Wednesday, 9th October 2024

ಪತ್ರಿಕೋದ್ಯಮರೆದುರು ಬಹು ಮಾಧ್ಯಮಗಳ ಸ್ಪರ್ಧೆ

ತನ್ನಿಮಿತ್ತ

ಡಾ.ಎ.ಎಸ್.ಬಾಲಸುಬ್ರಹ್ಮಣ್ಯ

ಗೂಗಲ್ ಮತ್ತು ಫೇಸ್ ಬುಕ್ ಜಾಲತಾಣಗಳ ಜಾಹೀರಾತು ಆದಾಯ ದೇಶದ ಪತ್ರಿಕೆಗಳನ್ನು ಬೆಚ್ಚಿಬೀಳಿಸಿದೆ. 20-21ರ ಅವಧಿಯಲ್ಲಿ ಈ ಎರಡೂ ಸಂಸ್ಥೆಗಳ ಆದಾಯ 29 ಸಾವಿರ ಕೋಟಿ ರು. ಮೀರಿದೆ. ದೇಶದ ಒಂಬತ್ತು ಪ್ರಮುಖ ಮಾಧ್ಯಮ ಕಂಪನಿಗಳ ಒಟ್ಟು ಜಾಹೀರಾತು ಆದಾಯ ಗಳಿಕೆ ಕೇವಲ 21 ಸಾವಿರ ಕೋಟಿ ರು.!

ಕನ್ನಡ ಪತ್ರಿಕೋದ್ಯಮಕ್ಕೆ ನಾಳೆಗೆ 179 ವರ್ಷಗಳು. 1843 ಜುಲೈ1 ರಂದು ಜರ್ಮನಿಯ ಫೆಡರಿಕ್ ಮೊಗ್ಲಿಂಗ್ ಕಲ್ಲಚ್ಚಿನ ಒಂದು ದುಡ್ಡಿನ ನಾಲ್ಕು ಪುಟದ ಪಾಕ್ಷಿಕ ಪತ್ರಿಕೆ ಯೊಂದನ್ನು ಮಂಗಳೂರಿನಿಂದ ಹೊರ ತಂದರು. ಮನೆಯ ಕಿಟಕಿ ಮೂಲಕ ಬೆಳಕು
ಬರುವಂತೆ, ಪತ್ರಿಕೆಯೊಂದರ ಮೂಲಕ ಹೊರಜಗತ್ತಿನ ವಿದ್ಯಾಮಾನಗಳನ್ನು ಜನತೆಗೆ ಪರಿಚಯಿಸುವುದು ಈ ಪತ್ರಿಕೆಯ ಮುಖ್ಯ ಉದ್ದೇಶವಾಗಿತ್ತು. ಈ ಆದ್ಯ ಪ್ರಕಟಣೆ ‘ಮಂಗಳೂರ ಸಮಾಚಾರ’ ಗಾಳಿಸುದ್ದಿಯ ಗುಂಗಿನಿಂದ ಜನರನ್ನು ಮುಕ್ತಗೊಳಿಸುವ ಪ್ರಯತ್ನ ಎಂದು ಸಂಪಾದಕರು ಉದ್ಧರಿಸಿದರು.

ಕನ್ನಡಿಗರಿಗೆ ಇದು ಹೊರಗಿನ ಪ್ರಪಂಚ ತೋರಿಸುವ ಕಿಟಕಿ ಎಂಬುದು ಅವನ ಅಭಿಲಾಷೆ ಯಾಗಿತ್ತು. ಇಂದು ಆ ಕಿಟಕಿ ಎಷ್ಟು ವಿಶಾಲವಾಗಿದೆ ಎಂದರೆ ಜಗತ್ತೇ ನಮ್ಮ ಕೈನಲ್ಲಿ ಪ್ರತಿಬಿಂಬಿಸುತ್ತಿದೆ. ಅಂತರ್ಜಾಲ ಮಾಧ್ಯಮ ಎಷ್ಟು ವೇಗವಾಗಿ ನಮ್ಮನ್ನು ಆವರಿಸಿದೆ ಎಂದರೆ, ಮೊಬೈಲು ಇಲ್ಲದ ಜೀವನವನ್ನು ತರ್ಕಿಸಲೂ ಸಾಧ್ಯವಿಲ್ಲ. ಸಮೂಹ ಮಾಧ್ಯಮಗಳ ಹರವಿಗೆ ಇತ್ತೀಚಿನ ದಿನಗಳಲ್ಲಿ ಬಹು ದೊಡ್ಡ ಕಾರಣೀಭೂತ ಅಂಶ ಅಂತ ರ್ಜಾಲ. ಇದರ ಬಳಕೆ ಹೇಗೆ ವ್ಯಾಪಕವಾಗಿ ಆವರಿಸಿದೆಯೆಂದರೆ ಜಗತ್ತಿನ ೭೫೦ ಕೋಟಿ ಜನಸಂಖ್ಯೆಯ ಪೈಕಿ ೫೦೦ ಕೋಟಿ ಜನ ಅಂತರ್ಜಾಲ ಸಂಪರ್ಕ ಹೊಂದಿರುವರು.

ನಮ್ಮ ದೇಶದ ೧೩೦ ಕೋಟಿಯಲ್ಲಿ ೬೪ ಕೋಟಿ ಮಂದಿ ಇಂದು ಜಾಲತಾಣಗಳನ್ನು ಸಂಪರ್ಕಿಸುತ್ತಿದ್ದಾರೆ. ಕೆರೋನಾ ಅವಧಿ ಯಲ್ಲಂತೂ ಅತಿ ಹೆಚ್ಚು ಜನ ಆನ್‌ಲೈನ್ ತರಗತಿ ಸಂಪರ್ಕ ಪಡೆಯಲು ಅಂತರ್ಜಾಲದ ಮೊರೆ ಹೋಗಲೇಬೇಕಾಯ್ತು. ಇನ್ನೊಂದು ವಿಶೇಷವೆಂದರೆ ನಗರ ಪ್ರದೇಶಗಳಲ್ಲಿ ೨೯.೪ ಕೋಟಿ ಅಂತರ್ಜಾಲ ಬಳಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಇವರ ಸಂಖ್ಯೆ ೩೬.೨ ಕೋಟಿ ಮೀರಿದೆ.

೨೦೧೯ರಿಂದ ಈಚೆಗೆ ಸಕ್ರಿಯ ಅಂತರ್ಜಾಲ ಮಹಿಳಾ ಬಳಕೆದಾರರ ಸಂಖ್ಯೆ ಶೇ.೬೧ರಷ್ಟು ಏರಿಕೆಯಾಗಿರುವುದು ವಿಶೇಷ.
ಸಾಮಾಜಿಕ ಮಾಧ್ಯಮಗಳ ಸಕ್ರಿಯ ಬಳಕೆದಾರರ ಸಂಖ್ಯೆ ಜಗತ್ತಿನ ೪೬೦ ಕೋಟಿ ಜನರನ್ನು ತಲುಪಿರುವುದು ಇನ್ನೊಂದು ವಿಶೇಷ. ಈ ಅಂತರ್ಜಾಲದ ವಿಸ್ತಾರದಿಂದಾಗಿ ಕ್ಷಣ ಕ್ಷಣದ ಬದಲಾವಣೆಗಳು ಅಂತರ್ಜಾಲ ಬಳಕೆದಾರರನ್ನು ಮುಟ್ಟುತ್ತಿವೆ. ಟಿವಿ ಮಾಧ್ಯಮಕ್ಕಿಂತಲೂ ಮೊಬೈಲ್ ಬಳಕೆ ಬಲು ಸುಲಭ. ಆನ್‌ಲೈನ್ ಹಾಗೂ ಸುದ್ದಿ ಪತ್ರಿಕೆಗಳ ಜಾಲಗಳು ಶರವೇಗದಲ್ಲಿ ಸುದ್ದಿ ಮುಟ್ಟಿಸುತ್ತಿವೆ.

ಹಾಗಿದ್ದರೆ ೨೪ ಗಂಟೆಗೊಮ್ಮೆ ಬರುವ ಪತ್ರಿಕೆಗೆ ಏಕೆ ಕಾಯಬೇಕು ಎಂಬುದು ಮುಂದಿರುವ ಪ್ರಶ್ನೆ. ಸುದ್ದಿಗಳ ವಿವರಗಳು ಹಾಗೂ ವಿಶ್ಲೇಷಣೆಗಳಿಗೆ ಪತ್ರಿಕೆಗಳು ಅನಿವಾರ್ಯ ಹೌದು. ಆದರೆ ಇವೆಲ್ಲವನ್ನೂ ಆನ್‌ಲೈನ್ ಜಾಲತಾಣಗಳು ಸಹ ನೀಡುತ್ತವೆ. ಆದರೆ ಪರದೆಯ ಮೇಲೆ ಓದಲು ತುಸು ಪ್ರಯಾಸ. ಮಾಹಿತಿ ಸಂಗ್ರಹವೂ ಕಷ್ಟ. ಹೀಗಾಗಿ ಮುದ್ರಿತ ಪತ್ರಿಕೆಗೆ ಮಹತ್ವ ಇದ್ದೇ ಇದೆ.
ಹಲವು ಜಾಲತಾಣಗಳಲ್ಲಿ ಸುದ್ದಿಯ ಮೇಲೆ ಕ್ಲಿಕ್ಕಿಸಿದರೆ ಅದನ್ನು ಕೇಳುವ ನೂತನ ತಂತ್ರeನ ಸಹ ಲಭ್ಯವಿದೆ.

ಪಾಡ್ ಕಾಸ್ಟಿಂಗ್ ಮೂಲಕ ಎಲ್ಲ ಸುದ್ದಿಗಳು ಹಾಗೂ ವಿಶ್ಲೇಷಣೆಗಳನ್ನು ಬಹು ಸುಲಭವಾಗಿ ಆಲಿಸಬಹುದಾಗಿದೆ. ಆಂಗ್ಲ ಭಾಷೆಯಲ್ಲಂತೂ ಶ್ರವಣೇಂದ್ರಿಯ ಪತ್ರಿಕೋದ್ಯಮ (Audio Journalism) ಜನಪ್ರಿಯವಾಗುತ್ತಿದೆ. ಪತ್ರಿಕೆಯಲ್ಲಿ ಮುದ್ರಿತ ವಾಗುವ ಯಾವುದೇ ಸುದ್ದಿ- ಲೇಖನಗಳನ್ನು ಆಲಿಸುವ ಅನುಕೂಲ ಕಲ್ಪಿಸಲಾಗಿದೆ. ಗೂಗಲ್ ಭಾಷಾಂತರ ಮಾಡಿದ ಕನ್ನಡವನ್ನು ಸೊಗಸಾಗಿ ಆಲಿಸುವ ಸುಗಮತೆ ಈಗಾಗಲೇ ಕನ್ನಡಿಗರಿಗೆ ಪ್ರಾಪ್ತವಿದೆ. ಈ ತಂತ್ರಾಂಶ ದೇಶಿಯ ಭಾಷೆಗಳಲ್ಲಿ ವೇಗವಾಗಿ ಬೆಳೆದರೆ, ಪತ್ರಿಕೆಗಳಲ್ಲಿ ಪ್ರಕಟವಾಗುವ ಎಲ್ಲ ವಸ್ತು ವಿಷಯಗಳನ್ನು ಸರಾಗವಾಗಿ ಮೊಬೈಲ್ ಇಲ್ಲವೇ ಕಂಪ್ಯೂಟರ್‌ನಲ್ಲಿ ಆಲಿಸಬಹು ದಾಗಿದೆ.

ಕೃತಕ ಬುದ್ಧಿಮತ್ತೆಯ ಅಂಗವಾದ ಅಂತರ್ಗತ ಭಾಷಾ ಪ್ರಕ್ರಿಯೆ (Natural Language Processing) ಮುದ್ರಿತ ಪಠ್ಯವನ್ನು ಧ್ವನಿ ಯಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದು ವಿಶೇಷ. ಕನ್ನಡದಲ್ಲಿ ಕೂಡ ನಮ್ಮ ಮಾತುಗಳನ್ನು ಪಠ್ಯವಾಗಿ ಪರಿವರ್ತಿಸುವ ತಂತ್ರಾಂಶ ಪ್ರಾಥಮಿಕ ಹಂತದಲ್ಲಿ ಬಳಕೆಯಲ್ಲಿದೆ. ಅದು ಅಭಿವೃದ್ಧಿಗೊಳ್ಳ ಬೇಕಾಗಿದೆ. ಈ ಅಭೂತ ಪೂರ್ವ ತಂತ್ರಜ್ಞಾನಗಳ ಅಭಿವರ್ಧನೆಯ ಹಿನ್ನೆಲೆಯಲ್ಲಿ ಪರಂಪರಾಗತ ಮಾಧ್ಯಮಗಳು ಪಲ್ಲಟಗೊಳ್ಳುವುದು ಸ್ವಾಭಾವಿಕವೇ ಸರಿ.

ಡಿಜಿಟಲ್ ತಂತ್ರಜ್ಞಾನ ಎಲ್ಲ ಮಾಧ್ಯಮಗಳನ್ನು ಒಗ್ಗೂಡಿಸಿದೆ. ಎಲ್ಲ ಮಾಧ್ಯಮಗಳು ಇಂದು ಮೊಬೈಲ್ ಮೂಲಕ ಬಹು ಸರಾಗವಾಗಿ ಜನರನ್ನು ತಲಪುತ್ತಿವೆ. ಬೇಕಾಗಿರುವುದು ಅಂತರ್ಜಾಲ ಲಭ್ಯತೆ ಅಷ್ಟೇ. ೫-ಜಿ ತಂತ್ರಜ್ಞಾನ ಬಂದರಂತೂ ಡಿಜಿಟಲ್ ತಂತ್ರಜ್ಞಾನದ ಮಾಂತ್ರಿಕತೆ ಹಲವು ಪಟ್ಟು ವೃದ್ಧಿಸಲಿದೆ. ಇತ್ತೀಚೆಗೆ ಪ್ರಕಟವಾದ ರಾಯಿಟರ್ ಸಂಸ್ಥೆಯ 2021 ರ ಜಾಗತಿಕ ಸಮೀಕ್ಷೆಯಲ್ಲಿ ಸುದ್ದಿಗಾಗಿ ಯುವ ಜನತೆ ಹೇಗೆ ಡಿಜಿಟಲ್ ಮಾಧ್ಯಮದ ಮೇಲೆ ಅವಲಂಬಿತವಾಗುತ್ತಿದ್ದರೆ ಎಂಬುದನ್ನು ಸ್ಪಷ್ಟಪಡಿಸಿದೆ. ಸುದ್ದಿ ತಿಳಿಯಲು ಯುವ ಜನತೆ ಸಾಮಾಜಿಕ ಜಾಲತಾಣಗಳ ಮೊರೆ ಹೋಗುತ್ತಿದ್ದಾರೆ.

ವಾಟ್ಸಪ್ ಮತ್ತು ಟೆಲಿಗ್ರಾಂ ಆಪ್‌ಗಳನ್ನು ಸಂಪರ್ಕಿಸುವ ಹವ್ಯಾಸ ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಟಿಕ್ ಟಾಕ್ ಆಗಿದೆ. ಈಗಾಗಲೇ ೧೦೦ ಕೋಟಿ ಜನ ಈ ಆಪ್ ಅನ್ನುಡೌನ್ ಲೋಡ್ ಮಾಡಿದ್ದಾರೆ. ಪತ್ರಿಕೆಗಳ ಪ್ರಸಾರ ಬಹು ವೇಗವಾಗಿ ಬೆಳೆಯುತ್ತಿಲ್ಲ. ಕರೋನ ಸಂಕಷ್ಟದ ಅವಧಿಯಲ್ಲಿ ಬಿದ್ದ ಹೊಡೆತದಿಂದ ಪತ್ರಿಕೆಗಳು ಇನ್ನೂ ಚೇತರಿಸಿಕೊಳ್ಳಬೇಕಾಗಿದೆ. ಈ ಅವಧಿಯಲ್ಲಿ ಪತ್ರಿಕೆಗಳನ್ನು ಹಂಚುವುದೇ ಕಷ್ಟದಾಯಕವಾಗಿತ್ತು. ಅನೇಕರು ಪತ್ರಿಕೆಗಳನ್ನು ಕೊಳ್ಳಲು ನಿರಾಕರಿಸಿದರು. ಇವರೆಲ್ಲರೂ ಮತ್ತೆ ಪತ್ರಿಕೆಗಳನ್ನು ಕೊಂಡು ಓದುವಂತಾಗಬೇಕು. ಅಲ್ಲದೆ ಅಂತರ್ಜಾಲದ ಮೊರೆ ಹೋಗಿರುವವರನ್ನು ಪತ್ರಿಕೆ ಗಳತ್ತ ಆಕರ್ಷಿಸುವುದು ಬಹು ದೊಡ್ಡ ಸವಾಲಾಗಿದೆ. ವಿಶೇಷವಾಗಿ ಯುವಕರನ್ನು ಪತ್ರಿಕೆಗಳತ್ತ ಸೆಳೆಯುವುದು ಸಾಧ್ಯ ವಾಗಬೇಕು.

ಯುವ ಓದುಗರ ಬೇಕು ಬೇಡಗಳ ಬಗ್ಗೆ ಪತ್ರಿಕೆಗಳು ಗಂಭೀರ ಅಧ್ಯಯನ ನಡೆಸಿ ಪತ್ರಿಕೆಗಳನ್ನು ಮರುರೂಪಿಸಬೇಕಾಗಿದೆ.
ನಿರ್ದಿಷ್ಟ ದೃಷಿಕೋನಗಳು ಮತ್ತು ರೂಢಿಗಳು ಸತತ ಫಲ ನೀಡಲಾರವು. ಪತ್ರಿಕೆಗಳಿಗೆ ಶೇ.70 ರಷ್ಟು ಆದಾಯ ಜಾಹೀರಾತಿ
ನಿಂದಲೇ ಬರುತ್ತದೆ. ಆದರೆ ಅದು ಕರೋನಾ ಸಾಂಕ್ರಾಮಿಕ ಅವಧಿಯಲ್ಲಿ ತೀವ್ರವಾಗಿ ಕುಸಿಯಿತು. ಪತ್ರಿಕೆಗಳ ಪ್ರಸಾರ ಮತ್ತು ಜಾಹೀರಾತಿನ ಪ್ರಮಾಣ ನಿಧಾನವಾಗಿ ಕೋವಿಡ್ ಪೂರ್ವ ಅವಧಿಗೆ ಏರುತ್ತಿರುವುದು ಸಮಾಧಾನಕರ.

ಆದರೆ ವ್ಯಾಪಕ ಅಂತರ್ಜಾಲ ವಿಸ್ತರಣೆ ಮತ್ತು ಹೆಚ್ಚುತ್ತಿರುವ ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆಯ ಬಗ್ಗೆ ಪ್ರಕಾಶಕರು ಗಂಭೀರವಾಗಿ ಚಿಂತಿಸಬೇಕಾದ ಕಾಲವಿದು. ಸ್ಮಾರ್ಟ್ ಫೋನ್ ಮೂಲಕ ಅಧಿಕ ಜನತೆ ಪತ್ರಿಕೆಗಳನ್ನು ಓದಲು, ಟಿವಿ ವೀಕ್ಷಿಸಲು ಮತ್ತು ಬಾನುಲಿ ಆಲಿಸಲು ಈಗ ಶಕ್ಯವಾಗಿದ್ದರೆ, ಡಿಜಿಟಲ್ ಸುದ್ದಿ ಪೋರ್ಟಲ್‌ಗಳ ಸಂಖ್ಯೆ ಏರುತ್ತಿವೆ. ಕೆಲವೇ ನಿಮಿಷಗಳಲ್ಲಿ ಇವು ಸುದ್ದಿ, ಚಿತ್ರಗಳು, ವಿಡಿಯೋ ಅಲ್ಲದೆ ವಿಶ್ಲೇಷಣೆಗಳನ್ನು ಒದಗಿಸುತ್ತವೆ. ಇವುಗಳಿಗೆ ಸ್ಥಳದ ಇತಿಮಿತಿಗಳಿಲ್ಲ. ಎಷ್ಟು ಬೇಕಾದರೂ ಬರೆಯಬಹುದು. ಮುದ್ರಿಸಲು ಕಾಗದ ಬೇಕಿಲ್ಲ, ಅವುಗಳನ್ನು ವಿವಿಧ ಸ್ಥಳಗಳಿಗೆ ಸಾಗಿಸಿ ಹಂಚಬೇಕಿಲ್ಲ. ಇವು ಪತ್ರಿಕೆಗಳಿಗೆ
ಬಹು ದೊಡ್ಡ ಸವಾಲಾಗಿವೆ.

ಓದುಗರ ಚಂದಾ ಹಣಕ್ಕಿಂತ ಪತ್ರಿಕೆಗಳಲ್ಲಿ ಪ್ರಕಟವಾಗುವ ಜಾಹೀರಾತಿನಿಂದ ಬರುವ ಆದಾಯವೇ ಪತ್ರಿಕೆಗಳ ಉಳಿವಿಗೆ ಶ್ರೀರಕ್ಷೆ. ಪತ್ರಿಕೆ ಬೆಲೆ ಏರಿಸಿದರೆ ಓದುಗರನ್ನು ಕಳೆದುಕೊಳ್ಳುವ ಭೀತಿ. ಪ್ರಸಾರವಿಲ್ಲದೆ ಜಾಹೀರಾತು ಬರದು. ಇಂತಹ ಇಕ್ಕಟ್ಟಿನ ಉದ್ದಿಮೆ ಈ ಪತ್ರಿಕೋದ್ಯಮ. ಗೂಗಲ್ ಮತ್ತು ಫೇಸ್ ಬುಕ್ ಜಾಲತಾಣಗಳ ಜಾಹೀರಾತು ಆದಾಯ ದೇಶದ ಪತ್ರಿಕೆಗಳನ್ನು ಬೆಚ್ಚಿಬೀಳಿಸಿದೆ.

೨೦-೨೧ರ ಅವಧಿಯಲ್ಲಿ ಈ ಎರಡೂ ಸಂಸ್ಥೆಗಳ ಆದಾಯ ೨೯ ಸಾವಿರ ಕೋಟಿ ರು. ಮೀರಿದೆ. ದೇಶದ ಒಂಬತ್ತು ಪ್ರಮುಖ ಮಾಧ್ಯಮ ಕಂಪನಿಗಳ ಒಟ್ಟು ಜಾಹೀರಾತು ಆದಾಯ ಗಳಿಕೆ ಕೇವಲ ೨೧ ಸಾವಿರ ಕೋಟಿ ರು.! ಇಲ್ಲಿ ಎರಡು ಅಂಶಗಳನ್ನು ಗಮನಿಸಬೇಕಾಗಿದೆ. ಒಂದು, ಈ ಎರಡೂ ಬೃಹತ್ ಜಾಲತಾಣಗಳ ವಿಸ್ತಾರ ಮತ್ತು ದೃಶ್ಯ- ಶ್ರವ್ಯಅಂಶಗಳ ಸಮ್ಮಿಲನ ಹಾಗೂ ಅದರ ಆಕರ್ಷಣೆ. ದೇಶದ ಎಲ್ಲ ಬಗೆಯ ಮಾಧ್ಯಮಗಳನ್ನು ಈ ಎರಡೂ ಬೃಹತ್ ಜಾಲತಾಣಗಳು ಮೀರಿಸಿ ನಿಂತಿವೆ.

ಉಕ್ರೇನ್ ಬಿಕ್ಕಟ್ಟಿನಿಂದಾಗಿ ಮುದ್ರಣ ಮಾಧ್ಯಮ ಬಹು ದೊಡ್ಡ ಆಘಾತ ಎದುರಿಸುತ್ತಿದೆ. ಪತ್ರಿಕೆಗಳನ್ನು ಮುದ್ರಿಸಲು ಬಳಸುವ ಕಾಗದದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೀವ್ರವಾಗಿ ಏರಿಕೆ ಕಂಡು ಪ್ರಕಾಶಕರನ್ನು ಹತಾಶೆಗೊಳಿಸಿದೆ. ಪತ್ರಿಕೆಗಳಿಗೆ ಒಳ್ಳೆಯ ದಿನಗಳು ಇನ್ನೇನು ಬಂದೇಬಿಟ್ಟವು ಎನ್ನುವುದರಲ್ಲಿ ನ್ಯೂಸ್ ಪ್ರಿಂಟ್ ಬೆಲೆ ಏರಿಕೆ ಧೃತಿಗೆಡಿಸಿದೆ. ಈ ಎಲ್ಲ ಸಂಕಷ್ಟಗಳ ನಡುವೆ ಓದುಗರ ಸತತ ಪ್ರೋತ್ಸಾಹವೇ ಪತ್ರಿಕೆಗಳನ್ನು ರಕ್ಷಿಸಬೇಕಾಗಿದೆ!

ಕ್ರೈಸ್ತ ಧರ್ಮ ಪ್ರಸಾರಕ್ಕೆಂದು ಜರ್ಮನಿಯಿಂದ ಮಂಗಳೂರಿಗೆ ಬಂದ ಫೆಡರಿಕ್ ಮೊಗ್ಲಿಂಗ್ ಸಾಹಿತ್ಯ, ಶಿಕ್ಷಣ ಮತ್ತು ಪತ್ರಿಕಾ ಪ್ರಕಟಣೆಯಲ್ಲಿ ಅತೀವ ಆಸಕ್ತಿ ತೋರಿ, ಕನ್ನಡ ಪತ್ರಿಕೋದ್ಯಮಕ್ಕೆ ಬುನಾದಿ ಹಾಕಿದ. ಹೊರಜಗತ್ತಿಗೆ ಕಿಟಕಿಯನ್ನು ತೆರೆದ. ಕನ್ನಡಿಗರನ್ನು ಒಂದುಗೂಡಿಸಿದ. ಕನ್ನಡಿಗರಿಗೆ ವಿಶಾಲವಾದ ಪ್ರಪಂಚ ಪರಿಚಯಿಸಿದ ಆದ್ಯ ಪ್ರವರ್ತಕ.

(ಲೇಖಕರು ಪತ್ರಿಕೋದ್ಯಮ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಮಾಧ್ಯಮ ತಜ್ಞರು)