ಹಿಂದಿರುಗಿ ನೋಡಿದಾಗ
ನಗರಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳಿರುವುದರಿಂದ ಪ್ರಸವವು ಇಂದು ಸಮಸ್ಯೆಯೇನಲ್ಲ. ಸಿಸೇರಿಯನ್ ಮೂಲಕ ಮಗುವನ್ನು ಹೊರತೆಗೆಯುವುದು ಸಾಮಾನ್ಯವಾಗುತ್ತಿದೆ. ಆದರೆ ಹಳ್ಳಿಗಳಲ್ಲಿ ವೈದ್ಯಕೀಯ ಸೌಲಭ್ಯಗಳಿಲ್ಲದೆ, ಸೂಲಗಿತ್ತಿಯರೇ ಹೆರಿಗೆ ಮಾಡಿಸುತ್ತಿದ್ದಾರೆ ಎಂಬುದು ಕಟುವಾಸ್ತವ.
ಸೂಲಗಿತ್ತಿ ನರಸಮ್ಮ (1920-2018) ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ನಿವಾಸಿ. 98 ವರ್ಷ ಬದುಕಿದ್ದ ಈಕೆ ತಮ್ಮ 70 ವರ್ಷಗಳ ‘ಸೂಲಗಿತ್ತಿ ವೃತ್ತಿ’ಯಲ್ಲಿ ಸುಮಾರು 20000 ಹೆರಿಗೆ ಮಾಡಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂದರೆ ಸರಿಸುಮಾರು ದಿನಕ್ಕೊಂದು ಹೆರಿಗೆ ಮಾಡಿಸಿರಬೇಕು. ತಮ್ಮ ಅಜ್ಜಿ ಮರಿಗೆಮ್ಮನವರಿಂದ ಪ್ರಸವದ ಎಲ್ಲ ರಹಸ್ಯ ಹಾಗೂ ತಂತ್ರಗಳನ್ನು ನರಸಮ್ಮ ಕಲಿತರಂತೆ.
ಸುತ್ತಮುತ್ತಲ ಹಳ್ಳಿಗರ, ವಲಸೆ ಬರುವ ತಾಂಡಾ ಜನರ ಹೆರಿಗೆಗಳನ್ನು ಮಾಡುತ್ತಿದ್ದುದು ಈಕೆಯೇ. ಇವರ ಅನುಪಮ ಸೇವೆಗೆ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರದಾನಿಸಿದ್ದರೆ, ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಭಾರತ ಸರಕಾರವಂತೂ ಈಕೆಗೆ 2018ರಲ್ಲಿ ‘ಪದ್ಮಶ್ರೀ’ ಪುರಸ್ಕಾರವಿತ್ತು ಸನ್ಮಾನಿಸಿದೆ.
ಸೂಲಗಿತ್ತಿಯರು, ನಮಗೆ ಪರಿಚಿತವಾದ ಶಬ್ದ. ಇದು ’ಸೂತಿಕಾವೃತ್ತಿ’ ಎಂಬ ಸಂಸ್ಕೃತ ಶಬ್ದದ ಕನ್ನಡ ರೂಪಾಂತರ. ಸರಾಗ ಹೆರಿಗೆ ಮಾಡಿಸುವುದು ಸೂಲಗಿತ್ತಿಯರ ಬಹು ಮುಖ್ಯ ಕೆಲಸ. ಸೂಲಗಿತ್ತಿಯರನ್ನು ಇಂಗ್ಲಿಷ್ನಲ್ಲಿ ‘ಮಿಡ್ ವೈಫ್’ ಎನ್ನುವು ದುಂಟು. ಹೆರಿಗೆ ಮಾಡಿಸುವ ವಿಜ್ಞಾನಕ್ಕೆ ‘ಮಿಡ್ವೈಫ್ರಿ’ ಅಥವ ‘ಪ್ರಸವ ವಿಜ್ಞಾನ’ ಎನ್ನಬಹುದು. ಪ್ರಸವ ಎನ್ನುವುದೊಂದು ನೈಸರ್ಗಿಕ ಕ್ರಿಯೆ.
ಜೀವಜಗತ್ತಿನಲ್ಲಿ ಉನ್ನತವರ್ಗದ ಜೀವಿಗಳು ಮೊಟ್ಟೆಗಳ ಮೂಲಕ ಸಂತಾನವರ್ಧನೆ ನಡೆಸುವುದು ಒಂದು ಸರ್ವಸಾಮಾನ್ಯ
ನಿಯಮ. ಆದರೆ ಈ ನಿಯಮಕ್ಕೆ ಸಸ್ತನಿಗಳು ಅಪವಾದ. ಸಸ್ತನಿಗಳು ತಮ್ಮ ಸಂತಾನವನ್ನುಗರ್ಭದಲ್ಲೇ ಬೆಳೆಸಿ, ಸಕಾಲದಲ್ಲಿ ಪ್ರಸವದ ಮೂಲಕ ಆ ಮರಿಯನ್ನು ಹೊರಜಗತ್ತಿಗೆ ತಂದು ಹಾಲೂಡಿಸಿ ಬೆಳೆಸುತ್ತವೆ. ಮನುಷ್ಯನೂ ಓರ್ವ ಸಸ್ತನಿಯಾಗಿರುವ ಕಾರಣ, ಪ್ರಸವದ ಮೂಲಕ ಸಂತಾನವರ್ಧನೆ ನಡೆಸುವುದು ಅನಿವಾರ್ಯವಾಗಿದೆ. ಜೀವಜಗತ್ತಿನಲ್ಲಿ ದಿನತುಂಬಿದ ಮೇಲೆ, ಜೀವಿಯೊಂದು ಸ್ವಯಂ ತನ್ನ ಮರಿ/ ಮರಿಗಳನ್ನು ಹೆರಬೇಕಾಗುತ್ತದೆ. ಹೆರಿಗೆ ಮಾಡಿಸಲು ಯಾವುದೇ ಡಾಕ್ಟರ್, ನರ್ಸ್ ಅಥವಾ ಸೂಲಗಿತ್ತಿ ಇರುವುದಿಲ್ಲ.
ಆದರೆ ಮನುಷ್ಯರಲ್ಲಿ ಮಾತ್ರ, ಸುಸೂತ್ರವಾಗಿ ಹೆರಿಗೆ ಮಾಡಿಸಲು ವೈದ್ಯರ ಮತ್ತು ಸಹಾಯಕ ವೈದ್ಯಕೀಯ ಸಿಬ್ಬಂದಿಯ ದಂಡೇ ಸಿದ್ಧವಾಗಿರುತ್ತದೆ. ನೈತಿಕ ಒತ್ತಾಸೆ ನೀಡಲು ಎರಡೂ ಕುಟುಂಬಗಳ ಹಿರಿಯರು, ಬಂಧುಮಿತ್ರರು ಇರುವುದು ಪರೂಪವೇನಲ್ಲ. ಹೆರಿಗೆಯೆನ್ನು ವುದು ತಾಯಂದಿರಿಗೆ ಪುನರ್ಜನ್ಮವಿದ್ದಂತೆ ಎಂಬ ಮಾತನ್ನು ಬಹುಶಃ ಎಲ್ಲ ತಾಯಂದಿರೂ ಒಪ್ಪಬಹುದು.
ನಗರಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳಿರುವುದರಿಂದ, ಪ್ರಸವವು ಇಂದು ದೊಡ್ಡ ಸಮಸ್ಯೆಯೇನಲ್ಲ. ಹೆರಿಗೆ ಸ್ವಲ್ಪ ‘ಕಷ್ಟವಾಗಿದೆ’ ಎನಿಸುತ್ತಿದ್ದಂತೆ ಸಿಸೇರಿಯನ್ ಶಸಚಿಕಿತ್ಸೆ ಮೂಲಕ ಮಗುವನ್ನು ಹೊರತೆಗೆಯುವುದು ಸಾಮಾನ್ಯವಾಗುತ್ತಿದೆ.
ಆದರೆ ಹಳ್ಳಿಗಳಲ್ಲಿ ಇಂದಿಗೂ ಸೂಕ್ತ ವೈದ್ಯಕೀಯ ಸೌಲಭ್ಯಗಳಿಲ್ಲದೆ, ತಲೆತಲಾಂತರವಾಗಿ ಹೆರಿಗೆ ಮಾಡಿಸುತ್ತ ಬಂದಿರುವವರು
ನರಸಮ್ಮನಂಥ ಸೂಲಗಿತ್ತಿಯರೇ ಎಂಬುದು ಕಟುವಾಸ್ತವ. ಪ್ರಸವ ವಿಜ್ಞಾನ ಹಾಗೂ ಸೂಲಗಿತ್ತಿತನ ಬೆಳೆದುಬಂದ ಹಾದಿ ಕುತೂಹಲಕರವಾಗಿದೆ. ಮನುಷ್ಯರಲ್ಲಿ ನೈಸರ್ಗಿಕ ಹೆರಿಗೆಯ ಮೊದಲ ದಾಖಲೆ ಸುಮಾರು 40000 ವರ್ಷಗಳ ಹಿಂದಿನ ಗುಹಾ ಚಿತ್ರಗಳಲ್ಲಿ ಕಂಡುಬರುತ್ತದೆ. ಈ ಚಿತ್ರಗಳಲ್ಲಿ ಮಹಿಳೆ ಒಬ್ಬಂಟಿಯಾಗೇ ಮಗುವನ್ನು ಹೆರುತ್ತಿರುವಂತೆ ಚಿತ್ರಿತವಾಗಿದೆ. ಅಂದಿ ನಿಂದ ನಾಗರಿಕತೆಗಳು ಆರಂಭವಾಗುವವರಿಗೆ, ಅಂದರೆ ಕ್ರಿ.ಪೂ.11000 ವರ್ಷಗಳವರೆಗೆ, ಮನುಷ್ಯ ಅಲೆಮಾರಿಯಾಗಿದ್ದ.
100-150 ಜನರ ಸಣ್ಣ ಗುಂಪುಗಳಲ್ಲಿ ಆಹಾರ ದೊರೆಯುವಂಥ ಸ್ಥಳಗಳನ್ನು ಹುಡುಕಿಕೊಂಡು ಹೋಗುತ್ತಿದ್ದ. ಅಂದಿನ ದಿನಗಳಲ್ಲಿ ಹೇಗೆ ಹೆರಿಗೆ ಮಾಡುತ್ತಿದ್ದರು ಎಂಬ ಬಗ್ಗೆ ಮಾಹಿತಿಯಿಲ್ಲ. ಪ್ರಾಚೀನ ಈಜಿಪ್ಷಿಯನ್ ಸಂಸ್ಕೃತಿಯ ವೇಳೆಗೆ ಸಾಮಾಜಿಕ ವ್ಯವಸ್ಥೆ ಬಲವಾಗಿ ಬೇರುಬಿಟ್ಟಿತ್ತು. ನಾಗರಿಕತೆಯ ಒಂದು ಅಂಗವಾಗಿ ಹೆರಿಗೆ ಮಾಡಿಸುವ ತಜ್ಞರು ಅಸ್ತಿತ್ವಕ್ಕೆ ಬಂದಿದ್ದರು. ಕೇವಲ ಮಹಿಳೆಯರೇ ಹೆರಿಗೆ ಮಾಡಿಸುತ್ತಿದ್ದರು. ಈಬರ್ಸ್ ಪ್ಯಾಪಿರಸ್ (ಕ್ರಿ.ಪೂ.1900- ಕ್ರಿ.ಪೂ.1550) ಈ ಬಗ್ಗೆ ಅಗತ್ಯ ಪುರಾವೆ ಒದಗಿ ಸುತ್ತದೆ.
ಈ ಬರ್ಸ್ ದಾಖಲೆಯಲ್ಲಿ ಸುರಕ್ಷಿತವಾಗಿ ಹಾಗೂ ತ್ವರಿತವಾಗಿ ಹೆರಿಗೆ ಮಾಡಿಸುವ ವಿವಿಧ ತಂತ್ರಗಳ ಬಗ್ಗೆ ವಿವರಣೆಯಿದೆ.
ಜತೆಗೆ ನವಜಾತ ಶಿಶುವಿನ ಆರೈಕೆ ಹೇಗೆ ಮಾಡಬೇಕು ಎಂಬುದರ ವಿವರಣೆಯೂ ಇದೆ. ಕ್ರಿ.ಪೂ. 1700ರ ಕಾಲದ ‘ವೆಸ್ಟ್ಕಾರ್ ಪ್ಯಾಪಿರಸ್’ ದಾಖಲೆಯಲ್ಲಿ ಪ್ರಸವದ ಸಾಧ್ಯತೆಯ ದಿನಾಂಕವನ್ನು ಮುಂಚಿತವಾಗೇ ಲೆಕ್ಕ ಹಾಕುವ ತಂತ್ರದ ವಿವರಣೆಯಿದೆ. ಜತೆಗೆ ಹೆರಿಗೆ ಮಾಡಿಸಲು ವಿವಿಧ ಕುರ್ಚಿಗಳ ಅನುಕೂಲತೆ-ಅನಾನುಕೂಲತೆಗಳ ಬಗ್ಗೆಯೂ ಮಾಹಿತಿಯಿದೆ.
ಅಲೆಮಾರಿ ಪೂರ್ವಜರಲ್ಲಿ ಹೆಣ್ಣುಮಕ್ಕಳು ಬಹುಶಃ ನಿಂತುಕೊಂಡೇ ಅಥವಾ ಕುಕ್ಕರಗಾಲಿನಲ್ಲಿ ಕುಳಿತು ಪ್ರಸವವನ್ನು ಮಾಡು ತ್ತಿರಬಹುದು. ಆದರೆ ಈಜಿಪ್ಷಿಯನ್ ಸಂಸ್ಕೃತಿಯ ವೇಳೆಗೆ ಗರ್ಭಿಣಿಯನ್ನು ವಿಶೇಷ ಕುರ್ಚಿಯಲ್ಲಿ ಕೂರಿಸಿ ಹೆರಲು ಅವಕಾಶ ಮಾಡಿಕೊಟ್ಟಿದ್ದರು (ಈಗ ತಾಯಂದಿರು ಸಾಮಾನ್ಯವಾಗಿ ಹೆರಿಗೆ ಟೇಬಲ್ಲಿನ ಮೇಲೆ ಮಲಗಿ ಹೆರಿಗೆ ಮಾಡಿಸಿ ಕೊಳ್ಳುವು ದುಂಟು. ಈ ಮಟ್ಟ ಮುಟ್ಟಲು ಸಾವಿರಾರು ವರ್ಷ ಬೇಕಾದವು ಎಂಬುದು ಮನನೀಯ ವಿಚಾರ). ನೈಲ್ ನದಿಯ ದಡದಲ್ಲಿ ‘ಎಸ್ನೆ ದೇವಾಲಯ’ವಿದೆ. ಇದರ ಉಬ್ಬುಶಿಲ್ಪವೊಂದು ಕ್ಲಿಯೋಪಾತ್ರಳ ಹೆರಿಗೆಯ ವಿವರಗಳನ್ನು ನೀಡುತ್ತದೆ. ಆಕೆ ಕುಕ್ಕರುಗಾಲಿ ನಲ್ಲಿ ಕುಳಿತಿದ್ದಾಳೆ.
ಐವರು ಮಹಿಳೆಯರು ಆಕೆಯನ್ನು ಹಿಡಿದುಕೊಂಡಿದ್ದಾರೆ. ಮಗುವು ಬಹುಪಾಲು ಹೊರಗೆ ಬಂದಿದೆ. ಈಜಿಪ್ಷಿಯನ್ ಸಂಸ್ಕೃತಿ ಯಲ್ಲಿ ಪ್ರಸವವು ಸರಾಗವಾಗಿ ನಡೆಯುವಂತೆ ಇಸಿಸ್ ದೇವತೆ ನೆರವಾದರೆ, ಸಂತಾನ ಭಾಗ್ಯವನ್ನು ಮಾತ್ರ ನಿಮಿರಿನಿಂತ ಬೃಹತ್ ಶಿಶ್ನವಿದ್ದ ಫಲವಂತಿಕೆಯದೈವ (ಗಾಡ್ ಆಫಗ ಫರ್ಟಿಲಿಟಿ) ಮಿನ್ ಕರುಣಿಸುತ್ತಿದ್ದ ಪ್ರಾಚೀನ ಗ್ರೀಸ್ ವೈದ್ಯ ಹಿಪ್ಪೋಕ್ರೇಟ್ಸ್ ‘ಆಧುನಿಕ ವೈದ್ಯಕೀಯದ ಪಿತಾಮಹ’ ಎಂಬ ಗೌರವಕ್ಕೆ ಪಾತ್ರನಾದವನು ಈತ ಪ್ರಸವವನ್ನು ಮಾಡುವ ಬಗ್ಗೆ ವೈದ್ಯರಿಗೆ, ಸೂಲಗಿತ್ತಿಯರಿಗೆ ತರಬೇತಿ ನೀಡುತ್ತಿದ್ದ.
ಅರಿಸ್ಟಾಟಲ್ ‘ಭ್ರೂಣವಿಜ್ಞಾನದ ಪಿತಾಮಹ’ ಎಂಬ ಗೌರವಕ್ಕೆ ಪಾತ್ರನಾದವನು. ಈತ ಸೀಯರ ಬಾಹ್ಯ ಮತ್ತು ಆಂತರಿಕ ಜನನಾಂಗಗಳ ರಚನೆಯನ್ನು, ಗರ್ಭಾಶಯದ ಪರಿಚಯವನ್ನು ಸೂಲಗಿತ್ತಿಯರಿಗೆ ಮಾಡಿಸುತ್ತಿದ್ದ. ಈಫಿಸಸ್ ದೇಶದ ಸೋರನಸ್ ಸೀರೋಗ ಹಾಗೂ ಪ್ರಸೂತಿತಂತ್ರ ಕ್ಷೇತ್ರದ ತಜ್ಞ. ಈತ ಸ್ತ್ರೀ ಜನನಾಂಗವನ್ನು ಪರೀಕ್ಷಿಸಲು ಅಗತ್ಯವಾದ ಉಪಕರಣಗಳನ್ನು ರೂಪಿಸಿದ್ದ ಹಾಗೂ ಹೊಕ್ಕಳುಬಳ್ಳಿಯ ಆರೈಕೆಗೆ ವಿಶೇಷ ಗಮನ ನೀಡಿದ್ದ. ಸೋರನಸ್ ಯೋಗ್ಯ ಸೂಲಗಿತ್ತಿಯ ಲಕ್ಷಣ ಹೇಗಿರ ಬೇಕೆಂದು ಒತ್ತಿಹೇಳುತ್ತಿದ್ದ.
ಸೂಲಗಿತ್ತಿ ಅಕ್ಷರಸ್ಥಳಾಗಿರಬೇಕು, ಮಾತಿನ ಕಲೆ ತಿಳಿದಿರಬೇಕು, ಒಳ್ಳೆಯ ನೆನಪಿನ ಶಕ್ತಿಯಿರಬೇಕು, ಕೆಲಸವನ್ನು ಇಷ್ಟಪಟ್ಟು ಮಾಡಬೇಕು, ಆಕೆಯ ಪಂಚೇಂದ್ರಿಯಗಳು ಸ್ವಸ್ಥವಾಗಿರಬೇಕು, (ಬಹಳ ಹೊತ್ತು ನಿಂತುಕೊಳ್ಳಲು) ಶಕ್ತಿಯಿರಬೇಕು ಹಾಗೂ ಆಕೆಗೆ ನೀಳಬೆರಳುಗಳಿರಬೇಕು ಎಂದಿರುವುದು ಗಮನೀಯ. ಸೋರನಸ್ ಪ್ರಸೂತಿತಂತ್ರಕ್ಕೆ ಸಂಬಂಧಿಸಿದಂತೆ 4 ಸಂಪುಟಗಳ ‘ಸೋರ ನಸ್ ಗೈನೆಕಾಲಜಿ’ ಗ್ರಂಥಗಳನ್ನು ರಚಿಸಿದ.
ಇವು ಮುಂದಿನ 1500 ವರ್ಷಗಳವರೆಗೆ ಯೂರೋಪಿನಲ್ಲಿ ಅಧಿಕೃತ ಪಠ್ಯಪುಸ್ತಕವಾದವು. ಪ್ರಾಚೀನ ಗ್ರೀಕ್-ರೋಮನ್ನರ ಕಾಲದಲ್ಲಿ 3ವರ್ಗಗಳ ಸೂಲಗಿತ್ತಿಯರು ಇದ್ದ ಬಗ್ಗೆ ಮಾಹಿತಿಯಿದೆ. ಮೊದಲ ವರ್ಗದವರು ಹೆರಿಗೆಯ ಕೈಕೆಲಸವನ್ನುಚೆನ್ನಾಗಿ ತಿಳಿದಿರುತ್ತಿದ್ದರು. ಎರಡನೇ ವರ್ಗದವರು ಹೆರಿಗೆಯ ಕೈಕೆಲಸಗಳನ್ನು ತಿಳಿದಿರುವುದರ ಜತೆಗೆ ಅಕ್ಷರಸ್ಥರಾಗಿದ್ದು, ಸಮಕಾಲೀನ
ಸ್ತ್ರೀರೋಗ ಮತ್ತು ಪ್ರಸೂತಿತಂತ್ರದ ಪುಸ್ತಕಗಳನ್ನು ತಕ್ಕಮಟ್ಟಿಗೆ ಓದಿರುತ್ತಿದ್ದರು.
ಮೂರನೇ ವರ್ಗದವರು ಹೆರಿಗೆಯ ಎಲ್ಲ ತಂತ್ರಗಳನ್ನು ತಿಳಿದಿರುವುದರ ಜತೆಗೆ ಅದಕ್ಕೆ ಸಂಬಂಧಿಸಿದ ವೈಜ್ಞಾನಿಕ ವಿವರಗಳನ್ನು ಅರಿತಿದ್ದರು. ಇವರು ಪ್ರಸವ ವಿಜ್ಞಾನದಲ್ಲಿ ನುರಿತಿದ್ದು ಹೆಚ್ಚೂ ಕಡಿಮೆ ವೈದ್ಯರಂತೆಯೇ ಗೌರವಕ್ಕೆ ಪಾತ್ರರಾಗಿದ್ದರು. ಆದರೆ ಇವರು ಹೆರಿಗೆ ಬಿಟ್ಟು ಇತರ ಚಿಕಿತ್ಸೆ ನೀಡಲು ಮುಂದಾಗುತ್ತಿರಲಿಲ್ಲ. ಇಂದು ವೈದ್ಯಕೀಯ ಶಿಕ್ಷಣ ಪಡೆಯುವ ಅವಕಾಶ
ಗಂಡು-ಹೆಣ್ಣುಗಳಿಬ್ಬರಿಗೂ ಸರಿಸಮಾನವಾಗಿದೆ. ಆದರೆ ಪ್ರಾಚೀನ ಗ್ರೀಕ್, ರೋಮನ್ ಕಾಲದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ಅಧಿಕಾರ ಹುಡುಗರಿಗೆ ಮಾತ್ರವಿತ್ತು. ಈ ಸಂಪ್ರದಾಯ ಮೆಸಪೊಟೋಮಿಯನ್, ಈಜಿಪ್ಷಿಯನ್, ಬ್ಯಾಬಿಲೋನಿಯನ್ ಸಂಸ್ಕೃತಿ ಗಳಿಂದ ಗ್ರೀಕ್-ರೋಮ್ ಸಂಸ್ಕೃತಿಗೆ ಹರಿದುಬಂದಿತ್ತು.
ಹೆಣ್ಣುಮಕ್ಕಳು ಕೀವು, ರಕ್ತ, ಗಾಯ, ಸಾವು, ನೋವನ್ನು ನೋಡಿ ತಡೆದುಕೊಳ್ಳಲಾರರು ಎಂದು ಆ ಪ್ರಾಚೀನ ಸಮಾಜಗಳು ಏಕಮುಖವಾಗಿ ನಿರ್ಧರಿಸಿದ್ದವು. ಜತೆಗೆ ಹೆಣ್ಣುಮಕ್ಕಳು ತಮ್ಮ ಗಂಡನನ್ನು ಬಿಟ್ಟು ಅನ್ಯಪುರುಷರ ಶರೀರ ಸ್ಪರ್ಶಿಸುವುದಕ್ಕೆ ಅವಕಾಶವೇ ಇರಲಿಲ್ಲ. ಹಾಗಾಗಿ ಹೆಣ್ಣು ಮಕ್ಕಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗಿದ್ದರು. ರೋಮನ್ ಲೇಖಕ ಗೇಯಸ್ ಜೂಲಿಯಸ್ ಹೈಜಿನಸ್ (ಕ್ರಿ.ಪೂ.65-ಕ್ರಿ.ಪೂ.17) ತನ್ನ ‘-ಬುಲೆ’ ಕೃತಿಯಲ್ಲಿ ‘ಅಗ್ನೋದೀಸ್’ ಅಥವಾ ‘ಅಗ್ನೋದಿಕೆ’ಯ (ಕ್ರಿ.ಪೂ.4
ನೆಯ ಶತಮಾನ) ಬಗ್ಗೆ ಬರೆದಿರುವನು. ಅಂದಿನ ದಿನಗಳಲ್ಲಿ ಹೆಣ್ಣುಮಕ್ಕಳು ಪ್ರಸವ ವಿಜ್ಞಾನವನ್ನು ಮಾತ್ರ ಕಲಿಯಲು
ಅವಕಾಶತ್ತು.
ಆದರೆ ಆಗ್ನೋದೀಸಳಿಗೆ ಸಮಗ್ರ ವೈದ್ಯಕೀಯವನ್ನು ಕಲಿಯಬೇಕೆಂಬ ಆಸೆ. ಹೆಣ್ಣಾಗಿದ್ದ ಕಾರಣ ವೈದ್ಯಕೀಯ ಕಲಿಯುವ ಅವಕಾಶವಿಲ್ಲದ ಆಕೆ ತನ್ನ ಕೂದಲನ್ನು ಕತ್ತರಿಸಿ, ಪುರುಷನಂತೆ ವೇಷ ಬದಲಿಸಿಕೊಂಡು ಅಲೆಗ್ಸಾಂಡ್ರಿ ಯದಲ್ಲಿ ಪ್ರಖ್ಯಾತ ಹೆರೋಫಿಲಸ್ (ಕ್ರಿ.ಪೂ.335- ಕ್ರಿ.ಪೂ.280) ಬಳಿ ವೈದ್ಯಕೀಯ ಕಲಿತು ವೈದ್ಯಳಾದಳು. ನಂತರ ಅಥೆನ್ಸ್ ನಗರದಲ್ಲಿ ವೈದ್ಯವೃತ್ತಿ ಆರಂಭಿಸಿದಳು. ಅಲ್ಪಕಾಲದಲ್ಲಿ ಈಕೆ ಮಹಿಳೆಯರಲ್ಲಿ ಜನಪ್ರಿಯಳಾದಳು. ಇದು ಉಳಿದ ವೈದ್ಯರಿಗೆ ಸಹಿಸಲಾಗಲಿಲ್ಲ. ಆಗ್ನೋದೀಸಳ ಮೇಲೆ, ಮಹಿಳಾ ರೋಗಿಗಳ ಜತೆ ಅನಧಿಕೃತ ಲೈಂಗಿಕ ಸಂಪರ್ಕ ನಡೆಸುತ್ತಿರುವ ಆರೋಪ ಹೊರಿಸಿದರು. ಈಕೆಯ
ವಿಚಾರಣೆ ನಡೆಯಿತು.
ನ್ಯಾಯಮೂರ್ತಿಗಳ ಎದುರು ಈಕೆ ತನ್ನ ಉಡುಪನ್ನು ಮೇಲಕ್ಕೆತ್ತಿ ತೋರಿಸಿ, ತಾನು ಗಂಡಸಲ್ಲ, ಹೆಂಗಸು ಎನ್ನುವು ದನ್ನು ಋಜುವಾತು ಮಾಡಿ, ತನ್ನ ಮೇಲಿದ್ದ ಆರೋಪವನ್ನು ನಿರಾಕರಿಸಿದಳು. ಆಕೆಯ ಮೇಲಿದ್ದ ಲೈಂಗಿಕ ಆರೋಪ ಬಿದ್ದು ಹೋಯಿತು. ಆದರೆ ಆ ವೈದ್ಯರು ಆಕೆಯ ಮೇಲೆ ಕಾನೂನನ್ನು ಭಂಗಪಡಿಸಿದ ಅಪರಾಧವನ್ನು ಹೊರಿಸಿದರು. ಆದರೆ ಅಥೆನ್ಸ್ ನಗರದ ಮಹಿಳೆಯರು ಆಗ್ನೋದೀಸಳ ಪರವಾಗಿ ಹೋರಾಡಿದಾಗ ಆಕೆಗೆ ವೈದ್ಯವೃತ್ತಿ ಮುಂದುವರಿಸಲು ಅವಕಾಶ ವನ್ನು ಮಾಡಿಕೊಡಲಾಯಿತು.