Saturday, 14th December 2024

ಸಾಂದರ್ಭಿಕ ಶಿಶುಗಳಾಗುತ್ತಿರುವ ಮಾಧ್ಯಮ ನವೋದ್ಯಮಗಳು

ಪ್ರತಿಸ್ಪಂದನೆ

ಕುದ್ಯಾಡಿ ಸಂದೇಶ ಸಾಲ್ಯಾನ್‌

ಇದು ಸ್ಟಾರ್ಟಪ್ ಗಳ ಕಾಲ. ನವೋದ್ಯಮಗಳಿಗೆ ಉತ್ತೇಜಕವಾಗಿ ಜಗತ್ತಿನಲ್ಲಿಯೇ ಭಾರತ ಮೂರನೇ ಸ್ಥಾನದಲ್ಲಿದೆ. ಸ್ಟಾರ್ಟಪ್‌ಗಳಿಗೆ ಅತ್ಯುತ್ತಮ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕ ಮತ್ತು ಗುಜರಾತ್‌ಗಳದ್ದು.

ಬೇರೆ ಬೇರೆ ಕ್ಷೇತ್ರಗಳಲ್ಲಿ ನವ್ರೋದ್ಯಮಗಳು ಆರಂಭಗೊಳ್ಳುತ್ತಿದ್ದು, ಬಯೋ ಟೆಕ್ ಸ್ಟಾರ್ಟಪ್‌ಗಳಲ್ಲಿ ಮಹಾರಾಷ್ಟ್ರ ಮುಂದಿದೆ, ತೆಲಂಗಾಣ ಎರಡನೇ ಸ್ಥಾನದಲ್ಲಿದೆ, ಕರ್ನಾಟಕ ಮೂರನೇ ಸ್ಥಾನದಲ್ಲಿದೆ ಎಂಬುದು ಇತ್ತೀಚಿನ ಸುದ್ದಿ. ಮಾಧ್ಯಮ ಕ್ಷೇತ್ರದಲ್ಲೂ ಅಗಾಧವಾಗಿ ನವೋದ್ಯಮಗಳು ತಲೆ ಎತ್ತುತ್ತಿವೆ. ಅವುಗಳಲ್ಲಿ ಡಿಜಿಟಲ್ ಮತ್ತು ಟಿವಿ ಮಾಧ್ಯಮಗಳು ಹೆಚ್ಚಿವೆ. ಶಾರ್ಟ್ ನ್ಯೂಸ್ ಅಪ್ಲಿಕೇಶನ್‌ಗಳು ಅಲ್ಲಲ್ಲಿ ಒಂದೊಂದಾಗಿ ಕಣ್ತೆರೆದುಕೊಳ್ಳುತ್ತಿವೆ.

ಬೆಂಗಳೂರು, ಹೈದರಾಬಾದ್, ಕಾನ್ಪುರ, ನೋಯ್ಡಾ, ಚೆನ್ನೈನಂಥ ನಗರಗಳು ಮಾಧ್ಯಮ ನವೋದ್ಯಮದ ತವರೂರು. ಭಾರತದಲ್ಲಿ ಪ್ರಸ್ತುತ ಸುಮಾರು 75000 ನೋಂದಾಯಿತ ನವೋದ್ಯಮಗಳಿದ್ದು, ಅವುಗಳಲ್ಲಿ ಶೇ.12ರಷ್ಟು ಮಾಹಿತಿ ತಂತ್ರeನ ಸೇವಾ ಕ್ಷೇತ್ರಕ್ಕೆ, ಶೇ.9ರಷ್ಟು ಆರೋಗ್ಯ ಮತ್ತು ಲೈಫ್ ಸೈನ್ಸಸ್‌ಗೆ, ಶೇ.7ರಷ್ಟು ಶಿಕ್ಷಣಕ್ಕೆ, ಶೇ.5ರಷ್ಟು ವೃತ್ತಿಪರ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ಹಾಗೂ ಶೇ.೫ರಷ್ಟು ಕೃಷಿಗೆ ಸಂಬಂಧಿಸಿದ್ದಾಗಿವೆ.

ನವೋದ್ಯಮಗಳಲ್ಲಿ ತೊಡಗಿಸಿಕೊಂಡವರು ಹೆಚ್ಚಾಗಿ ಯುವಕರೇ. ಒಂದಿಬ್ಬರು ಅನುಭವಿಗಳು ಹಾಗೂ ಹೂಡಿಕೆದಾರರನ್ನು ಹೊರತುಪಡಿಸಿದರೆ ಉಳಿದವರೆಲ್ಲ ಬಹುತೇಕ ಹೊಸ ತಲೆಗಳೇ. ವೃತ್ತಿ ಕ್ಷೇತ್ರದ ಪಟ್ಟುಗಳನ್ನು ಪ್ರಯೋಗಿಸುತ್ತ ಉನ್ನತ
ಹಂತಕ್ಕೆ ಬೆಳೆಯಲು ಇರುವ ಉತ್ತಮ ವೇದಿಕೆ ನವೋದ್ಯಮ. ಆದರೆ, ಅವುಗಳಲ್ಲಿ ಎಷ್ಟು ಹೊಸ ಉದ್ಯೋಗಿಗಳಿಗೆ ಕೆಲಸ
ಕಲಿಯುವ ಸ್ಥಳಗಳಾಗಿ, ‘ಗುಡ್ ಪ್ಲೇಸ್ ಟು ವರ್ಕ್’ ಭಾವನೆಯ ನ್ನುಂಟು ಮಾಡುತ್ತ(ತ್ತಿ)ವೆ ಎಂಬುದು ಯೋಚಿಸಬೇಕಾದ
ಸಂಗತಿ.

ಯಾಕೆಂದರೆ, ಎಲ್ಲ ಮಾಧ್ಯಮ ನವೋದ್ಯಮಗಳೂ ಹೊರಗೆ ಕಂಡಷ್ಟು (ಕಟ್ಟಡ, ಹೊರಾಂಗಣ, ಒಳಾಂಗಣ ವಿನ್ಯಾಸ,
ಪ್ರಚಾರ) ಸುಂದರವಾಗಿ ಇರುತ್ತವೆ ಎನ್ನಲಾಗದು. ಹೊಸ ಕಂಪನಿ- ದಿನಗಳು ಕಳೆದಂತೆ ಹೊಸ ನಿಯಮಗಳು, ಹೊಸ
ಕಾನೂನುಗಳು ಜಾರಿಗೆ ಬರುತ್ತವೆ. ಕೆಲವು ಕಡೆ ಕಂಪನಿಗೆ ಹಣ ಹೂಡುವ ವ್ಯಕ್ತಿಗಳು ಕಚೇರಿಯ ದೈನಂದಿನ ಕೆಲಸಗಳಲ್ಲಿ
ಅನಗತ್ಯವಾಗಿ ಮಧ್ಯಪ್ರವೇಶಿಸುವ ಸಾಧ್ಯತೆ ಇದೆ. ಅದರಿಂದಾಗಿ ನಿತ್ಯದ ಕೆಲಸಗಳು ಸರಿಯಾದ ದಾರಿಯಲ್ಲಿ ನಡೆಯದೇ
ಇರಬಹುದು.

ಇನ್ನು ಕೆಲವೆಡೆ ಕಂಪನಿ ನಡೆಸುವವರು ಒಳಗಡೆ ಏನೇ ಆದರೂ ತಮಗೆ ಸಂಬಂಧವಿಲ್ಲ ಎಂಬಂತೆ ಇದ್ದು ಬಿಡಬಹುದು. ಆಗ ಕೆಲಸ ನೋಡಿಕೊಳ್ಳಲು-ಕೆಲಸ ಮಾಡಿಸಲೆಂದು ಇರುವವರು ‘ಆನೆ ನಡೆದದ್ದೇ ದಾರಿ’ ಎಂಬಂತೆ ವರ್ತಿಸಲೂಬಹುದು.
ಇನ್ನು ಕೆಲವೆಡೆ ವೇತನ ಪಾವತಿ ಸರಿಯಾಗಿ ಆಗದೇ ಇರಬಹುದು, ಟಿಡಿಎಸ್/ ಪಿಎಫ್ ಇತ್ಯಾದಿ ಅಂಶಗಳ ಬಗ್ಗೆ ತಿಳಿಸದೆಯೇ ಇರಬಹುದು/ ಕೊಡದೇ ಇರಬಹುದು, ಕೆಲವು ಕಡೆ ಮಾನವ ಸಂಪನ್ಮೂಲ ನಿರ್ವಹಣೆ ವಿಭಾಗವೇ ಇಲ್ಲದೆ ಇರಬಹುದು!

ಅಷ್ಟೇ ಏಕೆ? ಕೆಲವು ಕಂಪನಿಗಳಿಗೆ ಸ್ವಂತ ಕಟ್ಟಡವೇ ಇಲ್ಲದಿರಬಹುದು/ ಬಾಡಿಗೆ ಬಾಕಿ ಉಳಿಸಿಕೊಳ್ಳುತ್ತಿರಬಹುದು,
ಓದುಗರು/ಬಳಕೆದಾರರಿಗೆ ಏನೇನೋ ಆಮಿಷ/ಆಸೆ ತೋರಿಸಿ ಮೋಸ ಮಾಡುತ್ತಿರಲೂ ಬಹುದು.. ಇನ್ನೊಂದು ಗಮನಿಸ ಬೇಕಾದ ವಿಚಾರವೆಂದರೆ- ಕೆಲವು ಸ್ಟಾರ್ಟಪ್‌ಗಳು ಆರಂಭಶೂರತ್ವದ ಕುರುಹುಗಳಾಗಿ, ಸಾಂದರ್ಭಿಕ ಶಿಶುಗಳಾಗಿ ಹುಟ್ಟಿರುತ್ತವೆ! ಯಾರೋ ಯಾವುದೋ ಮಾಧ್ಯಮ ಸಂಸ್ಥೆಯಿಂದ ಯಾವುದೋ ಕಾರಣ, ಪರಿಸ್ಥಿತಿಯಿಂದಾಗಿ ಹೊರಬಂದು ಹೊಸ ಸಂಸ್ಥೆ ಸ್ಥಾಪಿಸಿಬಿಡುತ್ತಾರೆ. ಒಂದು ವರ್ಷ ಕಷ್ಟಪಟ್ಟು ನಡೆಸುತ್ತಾರೆ.

ಉದ್ಯೋಗಿಗಳನ್ನು ಕತ್ತೆಗಳಂತೆ ದುಡಿಸಿಕೊಂಡು, ಹೇಗೋ ಹೊರಜಗತ್ತಿಗೆ ತಾನೂ ಏನೋ ಸಾಧಿಸಿದ್ದಾಗಿ ತೋರಿಸಿಕೊಳ್ಳು ತ್ತಾರೆ. ಆಮೇಲೆ ಒಡಲಿನ ಕಿಚ್ಚು ಆರಿದ ಬಳಿಕ ಅವರು ಮೆಲ್ಲನೆ ಜಾರಿಕೊಳ್ಳುತ್ತಾರೆ. ಆಮೇಲೆ ಸಂಸ್ಥೆ ಅನಾಥ. ಬೇರೆ ಯಾರೋ ಚುಕ್ಕಾಣಿ ಹಿಡಿಯುತ್ತಾರೆ. ಉದ್ಯೋಗಿಗಳಿಗೆ ಮತ್ತೆ ಅನ್ ಲರ್ನಿಂಗ್, ಹೊಸ ಕಲಿಕೆ. ಹೊಸ ನಿಯಮ, ಹೊಸದೇ ಎಲ್ಲ! ಸಂಸ್ಥೆ ಮುಚ್ಚಲೂಬಹುದು.

ಕೆಲವು ಸ್ಟಾರ್ಟಪ್‌ಗಳಲ್ಲಿ ಸರಿಯಾದ ವರ್ಕ್ ಕಲ್ಚರ್ ಇರುವುದಿಲ್ಲ. ಉದ್ಯೋಗಿಗಳನ್ನು ಕೇವಲ ‘ಹುಡುಗರು’ ಎಂದಷ್ಟೇ ನೋಡಲಾಗುತ್ತದೆ. ಹುಡುಗರೂ (ಹುಡುಗ/ ಹುಡುಗಿ) ಅಷ್ಟೆ- ಚಾಡಿ ಹೇಳುತ್ತ, ಚೀ-ಗಳಿಗೆ ಚಮಚಾಗಿರಿ ಮಾಡುತ್ತ ಜೀವನ ನಡೆಸುತ್ತಾರೆ. ಬಾಸ್‌ಗಳು ಮೀಟಿಂಗ್ ನಡೆಸುತ್ತ, ಮಜಾ ಮಾಡುತ್ತ, ಮಜಾ ನೋಡುತ್ತ ಇರುತ್ತಾರೆ. ಕೆಲಸ ಮಾಡುವ ಜಾಗದಲ್ಲಿ ಒಂದು ಹಂತದ ಶಿಸ್ತು, ಸ್ಟ್ಯಾಂಡರ್ಡ್ ಹಾಗೂ ಅಷ್ಟೇ ಮುಖ್ಯವಾಗಿ ಫ್ರೆಂಡ್ಲಿ ಎನ್ವಾಯರ್ನಮೆಂಟ್ ಇರುವುದು ಅಗತ್ಯ ಎಂಬುದು ಕೆಲವು ಚೀಫ್ ಗಳಿಗೆ ಗೊತ್ತೇ ಇರುವುದಿಲ್ಲ. ಒಟ್ಟಾರೆ ಹುಚ್ಚರ ಸಾಮ್ರಾಜ್ಯ!

ಹೊತ್ತಿಗೊಂದು ಮಾತನಾಡುವ ತುಘಲಕ್ ದೊರೆಗಳೂ ಇರುತ್ತಾರೆ. ಹುಡುಗಿಯರನ್ನು ಬಳಸಿಕೊಳ್ಳುವ, ಆ ಹುಡುಗಿಯರೂ ಆ ಮೂಲಕ ಉನ್ನತ ಸ್ಥಾನಗಳಿಗೆ ಏರಿ, ಉಳಿದವರ ಮೇಲೆ ಅಧಿಕಾರ ಚಲಾಯಿಸುವ ಘಟನೆಗಳೂ ನಡೆಯುತ್ತವೆ. ಉದ್ಯೋಗಿ ಗಳ ರಜೆ ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದಂತೆ ಸಮರ್ಪಕ ನಿರ್ವಹಣೆ, ಹೊಸ ಉಪಕ್ರಮಗಳನ್ನು ಆರಂಭಿಸುವಾಗ ಎಲ್ಲರೂ ಒಂದಾಗಿ ಮುನ್ನಡೆಯುವ ಒಳ್ಳೆಯ ಕ್ರಮ ಇತ್ಯಾದಿ ಕನಿಷ್ಠ ಶಿಷ್ಟಾಚಾರಗಳನ್ನೂ ಪಾಲಿಸದ ಜಾಗಗಳು ‘ವೃತ್ತಿಪರ ಸಂಸ್ಥೆ’ಗಳು ಎನಿಸಿಕೊಳ್ಳಲು ಸಾಧ್ಯವೇ? ಕೆಲವೊಮ್ಮೆ ಸಂಸ್ಥೆ (ಸ್ಟಾರ್ಟಪ್)ಗೆ ಹಣ ಹೂಡುವವರು ಯಾವ ಉದ್ದೇಶದಿಂದ ಸಂಸ್ಥೆ ನಡೆಸುತ್ತಿದ್ದಾರೆ ಎಂಬುದೇ ಅರ್ಥವಾಗುವುದಿಲ್ಲ.

ಯಾರೋ ಒಬ್ಬ ಮ್ಯಾನೇಜರ್‌ನ ಕಾರಣದಿಂದ ಸಂಸ್ಥೆಯ ಉತ್ತಮ ಕೆಲಸಗಾರರು ಕೆಲಸ ಬಿಟ್ಟು ಹೋಗುತ್ತಿದ್ದರೂ ಕಣ್ಣಿದ್ದೂ ಧೃತರಾಷ್ಟ್ರರಂತೆ ಕೂರುವ ಅಗತ್ಯವೇನಿದೆ? ಕೋಟಿ ಕೋಟಿ ರು. ಕಪ್ಪು ಹಣವೇನಾದರೂ ಇದ್ದು, ಅದನ್ನು ಕರಗಿಸುವ ಕಾರಣಕ್ಕೆ ಸಂಸ್ಥೆ ಕಟ್ಟಿದ್ದಾರೆಯೇ? ಮಾಧ್ಯಮ ಸಂಸ್ಥೆಯಾದರೂ ಲಾಭದ ಉದ್ದೇಶವಿಲ್ಲದೆ ಹಣ ಹೂಡಿಕೆ ಮಾಡುವುದಿಲ್ಲ-ಹಾಗಾದರೆ ನಿಜವಾಗಿಯೂ ಉದ್ಯಮ ನಡೆಸುವ ಉದ್ದೇಶವಿದೆಯೇ ಅಥವಾ ಉದ್ಯೋಗಿಗಳಿಗೆ ಮಾನಸಿಕ ಹಿಂಸೆ ಕೊಡುತ್ತ, ಅವೆಲ್ಲವನ್ನೂ ಸಿಸಿಟಿವಿ ಮೂಲಕ ನೋಡುತ್ತ ಹೊಸ ರೀತಿಯ ಬಿಗ್ ಬಾಸ್ ಸರಣಿ ನಡೆಸುವ ಇರಾದೆಯೇ?  -ಅರ್ಥವಾ ಗುವುದಿಲ್ಲ.

ಇಲ್ಲಿ ಪರಸ್ಪರ ನಂಬಿಕೆ, ವಿಶ್ವಾಸ ಇರುವುದಿಲ್ಲ. ಅಲ್ಲಿ ಪ್ರಗತಿಯೂ ಶೂನ್ಯ. ಆದರೆ ದಿನಗಳು ಉರುಳುತ್ತವೆ ಅಷ್ಟೆ. ಕೆಲವು ಕಡೆ ಕೆಲಸಕ್ಕೆ ಸಂಬಂಧವಿಲ್ಲದವರನ್ನು ಮ್ಯಾನೇಜರ್ ಆಗಿ ಕೂರಿಸುವುದೂ ಇದೆ. ಸಂಸ್ಥೆಯ ಮುಖ್ಯಸ್ಥರಾಗಿ ಬೇರೆ ಕ್ಷೇತ್ರದ ಜನರು ಇದ್ದರೆ ಒಳ್ಳೆಯದು, ಸಂಸ್ಥೆಯ ಪ್ರಗತಿ ಸಾಧ್ಯ ಎಂಬ ವಾದವನ್ನು ಒಪ್ಪಿಕೊಂಡರೂ, ಕಾರ್ಯಕಾರಿ ತಂಡದ ಮುಖ್ಯಸ್ಥರಾಗಿ ಅಂಥವರನ್ನು ತಂದು ಕೂರಿಸುವುದು ಅಪಾಯಕಾರಿ.

ಚೆನ್ನಾಗಿ ನಡೆಯುತ್ತಿರುವ ಕೆಲಸವನ್ನು ಅಂಥವರು ಗಬ್ಬೆಬ್ಬಿಸಿಬಿಡುವ ಸಾಧ್ಯತೆ ಇದೆ. ಅಂಥವರು ಉದ್ಯೋಗಿಗಳನ್ನು ಪ್ರಯೋಗದ ವಸ್ತುಗಳನ್ನಾಗಿ ಪರಿಗಣಿಸಿ, ಉದ್ಯೋಗಿಗಳನ್ನು ಬೇರೆಯವರಿಗೆ ಹೋಲಿಸುತ್ತ, ಇವರ ಮನೋಸ್ಥೈರ್ಯವನ್ನು ಕುಗ್ಗಿಸುತ್ತ, ಕೆಲಸದ ಸ್ಥಳದಲ್ಲಿ ರಾಜಕೀಯ ಮಾಡುತ್ತ ಒಟ್ಟಾರೆ ಕಚೇರಿ ವಾತಾವರಣವನ್ನು ಕೆಡಿಸಿಬಿಡುತ್ತಾರೆ. ಸ್ವಂತ ಐಡಿಯಾಗಳಿಲ್ಲದೆ ಕೇವಲ ಬೇರೆ ಕಂಪನಿಗಳಿಗೆ ತುಲನೆ ಮಾಡಿ ಕೆಲಸ ಅಳೆಯುವ ಅಂಥ ಜಾಗದಲ್ಲಿ ಹುಡುಗರಿಗೆ ಕಲಿಯುವುದಕ್ಕೆ ಏನಿರುತ್ತದೆ? ಸಂಬಳ ಬರುತ್ತದೆ-ಹೋಗುತ್ತದೆ.

ಸಮಯಕ್ಕೆ ಸಿಗದಿದ್ದರೆ ಅದೂ ಕಷ್ಟ! ಸುದ್ದಿ ಪ್ರಸ್ತುತಿ, ಪದ ಬಳಕೆ ಇತ್ಯಾದಿ ತಾಂತ್ರಿಕ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸಿ ದಾಗಲೇ ಅಲ್ಲಿ ‘ಎಲ್ಲವೂ ಸರಿಯಿಲ್ಲ’ ಎಂಬುದನ್ನು ಕಂಡುಕೊಳ್ಳಬಹುದು. ಕ್ಷೇತ್ರ ಜ್ಞಾನವಿಲ್ಲದ ಮ್ಯಾನೇಜರ್ ಗಳು ದನಗಳನ್ನು ಅಟ್ಟುವ ಕೆಲಸ ಮಾಡುತ್ತಾರೆ ಅಷ್ಟೆ! ಅಟ್ಟಿದತ್ತ ಹೋಗದಿದ್ದರೆ ಹೋದತ್ತ ಅಟ್ಟುವುದು. ಕೊನೆಗೆ ಏನೋ ಒಂದು ಆಗುತ್ತದೆ. ತಮ್ಮ ಕೆಲಸ ಭದ್ರವಾಗಿರುವಂತೆ ಅವರು ನೋಡಿಕೊಳ್ಳುತ್ತಾರೆ.

ದನಗಳು ಮಾತ್ರ ದನಗಳಾಗಿಯೇ ಉಳಿಯುತ್ತವೆ. ಈ ರೀತಿಯ ಅಸಹ್ಯಕರ ವಾತಾವರಣ ಸೃಷ್ಟಿಯಾದಾಗ, ‘ನಮ್ಮದೇ ಸಂಸ್ಥೆ, ನಾವು ಚೆನ್ನಾಗಿ ಕೆಲಸ ಮಾಡಬೇಕು, ಸಂಸ್ಥೆ ಪ್ರಗತಿ ಸಾಧಿಸಬೇಕು’ ಎನ್ನುವ ಭಾವನೆಯಲ್ಲಿ ಮನಃಪೂರ್ವಕವಾಗಿ ಕೆಲಸ ಮಾಡುವವರಿಗೆ ಆಘಾತವಾಗುತ್ತದೆ. ಕೆಲಸದಲ್ಲಿ ಆಸಕ್ತಿ ಕುಂದುತ್ತದೆ. ತತ್ಪರಿಣಾಮ, ಕೆಲಸ ಮಾಡಲು ಇಷ್ಟವಿಲ್ಲದಿ
ದ್ದರೆ ತಾವು ಹೊರಡಬಹುದು, ನಮಗೆ ಬೇರೆ ಜನ ಸಿಗುತ್ತಾರೆ ಎಂಬ ಮಾತೂ ಮೇಲಿನವರಿಂದ ಬರುವುದಕ್ಕೆ ಹೆಚ್ಚು ಸಮಯ
ತಗಲುವುದಿಲ್ಲ! ಪ್ರತಿವರ್ಷ ಕಾಲೇಜು ವಿದ್ಯಾಭ್ಯಾಸ ಮುಗಿಸಿ ಹೊರ ಹೋಗುವ ಮಂದಿಗೆ ಕೆಲಸವೂ ಬೇಕು.

ಈಗ ಕೊಡುತ್ತಿರುವುದಕ್ಕಿಂತಲೂ ಕಡಿಮೆ ವೇತನಕ್ಕೆ ಅಭ್ಯರ್ಥಿಗಳು ಬೇಕಾದಷ್ಟು ಮಂದಿ ಸಿಗುತ್ತಾರೆ ಎಂದು ಮ್ಯಾನೇಜರ್‌ ಗಳಿಗೂ ಗೊತ್ತಿರುತ್ತದೆ!! ವಿದ್ಯಾಭ್ಯಾಸ ಮುಗಿಸಿ ವೃತ್ತಿ ಪ್ರಪಂಚಕ್ಕೆ ಕಾಲಿಡುವ ‘ಎಳೆ ನಿಂಬೆಕಾಯಿ’ಗಳು ನವೋದ್ಯಮಗಳಲ್ಲಿ ಸ್ವಲ್ಪಕಾಲ ಕೆಲಸ ಮಾಡಿದರೆ ತಾವು ಈಗ ಕಲಿತದ್ದು ಏನೂ ಇಲ್ಲ; ವಾಸ್ತವಿಕ ಅಂಶಗಳು ಬಹಳ ಇವೆ ಎಂಬುದು ಅರಿವಿಗೆ ಬಂದೀತು. ಅಲ್ಲಿ ಸಿಕ್ಕ ಅನುಭವಗಳು ಹೊಸ ಹೊಸ ಸಂಸ್ಥೆಗಳ ಬಣ್ಣದ ಹೊರಮೈಗೆ ಸುಲಭವಾಗಿ ಆಕರ್ಷಿತಗೊಳ್ಳದೆ ಎಚ್ಚರದಲ್ಲಿರಬೇಕೆಂಬ ಪಾಠವನ್ನೂ ಕಲಿಸದೇ ಇರಲಾರವು.

ಎಲ್ಲ ಸ್ಟಾರ್ಟಪ್‌ಗಳೂ ಹೀಗೆಯೇ ಅನ್ನುವುದಲ್ಲ. ನಿಜವಾಗಿಯೂ ಕಷ್ಟಪಟ್ಟು ದುಡಿದು, ನಾಲ್ಕು ಜನರಿಗೆ ಕೆಲಸ ಕೊಟ್ಟು,
ಅವರನ್ನೂ ಚೆನ್ನಾಗಿ ನೋಡಿಕೊಂಡು, ಉದ್ಯಮದಲ್ಲಿ ಪಳಗಿ, ನಿಧಾನವಾಗಿ ಉದ್ಯಮವನ್ನು ವಿಸ್ತರಿಸಿಕೊಳ್ಳುವ ಸಾಧಕರಿದ್ದಾರೆ.
ಅವರ ವೆಂಚರ್‌ಗಳು ಅಡ್ವೆಂಚರ್‌ಗಳ ಕಾರಣದಿಂದ ಸ್ಟಾರ್ಟಪ್ ನೆಲೆಯಿಂದ ಉನ್ನತಿಗೇರುತ್ತವೆ.

ನವೋದ್ಯಮವು ಯಶಸ್ಸು ಗಳಿಸಲು ಇರುವ ಉತ್ತಮದಾರಿಯೂ ಹೌದು. ಆದರೆ ಅದನ್ನು ಬಳಸಿಕೊಳ್ಳುವ ರೀತಿ ಮುಖ್ಯ. ಯುವಕರ ಚಿಕ್ಕ ತಂಡವನ್ನು ಹೊಂದಿರುವ ನವೋದ್ಯಮಗಳಲ್ಲಿ-ಅದರಲ್ಲೂ ಮಾಧ್ಯಮ ನವೋದ್ಯಮಗಳಲ್ಲಿ ಒಗ್ಗಟ್ಟು,
ಸಂವಹನ, ಸಮನ್ವಯ, ಸಹಕಾರ ಬಹಳ ಮುಖ್ಯವಾಗುತ್ತದೆ. ತಂಡದ ಮುಖ್ಯಸ್ಥರು ಆಗಾಗ ನಾನು ನಿಮ್ಮ ಜತೆಗಿದ್ದೇನೆ
ಎಂಬಂತೆ ತೋರಿಸಿಕೊಂಡರೂ ಸಾಕು- ಯಶಸ್ಸು ಇನ್ನಷ್ಟು ಹತ್ತಿರವಾದೀತು.

ದೃಢ ಮನೋಬಲವನ್ನು ಹೊಂದಿರುವ ಚಿಕ್ಕ ತಂಡವು ಮಹೋನ್ನತ ಸಾಧನೆ ಮಾಡಬಲ್ಲದು. ಆಮೇಲೆ ಉದ್ಯಮವನ್ನು ವಿಸ್ತರಿಸಲಾಗದೇನು? ಅಲ್ಲಿ ಒಗ್ಗಟ್ಟೇ ಶಕ್ತಿ. ಸಣ್ಣ ಮಾಧ್ಯಮ ನವೋದ್ಯಮಕ್ಕೆ ಹೋಲಿಸಿದರೆ ಒಂದು ದೊಡ್ಡ ಮಾಧ್ಯಮ ಸಂಸ್ಥೆಯಲ್ಲಿ ಒಗ್ಗಟ್ಟು ತರುವುದು ಬಹಳ ಕಷ್ಟ. ಯಾಕೆಂದರೆ ಅಲ್ಲಿನ ಭಯಂಕರ ರಾಜಕೀಯ, ಹಳೆಯ ಹಾಗೂ ಹೊಸ ತಲೆಗಳ ಒಡ್ಡೋಲಗ, ಗುಂಪುಗಾರಿಕೆಯೂ ಕೂಡಿ ಆಗಬಾರದ್ದು ಆಗುವುದಿದೆ.

ಹೊರಗೆ ಸುಂದರವಾಗಿ ಕಾಣಿಸುವುದು ಕೇವಲ ಹೊಸ ಸಂಸ್ಥೆಗಳು ಅಷ್ಟೇ ಅಲ್ಲ. ವೆಲ್ ಎಸ್ಟಾಬ್ಲಿಷ್ಡ್ ಸಂಸ್ಥೆಗಳೂ ‘ತೋಟ ಸಿಂಗಾರ; ಒಳಗೆ ಗೋಳಿಸೊಪ್ಪು’ ಎಂಬಂತೆ ಇರುವುದೂ ಇದೆ. ಕೆಲವು ದೊಡ್ಡ ಮಾಧ್ಯಮ ಸಂಸ್ಥೆಗಳಲ್ಲಿ ಎಲ್ಲವೂ ಸವಾಲು ಎಂದೇ ಲೆಕ್ಕ! ಅಲ್ಲಿನ ಇತರ ಪ್ರಭಾವಿ ವಿಭಾಗಗಳು ಬಳಸಿ ಬಿಟ್ಟ ಕಂಪ್ಯೂಟರುಗಳನ್ನು ಪ್ರಭಾವಿಯಲ್ಲದ ಸುದ್ದಿ ವಿಭಾಗಕ್ಕೆ ನೀಡುವುದೂ ಇದೆ. ಉದ್ಯಮದ ದೃಷ್ಟಿಯಲ್ಲಿ ಆ ವಿಭಾಗವೇ ಬಹಳ ಮುಖ್ಯವಾಗಿದ್ದರೂ ಅದಕ್ಕೆ ತಿರಸ್ಕಾರವೇ ಗತಿ.

ಅಲ್ಲಿ ಕಂಪ್ಯೂಟರು ಸರಿ ಇಲ್ಲ ಇತ್ಯಾದಿ ಸಮಸ್ಯೆ ಹೇಳಿದರೆ, ಅದೆಲ್ಲ ಚಾಲೆಂಜ್, ಅವುಗಳನ್ನು ಸಮರ್ಥವಾಗಿ ಎದುರಿಸಬೇಕು ಎಂಬ ಉತ್ತರ ಬರುತ್ತದೆ. ಕೆಲವು ಪತ್ರಿಕಾ ಕಚೇರಿಗಳಲ್ಲಿ ಈ ಸ್ಥಿತಿ ಇದೆ. ಪತ್ರಿಕಾ ಕಚೇರಿಗಳಲ್ಲಿ ಸಂಜೆಯಾಗುತ್ತಲೆ (ಪುಟಗಳ) ಒತ್ತಡ ತಡೆದುಕೊಳ್ಳಲಾಗದೇ ಮಕಾಡೆ ಮಲಗಿಕೊಳ್ಳುವ ಸಾಫ್ಟ್ ವೇರ್, ಒಬ್ಬ ರಜೆ ಹಾಕಿದರೆ ಬದಲಿಗೆ ಇನ್ನೊಬ್ಬ ಕೆಲಸಗಾರ ಇರದೇ ಇರುವುದು-ಇಂತಹ ಸಮಸ್ಯೆಗಳನ್ನು ಚಾಲೆಂಜ್ ಎಂದು ಎಷ್ಟು ದಿನಗಳವರೆಗೆ ಬಿಂಬಿಸಿ ನಂಬಿಸಬಹುದು? ವರದಿಗಾರನಿಗೆ ರಜೆ ಎಂಬುದಿಲ್ಲ (ಸದಾ ಅಲರ್ಟ್ ಆಗಿರಬೇಕು) ಸರಿ.

ಸುದ್ದಿ ಮನೆಯ ಪತ್ರಕರ್ತನಿಗೆ ಆರೋಗ್ಯ ಕೈಕೊಟ್ಟಾಗಲೂ ಒಂದು ರಜೆ ತೆಗೆದುಕೊಳ್ಳುವ ಅವಕಾಶವಿಲ್ಲ. ನಿಜವಾಗಿಯೂ ಸುದ್ದಿ ವಿಭಾಗಕ್ಕೆ ಸೀಮಿತ ಸಂಪನ್ಮೂಲಗಳನ್ನಷ್ಟೇ ಕೊಡುವಷ್ಟು ಪತ್ರಿಕಾ ಸಂಸ್ಥೆಗಳು ಬಡತನ ಎದುರಿಸುತ್ತಿವೆಯೇ? ಒಂದೊಮ್ಮೆ ಇದ್ದರೂ ಅದನ್ನು ಸರಿಪಡಿಸಲು ಸಾಧ್ಯವೇ ಇಲ್ಲವೇ? ಚಾಲೆಂಜ್ (ಸವಾಲು)ಗಳು ಆಗಾಗ ಬರುತ್ತವೆ. ಯಾರೋ
ಗಣ್ಯ ವ್ಯಕ್ತಿಯ ದಿಢೀರ್ ಸಾವು, ಪ್ರವಾಹ, ಅತ್ಯದ್ಭುತ ಸಾಧನೆ, ಕ್ಷಿಪ್ರ ಕ್ರಾಂತಿ-ಇತ್ಯಾದಿ ವಿಶೇಷ ಘಟನಾವಳಿಗಳು, ಹಬ್ಬಗಳು,
ವಿಶೇಷ ಫೋನ್ ಇನ್ ಕಾರ್ಯಕ್ರಮ, ವಿಶೇಷ ಕ್ಯಾಂಪೇನ್, ದಿಢೀರ್ ಜಾಹೀರಾತು ಪ್ರವಾಹ ಬಂದು ಪುಟಗಳ ಸಂಖ್ಯೆ
ಹೆಚ್ಚಳ-ಇತ್ಯಾದಿ ಪ್ರಸಂಗಗಳಲ್ಲಿ ಚಾಲೆಂಜುಗಳು ಇರುತ್ತವೆ, ನಿಜ. ಆದರೆ ಬಹು ಹಿಂದಿನ ಕಾಲದಿಂದಲೂ ಸದಾ ಕಣ್ಣಿಗೆ ಪ್ರತ್ಯಕ್ಷ
ಕಾಣುತ್ತ ಇರುವ ಚಾಲೆಂಜ್ (Challenge)ಗಳು ‘ಕೇವೋಸ್’ (Chaos -ಅವ್ಯವಸ್ಥೆ) ಕೂಡ ಆಗಿರಬಹುದು.

ಸಾವು ಆಕಸ್ಮಿಕ. ಆದರೆ ದಿನಾ ಸಾಯೋರಿಗೆ ಅಳೋರು ಯಾರು?! ನಿತ್ಯವೂ ಆಗಬೇಕಾದ ಕೆಲಸಗಳಿಗೆ ಅಗತ್ಯ ಸಂಪನ್ಮೂಲ ವನ್ನು ಒದಗಿಸುವುದಿಲ್ಲವೆಂದಾದರೆ ಗುಣಮಟ್ಟದಲ್ಲಿ ರಾಜಿಯಾಗುವುದೆಂದು ಎಂದರ್ಥ. ಉದ್ಯೋಗಿಗಳ ಮೂಗುದಾರ ಹಿಡಿದು ಕೆಲಸ ಮಾಡಿಸಿಕೊಳ್ಳಬಹುದು. ಆದರೂ ಎಲ್ಲಿಯವರೆಗೆ? ಅವರು- ಇನ್ನು ಸತ್ತರೂ ಸರಿ, ಸಾಧ್ಯವಿಲ್ಲ ಎಂದು ರಾಜೀನಾಮೆ ಪತ್ರ ಎಸೆಯುವವರೆಗೆ. ಓದುಗರು ಅಳುವುದಿಲ್ಲ.

ಗುಣಮಟ್ಟದಲ್ಲಿ ರಾಜಿಯಾದರೆ ಪತ್ರಿಕೆ ನಿರಾಕರಿಸಿಬಿಡುತ್ತಾರೆ ಅಷ್ಟೆ. ಉಪಕರಣಗಳಿಂದ ಹಿಡಿದು ಉದ್ಯೋಗಿಗಳವರೆಗೆ ಬಹುತೇಕ ಎಲ್ಲವೂ ಹೊಸತೇ ಇರುವ ಮಾಧ್ಯಮ ನವೋದ್ಯಮಗಳಲ್ಲಿ ಅಕ್ಷರ ತಪ್ಪು/ಸರಿಗಿಂತಲೂ ಲೈಕ್, ಶೇರ್, ಓಪನ್ ರೇಟ್ ಇತ್ಯಾದಿ ಬಿಸಿನೆಸ್ ಅಂಶಗಳೇ ಮುಖ್ಯವಾಗುತ್ತಿವೆ. ಈಗಾಗಲೇ ಹೇಳಿದಂತೆ ಅಲ್ಲಿ ಅಕ್ಷರ ಬಳಕೆ, ಭಾಷೆ ಬಗ್ಗೆ ಗಮನ ಹರಿಸಲು ಅಗತ್ಯ ಜ್ಞಾನವು ಅಲ್ಲಿ ಕುಳಿತ ‘ಅಟ್ಟುವವರಿಗೆ’ ಇದೆ ಎಂದು ದೃಢವಾಗಿ ಹೇಳಲಾಗದು. ಈ ನಿಟ್ಟಿನಲ್ಲಿ ಪತ್ರಿಕೆಗಳು ಸ್ವಲ್ಪ ಮಟ್ಟಿಗೆ ಪರವಾಗಿಲ್ಲ ಎನ್ನುವಂತಿದ್ದವು. ಬ್ಯೂರೋಗಳಲ್ಲಿ ಚೀಫ್, ಸುದ್ದಿಮನೆಗಳಲ್ಲಿ ಸೀನಿಯರ್ ಸಬ್ ಎಡಿಟರ್/ ನ್ಯೂಸ್
ಎಡಿಟರ್ ಹೊಸಬರಿಗೆ ಕಸುಬು ಕಲಿಸುತ್ತಾನೆ.

ಟಿವಿಗಳಲ್ಲೂ ಈ ಪರಿಪಾಠವಿದೆ. ಆದರೆ ಒಂದಕ್ಕೊಂದು ಪೈಪೋಟಿ ನೀಡುವ ಧಾವಂತದ, ಉದ್ಯೋಗಿಗಳು ನಿಂತಲ್ಲಿ ನಿಲ್ಲದ ಕೆಲವು ಡಿಜಿಟಲ್ ಮಾಧ್ಯಮಗಳನ್ನು ನೋಡಿದಾಗ ಅಲ್ಲಿ ಈ ರೀತಿಯ ಉತ್ತಮ ವಾತಾವರಣ ಇದೆ ಎಂದು ಅನ್ನಿಸುವುದಿಲ್ಲ. ಪತ್ರಿಕೆಗಳಲ್ಲಿ ಇರುವಂತೆ ಒಬ್ಬ ಬರೆದ ಸುದ್ದಿಯನ್ನು ಇನ್ನೊಬ್ಬ ಪರೀಕ್ಷಿಸಿ, ತಿದ್ದಿ ಕಳುಹಿಸುವ ಪದ್ಧತಿ ಬಹಳ ಕಡಿಮೆ ಅಲ್ಲಿ.
ಒಂದು ಕಾಲಕ್ಕೆ ಭಾಷೆಯನ್ನು ಪೊರೆಯುತ್ತಿದ್ದ ಮಾಧ್ಯಮಗಳು ಈಗ ಭಾಷೆಯನ್ನು ಕುಲಗೆಡಿಸಿಬಿಟ್ಟಿವೆ ಎಂಬ ಗಂಭೀರ
ಆರೋಪವಿದೆ. ಕೆಲವೊಮ್ಮೆ ಸುದ್ದಿವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಅವಸರದಲ್ಲಿ ಅಕ್ಷರ ತಪ್ಪುಗಳಾಗುವುದಿದೆ.

ಆದರೆ ಪತ್ರಿಕೆಗಳಲ್ಲಿಯೂ ತಪ್ಪುಗಳು ಕಂಡುಬರುತ್ತಿರುವುದು ಆಘಾತಕರ ಸಂಗತಿ. ಕೊರೊನಾ ನೆಪದಲ್ಲಿ ಹಲವು ಪತ್ರಿಕೆಗಳು ಸಿಬ್ಬಂದಿ ಕಡಿತ ಮಾಡಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಕ್ರಮೇಣ ಕೆಲವು ಪತ್ರಿಕೆಗಳು ಪ್ರೂಫ್ ರೀಡರ್‌ಗಳನ್ನೂ ತೆಗೆದುಹಾಕಿದ್ದು, ಅದರ ಪರಿಣಾಮ ಹಾಗೂ ಅನುಭವಿ ಸುದ್ದಿಮನೆ ಪತ್ರಕರ್ತರ ಅನುಪಸ್ಥಿತಿಯ ಪರಿಣಾಮವು ಬಹುಶಃ ಈಗ ಕಂಡುಬರುತ್ತಿದೆ.

ಮುಖಪುಟದ ಸುದ್ದಿಗಳಲ್ಲೂ ತಪ್ಪುಗಳು ರಾರಾಜಿಸುತ್ತಿವೆ. ಆ ದೆಸೆಯಲ್ಲಿ ನೋಡಿದಾಗ ಮಾಧ್ಯಮ ನವೋದ್ಯಮಗಳಿಗೆ
ಸವಾಲು ಗಳಿರುವುದು ಕೇವಲ ಅಸ್ತಿತ್ವಕ್ಕೆ ಕುರಿತಂತೆ ಅಷ್ಟೇ ಅಲ್ಲ. ವ್ಯವಸ್ಥೆ ಕುರಿತಂತೆ ಕೂಡ ಹೌದು. ಗುಣಮಟ್ಟದಲ್ಲಿ ರಾಜಿಯಾಗುವುದೆಂದರೆ ಬೇರೆಯವರಿಗೆ ಅವಕಾಶ ಕೊಡುವುದೂ ಹೌದಷ್ಟೆ! ಇದು ಎಲ್ಲ ಬಗೆಯ ಮಾಧ್ಯಮಗಳಿಗೂ ಅನ್ವಯ. ಸಮಾಜದಲ್ಲಿ ಒಂದು ಮಾದರಿ ಮಾಧ್ಯಮ ಸಂಸ್ಥೆ ಇರುವುದು ಅಗತ್ಯ. ಇರುವ ಮಾಧ್ಯಮಗಳು ‘ಚಲ್ತಾ ಹೈ’ ಧೋರಣೆ ಇಟ್ಟುಕೊಂಡು ಕಣ್ಣುಮುಚ್ಚಿ ಸಾಗುವಾಗ ನೂತನ ಮಾಧ್ಯಮ ಸಂಸ್ಥೆಗಳು ಇವುಗಳ ತಪ್ಪುಗಳಿಂದ ಕಲಿತುಕೊಂಡು ಹೊಸ ಮತ್ತು ಸ್ವಚ್ಛ ರೀತಿಯಲ್ಲಿ ಕೆಲಸ ಆರಂಭಿಸಬಹುದು.

ವ್ಯವಸ್ಥಿತ ಯೋಜನೆ, ಬಂಡವಾಳ, ಸನ್ನದ್ಧ ತಂಡದೊಂದಿಗೆ, ಉತ್ತಮ ನಾಯಕತ್ವದೊಂದಿಗೆ, ಧನಾತ್ಮಕ ಆಲೋಚನೆ ಯೊಂದಿಗೆ ನೆಲೆಯೂರುವ ನವ್ರೋದ್ಯಮವೊಂದು ನೆಲ ಕಚ್ಚಲು ಸಾಧ್ಯವೇ ಇಲ್ಲ. ಅದು ಪತ್ರಿಕೆಯೇ ಆಗಲಿ, ಇನ್ಯಾವ ಬಗೆಯ ಮಾಧ್ಯವೇ ಆಗಲಿ, ಇತರ ಕ್ಷೇತ್ರಕ್ಕೆ ಸಂಬಂಽಸಿದ್ದೇ ಆಗಿರಲಿ. ಉತ್ತಮ ಸಂಸ್ಥೆಯಾದರೆ ಅಸ್ತಿತ್ವ ದೊರೆಯುತ್ತದೆ. ಅಭಿವೃದ್ಧಿಯೂ ಆಗುತ್ತದೆ.