ವಿದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
dhyapaa@gmail.com
ವಿಶ್ವದ ಯಾವುದೇ ಮೂಲೆಯಲ್ಲಿರುವ ಮ್ಯಾಕ್‌ಡೊನಾಲ್ಡ್ಸ್‌ಗೆ ಹೋಗಿ ನೋಡಿ, ಒಂದೇ ಹದ. ಅದರ ಅರ್ಥ, ಮ್ಯಾಕ್‌ಡೊನಾಲ್ಡ್ಸ್‌ಗೆ
ಹೋಗುವವರೆಲ್ಲ ರುಚಿಗಾಗಿ ಹೋಗುವುದಿಲ್ಲ. ಅದರ ವ್ಯಾಪಾರದ ಸ್ವರೂಪಕ್ಕೆ ಮರುಳಾಗಿ ಹೋಗುತ್ತಾರೆ ಎಂದಂತಾಯಿತು.
ಇಂದು ಮನುಷ್ಯನಿಗೆ ಯಾವುದಕ್ಕೂ ಸಮಯವಿಲ್ಲ. ನಿಂತಲ್ಲಿ ನಿಲ್ಲಲು ಆಗುತ್ತಿಲ್ಲ, ಕುಂತಲ್ಲಿ ಕೂರಲು ಆಗುತ್ತಿಲ್ಲ. ಒಂದು ಅರೆ ಘಳಿಗೆ ಕುಳಿತು ಟಿವಿ ನೋಡಲೂ ಸಾಧ್ಯವಾಗದೆ, ತಾಬಡತೋಬಡ ಚಾನೆಲ್ ಬದಲಾಯಿಸುವ ರೂಢಿಯಾಗಿದೆ. ಬದುಕಲು ಅವಶ್ಯವಾದ ಊಟ ತಿಂಡಿಗೂ ಸಮಯದ ಅಭಾವ. ಒಂದು ಕಡೆ ಕುಳಿತು ನಿಧಾನವಾಗಿ ತಿನ್ನಲೂ ಪುರುಸೊತ್ತಿಲ್ಲದಾಗ ಇನ್ನು ತಯಾರಿಸಲು ಸಮಯ
ಎಲ್ಲಿಂದ ಸಿಗಬೇಕು? ಹಾಗಾಗಿಯೇ ಹುಟ್ಟಿಕೊಂಡದ್ದು ಈ ಫಾಸ್ಟ್ ಫುಡ್ ಅಥವಾ ತ್ವರಿತ ಉಪಹಾರ ಪದ್ಧತಿ.
ಒಂದು ಅಂಕಿ ಅಂಶದ ಪ್ರಕಾರ, ಅಮೆರಿಕದಲ್ಲಿ ಸಾಮಾನ್ಯ ಮಹಿಳೆಯರು ಪ್ರತಿ ನಿತ್ಯ ಅಡುಗೆಮನೆಯಲ್ಲಿ ಕಳೆಯುವ ಸಮಯ 40 ನಿಮಿಷ ಮಾತ್ರವಂತೆ. ಪುರುಷರು ಬಿಡಿ, ಅದರ ಅರ್ಧದಷ್ಟೂ ಇಲ್ಲವಂತೆ! ಮೊದಲು ಹೊರಗೆ ತಿನ್ನುವುದು ವಿಹಾರಕ್ಕಾಗಿ, ಸಂತೋಷಕ್ಕಾಗಿ ಎನ್ನುವಂತೆ Ctftu. ಇಂದು ಅದು ಅನಿವಾರ್ಯವಾಗಿದೆ. ಈ ಫಾಸ್ಟ್ ಫುಡ್ ಪದ್ಧತಿ ಹುಟ್ಟಿಕೊಂಡದ್ದು ನಿನ್ನೆ ಮೊನ್ನೆಯಲ್ಲ. ತ್ವರಿತ ಆಹಾರ ಪದ್ಧತಿ ಆರಂಭ ವಾದದ್ದು ಇಂದಿಗೆ ಸುಮಾರು 160 ವರ್ಷಗಳ ಹಿಂದೆ, 1860 ರ ದಶಕದಲ್ಲಿ.
ಲಂಡನ್‌ನಲ್ಲಿ ಮೊದಲ ಬಾರಿಗೆ ಫಿಶ್ ಎಂಡ್ ಚಿಪ್ ತ್ವರಿತ ಆಹಾರ ಪದ್ಧತಿ ಆರಂಭವಾಯಿತು ಎನ್ನುತ್ತದೆ ಇತಿಹಾಸ. 1950ರ ದಶಕದಲ್ಲಿ ಅಮೆರಿಕದಲ್ಲಿ ಡ್ರೈವ್ ಥ್ರೂ ರೆಸ್ಟೋರೆಂಟ್‌ಗಳು ಆರಂಭವಾದವು. ಊಟ, ತಿಂಡಿಗೂ ವಾಹನದಿಂದ ಕೆಳಗೆ ಇಳಿಯುವಂತಿಲ್ಲ ಅಂದರೆ ಇನ್ನೇನನ್ನೂ ಹೇಳಬೇಕೆಂದಿಲ್ಲ ಅಲ್ಲವೇ? ಈ ಫಾಸ್ಟ್ ಫುಡ್ ಎಲ್ಲೇ ಹುಟ್ಟಲಿ, ಎಲ್ಲೇ ಬೆಳೆಯಲಿ, ಇಂದು ರಾಜ್ಯ ಆಳುತ್ತಿರುವುದು ಮಾತ್ರ ಮ್ಯಾಕ್ ಡೊನಾಲ್ಡ್ಸ್ ಎಂದರೆ ತಪ್ಪಾಗಲಾರದು. ಮೊದಲೇ ಹೇಳಿಬಿಡುತ್ತೇನೆ, ಇದು ಮ್ಯಾಕ್ ಡೊನಾಲ್ಡ್ಸ್ ಸಂಸ್ಥೆಯ ಗುಣಗಾನವೂ ಅಲ್ಲ,
ಪ್ರಚಾರವೂ ಅಲ್ಲ. ಅಲ್ಲಿಗೆ ಹೋಗಿ ಎಂಬ ಒತ್ತಾಯವೂ ಅಲ್ಲ.
ಆರೋಗ್ಯದ ದೃಷ್ಟಿಯಿಂದ ಅದು ಒಳ್ಳೆಯದು (!?) ಅಥವಾ ಕೆಟ್ಟದ್ದು ಎನ್ನುವ ಯಾವ ನಿರ್ಣಯವೂ ಇಲ್ಲಿಲ್ಲ. ತ್ವರಿತ ಆಹಾರ ಪದ್ಧತಿಯ
ರಾಜ ಎಂದು ಕರೆಸಿಕೊಳ್ಳುವ ಈ ಸಂಸ್ಥೆಯ ತಿನಿಸುಗಳು ಆರೋಗ್ಯದ ಮೇಲೆ ಯಾವ ರೀತಿಯ ಹೊಡೆತ ಕೊಡುತ್ತದೆ ಎಂಬ ವಿಷಯ ಈಗಾಗಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆದರೆ, ಈ ಸಂಸ್ಥೆ ವಿಶ್ವದಾದ್ಯಂತ ಕೇವಲ ಬರ್ಗರ್ ಮಾರಿಕೊಂಡೇ ಏಕಮೇವಾದ್ವಿತೀಯ ಉಪಹಾರ ಗೃಹವಾಗಿ ಮೆರೆಯುತ್ತಿದೆ. ಸಂಸ್ಥೆಯ ಹಲವು ಪ್ರಯೋಗ, ಪರಿಣಾಮ ಮತ್ತು ಪಾಠಗಳು ವ್ಯಾಪಾರಸ್ಥರಿಗೆ ಪ್ರೇರಣಾದಾಯಕ ವಾಗಿದೆ.
ಮ್ಯಾಕ್‌ಡೊನಾಲ್ಡ್ಸ್ ಅಮೆರಿಕ ಮೂಲದ ತ್ವರಿತ ಆಹಾರ ಪದ್ಧತಿಯ ಸಂಸ್ಥೆ. 1940ರಲ್ಲಿ ರಿಚರ್ಡ್ ಮತ್ತು ಮೊರಿಸ್ ಮ್ಯಾಕ್‌ಡೊನಾಲ್ಡ್ಸ್ ಸಹೋದರರು ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್ಡಿನೋದಲ್ಲಿ ಸಾಮಾನ್ಯ ಉಪಹಾರ ಗೃಹವಾಗಿ ಇದನ್ನು ಆರಂಭಿಸಿದರು. ಕಾಲ ಕ್ರಮೇಣ ಹ್ಯಾಂಬರ್ಗರ್ ಸ್ಟ್ಯಾಂಡ್ ಎಂದು ಮರುನಾಮಕರಣ ಮಾಡಿ, ನಂತರ ಫ್ರಾಂಚೈಸ್ ಆಗಿ ಪರಿವರ್ತಿಸಿದರು. 1953ರಲ್ಲಿ ಅರಿಝೋನಾದ ಫೀನಿಕ್‌ನಲ್ಲಿ ಹಳದಿ ಬಣ್ಣದ ಎರಡು ಕಮಾನಿನ (ಗೋಲ್ಡನ್ ಆರ್ಚ್) ಲಾಂಛನವನ್ನು ಪರಿಚಯಿಸಿದರು.
ಆ ಲಾಂಛನ ಇಂದು ಕ್ರಿಸ್ತನ ಶಿಲುಬೆಗಿಂತಲೂ ಹೆಚ್ಚು ಜನಪ್ರಿಯವಾಗಿದೆ. 1955ರಲ್ಲಿ, ಉದ್ಯಮಿ ರೇ ಕ್ರೊಕ್ ಫ್ರಾಂಚೈಸ್ ಏಜೆಂಟ್ ಆಗಿ ಸಂಸ್ಥೆಯನ್ನು ಸೇರಿಕೊಂಡು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದರು. ನಂತರದ ದಿನಗಳಲ್ಲಿ ಕೆಲವು ಶಾಖೆಗಳನ್ನೂ ಕೊಂಡರು. ಇಂದು ಸಂಸ್ಥೆ ಇಷ್ಟೊಂದು ಬಲವಾಗಿ ಬೆಳೆದು ನಿಂತಿದ್ದರೆ ಅದಕ್ಕೆ ಮೂಲ ಕಾರಣ ರೇ ಕ್ರೊಕ್.
ಮ್ಯಾಕ್‌ಡೊನಾಲ್ಡ್ಸ್ ಕುರಿತು ಒಂದಷ್ಟು ವಿಷಯ ತಿಳಿದು ಮುಂದುವರಿಯೋಣ. ಫೋರ್ಬ್ಸ್ ಸಂಸ್ಥೆ ನಡೆಸುವ ಸಮೀಕ್ಷೆಯ ಪ್ರಕಾರ, ಮ್ಯಾಕ್ ಡೊನಾಲ್ಡ್ಸ್ ಇಂದು ವಿಶ್ವದ ನಂಬರ್ 1 ರೆಸ್ಟೋರೆಂಟ್. ಕೆಎಫ್ಸಿ ಮತ್ತು ಸಬ್ ವೇ ಕ್ರಮವಾಗಿ ಎರಡು ಮತ್ತು ಮೂರನೆಯ ಸ್ಥಾನದಲ್ಲಿವೆ. ವಿಶ್ವದ ಸುಮಾರು ನೂರ ಇಪ್ಪತ್ತು ದೇಶಗಳಲ್ಲಿ ಒಟ್ಟು ಸುಮಾರು ಅರವತ್ತು ಸಾವಿರ ಮ್ಯಾಕ್ ಡೊನಾಲ್ಡ್ ಶಾಖೆಗಳಿವೆ. ಇನ್ನೂ ಕೆಲವು ದೇಶಗಳಲ್ಲಿ ಇದರ ಶಾಖೆ ಆರಂಭವಾಗುತ್ತಿದ್ದು, ವರ್ಷಾಂತ್ಯದ ವೇಳೆಗೆ ಭೂಪಟದಲ್ಲಿ ಮ್ಯಾಕ್ಡೊ ನಾಲ್ಡ್ಸ ಇಲ್ಲದ ದೇಶಗಳ ಸಂಖ್ಯೆ ಎಪ್ಪತ್ತ ಕ್ಕಿಂತಲೂ ಕಡಿಮೆಯಾಗಲಿದೆ.
ವಿಶ್ವಾದ್ಯಂತ ಮ್ಯಾಕ್‌ಡೊನಾಲ್ಡ್ ಸುಮಾರು ನಲವತ್ತು ಸಾವಿರ ಶಾಖೆಗಳಿವೆ. ಭಾರತದ ನೂರ ಎಂಬತ್ತು ಶಾಖೆಗಳಿವೆ. ನಂತರದ ಸ್ಥಾನದಲ್ಲಿ ಹದಿನೈದು ಸಾವಿರ ಶಾಖೆಗಳನ್ನು ಹೊಂದಿದ ಬರ್ಗರ್ ಕಿಂಗ್ ಇದೆ. ವಿಶೇಷ ಎಂದರೆ ಸಂಸ್ಥೆ ಮುಂದಿನ ಮೂರು ವರ್ಷ ಚೀನಾ ದೇಶದಲ್ಲಿ ಪ್ರತಿನಿತ್ಯವೂ ಒಂದೊಂದು ಶಾಖೆ ಆರಂಭಿಸುವ ತಯಾರಿ ನಡೆಸಿದೆ. ಇಂಗ್ಲೆಂಡಿನ ಮಹಾರಾಣಿ ಕೂಡ ಬಂಕಿಂಗ್ ಹ್ಯಾಮ್
ಅರಮನೆಯ ಬಳಿ ಮ್ಯಾಕ್‌ಡೊನಾಲ್ಡ್‌ನ ಒಂದು ಶಾಖೆ ಹೊಂದಿzಳೆ ಎಂದರೆ ಲೆಕ್ಕ ಹಾಕಿ!
ಸಂಸ್ಥೆ ಮೂವತ್ತೆರಡು ಬಿಲಿಯನ್ ಡಾಲರ್ ಆದಾಯ ಹೊಂದಿದ್ದು, ವಿಶ್ವದ ಆರ್ಥಿಕತೆಯ ತೊಂಬತ್ತನೆಯ ಸ್ಥಾನದಲ್ಲಿದೆ. ಇದು ಇಕಾ ಡೋರ್ ದೇಶದ ಆರ್ಥಿಕತೆಗಿಂತ ಹೆಚ್ಚಾಗಿದೆ. ಅಮೆರಿಕ ಒಂದರಲ್ಲಿಯೇ ಸಂಸ್ಥೆ ಪ್ರತಿ ವರ್ಷ ಹತ್ತು ಲಕ್ಷ ಜನರಿಗೆ ಉದ್ಯೋಗ ಒದಗಿಸಿ ಕೊಡುತ್ತಿದೆ. ಅಮೆರಿಕದಲ್ಲಿ ಪ್ರತಿ ಹತ್ತು ಜನರಲ್ಲಿ ಒಬ್ಬರು ಮ್ಯಾಕ್‌ಡೊನಾಲ್ಡ್‌ನಲ್ಲಿ ಕೆಲಸ ಮಾಡುತ್ತಾರಂತೆ. ಖ್ಯಾತ ಕಲಾ ವಿದರುಗಳಾದ ಶೆರೋನ್ ಸ್ಟೋನ್, ಶಾನಿಯಾ ಟ್ವೆ ನ್, ಪಿಂಕ್, ಜಯ್ ಲೆನೊ, ರಶೆಲ್ ಮ್ಯಾಕ್‌ಆಡಮ್ಸ ಮೊದಲಾದವರು ಮ್ಯಾಕ್‌ಡೊನಾಲ್ಡ್‌ನಲ್ಲಿ ಬರ್ಗರ್ ಹೊತ್ತಿzರೆ.
ರಿಸರ್ಚ್ ಇಂಟರ್‌ನ್ಯಾಷನಲ್ ಸಂಸ್ಥೆ ನಡೆಸಿದ ಒಂದು ಸಂಶೋಧನೆಯ ಪ್ರಕಾರ ವಿಶ್ವದಾದ್ಯಂತ 54 ಪ್ರತಿಶತ ಜನ ಏಸು ಕ್ರಿಸ್ತನ ಶಿಲುಬೆಯನ್ನು ಗುರುತಿಸಿದರೆ, 88 ಪ್ರತಿಶತ ಮ್ಯಾಕ್‌ಡೊನಾಲ್ಡ್ಸ್‌ನ ಎರಡು ಕಮಾನಿನ ಲಾಂಛನವನ್ನು ಗುರುತಿಸುತ್ತಾರಂತೆ. ಅಷ್ಟೇ ಅಲ್ಲ, ರಾಜ್ ಕಪೂರ್ ನಿರ್ಮಿಸಿ ಅಭಿನಯಿಸಿದ ‘ಮೇರಾ ನಾಮ್ ಜೋಕರ್’ ಚಿತ್ರದಲ್ಲಿ ಬರುವ ಜೋಕರ್‌ನಂತೆ ಕಾಣುವ, ಹಳದಿ ಬಣ್ಣದ ಅಂಗಿ, ಹಳದಿ ಬಣ್ಣದ ಪ್ಯಾಂಟ್ ತೊಟ್ಟ, ಕೆಂಪು ಕೂದಲಿನ ರೋನಾಲ್ಡ ಮ್ಯಾಕ್‌ಡೊನಾಲ್ಡ, ಕ್ರಿಸ್ಮಸ್ ಹಬ್ಬಕ್ಕೆ ಬರುವ ಸಾಂತಾಕ್ಲಾಸ್ ಗಿಂತಲೂ ಹೆಚ್ಚು ಜನಪ್ರಿಯ!
ಇಂದಿನ ಮಕ್ಕಳಂತೂ ಸಾಂತಾಕ್ಲಾಸ್ ಅನ್ನು ಗುರುತಿಸದೇ ಇರಬಹುದು, ಆದರೆ ರೋನಾಲ್ಡ ಮ್ಯಾಕ್‌ಡೊನಾಲ್ಡ್ ಗುರುತಿಸುವಲ್ಲಿ
ಯಾವ ತಪ್ಪನ್ನೂ ಮಾಡುವುದಿಲ್ಲ! ಮ್ಯಾಕ್‌ಡೊನಾಲ್ಡ್ಸ್‌ಗೆ ಪ್ರತಿನಿತ್ಯ ಸುಮಾರು ಆರೂವರೆ ಕೋಟಿಗಿಂತಲೂ ಹೆಚ್ಚು ಜನ ಭೇಟಿ ನೀಡು ತ್ತಾರೆ. ಈ ಸಂಖ್ಯೆ ಇಂಗ್ಲೆಂಡಿನ ಜನಸಂಖ್ಯೆಗಿಂತಲೂ ಹೆಚ್ಚು! ಸುಮಾರು ಮೂರು ಲಕ್ಷ ಜನರಿಗೆ ಉದ್ಯೋಗ ಒದಗಿಸಿಕೊಟ್ಟಿರುವ ಮ್ಯಾಕ್ ಡೊನಾಲ್ಡ್ ನಲ್ಲಿ ಪ್ರತಿ ಸೆಕೆಂಡಿಗೆ 85 ಹ್ಯಾಂಬರ್ಗರ್ ಮಾರಾಟವಾಗುತ್ತದೆ.
ಸಂಸ್ಥೆ ಇದುವರೆಗೆ ನೂರು ಬಿಲಿಯನ್ ಗಿಂತಲೂ ಹೆಚ್ಚು ಬರ್ಗರ್ ವ್ಯಾಪಾರ ಮಾಡಿದೆ. ಹಾಗಾದರೆ ಮ್ಯಾಕ್‌ಡೊನಾಲ್ಡ್ ಬರ್ಗರ್ ಅಷ್ಟೊಂದು ರುಚಿಯೇ? ಭಾರತದಲ್ಲಿ ಹೊಟೇಲಿನಿಂದ ಹಿಡಿದು ದಾರಿಬದಿಯಲ್ಲಿ ಸಿಗುವ, ದೇಶೀ ಬರ್ಗರ್, ‘ವಡಾ ಪಾವ್’ ಅದಕ್ಕಿಂತಲೂ ಹೆಚ್ಚು ರುಚಿಯಾಗಿರುತ್ತದೆ. ಅದಕ್ಕಿಂತ ಮೂರು ನಾಲ್ಕು ಪಟ್ಟು ಕಮ್ಮಿ ಬೆಲೆಗೆ ಸಿಗುತ್ತದೆ. ಆದರೂ ಜನ ಮ್ಯಾಕ್‌ಡೊನಾಲ್ಡ್‌ಗೆ ಮುಗಿ
ಬೀಳುವುದೇಕೆ? ‘ಗೋಲಿ’ಯಂತಹ ತ್ವರಿತ ಉಪಹಾರ ಗೃಹ ಯಶಸ್ವಿಯಾಗಲಿಲ್ಲ ಏಕೆ? ಮೊದಲನೆಯದಾಗಿ ಶುಚಿತ್ವ.
ಮ್ಯಾಕ್ ಡೊನಾಲ್ಡ್ಸ್ ಸ್ವಚ್ಛತೆಯ ಕುರಿತು ಬೇರೆ ಹೇಳಬೇಕಾಗಿಲ್ಲ. ಒಳಗೆ ಹೋದ ಪ್ರತಿಯೊಬ್ಬರಿಗೂ ಅದು ಅನುಭವಕ್ಕೆ ಬರುತ್ತದೆ. ಆ ಸ್ವಚ್ಛತೆಯನ್ನು ಬೀದಿಬದಿಯಲ್ಲಿ ಕಾಣಲು ಸಾಧ್ಯವಿಲ್ಲ. ಇನ್ನು, ಬೀದಿ ಬದಿಯ ವ್ಯಾಪಾರಿಗಳು ತಮ್ಮ ಬೀದಿ ಬಿಟ್ಟು ಹೊರಗೆ ಬರಲಿಲ್ಲ. ಬೀದಿ ಬದಿಯವರು ಬಿಡಿ, ವ್ಯವಸ್ಥಿತವಾಗಿ ಫಾಸ್ಟ್ ಫುಡ್ ರೆಸ್ಟೋರೆಂಟ್ ನಡೆಸುವವರೂ ಈ ಧೈರ್ಯ ಮಾಡಿದ್ದು ಕಡಿಮೆಯೇ.
ಉದಾಹರಣೆಗೆ ವಡಾ ಪಾವನ್ನೇ ತೆಗೆದುಕೊಂಡರೆ, ಒಂದೊಂದು ಕಡೆ ಒಂದೊಂದು ರುಚಿ. ಒಂದು ಕಡೆ ಕೆಂಪು ಚಟ್ನಿ ಬಳಸಿದರೆ ಇನ್ನೊಂದು ಕಡೆ ಹಸಿರು ಚಟ್ನಿ. ಆ ಚಟ್ನಿಯ ರುಚಿಯೂ ಬೇರೆ ಬೇರೆ. ಆಲೂಗಡ್ಡೆ ಬೋಂಡಾದ ರುಚಿಯೂ ಬೇರೆ ಬೇರೆ, ಬನ್ ಅಥವಾ ಪಾವ್ ರುಚಿಯೂ ಬೇರೆ. ಹೋಗಲಿ ಒಂದು ಅಂಗಡಿ ಯಲ್ಲಿ ಪ್ರತಿನಿತ್ಯ ಒಂದೇ ರುಚಿ ಇರುತ್ತದೆಯೇ ಎಂದರೆ ಅದರ ಭರವಸೆಯೂ ಇಲ್ಲ! ಒಬ್ಬೊಬ್ಬರದ್ದು ಒಂದೊಂದು ಹದ. ಇಲ್ಲಿ ವಡಾ ಪಾವ್ ಒಂದು ಉದಾಹರಣೆ ಅಷ್ಟೇ.
ಪಾನಿ ಪುರಿ, ಮಸಾಲೆ ಮಂಡಕ್ಕಿ, ಪಕೋಡ, ಪಾವ್ ಭಾಜಿ ಏನನ್ನೇ ತೆಗೆದುಕೊಂದರೂ ಇದೇ ಹಣೆಬರಹ. ಆದರೆ, ವಿಶ್ವದ ಯಾವುದೇ
ಮೂಲೆಯಲ್ಲಿರುವ ಮ್ಯಾಕ್‌ಡೊನಾಲ್ಡ್ಸ್‌ಗೆ ಹೋಗಿ ನೋಡಿ, ಒಂದೇ ಹದ. ಅದರ ಅರ್ಥ, ಮ್ಯಾಕ್ ಡೊನಾಲ್ಡ್ಸ್‌ಗೆ ಹೋಗುವವರೆಲ್ಲ ರುಚಿಗಾಗಿ ಹೋಗುವುದಿಲ್ಲ. ಅದರ ವ್ಯಾಪಾರದ ಸ್ವರೂಪಕ್ಕೆ ಮರುಳಾಗಿ ಹೋಗುತ್ತಾರೆ ಎಂದಂತಾಯಿತು. ರುಚಿಯಲ್ಲಿ ಅತಿ ಉತ್ಕೃಷ್ಟ ಅಲ್ಲವಾದರೂ, ಒಂದೇ ಹದದಲ್ಲಿರಬೇಕು ಎನ್ನುವುದು ಮ್ಯಾಕ್‌ಡೊನಾಲ್ಡ್ಸ್‌ಗೆ ರೇ ಕ್ರೊಕ್ ಹಾಕಿಕೊಟ್ಟ ವ್ಯಾಪಾರದ ಮಾದರಿ.
ರೇ ಕ್ರೊಕ್ ಪ್ರಕಾರ, ಫ್ರಾಂಚೈಸ್ ಮಾಲಿಕನೇ ಮೊದಲ ಗ್ರಾಹಕನೂ ಹೌದು, ಕೊನೆಯ ಗ್ರಾಹಕನೂ ಹೌದು, ಮಹತ್ವದ ಗ್ರಾಹಕನೂ ಹೌದು.
ಆತನ ಪ್ರಕಾರ ಬರ್ಗರ್ ಎಲ್ಲರೂ ತಯಾರಿಸುತ್ತಾರೆ. ಆದ್ದರಿಂದ ನಾವು ಬರ್ಗರ್ ಮಾಡುವುದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ, ಅದನ್ನು ಮಾರುವುದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು. ಹೆಚ್ಚು ಬರ್ಗರ್ ವ್ಯಾಪಾರವಾಗ ಬೇಕು ಎಂದರೆ ಒಮ್ಮೆ ಬಂದ ಗ್ರಾಹಕ ಪುನಃ ಬರ
ಬೇಕು. ವ್ಯಾಪಾರದ ಭಾಷೆಯಲ್ಲಿ ಇದನ್ನು Trusting on Repeatability ಎನ್ನುತ್ತಾರೆ. ಆ ತತ್ವದ ಹಿಂದೆ ಹೋಗುವುದಕ್ಕೆ ನಿರ್ಧರಿಸಿದ್ದ ಕ್ರೊಕ್. ಆತ ಫ್ರಾಂಚೈಸ್ ಮಾಲೀಕರಿಗೆ ಕಮ್ಮಿ ಖರ್ಚಿನಲ್ಲಿ, ಹೆಚ್ಚು ಶ್ರಮವಹಿಸದೆ ಬರ್ಗರ್ ತಯಾರಿಸಿ ಹೆಚ್ಚು ಹಣ ಗಳಿಸುವುದು ಹೇಗೆ ಎಂದು ತಿಳಿಸಿದ. ಇದರಿಂದ ರೆಸ್ಟೋರೆಂಟ್ ಸಂಖ್ಯೆ ಹೆಚ್ಚಿತು. ಉತ್ಪನ್ನಗಳು ಪ್ರಮಾಣೀಕರಿಸಲ್ಪಟ್ಟವು, ಇದರಿಂದಾಗಿ ಕಾರ್ಯಕ್ಷಮತೆ ವೃದ್ಧಿಸಿತು, ಹೆಚ್ಚು ಲಾಭ ಬರಲಾರಂಭಿಸಿತು.
ಇಂದು ಸಂಸ್ಥೆ ತನ್ನ ಯಾವುದೇ ಹೊಸ ಪ್ರಯೋಗವಿದ್ದರೂ ಮೊದಲು ಅದನ್ನು ತನ್ನ ನೌಕರರಿಗೆ ಉಣ ಬಡಿಸುತ್ತದೆ. ಅವರ ಪ್ರತಿಕ್ರಿಯೆ ಮೊದಲು ಪಡೆದು, ನಂತರ ಗ್ರಾಹಕರ ಪ್ರತಿಕ್ರಿಯೆ. ತನ್ನ ನೌಕರರೇ ಇಷ್ಟಪಡದಿದ್ದಲ್ಲಿ ಮುಂದುವರಿಯುವುದು ಹೇಗೆ? ಜತೆಗೆ ಕೆಲಸ ಮಾಡುವವರಿಗೆ ಅಲ್ಲಿಯ ಉತ್ಪನ್ನಗಳನ್ನು ಉಚಿತವಾಗಿ ನೀಡುತ್ತದೆ. ಆದ್ದರಿಂದಲೇ ಮ್ಯಾಕ್ ಡೊನಾಲ್ಡ್ಸ್‌ನಲ್ಲಿ ಇಪ್ಪತ್ತು ಸಾವಿರ ಸಂಬಳ
ಪದೆಯುವವನೂ ಖುಷಿಯಲ್ಲಿರುತ್ತಾನೆ. ನೌಕರ ಖುಷಿಯಾಗಿದ್ದರೆ ಅರ್ಧ ಯುದ್ಧ ಗೆದ್ದಂತೆ ಅಲ್ಲವೇ? ಅದೆಲ್ಲ ಸರಿ, ರೆಸ್ಟೋರೆಂಟ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬರಬೇಕು.
ಅದಕ್ಕೆ ಸಂಸ್ಥೆ ಗುಣಮಟ್ಟದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳದೆ, ಗ್ರಾಹಕನ ಬೇಡಿಕೆಯನ್ನು ತ್ವರಿತವಾಗಿ ಪೂರೈಸುವುದಕ್ಕೆ ನಕ್ಷೆ ಸಿದ್ಧ ಪಡಿಸಿತು. ಅದರ ಫಲವಾಗಿಯೇ ಇಂದು ಮ್ಯಾಕ್ ಡೊನಾಲ್ಡ್ಸ್‌ನಲ್ಲಿ ಇಂದು ಮೂರು ನಿಮಿಷದ ಒಳಗೆ ಬರ್ಗರ್ ತಯಾರಾಗುತ್ತದೆ. ಡ್ರೈವ್ ಥ್ರೂನಲ್ಲಂತೂ ಒಂದು ಕಿಟಕಿಯಲ್ಲಿ ಗ್ರಾಹಕ ತನ್ನ ಆರ್ಡರ್ ಮಾಡಿ ಹಣ ಕೊಟ್ಟು ಮುಂದಿನ ಕಿಟಕಿಗೆ ಹೋಗುವಷ್ಟರಲ್ಲಿ ಆತನ ಉಪಹಾರ ಸಿದ್ಧವಾಗಿರುತ್ತದೆ. ನಿಮಗೆ ತಿಳಿದಿರಲಿ, ವಿಶ್ವಾದ್ಯಂತ ಇರುವ ಡ್ರೈವ್ ಥ್ರೂಗಳ ವ್ಯಾಪಾರದ ಪೈಕಿ ಅರ್ಧದಷ್ಟು ಮ್ಯಾಕ್ ಡೊನಾಲ್ಡ್ಸ್‌ಪಾಲು.
ಇನ್ನೊಂದು, ಇದರ ಬೆಲೆ. ಭಾರತದ ಬೀದಿ ಬದಿಯ ತಳ್ಳು ಗಾಡಿ, ದರ್ಶಿನಿ, ಅಥವಾ ಇನ್ಯಾವುದೇ ಫಾಸ್ಟ್ ಫುಡ್ ರೆಸ್ಟೋರೆಂಟ್‌ಗೆ ಹೋಲಿಸಿದರೆ ಇದರ ಬೆಲೆ ಸ್ವಲ್ಪ ಹೆಚ್ಚು ಅನಿಸಬಹುದು. ಆದರೆ ವಿದೇಶದಲ್ಲಿ ಇದು ದುಬಾರಿ ಅನಿಸುವುದಿಲ್ಲ. ಆದರೆ ಒಮ್ಮೆ ಯೋಚಿಸಿ, ನೂರು ರೂಪಾಯಿ ಇದ್ದರೆ ಒಬ್ಬ ಗ್ರಾಹಕ ಬರ್ಗರ್, ಫ್ರೆಂಚ್ ಫ್ರಾಯ್ಸ್ (ಆಲೂಗಡ್ಡೆ ಚಿಪ್ಸ್) ಮತ್ತು ಒಂದು ಪಾನೀಯ ಮಧ್ಯಮವರ್ಗ ದವರಿಗೆ ಅಷ್ಟೊಂದು ತುಟ್ಟಿಯಲ್ಲ. ವಿಶ್ವಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇರುವವರು ಅವರೇ ತಾನೆ? ಅಲ್ಲದೆ, ಬೇಕಾದರೆ ಕುಳಿತು ತಿನ್ನುವ ಸೌಲಭ್ಯವೂ ಇರುವುದರಿಂದ ಬಹುತೇಕ ಮೀಟಿಂಗ್, ಡೇಟಿಂಗ್‌ಗಳೆಲ್ಲ ಅ ಮುಗಿದು ಹೋಗುತ್ತವೆ!
ಇದರ ಇನ್ನೊಂದು ವಿಶೇಷತೆಯೆಂದರೆ, ಗುಣಮಟ್ಟ ಜಾಗತಿಕ, ಉತ್ಪನ್ನ ಪ್ರಾದೇಶಿಕ. ಉದಾಹರಣೆಗೆ, ಚೀನಾ, ಜಪಾನ್, ಕೊರಿಯಾ ದೇಶಗಳಲ್ಲಿ ಕಡಲ ತಿನಿಸುಗಳು ಹೆಚ್ಚು ಜನಪ್ರಿಯ. ಭಾರತವನ್ನೇ ತೆಗೆದುಕೊಳ್ಳಿ, ಸಸ್ಯಾಹಾರ ಜನಪ್ರಿಯ. ಅದಕ್ಕೆ ಸಂಸ್ಥೆ ಹೊಂದಿ ಕೊಂಡಿದೆ. ಆದ್ದರಿಂದಲೇ ಮ್ಯಾಕ್‌ಡೊನಾಲ್ಡ್ ನಲ್ಲಿ ಆಲೂ ಟಿಕ್ಕಿಯಿಂದ ಹಿಡಿದು, ಜೈನ್ ಬರ್ಗರ್ ಕೂಡ ದೊರಕುತ್ತದೆ. ತಕ್ಕಂತೆ ಹೆಸರೂ ಕೂಡ, ಮಹಾರಾಜ ಬರ್ಗರ್ ಇತ್ಯಾದಿ. ಅರಬ್ ರಾಷ್ಟ್ರಗಳಲ್ಲಿ ಅವರ ಆಹಾರ ಹೊಂದಿದ ಮ್ಯಾಕ್ ಅರೇಬಿಯಾ ಕೂಡ ಜನಪ್ರಿಯ. ಒಟ್ಟಾರೆ ಸ್ಥಳೀಯ ಆಹಾರ, ಅದನ್ನು ವಿವರಿಸಲು ಸ್ಥಳೀಯರಿಗೆ ಉದ್ಯೋಗ.
ಸಂಸ್ಥೆಯ ಇನ್ನೊಂದು ವ್ಯಾಪಾರ ತಂತ್ರ ಎಂದರೆ ಮಕ್ಕಳನ್ನು ಆಕರ್ಷಿಸುವುದು. ಸಾಮಾನ್ಯವಾಗಿ ಮಕ್ಕಳ ಬೇಡಿಕೆಯನ್ನು ಪಾಲಕರು ತಿರಸ್ಕರಿಸುವುದಿಲ್ಲ. ಅದಕ್ಕಾಗಿ ಹ್ಯಾಪಿ ಮೀಲ್ ಹೆಸರಿನಲ್ಲಿ ಮಕ್ಕಳಿಗೆ ತಿನಿಸಿನ ಜತೆ ಆಟಿಗೆಯ ವಸ್ತುಗಳನ್ನೂ ನೀಡಲಾಗುತ್ತದೆ. ಬರ್ಗರ್‌ಗೆ ಅಲ್ಲದಿದ್ದರೂ, ಆಟಿಕೆಗಾದರೂ ಮಕ್ಕಳು ತಿರುಗಿ ಬರಬೇಕು!
ಈ ಎಲ್ಲಾ ವ್ಯಾಪಾರ ತಂತ್ರಗಳಿಂದ ಇಂದು ಮ್ಯಾಕ್‌ಡೊನಾಲ್ಡ್ಸ್ ವಿಶ್ವದ ಅಗ್ರ ಶ್ರೇಯಾಂಕಿತ ರೆಸ್ಟೋರೆಂಟ್ ಆಗಿದೆ, ಮಾದರಿಯಾಗಿದೆ ನಿಜ. ಆದರೆ ಎರಿಕ್ ಶ್ಲೊಸೆರ್ ಬರೆದ ‘ಫಾಸ್ಟ್ ಫುಡ್ ನೇಷನ್’ ಪುಸ್ತಕ ಓದಿದರೆ ಫಾಸ್ಟ್ ಫುಡ್‌ನ ಕರಾಳ ಮುಖ ಏನೆಂಬುದು ತಿಳಿಯುತ್ತದೆ.