Saturday, 14th December 2024

ಕನ್ನಡ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣ

ಸ್ವಾಸ್ಥ್ಯ ಸಂಪದ

yoganna55@gmail.com

ಮನುಷ್ಯನ ಬದುಕಿನಲ್ಲಿ ಭಾವ ಮತ್ತು ಭಾಷೆ ಪ್ರಮುಖ ಪಾತ್ರ ವಹಿಸುತ್ತವೆ. ಅರಿವು ಮತ್ತು ಸಂವಾದದ ಮಾಧ್ಯಮವಾಗಿ ಭಾಷೆ ಕಾರ್ಯ ನಿರ್ವಹಿಸು ತ್ತದೆ.

ಜನ್ಮದತ್ತ ಜ್ಞಾನ ಹೊರಹೊಮ್ಮಲು ಮತ್ತು ಅಧ್ಯಯನದಿಂದ ಜ್ಞಾನ ಸಂಪಾದಿಸಿಕೊಳ್ಳಲು ಭಾಷೆ ಅತ್ಯವಶ್ಯಕ. ಓದು, ಬರಹ ಮತ್ತು ಮಾತು ಭಾಷೆಯ ಸಂವಹನ ಮಾಧ್ಯಮಗಳಾಗಿದ್ದು, ಇವೆಲ್ಲವುಗಳಲ್ಲಿ ಸದೃಢವಾದ ಭಾಷೆ ಮಾತ್ರ ಪ್ರಬಲ ಕಲಿಕಾ ಮಾಧ್ಯಮವಾಗಲು ಸಾಧ್ಯ. ಕನ್ನಡ ಭಾಷೆ ಇವೆಲ್ಲವು ಗಳಲ್ಲೂ ಸದೃಢವಾಗಿದೆ.

ಭಾಷೆಯನ್ನು ಸೃಷ್ಟಿಕರ್ತನೆ ದಯಪಾಲಿಸಿದನೋ ಮನುಷ್ಯನೇ ಅನ್ವೇಷಣೆ ಮಾಡಿಕೊಂಡನೋ ನಿಗೂಢ. ಪ್ರಪಂಚದಲ್ಲಿ ಇಂದು ಸಾವಿರಾರು ಭಾಷೆಗಳಿದ್ದು, ಭಾರತದೇಶದಲ್ಲಿ ಸಂವಿಧಾನಾತ್ಮಕವಾಗಿ ಗುರುತಿಸಲಾದ 14 ಭಾಷೆಗಳಿದ್ದರೂ ರೂಢಿಯಲ್ಲಿ ಸುಮಾರು ೫ ಸಾವಿರಕ್ಕಿಂತ ಹೆಚ್ಚು ಭಾಷೆಗಳಿವೆ ಎಂದು ಅಂದಾಜಿಸಲಾಗಿದೆ.

ಭಾಷೆಯಲ್ಲಿ ಮೆದುಳಿಗೆ ಒಳ ಬರುವ ಮಾಹಿತಿಗಳನ್ನು ಅರ್ಥಮಾಡಿಕೊಳ್ಳುವ ಸ್ವೀಕೃತಭಾಷೆ ಮತ್ತು ಅದಕ್ಕನು ಗುಣವಾಗಿ ಮಾತು ಮತ್ತು ಬರವಣಿಗೆ ಮೂಲಕ ಪ್ರತಿಕ್ರಿಯಿಸುವ ‘ಅಭಿವ್ಯಕ್ತ ಭಾಷೆ’ ಎಂಬ ಎರಡು ವಿಧಗಳಿವೆ.

ಭಾಷೆಯ ಕಲಿಕೆ ಮಗುವಿಗೆ ಗರ್ಭಕೋಶದಲ್ಲಿರುವಾಗಲೇ ಪ್ರಾರಂಭವಾಗುವುದರಿಂದ ಮಾತೃಭಾಷೆಯ ಕಲಿಕೆ ಸ್ವಯಂಪ್ರೇರಿತವಾಗಿದ್ದು, ಹುಟ್ಟಿದ ನಂತರ ಭಾಷೆಯ ಪರಿಚಯ ಮತ್ತಷ್ಟು ವೃದ್ಧಿಗೊಳ್ಳುತ್ತದೆ. ಒಂದಕ್ಕಿಂತ ಹೆಚ್ಚು ಮಾತೃಭಾಷೆಯನ್ನು ಮಾತನಾಡುವ ಪರಿಸರದಲ್ಲಿ ಮಗು ಒಂದಕ್ಕಿಂತ ಹೆಚ್ಚು ಭಾಷೆಗಳ ಬಗ್ಗೆಯೂ ಪ್ರಭುತ್ವ ಬೆಳೆಸಿಕೊಳ್ಳಬಹುದು.

ಗರ್ಭದಿಂದಲೇ ಮನುಷ್ಯನಿಗೆ ಮಾತೃಭಾಷೆಯ ಕಲಿಕೆ ಪ್ರಾರಂಭವಾಗಿ ನಂತರ ಹಂತ ಹಂತವಾಗಿ ವೃದ್ಧಿಯಾಗಿ ಪರಿಪಕ್ವವಾಗುವುದರಿಂದ ಕಲಿಕೆಗೆ
ಮಾತೃಭಾಷೆಯೇ ಸರ್ವಶ್ರೇಷ್ಠ ಎಂಬುದು ವೈಜ್ಞಾನಿಕ. ಮಾತೃಭಾಷೆ ಶಿಕ್ಷಣ ವಿಷಯಗಳನ್ನು ಸರಳವಾಗಿ ಅರಗಿಸಿಕೊಳ್ಳಲು ಪೂರಕವಾಗುತ್ತದೆ. ವಿಷಯವನ್ನು ಮಾತೃಭಾಷೆಯಲ್ಲಿ ಚೆನ್ನಾಗಿ ಅರ್ಥ ಮಾಡಿಕೊಂಡ ನಂತರ ಅದನ್ನು ಇನ್ನಿತರ ಯಾವುದೇ ಭಾಷೆಗಳನ್ನೂ ಕಲಿತು ವಿವಿಧ ಭಾಷೆಗಳಲ್ಲಿ ಸುಲಭವಾಗಿ ವ್ಯಕ್ತಮಾಡಬಹುದು.

ಹೀಗಾಗಿ ಮನುಷ್ಯನಿಗೆ ತೀರಾ ಹತ್ತಿರವಾದ ವೈದ್ಯಕೀಯ ಶಿಕ್ಷಣ ಚೆನ್ನಾಗಿ ಮನನವಾಗಬೇಕಾದಲ್ಲಿ ಆಯಾಯ ಮಾತೃಭಾಷೆಯಲ್ಲಿಯೇ ವೈದ್ಯಕೀಯ ಶಿಕ್ಷಣ ನೀಡುವುದು ಅತ್ಯವಶ್ಯಕ. ಈ ಕಾರಣಕ್ಕಾಗಿಯೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರತಿರಾಜ್ಯದಲ್ಲೂ ಒಂದೊಂದು ಮಾತೃಭಾಷೆಯ ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸುವ ಸಂಕಲ್ಪಮಾಡಿದ್ದಾರೆ.

ಕನ್ನಡ ಭಾಷೆಯ ಹಿರಿಮೆ
ಕನ್ನಡ ಭಾಷೆಗೆ ಸುಮಾರು ೨ ಸಾವಿರ ವರ್ಷಗಳ ಇತಿಹಾಸವಿದ್ದು, ಇಂದು ಎಲ್ಲೆಡೆ ಇಂದು ವಿರಾಜಿಸುತ್ತಿರುವ ಆಂಗ್ಲಭಾಷೆಗಿಂತಲೂ ಅತ್ಯಂತ ಪ್ರಾಚೀನ ವಾದುದು. ಕನ್ನಡ ಭಾಷೆಯ ಲಿಪಿ, ಉಚ್ಛಾರ, ಪದ ಸಂಪತ್ತು, ಭಾಷಾಶೈಲಿ ಎಲ್ಲವುಗಳೂ ಪ್ರಪಂಚದಲ್ಲಿರುವ ಎಲ್ಲ ಭಾಷೆಗಳಿಗಿಂತ ಉತ್ಕೃಷ್ಟ ವಾಗಿರುವುದನ್ನು ಗಮನಿಸಬಹುದಾಗಿದೆ. ಅಕ್ಷರಗಳ ಜೋಡಣೆ, ವಾಕ್ಯ ಸಮುಚ್ಛಯ ಹಲವಾರು ಭಾಷೆಗಳಿಗಿಂತ ಸುಂದರವಾಗಿರುವುದನ್ನು ಗಮನಿಸ ಬಹುದು.

ಆರೋಗ್ಯ ಸಾಹಿತ್ಯವನ್ನೂ ಒಳಗೊಂಡಂತೆ ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಸಮರ್ಥವಾಗಿ ಕನ್ನಡ ಭಾಷೆ ಅರಗಿಸಿಕೊಂಡಿದೆ ಎಂಬುದಕ್ಕೆ ಇಂದು ಲಭ್ಯವಿರುವ ಆರೋಗ್ಯ ವಿಜ್ಞಾನ ಸಾಹಿತ್ಯ, ಪ್ರಾಚೀನ ಆರೋಗ್ಯ ಸಾಹಿತ್ಯ, ಅಧ್ಯಾತ್ಮಿಕ ಆರೋಗ್ಯ ಸಾಹಿತ್ಯ, ಮಹಾಕಾವ್ಯಗಳು ಮತ್ತು ಲಭಿಸಿರುವ ಅಽಕ ಸಂಖ್ಯೆಯ ಜ್ಞಾನಪೀಠ ಪ್ರಶಸ್ತಿಗಳು ಜ್ವಲಂತ ಉದಾಹರಣೆಗಳಾಗಿದ್ದು ಆಧುನಿಕ ವೈದ್ಯ ವಿಜ್ಞಾನದ ಎಲ್ಲ ಪ್ರಕಾರಗಳನ್ನೂ ಅರಗಿಸಿಕೊಳ್ಳುವ ಸಾಮರ್ಥ್ಯ ಕನ್ನಡ ಭಾಷೆಗಿದೆ ಎಂಬುದಕ್ಕೆ ಮೈಸೂರು ವಿಶ್ವವಿದ್ಯಾನಿಲಯದಿಂದ ನನ್ನ ಸಂಪಾದಕತ್ವದಲ್ಲಿ ಪ್ರಕಟಣೆಗೊಳ್ಳುತ್ತಿರುವ ‘ಕನ್ನಡ ವೈದ್ಯ ವಿಜ್ಞಾನ ವಿಷಯ ವಿಶ್ವಕೋಶ’ ಮತ್ತು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದಿಂದ ಪ್ರಕಟಗೊಳ್ಳುತ್ತಿರುವ ‘ಕನ್ನಡ ವೈದ್ಯಕೀಯ ನಿಘಂಟು ಮತ್ತು ಪದಕೋಶ’ ಸಾಕ್ಷಿಯಾಗಿವೆ.

ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣ
ಇಂದು ನಮ್ಮ ದೇಶದಲ್ಲಿ ಆಯುರ್ವೇದ, ಆಧುನಿಕ ವೈದ್ಯವಿಜ್ಞಾನ, ಅಲೋಪಥಿ, ಹೋಮಿಯೋಪಥಿ, ಯೋಗ ಮತ್ತು ನೈಸರ್ಗಿಕ ವಿಜ್ಞಾನ ಮತ್ತಿತರ ಅರೆ ವೈದ್ಯಕೀಯ ವಿಜ್ಞಾನಗಳು ಎಂಬ ಪ್ರಮುಖ ವೈದ್ಯ ವಿಜ್ಞಾನಗಳಿದ್ದು ಇವೆಲ್ಲವುಗಳನ್ನು ಕನ್ನಡ ಭಾಷೆಯಲ್ಲಿಯೇ ಶಿಕ್ಷಣ ನೀಡಬಹುದಾಗಿದೆ.

ಈಗಾಗಲೆ, ರಷ್ಯ, ಜಪಾನ್, ಜರ್ಮನಿ, ಚೈನ ಇತ್ಯಾದಿ ದೇಶಗಳು ಬಹು ಹಿಂದಿನಿಂದಲೇ ತಮ್ಮ ತಮ್ಮ ಮಾತೃಭಾಷೆಯಲ್ಲಿಯೇ ವೈದ್ಯಕೀಯ ಶಿಕ್ಷಣ
ವನ್ನು ಯಶಸ್ವಿಯಾಗಿ ನೀಡುತ್ತ ಶ್ರೇಷ್ಠ ವೈದ್ಯರನ್ನೂ ನೀಡಿವೆ. ಆದುದರಿಂದ ವೈದ್ಯಕೀಯ ಶಿಕ್ಷಣಕ್ಕೆ ಆಂಗ್ಲ ಭಾಷೆಯೊಂದೇ ಸರ್ವಶ್ರೇಷ್ಠವಲ್ಲ. ಕನ್ನಡ
ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣ ನೀಡುವುದಕ್ಕೆ ಬಹು ಮುಖ್ಯವಾದ ಸವಾಲಿರುವುದು “ವೈದ್ಯಕೀಯ ತಾಂತ್ರಿಕ ಪದಗಳ ಸಮಸ್ಯೆ”.

ಇದನ್ನು ಹೊರತುಪಡಿಸಿದರೆ ವೈದ್ಯಕೀಯ ವಿಷಯಗಳ ವಿವರಣೆಗಾಗಲಿ, ಕ್ರಿಯಾಪದಗಳಿಗಾಗಲಿ ಮತ್ತಿತರ ಯಾವುದೇ ವಿಷಯವನ್ನು ವಿವರಿಸುವು ದಕ್ಕಾಗಲಿ ಕನ್ನಡ ಭಾಷೆಯಲ್ಲಿ ಪದಗಳ ಕೊರತೆಯಿಲ್ಲ. ಎಲ್ಲ ವೈದ್ಯವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಭಾಷೆಯಾಗಿ ಕಡ್ಡಾಯವಾಗಿ ಕಲಿಯುವಂತಾಗಬೇಕು. ಕನ್ನಡ ಬೋಧನಾ ಮತ್ತು ಪರೀಕ್ಷೆ ಪಠ್ಯ ವಿಷಯವಾಗಬೇಕು. ಅವರವರ ಮಾತೃಭಾಷೆಯಲ್ಲಿ ವೈದ್ಯ ಶಿಕ್ಷಣವನ್ನು ಬೋಧಿಸುತ್ತಿರುವ ದೇಶಗಳಲ್ಲಿ ಆಯಾಯ ದೇಶದ ಮಾತೃಭಾಷೆಯನ್ನು ಕಲಿಯುವುದು ಕಡ್ಡಾಯವಾಗಿದೆ.

ವೈದ್ಯ ತಾಂತ್ರಿಕ ಪದಗಳು

ಕನ್ನಡದಲ್ಲಿ ವೈದ್ಯಕೀಯ ತಾಂತ್ರಿಕ ಪದಗಳು ವೈದ್ಯ ವಿಜ್ಞಾನ, ವಿಜ್ಞಾನದ ಮೂಲ ಪ್ರಕಾರಗಳಾದ ಭೌತಶಾಸ್ತ್ರ, ರಾಸಾಯನಿಕಶಾಸ್ತ್ರ, ಜೀವಶಾಸ್ತ್ರ ಇತ್ಯಾದಿ ಎಲ್ಲ ಪ್ರಕಾರಗಳನ್ನೂ ಒಳಗೊಂಡಿದ್ದು, ಇವುಗಳ ಜೊತೆಗೆ ದೇಹರಚನೆ, ಶರೀರಕ್ರಿಯ, ಜೈವಿಕ ರಾಸಾಯನಿಕ ಶಾಸ್ತ್ರ, ರೋಗ ಶಾಸ್ತ್ರ, ಔಷಧ ಶಾಸ್ತ್ರ,  ಸೂಕ್ಷ್ಮಜೀವಿಶಾಸ್ತ್ರ, ಶಸ್ತ್ರಕ್ರಿಯಾ ಶಾಸ, ಚಿಕಿತ್ಸಾ ಶಾಸ್ತ್ರ ಹೀಗೆ ಹಲವಾರು ವಿಷಯಗಳನ್ನೊಳಗೊಂಡಿದೆ.

ಮೂಲ ವಿಜ್ಞಾನದ ವಿಷಯಗಳು ಈ ಹಿಂದೆ ಕನ್ನಡದಲ್ಲಿ ಬೋಧನೆಯಾಗುತ್ತಿದ್ದು, ಅವುಗಳಿಗೆ ಸಂಬಂಧಿಸಿದ ಕನ್ನಡ ತಾಂತ್ರಿಕ ಪದಗಳು ಈಗಾಗಲೆ ಕನ್ನಡದಲ್ಲಿ ಲಭ್ಯವಿವೆ. ಸಮಸ್ಯೆ ಇರುವುದು ವೈದ್ಯತಾಂತ್ರಿಕ ಪದಗಳದು. ರೋಗ ತೊಂದರೆಗಳಿಗೆ ಸಂಬಂಧಿಸಿದಂತೆ ರೋಗಿಗಳೇ ಪದಗಳನ್ನು ನೀಡು ತ್ತಾರೆ.

ಅವುಗಳಿಗೆ ಸಂಬಂಧಿಸಿದ ವಿವರಗಳನ್ನೂ ಸಹ ಅವರೇ ಕನ್ನಡದಲ್ಲಿ ವಿವರಿಸುತ್ತಾರೆ. ಕನ್ನಡದಲ್ಲಿ ವೈದ್ಯ ತಾಂತ್ರಿಕ ಪದಗಳನ್ನು ಸೃಷ್ಟಿ ಮಾಡುವಾಗ ಆಂಗ್ಲಭಾಷೆಯಲ್ಲಿ ವೈದ್ಯ ತಾಂತ್ರಿಕಪದಗಳು ಸೃಷ್ಟಿಯಾಗಿರುವ ಹಿನ್ನೆಲೆಯನ್ನು ಗಮನಿಸಿಕೊಂಡು ಅದೇ ಮಾನದಂಡಗಳನ್ನು ಅನುಸರಿಸಿಕೊಂಡು ಕನ್ನಡದಲ್ಲಿ ಹೊಸ ತಾಂತ್ರಿಕ ಪದಗಳನ್ನು ಸೃಷ್ಟಿಮಾಡಬೇಕು. ಇಲ್ಲವಾದಲ್ಲಿ ಹಾಲಿ ಇರುವ ಆಂಗ್ಲತಾಂತ್ರಿಕ ಪದವನ್ನೇ ಕನ್ನಡೀಕರಣ ಮಾಡಿ ಕೊಳ್ಳಬೇಕು.

ಆಂಗ್ಲಭಾಷೆಯಲ್ಲಿರುವ ಬಹುಪಾಲು ವೈದ್ಯತಾಂತ್ರಿಕ ಪದಗಳು ಗ್ರೀಕ್ ಮತ್ತು ಲ್ಯಾಟಿನ್ ಗಳಿಂದ ಬಂದವುಗಳಾಗಿದ್ದು, ಇದೇ ಮಾನದಂಡವನ್ನು ಅನುಸರಿಸಿ ಆಂಗ್ಲಭಾಷೆ ತನ್ನ ಪದಸಂಪತ್ತನ್ನು ವಿಸ್ತಾರಗೊಳಿಸಿಕೊಂಡು ಶ್ರೀಮಂತವಾಗಿದೆ. ಇದೇ ನಿಯಮಗಳನ್ನು ಅನುಸರಿಸಿ ನಾನು ವೈದ್ಯಕೀಯ
ನಿಘಂಟು ರಚಿಸಿದ್ದೇನೆ. ವೈದ್ಯತಾಂತ್ರಿಕ ಪದಗಳನ್ನು ಸೃಷ್ಟಿ ಮಾಡುವಾಗ ನಾನು ಅನುಸರಿಸಿರುವ ಮಾನದಂಡಗಳು ಹೀಗಿವೆ.

೧. ಸರಳ ಭಾಷೆಯಲ್ಲಿರಬೇಕು. ಎಲ್ಲರಿಗೂ ಅದರಲ್ಲೂ ವೈದ್ಯರಿಗೆ ಮೊದಲು ಅರ್ಥವಾಗುವ ಆಡುಭಾಷೆಯಲ್ಲಿರಬೇಕು. ಇಲ್ಲದಿದ್ದಲ್ಲಿ ವೃತ್ತಿಬಾಂಧವ ರಿಂದಲೇ ತಿರಸ್ಕೃತವಾಗುತ್ತದೆ. ಹಾಗಾದಾಗ ಇನ್ನಿತರರನ್ನು ತಲುಪುವುದಿಲ್ಲ.

೨. ಕ್ಲಿಷ್ಟ, ಸಂಕೀರ್ಣ ಆಂಗ್ಲ ತಾಂತ್ರಿಕ ವೈದ್ಯಕೀಯ ಪದಗಳನ್ನು ಯಥಾವತ್ತಾಗಿ ಉಪಯೋಗಿಸಬೇಕು ಅಥವಾ ಕನ್ನಡೀಕರಣಗೊಳಿಸಬೇಕು.

ಉದಾ: * ಸಿರೋಸಿಸ್. ಇದು ಈಲಿನಾಶ, ಈಲಿಜೀವಕೋಶಗಳ ಪುನರೋತ್ಪತ್ತಿ, ಲೋಬ್ ವಿನ್ಯಾಸ ನಾಶವಾಗುವಿಕೆ, ನಾರೇರಿಕೆ ಇವೆಲ್ಲ ನ್ಯೂನತೆಗಳನ್ನು ಸೂಚಿಸುವ ಸಂಕೀರ್ಣ ಅರ್ಥಗಳನ್ನೊಳಗೊಂಡ ಪದ. ಇವೆಲ್ಲ ಅರ್ಥಗಳನ್ನೊಳಗೊಂಡ ಸರಿಸಮಾನ ಕನ್ನಡಪದ ಸೃಷ್ಟಿ ಅಸಾಧ್ಯವಾದುದರಿಂದ ಇದನ್ನು ಯಥಾವತ್ತಾಗಿ ಸ್ವೀಕರಿಸುವುದು ಸೂಕ್ತ.

೩. ಕಾಯಿಲೆಗಳನ್ನು ನಾಮಪದಗಳಂತೆ ಯಥಾವತ್ತಾಗಿ ಸ್ವೀಕರಿಸಬೇಕು. ಉದಾ : ನ್ಯುಮೋನಿಯ, ರಿಕೆಟೋಸಿಸ್, ಸಿಸ್ಟಮಿಕ್ ಲ್ಯೂಪಸ್ ಏರಿಥೊಮೆ ಟೋಸಿಸ್ (ವ್ಯಾಪಕ ಕೆಂಪೇರಿಕೆಯ ಲ್ಯೂಪಸ್), ಪೆಂಪಿಗಸ್, ರಿಕೆಟ್ಸ್, ಕಾಲರಾ, ಮಲೇರಿಯಾ, ಕೊರೋನಾ ಇತ್ಯಾದಿ.

೪. ಕೆಲವೊಮ್ಮೆ ಕಾಯಿಲೆಗಳಿಗೂ ಮತ್ತು ರೋಗ ನ್ಯೂನತೆ (ಪೆಥಾಲಾಜಿಕಲ್ ಲೀಸನ್ಸ್)ಗಳಿಗೂ ಕನ್ನಡದಲ್ಲಿ ಪದ ಸೃಷ್ಟಿಸಬಹುದು. ಡಯಾಬಿಟಿಸ್
ಮೆಲಿಟಿಸ್‌ಗೆ – ಸಿಹಿ ಮೂತ್ರರೋಗ, ಮಧುಮೇಹ, ಸಕ್ಕರೆ ಕಾಯಿಲೆ. ಮಯೋಕಾರ್ಡಿಯಲ್ ಇನ್ ಫಂಕ್ಷನ್‌ಗೆ – ನಿರಕ್ತ ಹೃದಯಸ್ನಾಯು ಸಾವು,
ಹಾರ್ಟ್ ಫೈಲ್ಯೂರ್‌ಗೆ – ಹೃದಯದ ವಿಫಲತೆ, ನೆರ್ಫ್ರೈಟಿಸ್‌ಗೆ- ಮೂತ್ರಜನಕಾಂಗೂತುರಿ, ಲ್ಯೂಕೊಸೈಟೋಸಿಸ್- ಬಿಳಿರಕ್ತಕಣೇರಿಕೆ, ಡಿಜೆನರೇಷನ್‌ಗೆ-
ರಚನಾನವನತಿ, ನೆಕ್ರೋಸಿಸ್‌ಗೆ-ಅಂಗಾಂಶ ಸಾವು, ಗ್ಯಾಂಗ್ರೀನ್‌ಗೆ – ಸೋಂಕಿನ ಅಂಗಾಂಶ ಸಾವು, ವೈರಲ್‌ಎನ್‌ಸಿ-ಲೈಟಿಸ್‌ಗೆ – ವೈರಸ್‌ನ ಮೆದುಳೂತುರಿ ಇತ್ಯಾದಿ.

೫. ಮಿಶ್ರಿತಪದಗಳ ಸೃಷ್ಟಿ- ತುಂಡು ಪದಗಳಿಂದಾದ ಆಂಗ್ಲಪದಕ್ಕೆ ಸರಳ ಕನ್ನಡ ಪದ ನೀಡಲಾಗದ ತುಂಡು ಪದದ ಆಂಗ್ಲದ ಒಂದು ತುಂಡು ಪದವನ್ನು ಹಾಗೇ ಉಳಿಸಿಕೊಂಡು, ಕನ್ನಡದಲ್ಲಿ ಸರಳ ಪದ ನೀಡಬಹುದಾದ ತುಂಡು ಪದದ ಮತ್ತೊಂದಕ್ಕೆ ಕನ್ನಡಪದ ನೀಡಿ ಆಂಗ್ಲ ಮತ್ತು ಕನ್ನಡ ಪದಗಳನ್ನು ಮಿಶ್ರಣ ಮಾಡಿ ‘ಆಂಗ್ಲೀಯಕನ್ನಡ’ ಮಿಶ್ರಣಪದವನ್ನು ಸೃಷ್ಟಿಸಬಹುದು.

ಆಂಗ್ಲ ಭಾಷೆಯಲ್ಲೂ ಈ ರೀತಿ ಗ್ರೀಕ್, ಲ್ಯಾಟಿನ್ ಮತ್ತು ಆಂಗ್ಲಭಾಷೆಗಳ ತುಂಡು ಪದಗಳ ಜೋಡಣೆಯಿಂದ ಮಿಶ್ರಿತ ಪದಗಳು ಸೃಷ್ಟಿಯಾಗಿವೆ. ಉದಾ: ರೊಮಟಾಯ್ಡ್ ಆರ್ತೈಟಿಸ್ ಪದದಲ್ಲಿ ರೊಮಟಾಯ್ಡ್+ಅರ್ಥೈಟಿಸ್ ಎಂಬ ಎರಡು ಪದಗಳಿದ್ದು, ರೊಮಟಾಯ್ಡ್ ಅನ್ನು ಹಾಗೆ ಉಳಿಸಿಕೊಂಡು ಇದಕ್ಕೆ ಕೀಲೂತುರಿಯನ್ನು ಸೇರಿಸಿ ರೊಮಾಟಾಯ್ಡ್ ಕೀಲೂತುರಿ ಎಂಬ ಪದವನ್ನು ಸೃಷ್ಟಿಸಬಹುದು.

ಹೀಗೆ ಕಾರ್ಡಿಯೊಮ ಯೊಪಥಿ(ಕಾರ್ಡಿಯೊ+ಮಯೊ+ಅಪಥಿ)ಗೆ, ಹೃದಯಸ್ನಾಯು+ಅಪಥಿಗೆ ಹೃದಯಸ್ನಾಯಾಪಥಿ ಎಂಬ ಕನ್ನಡಪದವನ್ನು ಸೃಷ್ಟಿಸಬಹುದು. ಎಲೆಕ್ಟ್ರೊ(ಆಂಗ್ಲ)+ಕಾರ್ಡಿಯೊ(ಗ್ರೀಕ್) +ಗ್ರಾಂ(ಗ್ರೀಕ್)= ಎಲೆಕ್ಟ್ರೊಕಾರ್ಡಿಯೊಗ್ರಾಂ ಇದು ಆಂಗ್ಲ ಮತ್ತು ಗ್ರೀಕ್‌ಗಳ ಮಿಶ್ರಿತ ಪದ. ಇದಕ್ಕೆ ಕನ್ನಡದಲ್ಲಿ ವಿದ್ಯುತ್+ಹೃತ್+ನಕ್ಷೆ= ಹೃತ್ ವಿದ್ಯುತ್ ನಕ್ಷೆ. ಇದೇ ರೀತಿ ಎಲೆಕ್ಟ್ರೊಎನ್‌ಸಿ-ಲೊಗ್ರಾಂಗೆ ಮೆದುಳಿನ ವಿದ್ಯುತ್ ನಕ್ಷೆ.

೬. ಮಿಶ್ರಿತ ಆಂಗ್ಲತಾಂತ್ರಿಕ ಪದದ ನಿಗೂಢ ಅರ್ಥಕ್ಕೆ ಸಮಾನವಾದ ಅರ್ಥಕೊಡುವ ಪದ ಸೃಷ್ಟಿ : ಕೆಲವು ಆಂಗ್ಲತಾಂತ್ರಿಕ ಪದಗಳು ನಿಗೂಢ
ಅರ್ಥಗಳನ್ನು ಒಳಗೊಂಡಿದ್ದು, ಅದೇ ಅರ್ಥ ಬರುವಂತೆ ಕನ್ನಡದಲ್ಲಿ ಪದಗಳನ್ನು ಸೃಷ್ಟಿಸಬೇಕು.

ಉದಾ: ಇನ್-ಮೇಷನ್- ಕೆಂಪು+ಊತ+ತುರಿ =ಕೆಂಪೂತುರಿ. ನಿಯೋಪ್ಲೇಸಿಯ=ನಿಯೋ-ಹೊಸ, ಪ್ಲೇಸಿಯ-ವೃದ್ಧಿ (ಬೆಳವಣಿಗೆ) = ಹೊಸ ಬೆಳವಣಿಗೆ
ಅಥವಾ ನವವೃದ್ಧಿ. ಮೆಟಪ್ಲೇಸಿಯ – ಮೆಟ=ವಿಭಿನ್ನ + ಪ್ಲೇಸಿಯ=ಬೆಳವಣಿಗೆ=ವಿಭಿನ್ನ ಬೆಳವಣಿಗೆ.

೭. ಪ್ರತ್ಯಯ ಮತ್ತು ಪೂರ್ವ ಪ್ರತ್ಯಯಗಳು (ಸಫಿಕ್ಸ್ ಮತ್ತು ಪ್ರೀಫಿಕ್ಸ್) : ಹಲವಾರು ಆಂಗ್ಲ ವೈದ್ಯತಾಂತ್ರಿಕ ಪದಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಪೂರ್ವ ಮತ್ತು ನಂತರದ ಪ್ರತ್ಯಯಗಳಿಗೆ ಸಮಾನ ಕನ್ನಡ ಪದಗಳನ್ನು ಕಂಡುಕೊಳ್ಳಬಹುದು. ಉದಾ: ಒಸಿಸ್, ಟಿಕ್, ಓಮ, ಮಿಯ, ಮೆಟ್, ಪ್ರಿ, ಪ್ರೊ, ಯೊರೊ, ಗ್ಯಾಸ್ಟ್ರೋ, ಲಜಿ ಇತ್ಯಾದಿ.

ಓಸಿಸ್‌ಗೆ ಸ್ಥಿತಿ, ಏರಿಕೆ, ಐಟಿಸ್‌ಗೆ ಕೆಂಪೂತುರಿ, ಲಜಿಗೆ ಶಾಸ, ವಿಜ್ಞಾನ, ಲೈಸಿಸ್‌ಗೆ ನಾಶ, ವಿಭಜ, ಓಮಗೆ ಗೆಡ್ಡೆ, ಪ್ರೀಗೆ ಪೂರ್ವ, ಪ್ಲೇಸಿಯಗೆ ಬೆಳವಣಿಗೆ, ಟಿಕ್
ಗೆ ಕಾರಕ, ನ್ಯೂರೊಗೆ ನರ, ಗ್ಯಾಸ್ಟ್ರೊಗೆ ಜೀರ್ಣಾಂಗ, ಯುರೊಗೆ ಮೂತ್ರ, ಇಕ್ಸ್‌ಗೆ ವಿಜ್ಞಾನ.

ತ್ರಾಂಬೊಸೈಟೋಸಿಸ್‌ಗೆ ತ್ರಾಂಬೊಸೈಟ್+ ಒಸಿಸ್= ರಕ್ತಹೆಪ್ರೋತ್ಪತ್ತಿಕಣೇರಿಕೆ., ಹಿಮೊಲೈಟಿಕ್(ಹೀಮ್ +ಲೈಟಿಕ್)ಗೆ, ಕೆಂಪುರಕ್ತಕಣನಾಶಕ, ಹಿಮೊಲೈಸಿಸ್ ಗೆ ಕೆಂಪುರಕ್ತಕಣ ನಾಶ (ವಿಭಜನೆ), -ಬ್ರೋಮ(-ಬರ್+ಓಮ)ಗೆ ನಾರಿನಗೆಡ್ಡೆ, ಪ್ರಿ ಕ್ಯಾನ್ಸರಸ್(ಪ್ರಿ+ಕ್ಯಾನ್ಸರ್) ಗೆ ಕ್ಯಾನ್ಸರ್ ಪೂರ್ವ
೮. ವೈದ್ಯತಾಂತ್ರಿಕ ಪದದ ಪೂರ್ಣ ಅರ್ಥವನ್ನು ಅದನ್ನು ಬಳಸುವ ಸಂದರ್ಭದ ವೈಜ್ಞಾನಿಕ ದೃಷ್ಟಿಕೋನವನ್ನು ಅರ್ಥಮಾಡಿಕೊಂಡು, ಅದೇ ಅರ್ಥ
ಬರುವಂತೆ ಕನ್ನಡ ಪದ ಸೃಷ್ಟಿಸಲು ಸಾಧ್ಯವಾದಲ್ಲಿ  ಮಾತ್ರ ಹೊಸ ಕನ್ನಡ ಪದವನ್ನು ಸೃಷ್ಟಿಸಬೇಕು.

ಇಲ್ಲವಾದಲ್ಲಿ ಆಂಗ್ಲ ಪದವನ್ನು ಹಾಗೆಯೇ ಅಥವಾ ಕನ್ನಡೀಕರಣಗೊಳಿಸಿ (ಕೊನೆ ಅಕ್ಷರಕ್ಕೆ ಕೊಂಬುಕೊಟ್ಟು) ಅದರ ಅರ್ಥವನ್ನು ವಿವರಿಸಬೇಕು. ಪದದ ಅರ್ಥ ವಿಕೃತಗೊಳ್ಳಬಾರದು. ಹೀಗೆ ಸಂದರ್ಭಕ್ಕನುಗುಣವಾಗಿ ಹೊಂದಿಕೊಳ್ಳುವ ಮೇಲ್ಕಂಡ ಮಾನದಂಡವನ್ನು ಅನುಸರಿಸಿ ಅರ್ಥವಾಗುವ, ಸರಳವಾದ, ನೈಜ ಅರ್ಥಕ್ಕೆ ಧಕ್ಕೆ ಬಾರದ ಹಾಗೆ ಕನ್ನಡ ವೈದ್ಯತಾಂತ್ರಿಕ ಪದಗಳನ್ನು ಸೃಷ್ಟಿಸಬೇಕು.

ಇಲ್ಲವಾದಲ್ಲಿ ಹಾಲಿ ಆಂಗ್ಲ ತಾಂತ್ರಿಕ ಪದವನ್ನೇ ಉಳಿಸಿಕೊಳ್ಳಬೇಕು. ಆಂಗ್ಲರು ಇದೇ ಮಾನದಂಡಗಳನ್ನು ಬಳಸಿಕೊಂಡಿದ್ದಾರೆ. ಕನ್ನಡದಲ್ಲಿ ವೈದ್ಯ
ತಾಂತ್ರಿಕ ಪದಗಳನ್ನು ಸೃಷ್ಟಿಮಾಡುವಾಗ ಇದೇ ಮಾನದಂಡಗಳನ್ನು ಬಳಸಿಕೊಳ್ಳಬೇಕು. ನಾನು ರಚಿಸಿರುವ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಪ್ರಕಟಗೊಳ್ಳುತ್ತಿರುವ ಬೃಹತ್ ಕನ್ನಡ ವೈದ್ಯಕೀಯ ನಿಘಂಟು ಮತ್ತು ಪದಕೋಶದ ರಚನೆಯಲ್ಲಿ ಇದೇ ಮಾನದಂಡಗಳನ್ನು
ಅನುಸರಿಸಲಾಗಿದೆ.

ಕನ್ನಡ ಭಾಷೆ ವೈದ್ಯಕೀಯ ಶಿಕ್ಷಣವನ್ನು ಅರಗಿಸಿಕೊಳ್ಳಲು ಸರ್ವಶಕ್ತವಾಗಿದೆ. ಸರ್ಕಾರ ಕೇಂದ್ರದ ನಿರ್ಧಾರವನ್ನು ಅನುಷ್ಠಾನಗೊಳಿಸಬೇಕು. ರಾಜೀವ್
ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ ಈ ದಿಕ್ಕಿನಲ್ಲಿ ವೈದ್ಯಕೀಯ ಪಠ್ಯ ಪುಸ್ತಕಗಳನ್ನು ರಚಿಸುವಲ್ಲಿ ಕಾರ್ಯಯೋಜನೆಗಳನ್ನು ರೂಪಿಸಬೇಕು.