Sunday, 15th December 2024

ವೈದ್ಯ ವೃತ್ತಿಯ ದುರಂತಗಳು ಮತ್ತು ಕಾನೂನು ರಕ್ಷಣೆ

ಸ್ವಾಸ್ಥ್ಯ ಸಂಪದ

ಡಾ.ಎಸ್.ಪಿ.ಯೋಗಣ್ಣ

yoganna55@gmail.com

ವೈದ್ಯವೃತ್ತಿ ಮಾನವಕುಲವನ್ನು ಪೋಷಿಸಿ ಬೆಳೆಸುವ ವೃತ್ತಿ. ಮನುಷ್ಯನ ಜೀವನಶೈಲಿ ಮತ್ತು ಪರಿಸರಗಳು ಬದಲಾದಂತೆ ಹೊಸ
ಹೊಸ ಕಾಯಿಲೆಗಳು (ಸಕ್ಕರೆಕಾಯಿಲೆ, ಹೃದಯಾಘಾತ, ಕ್ಯಾನ್ಸರ್, ಮನೋರೋಗಗಳು, ಸ್ವನಿರೋಧಕತ್ವದ ಕಾಯಿಲೆಗಳು ಇತ್ಯಾದಿ)ಕಾಣಿಸಿ ಕೊಂಡಿವೆ. ಅವುಗಳ ಪತ್ತೆ ಮತ್ತು ಚಿಕಿತ್ಸೆಗಳಿಗಾಗಿ ಹೊಸ ದುಬಾರಿ ಬೆಲೆಯ ಆಧುನಿಕ ಸಲಕರಣೆಗಳನ್ನು ಕಂಡು ಕೊಳ್ಳಲಾಗಿದೆ.

ಭಾರತೀಯ ವೈದ್ಯಕೀಯ ಶಿಕ್ಷಣ ಮತ್ತು ಸೇವಾ ವ್ಯವಸ್ಥೆಯಲ್ಲಿ ಶೇ 85ರಷ್ಟನ್ನು ಖಾಸಗಿ ಯವರು ನಿರ್ವಹಿಸುತ್ತಿದ್ದು, ಕೇವಲ ಶೇ 15ರಷ್ಟನ್ನು ಮಾತ್ರ ಸರ್ಕಾರಗಳು ನಿರ್ವಹಿಸು ತ್ತಿವೆ. ಇದು ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ. ಖಾಸಗಿಯವರು ಆರೋಗ್ಯ ಕ್ಷೇತ್ರದಲ್ಲಿ ಕೋಟ್ಯಂತರ ಬಂಡವಾಳವನ್ನು ಹೂಡುತ್ತಿದ್ದು, ವೈದ್ಯಕೀಯ ಶಿಕ್ಷಣ ಮತ್ತು ಸೇವೆ ವ್ಯಾಪಾರೀಕರಣಗೊಂಡಿದೆ.

ಬಂಡವಾಳ ಹೂಡಿದ ಮೇಲೆ ಅದು ಬಡ್ಡಿ, ಲಾಭದ ಸಹಿತ ವಾಪಸ್ ಬರಲೇ ಬೇಕಲ್ಲವೇ? ಖಾಸಗಿ ಆಸ್ಪತ್ರೆಗಳ ನಿರ್ಮಾಣ, ವೆಚ್ಚ ಮತ್ತು ಸಲಕರಣೆಗಳ ಬಂಡವಾಳ ಕೋಟ್ಯಂತರ ರು.ಗಳಿದೆ. ವೈದ್ಯ ವಿದ್ಯಾರ್ಥಿಗಳು ಕೋಟ್ಯಂತರ ರು. ಕ್ಯಾಪಿಟೇಷನ್ ಶುಲ್ಕ ನೀಡಿ ವೈದ್ಯ ರಾಗುತ್ತಿದ್ದಾರೆ.

ಸರಕಾರ ಮತ್ತು ಬ್ಯಾಂಕ್‌ಗಳು ಖಾಸಗಿ ಆಸ್ಪತ್ರೆಗಳ ಮತ್ತು ವೈದ್ಯ ಕೀಯ ಕಾಲೇಜುಗಳ ನಿರ್ಮಾಣಕ್ಕೆ ಯಾವ ಬಗೆಯ ಸಹಾಯ ಧನವನ್ನಾಗಲಿ, ರಿಯಾಯಿತಿಗಳನ್ನಾಗಲಿ ನೀಡುತ್ತಿಲ್ಲ. ಆದರೂ ಖಾಸಗಿ ವೈದ್ಯಕೀಯ ಶಿಕ್ಷಣ ಮತ್ತು ವೈದ್ಯಕೀಯ ಸೇವೆ ಅಂತಾ ರಾಷ್ಟ್ರೀಯ ಮಟ್ಟಕ್ಕಿಂತಲೂ ಭಾರತದಲ್ಲಿ ಕಡಿಮೆಯಿದ್ದರೂ ಭಾರತೀಯರು ಭರಿಸಲಾಗದ ಕಾರಣ ಅವರುಗಳಿಗೆ ದುಬಾರಿ ಯಾಗಿದೆ. ವೈದ್ಯರು ಸುಲಿಗೆಕೋರರು ಎಂಬ ಭಾವನೆ ಜನಸಾಮಾನ್ಯರಲ್ಲಿದ್ದು, ವೈದ್ಯ-ರೋಗಿಯ ಆತ್ಮವಿಶ್ವಾಸದ ಕೊಂಡಿ ಸಡಿಲಗೊಂಡಿದೆ.

ಒಬ್ಬರನ್ನೊಬ್ಬರು ಅನುಮಾನದಿಂದ ನೋಡುವ ಪರಿಸ್ಥಿತಿಯುಂಟಾಗಿದೆ. ವೈದ್ಯಕೀಯ ವೃತ್ತಿ ಸರ್ವ ಯಶಸ್ವಿಯಲ್ಲ. ಎಲ್ಲವನ್ನೂ
ವಾಸಿಮಾಡಲಾಗುವುದಿಲ್ಲ, ಎಲ್ಲರನ್ನೂ ಸಾವಿನಿಂದ ಪಾರುಮಾಡಲಾಗುವುದಿಲ್ಲ. ಅದರದೇ ಆದ ವೈಜ್ಞಾನಿಕವಾದ ಇತಿಮಿತಿ ಗಳು ವೈದ್ಯಕೀಯ ಕ್ಷೇತ್ರಕ್ಕಿವೆ. ಪ್ರತಿಯೊಂದು ವೈದ್ಯಕೀಯ ಮತ್ತು ಶಸ್ತ್ರಕ್ರಿಯೆಗೆ ತನ್ನದೇ ಆದ ಸಹಜ ಅಡ್ಡಪರಿಣಾಮಗಳು ಮತ್ತು ಸಂಭಸಬಹುದಾದ ಅವಘಡಗಳಿವೆ. ಎಷ್ಟೇ ಎಚ್ಚರಿಕೆ ವಹಿಸಿದರೂ ಅವಘಡಗಳು ಆಗಿಯೇ ತೀರುತ್ತವೆ. ಇವೆಲ್ಲವುಗಳ ಅರಿವಿಲ್ಲದ ಸಾಮಾನ್ಯರು ವೈದ್ಯರು ಹಣ ದೋಚುವ ಜೊತೆಗೆ ಪ್ರಾಣವನ್ನೂ ಕಸಿಯುತ್ತಾರೆ (ವೈದ್ಯ ಹರತಿ ಪ್ರಾಣ ಧನಾನಿಚ) ಎಂಬ ಅಪಸ್ವರ ವನ್ನು ತೆಗೆಯುತ್ತಿದ್ದಾರೆ.

ಮೂಲಭೂತ ಸೌಕರ್ಯಗಳ ಅತಿಯಾದ ವೆಚ್ಚ, ದುಬಾರಿ ಸಲಕರಣೆಗಳು ಮತ್ತು ಸಿಬ್ಬಂದಿ ಸಂಬಳ, ಅತಿಯಾದ ವೈದ್ಯಕೀಯ ಶಿಕ್ಷಣದ ವೆಚ್ಚ ಹಾಗೂ ಜೀವನ ನಿರ್ವಹಣಾ ವೆಚ್ಚ ಇವೆಲ್ಲಕ್ಕೂ ವೈದ್ಯಕೀಯ ಸಮುದಾಯವೊಂದನ್ನೇ ಹೊಣೆಮಾಡಲಾದೀತೇ?
ಪೂರ್ಣ ಸಾಮಾಜಿಕ ವ್ಯವಸ್ಥೆ ಇದಕ್ಕೆ ಕಾರಣವಲ್ಲವೇ ಎಂಬುದರ ಆತ್ಮಾವಲೋಕನ ಅತ್ಯವಶ್ಯಕ. ವೈದ್ಯವೃತ್ತಿ ಇಂದು ಹೇಗಾಗಿದೆ ಯೆಂದರೆ ವೈದ್ಯನನ್ನು ನೋಡಲು ಬಂದ ರೋಗಿ, ಎಲ್ಲಿ ವೈದ್ಯ ತನ್ನನ್ನು ಶೋಷಣೆ ಮಾಡುತ್ತಾನೋ ಎಂಬ ಪೂರ್ವಗ್ರಹ ಪೀಡಿತ
ಮನಸ್ಸಿನಲ್ಲಿಯೂ, ವೈದ್ಯ ಎಲ್ಲಿ ರೋಗಿ ತನ್ನನ್ನು ಯಾವ ಕಾನೂನು ಕಟ್ಟಲೆಗೆ ಎಳೆದುಬಿಡುತ್ತಾನೋ ಎಂಬ ಆತಂಕದಲ್ಲಿಯೂ ಇರುವಂತಾಗಿದ್ದು, ಅವರವರ ರಕ್ಷಣೆಗೆ ಸನ್ನದ್ಧವಾಗಿರಬೇಕೆಂಬ ವುನೋವೃತ್ತಿಯುಳ್ಳವರಾಗಿರುತ್ತಾರೆ.

ವೈದ್ಯರುಗಳು ಅನಾವಶ್ಯಕವಾಗಿ ಅವಶ್ಯಕತೆ ಇಲ್ಲದಿದ್ದರೂ ದುಬಾರಿ ತಪಾಸಣಾ ಪರೀಕ್ಷೆಗಳನ್ನು ಹಣಕ್ಕಾಗಿ ಸಲಹೆ ಮಾಡುತ್ತಾರೆ ಎಂಬ ಅಭಿಪ್ರಾಯ ಬಹುಪಾಲು ಜನರಲ್ಲಿದೆ. ವೈದ್ಯ ಮತ್ತು ರೋಗಿ ತಮ್ಮ ತಮ್ಮ ರಕ್ಷಣೆಗೆ ಸನ್ನದ್ಧವಾಗಿರಬೇಕೆಂಬ ಮನೋವೃತ್ತಿ ಯಳ್ಳವರಾಗಿರುತ್ತಾರೆ. ವೈದ್ಯರುಗಳು ಅನಾವಶ್ಯಕವಾಗಿ ಅಗತ್ಯವಿಲ್ಲದಿ ದ್ದರೂ ದುಬಾರಿ ತಪಾಸಣಾ ಪರೀಕ್ಷೆಗಳನ್ನು ಹಣಕ್ಕಾಗಿ ಸಲಹೆ ಮಾಡುತ್ತಾರೆ ಎಂಬ ಅಭಿಪ್ರಾಯ ಬಹುಪಾಲು ಜನರಲ್ಲಿದ್ದು, ಇದು ಸಮಂಜಸವಲ್ಲ.

ವೈದ್ಯ-ರೋಗಿ ನಡುವಣ ಆತ್ಮವಿಶ್ವಾಸದ ಕೊಂಡಿ ರೋಗ ವಾಸಿಯಾಗುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಇಂದು ದುರ್ಬಲವಾಗುತ್ತಿರುವುದು ವಿಷಾದದ ಸಂಗತಿ. ಕಾಯಿಲೆಯನ್ನು ಪ್ರಾರಂಭಿಕ ಹಂತದಲ್ಲಿಯೇ ಕಂಡು ಹಿಡಿಯಲು ಮುಂಜಾಗ್ರತಾ ಪರೀಕ್ಷೆಗಳು ಅತ್ಯವಶ್ಯಕ. ಉದಾ: ಬೆನ್ನು ನೋವಿನ ರೋಗಿಗೆ ಪ್ರಾರಂಭದಲ್ಲಿಯೇ ಎಂಆರ್‌ಐ ಮಾಡುವುದರಿಂದ ಸಂಭವನೀಯ ಕ್ಯಾನ್ಸರ್ ಅನ್ನು ವಾಸಿಮಾಡುವ ಹಂತದಲ್ಲಿಯೇ ಪತ್ತೆಮಾಡಬಹುದು. ನಿಧಾನಿಸಿದಲ್ಲಿ ಅದು ಗುಣಪಡಿಸಲಾಗದ ಹಂತ
ತಲುಪಬಹುದು.

ವೈದ್ಯ ವೃತ್ತಿ ಕಾನೂನಿನ ಪರಿಧಿಗೆ: ವೈದ್ಯಕೀಯ ವೃತ್ತಿ ಇಂದು ವ್ಯಾಪಾರೀಕರಣಗೊಂಡಿರುವ ಸಾಮಾಜಿಕ ವ್ಯವಸ್ಥೆಯೆಂದು, ದಕ್ಷತೆಯ ಕೊರತೆಗಳು ಕೇಳಿಬಂದ ಹಿನ್ನೆಲೆಯಲ್ಲಿ ವೈದ್ಯಕೀಯ ಸೇವೆಯ ಗುಣಮಟ್ಟವನ್ನು ಕಾನೂನಿನಡಿಯಲ್ಲಿ ಪರಾಮರ್ಶಿಸಿ ದಂಡಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿರುವುದರಿಂದ ವೈದ್ಯಕೀಯ ಸಿಬ್ಬಂದಿಗಳು ಹಿಂದಿ ಗಿಂತಲೂ ಹೆಚ್ಚು ಜಾಗೃತರಾಗಿ
ಸೇವೆಯನ್ನು ಕೊಡ ಬೇಕಾದ ಅವಶ್ಯಕತೆ ಇದೆ.

ವೈದ್ಯಕೀಯ ಜ್ಞಾನದ ಜೊತೆ ಜೊತೆಗೆ ಕಾನೂನಿನ ಜ್ಞಾನವನ್ನೂ ಅರಿಯುವ ಅವಶ್ಯಕತೆ ವೈದ್ಯ ಸಿಬ್ಬಂದಿಗಿದೆ. ವೈದ್ಯ ಸೇವೆಯ ಅಜಾಗರೂಕತೆಗೆ ಶಿಕ್ಷೆ ವಿಧಿಸುವ ಭಾರತೀಯ ದಂಡ ಸಂತೆ ೩೦೪-ಎ ಮತ್ತು ವೈದ್ಯಕೀಯ ಸೇವಾ ಕೊರತೆಯೆಂದ ರೋಗಿಗುಂಟಾ ಗುವ ನಷ್ಟವನ್ನು ತುಂಬಿ ಕೊಡಲಿರುವ ಗ್ರಾಹಕರ ರಕ್ಷಣಾ ಕಾಯ್ದೆಗಳು ವೈದ್ಯ ಸಿಬ್ಬಂದಿಗಳ ಕೊರಳಿಗೆ ಉರುಳಾಗಿವೆ. ಇವೆರಡು ಕಾನೂನಿನ ಅಡಿಯಲ್ಲಿ ಮಾತ್ರ ವೈದ್ಯ ಸಿಬ್ಬಂದಿಯ ಸೇವೆ ದಂಡಿಸಬಹುದು, ಮತ್ತಾವ ಕಾನೂನಿನಿಂದಲ್ಲ.

ಯಾವುದು ವೈದ್ಯರ ಅಜಾಗರೂಕತೆ?: ಸರ್ವೋಚ್ಛ ನ್ಯಾಯಾಲಯ ಯಾವುದು ವೈದ್ಯರ ಅಜಾಗರೂಕತೆ ಎಂದು ತೀರ್ಪು ನೀಡಿದೆ. ವೈದ್ಯರ ಅಜಾಗರೂಕತೆಯನ್ನು ಪರಿಗಣಿಸುವಾಗ ಆ ಸಂದರ್ಭದಲ್ಲಿ ಸಂಬಂಧಿಸಿದ ವೈದ್ಯ ಮತ್ತೊಬ್ಬ ವೈದ್ಯ ಮಾಡ ಬಹುದಾಗಿದ್ದ ಎಲ್ಲಾ ಚಿಕಿತ್ಸಾ ಮತ್ತು ಮುಂಜಾಗ್ರತಾ ಕ್ರಮಗಳನ್ನು ಇವನೂ ಸಹ ತೆಗೆದುಕೊಂಡಿದ್ದಾನೆಯೇ, ರೋಗಿ ಯನ್ನು ಉಳಿಸಲು ಆ ಸಂದರ್ಭದಲ್ಲಿ ತನ್ನ ಇತಿಮಿತಿಯಲ್ಲಿದ್ದ ಲಭ್ಯ ಕ್ರಮಗಳನ್ನು ತೆಗೆದುಕೊಳ್ಳ ಲಾಗಿದೆಯೇ ಎಂಬ ಅಂಶಗಳನ್ನು ಪರಿಗಣಿ ಸಬೇಕೆಂದು ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ.

ಹಾಗೆ ಮಾಡದಿದ್ದಲ್ಲಿ ಮಾತ್ರ ಅದು ವೈದ್ಯಕೀಯ ಅಜಾಗರೂಕತೆಯಾಗುತ್ತದೆಯೇ ವಿನ ಇಲ್ಲದಿದ್ದಲ್ಲಿ ಅಲ್ಲ. ಅವಶ್ಯಕತೆ ಬಿದ್ದಾಗ ಎರಡನೇ ಅಭಿಪ್ರಾಯ ಪಡೆಯಬೇಕು. ತಾನು ಕೈಗೊಂಡ ಎಲ್ಲ ಚಿಕಿತ್ಸಾ ವಿಧಾನಗಳನ್ನು ಕೇಸ್‌ಶೀಟ್‌ನಲ್ಲಿ ದಾಖಲಿಸುವುದು ಮಾತ್ರ ಅತ್ಯವಶ್ಯಕ. ರೋಗಿ ಸತ್ತ ನಂತರ ವೈದ್ಯನ ಬೆಂಬಕ್ಕೆ ಉಳಿಯುವುದು ದಾಖಲೆಯೊಂದೇ.

ದುರಂತಗಳು: ವೈದ್ಯ ವೃತ್ತಿಯಲ್ಲಿ ಕಾಯಿಲೆಗಳ ಪತ್ತೆಯಲ್ಲಿನ ದೋಷಗಳು, ಸಮರ್ಪಕ ಔಷಧಿಗಳನ್ನು ನೀಡದಿರುವಿಕೆ, ರೋಗ ಗತಿಯನ್ನು ರೋಗಿಗೆ ತಿಳಿಸದಿರುವಿಕೆ, ತಗಲುವ ವೆಚ್ಚವನ್ನು ರೋಗಿಗೆ ಮನವರಿಕೆ ಮಾಡಿಕೊಡದಿರುವುದು, ಶಸ್ತ್ರಕ್ರಿಯೆ ಯಲ್ಲಿನ ವ್ಯತ್ಯಾಸಗಳು, ತಜ್ಞರಲ್ಲದವರು ಸಂಬಂಧಿಸದ ತಜ್ಞತೆಯ ಸೇವೆಯನ್ನು ನೀಡುವುದು, ಸುವ್ಯವಸ್ಥಿತ ಸೌಲಭ್ಯಗಳಿಲ್ಲದೆ ರೋಗಿ ಯನ್ನು ಚಿಕಿತ್ಸೆಗಾಗಿ ದಾಖಲು ಮಾಡಿಕೊಳ್ಳುವಿಕೆ ಇವು ವೈದ್ಯಕೀಯ ಸೇವೆಯಲ್ಲಿ ಕಂಡುಬರಬಹುದಾದ ಪ್ರಮುಖ ಕೊರತೆಗಳು.

ಪ್ರತಿಯೊಂದು ಕಾಯಿಲೆಗೂ ಅಂಗೀಕೃತ ಔಷಧ ಚಿಕಿತ್ಸಾ ಪದ್ಧತಿ ಇದ್ದು, ಅದಕ್ಕನುಗುಣವಾಗಿಯೇ ಔಷಧಗಳನ್ನು ಸಲಹೆ ಮಾಡಬೇಕು. ನಿರ್ದಿಷ್ಟ ಅಂಗೀಕೃತ ಔಷಧ ಪದ್ಧತಿ ಎಲ್ಲರಲ್ಲೂ ಪರಿಣಾಮಕಾರಿಯಾಗಬೇಕೆಂದಿಲ್ಲ. ಆಗದಿದ್ದಾಗ ವಿವೇಚನೆಗನು ಗುಣವಾಗಿ ಬದಲಿಸಬೇಕು. ಔಷಧಗಳ ದುಷ್ಟರಿಣಾಮಗಳಿಂದಲೂ ದುರಂತಗಳು ಸಂಭವಿಸಬಹುದು. ತಾನು ಆಯ್ದುಕೊಂಡ ಚಿಕಿತ್ಸಾವಿಧಾನ ಮತ್ತು ಔಷಧಗಳಿಗೆ, ವೈದ್ಯನ ಬಳಿ ಸಮಂಜಸವಾದ ಅಂಗೀಕೃತ ಕಾರಣವಿರಬೇಕು.

ಕಾಯಿಲೆಯನ್ನು ಅದರ ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಮಾಡದಿದ್ದಲ್ಲಿ ಅದರಿಂದ ಸಂಭವಿಸ ಬಹುದಾದ ನಷ್ಟಗಳಿಗೆ ವೈದ್ಯರು ಹೊಣೆಯಾಗುತ್ತಾರೆ. ಎಲ್ಲ ಕಾಯಿಲೆಗಳನ್ನು ವೈದ್ಯ ಪರೀಕ್ಷೆಯಿಂದಲೇ ಪತ್ತೆ ಮಾಡಲಾಗುವುದಿಲ್ಲ. ಗುಪ್ತವಾಗಿರುವ ಮತ್ತು ಪ್ರಾರಂಭಿಕ ಹಂತದ ಕಾಯಿಲೆಯನ್ನು ಪತ್ತೆ ಮಾಡಲು ಸಿ.ಟಿ, ಎಂ.ಆ.ರ್‌ಐ, ಆಂಜಿಯೋಗ್ರಾಂ, ಪೆಟ್‌ಸ್ಕ್ಯಾನ್ ಇತ್ಯಾದಿ ದುಬಾರಿ ಬೆಲೆಯ ಅತ್ಯಾಧುನಿಕ ಪರೀಕ್ಷೆಗಳು ಅವಶ್ಯಕವಿದ್ದು, ಇವುಗಳನ್ನು ಸೂಕ್ತ ಕಾಲದಲ್ಲಿ ಮಾಡಿಸಿ ರೋಗ ಪತ್ತೆ ಮಾಡದೇ ಕಾಯಿಲೆ ಉಲ್ಬಣಗೊಂಡಲ್ಲಿ ವೈದ್ಯನೇ ಹೊಣೆಯಾಗುತ್ತಾನೆ. ಪರೀಕ್ಷೆ ಮಾಡಿಸುವುದು, ಬಿಡುವುದು ರೋಗಿಯ ಆಯ್ಕೆ. ಆದರೆ ಅಽಕೃತವಾಗಿ, ಲಿಖಿತವಾಗಿ ವಿವೇಚನಾ ಪೂರಕ ಸಲಹೆ ನೀಡುವುದು ವೈದ್ಯನ ಕರ್ತವ್ಯ, ಇದರಲ್ಲಾಗುವ ಕೊರತೆಗಳಿಗೂ ವೈದ್ಯ ಜವಾಬ್ದಾರಿಯಾಗುತ್ತಾನೆ.

ರೋಗ ದೃಢೀಕರಣಗೊಂಡ ನಂತರ ಮುಂದೆ ರೋಗದ ಮುನ್ನಡೆ ಹೇಗಾಗಬಹುದೆಂಬುದನ್ನು ರೋಗಿಗೆ ಮಾಹಿತಿ ನೀಡಬೇಕು. ಸಂಭವಿಸಬಹುದಾದ ಅವಘಡಗಳ ಬಗ್ಗೆ , ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ರೋಗಿಗೆ ಮಾಹಿತಿ ನೀಡಬೇಕು. ನಿಡದಿದ್ದಲ್ಲಿ ಇದೂ ಸಹ ವೈದ್ಯಕೀಯ ಸೇವೆಯ ಕೊರತೆಗೆ ಕಾರಣವಾಗುತ್ತದೆ.

ಚಿಕಿತ್ಸಾ ವಿಧಾನಗಳು: ಒಂದೇ ಕಾಯಿಲೆಗೆ ಹಲವಾರು ವಿಧಾನಗಳ ಚಿಕಿತ್ಸೆಗಳಿದ್ದು, ನಿರ್ದಿಷ್ಟ ಕಾಯಿಲೆಯ ರೋಗಿಗೆ ನಿರ್ದಿಷ್ಟ ವಿಧಾನದ ಚಿಕಿತ್ಸೆಯನ್ನು ಏಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬ ಕಾರಣವನ್ನು ರೋಗಿಗೆ ವಿವರಿಸಬೇಕು.

ಪ್ರತಿಯೊಂದು ಶಸ್ತ್ರಕ್ರಿಯೆಯಲ್ಲೂ ಸಂಭವಿಸಬಹುದಾದ ಅವಘಡಗಳಿದ್ದು, ಅವುಗಳನ್ನು ರೋಗಿಗೆ ಮನವರಿಕೆ ಮಾಡಿಕೊಟ್ಟು ಅವರ ಸಹಿಯನ್ನು ಪಡೆಯಬೇಕು. ಸಂಬಂಧಿಸಿದ ಶಸ್ತ್ರಕ್ರಿಯೆಯಲ್ಲಿ ಪರಿಣತಿ ಇರುವ ತಜ್ಞ ವೈದ್ಯರೇ ಶಸಕ್ರಿಯೆಯನ್ನು ನಿರ್ವಹಿ
ಸಬೇಕು. ಅದಕ್ಕೆ ಸಂಬಂಧಿಸಿದ ಎಲ್ಲ ಮೂಲಭೂತ ಸೌಕರ್ಯಗಳು ಮತ್ತು ಸಿಬ್ಬಂದಿಗಳಿರಬೇಕು. ಅನುಮೋದಿತ ಶಸ್ತ್ರಕ್ರಿಯಾ ವಿಧಾನವನ್ನೇ ಅನುಸರಿಸಬೇಕು. ಶಸ್ತ್ರಕ್ರಿಯೆ ಸಂದರ್ಭದಲ್ಲಿ ಸಂಭವಿಸುವ ಸಹಜ ಅವಘಡಗಳು (ರಕ್ತ ನಾಳ ಮತ್ತು ನರ ಕತ್ತರಿಸುವಿಕೆ ಅಕ್ಕಪಕ್ಕದ ಅಂಗಾಂಗಗಳ ಜಖಂ)ಉಂಟಾದಲ್ಲಿ ತಕ್ಷಣ ಅವುಗಳನ್ನು ಗಮನಿಸಿ ಸೂಕ್ತ ಚಿಕಿತ್ಸೆ ನೀಡಿ ದಾಖಲಿಸ ಬೇಕು. ಶಸ್ತ್ರಕ್ರಿಯೆ ಪ್ರಾರಂಭದಲ್ಲಿ ಉಪಯೋಗಿಸಲಾಗುವ ಸಲಕರಣೆಗಳು, ಕಾಟನ್, ಗಾಜ್‌ಚೂರುಗಳು ಇತ್ಯಾದಿಗಳ ಲೆಕ್ಕವಿಟ್ಟು ಶಸಚಿಕಿತ್ಸೆ ಮುಗಿದ ನಂತರ ಅವುಗಳನ್ನು ಪುನಃ ಲೆಕ್ಕಹಾಕಿ ದೇಹ ದೊಳಗೆ ಏನನ್ನೂ ಬಿಟ್ಟಿಲ್ಲ ಎಂಬುದನ್ನು ಖಾತರಿಪಡಿಸಿ ಕೊಳ್ಳಬೇಕು.

ಸಾಧ್ಯವಾದಲ್ಲಿ ಶಸಕ್ರಿಯೆಯ ವಿಡಿಯೋವನ್ನು ದಾಖಲಿಸಬೇಕು. ಶಸ್ತ್ರಕ್ರಿಯೆ ಬಗ್ಗೆ ಪೂರ್ಣ ಮಾಹಿತಿ ನೀಡಿ, ಒಪ್ಪಿಗೆಯ ಸಹಿ ಪಡೆಯಬೇಕು. ಶಸಕ್ರಿಯೆಯ ಅನಂತರದ ಅವಽ ಬಹಳ ಮುಖ್ಯವಾಗಿದ್ದು ಸಂಭಸಬಹುದಾದ ಶಸಕ್ರಿಯೋತ್ತರದ ಅವಘಡ ಗಳನ್ನು ಗಮನಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ಶಸಕ್ರಿಯೆಯಲ್ಲಾಗುವ ಯಾವುದೇ ಹಂತದ ಕೊರತೆ ವೈದ್ಯ ಸೇವೆಯ ಕೊರತೆ ಯಾಗುತ್ತದೆ. ಸುಸಜ್ಜಿತ ಐಸಿಯು ಇಲ್ಲದೇ ಶಸಕ್ರಿಯೆಯನ್ನು ಮಾಡುವುದೂ ಸಹ ಅಪರಾಧ. ಕೆ.ಎಮ್.ಸಿ. ಅನುಮೋದಿತ ವೈದ್ಯರು ಮತ್ತು ವೈದ್ಯೇತರ ಸಿಬ್ಬಂದಿಗಳು ಮತ್ತು ಸಲಕರಣೆಗಳಿಲ್ಲದೆ ಶಸಕ್ರಿಯೆ ಜರುಗಿಸುವುದು ಕಾನೂನುಬಾಹಿರ.

ಸಂಭವಿಸಬಹುದಾದ ಮಾರಣಾಂತಿಕ ಅವಘಡಗಳ ನಿರ್ವಹಣೆಗಳಿಗೆ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಇರಲೇಬೇಕು. ಶಸ್ತ್ರ ಕ್ರಿಯೆಯಲ್ಲಿ ಉಂಟಾಗುವ ಮತ್ತೊಂದು ಅವಘಡವೆಂದರೆ ದೊಡ್ಡ ರಕ್ತನಾಳವನ್ನು ಕತ್ತರಿಸುವುದರಿಂದುಂಟಾಗುವ ಅತೀವ ರಕ್ತಸ್ರಾವದಿಂದ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಅದನ್ನು ತಡೆಗಟ್ಟಲು ಸೂಕ ಕ್ರಮಗಳನ್ನು ತೆಗೆದುಕೊಳ್ಳಲಾಯಿತೆ ಎಂಬುದು ಬಹು ಮುಖ್ಯವಾದ ಕಾನೂನು ಅಂಶವಾಗಿರುತ್ತದೆ. ಇವೆಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡ ನಂತರವೂ ಸಾವು ಉಂಟಾದಲ್ಲಿ ವೈದ್ಯ ಜವಾಬ್ದಾರನಾಗುವುದಿಲ್ಲ.

ಅರಿವಳಿಕೆ: ಶಸ್ತ್ರಕ್ರಿಯೆ ಸಂದರ್ಭದಲ್ಲಿ ಸಂವೇದನಾರಾಹಿತ್ಯ ಮತ್ತು ಪ್ರಜ್ಞಾರಾಹಿತ್ಯಗೊಳಿಸಲು ನೀಡಲಾಗುವ ಅರಿವಳಿಕೆ ಔಷಧಗಳು ಮತ್ತು ತಂತ್ರಜ್ಞಾನದಿಂದಲೂ ಅವಘಡಗಳು ಸಂಭವಿಸಬಹುದು. ಸೂಕ್ತ ಅರಿವಳಿಕೆ ಔಷಧದ ಉಪಯೋಗ, ಪರಿಣತಿ ಪಡೆದ ಅರಿವಳಿಕೆ ತಜ್ಞರು ಮತ್ತು ಸೂಕ್ತ ಸಲಕರಣೆಗಳಿರಬೇಕು.

ಅವಘಡಗಳು ಸಂಭವಿಸಿದಲ್ಲಿ ಅವುಗಳನ್ನು ಜರೂರಾಗಿ, ಸೂಕ್ತವಾಗಿ ಬಗೆಹರಿಸಬೇಕು. ಹೃದಯಸ್ಥಂಭನ, ಉಸಿರಾಟಸ್ಥಗಿತ, ಪ್ರಜ್ಞೆ ಮರುಕಳಿಸದಿರುಕೆ, ಇವು ಸಂಭಸಬಹುದಾದ ಅವಘಡಗಳು. ಹೆರಿಗೆ: ಕಾನೂನು ಬಾಹಿರ ಗರ್ಭಪಾತ, ಅಡಚಣೆ ಹೆರಿಗೆ, ಗಂಡಾಂತರದ ಬಸಿರಿನ ಸಮಸ್ಯೆಗಳು, ಹೆರಿಗೆಯ ಹಂತಗಳಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗದಿರುವುದು, ಹೆರಿಗೆ ಸಮಯದಲ್ಲಿನ ಅವಘಡಗಳು, ಕರಳುಬಳ್ಳಿ ಜಾರಿಕೆ, ಉಸಿರು ಕಟ್ಟಿ ಮಗು ಸಾಯುವಿಕೆ, ಹೆರಿಗೆಯೋತ್ತರದ ರಕ್ತಸ್ರಾವ, ಇವು ವೈದ್ಯರನ್ನು ಕಾನೂನು ಕಟ್ಟಳೆಗೆ ಎಳೆಯಬಹುದಾದ ಪ್ರಸವದ ಪ್ರಸಂಗಗಳು.

ಕಾನೂನು ಬಾಹಿರ ಗರ್ಭಪಾತವನ್ನು ಯಾವ ಕಾರಣಕ್ಕೂ ಕೈಗೊಳ್ಳಬಾರದು. ಹೆರಿಗೆ ಪ್ರಾರಂಭವಾದ ಮೇಲೆ ಪ್ರಸೂತಿ ತಜ್ಞರು ಪಕ್ಕದಲ್ಲಿಯೇ ಇದ್ದು ಹೆರಿಗೆಯ ವಿವಿಧ ಹಂತಗಳನ್ನು ಗಮನಿಸಿ ಸಂದರ್ಭಕ್ಕನುಗುಣವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಕ್ಕಳದ ಹೆರಿಗೆ ಮಾಡುವಾಗ ಮಗುವಿಗೆ ಜಖಂ ಆಗದಂತೆ ಕ್ರಮವಹಿಸಬೇಕು. ಕರಳುಬಳ್ಳಿ ಯೋನಿಯ ಮೂಲಕ ಹೊರಜಾರಿದ್ದಲ್ಲಿ ತಕ್ಷಣ ಸೂಕ್ತಚಿಕಿತ್ಸೆ ಅತ್ಯವಶ್ಯಕ. ಇಲ್ಲದಿದ್ದಲ್ಲಿ ಮಗು ಸಾವನ್ನಪ್ಪುವ ಸಾಧ್ಯತೆಯಿರುತ್ತದೆ. ಹೆರಿಗೆಯೋತ್ತರದ ರಕ್ತಸ್ರಾವ ಮಾರಣಾಂತಿಕ ವಾಗಬಹುದಾಗಿದ್ದು, ಅದನ್ನು ತಡೆಯಲು ಮತ್ತು ರಕ್ತವನ್ನು ಪುನರ್ ನೀಡಲು ಜರೂರಾಗಿ ಕ್ರಮಕೈಗೊಳ್ಳಬೇಕು. ಇವುಗಳ ಲ್ಲಾಗುವ ಕೊರತೆ ಅಜಾಗರೂಕತೆಯಾಗುತ್ತವೆ.

ತುರ್ತು ಚಿಕಿತ್ಸೆ: ಹೃದಯಾಘಾತ, ಉಸಿರಾಟದ ವಿಫಲತೆ, ಅಪಘಾತ ಇತ್ಯಾದಿ ತುರ್ತು ಸಂದರ್ಭಗಳಲ್ಲಿ ರೋಗಿಯನ್ನು ಸಾವಿ ನಿಂದ ಉಳಿಸುವುದೇ ಪ್ರಮುಖ ಧ್ಯೇಯವಾಗಿದ್ದು, ಇವುಗಳ ಬಗ್ಗೆ ಮೊದಲು ಗಮನ ಹರಿಸಬೇಕು. ಇವುಗಳಲ್ಲಾಗುವ ವ್ಯತ್ಯಾಸಗಳು ವೈದ್ಯಕೀಯ ಸೇವೆಯ ಕೊರತೆಯಡಿಯಲ್ಲಿ ಬರುತ್ತವೆ.

ವೈದ್ಯರ ಮೇಲೆ ಹಲ್ಲೆ: ಚಿಕಿತ್ಸೆ ಫಲಕಾರಿಯಾಗದೆ ರೋಗಿ ಸಾವಿಗೀಡಾದಾಗ ಉದ್ರಿಕ್ತಗೊಂಡ ರೋಗಿಯ ಕಡೆಯವರು ವೈದ್ಯ ಸೇವೆಯ ಕೊರತೆಯನ್ನು ಮುಂದು ಮಾಡಿಕೊಂಡು, ವೈದ್ಯರ ಮೇಲೆ ಹಲ್ಲೆ ನಡೆಸುವ ಮತ್ತು ಆಸ್ಪತ್ರೆಗಳನ್ನು ಹಾನಿಗೊಳಿಸುವ ಪ್ರಸಂಗಗಳು ಅಧಿಕವಾಗಿ ಜರಗುತ್ತಿವೆ. ಕೆಲವೊಮ್ಮೆ ಆಸ್ಪತ್ರೆಗೆ ಹಣ ಪಾವತಿ ಮಾಡುವುದನ್ನು ತಪ್ಪಿಸಿಕೊಳ್ಳಲೂ ಸಹ ಈ
ಮಾರ್ಗವನ್ನು ಅನುಸರಿಸುತ್ತಾರೆ. ಯಾವ ವೈದ್ಯನೂ ಉದ್ದೇಶಪೂರ್ವಕವಾಗಿ ರೋಗಿಯ ಪ್ರಾಣಕ್ಕೆ ಸಂಚಕಾರ ತರುವುದಿಲ್ಲ. ವೈದ್ಯಕೀಯ ಸಿಬ್ಬಂದಿ ಈ ಹಲ್ಲೆಗಳಿಂದ ಆತ್ಮವಿಶ್ವಾಸವನ್ನು ಕಳೆದುಕೊಂಡು ವತ್ತಿ ಮೇಲೆ ನಿರಾಸಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ವೈದ್ಯ ಸಮುದಾಯ ಇದಕ್ಕೆ ಹೆದರುವ ಅಗತ್ಯವಿಲ್ಲ, ಭಾವನಾತ್ಮಕವಾಗಿ ಸಂಬಂಧಿಗಳನ್ನು ಕಳೆದುಕೊಂಡಾಗ ಇವು ಸಹಜ. ವೈದ್ಯ ಸಮುದಾಯ ಧೃತಿಗೆಡದೆ ರಕ್ಷಣೆ ಪಡೆದು ಚಾಕಚಕ್ಯತೆಯಿಂದ ಪರಿಸ್ಥಿತಿಯನ್ನು ನಿಭಾಯಿಸಬೇಕು.

ಮೃತದೇಹವನ್ನು ಬಹುಬೇಗ ಸಾಗಿಸುವ ಕಡೆಗೆ ಗಮನಹರಿಸಬೇಕು. ವೈದ್ಯರ ಮೇಲೆ ದೌರ್ಜನ್ಯವೆಸಗುವವರ ಮೇಲೆ ಕಾನೂನು ಕ್ರಮ ಜರುಗಿಸಲು ಕಾನೂನುಗಳಿವೆ. ಸಾವನ್ನು ತಿಳಿಸುವ ಮೊದಲು ಹತ್ತಿರದ ಪೊಲೀಸ್ ಠಾಣೆಯಿಂದ ರಕ್ಷಣೆ ಪಡೆದು ನಂತರ ಸಾವನ್ನು ಪ್ರಕಟಿಸುವುದರಿಂದ ಸಂಭಸಬಹುದಾದ ದೈಹಿಕ ಮತ್ತು ಮಾನಸಿಕ ದೌರ್ಜನ್ಯಗಳಿಂದ ಪಾರಾಗಬಹುದು.

ಪೋಲೀಸರ ದೌರ್ಜನ್ಯ: ಸಾಮಾಜಿಕ ಮಾಧ್ಯಮಗಳು ನೈಜ ಸಂಗತಿಗಳನ್ನು ತಿಳಿಯದೆ ಇಂಥ ಸಂದರ್ಭಗಳಲ್ಲಿ ವೈದ್ಯರನ್ನೇ ಗುರಿಮಾಡಿ ಅವಹೇಳನ ಮಾಡಿ ವೈದ್ಯರ ಆತ್ಮವಿಶ್ವಾಸವನ್ನು ಕುಗ್ಗಿಸುವುದರಿಂದ ಎಷ್ಟೋ ವೈದ್ಯರು ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಹೆರಿಗೆ ತಜ್ಞರೊಬ್ಬರು ರೋಗಿ ಹೆರಿಗೆಯೋತ್ತರದ ರಕ್ತಸ್ರಾವ ದಿಂದಾದ ಸಾವಿಗೀಡಾದ ಪ್ರಸಂಗದಲ್ಲಿ ಪೊಲೀಸರ ಕಿರುಕುಳ ಮತ್ತು ಅಪಮಾನಗಳನ್ನು ತಾಳದೆ ಆತ್ಮಹತ್ಯೆ ಮಾಡಿಕೊಂಡ ಪ್ರಸಂಗ ವೈದ್ಯಕೀಯ ಸಮುದಾಯದ
ಆತ್ಮವಿಶ್ವಾಸವನ್ನೇ ಕುಗ್ಗಿಸಿದೆ. ವೈದ್ಯರ ಮೇಲೆ ಕೊಲೆ ಮೊಕದ್ದಮೆ ಐಪಿಸಿ ೩೨೦ರ ಅನ್ವಯ ದಾಖಲಿಸಬಾರದೆಂದು ಸರ್ವೋಚ್ಛ ನ್ಯಾಯಾಲಯದ ಆದೇಶವಿದ್ದರೂ ಈ ಪ್ರಕರಣದಲ್ಲಿ ಹೆರಿಗೆ ತe ಮೇಲೆ ಕೊಲೆ ಮೊಕದ್ದಮೆ ಹೂಡಿ ಅಪಮಾನಿಸಿ ಅವರ ಸಾವಿಗೆ ಪೋಲೀಸರು ಕಾರಣರಾಗಿದ್ದು, ಇದು ಪೋಲಿಸ್ ದೌರ್ಜನ್ಯಕ್ಕೆ ಹಿಡಿದ ಕೈಗನ್ನಡಿ.

ಈ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರ ತನ್ನ ಎಲ್ಲಾ ಪೋಲಿಸ್ ಸಿಬ್ಬಂದಿಗಳಿಗೆ ಆದೇಶವನ್ನು ಹೊರಡಿಸಿ, ಸರ್ವೋಚ್ಛ ನ್ಯಾಯಾ ಲಯದ ತೀರ್ಪಿನ ಮಾನದಂಡಗಳನ್ನು ಚಾಚೂತಪ್ಪದೆ ಪಾಲಿಸಬೇಕೆಂದು ಸೂಚಿಸಿರುವುದು ವೈದ್ಯ ಸಮುದಾಯದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ.

ವೈದ್ಯರಿಗೆ ಕಾನೂನಿನ ಅಭಯ: ವೈದ್ಯಕೀಯ ಸೇವೆಯ ಅಜಾಗರೂಕತೆಯಿಂದಾಗುವ ಅವಘಡಗಳು ಮತ್ತು ಸಾವನ್ನು ಭಾರತೀಯ ದಂಡ ಸಂಹಿತೆ 304-ಎ ಅಡಿಯಲ್ಲಿ ಮೊಕದ್ದಮೆ ಅವಶ್ಯಕದ್ದಲ್ಲಿ ಮಾತ್ರ ದಾಖಲಿಸಿಕೊಳ್ಳಬೇಕೆಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಯಾವ ವೈದ್ಯನೂ ಉದ್ದೇಶಪೂರ್ವಕವಾಗಿ ರೋಗಿಯನ್ನು ಸಾಯಿಸುವುದಿಲ್ಲವೆಂದು ಮತ್ತು ತಾನು ಚಿಕಿತ್ಸೆ ನೀಡುವ ಎಲ್ಲ ರೋಗಿಗಳನ್ನು ವೈದ್ಯ ಬದುಕಿಸಲು ಸಾಧ್ಯವಿಲ್ಲವಾದುದರಿಂದ ಆತನ ಮೇಲೆ ಕೊಲೆ ಮೊಕದ್ದಮೆ ಯನ್ನು ಹೂಡಬಾರದೆಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ.

ವೈದ್ಯರ ಮೇಲೆ ದೂರುಗಳು ಬಂದಲ್ಲಿ ಅವರ ವಿರುದ್ಧ ಎಫ್ಐಆರ್ ನೋಂದಣಿ ಮಾಡುವ ಮೊದಲು ಪ್ರಕರಣವನ್ನು ಸರ್ಕಾರಿ ವೈದ್ಯಕೀಯ ಮಂಡಳಿಗೆ ಕಳುಹಿಸಿ ಅದರ ಅಭಿಪ್ರಾಯ ಪಡೆಯಬೇಕೆಂದು ಸರ್ವೋಚ್ಛ ನ್ಯಾಯಾಲಯ ಆದೇಶಿಸಿದೆ ಮತ್ತು ಅಲ್ಲಿಂದ ವರದಿ ಬರುವವರೆಗೆ ಎಫ್ಐಆರ್ ದಾಖಲಿಸುವಂತಿಲ್ಲ ಮತ್ತು ವೈದ್ಯರನ್ನು ಬಂಧಿಸುವಂತಿಲ್ಲ. ಸರ್ಕಾರಿ ವೈದ್ಯಕೀಯ ಮಂಡಳಿ ಆರೋಪಿ ವೈದ್ಯನನ್ನು ಕರೆದು ಅವನ ವಿಚಾರಣೆಯನ್ನು ಪಡೆದುಕೊಂಡ ನಂತರವೇ ವರದಿ ನೀಡಬೇಕೆಂದು ತೀರ್ಪು ನೀಡಿದೆ. ಒಂದು ಪಕ್ಷ ವೈದ್ಯಕೀಯ ಮಂಡಳಿಯ ವರದಿ ವೈದ್ಯರ ವಿರುದ್ಧವಾಗಿದ್ದಲ್ಲಿ ಮಾತ್ರ ಅವನ ವಿರುದ್ಧ ಎಫ್.ಐ.ಆರ್. ಅನ್ನು ದಾಖಲಿಸ ಬೇಕೆಂದು ತದನಂತರವೂ ನ್ಯಾಯಾಲಯ ಮೊಕದ್ದಮೆ ಪ್ರಾರಂಭ ಮಾಡುವ ಮುನ್ನ, ಸರ್ಕಾರದ ಅನುಮತಿ
ಪಡೆಯಬೇಕೆಂದು ನ್ಯಾಯಾಲಯ ತಿಳಿಸಿದೆ.

ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವ ಹಂತದಲ್ಲೂ ತಮ್ಮನ್ನು ಸಮರ್ಥಿಸಿಕೊಳ್ಳಲು ಬಹಳ ಅವಕಾಶಗಳಿವೆ. ಈ ಎಲ್ಲ
ಕಾನೂನು ಹಂತಗಳ ಹಿನ್ನೆಲೆಯಲ್ಲಿ ವೈದ್ಯರುಗಳು ಹೆದರುವ ಅಗತ್ಯವಿಲ್ಲ; ಕಾನೂನನ್ನು ಅರಿತು ರಕ್ಷಣೆ ಪಡೆಯಬೇಕಷ್ಟೆ. ವೈದ್ಯರುಗಳು ಸೂಕ್ಷ್ಮ ಸ್ವಭಾವದವರಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅವಹೇಳನ ಸುದ್ದಿಗಳಿಗೆ ಕಿವಿಗೊಡದೆ ದೃಢ ಮನಸ್ಕರಾಗಿ ಪ್ರಸಂಗವನ್ನು ಎದುರಿಸಬೇಕು.

ಮಾನವೀಯ ಮೌಲ್ಯಗಳ ಹಿನ್ನೆಲೆಯಲ್ಲಿ ಸದುದ್ದೇಶದಿಂದ ಮಾಡುವ ಯಾವುದೇ ಸೇವೆಯೂ ರಕ್ಷಾ ಕವಚದಂತೆ ರಕ್ಷಿಸುತ್ತದೆ. ಆದರೆ ಅದು ಕಾನೂನಿನ ಸಮರ್ಥನೆಗಾಗಿ ದಾಖಲೆಯ ಮೇಲೂ ಇರಬೇಕಷ್ಟೆ