Friday, 22nd November 2024

ಯುದ್ದ ಬಯಲು ಮಾಡಿದ ಸೀಟು ದಂಧೆ !

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿ, ಬಾಂಬುಗಳ ಮಳೆಯನ್ನೇ ಸುರಿದು, ಸಾವಿರಾರು ಜನಸಾಮಾನ್ಯರನ್ನು ಸಾಯಿಸಿದ್ದು ಈ ಕಾಲಮಾನದ ಘೋರ ದುರಂತ. ಅಲ್ಲಿ ಸಿಕ್ಕಿಕೊಂಡ ನಮ್ಮ ದೇಶದ ವಿದ್ಯಾರ್ಥಿಗಳ ಸಂಕಷ್ಟವು ನೋವನ್ನು ತಂದಿದೆ, ನೀಟ್ ಕುರಿತು ಚರ್ಚೆಗೂ ನಾಂದಿ ಹಾಡಿದೆ.

ಯಾರಿಗೆ ಬೇಕಿತ್ತು ಈ ಯುದ್ಧ? ಖಂಡಿತ ಬೇಕಿರಲಿಲ್ಲ. ಜನಸಾಮಶನ್ಯರಿಗೆ, ವಿದ್ಯಾರ್ಥಿ ಗಳಿಗೆ, ಗೃಹಿಣಿಯರಿಗೆ, ವ್ಯಾಪಾರಸ್ಥರಿಗೆ, ಉದ್ಯೋಗಿ ಗಳಿಗೆ, ಮಕ್ಕಳಿಗೆ ಯುದ್ಧಬೇಕಿಲ್ಲ. ಆಯುಧ ವ್ಯಾಪಾರಿಗಳಿಗೆ, ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿ ಲಾಭ ಗಳಿಸುವ ದೇಶ ಗಳಿಗೆ, ಕೆಲವು ಸಿದ್ಧಾಂತಗಳನ್ನು ಹೇರಲು ಬಯಸುವ ಬೃಹತ್ ಮತ್ತು ಬಲಾಢ್ಯ ದೇಶಗಳಿಗೆ ಯುದ್ಧ ಬೇಕು.

ಒಂದು ವರ್ಗದವರಿಗೆ ‘ಯುದ್ಧ ಎಂದರೆ ಬಹು ಇಷ್ಟ’! ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ರಷ್ಯಾ, ನೆದರ್ಲೆಂಡ್ಸ್ ಮೊದಲಾದ ದೇಶಗಳ ಪ್ರಮುಖ ಆದಾಯ ಮೂಲವೇ ಶಸ್ತ್ರಗಳ ಮಾರಾಟ! ಅವರೆಲ್ಲರಿಗೂ ಯುದ್ಧ ನಡೆಯುತ್ತಲೇ ಇರಬೇಕು. ಆದರೆ ಅಮಾಯಕ ನಾಗರಿಕರಿಗೆ ಯುದ್ಧ ಬೇಡ. ಇರಲಿ, ಅದೊಂದು ಬೇರೆಯದೇ ಲೋಕ. ಆದರೆ, ಯುದ್ಧಗಳು ಜನಸಾಮಾನ್ಯರ ನಿಯಂತ್ರಣದಲ್ಲಿಲ್ಲ. ಜಗತ್ತಿನ ಬಲಾಢ್ಯ ರಾಷ್ಟ್ರಗಳಲ್ಲಿ ಒಂದಾದ ರಷ್ಯಾವು ಉಕ್ರೇನಿನ ಮೇಲೆ ಯುದ್ಧ ಸಾರಿದೆ.

ಕಂಪ್ಯೂಟರ್ ಗೇಮ್‌ಗಳಲ್ಲಿ ಕಾಣುವಂತಹ ಭಯಾನಕ ಬೆಂಕಿಯುಂಡೆಗಳು ಉಕ್ರೇನಿನ ಬಹು ಮಹಡಿ ಕಟ್ಟಡಗಳನ್ನು ಸ್ವಾಹಾ ಮಾಡುತ್ತಿವೆ. ಮಹಡಿಗೆ ಮಹಡಿಯೇ ಬಾಂಬ್ ಮತ್ತು ಕ್ಷಿಪಣಿಗಳ ದಾಳಿಗೆ ಸುಟ್ಟು, ಉರುಳಿ ಬೀಳುವು ದನ್ನು ಕಂಡರೆ, ನಾವು ನಾಗರಿಕ ಜಗತ್ತಿನಲ್ಲಿದ್ದೇವೋ ಅಥವಾ ಭಸ್ಮಾಸುರನ ನಾಡಿನಲ್ಲಿ, ರಾಕ್ಷಸರ ಜಗತ್ತಿನಲ್ಲಿ ಇದ್ದೇವೋ ಎಂಬ ಆತಂಕ ಉಂಟಾಗುತ್ತಿದೆ. ರಷ್ಯಾ ಪ್ರಯೋಗಿಸುತ್ತಿರುವ ಕೆಲವು ಕ್ಷಿಪಣಿಗಳು ಒಮ್ಮೆಗೇ ಹತ್ತಾರು, ನೂರಾರು ಸ್ಫೋಗಳನ್ನು ಉಂಟುಮಾಡಿ, ಇಡೀ ಪ್ರದೇಶವನ್ನೇ ಸ್ಮಶಾನದಂತಾಗಿಸುವ ಪರಿಯಂತೂ ಭೀಕರ.

ಇಂದು ಉಕ್ರೇನ್, ಮುಂದೊಂದು ದಿನ ಈ ಆಧುನಿಕ ಜಗತ್ತಿನ ಯಾವುದೇ ದೇಶವೂ ಇಂತಹ ಅಗ್ನಿಮಳೆಗೆ ತುತ್ತಾಗುವ ಸಾಧ್ಯತೆಯನ್ನು ಈಗ ನಡೆಯುತ್ತಿರುವ ಯುದ್ಧ ತೋರಿಸಿಕೊಟ್ಟಿದೆ. ಅತ್ಯಾಧುನಿಕ, ಕ್ಷಿಪ್ರದಲ್ಲೇ ಭಯಾನಕ ಸ್ಥಿತಿಯನ್ನು ತಂದೊಡ್ಡಬಲ್ಲ ಅಸ್ತ್ರಗಳನ್ನು, ಬಲಾಢ್ಯ ದೇಶಗಳು ಅಮಾಯಕ ಜನರ ಮೇಲೆ ಪ್ರಯೋಗ ಮಾಡುವುದಕ್ಕೆ ಹೇಸುವುದಿಲ್ಲ ಎಂದು ಈಗಿನ ಯುದ್ಧ ತೋರಿಸಿಕೊಟ್ಟಿದೆ. ಎರಡನೆಯ ಮಹಾಯುದ್ಧವು ಒಂದು ಕೆಟ್ಟ ಕನಸು, ಅಂತಹ ಯುದ್ಧವು ಮನುಕುಲವನ್ನು ಇನ್ನು ಕಾಡುವ ಸಾಧ್ಯತೆ ಕಡಿಮೆ, ಅದು ಮಾನವ ನಿಗೆ ತಕ್ಕ ಪಾಠವನ್ನು ಕಲಿಸಿದೆ, ಆ ಮಟ್ಟದ ವಿನಾಶ ಕಲ್ಪಿಸುವ ದುಸ್ಸಾಹಸಕ್ಕೆ ಮಾನವನು ಮುಂದೆ ಕೈ ಹಾಕಲಾರ ಎಂದು ನಾವೆಲ್ಲಾ ಅಂದುಕೊಂಡಿರುವುದು ಎಂತಹ ಭ್ರಮೆ, ಬಾಲಿಶ ಕಲ್ಪನೆ ಎಂದು ಈ ಒಂದು ವಾರ ಋಜುವಾತಾಗಿದೆ.

ಇಲ್ಲವಾದರೆ, ಉಕ್ರೇನ್‌ನಂತಹ ಪುಟಾಣಿ ದೇಶದ ಮೇಲೆ ರಷ್ಯಾದಂತಹ ದೈತ್ಯನು ಪೂರ್ಣ ಪ್ರಮಾಣದ ಯುದ್ಧ ಸಾರಲು ಸಾಧ್ಯವೆ? ನ್ಯಾಟೋದ ಬಲಾಢ್ಯ ಗುಂಪಿನ ಬೆಂಬಲ ಇದ್ದರೂ ರಷ್ಯಾ ಉಕ್ರೇನಿನ ಮೇಲೆ ಬಾಂಬುಗಳ ಮಳೆಯನ್ನು ಸುರಿಯುವಲ್ಲಿ ಹಿಂಜರಿಯುತ್ತಿಲ್ಲ. ಉಕ್ರೇನಿಗೆ ಬೆಂಬಲ ಘೋಷಿಸಿದ ದೇಶಗಳೆಲ್ಲವೂ ಒಮ್ಮೆಗೇ ತಿರುಗಿಬಿದ್ದರೆ, ಮೂರನೆಯ ಮಹಾಯುದ್ಧಕ್ಕೆ ಮುನ್ನುಡಿ ಬರೆದಂತಾಗುತ್ತದೆ ಎಂಬ ಪೂರ್ಣ ಅರಿವಿದ್ದರೂ, ರಷ್ಯಾವು ಆ ಪುಟ್ಟ ದೇಶದ ಮೇಲೆ ಬೆಂಕಿಯ ಮಳೆ ಸುರಿಯುತ್ತಲೇ ಇದೆಯಲ್ಲ, ಇದನ್ನು ಯಾವ ಮನಸ್ಥಿತಿ ಎಂದು ಕರೆಯಬೇಕು? ಹಾಗೆ ನೋಡಿದರೆ, ಯುರೋಪ್ ಒಕ್ಕೂಟದ ಭಾಗವಾಗಿರುವ ಉಕ್ರೇನಿನ ಮೇಲೆ ಯುದ್ಧ ಮಾಡುವುದು ಎಂದರೆ, ಜಾಗತಿಕ ಯುದ್ಧವನ್ನು ಆರಂಭಿಸಿದಂತೆಯೇ.

ಜತೆಗೆ, ಉಕ್ರೇನಿಗೆ ಬಲಾಢ್ಯ ಅಮೆರಿಕದ ಬಹಿರಂಗ ಬೆಂಬಲವೂ ಇದೆ, ಅಮೆರಿಕವು ಅಪಾರ ನೆರವನ್ನೂ ಘೋಷಿಸಿದೆ. ಹಾದ್ದರೂ, ಉಕ್ರೇನಿನ ಪ್ರಮುಖ ನಗರಗಳ ಮೇಲೆ, ಅಲ್ಲಿನ ಜನರ ಮೇಲೆ ರಷ್ಯಾವು ನಡೆಸಿರುವ ಕ್ಷಿಪಣಿ ದಾಳಿ, ವೈಮಾನಿಕ ದಾಳಿಯು, ವಾಸ್ತವವಾಗಿ ಮೂರನೆಯ ಮಹಾಯುದ್ಧವನ್ನು ಆರಂಭಿಸುವ ಟ್ರಿಗರ್ ಇದ್ದಂತೆ. ಆದರೂ, ಒಂದು ವಾರದ ಕಾಲ ರಷ್ಯಾವು ಉಕ್ರೇನಿನ ಮೇಲೆ ಬಾಂಬ್ ಸುರಿಸಿದರೂ, ಮತ್ತೊಂದು ದೇಶ ಇನ್ನೂ ರಷ್ಯಾ ವಿರುದ್ಧ ಬಾಂಬ್ ಪ್ರಯೋಗಿಸಿಲ್ಲ ಎಂದರೆ, ಅದಕ್ಕೆ ಉತ್ತರ ಒಂದೇ – ತುಸು ತಿಳಿವಳಿಕೆ ಇನ್ನೂ ಉಳಿದುಕೊಂಡಿದೆ, ಎರಡನೆಯ ಮಹಾಯುದ್ಧದ ಕರಾಳ ನೆನಪುಗಳು ಸಣ್ಣ ಪಾಠವನ್ನು ಕೆಲವು ದೇಶಗಳಿಗಾದರೂ ಕಲಿಸಿದೆ.
ರಷ್ಯಾ ವಿರುದ್ಧ ನ್ಯಾಟೋ ದೇಶಗಳು ಮತ್ತು ಅಮೆರಿಕವು ಒಮ್ಮೆಗೇ ಬಾಂಬ್ ದಾಳಿ ಆರಂಭಿಸಿದರೆ, ಕ್ಷಣಾರ್ಧದಲ್ಲಿ ಮೂರನೆಯ ಮಹಾ ಯುದ್ಧ ಆರಂಭವಾಗುತ್ತದೆಂಬ ಎಚ್ಚರ ಸದ್ಯಕ್ಕೆ ಕೆಲವು ದೇಶಗಳಿಗಾದರೂ ಸ್ವಲ್ಪ ಮಟ್ಟಿಗೆ ಇದೆ.

ಆದ್ದರಿಂದಲೇ, ಈಗ ನಡೆಯುತ್ತಿರುವ ಯುದ್ಧವು ರಷ್ಯಾ ಮತ್ತು ಉಕ್ರೇನ್ ನಡುವೆ ಮಾತ್ರ ಸೀಮಿತವಾಗಿದೆ, ದಾಯಾದಿಗಳ ಕಲಹ ಎಂಬ ಮಟ್ಟಕ್ಕೆ ನಿಯಂತ್ರಣಗೊಂಡಿದೆ, ಈ ಹಿಂದೆ ತನ್ನ ಪ್ರಾಂತ್ಯವಾಗಿದ್ದ ಉಕ್ರೇನ್ ಮೇಲೆ ತಾನು ಸಕಾರಣ ದಾಳಿ ನಡೆಸುತ್ತಿದ್ದೇನೆ ಎಂದು ಹುಸಿಹುಸಿಯಾಗಿ ಬಿಂಬಿಸಿಕೊಳ್ಳಲು ರಷ್ಯಾಕ್ಕೆ ಸಾಧ್ಯವಾಗುತ್ತಿದೆ. ಇದು ಎರಡು ದೇಶಗಳ ನಡುವಿನ ಯುದ್ಧವಲ್ಲ, ಕೇವಲ ರಷ್ಯಾವು ಉಕ್ರೇನಿನ ಮೇಲೆ ನಡೆಸಿದ ಆಕ್ರಮಣ! ಈ ಯುದ್ಧದ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯವಿತ್ತೆ? ಚಳಿಗಾಲದ ಈ ದಿನಗಳಲ್ಲಿ ಉಕ್ರೇನಿನ ಲಕ್ಷಾಂತರ ಜನರು, ಮನೆಗಳನ್ನು ತೊರೆದು, ಬಂಕರುಗಳಲ್ಲಿ, ಮೆಟ್ರೊ ಸ್ಟೇಷನುಗಳಲ್ಲಿ ರಾತ್ರಿ ಕಳೆಯುವ ಅನಿವಾರ್ಯತೆ ಯನ್ನು ತಪ್ಪಿಸಬಹುದಿತ್ತೆ? ಈ ಪ್ರಶ್ನೆಗೆ ಸಮಗ್ರ ಉತ್ತರ ಕಷ್ಟ ಎನಿಸಿದರೂ, ಉಕ್ರೇನಿನ ಅಧ್ಯಕ್ಷನು ವಾಸ್ತವಗಳ ಹಿನ್ನೆಲೆ ಯಲ್ಲಿ, ಸಮಚಿತ್ತದ ನಿರ್ಧಾರ ಕೈಗೊಂಡಿದ್ದರೆ, ಪರಿಸ್ಥಿತಿ ಈ ಮಟ್ಟಕ್ಕೆ ಹೋಗದಂತೆ ತಡೆಯಬಹುದಿತ್ತೇನೋ!

ಎಲ್ಲರಲ್ಲೂ ರಾಷ್ಟ್ರಪ್ರೇಮ ಇರಬೇಕು ನಿಜ, ಆದರೆ ವಾಸ್ತವಗಳ ಅರಿವಿಲ್ಲದೆ, ತಮ್ಮ ಬಲದ ಅರಿವಿಲ್ಲದೇ, ಹುಂಬತನದ ರಾಷ್ಟ್ರಪ್ರೇಮ ದಿಂದ ಹಾನಿಯೇ ಹೆಚ್ಚು. ಉಕ್ರೇನಿನ ಅಧ್ಯಕ್ಷನ ಹಿನ್ನೆಲೆ ಏನೇ ಇರಲಿ, ಆತನ ಮಾತುಗಳ ವರಸೆ ನೋಡಿದರೆ, ವಸ್ತುಸ್ಥಿತಿ ಅರಿಯದ
ಹುಂಬನಂತೆ ಅನಿಸುವುದಿಲ್ಲವೆ? ‘ಕೊನೆಯ ಉಸಿರಿರುವ ತನಕವೂ ಹೋರಾಡುತ್ತೇನೆ’ ‘ನಾಗರಿಕರು ರಷ್ಯಾದ ಸೈನಿಕರ ವಿರುದ್ಧ ಹೋರಾಡಲು ಮುಂದೆ ಬಂದರೆ, ಬಂದೂಕನ್ನು ಸರಕಾರ ನೀಡುತ್ತದೆ’ ‘ರಷ್ಯಾಕ್ಕೆ ತಕ್ಕ ಪಾಠ ಕಲಿಸುತ್ತೇವೆ’ ಈ ರೀತಿಯ ಹೇಳಿಕೆ ಗಳನ್ನು ಆ ಅಧ್ಯಕ್ಷ ಪದೇ ಪದೇ ಮಾಧ್ಯಮಗಳಲ್ಲಿ ನೀಡುತ್ತಿದ್ದಾನೆ. ತನ್ನ ದೇಶದ ನಾಗರಿಕರನ್ನು ಬಡಿದೆಬ್ಬಿಸಿ, ಬೀದಿಗಳಲ್ಲಿ ನಿಂತು ಪೆಟ್ರೋಲ್ ಬಾಂಬ ಎಸೆದು ಸೈನಿಕರನ್ನು ಸದೆಬಡಿಯಿರಿ ಎಂಬ ಕರೆ ಕೊಟ್ಟಿದ್ದಾನೆ.

ರಷ್ಯಾದಂತಹ ಬಲಿಷ್ಟ ಸೈನ್ಯವು ಆಕ್ರಮಣ ಮಾಡಿದ ಒಂದೆರಡು ದಿನಗಳಲ್ಲೇ, ಅದರಿಂದಾಗುವ ವಿನಾಶದ ತೀವ್ರತೆಯನ್ನು ಕಡಿಮೆ
ಮಾಡುವ ಕೆಲವು ಕ್ರಮಗಳನ್ನು ಕೈಗೊಂಡು, ನಾಗರಿಕರ ಪ್ರಾಣ, ಮನೆಗಳನ್ನು ಉಳಿಸುವ ಪ್ರಯತ್ನವನ್ನು ಆತ ಮಾಡಬೇಕಿತ್ತು. ಅದರ ಬದಲು, ಸೈನಿಕರನ್ನೇ ಹೊಡೆದು ಹಾಕಿ ಎಂದು ನಾಗರಿಕರನ್ನು ರೊಚ್ಚಿಗೇಳಿಸುವ ಕೆಲಸ ಮಾಡಿ, ಜನರ ಪ್ರಾಣ ಮತ್ತು ಆಸ್ತಿಪಾಸ್ತಿ
ನಷ್ಟಕ್ಕೆ ದಾರಿ ಮಾಡಿಕೊಟ್ಟಿದ್ದಾನೆ – ಏಳು ದಿನಗಳಾದರೂ. ನೀವೇ ಯೋಚಿಸಿ, ಸಾಮಾನ್ಯ ನಾಗರಿಕನಿಗೆ ಬಂದೂಕು ನೀಡಿ, ಸೈನಿಕರ ವಿರುದ್ಧ ಹೋರಾಡು ಎಂದು ಹೇಳುವುದು ಎಂತಹ ಮೂರ್ಖತನ!

ಜೀವಮಾನವಿಡೀ ಬಂದೂಕು ನೋಡದ ಅಥವಾ ಕಾಲೇಜು ದಿನಗಳಲ್ಲಿ ಎನ್‌ಸಿಸಿಯಂತ ಸೀಮಿತ ತರಬೇತಿ ಪಡೆದಿರುವ ವ್ಯಕ್ತಿಯು, ಸೈನಿಕನ ವಿರುದ್ಧ ಯಶಸ್ವಿಯಾಗಿ ಹೋರಾಡಲು ಹೇಗೆ ತಾನೆ ಸಾಧ್ಯ? ಹಲವಾರು ವರ್ಷಗಳ ಕಾಲ ಯುದ್ಧ ನಡೆಸಲೆಂದೇ ತರಬೇತಿ ಪಡೆದ ಸೈನಿಕರ ಎದುರು, ಬಂದೂಕು ಹಿಡಿದ ಸಾಮಾನ್ಯ ನಾಗರಿಕನು ಇರುವೆಗೆ ಸಮಾನ, ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗುತ್ತಾನೆ. ಮಿಗಿಲಾಗಿ, ಸದಾ ಸನ್ನದ್ಧ ಸ್ಥಿತಿಯಲ್ಲಿರುವ, ಅರವತ್ತು ಮೈಲಿ ಉದ್ದದ ವಾಹನ ಸಾಲಿನಲ್ಲಿ ಸೈನಿಕರನ್ನು ಕಳಿಸಬಲ್ಲ ರಷ್ಯಾದ ಸೇನೆಗೆ, ನಾಗರಿಕರ ಪ್ರತಿರೋಧ ಎಂದರೆ, ನಾಗರಿಕರ ದೃಷ್ಟಿಯಲ್ಲಿ ಅದೊಂದು ಆತ್ಮಾಹುತಿ, ರಷ್ಯಾ ದೃಷ್ಟಿಯಲ್ಲಿ ಒಂದು ಕ್ಷುಲ್ಲಕ ಪ್ರತಿರೋಧ. ಈ ರೀತಿ ನಾಗರಿಕರ ಕೈಗೆ ಬಂದೂಕು ಕೊಟ್ಟು ಬಲಾಢ್ಯ ಸೇನೆಯನ್ನು ಎದುರಿಸಿ ಎನ್ನುತ್ತಿ ರುವ ಉಕ್ರೇನ್ ಅಧ್ಯಕ್ಷನ ಬಾಲಿಶ ನಡೆಯನ್ನು ಹುಂಬತನ ಎನ್ನಬೇಕೊ, ಮೂರ್ಖತನ ಎನ್ನಬೇಕೊ ತಿಳಿಯುತ್ತಿಲ್ಲ.

ರಷ್ಯಾ ಸೈನ್ಯದ ಶೇ.೧೦ರಷ್ಟು ಗಾತ್ರವಿರುವ ಉಕ್ರೇನ್ ಸೇನೆಗೆ, ಕೊನೆಯ ಉಸಿರಿರುವ ತನಕ ಹೋರಾಡಿ ಎಂದು ಹೇಳುವುದು,
ಒಂದು ರೀತಿಯಲ್ಲಿ ಉಕ್ರೇನಿನ ಹರಾಕಿರಿ. ಹಾಗಿದ್ದರೆ, ರಷ್ಯಾ ಎದುರು ಉಕ್ರೇನ್ ಶರಣಾಗಬೇಕಿತ್ತೆ ಎಂಬ ಪ್ರಶ್ನೆ ಎದುರಾಗುತ್ತದೆ. ನಾಗರಿಕರ, ಮಹಿಳೆಯರ, ಹಸುಗೂಸುಗಳ ಜೀವ ಉಳಿಸಲು ಸಮಯೋಚಿತ ಹೆಜ್ಜೆಯನ್ನು ಉಕ್ರೇನ್ ಇಡಬೇಕಿತ್ತು ಎಂದಷ್ಟೇ ಈಗ ಹೇಳಬಹುದು.

ರಷ್ಯಾ ಸೈನಿಕರು ರಾಜಧಾನಿ ಕೀವ್ ತಲುಪುವ ಮೊದಲೇ, ಪರಿಣಾಮಕಾರಿ ರಾಜತಾಂತ್ರಿಕ ಹೆಜ್ಜೆಯನ್ನಿಟ್ಟು, ಆಕ್ರಮಣದ ತೀವ್ರತೆಯನ್ನು
ತಗ್ಗಿಸಬೇಕಿತ್ತು. ಇದಕ್ಕೂ ಮೊದಲೇ, ನಾಲ್ಕಾರು ತಿಂಗಳುಗಳಿಂದಲೇ ರಷ್ಯಾ ಸೈನ್ಯವು ಆಕ್ರಮಣ ನಡೆಸಲು ಸಿದ್ಧತೆ ನಡೆಸಿತ್ತು. ಆಗಲೇ ಎಚ್ಚೆತ್ತು ಕೊಳ್ಳಬೇಕಿತ್ತು. ಯುದ್ಧದ ಸನ್ನಿವೇಶ ಎದುರಾದರೆ, ಅಮೆರಿಕ ಮತ್ತು ಇತರ ಯುರೋಪಿಯನ್ (ನ್ಯಾಟೊ) ದೇಶಗಳು ತನ್ನ ಬೆಂಬಲಕ್ಕೆ ನಿಲ್ಲುತ್ತವೆ ಎಂಬ ಬಲವಾದ ನಂಬಿಕೆ ಉಕ್ರೇನ್ ಅಧ್ಯಕ್ಷನಿಗಿತ್ತು.

ಅಲ್ಲೇ ಆತನ ಅನನುಭವಿತನ ಕೈಕೊಟ್ಟದ್ದು. ಆ ಬೆಂಬಲ ಯಾವ ಮಟ್ಟದ್ದು ಎಂದು ಲೆಕ್ಕಹಾಕುವಲ್ಲಿ ಆತ ಸ್ಪಷ್ಟವಾಗಿ ಎಡವಿದ್ದ. ಆತನ ಆ ಬಾಲಿಶ ನಡೆಯು, ಇಂದು ದೇಶವೇ ನಾಶವಾಗುವ ತನಕ ಬಂದು ನಿಂತಿದೆ. ಆತನ ಎಳಸುತನ, ಸಾಮಾನ್ಯ ಜನರೇ ಸೈನಿಕರ ಎದುರು ಬಂದೂಕು ಹಿಡಿದು ನಿಲ್ಲಿ ಎಂಬ ಭಾವಾವೇಶಭರಿತ ಹೇಳಿಕೆಗಳು, ಎಲ್ಲವೂ ಎಂತಹ ಪ್ರಮಾದ ಎಂದು ಈಗ ಅರಿವಾಗುತ್ತಿದೆ. ಉಕ್ರೇನ್ ಅಧ್ಯಕ್ಷನು ತುಸು ಸಂಯಮ ತೋರಿ, ತನ್ನ ದೇಶದ ನೈಜ ಶಕ್ತಿಯನ್ನು ಲೆಕ್ಕಹಾಕಿ, ಸೂಕ್ತ ನಡೆ ಇಡಬೇಕಿತ್ತು.

ಇದರಲ್ಲಿ, ದೇಶದ ಸಾರ್ವಭೌಮತ್ವಕ್ಕೆ ಭಂಗ ಬರದಂತೆ, ಸಣ್ಣಪುಟ್ಟ ತ್ಯಾಗ ಅನಿವಾರ್ಯವಾಗುತ್ತಿತ್ತು, ಆದರೆ ಅಂತಹ ಸಮಚಿತ್ತದ ನಡೆ ಯಶಸ್ವಿಯಾಗಿದ್ದರೆ, ಸಾವಿರಾರು ನಾಗರಿಕರ ಪ್ರಾಣ ಉಳಿಯುತ್ತಿತ್ತು, ಮನೆಗಳು, ಆಸ್ಪತ್ರೆಗಳು ಉಳಿಯುತ್ತಿದ್ದವು. ಜನರ ಪ್ರಾಣ
ಉಳಿಸಲು ಆ ಅಧ್ಯಕ್ಷ ಅಷ್ಟಾದರೂ ಮಾಡಬೇಕಿತ್ತು. ಅದೇನೇ ಇರಲಿ, ತಕ್ಷಣ ಈ ಯುದ್ಧ ನಿಲ್ಲಬೇಕು, ಅಮಾಯಕ ಜನರ ಪ್ರಾಣ ಹರಣ ವಾಗುವುದು ತಪ್ಪಬೇಕು.

ಈ ಸನ್ನಿವೇಶದಲ್ಲಿ, ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ, ಒಂದು ಪ್ರಮುಖ ಚರ್ಚೆ ಮುನ್ನೆಲೆಗೆ ಬಂದಿದೆ. ದೂರದ ಉಕ್ರೇನಿನಲ್ಲಿ ರಷ್ಯಾ ಸಿಡಿಸಿದ ಬಾಂಬಿನ ತುಣುಕೊಂಡು ಹಾವೇರಿಯ ಪ್ರತಿಭಾವಂತ ಯುವಕನ ಪ್ರಾಣ ತೆಗೆದ ದಾರುಣ ಘಟನೆಯು ಮನಕಲಕಿದೆ. ಅದೊಂದು ನೋವಿನ ಸಂಗತಿ. ಈ ಘಟನೆಯು ನಮ್ಮ ವಿದ್ಯಾಭ್ಯಾಸ ಪದ್ಧತಿಯ ಕುಂದುಕೊರತೆಗಳನ್ನು ಮುನ್ನೆಲೆಗೆ ತಂದಿದೆ. ಆ
ಯುವಕ ಮತ್ತು ಅಂತಹ ಸುಮಾರು 20000 ಜನರು ದೂರದ ಉಕ್ರೇನ್‌ನಲ್ಲೇಕೆ ವಿದ್ಯಾಭ್ಯಾಸ ಪಡೆಯಲು ಹೋಗಬೇಕು, ನಮ್ಮಲ್ಲೇ ಪಡೆಯಬಹುದಿತ್ತಲ್ಲ ಎಂಬ ಚರ್ಚೆ ಇಂದು, ನೀಟ್ ಪರೀಕ್ಷೆ ಯನ್ನು ಪ್ರಶ್ನಿಸುವ ಹಂತಕ್ಕೆ ಬಂದಿದೆ.

ಪ್ರತಿಭಾವಂತ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ನಮ್ಮ ದೇಶದ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯುವದೇ ಅಸಾಧ್ಯ ಎಂಬ ಕರಾಳ ಸತ್ಯವನ್ನು, ಈ ಯುದ್ಧ ಬಯಲಿಗೆಳೆದು, ಜನರಿಗೆ ತಲುಪಿಸಿದ್ದು ಚೋದ್ಯವೇ ಸರಿ. ಕೆಲವು ವರ್ಷಗಳ ಹಿಂದಿನ ತನಕ ಸಿ.ಇ.ಟಿ. ಪರೀಕ್ಷೆ ಬರೆದು, ಅದರ ರ‍್ಯಾಂಕ್ ಸಹಾಯದಿಂದ ಸಾಕಷ್ಟು ಪ್ರತಿಭಾವಂತರು ನಮ್ಮ ರಾಜ್ಯದ ಕಾಲೇಜುಗಳಲ್ಲಿ ಓದುವ ಸಾಧ್ಯತೆ ಇತು! ರಾಜ್ಯಮಟ್ಟದಲ್ಲಿದ್ದ ಪ್ರವೇಶ ಪರೀಕ್ಷೆಯನ್ನು ರಾಷ್ಟ್ರಮಟ್ಟದ ‘ನೀಟ್’ಗೆ ಕೊಂಡೊಯ್ದದ್ದು ಯಾರು, ಏಕೆ? ಇದರ ಹಿಂದೆ, ಉತ್ತರ ಭಾರತದವರು ಇಲ್ಲಿನ ಕಾಲೇಜುಗಳಲ್ಲಿ ಅಽಕ ಸಂಖ್ಯೆಯಲ್ಲಿ ಪ್ರವೇಶ ಪಡೆಯುವಂತೆ ಮಾಡುವ ಹುನ್ನಾರ ಇದೆಯೆ? ನಮ್ಮ ರಾಜ್ಯದ ಕಾಲೇಜಿನಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯಬೇಕು ಎಂಬ ವಾದದಲ್ಲಿ ಹುರುಳಿದೆ.

ನಮ್ಮ ದೇಶದ ವೈದ್ಯಕೀಯ ಶಿಕ್ಷಣದ ಧನದಾಹಿ ಮುಖವೂ ಮತ್ತೆ ಮುನ್ನೆಲೆಗೆ ಬಂದಿದೆ. ಅಪಾರ ಪ್ರಮಾಣದ ಹಣ ಪಡೆದು, ಕಾಲೇಜಿಗೆ ಪ್ರವೇಶ ನೀಡುವ ಪದ್ಧತಿಯನ್ನು ನಮ್ಮಲ್ಲಿ ವ್ಯವಸ್ಥಿತವಾಗಿ ನಡೆಸಿಕೊಂಡು ಬರಲಾಗಿದೆ. ಇಪ್ಪತ್ತುಲಕ್ಷ, ನಲವತ್ತು ಲಕ್ಷ, ಕೋಟಿಗೂ ಮೀರಿದ ರುಪಾಯಿಗಳನ್ನು ಪಡೆದು, ಮೆಡಿಕಲ್ ಸೀಟು ಪಡೆಯುವುದು ಇಲ್ಲಿ ತೀರಾ ಸಾಮಾನ್ಯ.

ಕೆಲವು ಕಾಲೇಜುಗಳಲ್ಲಿ ಇದೊಂದು ‘ದಂಧೆ’ ಸ್ವರೂಪವನ್ನೂ ಪಡೆದಿದೆ. ಇಷ್ಟೊಂದು ಹಣ ಪಡೆದು ಕೋರ್ಸ್ ಸೇರಲು ಅವಕಾಶ ನೀಡುವ ಕಾಲೇಜುಗಳಿಗೆ ಸರಕಾರದ ನಿಯಂತ್ರಣ ವಿಲ್ಲವೆ? ಪ್ರತಿಭೆ, ಉತ್ತಮ ಅಂಕಗಳಿದ್ದೂ, ಸಾಕಷ್ಟು ಸಂಖ್ಯೆಯ ಕಾಲೇಜುಗಳಿದ್ದೂ, ಇಲ್ಲೇಕೆ ಅವರಿಗೆ ಸೀಟು ಸಿಗುವುದಿಲ್ಲ? ದೂರದ ಉಕ್ರೇನ್‌ಗೇಕೆ ಹೋಗಬೇಕು? ಪ್ರತಿಭಾವಂತರಿಗೆ ಶಿಕ್ಷಣ ದೊರೆಯುವಂತೆ ಮಾಡುವುದು ಪ್ರಜಾಪ್ರಭುತ್ವದ ಕರ್ತವ್ಯ ತಾನೆ? ಈ ನಿಟ್ಟಿನಲ್ಲಿ ಸರಕಾರಗಳೇಕೆ ವಿಫಲವಾಗಿವೆ? ಇದಕ್ಕೆ ಉತ್ತರ ನೀಟ್ ಪರೀಕ್ಷೆಯ ರದ್ದು ಮಾತ್ರವೆ? ಧನದಾಹಿ ಕಾಲೇಜುಗಳಿಗೆ ಮೂಗುದಾರ ಹಾಕುವುದು ಯಾರ ಕೆಲಸ? ಈ ಯುದ್ಧದಿಂದಾಗಿ ಇಂತಹ ಪ್ರಮುಖ ಪ್ರಶ್ನೆ ಚರ್ಚೆಗೆ ಬಂದಿರು ವುದು ಒಂದು ಪ್ರಮುಖ ಬೆಳವಣಿಗೆಯೇ ಸರಿ.