Thursday, 12th December 2024

ಟೀಕೆಗಳೆಷ್ಟೇ ಮಾಡಿದರೂ ಸರಿ ಧೋನಿಯೇ ನಂಬರ್‌ ಒನ್ ನಾಯಕ !

ವೀಕೆಂಟ್ ವಿಥ್ ಮೋಹನ್

ಮೋಹನ್ ವಿಶ್ವ

ಸಾಮಾಜಿಕ ಜೀವನದಲ್ಲಿ ಹೆಸರು ಮಾಡುವುದು ಸುಲಭ, ಯಾವುದಾದರೊಂದು ಏಣಿಯನ್ನು ಹತ್ತಿ ಮೇಲಕ್ಕೆ ಹೋಗಿಬಿಡ ಬಹುದು. ಆದರೆ ಮಾಡಿದ ಹೆಸರನ್ನು ಕಾಪಾಡಿಕೊಂಡು ಹೋಗುವುದು ಕಷ್ಟದ ಕೆಲಸ.

ತುಂಬಾನೇ ಕಷ್ಟ ಪಟ್ಟು ಮೇಲೆ ಬಂದು ನಂತರ ತಲೆ ನಿಲ್ಲದೇ ಹೆಸರು ಹಾಳು ಮಾಡಿಕೊಂಡಿರುವ ಹಲವು ಜನರ ಉದಾಹರಣೆ ಗಳು ನಮ್ಮ ಮುಂದಿವೆ. ಇನ್ನೂ ಕೆಲವರು ಅದೃಷ್ಟದ ಮೂಲಕ ಬಹು ಬೇಗ ಮೇಲೆ ಬರುತ್ತಾರೆ, ಆದರೆ ಮತ್ತದೇ ಏಣಿಯನ್ನು ಒದೆಯುವ ತಪ್ಪುಗಳನ್ನು ಮಾಡಿ ಹೆಸರನ್ನು ಹಾಳು ಮಾಡಿಕೊಳ್ಳುತ್ತಾರೆ. ಹಾಗಾಗಿ ಜೀವನದಲ್ಲಿ ಹೆಸರು ಗಳಿಸುವುದಕ್ಕಿಂತಲೂ ಗಳಿಸಿದ ಹೆಸರನ್ನು ಕಾಪಾಡಿಕೊಂಡು ಹೋಗುವುದು ಕಷ್ಟದ ಕೆಲಸ. ಈ ಮಾತು ರಾಜಕೀಯ, ಚಲನಚಿತ್ರ, ಸಾಮಾಜಿಕ ಜಾಲತಾಣಗಳು, ಸಮಾಜ ಸೇವೆ ಎಲ್ಲಾ ವಲಯದವರಿಗೂ ಅನ್ವಯವಾಗುತ್ತದೆ.

ಒಮ್ಮೆ ಕುದುರೆ ಏರಿದ ಮೇಲೆ ಓಡಿಸುತ್ತಲೇ ಇರಬೇಕು, ಕುದುರೆ ಸ್ವಲ್ಪ ನಿಧಾನವಾಗಿ ಓದಿದರೂ ಸಹ ಜನರು ಅದರ ಕಡೆ ನೋಡುವುದಿಲ್ಲ, ಅದಕ್ಕೆ ವಯಸ್ಸಾದರೂ ಸರಿ ಓಡುತ್ತಲೇ ಇರಬೇಕು. ಇಲ್ಲವಾದರೆ ಯಾರೂ ಸಹ ಮರ್ಯಾದೆ ನೀಡುವುದಿಲ್ಲ. ಅಪ್ಪಿ ತಪ್ಪಿ ಎಡವಿ ಬಿದ್ದರೆ ಮುಗಿಯಿತು ಎಲ್ಲರೂ ಸಹ ಟೀಕಿಸುವವರೇ ಆಗಿರುತ್ತಾರೆ. ಅವರವರ ಕ್ಷೇತ್ರದಲ್ಲಿ ಅದೆಷ್ಟು ಒಳ್ಳೆಯ ಕೆಲಸ ಮಾಡಿದ್ದರೂ ಸರಿ, ಹಳೆಯದನ್ನೆಲ್ಲ ಮರೆತು ಬಿಡುತ್ತಾರೆ. ಕಳೆದ ಕೆಲವು ವಾರಗಳಿಂದ ಭಾರತ ಕ್ರಿಕೆಟ್ ತಂಡ ಕಂಡಂಥ ಅದ್ಭುತ ನಾಯಕ ಮಹೇಂದರ್ ಸಿಂಗ್ ಧೋನಿಯವರ ಬಗ್ಗೆ ಹಲವಾರು ರೀತಿಯ ಟೀಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿದ್ದೇವೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಽಸುವ ದೋನಿ ನೇತೃತ್ವದ ತಂಡವು ಈ ಬಾರಿಯ ಐ.ಪಿ.ಎಲ್‌ನಲ್ಲಿ ಬಹಳ ಕಳಪೆ ಪ್ರದರ್ಶನವನ್ನು ನೀಡುತ್ತಿದೆ, ಇದರ ಪರಿಣಾಮವಾಗಿ ಅಂಕ ಗಳಿಕೆಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಒಂದು ಕಾಲದಲ್ಲಿ ಸದಾ ಮೊದಲನೆಯ ಸ್ಥಾನದಲ್ಲಿರುತ್ತಿದ್ದ ತಂಡವು ಈ ಬಾರಿ ಕಡೆಯ ಸ್ಥಾನಕ್ಕೆ ಕುಸಿದಿರುವುದು ದೋನಿಯ
ಅಭಿಮಾನಿಗಳಲ್ಲಿ ಭಾರಿ ನಿರಾಸೆಯನ್ನು ಮೂಡಿಸಿದೆ. ಕೇವಲ ಒಂದು ಸರಣಿಯಲ್ಲಿ ತಂಡವು ಕಳಪೆ ಪ್ರದರ್ಶನ ನೀಡಿದಾಕ್ಷಣ ಆ
ತಂಡವು ಈ ಹಿಂದೆ ನೀಡಿದ ಒಳ್ಳೆಯ ಪ್ರದರ್ಶನವನ್ನೆಲ್ಲ ಮರೆತು ಬಿಡುವುದೇ ? ಮಹೇಂದರ್ ಸಿಂಗ್ ದೋನಿಯ ನೇತೃತ್ವದಲ್ಲಿ ಚೆನ್ನೆ ಸೂಪರ್ ಕಿಂಗ್ಸ್ ನೀಡಿರುವ ಈ ಹಿಂದಿನ ಪ್ರದರ್ಶನವನ್ನು ಯಾವ ತಂಡವೂ ನೀಡಿಲ್ಲ, ಪ್ರತಿ ಬಾರಿಯೂ ಮೊದಲ ಎರಡು ಸ್ಥಾನಗಳನ್ನು ಕಾಯಿದಿರಿಸಿಕೊಂಡು ಬಂದಂಥ ತಂಡದ ನಾಯಕನ ಬಗ್ಗೆ ಅದೆಷ್ಟು ಟ್ರಾಲ್ ಗಳು, ಅದೆಷ್ಟು ಮಾತುಗಳು ಕೇಳಿಬಂದಿವೆಯೆಂದರೆ, ಆತ ಭಾರತದ ನಾಯಕನಾಗಿ ಮಾಡಿದ ಸಾಧನೆಗಳನ್ನು ಅಷ್ಟು ಸುಲಭವಾಗಿ ಮರೆತು ಬಿಡುವುದೆ?
ಅತ್ಯುತ್ತಮ ಆಟಗಾರನಾದರೂ ಸಹ ಸರಿಯಾದ ಸಮಯದಲ್ಲಿ ಅವಕಾಶ ಸಿಗದೇ, ಇತರರಿಗಿಂತಲೂ ತಡವಾಗಿ ಭಾರತ ತಂಡಕ್ಕೆ
ಆಯ್ಕೆಯಾದ ಆಟಗಾರ ಮಹೇಂದರ್ ಸಿಂಗ್ ಧೋನಿ.

ಧೋನಿಗಿಂತಲೂ ಮೊದಲು ತಂಡಕ್ಕೆ ಸೇರಿದ್ದ ಯುವರಾಜ್ ಸಿಂಗ್, ಮೊಹಮ್ಮದ್ ಕೈ-ನಂಥ ಆಟಗಾರರು ಈಗ ಎಲ್ಲಿದ್ದಾರೆ?
ಅವರೆಲ್ಲರಿಗಿಂತಲೂ ತಡವಾಗಿ ಬಂದಂಥ ಧೋನಿ ಈಗ ಎಲ್ಲಿದ್ದಾರೆ? ತಡವಾಗಿ ಬಂದರೂ, ಸಿಕ್ಕಂಥ ಅವಕಾಶವನ್ನು
ಉಪಯೋಗಿಸಿಕೊಂಡು ಭಾರತ ತಂಡದ ಹಿರಿಮೆಯನ್ನು ಇಡೀ ಜಗತ್ತಿಗೇ ಮುಟ್ಟಿಸಿದ ನಾಯಕನಾಗಿ ಬೆಳೆದ ಆಟಗಾರ ಧೋನಿ.
ಅತೀ ಕಡಿಮೆ ಸಮಯದಲ್ಲಿ ತಂಡವನ್ನು ಬೇರೆಯದ್ದೇ ಲೋಕಕ್ಕೆ ಕರೆದೊಯ್ದ ಕೀರ್ತಿ ಧೋನಿಯವರಿಗೆ ಸಲ್ಲಬೇಕು. ಕ್ರಿಕೆಟಲ್ಲಿ ಒಬ್ಬ ಆಟಗಾರನಾಗಿ ಮಿಂಚಿದ ಹಲವರಿದ್ದಾರೆ.

ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡಿ ತಮ್ಮ ಕ್ರಿಕೆಟ್ ಜೀವನವನ್ನು ಕಟ್ಟಿಕೊಳ್ಳುತ್ತಾರೆ. ಆದರೆ ಒಬ್ಬ ನಾಯಕನಾಗಿ ಇಡೀ ತಂಡವನ್ನೇ ತನ್ನೊಡನೆ ಕರೆದುಕೊಂಡು ಹೋಗುವ ಕಲೆ ಕೆಲವರಿಗೆ ಮಾತ್ರ ತಿಳಿದಿರುತ್ತದೆ.  ಇಂತಹ ನಾಯಕರ ಪಟ್ಟಿಯಲ್ಲಿ ಭಾರತ ತಂಡವು ಕಂಡಂಥ ಶ್ರೇಷ್ಠ ನಾಯಕ ಧೋನಿಯೆಂದರೆ ತಪ್ಪಿಲ್ಲ. ೨೦೦೩ರ ವಿಶ್ವಕಪ್‌ನಲ್ಲಿ ಸೌರವ್ ಗಂಗೂಲಿ ನೇತೃತ್ವದ ತಂಡವು ಫೈನಲ್ ತಲುಪುವ ಮೂಲಕ ಅದ್ಭುತ ಸಾಧನೆಯನ್ನು ಮಾಡಿತ್ತು. ಇಡೀ ಪಂದ್ಯಾವಳಿಯಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರದ್ದೇ ಅಬ್ಬರವಾಗಿತ್ತು. ಅಷ್ಟೆಲ್ಲ ಕಷ್ಟಪಟ್ಟು ಫೈನಲ್ ತಲುಪಿದ ಭಾರತ
ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ನಿರಾಶೆಯು ಕಾದಿತ್ತು.

ಮೊದಲ ಓವರ್‌ನಿಂದಲೇ ಭಾರತದ ಬೌಲರ್‌ಗಳು ತಮ್ಮ ಕಳಪೆ ಪ್ರದರ್ಶನ ನೀಡುವ ಮೂಲಕ, ಆಸ್ಟ್ರೇಲಿಯಾ ತಂಡವು ಬೃಹತ್
ಮೊತ್ತವನ್ನು ಕಲೆಹಾಕುವಂತೆ ಮಾಡಿದ್ದರು. ಭಾರತ ತಂಡವು ಯಾವಾಗಲೂ ಅಷ್ಟೆ ಎ ಪಂದ್ಯಗಳನ್ನು ಚೆನ್ನಾಗಿ ಆಡಿ ಕೊನೆ ಯಲ್ಲಿ ಸೋಲುತ್ತದೆಯೆಂಬ ಮಾತು ಆ ಸಮಯದಲ್ಲಿ ಸದಾ ಇರುತ್ತಿತ್ತು. ಸೌರವ್ ಗಂಗೂಲಿ ಭಾರತ ತಂಡದ ನಾಯಕರಾಗಿದ್ದಾಗ
ಬೆಟ್ಟಿಂಗ್ ಸುಳಿಯಲ್ಲಿದ್ದ ಭಾರತ ತಂಡದ ಆತ್ಮಸ್ಥೆರ್ಯವನ್ನು ಹೆಚ್ಚಿಸಿ, ಒಳ್ಳೆಯ ತಂಡವನ್ನು ಕಟ್ಟುವಲ್ಲಿ ಯಶಸ್ವಿಯಾಗಿದ್ದರು.

ಆದರೆ ಅವರ ನಾಯಕತ್ವದಲ್ಲಿ ಭಾರತ ತಂಡದ ಗೆಲುವಿನಲ್ಲಿ ನಿರಂತರ ಸ್ಥಿರತೆಯೆಂಬುದಿರಲಿಲ್ಲ. ಒಂದು ತಂಡವು ಜಾಗತಿಕ ಮಟ್ಟದಲ್ಲಿ ನಂಬರ್ ಒನ್ ಪಟ್ಟವನ್ನು ಹೆಚ್ಚಿನ ಕಾಲ ಉಳಿಸಿಕೊಳ್ಳಬೇಕೆಂದರೆ ನಿರಂತರವಾಗಿ ಪಂದ್ಯಗಳನ್ನು ಕೆಲವು ವರ್ಷಗಳ ಕಾಲ ಗೆಲ್ಲುತ್ತಿರಬೇಕು. ನಿರಂತರವಾಗಿ ಗೆಲ್ಲದಿದ್ದರೆ ಆ ತಂಡಕ್ಕೆ ತಾನು ಗಳಿಸಿಕೊಂಡಂಥ ಪಟ್ಟವನ್ನು ಉಳಿಸಿಕೊಳ್ಳುವುದು
ಬಹಳ ಕಷ್ಟ. ಈ ಗೆಲುವಿನ ನಿರಂತರತೆಯನ್ನು ಭಾರತ ತಂಡಕ್ಕೆ ತಂದಂಥ ಕೀರ್ತಿ ಮಹೇಂದರ್ ಸಿಂಗ್ ಧೋನಿ’ಯವರಿಗೆ
ಸಲ್ಲಬೇಕು.

ನಿರಂತರ ಗೆಲುವಿನ ಪಟ್ಟವನ್ನು ನಾಯಕರಾಗಿದ್ದ ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಭಾರತಕ್ಕೆ ನೀಡಲಿಲ್ಲ. ಅವರ ನೇತೃತ್ವದಲ್ಲಿ ತಂಡವು ಒಂದಷ್ಟು ಒಳ್ಳೆಯ ಮೈಲಿಗಲ್ಲುಗಳನ್ನು ಸಾಽಸಿತ್ತು ಎನ್ನುವುದನ್ನು
ಬಿಟ್ಟರೆ, ನಿರಂತರ ಗೆಲ್ಲುವ ಸಾಧನೆಯನ್ನು ಮಾಡಿರಲಿಲ್ಲ. ಆದರೆ ಸೌರವ್ ಗಂಗೂಲಿ ನೇತೃತ್ವದ ತಂಡವು ಬೆಟ್ಟಿಂಗ್ ಆರೋಪ ದಡಿಯಲ್ಲಿ ನಲುಗುತ್ತಿದ್ದ ಸಮಯದಲ್ಲಿ ಅದರಿಂದ ಹೊರಬಂದು ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿತ್ತು.

೨೦೦೭ರಲ್ಲಿ ಚುಟುಕು ಕ್ರಿಕೆಟ್ ಎಂದೇ ಪ್ರಸಿದ್ಧವಾಗಿದ್ದ ಟ್ವೆಂಟಿ ಟ್ವೆಂಟಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಮಹೇಂದರ್ ಸಿಂಗ್ ಧೋನಿ ನೇತೃತ್ವದ ಭಾರತ ತಂಡವು ನಿರಂತರವಾಗಿ ಒಳ್ಳೆಯ ಪ್ರದರ್ಶನವನ್ನು ನೀಡುತ್ತಾ ಬಂದಿತ್ತು. ಫೈನಲ್ ತಲುಪಿದ ಮೇಲೆ ಪಾಕಿಸ್ತಾನದ ಮೇಲೆ ಆಡಬೇಕಾದ ಪರಿಸ್ಥಿತಿ ಎದುರಾದಾಗ ಅಭಿಮಾನಿಗಳಿಗೆ ಮತ್ತದೇ ಹಳೆಯ ೨೦೦೩ರ ವಿಶ್ವಕಪ್ ಫೈನಲ್ ಪಂದ್ಯಾವಳಿಯ ಕಹಿ ನೆನಪುಗಳು ಕಣ್ಣಮುಂದೆ ಬರಲಾರಂಭಿಸಿದವು. ಎಲ್ಲಿ ಮತ್ತದೇ ಸೋಲನ್ನು ನೋಡಬೇಕಾಗುತ್ತದೆಯೋ ಎಂಬ ಭಯದಿಂದಲೇ ನಾನೂ ಸಹ ಆ ಪಂದ್ಯವನ್ನು ವೀಕ್ಷಿಸಿದ್ದೆ. ಪಾಕಿಸ್ತಾನದ ಪರವಾಗಿ ತುಂಬಾ ಚೆನ್ನಾಗಿ ಆಡುತ್ತಿದ್ದ ಮಿಸ್ಬಾ ಉಲ್ ಹಕ್ ಪಂದ್ಯವನ್ನು ನಮ್ಮಿಂದ ಕಿತ್ತುಕೊಳ್ಳುವ ಎ ಲಕ್ಷಣಗಳೂ ಕಾಣುತ್ತಿತ್ತು.

ಅಷ್ಟೊಂದು ಚೆನ್ನಾಗಿ ಆಡುತ್ತಿದ್ಧ ಆಟಗಾರನಿಗೆ ಬೌಲಿಂಗ್ ಮಾಡಲು ಜೋಗಿಂದರ್ ಸಿಂಗ್ ಶರ್ಮರಂಥ ಅನನುಭವಿಗೆ ಬೌಲರ್‌ಗೆ ಧೋನಿಯು ಚೆಂಡನ್ನು ನೀಡಿದಾಗ ಎಲ್ಲರೂ ಇಂದಿನ ಫೈನಲ್ ಪಂದ್ಯವೂ ದೇವರ ಪಾಲಾಯಿತೆಂದೇ ಭಾವಿಸಿದ್ದರು, ಆದರೂ ಕೊನೆಗೆ ಭಾರತವು ಪಂದ್ಯವನ್ನು ಗೆಲ್ಲುವ ಮೂಲಕ ೨೪ ವರ್ಷಗಳ ಬಳಿಕ ದೊಡ್ಡ ಪಂದ್ಯಾವಳಿಯನ್ನು ಗೆದ್ದಿತ್ತು. ನಾಯಕನಾದವನಿಗೆ ಮೊಟ್ಟ ಮೊದಲನೆಯದಾಗಿ ತನ್ನ ಆಟಗಾರರ ಮೇಲೆ ಆತ್ಮವಿಶ್ವಾಸವಿರಬೇಕು, ಜೋಗಿಂದರ್‌ನಂಥ ಅನನುಭವಿ ಯುವ ಬೌಲರ್‌ಗೆ ಕೊನೆಯ ಓವರ್ ನೀಡುವುದು ನಾಯಕನಾದವನು ತೆಗೆದುಕೊಳ್ಳುವ ಅತ್ಯಂತ ಅಪಾಯಕಾರಿ ನಿರ್ಧಾರ, ಇಂತಹ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಮಹೇಂದರ್ ಸಿಂಗ್ ಧೋನಿ ತಾನೊಬ್ಬ ವಿಶಿಷ್ಟ ನಾಯಕನೆಂಬ ಸಂದೇಶವನ್ನು ನೀಡಿದ್ದರು.

ಭಾರತ ತಂಡವು ಈ ಪಂದ್ಯಾವಳಿಯಲ್ಲಿ ಎಲ್ಲಾ ಪಂದ್ಯಗಳಲ್ಲಿಯೂ ಉತ್ತಮ ಪ್ರದರ್ಶನವನ್ನೇ ನೀಡುತ್ತಾ ಬಂದಿತ್ತು, ಇಂಗ್ಲೆಂಡ್ ತಂಡದ ಮೇಲೆ ಯುವರಾಜ್ ಸಿಂಗ್ ಬಾರಿಸಿದ ಆರು ಸಿಕ್ಸರ್‌ಗಳನ್ನ ಹೇಗೆ ತಾನೇ ಮರೆಯಲು ಸಾಧ್ಯ? ೨೦೦೩ರ ವಿಶ್ವಕಪ್ -ನಲ್ ಪಂದ್ಯದ ಸೇಡನ್ನು ೨೦೦೭ರ ಚುಟುಕು ವಿಶ್ವಕಪ್‌ನಲ್ಲಿ ಭಾರತವು ಆಸ್ಟ್ರೇಲಿಯಾ ತಂಡದ ಮೇಲೆ ತೀರಿಸಿಕೊಂಡಿತ್ತು. ಭಾರತ ತಂಡವು ವಿಶ್ವಕಪ್ ಗೆದ್ದ ಮೇಲೆ ಟ್ರೋಫಿಯನ್ನು ತನ್ನ ಆಟಗಾರರಿಗೆ ಅರ್ಪಿಸುವ ಮೂಲಕ ಧೋನಿ ತಾನೊಬ್ಬ ಉತ್ತಮ ನಾಯಕ ನೆಂಬುದನ್ನು ತೋರಿಸಿಕೊಟ್ಟಿದ್ದರು.

ಧೋನಿಯವರ ಮುಖ್ಯವಾದ ಗುಣವೆಂದರೆ ತಾಳ್ಮೆ, ಹಲವು ಪಂದ್ಯಗಳನ್ನು ತಾಳ್ಮೆಯಿಂದಲೇ ಗೆಲ್ಲಿಸಿಕೊಟ್ಟಿರುವ ಕೀರ್ತಿ ಧೋನಿ ಯವರಿಗೆ ಸಲ್ಲಲೇಬೇಕು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯವೊಂದರಲ್ಲಿ ಕೊನೆಯ ಓವರ್‌ನಲ್ಲಿ ಬೇಕಿದ್ದ ಹನ್ನೆರಡು ರನ್’ಗಳನ್ನು ತಾವೇ ಸ್ವತಃ ಮುಂದೆ ನಿಂತು ತನ್ನ ಸಹ ಆಟಗಾರನಿಗೆ ಆಡಲು ಬಿಡದೆ ಪಂದ್ಯವನ್ನು ಗೆಲ್ಲಿಸಿದ್ದು ಧೋನಿಯ ತಾಳ್ಮೆ ಹಾಗೂ
ಆತ್ಮ ವಿಶ್ವಾಸಕ್ಕೆ ಉದಾಹರಣೆ. ಸ್ವತಃ ತಾನೇ ಮುಂದೆ ನಿಂತು ಸೋಲುವ ಪಂದ್ಯಗಳನ್ನು ಗೆಲ್ಲಿಸಿರುವ ಹಲವು ಉದಾಹರಣೆ ಯನ್ನು ಧೋನಿಯವರಲ್ಲಿ ಕಾಣಬಹುದು. ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಚೆನ್ನೆ ಸೂಪರ್ ಕಿಂಗ್ಸ್ ತಂಡವನ್ನು ಹಲವು ಬಾರಿ ಸೋಲಿನ ಸುಳಿಯಿಂದ ರಕ್ಷಿಸಿರುವ ಧೋನಿ, ಇದೆ ತಂಡವು ಮ್ಯಾಚ್ ಫಿಕ್ಸಿಂಗ್ಸ್‌ನಲ್ಲಿ ನಿಷೇಧಿಸ ಲ್ಪಟ್ಟಾಗ ಪುಣೆ ತಂಡದ ಪರವಾಗಿ ಆಡಿದ್ದರು.

ಅಲ್ಲಿಯೂ ಅಷ್ಟೇ ತಾನೊಬ್ಬ ನಾಯಕನಾಗಿ ಹೇಗೆ ಆಡಬೇಕೋ ಹಾಗೆಯೆ ಎರಡು ವರ್ಷ ಆಡಿದ ಧೋನಿ ಒಮ್ಮೆ ಪಂಜಾಬ್ ತಂಡದ ವಿರುದ್ಧ ಸೋಲುತ್ತಿದ್ದ ಪಂದ್ಯವನ್ನು ಕೊನೆಯ ಓವರ್‌ನಲ್ಲಿ ತಾನೇ ಸ್ವತಃ ಮುಂದೆ ನಿಂತು ಹದಿನೆಂಟು ರನ್ ಹೊಡೆ ಯುವ ಮೂಲಕ ಗೆಲ್ಲಿಸಿ ಕೊಟ್ಟಿದ್ದರು. ಚುಟುಕು ಕ್ರಿಕೆಟ್‌ನಲ್ಲಿ ಧೋನಿಯ ನಾಯಕತ್ವ ಕೇವಲ ಇಂಡಿಯನ್ ಪ್ರೀಮಿಯರ್ ಲೀಗ್
ಗೆ ಸೀಮಿತವಾಗಿರಲಿಲ್ಲ. ವಿಶ್ವದಾದ್ಯಂತ ಪಂದ್ಯಾವಳಿಯಲ್ಲಿ ಗೆದ್ದ ತಂಡಗಳ ಪಂದ್ಯಾವಳಿಯಲ್ಲಿಯೂ ಇತ್ತು. ಅಲ್ಲಿಯೂ ಚೆನ್ನೆ
ತಂಡವನ್ನು ಗೆಲ್ಲಿಸುವ ಮೂಲಕ ವಿಶ್ವದ ಚುಟುಕು ಕ್ರಿಕೆಟ್‌ನ ನಾಯಕನಾಗಿ ಬೆಳೆದ ಆಟಗಾರ ಧೋನಿ.

ಇನ್ನು ಏಕದಿನ ಪಂದ್ಯಗಳಲ್ಲಿಯೂ ಅಷ್ಟೇ ಧೋನಿಯದ್ದೇ ಹವಾ, ಭಾರತ ತಂಡವು ಹೊರ ದೇಶಗಳಲ್ಲಿ ಯಾವರೀತಿಯಲ್ಲಿ ಪಂದ್ಯಾವಳಿಗಳನ್ನು ಗೆಲ್ಲಬಹುದೆಂಬುದನ್ನು ತೋರಿಸಿಕೊಟ್ಟಿದ್ದರು. ಇವರ ನಾಯಕತ್ವದಲ್ಲಿ ಭಾರತ ತಂಡವು ಹೊರ ದೇಶ ಗಳಲ್ಲಿ ಹಲವು ಪಂದ್ಯಾವಳಿಗಳನ್ನು ಗೆದ್ದಿದೆ. ಅಲ್ಲಿಯೂ ಅಷ್ಟೇ ಧೋನಿಯ ಮಂತ್ರ ತಾಳ್ಮೆ ಹಾಗೂ ಆತ್ಮ ವಿಶ್ವಾಸ, ಕೊನೆಯ ಎಸೆತದವರೆಗೂ ಆತ್ಮವಿಶ್ವಾಸದಿಂದಲೇ ಪಂದ್ಯವನ್ನಾಡುವ ನಾಯಕ ಧೋನಿ.

ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡವು ಸತತವಾಗಿ ಹಲವುದಿನಗಳ ಕಾಲ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದ್ದು ಮಹೇಂದರ್ ಸಿಂಗ್ ಧೋನಿ ನೇತೃತ್ವದ ಕಾಲದಲ್ಲಿ ಎಂದರೆ ತಪ್ಪಿಲ್ಲ. ಏಕದಿನ ಕ್ರಿಕೆಟ್ ವಿಚಾರವನ್ನು ಚರ್ಚಿಸಿದ ಮೇಲೆ ೨೦೧೧ರ ವಿಶ್ವಕಪ್ ಬಗ್ಗೆ ಚರ್ಚೆಯಾಗಲಿಲ್ಲವೆಂದರೆ ಏನು ಪ್ರಯೋಜನ. ಕಪಿಲ್ ದೇವ್ ನೇತೃತ್ವದ ತಂಡವು ೧೯೮೩ರಲ್ಲಿ ವಿಶ್ವಕಪ್ ಗೆದ್ದ ಮೇಲೆ ೨೮ ವರ್ಷಗಳ ಕಾಲ ಭಾರತ ತಂಡವು ವಿಶ್ವಕಪ್ ಗೆದ್ದಿರಲಿಲ್ಲ. ನಾವಂತೂ ನಮ್ಮ ಜೀವಮಾನದಲ್ಲಿ ಭಾರತವು ವಿಶ್ವಕಪ್ ಗೆಲ್ಲುವುದನ್ನು ನೋಡುತ್ತೇವೆ ಇಲ್ಲವೋ ಎಂದು ಕೊಂಡಿದ್ದೆವು.

ಆದರೆ ಭಾರತೀಯ ಅಭಿಮಾನಿಗಳಿಗೆ ನಿರಾಸೆ ಮಾಡ ಧೋನಿ ನೇತೃತ್ವದ ತಂಡ ೨೦೧೧ರಲ್ಲಿ ವಿಶ್ವಕಪ್ ಗೆದ್ದಿತ್ತು. ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ದೇಶದ ವಿರುದ್ಧ ತಾನೇ ಜವಾಬ್ದಾರಿಯನ್ನು ತೆಗೆದುಕೊಂಡು ಆಡಲು ಇಳಿದ ಧೋನಿ ಕೊನೆಯ ಬಾಲಿನಲ್ಲಿ ಸಿಕ್ಸರ್ ಹೊಡೆಯುವ ಮೂಲಕ ಭಾರತಕ್ಕೆ ಟ್ರೋಫಿಯನ್ನು ತಂದುಕೊಟ್ಟರು. ಇಡೀ ಪಂದ್ಯಾವಳಿಯುದ್ದಕ್ಕೂ ತನ್ನ ತಾಳ್ಮೆಯ ಮೂಲಕವೇ ನಾಯಕತ್ವವನ್ನು ನಡೆಸಿಕೊಂಡು ಬಂದಂಥ ಧೋನಿ ಕೊನೆಯ ಪಂದ್ಯದಲ್ಲಿ ನಿರಾಸೆ ಮಾಡಲಿಲ್ಲ.

೧೯೯೬ರಲ್ಲಿ ಇದೇ ಶ್ರೀಲಂಕಾ ದೇಶದ ವಿರುದ್ಧ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ಭಾರತವು ಹೀನಾಯವಾಗಿ ಸೋತಾಗ, ಕಣ್ಣೇರು ಹಾಕಿದ್ದ ವಿನೋದ್ ಕಾಂಬ್ಳಿಯನ್ನು ಹೇಗೆ ತಾನೇ ಮರೆಯಲು ಸಾಧ್ಯ? ಇಂದು ಧೋನಿಯನ್ನು ಟೀಕಿಸುವವರಿಗೆ ಅಂದು ಕಾಂಬ್ಳಿ ಹಾಕಿದ್ದ ಕಣ್ಣೀರಿನ ನೆನಪು ಬರಲಿಲ್ಲವೇ? ಆ ಕಣ್ಣೇರಿಗೆ ಉತ್ತರವಾಗಿ ಶ್ರೀಲಂಕಾವನ್ನು ಸದೆಬಡಿದ ಧೋನಿ ನೇತೃತ್ವ ನೆನಪಾಗಲಿಲ್ಲವೇ? ಈ ಪಂದ್ಯದಲ್ಲಿ ಧೋನಿಯಷ್ಟೇ ಚೆನ್ನಾಗಿ ಆಟವಾಡಿದ ಮತ್ತೊಬ್ಬ ಆಟಗಾರ ಗೌತಮ್ ಗಂಭೀರ್, ಅವರನ್ನೂ ನೆನಪಿಸಿಕೊಳ್ಳಲೇಬೇಕು. ಆದರೆ ಒಬ್ಬ ನಾಯಕನಾಗಿ ತನ್ನ ತವರಿನಲ್ಲಿ ಅಷ್ಟೊಂದು ಜನರ ಮುಂದೆ ಜವಾಬ್ದಾರಿಯನ್ನು ತೆಗೆದುಕೊಂಡು ಬಂದು ಆಟವಾಡಿ ವಿಶ್ವಕಪ್ ಪಂದ್ಯಾವಳಿಯ -ನಲ್ ಪಂದ್ಯ ಗೆಲ್ಲಿಸುವುದು ಸುಲಭವಲ್ಲ, ಅಂತಹ ಅಸಾಧ್ಯ ಕೆಲಸವನ್ನು ಧೋನಿ ಮಾಡಿದ್ದರು.

ಕ್ರಿಕೆಟ್‌ನ ದೇವರು ಸಚಿನ್ ತೆಂಡೂಲ್ಕರ್ ಅದೆಷ್ಟೇ ದಾಖಲೆಗಳನ್ನು ಮಾಡಿದ್ದರೂ ಸಹ ತಮ್ಮ ಅವಧಿಯಲ್ಲಿ ಭಾರತ ತಂಡವು ಒಂದು ವಿಶ್ವಕಪ್ ಗೆಲ್ಲಲಿಲ್ಲವೆಂಬ ಕೊರಗಿತ್ತು. ಆ ಕೊರಗನ್ನು ನಿವಾರಿಸಿದ ನಾಯಕ ಮಹೇಂದರ್ ಸಿಂಗ್ ಧೋನಿಯನ್ನು ಇಂದು ಇಷ್ಟೆ ಹೀಯಾಳಿಸುವುದೆಷ್ಟು ಸರಿ? ವಿಶ್ವಕಪ್ ಗೆದ್ದಮೇಲೆ ಟ್ರೋಫಿಯನ್ನು ನೇರವಾಗಿ ಸಚಿನ್ ತೆಂಡೂಲ್ಕರ್ ಕೈಗೆ ನೀಡಿದ ಧೋನಿಯನ್ನು ಇಂದು ಸಚಿನ್ ತೆಂಡೂಲ್ಕರ್ ಅಭಿಮಾನಿಗಳೇ ಟ್ರೊಲ್ ಮಾಡುತ್ತಿದ್ದಾರೆ.

ಪಂದ್ಯಾವಳಿಯ ಕೊನೆಯ ಸಮಾರಂಭವು ಮುಗಿದ ಮೇಲೆ ಟ್ರೋಫಿಯನ್ನು ತನ್ನ ತಂಡದ ಆಟಗಾರರಿಗೆ ನೀಡಿದ ಧೋನಿಯನ್ನು ಹೇಗೆ ತಾನೇ ಬಯ್ಯಲು ಮನಸ್ಸು ಬರಬೇಕು? ಕೇವಲ ಒಂದು ಐ.ಪಿ.ಎಲ್ ಪಂದ್ಯಾವಳಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ ಕ್ಕಾಗಿ ಧೋನಿಯು ನಾಯಕನಾಗಿ ಭಾರತ ತಂಡಕ್ಕೆ ನೀಡಿರುವ ಕೊಡುಗೆಗಳನ್ನು ಮರೆಯುವುದು ತಪ್ಪು. ಟೆಸ್ಟ್ ಕ್ರಿಕೆಟ್‌ನಲ್ಲಿ ಮಾಹಿ ನಾಯಕತ್ವದ ಸಾಧನೆ ಕಡಿಮೆ ಏನು ಇಲ್ಲ, ಭಾರತ ತಂಡವನ್ನು ಐ.ಸಿ.ಸಿ.ರ‍್ಯಾಂಕಿಂಗ್ ಪಟ್ಟಿಯಲ್ಲಿ ಪ್ರಥಮ ಸ್ಥಾನಕ್ಕೆ ಕೊಂಡೊಯ್ದ ಕೀರ್ತಿ ಧೋನಿಯವರಿಗೆ ಸಲ್ಲಬೇಕು.

ವಿದೇಶಿ ನೆಲದಲ್ಲಿ ಕೇವಲ ಏಕ ದಿನ ಕ್ರಿಕೆಟ್ ಮಾತ್ರವಲ್ಲದೆ ಟೆಸ್ಟ್ ಕ್ರಿಕೆಟ್ ಗಳನ್ನೂ ಹೇಗೆ ಗೆಲ್ಲಬೇಕು ಎಂದು ತೋರಿಸಿಕೊಟ್ಟಂಥ ನಾಯಕ ಧೋನಿ. ದೂರದ ವೆಸ್ಟ್ ಇಂಡೀಸ್ ದ್ವೀಪಗಳಲ್ಲಿನ ವಿಜಯ ಪತಾಕೆ, ದಕ್ಷಿಣ ಆಫ್ರಿಕಾದಲ್ಲಿನ ವಿಜಯ ಪತಾಕೆ ಒಂದಾ, ಎರಡಾ ಮಾಹಿ ಮಾಡಿರುವ ಸಾಧನೆ. ಟೆಸ್ಟ್‌ನಲ್ಲಿ ಪ್ರಥಮ ಸ್ಥಾನ, ಏಕದಿನ ಕ್ರಿಕೆಟ್ ನಲ್ಲಿ ಪ್ರಥಮ ಸ್ಥಾನ, ಚುಟುಕು ಕ್ರಿಕೆಟ್‌ನಲ್ಲಿ ಪ್ರಥಮ ಸ್ಥಾನ, ವಿಶ್ವಕಪ್‌ಗಳನ್ನೂ ಭಾರತಕ್ಕೆ ತಂದಂಥ ಕೀರ್ತಿ, ಐ.ಪಿ.ಎಲ.ನಲ್ಲಿ ಚೆನ್ನೆ ಸೂಪರ್ ಕಿಂಗ್ಸ್ ವಿಜಯ ಪತಾಕೆ, ಒಬ್ಬ ನಾಯಕನಿಗೆ ಇದಕ್ಕಿಂತಲೂ ಮತ್ತೇನು ಬೇಕು? ತಾನು ನಾಯಕತ್ವ ವಹಿಸಿದ ಎಲ್ಲಾ ಆಯಾಮದ ಪಂದ್ಯಗಳಲ್ಲೂ ಗೆಲುವನ್ನೇ ಕಂಡಿರುವ ಮಹೇಂದರ್ ಸಿಂಗ್ ಧೋನಿ ಹೇಗೆ ತಾನೇ ವಿಫಲ ನಾಯಕನಾಗುತ್ತಾನೆ? ಅಷ್ಟೇ ಯಾಕೆ ಮಿನಿ ವಿಶ್ವಕಪ್ ಸಮರವೆಂದೇ ಖ್ಯಾತಿ ಪಡೆದಿರುವ ಐ.ಸಿ.ಸಿ ಚಾಂಪಿಯನ್ಸ್ ಟ್ರೋಫಿಯನ್ನೂ ಮಹೇಂದರ್ ಸಿಂಗ್ ಧೋನಿ ಬಿಟ್ಟಿಲ್ಲ.

ಅಲ್ಲಿಯೂ ಇಂಗ್ಲೆಂಡ್ ವಿರುದ್ಧ ಫೈನಲ್‌ನಲ್ಲಿ ಗೆಲ್ಲುವ ಮೂಲಕ ತನ್ನ ವಸಾಹತನ್ನು ಸ್ಥಾಪಿಸಿದ್ದರು. ವಿರಾಟ್ ಕೊಹ್ಲಿಯ ಆಟವನ್ನು ಎಷ್ಟು ಹೊಗಳಿದರೂ ಸಾಲದು, ಆದರೆ ಅವರು ನಾಯಕನಾಗಿ ಮಾಡಿರುವ ಮಹಾನ್ ಸಾಧನೆಯಾದರೂ ಏನು? ಇದೇ ಐ.ಪಿ.ಎಲ್‌ನಲ್ಲಿ ಬೆಂಗಳೂರಿಗೆ ಕಪ್ ಗೆಲ್ಲಿಸಲು ಸಾಧ್ಯವಾಗಲಿಲ್ಲ. ಇದೇ ಅಭಿಮಾನಿಗಳು ಈ ಸಲ ಕಪ್ ನಮ್ದೇಎನ್ನುವ ಮೂಲಕ ಪ್ರತಿ ವರ್ಷವೂ ಬೆಂಬಲಕ್ಕೆ ನಿಂತಿರುತ್ತಾರೆ, ಆದರೆ ಒಂದು ಪಂದ್ಯಾವಳಿಯನ್ನು ಸರಿಯಾಗಿ ಆಡದ ಧೋನಿಯನ್ನು
ಟೀಕಿಸುತ್ತಾರೆ. ಯಾರು ಏನೇ ಹೇಳಿದರು ಮಹೇಂದರ್ ಸಿಂಗ್ ಧೋನಿ, ಭಾರತ ತಂಡವು ಕಂಡಂತಹ ಅದ್ಭುತ ನಾಯಕರಬ್ಬರು.

ಕ್ರಿಕೆಟ್ ಪಂದ್ಯದ ಎಲ್ಲ ಆಯಾಮಗಳಲ್ಲೂ ಭಾರತ ತಂಡವನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ ಕೀರ್ತಿ ಅವರಿಗೆ ಸಲ್ಲಲೇಬೇಕು.
೨೦೦೭ ಹಾಗೂ ೨೦೧೪ರ ನಡುವೆ ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡವನ್ನು ಉತ್ತುಂಗಕ್ಕೇರಿಸಿದ ಕೀರ್ತಿ ಮಹೇಂದರ್ ಸಿಂಗ್
ಧೋನಿಯವರಿಗೆ ಸಲ್ಲಬೇಕು. ಹಿಂದೆಂದೂ ಕಾಣದ ಕ್ರಿಕೆಟ್ ಲೋಕವನ್ನೇ ಭಾರತ ತಂಡಕ್ಕೆ ಧೋನಿಯವರು ನೀಡದ್ದಾರೆ. ಧೋನಿ ಯವರನ್ನು ಅದೆಷ್ಟೇ ಟೀಕಿಸಿದರೂ ನಾಯಕನಾಗಿ ಅವರು ತಂಡಕ್ಕೆ ಮಾಡಿರುವ ಕೆಲಸವನ್ನು ಭಾರತದ ಕ್ರಿಕೆಟ್ ಇತಿಹಾಸವು
ಹೇಳುತ್ತದೆ. ಕೇವಲ ತನ್ನ ಸ್ವಾರ್ಥಕ್ಕಾಗಿ ಪಂದ್ಯವನ್ನಾಡದೆ ಒಂದು ತಂಡದ ಒಳಿತಿಗಾಗಿ ಆಟವಾಡುವಂಥ ನಾಯಕ ಧೋನಿ, ಅವರ ಮೇಲೆ ನಾಯಕನಾಗಿzಗ ಹಲವರನ್ನು ತುಳಿದು ತಮಗಿಷ್ಟಬಂದವರಿಗೆ ಅವಕಾಶ ನೀಡಿದರೆಂಬ ಆರೋಪವಿದೆ.

ಹಾಗಾದರೆ ಈ ಹಿಂದೆ ಯಾರು ಹೀಗೆ ಮಾಡಿಲ್ಲವೇ? ಕೇವಲ ಧೋನಿ ಮಾತ್ರ ಹೀಗೆ ಮಾಡಿರುವುದೇ? ಒಬ್ಬ ನಾಯಕನಾಗಿ ಕೆಲವೊಂದು ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಈ ರೀತಿಯ ಸಮಸ್ಯೆಗಳು ಆಗುವುದು ಸಹಜ. ಈ ಹಿಂದೆಯೂ ಈ ರೀತಿಯ ಹಲವು ನಿರ್ಣಯಗಳನ್ನು ಹಿಂದಿನ ನಾಯಕರು ತೆಗೆದುಕೊಂಡಿದ್ದಾರೆ. ಆದರೆ ಅವರ‍್ಯಾರೂ ಸಹ ಧೋನಿಯಷ್ಟು ಎತ್ತರಕ್ಕೆ ಭಾರತ ತಂಡವನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ, ಮಹೇಂದ್ರ ಸಿಂಗ್ ಧೋನಿಯವರ ತಾಳ್ಮೆಯ ವ್ಯಕ್ತಿತ್ವವೇ ಅವರ ನಾಯಕತ್ವದ ಗುಣವನ್ನು ಕ್ರೀಡಾಂಗಣದಲ್ಲಿ ತೋರಿಸುತ್ತದೆ.

ಇಂತಹ ಮಹಾನ್ ನಾಯಕನನ್ನು ನಿವೃತ್ತಿ ಹೊಂದಿದ ಮೇಲೆ ಒಂದು ಪಂದ್ಯಾವಳಿಯಲ್ಲಿ ಸರಿಯಾಗಿ ಆಡಲಿಲ್ಲವೆಂದು ಟೀಕೆ ಮಾಡುವುದು ಸರಿಯಲ್ಲ, ಯಾರು ಏನೇ ಟೀಕೆ ಮಾಡಿದರೂ ಮಹೇಂದರ್ ಸಿಂಗ್ ಧೋನಿಯವರ ಸಾಧನೆಯನ್ನು ಅಷ್ಟು ಸುಲಭವಾಗಿ ಸರಿಗಟ್ಟಲು ಸಾಧ್ಯವಿಲ್ಲ.