ಪಂಥಾಹ್ವಾನ
ಪವನ್ ವಶಿಷ್ಠ
ಕರ್ನಾಟಕದಲ್ಲಿ ಕಳೆದುಹೋಗಿದ್ದ ಕೈಗಾರಿಕಾ ಶಕೆಗೆ ಕೈಗಾರಿಕಾ ಮಂತ್ರಿ ಎಂ.ಬಿ. ಪಾಟೀಲ್ ಅವರು ಪುನರುಜ್ಜೀವನ ನೀಡುತ್ತಿದ್ದಾರೆಯೇ? ಅಥವಾ
ಟ್ವೀಟ್ ವಾರ್‌ನಲ್ಲಿ ಕಳೆದು ಹೋಗಿದ್ದಾರೆಯೇ? ಕಾರಣ, ನೈಕಿ ಮತ್ತು ಅಡಿಡಾಸ್ ಸಂಸ್ಥೆಗೆ ಚರ್ಮರಹಿತ ಶೂ ತಯಾರುಮಾಡುವ ಪೋ ಚಿನ್ ಸಂಸ್ಥೆ ಭಾರತದಲ್ಲಿ ತನ್ನ ಉತ್ಪಾದನಾ ಘಟಕ ಆರಂಭಿಸಿ ಸುಮಾರು ೨ ಸಾವಿರ ಕೋಟಿ ರು. ಹೂಡಿಕೆ ಮಾಡುವುದಾಗಿ ಹೇಳಿದೆ.
ಬಿಪಿ ಮಾನಿಟರಿಂಗ್ ಸೇರಿ ವೈದ್ಯಕೀಯ ಉತ್ಪನ್ನ ತಯಾರುಮಾಡುವ ಓಮ್ರಾನ್ ಸಂಸ್ಥೆ ಕೂಡ ೬ ಎಕರೆ ಜಾಗದಲ್ಲಿ ೧೨೮ ಕೋಟಿ ರು. ಹೂಡಿಕೆ ಮಾಡುವ ಮೂಲಕ ತನ್ನ ಉತ್ಪಾದನಾ ವಲಯ ವನ್ನು ಭಾರತದಲ್ಲಿ ಆರಂಭಿಸುವುದಾಗಿ ಘೋಷಿಸಿದೆ. ಎ.ಸಿ. ಮತ್ತು ಕಂಪ್ರೆಸರ್ ವಲಯದಲ್ಲಿ ದಿಗ್ಗಜರೆನಿಸಿಕೊಂಡ ಮಿಟ್ಸುಬಿಷಿ ಎಲೆಕ್ಟ್ರಿಕ್ ಸಂಸ್ಥೆ ಸುಮಾರು ೫೨ ಎಕರೆ ಜಾಗದಲ್ಲಿ ೧೮೦೦ ಕೋಟಿ ರು. ಹೂಡಿಕೆ ಮಾಡುವ ಮೂಲಕ ಭಾರತದಲ್ಲಿ ಉತ್ಪಾದನಾ ಘಟಕ ಆರಂಭಿಸುವುದಾಗಿ ಒಡಂಬಡಿಕೆ ಮಾಡಿಕೊಂಡಿದೆ.
ಇಷ್ಟು ಮಾತ್ರವಲ್ಲದೆ, ಹ್ಯುಂಡೈ ಭಾರತದಲ್ಲಿ ಇವಿ ವಾಹನ ತಯಾರಿಸುವ ಸಲುವಾಗಿ ತನ್ನ ಘಟಕವನ್ನು ವಿಸ್ತರಿಸುವ ಮೂಲಕ ಉತ್ಪಾದನಾ ವಲಯದಲ್ಲಿ ೨೪ ಸಾವಿರ ಕೋಟಿ ರು. ಹೂಡಿಕೆ ಮಾಡುವುದಾಗಿ ಹೇಳಿದೆ. ಇವೆಲ್ಲವೂ ನಡೆದಿದ್ದು ಕೇವಲ ೩ ತಿಂಗಳ ಅವಧಿಯಲ್ಲಿ! ಈ ಸಂಸ್ಥೆ ಗಳಿಂದ ಏನಿಲ್ಲವೆಂದರೂ ಲಕ್ಷಾಂತರ ಮಂದಿಗೆ ನೇರ ಉದ್ಯೋಗ ಮತ್ತು ಅದಕ್ಕಿಂತ ದುಪ್ಪಟ್ಟು ಮಂದಿಗೆ ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಇವರೆಲ್ಲರೂ ಭಾರತಕ್ಕೆ ಆಗಮಿಸುತ್ತಿರುವುದು ಸಂತಸದ ಸಂಗತಿಯೇ ಸರಿ. ಆದರೆ, ಈ ಎಲ್ಲಾ ಒಡಂಬಡಿಕೆಗಳನ್ನು ಮಾಡಿಕೊಂಡಿರುವುದು ನಮ್ಮ ನೆರೆಯ ತಮಿಳುನಾಡಿನ ಜತೆಗೆ! ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಕಾವೇರುತ್ತಿದ್ದ ಹೊತ್ತಿನಲ್ಲೇ ತಮಿಳುನಾಡು ಸರಕಾರ ಇಂಥದೊಂದು ಸದಾವಕಾಶ ಬಳಸಿಕೊಂಡು ದೈತ್ಯ ಕಂಪನಿಗಳನ್ನೆಲ್ಲಾ ತನ್ನತ್ತ ಸೆಳೆದುಕೊಂಡಿದೆ. ಆ ಹೊತ್ತು ನಮ್ಮ ರಾಜ್ಯದ ನಾಯಕರು ಚುನಾವಣೆಯ ಟಿಕೆಟ್ ಹಂಚಿಕೆಯ ಹಗ್ಗಜಗ್ಗಾಟದಲ್ಲೇ ಮುಳುಗಿಹೋಗಿದ್ದರು.
ಇದರಿಂದಾಗಿ, ಹಿಗ್ಗಬೇಕಾಗಿದ್ದ ರಾಜ್ಯದ ಕೈಗಾರಿಕೆ ಮತ್ತು ಉತ್ಪಾದನಾ ವಲಯ ಕೃಶವಾಗಿದ್ದು ಮಾತ್ರವಲ್ಲದೆ ಇವರನ್ನು ತನ್ನತ್ತ ಸೆಳೆಯುವಲ್ಲಿ
ವಿಫಲವಾಯಿತು. ಇದರಿಂದ ರಾಜ್ಯದ ಅಸಹಾಯಕತೆ ಮತ್ತೊಮ್ಮೆ ಬೆತ್ತಲಾಯಿತು. ಕಳೆದ ಕೆಲ ದಶಕಗಳಿಂದ ಉತ್ಪಾದನಾ ವಲಯದಲ್ಲಿ ನಮ್ಮ
ರಾಜ್ಯದಿಂದ ಹೇಳಿಕೊಳ್ಳುವಂಥ ಸಾಧನೆ ಆಗೇ ಇಲ್ಲ ಎನ್ನಬಹುದು. ತಕ್ಕಮಟ್ಟಿಗೆ ಹೇಳುವುದಾದರೆ ಟೊಯೊಟಾ, ಹೊಂಡಾ, ವೋಲ್ವೊದಂಥ ಮೂವರು ದಿಗ್ಗಜರೇ ರಾಜ್ಯದಲ್ಲಿನ ಸಣ್ಣ ಕೈಗಾರಿಕೆಗಳ ಕೈಹಿಡಿದಿದ್ದಾರೆ. ಇದುಬಿಟ್ಟರೆ ಹೇಳಿಕೊಳ್ಳುವಂಥ ಹೊಸ ಉತ್ಪಾದನಾ ಘಟಕಗಳು ಕರುನಾಡಿನಲ್ಲಿ ತಲೆ ಎತ್ತೇ ಇಲ್ಲ, ಎತ್ತುತ್ತಲೂ ಇಲ್ಲ. ಕಿಯಾ ಮೋಟಾರ್ಸ್, ಟಾಟಾ ಇಲೆಕ್ಟ್ರಾನಿಕ್ಸ್, ಓಲಾ ದ್ವಿಚಕ್ರ ವಾಹನ ಘಟಕದಂಥ ದೈತ್ಯ ಸಂಸ್ಥೆಗಳಿಗೆ ಕರ್ನಾಟಕ ಹೇಳಿಮಾಡಿಸಿದ ರಾಜ್ಯ. ಆದರೆ, ಇಲ್ಲಿನ ರಾಜಕೀಯ ಅಸ್ಥಿರತೆ ಪರಿಣಾಮ ಇವರೆಲ್ಲಾ ನೆರೆರಾಜ್ಯದತ್ತ ಮುಖಮಾಡಿದರು. ವಿಪರ್ಯಾಸವೆಂದರೆ ಇವರೆಲ್ಲರೂ ನಮ್ಮ ರಾಜ್ಯದ ಗಡಿಯಿಂದ ೫೦-೬೦ ಕಿ.ಮೀ. ಸಮೀಪದಲ್ಲೇ ತಮ್ಮ ಘಟಕಗಳನ್ನು ಆರಂಭಿಸಿದ್ದಾರೆ!
ಸದ್ಯಕ್ಕೇನೋ ನಮ್ಮ ರಾಜ್ಯದಲ್ಲಿ ಸ್ಥಿರ ಸರಕಾರವಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಮಂತ್ರಿ ಎಂ.ಬಿ. ಪಾಟೀಲರು ಮೂಲತಃ ಎಂಜಿನಿಯರಿಂಗ್ ಪದವೀಧರರು. ಇವರಿಂದ ಮಾತ್ರವೇ ನಮ್ಮ ರಾಜ್ಯದಲ್ಲಿ ಉತ್ಪಾದನಾ ಮತ್ತು ಕೈಗಾರಿಕಾ ಕ್ರಾಂತಿ ನಿರೀಕ್ಷಣೆ ಸಾಧ್ಯ
ಎಂಬುದರಲ್ಲಿ ಅನುಮಾನವೇ ಇಲ್ಲ. ಪಾಟೀಲರು ಆರಂಭದಲ್ಲೇ ಬೃಹತ್ ಕಂಪನಿಗಳನ್ನು ಸೆಳೆಯುವಲ್ಲಿ ಸಫಲರಾಗಿದ್ದಾರೆ. ಈ ಮೂಲಕ ನಾಡಿನ ಯುವ ಸಮೂಹದಲ್ಲಿ ಒಂದು ಆಶಾಭಾವನೆ ಯಂತೂ ಮೂಡಿದೆ.
-ಕ್ಸಾನ್, ಐಬಿಸಿಯಂಥ (ಇಂಟರ್‌ನ್ಯಾಷನಲ್ ಬ್ಯಾಟರಿ ಕಂಪನಿ) ಸಂಸ್ಥೆಗಳನ್ನು ರಾಜ್ಯಕ್ಕೆ ಕರೆತರುವ ಪ್ರಯತ್ನದಲ್ಲಿ ಪಾಟೀಲರು ಆರಂಭಿಕ ಯಶಸ್ಸನ್ನೂ ಕಂಡಿದ್ದಾರೆ. ಇಷ್ಟಲ್ಲದೆ ಹೊಸದಾಗಿ ಉದ್ಯಮ ಆರಂಭಿಸುವವರ ಅನುಕೂಲಕ್ಕಾಗಿ ಏಕಗವಾಕ್ಷಿ ವ್ಯವಸ್ಥೆ, ವಲಯವಾರು ವಿಷನ್ ಗ್ರೂಪ್
ಆರಂಭಿಸುವುದಾಗಿ ಘೋಷಿಸಿರುವುದಂತೂ ಉತ್ತಮ ಬೆಳವಣಿಗೆ. ಇವೆಲ್ಲಾ ಹೂಡಿಕೆದಾರರಿಗೆ ಆಕರ್ಷಣೀಯ ಅಂಶಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಮಂತ್ರಿಗಳು ಈ ವಿಚಾರದಲ್ಲಿ ಹೆಚ್ಚು ಗಮನಹರಿಸಿದರೆ ಮಾತ್ರವೇ ನಮ್ಮ ರಾಜ್ಯಕ್ಕೆ ಒಂದಿಷ್ಟು ಅನುಕೂಲವಾಗುತ್ತದೆ.
ಆದರೆ, ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದಾಗ ಪಾಟೀಲರು ಅಭಿವೃದ್ಧಿಗಿಂತ ಬೇಡದ ಟ್ವೀಟ್ ವಾರ್‌ಗಳಲ್ಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಇದರಿಂದ ಇಲಾಖೆ ಬಡವಾಗುತ್ತದೆಯೇ ಹೊರತು ರಾಜ್ಯಕ್ಕೆ ಎಳ್ಳಷ್ಟೂ ಲಾಭವಿಲ್ಲ. ಕಾಂಗ್ರೆಸ್ ಪಕ್ಷದ ಅಽನಾಯಕ ರಾಹುಲ್ ಗಾಂಧಿ ಆದಿಯಾಗಿ ಪಕ್ಷದ ಎಲ್ಲಾ ಹಿರಿ ಮತ್ತು ಕಿರಿಯ ನಾಯಕರು ಮೈಕ್ ಸಿಕ್ಕಾಗಲೆಲ್ಲಾ ‘ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹಿಂದೆಂದಿಗಿಂತಲೂ ಹೆಚ್ಚಿದೆ’ ಎಂದು ದೂಷಿಸುತ್ತಲೇ ಇದ್ದರು. ಈಗ ಇವರೆಲ್ಲರ ಆಸೆಯಂತೆ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವ ಜವಾಬ್ದಾರಿ ಕೈಗಾರಿಕಾ ಮಂತ್ರಿಗಳ ಹೆಗಲ ಮೇಲಿದೆ. ಅನುಕೂಲಸ್ಥರು, ಸ್ಥಿತಿವಂತರು ‘ಗ್ಯಾರಂಟಿ’ ಯೋಜನೆಗಳನ್ನು ತ್ಯಾಗ ಮಾಡುವಂತೆ ಮುಖ್ಯಮಂತ್ರಿ ಗಳೇನೋ ಮನವಿ ಮಾಡಿದ್ದಾರೆ.
ಆದರೆ, ತ್ಯಾಗ ಮಾಡುವಂಥ ಪೂರಕ ವಾತಾವರಣ ರಾಜ್ಯದಲ್ಲಿ ನಿರ್ಮಾಣ ಆಗಬೇಕಲ್ಲವೇ? ಅಂಥ ವಾತಾವರಣ ನಿರ್ಮಿಸುವಲ್ಲಿ ಕೈಗಾರಿಕಾ ಮಂತ್ರಿಗಳ ಪಾತ್ರ ಮಹತ್ವದ್ದೇ ಆಗಿರುತ್ತದೆ. ಕೈಗಾರಿಕಾ ಮಂತ್ರಿಗಳು ಎಂದರೆ ಆಯಾ ರಾಜ್ಯ ಮತ್ತು ದೇಶದ ಮುಖವಾಣಿ. ಸಹಜವಾಗಿಯೇ ಸಿಎಂ, ಡಿಸಿಎಂ, ಗೃಹ ಮಂತ್ರಿಗಿಂತಲೂ ಜಾಗತಿಕ ಮಟ್ಟದಲ್ಲಿ ಕೈಗಾರಿಕಾ ಮಂತ್ರಿಗಳು ಹೆಚ್ಚು ಕ್ರಿಯಾಶೀಲರೂ ಪ್ರಚಲಿತರೂ ಆಗಿರುತ್ತಾರೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಜನಪ್ರಿಯ ಕೈಗಾರಿಕಾ ಮಂತ್ರಿಗಳು ಸೂಕ್ಷ್ಮಮತಿ, ಸಂವೇದನಾಶೀಲರು ಮತ್ತು ದೂರದೃಷ್ಟಿ ಉಳ್ಳವರು ಎಂಬುದರಲ್ಲಿ ಎರಡು ಮಾತಿಲ್ಲ.
ಅವರು ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಮಾಡಿದ ಸಾಧನೆ ಮೆಚ್ಚಿ ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ‘ಎಂ.ಬಿ. ಪಾಟೀಲರು ಜನನಾಯಕ ಮಾತ್ರವಲ್ಲ, ಜಲನಾಯಕ’ ಎಂದು ಬೆನ್ನುತಟ್ಟಿದ್ದರು. ಕೈಗಾರಿಕಾ ಇಲಾಖೆ ಪಾಟೀಲರಿಗೆ ಹೇಳಿ ಮಾಡಿಸಿದ ಖಾತೆ.
ಆದರೆ, ಈಗಾಗಲೇ ಉಲ್ಲೇಖಿಸಿದಂತೆ ಅವರು ಟ್ವೀಟ್ ವಾರ್, ಸಿಎಂ ಬದಲಾವಣೆ, ‘ಹಿಂದೂ ವಿಚಾರವಾದಿಗಳನ್ನು ಜೈಲಿ ಗಟ್ಟುತ್ತೇವೆ’ ಎಂಬಂಥ ತಮ್ಮ ಖಾತೆಗೆ ಸಂಬಂಧಿಸದ ಮತ್ತು ಪ್ರಯೋಜನ ವಿಲ್ಲದ ವಿಷಯಗಳಿಗೆ ಮೇಲಿಂದ ಮೇಲೆ ಪ್ರತಿಕ್ರಿಯಿಸುತ್ತಾ ನೆಮ್ಮದಿಗೆ ಸಂಚಕಾರ
ತಂದುಕೊಳ್ಳುತ್ತಿದ್ದಾರೆ.
ಪಾಟೀಲರಲ್ಲಿ ಭಾವುಕತೆ ಸದಾ ಹಬೆಯಾಡುತ್ತಿರುತ್ತದೆ. ಅದು ಇಂಥ ವ್ಯರ್ಥ ಪ್ರಲಾಪಗಳಿಗೆ ಈಡಾಗುವುದು ಸಲ್ಲಕ್ಷಣವಲ್ಲ. ಅವರು ಮೌನ ತಪಸ್ವಿಯಂತೆ ಇಲಾಖೆಯ ಅಭಿವೃದ್ಧಿ ಕಡೆ ಗಮನಹರಿಸಿದರೆ ರಾಜ್ಯಕ್ಕೂ ಲಾಭ, ಪಕ್ಷಕ್ಕೂ ಲಾಭ. ಬೇರೆ ರಾಜ್ಯಗಳಲ್ಲಿ ಐಟಿ-ಬಿಟಿ ವಲಯಕ್ಕೆ ಸಮಾನಾಂತರವಾಗಿ ಉತ್ಪಾದನಾ ವಲಯವೂ ತಲೆ ಎತ್ತುತ್ತಿದೆ. ಉದಾಹರಣೆಗೆ ಮುಂಬೈ, ಚೆನ್ನೈ, ಪುಣೆಯಲ್ಲಿ ಹಾಗೂ ಆಂಧ್ರಪ್ರದೇಶ
ರಾಜ್ಯದಲ್ಲಿ ಐಟಿ-ಬಿಟಿ ಕ್ಷೇತ್ರಕ್ಕೆ ಸರಿಸಮಾನವಾದ ಕೈಗಾರಿಕೆಗಳು ಕಾರ್ಯಾರಂಭ ಮಾಡಿವೆ. ಆದರೆ, ನಮ್ಮ ರಾಜ್ಯದಲ್ಲಿ ಐಟಿ-ಬಿಟಿಗೆ ಮಾತ್ರವೇ ಪ್ರಾಶಸ್ತ್ಯ ನೀಡಲಾಗಿದೆ.
ಮೆಕ್ಯಾನಿಕಲ್ ಅಥವಾ ಆಟೊಮೊಬೈಲ್, ರೊಬೊಟಿಕ್ಸ್ ಎಂಜಿನಿಯರಿಂಗ್ ಓದಿದ ವಿದ್ಯಾರ್ಥಿಗಳು ೧೦-೧೫ ಸಾವಿರ ರು. ಸಂಬಳಕ್ಕೆ ಕೆಲಸಕ್ಕೆ ಸೇರುತ್ತಾರೆ. ಅವರ ಜತೆಯಲ್ಲೇ ಇಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ವಿಜ್ಞಾನ ಕಲಿತವರು ಲಕ್ಷಾಂತರ ರುಪಾಯಿಗಳ ಪ್ಯಾಕೇಜ್ ಪಡೆದುಕೊಳ್ಳುತ್ತಾರೆ.
ಈ ಅಸಮಾನತೆ ಹೋಗಲಾಡಿಸಲು ನಮ್ಮ ರಾಜ್ಯದಲ್ಲೂ ಹೆಚ್ಚಿನ ಪ್ರಮಾಣದ ಕೈಗಾರಿಕೆಗಳು ತಲೆಯೆತ್ತಬೇಕಿದೆ. ಇವು ಮಂತ್ರಿ ಪಾಟೀಲರಿಗೆ ಗೊತ್ತಿರದ ವಿಚಾರಗಳೇನೂ ಅಲ್ಲ. ಎಂ.ಬಿ. ಪಾಟೀಲರು ತಾವೊಬ್ಬ ‘ಕೈಗೊಂಬೆ’ ಮಂತ್ರಿ ಅಲ್ಲ, ‘ಕೈಗಾರಿಕಾ’ ಮಂತ್ರಿ ಎಂಬುದನ್ನು ಸಾಬೀತುಪಡಿ
ಸುತ್ತಾರೆಂಬುದು ರಾಜ್ಯದ ಜನರ ವಿಶ್ವಾಸ. ಅದು ಹುಸಿಗೊಳ್ಳದಿರಲಿ.