು ನಮ್ಮ ತತ್ವ.

ಭವನದಲ್ಲಿ ನೀವು ಏನೇನು ಕಲಿಸುತ್ತೀರಿ?

-೨೩ಕ್ಕೂ ಹೆಚ್ಚು ವಿವಿಧ ವಿಷಯಗಳನ್ನು ಕಲಿಸಲಾಗುತ್ತದೆ. ಜನಪ್ರಿಯ ಕೋರ್ಸ್‌ಗಳಲ್ಲಿ ಭಾರತೀಯ ಸಂಗೀತ ಮತ್ತು ನೃತ್ಯ ಸೇರಿವೆ. ನಾವು ಭಾರತೀಯ ಕಲೆ ಮತ್ತು ಪುರಾತತ್ತ್ವ ಶಾಸವನ್ನು ಸಹ ಕಲಿಸುತ್ತೇವೆ. ನಾವು ಕೊಳಲು ಮತ್ತು ಬಂಗಾಳಿ
ಸಂಗೀತವನ್ನು ಕಲಿಸುತ್ತೇವೆ. ಸಂಸ್ಕೃತ, ತಮಿಳು ಮತ್ತು ಇತರ ಭಾಷೆಗಳನ್ನು ಕಲಿಸುತ್ತೇವೆ. ಎಲ್ಲಾ ಕೋಸ್ ಗಳು ಸಮಾನವಾಗಿ ಜನಪ್ರಿಯವಾಗಿದ್ದರೂ – ಹಿಂದೂಸ್ತಾನಿ ಗಾಯನ ಮತ್ತು ಭರತನಾಟ್ಯಂ ವಿಶೇಷವಾಗಿ ಜನಪ್ರಿಯವಾಗಿವೆ. ಸಂಸ್ಕೃತ ಕಲಿಕೆಯ ಕೋರ್ಸ್‌ಗಳಲ್ಲಿ ಯಾವತ್ತಿಗೂ ೫೦ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ದಾಖಲಾಗಿದ್ದೇ ಇಲ್ಲ.

ಭವನಕ್ಕೆ ಇಷ್ಟೆಲ್ಲ ಮಾಡಲು ಆದಾಯ ಮೂಲ?
-ಇಲ್ಲಿ ನಾನು ಇನೋಸಿಸ್ ಫೌಂಡೇಶನ್‌ನ ಡಾ. ಸುಧಾಮೂರ್ತಿ ಅವರನ್ನು ಸ್ಮರಿಸಲೇಬೇಕು. ಅವರಿಗೆ ಭವನದ ಮೇಲೆ ಇನ್ನಿಲ್ಲದ ಪ್ರಿತಿ, ನನ್ನ ಮೇಲೆ ವಿಶೇಷ ಅಭಿಮಾನ. ಇಲ್ಲಿಗೆ (ಲಂಡನ್)ಬಂದಾಗಲೆಲ್ಲ ಅವರು ಭವನಕ್ಕೆ ಬಾರದೇ ಉಳಿಯುವುದೇ ಇಲ್ಲ. ಇಡೀ ಜೀವನದ, ಗಳಿಕೆಯನ್ನು ಸಮಾಜ ಸೇವೆಗೆ ಮುಡಿಪಿಟ್ಟ ಅವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ನಮ್ಮ ಮನೆಯಲ್ಲೇ ಉಳಿದು, ನಮ್ಮೆಲ್ಲರ ಜತೆ ಉಂಡು, ನೆಲದ ಮೇಲೇ ಮಲಗುವ ಸರಳತೆಯನ್ನು ಇನ್ಯಾರಲ್ಲೂ ಕಂಡಿಲ್ಲ. ಇತ್ತೀಚಿನ ದಿನಗಳಲ್ಲಿ ಅವರ ಬೆಂಬಲ ಗಣನೀಯವಾಗಿದೆ.

ಇದಕ್ಕೂ ಮುನ್ನ ಬಿರ್ಲಾ ಫೌಂಡೇಶನ್, ಬ್ರಿಟಿಷ್ ಸರಕಾರ ಎಲ್ಲರೂ ಬೆಂಬಲ, ಸಹಾಯ ನೀಡಿದ್ದಾರೆ. ನೀಡುತ್ತಲೇ ಇದ್ದಾರೆ. 1996ರಿಂದ ಇಲ್ಲಿನ ಸರಕಾರದ ಅನುದಾನ ಸಿಗುತ್ತಿದೆ. ಮೊದಲು ಕಡಿಮೆ ಇದ್ದ ಅನುದಾನ, ಇದೀಗ ವರ್ಷಕ್ಕೆ ೧ಲಕ್ಷದ ೩೦ ಸಾವಿರ ಪೌಂಡ್‌ಗೆ ಏರಿದೆ. ಈ ಅನುದಾನ ನಮ್ಮ ಒಟ್ಟೂ ಖರ್ಚಿನ ಶೇ.೨೫ರಷ್ಟು. ದಾನಿಗಳ ನೆರವು ಅಪಾರವಾಗಿದೆ.

ಭಾರತೀಯ ಕಲೆ ವೈಯಕ್ತಿಕವಾಗಿ ಯಾವ ರೀತಿ ಪ್ರಭಾವ ಬೀರುತ್ತದೆ?
-ನಮ್ಮ ನಿಜವಾದ ಶಕ್ತಿ ನಮ್ಮ ಸಂಸ್ಕೃತಿ ಮತ್ತು ನಮ್ಮ ತತ್ವಶಾಸ. ಸಾವಿರಾರು ವರ್ಷಗಳಿಂದ ಮುಂದುವರಿದುಕೊಂಡು ಬಂದಿರುವ ಆಕೆಯ ಸಂಸ್ಕೃತಿ ಯಿಂದಾಗಿ ಭಾರತ ಶ್ರೀಮಂತವಾಗಿದೆ. ಭಾರತೀಯ ನಾಗರಿಕತೆಯಷ್ಟು ಪುರಾತನವಾದ ಇನ್ನೊಂದು ಸಂಪ್ರದಾಯ ಜಗತ್ತಿನ ಬೇರಾವುದೇ ಇಲ್ಲ. ವೇದಗಳ ಕಾಲದಿಂದ ನಾವು ನಮ್ಮ ಸಂಸ್ಕೃತಿಯನ್ನು ಅವಿಚ್ಛಿನ್ನ
ಪರಂಪರೆಯಲ್ಲಿ ಪಡೆದುಕೊಂಡಿದ್ದೇವೆ. ನಮ್ಮ ಸಂಸ್ಕೃತಿ ಮತ್ತು ಸಾಹಿತ್ಯವು ನಿಮ್ಮನ್ನು ಶುದ್ಧೀಕರಿಸುತ್ತದೆ – ಅದು ಕಾಳಿದಾಸನ ಪ್ರದರ್ಶನ, ರಾಮಾಯಣ ಅಥವಾ ಮಹಾಭಾರತ. ಎಲ್ಲ ಕಲಾ ಪ್ರಕಾರಗಳು ಅಮೂರ್ತ ಮತ್ತು ತತ್ವಶಾಸವನ್ನು ತಿಳಿಸುತ್ತವೆ. ಕಲೆಯು ನಮ್ಮನ್ನು ಪ್ರಾಪಂಚಿಕ ವಿಷಯಗಳಿಂದ ತೆಗೆದುಕೊಳ್ಳುತ್ತದೆ ಮತ್ತು ಜೀವನದಲ್ಲಿ ಹೆಚ್ಚಿನದನ್ನು ಅನುಭವಿಸಲು ನಮಗೆ ಸಹಾಯ ಮಾಡುತ್ತದೆ.ಮಹಾನ್ ವಿeನಿಗಳು ಸಾಮಾನ್ಯವಾಗಿ ಉತ್ತಮ ಸಂಗೀತ ಪ್ರೇಮಿಗಳಾಗಿ ದ್ದಾರೆ.

ನಿಮ್ಮ ಭವನದ ನಂಟು ಆರಂಭವಾಗಿದ್ದ ಯಾವಾಗ?
-ಶಿವಮೊಗ್ಗದಿಂದ (ಸಮೀಪದ ನಗರ) ೭ ಕಿಲೋ ಮೀಟರ್ ದೂರದ ಶುದ್ಧ, ಸುಂದರ ಪುಟ್ಟ ಹಳ್ಳಿ ಮತ್ತೂರಿನ ವೈದಿಕ ಸಂಪ್ರ ದಾಯದ ಕುಟುಂಬದಲ್ಲಿ ಹುಟ್ಟಿ ಬೆಳೆದವ ನಾನು. ಸುಮಾರು ೮೦೦-೯೦೦ ವರ್ಷಗಳ ಹಿಂದೆ ತಮಿಳುನಾಡು – ಕೇರಳ ಗಡಿಯಿಂದ ವಲಸೆ ಬಂದು ಕರ್ನಾಟಕದ ವಿವಿಧ ಭಾಗಗಳಲ್ಲಿ ನೆಲೆಸಿದ ಸಂಕೇತಿಗಳೇ ಇರುವುದು ಆ ಗ್ರಾಮದಲ್ಲಿ.

ಅಲ್ಲೇ ವೇದಗಳ ಪ್ರಾಥಮಿಕ ಪರಿಚಯ ಆಯಿತು. ಕೃಷ್ಣ ಯಜುರ್ವೇದದ ಅಧ್ಯಯನ, ಪಾಲನೆ ಇಂದಿಗೂ ಅಲ್ಲಿ ನಡೆಯುತ್ತದೆ.
ನಾನು ಎಕೃಷ್ಣ ಯಜುರ್ವೇದದ ಎಸ್ಸೆಸೆಲ್ಸಿ ವರೆಗೆ ಅಲ್ಲೇ ಓದಿದೆ. ನಂತರ ಶಿವಮೊಗ್ಗದಲ್ಲಿ ಪದವಿ ಮುಗಿಸಿ, ಮೈಸೂರಿನಲ್ಲಿ ಸಂಸ್ಕೃತ ಎಂಎ ಗಳಿಸಿದ ಬಳಿಕ ಬೆಂಗಳೂರಿನಲ್ಲಿ ಮೂರು ವರ್ಷ ಮಲ್ಲೇಶ್ವರದ ರಾಘವೇಂದ್ರ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕ ನಾಗಿದ್ದೆ. ನಂತರ 1977ರಲ್ಲಿ ಪಿಎಚ್.ಡಿಗಾಗಿ ಲಂಡನ್ ಗೆ ಬಂದೆ.

‘ಪುರಂದರ ಕನಕರ ಸಾಹಿತ್ಯದಲ್ಲಿ ಬಾಲಕೃಷ್ಣ’ ಎಂಬ ವಿಷಯದಲ್ಲಿ ಡಾಕ್ಟರೇಟ್ ಪಡೆದ ಬಳಿಕ, ‘ದಿ ಭವನ’ದ ಸಂಪರ್ಕಕ್ಕೆ ಬಂದೆ. ಮತ್ತೂರು ಕೃಷ್ಣ ಮೂರ್ತಿಗಳು 1984ರಲ್ಲಿ ನನಗೆ ಭವನದ ಅಕಾಡೆಮಿಕ್ ನಿರ್ದೇಶಕನ ಹೊಣೆ ನೀಡಿದರು.
ಅಲ್ಲಿಂದ ಇಲ್ಲಿಯವರೆಗೂ ನನ್ನ ನಂಟು ನಿರಂತರವಾಗಿ ಭವನದೊಂದಿಗೆ ಸಾಗಿ ಬಂದಿದೆ. ಈಗ ಕಾರ್ಯ ನಿರ್ವಾಹಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸುತ್ತಿರುವೆ. ಭಾರತೀಯತೆಯನ್ನು ಉಳಿಸುವ ಜೀವನದ ಸರ್ವೋತ್ಕೃಷ್ಠ ಅವಕಾಶವನ್ನು ನಾನು ಭವನದಿಂದ ಪಡೆದಿದ್ದೇನೆ ಎಂಬ ಹೆಮ್ಮೆ, ಹಾಗೂ ಅದರಲ್ಲಿ ಕಿಂಚಿತ್ತು ಕೆಲಸ ಮಾಡಿದ ಸಾರ್ಥಕ್ಯ ನನ್ನದು.

ಅದಕ್ಕಾಗಿಯೇ ಬ್ರಿಟಿಷ್ ಸರಕಾರದಿಂದ ಇಂಥ ದೊಡ್ಡ ಗೌರವ ಸಂದಿದೆ.