Saturday, 14th December 2024

ಸಾರ್ವಜನಿಕ ಸೇವೆ ಎಂಬ ಸವಕಲು ನಾಣ್ಯ

ಸ್ವಗತ

ಜಯಪ್ರಕಾಶ್ ಪುತ್ತೂರು

‘ಮೇ ಐ ಹೆಲ್ಪ್ ಯೂ’ ಎಂಬ ಬೋರ್ಡ್ ಹಾಕಿ ಕುಳಿತ ಕಾರ್ಯಕರ್ತರು ಎಲ್ಲೆಡೆ ಕಾಣಸಿಗುತ್ತಾರೆ. ಆದರೆ ‘ಸೇವೆ’ ಎಂಬುದು ಮರುಳು ಗಾಡಿನ ಮರೀಚಿಕೆ ಎಂಬ ಅನುಭವ ಗ್ರಾಹಕರಿಗೆ ಸದಾ ಆಗುತ್ತಿರುವುದು ವಿಪರ್ಯಾಸ.

ಕಾಯಿದೆ ಚೌಕಟ್ಟು, ನಿಯಮಾವಳಿಗಳನ್ನು ಮೀರಿ ಸಹಾಯ ಮಾಡುವ ಮನಸ್ಸು ಇರುವವರು ಬಹಳ ಕಡಿಮೆ. ಈ ಮುಂಗಟ್ಟಿನ ಹಿಂದೆ ಕುಳಿತವರಲ್ಲಿ ಸಾಧ್ಯವಾದಷ್ಟು ಜನರಿಗೆ ತಮ್ಮಿಂದ ಏನಾದರೂ ಸಹಾಯ ಆಗಲಿ ಎಂಬ ಆಶಯ ಇದೆಯೇ? ಎಂಬುದು ಯಕ್ಷ ಪ್ರಶ್ನೆ. ಹಿಂದೊಮ್ಮೆ ಪ್ರವಾಸಕ್ಕೆಂದು ರಾಜಸ್ಥಾನದ ಉದಯಪುರ ಎಂಬಲ್ಲಿಗೆ ಹೋಗಿದ್ದಾಗ ನಡೆದ ಘಟನೆ ಇನ್ನೂ ಮನದ ಕ್ಯಾನ್‌ವಾಸಿನಲ್ಲಿ ಹಚ್ಚಹಸಿರಾಗಿಯೇ ಉಳಿದಿದೆ. ಮೊದಲೇ ಸಂಬಂಧಪಟ್ಟ ವೆಬ್‌ಸೈಟ್ ಅರಸುತ್ತಾ ಹೊಟೇಲ್ ಕೋಣೆ ಲಭ್ಯ ವಿರುವುದನ್ನು ಖಚಿತಪಡಿಸಿ, ಹಣವನ್ನು ಪಾವತಿಸಿ ರಶೀದಿಯನ್ನು ಆನ್‌ಲೈನ್‌ನಲ್ಲಿ ಪಡೆದು ಹೊರಟವರಿಗೆ ಸದರಿ ಸ್ಟಾರ್ ಹೊಟೇಲ್‌ನ ಕೌಂಟರಿಗೆ ಹೋದಾಗ ಬಹು ದೊಡ್ಡ ಆಶ್ಚರ್ಯ ಕಾದಿತ್ತು!

ರಾತ್ರಿಯಿಡೀ ರೈಲು ಪ್ರಯಾಣದ ಆಯಾಸ ಹೊತ್ತು ಬಂದಾಗ ಕೂಡಲೇ ವಿಶ್ರಾಂತಿ ಬಯಸುವ ತನು ಮನಕ್ಕೆ ಕೌಂಟರ್‌ನಲ್ಲಿ  ದ್ದಾಕೆಯ ಮಾತು ಕೇಳಿ ನಿಂತ ಭೂಮಿ ಕುಸಿದಂತೆ ಆಯಿತು. ‘ನಿಮ್ಮ ಹೆಸರಿನಲ್ಲಿ ಯಾವುದೇ ರಿಸರ್ವೇಶನ್ ಕಾಣಿಸುತ್ತಿಲ್ಲ’ ಎಂದು ನಿರ್ಧಾಕ್ಷಿಣ್ಯವಾಗಿ ಹೇಳಿದಾಗ ಹೇಗಾಗಿರಬೇಕು ಹೇಳಿ? ಪ್ರತಿಯೊಬ್ಬರ ಹೆಸರಿನ ಹೆಸರು, ತಂದೆಯ ಹೆಸರು
ಹಾಗೂ ಕೊನೆಯದಾಗಿ ಅಡ್ಡ ಹೆಸರು ಅಥವಾ ಸರ್‌ನೇಮ್ ಎಂಬುದಾಗಿ ಇರುತ್ತದೆ.

ಈಗಿನ ಕಂಪ್ಯೂಟರಿನ ಬಳಕೆಯಾದ ಸೇವೆ ಸ್ವರೂಪಗಳಲ್ಲಿ ಕಂಡು ಬರುವ ಸರ್ವೇ ಸಾಮಾನ್ಯ ತೊಡಕುಗಳು ಈ ಮೊದ್ದು ಮಣಿಗಳಿಂದಾಗಿ ಗ್ರಾಹಕರಿಗೆ ಅನೆಕ ಬಾರಿ ಹೇಳತೀರದ ತೊಂದರೆಗಳು ಆಗುತ್ತವೆ. ಈ ಸನ್ನಿವೇಶದಲ್ಲಿ ನಮಗೆ ಲಭಿಸಿದ ರಶೀದಿ, ಆಧಾರಿತ ಸಂಖ್ಯೆ, ತಾರೀಕು, ಹಣ ಪಾವತಿಸಿರುವ ಸ್ಪಷ್ಟೀಕರಣದ ದಾಖಲೆ ಯಾವುದನ್ನು ತೋರಿಸಿದರೂ, ಕೌಂಟರಿನ ಮಹಿಳೆ ಗಂಟು ಮುಖದಿಂದ ನಿರ್ವೀಕಾರ ಭಾವದಿಂದ ಒಂದೇ ಸಮನೇ, ‘ನೋ ಬುಕ್ಕಿಂಗ್ ಇನ್ ಯುವರ್ ನೇಮ್’ ಎಂದು ಹೇಳಿ ಮುಂದಿನ ಗ್ರಾಹಕರತ್ತ ಗಮನ ಹರಿಸಿದಳು.

ಯಾರಿಗಾದರೂ ತಾಳ್ಮೆಗೆಡುವ ಪ್ರಸಂಗ ಇದಾಗಿತ್ತು. ನಾವು ಛಲದಿಂದ, ‘ಈ ನಮ್ಮ ಸಮಸ್ಯೆ ನೀವು ಪರಿಹರಿಸದಿದ್ದರೆ ಯಾರಿಗೂ ಅವಕಾಶ ನೀಡಲಾರೆವು’ ಎಂದು ಕೌಂಟರ್ ಮುಂದೆ ಸ್ಥಿರವಾಗಿ ನಿಂತೆವು. ಆದರೂ ನಮಗೆ ಸಹಾಯ ಮಾಡುವ ಯಾವುದೇ ಲಕ್ಷಣಗಳು ಆಕೆಯಲ್ಲಿ ಕಾಣುತ್ತಿರಲಿಲ್ಲ. ಸಭಾಂಗಣದಲ್ಲಿರುವ ಸೆಕ್ಯೂರಿಟಿಯನ್ನು ಆಕೆ ಕರೆದಳು. ಛಲ ಬಿಡದೆ ನಾವು, ‘ನಿಮ್ಮ ವ್ಯವಸ್ಥಾಪಕರನ್ನು ಕರೆಯಿರಿ’ ಎಂದು ಏರು ಧ್ವನಿಯಲ್ಲಿ ಹೇಳಿದ್ದನ್ನು ಕೇಳಿ ಮೆತ್ತಗಾದಳು. ಅನಂತರ ಆಕೆ ತನ್ನ ಬಾಸ್‌ಗೆ ಫೋನಾಯಿಸಿದಳು.

ಟೈ, ಕೋಟುಗಳಿಂದ ಭೂಷಿತನಾದ ಆ ವ್ಯಕ್ತಿ ಬಹುಶಃ ಜನರಲ್ ಮ್ಯಾನೇಜರ್ ಬಂದ. ಆತನಿಗೆ ತಾಳ್ಮೆ ಹಾಗೂ ಹೇಳಿದ್ದನ್ನು ಕೆಳಿಸಿಕೊಳ್ಳುವ ವ್ಯವಧಾನ ಇದ್ದಂತೆ ಕಂಡುಬಂತು. ‘ನೋಡಿ, ನಮ್ಮ ಹೆಸರಿನ ಮೂರು ವಿಭಾಗದ ಪ್ರಥಮ ಶಬ್ದವನ್ನು ಹಿಡಿದು ಕಂಪ್ಯೂಟರಿನಲ್ಲಿ ಚೆಕ್ ಮಾಡಿ’ ಎಂದೆ. ಕೊನೆಗೆ ರಾವ್… ಹಾಗೆ ‘ಆರ್’ನಲ್ಲಿ ಹುಡುಕಿದಾಗ ರಾವ್ ಜಯಪ್ರಕಾಶ್ ಕುಡುಕೊಳ್ಳಿ ಎಂಬ ನಾಮಾಂಕಿತದ ರಿಸರ್ವೇಶನ್ ದಾಖಲೆ ಕಂಡು ಬಂತು. ನಮಗೇನೋ ಕೊನೆಗಾದರೂ ಈ ಸಮಸ್ಯೆಗೆ ಪರಿಹಾರ ಸಿಕ್ಕಿತೆಂಬ ಧೈರ್ಯ ಇಮ್ಮಡಿ ಆಯಿತು.

ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ ಆ ಮ್ಯಾನೇಜರ್ ಕೌಂಟರಿನ ಮಹಿಳೆಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡ. ಗ್ರಾಹಕರ ಪೂರ್ಣ ಹೆಸರು ಹಿಡಿದು ಎಲ್ಲಾ ರೀತಿಯಲ್ಲಿ ಅಕ್ಷರಗಳ ಮೂಲಕ ಪರಿಶೋಧಿಸುವ ಕ್ರಮವನ್ನು ಪಾಲಿಸಬೇಕು. ಈ ರೀತಿ ನಾವು ಗ್ರಾಹಕರನ್ನು ಅಸಡ್ಡೆಗೆ ಒಳಪಡಿಸಿ ಯಾತನೆ ನೀಡಬಾರದು. ಮುಂದೆ ಆತ ತೀರಾ ವಿಷಾದ ವ್ಯಕ್ತಪಡಿಸುತ್ತಾ, ‘ನಿಮಗೆ ಆಗಿ ರುವ ತೊಂದರೆಯ ಪರಿಹಾರವೆಂದು ನಾವು ನಿಮಗೆ ಡಬ್ಬಲ್ ರೂಮುಗಳ ಬದಲು ಒಂದು ಕಾಟೇಜನ್ನೇ ನೀಡುತ್ತಿದ್ದೇವೆ’
ಎಂದು ಸಹಕರಿಸಿ ನಗುತ್ತಾ ಚೇಂಬರ್‌ಗೆ ಕರೆದು ಕಾಫಿ ನೀಡಿ ಸತ್ಕರಿಸಿ, ಉಪಚರಿಸಿ ಗ್ರಾಹಕರನ್ನು ಸಾಂತ್ವನಗೊಳಿಸಿದ
ಪರಿಯನ್ನು ಮೆಚ್ಚಿಕೊಳ್ಳಲೇಬೇಕು.

ವಿದೇಶ ಪ್ರಯಾಣದ ವೇಳೆ ಚೆಕ್‌ಇನ್ ಮಾಡಿಸಿಕೊಂಡು ಬೋರ್ಡಿಂಗ್ ಮಾಡುವ ವೇಳೆ ನಮ್ಮ ಭಾರತೀಯ ಹೆಸರುಗಳನ್ನು ಉಚ್ಛರಿಸಲು ವಿದೇಶಿಯರು ಪಡುವ ಕಷ್ಟ ನೋಡಿ ನಕ್ಕದ್ದೇ ಹೆಚ್ಚು. ನಿಮ್ಮ ಹೆಸರು ಬಹು ಉದ್ದವಾಗಿದ್ದರೆ ಕಂಪ್ಯೂಟರ್ ಅಡ್ಡ ಹೆಸರನ್ನು ಎತ್ತಿಕೊಂಡು ಕೆಲವೇ ಅಕ್ಷರಗಳಿಗೆ ಸೀಮಿತಗೊಳಿಸಿ ವಿಕೃತವಾಗಿಸುತ್ತದೆ. ಮತ್ತೆ ಇದನ್ನು ಹೇಗೆ ಆಕೆ ಕೂಗಿಯಾಳು ಹೇಳಿ? ಕೆಲವೊಮ್ಮೆ ಪಾಸ್‌ಪೋರ್ಟ್‌ನಲ್ಲಿ ಹೆಸರನ್ನು ಹಾಗೂ ಬುಕ್ಕಿಂಗ್‌ನ ವೇಳೆ ನೊಂದಾಯಿಸಿಕೊಂಡ ಹೆಸರುಗಳ ವಿಂಗಡನೆಯಲ್ಲಿ ತೊಂದರೆ-ವ್ಯತ್ಯಾಸ ಕಂಡು ವಿಮಾನ ಯಾನದ ವೇಳೆ ಸುಖಾಸುಮ್ಮನೆ ಪ್ರಯಾಣದ ವಿಳಂಬ ನೀತಿಯಿಂದ
ಕಷ್ಟಪಟ್ಟದ್ದೂ ಸಾಕಷ್ಟು ಇದೆ.

ಹಿಂದೊಮ್ಮೆ ಕಾಯಾರ್ಥ ಮುಂಬಯಿ ನಗರದಿಂದ ಬೆಂಗಳೂರಿಗೆ ವಾಪಸ್ಸು ಪ್ರಯಾಣಿಸಲು ದೇಶದ ಪ್ರತಿಷ್ಠಿತ ವಿಮಾನ ಸಂಸ್ಥೆಯ -ಟ್‌ಗೆ ತಡರಾತ್ರಿ ಚೆಕ್‌ಇನ್ ಮಾಡಿ ಕುಳಿತುಕೊಂಡಿದ್ದೆ. ಆ ವಿಮಾನ ಅತ್ಯಂತ ಹೆಚ್ಚು ಹಜ್ ಯಾಂತ್ರಿಕರಿಂದ ತುಂಬಿ ಹೋಗಿತ್ತು. ಎಂದಿನಂತೆ ಬೆಂಗಳೂರಿನಲ್ಲಿ ತಮ್ಮ ಲಗೇಜ್ ಪಡೆಯಲು ಹೋದಾಗ ಕಂಡುಕೊಂಡ ಆಘಾತಕಾರಿ ಸತ್ಯ ಏನೆಂದರೆ, ಮುಂಬಯಿಯಿಂದ ಹತ್ತಿಕೊಂಡ ಪ್ರಯಾಣಿಕರ ಇಡೀ ಸರಂಜಾಮು ತುಂಬಿಸಿರಲಿಲ್ಲ. ಅಷ್ಟೂ ಸಂಖ್ಯೆಯ ಜನರಿಗೆ ಅಂದು ತಡರಾತ್ರಿಯಲ್ಲಿ ದೊಡ್ಡ ಆಘಾತವಾಗಿತ್ತು.

ಅಲ್ಲಿಂದ ಮುಂದೆ ಬೇರೆ ಊರಿಗೆ ಬಸ್, ರೈಲುಗಳಲ್ಲಿ ಪ್ರಯಾಣಿಸುವವರಿಗೆ ಹೇಳಲಾಗದ ಸಂಕಷ್ಟ ಒದಗಿತ್ತು. ಹಾಗೆಯೇ
ಮರುದಿನ ಹೊಸ ಕೆಲಸಕ್ಕೆ ಸೇರ್ಪಡೆಯಾಗಲಿದ್ದ ವಿದ್ಯಾರ್ಥಿಗಳು. ಆಸ್ಪತ್ರೆಗಳಲ್ಲಿ ದಾಖಲಾತಿ-ತಪಾಸಣೆಗೆ ಒಳಗಾಗುವ ಜನರು… ಹಾಗೆಯೇ, ಅಂದು ರಾತ್ರಿ ಹೋಟೇಲ್ ರೂಮು ರಿಸರ್ವೇಶನ್ ಮಾಡಿಸುವವರು ಮತ್ತು ಸ್ವಾಗತಿಸಲು ಬಂದಿದ್ದ ಬಂಧುಗಳು, ಸ್ನೇಹಿತರು ಹಾಗೂ ಅಽಕಾರಿಗಳಿಗೆ ಎಲ್ಲರಿಗೂ ದೊಡ್ಡ ಆಘಾತ ಕಾದಿತ್ತು.

ವಿಮಾನ ನಿಲ್ದಾಣ ಬಿಟ್ಟು ಹೋಗುವುದು ಹೇಗೆ? ಎಲ್ಲರೂ ಸಂಬಂಧಪಟ್ಟ ಕೌಂಟರ್‌ಗಳಿಗೆ ಧಾವಿಸಿ ತಮ್ಮ ಯಾತನೆ ಹೇಳಿ ಕೊಳ್ಳುತ್ತಿದ್ದಾಗ, ಏನೂ ಆಗದವರಂತೆ, ‘ನೀವೆಲ್ಲಾ ಒಂದು ಫಾರ್ಮ್ ಭರ್ತಿ ಮಾಡಿ ನೀಡಿರಿ. ನಾಳೆ ನೋಡೋಣ’ ಎಂಬ ಉಢಾಪೆಯ ಮಾತನ್ನಾಡಿದಾಗ, ನಮಗೆಲ್ಲಾ ರೇಗಿಹೋಯಿತು. ‘ಮೊದಲು ಇಲ್ಲಿನ ನಿಮ್ಮ ಹಿರಿಯ ಅಧಿಕಾರಿಗಳನ್ನು ಕರೆಯಿಸಿ. ಮುಂಬಯಿಯ ಕಚೇರಿಗೆ ಸುಳಿವು ನೀಡಿ ಹಾಗೂ ಮುಂದಿನ -ಟ್‌ನಲ್ಲಿ ಲಗೇಜ್ ರವಾನಿಸುವ ವ್ಯವಸ್ಥೆಯನ್ನು ಮಾಡಿ. ಈ ಪ್ರಕ್ರಿಯೆ ನಡೆಯುವವರೆಗೆ ನಾವು ಇಲ್ಲಿಂದ ಕದಲುವುದಿಲ್ಲ’ ಎಂದು ಬೊಬ್ಬೆ ಹಾಕಿದರು.

ಕೊನೆಗೂ ಬಿಸಿ ಮುಟ್ಟಿತು. ಕೂಡಲೇ ಎಲ್ಲರೂ ಹೌಹಾರಿ ಕಾರ್ಯಪ್ರವೃತ್ತರಾದರು. ಎಲ್ಲರಿಗೂ ರಶೀದಿ ನೀಡಿ, ಎಲ್ಲರ ಫೋನ್ ನಂಬರ್ ಮತ್ತು ವಿಳಾಸ ಗಳನ್ನು ಸ್ವೀಕೃತಿ ಮಾಡಿಕೊಂಡರು. ಆದರೂ ಅವರಿಗೆ ಏನೂ ವಿಷಾದ ಭಾವನೆ ಮೂಡಿದಂತೆ ಕಂಡುಬರಲಿಲ್ಲ. ಎಲ್ಲರೂ ತಲೆ ಚಚ್ಚಿಕೊಂಡು ಹೊರಗೆ ಬಂದರು. ಇಂತಹ ಜ್ವಲಂತ ಸಮಸ್ಯೆಗಳನ್ನು ಎದುರಿಸಲು ಹೊರಟಾಗ, ಕೆಲವರಾದರೂ ಮುಂದೆ ಬಂದು ನಾಯಕತ್ವ ವಹಿಸಿಕೊಂಡರೆ ಗ್ರಾಹಕರ ಚಳುವಳಿಗೊಂದು ರೂಪೂರೇಷೆ ಬರುತ್ತದೆ ನಿಜ. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ವಿಮಾನ ನಿಲ್ದಾಣದಿಂದ ನಮ್ಮ ಅಧಿಕೃತ ವಸತಿ ಸಮುಚ್ಛಯಕ್ಕೆ ಹೋಗಲು ಕಾರು ಹತ್ತು ವೇಳೆ ನನಗೆ, ‘ಯಾಕೆ ಈ ಪ್ರಮಾದವನ್ನು ಪತ್ರಿಕೆಗಳಿಗೆ ನೀಡಬಾರದು?’ ಎಂಬ ಯೋಚನೆ ಬಂತು. ಹೇಗೂ ನನ್ನ ವೃತ್ತಿ ಜೀವನದ ಪರಿಚಯ ನಗರದ ಎಲ್ಲಾ ಮಾಧ್ಯಮದವರಿಗೆ ಖಚಿತವಾಗಿ ರುವ ಕಾರಣ ಈ ಕೆಲಸ ಖಂಡಿತಾ ಮಾಡಬಹುದು.

ಏಕೆಂದರೆ ಸಾರ್ವಜನಿಕ ಹಿತಾಸಕ್ತಿ ಅಡಗಿದೆ ಅಲ್ಲವೇ? ಕೂಡಲೇ ಎಲ್ಲಾ ಮಾಧ್ಯಮ ಮಿತ್ರರಿಗೆ ಮತ್ತು ವಾರ್ತಾ ಕೇಂದ್ರಗಳಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಈ ಸುದ್ದಿಯಲ್ಲಿ ಬೇಕಿದ್ದರೆ ನನ್ನ ಹೆಸರು ಹಾಗೂ ಹೊಂದಿರುವ ಕೇಂದ್ರ ಸರಕಾರದ ಹುದ್ದೆಯನ್ನು ಉದ್ಧರಿಸಿ ಎಂದೂ ಹೇಳಿದೆ. ನನ್ನ ಮನೆಯ ಬೀಗದ ಕೀಗಳೂ ತಪ್ಪಿಹೋದ ಲಗೇಜ್ ಅಂದರೆ ಸೂಟ್‌ಕೇಸ್‌ ನಲ್ಲಿತ್ತು. ಮನೆಯವರೆಲ್ಲಾ ಆ ದಿನ ಬೇರೆ ಕಡೆಗೆ ಪ್ರಯಾಣಿಸಿದ ಕಾರಣ ನಾನು ಸಂಸ್ಥೆಯ ಗೆಸ್ಟ್‌ಹೌಸ್‌ನಲ್ಲಿ ರೂಮು ಪಡೆದು ಆ ರಾತ್ರಿ ಕಳೆಯಬೇಕಾಯಿತು.

ಬೆಳಗ್ಗಿನ ಜಾವ ಪತ್ರಿಕೆ ಮತ್ತು ಟಿ.ವಿಗಳಲ್ಲಿ ಪ್ರಯಾಣಿಕರ ಲಗೇಜ್ ಬಿಟ್ಟು ತೊಂದರೆಯಾದ ಪ್ರಯಾಣಿಕರ ಬವಣೆ ಹಾಗೂ ಸಂಸ್ಥೆಯ ಬೇಜವಬ್ದಾರಿ ನಡವಳಿಕೆ ಬಗ್ಗೆ ದೊಡ್ಡದಾಗಿ ವಾರ್ತೆ ಬಿತ್ತರಿಸಿದವು. ಅನಂತರ ನಡೆದದ್ದೇ ಬೇರೆ! ಆ ಸಂಸ್ಥೆಯ ಹಿರಿಯ ಅಽಕಾರಿಗಳು ಸ್ವತಃ ಎಲ್ಲರಿಗೂ ಫೋನಾಯಿಸಿ ವಿಷಾದಕೋರಿ, ‘ಇನ್ನು ೫ ಗಂಟೆಗಳ ಒಳಗಾಗಿ ನಿಮ್ಮ ನಿಮ್ಮ ವಸತಿ-ರೂಮುಗಳಿಗೆ ಅವರವರ ಸಾಮಾಗ್ರಿ-ಸರಂಜಾಮುಗಳನ್ನು ತಲುಪಿಸುತ್ತೇವೆ.

ಮುಂಬಯಿಂದ ಈಗಾಗಲೇ ಇಡೀ ಸರಂಜಾಮುಗಳನ್ನು ಹುಡುಕಿ ಬೆಂಗಳೂರಿನತ್ತ ಬೆಳಗ್ಗಿನ -ಟ್‌ನಲ್ಲಿ ಲೋಡ್ ಮಾಡುವ ಎಲ್ಲಾ ವ್ಯವಸ್ಥೆ ಆಗಿದೆ’ ಎಂದು ಘೋಷಿಸಿದರು. ಅಂತೆಯೇ ಮಧ್ಯಾಹ್ನ ಒಂದು ಗಂಟೆಯ ಒಳಗಾಗಿ ಎಲ್ಲಾ ಪ್ರಯಾಣಿಕರು ಕಳೆದುಕೊಂಡ ತಮ್ಮ ಸೊತ್ತುಗಳನ್ನು ಪಡೆಯುವಂತಾದರು. ಅನೇಕರು ನನಗೆ ಫೋನ್ ಮಾಡಿ ‘ಥ್ಯಾಂಕ್ಸ್’ ಹೇಳಿದರು. ಈ ಎಲ್ಲಾ ಬೆಳವಣಿಗೆಯ ನಡುವೆ ಸದರಿ ವಿಮಾನ ಸಂಸ್ಥೆಯ ಸ್ಥಳೀಯ ಪಿ.ಆರ್.ಓ. ಸಿಟ್ಟುಗೊಂಡು ಮುಂದೆ ಹಲವು ವರ್ಷಗಳ ಕಾಲ ನನ್ನೊಡನೆ ಮಾತನಾಡುವುದನ್ನೇ ಬಿಟ್ಟರು!