Thursday, 14th November 2024

ನೂರು ಔಷಧಗಳಿಗಿಂತ ಒಂದು ಲಸಿಕೆ ಮೇಲು !

ಅವಲೋಕನ

ಡಾ.ದಯಾನಂದ ಲಿಂಗೇಗೌಡ

ಪ್ರಸಿದ್ಧ ಆಯುರ್ವೇದಿಕ್ ವೈದ್ಯರೊಬ್ಬರು ಕರೋನಾ ಲಸಿಕೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾ ಮತ್ತೊಂದು ವಿವಾದಾತ್ಮಕ
ಹೇಳಿಕೆ ಕೊಟ್ಟಿzರೆ. ಒಂದೊಂದು ರೋಗಕ್ಕೆ ಒಂದೊಂದು ಲಸಿಕೆ ಎಂಬ ಚಿಕಿತ್ಸಾ ವಿಧಾನವೇ ತಪ್ಪು.

3000 ರೋಗಗಳಿದ್ದರೆ 3000ಕ್ಕೆ ನೀಡುವುದು ತರವೇ?. BCG ಲಸಿಕೆ ನೀಡುವ ಕಾರ್ಯಕ್ರಮ ಭಾರತದಲ್ಲಿ ಜಾರಿಯಲ್ಲಿದ್ದರೂ ಕೂಡ, ಟಿಬಿ ರೋಗದಿಂದ ಜನರು ಇನ್ನೂ ಸಾಯುತ್ತಲೇ ಇzರೆ. ಟಿಬಿ ಲಸಿಕೆ ಪ್ರಯೋಜನವಿಲ್ಲ ಎಂದು ಗೊತ್ತಿದ್ದು ಕೂಡ ಈ ಲಸಿಕೆಯನ್ನು ಏಕೆ ಮುಂದುವರಿಸಲಾಗುತ್ತಿದೆ? ಎಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮಾತ್ರೆಗಳಲ್ಲಿ ಪ್ರಚಾರದಲ್ಲಿ ಕೀರ್ತಿಶಿಖರವನ್ನೇರಿದ್ದ ಈ ವೈದ್ಯರು, ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವ ಲಸಿಕಾ ವಿಧಾನದ ಬಗ್ಗೆ ಕಿಡಿ ಕಾರುತ್ತಿರುವುದು ಆಶ್ಚರ್ಯ ವೆನಿಸುತ್ತಿದೆ. ಈ ರೀತಿಯ ವ್ಯಾಕ್ಸಿನ್ ವಿರುದ್ಧದ ಹೇಳಿಕೆ ಭಾರತಕ್ಕೆ ಹೊಸದಾದರೂ, ಆಧುನಿಕ ವೈದ್ಯಪದ್ಧತಿಗೆ ಇದು ಹೊಸದಲ್ಲ. ಒಂದು ಆಸಕ್ತಿಕರ ವಿಷಯವೆಂದರೆ ಲಸಿಕೆಗೆಗಳು ಹೇಗೆ ಪಾಶ್ಚಿಮಾತ್ಯರ ಕೊಡುಗೆಯೋ, ಹಾಗೆ ಲಸಿಕಾ ವಿರೋಧಿ ಚಳುವಳಿ ಕೂಡ ಪಾಶ್ಚಿಮಾತ್ಯ ದೇಶದಲ್ಲಿ ಆರಂಭ
ವಾಗಿದ್ದು!. ಲಸಿಕೆಗಳು ಎಷ್ಟು ಹಳೆಯದೊ, ಲಸಿಕಾ ವಿರೋಧಿ ಚಳವಳಿ ನಿಲುವುಗಳು ಕೂಡ ಅಷ್ಟೇ ಹಳೆಯದು.

1798ರಲ್ಲಿ ಎಡ್ವರ್ಡ್ ಜೆನ್ನರ್ ಸಿಡುಬು ರೋಗಕ್ಕೆ ಲಸಿಕೆ ಕಂಡು ಹಿಡಿದಾಗ, ಬಲಪಂಥೀಯ ಕ್ರಿಶ್ಚಿಯನ್ನರು ವಿರೋಧ ವ್ಯಕ್ತ ಪಡಿಸಿದ್ದರು. ಅದಕ್ಕೆ ಅವರು ನೀಡಿದ ಧಾರ್ಮಿಕ ಕಾರಣ ಮನುಷ್ಯರ ಪಾಪವನ್ನು ಶಿಕ್ಷಿಸಲು ರೋಗವನ್ನು ದೇವರು ಸೃಷ್ಟಿಸಿ ದ್ದಾರೆ. ಆದ್ದರಿಂದ ವ್ಯಕ್ತಿಯನ್ನು ರೋಗದಿಂದ ರಕ್ಷಿಸುವುದು ಕೂಡ ದೈವ ವಿರೋಧಿ ಆಗುತ್ತದೆ ಎಂಬುದು. ಆದರೆ ಕಾಲ ಕ್ರಮೇಣ ಕ್ರಿಶ್ಚಿಯನ್ ಬಲಪಂಥೀಯರ ನಿಲುವುಗಳು ಹೆಚ್ಚು ಕಾಲ ನಿಲ್ಲಲಿಲ್ಲ.

ರೋಗಗಳ ಘೋರ ಪರಿಣಾಮವನ್ನು ಮತ್ತು ಲಸಿಕೆಯ ಪ್ರಯೋಜನವನ್ನು ಕಣ್ಣಾರೆ ಕಂಡ ಜನರು, ತೆರೆದ ಬಾಹುಗಳಿಂದ ಲಸಿಕೆಯನ್ನು ಸ್ವಾಗತಿಸಿದರು. ಕಾಲಕ್ರಮೇಣ ಲಸಿಕೆ ಎಂಬುದು ಒಂದು ಅದ್ಭುತವಾದ ರೋಗದ ವಿರುದ್ಧ ಅಸ್ತ್ರವಾಗಿ ಉಪಯೋ ಗಿಸಲ್ಪಟ್ಟಿದೆ. ಹಾಗೆನೋಡಿದರೆ ಲಸಿಕೆ ಎಂಬ ಕಲ್ಪನೆಯೇ ಅದ್ಭುತ. ನಮ್ಮ ರಕ್ತದಲ್ಲಿರುವ ಬಿಳಿ ಕಾಕ್ತ ಕಣಗಳು ರೋಗಾಣುವಿನ ವಿರುದ್ಧ ಹೊರಡುವ ಸೈನಿಕರು; ರೋಗ ನಿರೋಧಕ ಶಕ್ತಿಯನ್ನು ಕೊಡುವುದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ದೇಹದ ರೋಗನಿರೋಧಕ ಶಕ್ತಿಯನ್ನು ಜಾಗೃತಗೊಳಿಸಲು ಎರಡು ವಿಧಾನಗಳಿವೆ. ಒಂದು, ವ್ಯಕ್ತಿಗೆ ಆ ರೋಗ ಬಂದು ಗುಣ ಮುಖವಾಗಬೇಕು. ಇಲ್ಲವೇ ನಿಶಕ್ತಿಗೊಳಿಸಿದ ವೈರಾಣುವನ್ನು ಲಸಿಕೆಯ ರೂಪದಲ್ಲಿ ಕೊಟ್ಟು ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಮೊದಲನೇ ವರ್ಗದ ಜನರು ರೋಗದಿಂದ ಆರ್ಥಿಕ ಮತ್ತು ದೈಹಿಕ ನಷ್ಟಗಳನ್ನು ಅನುಭವಿಸಿ ರೋಗ ನಿರೋಧಕ ಶಕ್ತಿಯನ್ನು ಪಡೆದುಕೊಳ್ಳುತ್ತಾರೆ. ಈ ಹೋರಾಟದಲ್ಲಿ ಆವರ ಸಾವನ್ನಪ್ಪಬಹುದು.

ಎರಡನೇ ವಿಧಾನ ಅಂದರೆ, ಲಸಿಕೆ ಪಡೆದ ಜನರು ರೋಗನಿರೋಧಕ ಶಕ್ತಿಯನ್ನು ಯಾವುದೇ ಕಷ್ಟಗಳಿಲ್ಲದ ಪಡೆದುಕೊಳ್ಳುತ್ತಾರೆ. ಲಸಿಕೆ ಕೊಡುವುದರ ಮೂಲಕ ದೇಹದ ಸುಪ್ತಾವಸ್ಥೆಯಲ್ಲಿ ಇರುವ ರೋಗನಿರೋಧಕ ಶಕ್ತಿಗೆ ರೋಗಾಣುವಿನ ಮಾಹಿತಿ ಒದಗಿಸುವುದು, ಹೋರಾಟದ ರೂಪುರೇಷೆ, ತರಬೇತಿ ಮತ್ತು ರಕ್ಷಣಾ ವ್ಯವಸ್ಥೆ ಜಾಗೃತಗೊಳಿಸಲು ಪೂರ್ವ ತಯಾರಿ ನಡೆಸ ಲಾಗುತ್ತದೆ.

ನಮಗೆ ಸ್ವತಂತ್ರ ಬಂದಾಗ ಭಾರತದಲ್ಲಿ ಆಧುನಿಕ ವೈದ್ಯ ಪದ್ಧತಿ ಇನ್ನೂ ಬಾಲ್ಯಾವಸ್ಥೆಯಲ್ಲಿತ್ತು. ಆಗ ಬಹುತೇಕ ಜನರು ದೇಸಿ, ಅಂದರೆ ‘ಆಯುಷ್’ ವಿಧಾನದ ಚಿಕಿತ್ಸೆ ಪಡೆಯುತ್ತಿದ್ದರು. ಆ ದಿನಗಳಲ್ಲಿ ಭಾರತೀಯರ ಸರಾಸರಿ ಆಯಸ್ಸು 40ರಿಂದ 45 ಅಷ್ಟೇ. ಆದರೆ ಇಂದಿನ ದಿನಮಾನಗಳಲ್ಲಿ, ಸೋಂಕು ರೋಗದಿಂದ ಸಾಯುವವರ ಸಂಖ್ಯೆ ಕಡಿಮೆಯಾಗಿ, ಭಾರತೀಯರ ಸರಾಸರಿ ವಯಸ್ಸು ಎಪ್ಪತ್ತು ಮೀರಿದೆ. ಇದಕ್ಕೆ ಪ್ರಮುಖ ಕಾರಣಗಳು ಲಸಿಕೆಗಳು ಮತ್ತು ಆಂಟಿಬಯಾಟಿಕ್ಸ್‌ಗಳು.

ಲಸಿಕೆಗಳು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಉಪಯೋಗಿಸಿಕೊಂಡು ರೋಗಾಣುಗಳನ್ನು ಕೊಂದರೆ, ಅಂಟಿ ಬಯೋಟಿಕ್ಸ್‌ಗಳು ನೇರವಾಗಿ ರೋಗಾಣುಗಳ ಜತೆ ಹೋರಾಟ ನಡೆಸುತ್ತವೆ. ಈ ಎರಡೂ ಆಧುನಿಕ ವೈದ್ಯ ಪದ್ಧತಿಯ  ಕೊಡುಗೆ ಗಳು. ಎಲ್ಲಾ ಲಸಿಕೆಗಳು ಒಂದೇ ತರವಾದ ರೋಗನಿರೋಧಕ ಶಕ್ತಿಯನ್ನು ಬೆಳೆಸುವುದಿಲ್ಲ. ಕೆಲವೊಂದು ಲಸಿಕೆಗಳು ನೂರಕ್ಕೆ ನೂರು ಜೀವನಪೂರ್ತಿ ರೋಗನಿರೋಧಕ ಶಕ್ತಿಯನ್ನು ಬೆಳೆಸಿದರೆ, ಕೆಲವೊಂದು ಲಸಿಕೆಗಳು ಸೀಮಿತ ಅವಧಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಕೂಡ ದೇಹದಲ್ಲಿನ ಬಿಳಿರಕ್ತಕಣಗಳ ಜ್ಞಾಪಕಶಕ್ತಿಯನ್ನು ಅವಲಂಬಿ ಸಿರುತ್ತದೆ.

ಕೆಲವೊಂದು ಲಸಿಕೆಗಳು ಸಂಪೂರ್ಣ ರೋಗನಿರೋಧಕ ಶಕ್ತಿ ತಂದುಕೊಟ್ಟರೆ, ಕೆಲವೊಂದು ಲಸಿಕೆಗಳು ಆಗುವ ದುಷ್ಪರಿಣಾಮ ಗಳನ್ನು ಕಡಿಮೆಗೊಳಿಸುತ್ತದೆ. ಎರಡನೇ ವರ್ಗಕ್ಕೆ ಸೇರಿದ ಲಸಿಕೆಯೇ ಬಿಸಿಜಿ ಲಸಿಕೆ. ಇದು ಟಿಬಿ ರೋಗವನ್ನು ಸಂಪೂರ್ಣ ಗುಣಮುಖಮಾಡದಿದ್ದರೂ, ಟಿಬಿ ರೋಗದ ತೀಕ್ಷ್ಣ ಪರಿಣಾಮಗಳನ್ನು ಕಡಿಮೆಗೊಳಿಸುತ್ತದೆ. ಲಸಿಕೆಗಳ ಕಾರಣದಿಂದ ಇಂದು ಹಲವಾರು ದೇಶಗಳು ಪೋಲಿಯೋ, ಸಿಡುಬು, ದಡಾರ, ನಾಯಿಕೆಮ್ಮುಗಳಂಥ ರೋಗಗಳಿಂದ ಮುಕ್ತವಾಗಿದೆ. ಆದರೆ ಲಸಿಕೆಯ ಕಾರಣದಿಂದ ಹಲವಾರು ರೋಗಗಳು ನಿರ್ಮೂಲನೆಯಾಗುತ್ತಿರುವುದನ್ನು, ಲಸಿಕಾ ವಿರೋಧಿ ಚಳುವಳಿಗಾರರು ಒಪ್ಪುವುದಿಲ್ಲ.

ಆಧುನಿಕ ಲಸಿಕಾ ವಿರೋಧಿ ಚಳುವಳಿಗಾರರ ಪ್ರಕಾರ ಕೆಲವೊಂದು ರೋಗಗಳು ನಿರ್ಮೂಲನೆಯಾಗುತ್ತಿರುವುದು ಲಸಿಕೆಗಳ ಕಾರಣದಿಂದ ಅಲ್ಲ. ಅದು ಸ್ವಚ್ಛ ಮತ್ತು ನಿರ್ಮಲ ಜೀವನಕ್ರಮದಿಂದ ಕೆಲ ವೊಂದು ರೋಗಗಳು ನಿರ್ಮೂಲನೆಯಾಗುತ್ತಿವೆ
ಎಂದು ವಾದಿಸುತ್ತಾರೆ. ಇದೇ ಕಾರಣಗಳನ್ನು ನೀಡಿ ಮಕ್ಕಳಿಗೆ ಲಸಿಕೆ ಹಾಕುವುದನ್ನು ತಡೆಹಿಡಿಯಲು ಪ್ರೇರೇಪಿಸುತ್ತಾರೆ. ತಮ್ಮ ನಿಲುವಿಗೆ ಸಾಕ್ಷಿಯಾಗಿ ಲಸಿಕೆ ಹಾಕದೆಯೂ ಆರೋಗ್ಯವಾಗಿರುವ ಮಕ್ಕಳನ್ನು ತೋರಿಸುತ್ತಾರೆ. ಆದರೆ ಇವರ ಕಣ್ಣಿಗೆ ಕಾಣದ ಸತ್ಯವೇನೆಂದರೆ, ಲಸಿಕೆ ಹಾಕದ ಅಲ್ಪಸಂಖ್ಯೆಯ ಮಕ್ಕಳ ಸುತ್ತ, ಲಸಿಕೆ ಹಾಕಿರುವ ಬಹುಸಂಖ್ಯೆಯ ಮಕ್ಕಳು ತಡೆಗೋಡೆಯಾಗಿ ರೋಗ ಬರದಂತೆ ನಿಂತಿರುವುದು. ಇದಕ್ಕೆ ವೈಜ್ಞಾನಿಕವಾಗಿ ‘ಹರ್ಡ್ ಇಮ್ಮುನಿಟಿ’ ಎಂದು ಕರೆಯುತ್ತಾರೆ.

ಇದರ ಪ್ರಕಾರ ದೇಶದ ಬಹುಸಂಖ್ಯೆಯ ಜನರಿಗೆ ಲಸಿಕೆ ನೀಡಿದರೆ, ರೋಗ ಒಬ್ಬರಿಂದ ಒಬ್ಬರಿಗೆ ಹರಡುವ ಸರಪಳಿ ಕಳಚಿ, ಶೇಕಡ ನೂರಕ್ಕೆ ನೂರರಷ್ಟು ಲಸಿಕೆ ನೀಡಿದ ಪರಿಣಾಮ ಉಂಟಾಗುತ್ತದೆ. ಲಸಿಕೆ ವಿರೋಧಿಗಳ ಇನ್ನೊಂದು ಆಪಾದನೆ ಏನೆಂದರೆ ಲಸಿಕೆಗಳು ಸುರಕ್ಷಿತವಲ್ಲ ಎಂಬುದು. ಇವರ ಪ್ರಕಾರ ಆಟಿಸಂ, ಆರ್ಥ್ರೈಟಿಸ್ ನಂಥ ಹಲವಾರು ರೋಗಗಳು ಲಸಿಕೆಗಳನ್ನು ನೀಡುವುದರಿಂದ ಬಂದಿದೆ ಎನ್ನುತ್ತಾರೆ.

ಲಸಿಕೆಗಳನ್ನು ಆರೋಗ್ಯವಂತ ಮನುಷ್ಯರಿಗೆ ನೀಡುವ ಕಾರಣದಿಂದ ಲಸಿಕೆಗಳ ಸುರಕ್ಷತೆಗಳ ಬಗ್ಗೆ ಅತಿ ಹೆಚ್ಚು ಪ್ರಾಮುಖ್ಯತೆ ಕೊಡಬೇಕಾಗುತ್ತದೆ. ಅತಿ ಸುರಕ್ಷಿತ ಎಂದು ನಂಬಿದ ಲಸಿಕೆಗಳು ಕೂಡ ಅಪರೂಪವಾಗಿ ಕೋಟಿಗೊಂದು ವ್ಯಕ್ತಿಗಳಲ್ಲಿ ಅಡ್ಡ ಪರಿಣಾಮ ಬರುವುದು ಉಂಟು. ಆದರೆ ಮಿಲಿಯಗಟ್ಟಲೆ ಜನರನ್ನು ಸುರಕ್ಷಿತವಾಗಿಡಲು, ಅಪರೂಪವಾಗಿ ಕಂಡು ಬರುವ ಅಡ್ಡಪರಿಣಾಮಗಳನ್ನು ನಿರ್ಲಕ್ಷ್ಯ ಮಾಡಬೇಕಾಗುತ್ತದೆ. ಹೀಗೆ ಇಡೀ ದೇಶದ ಲಕ್ಷಾಂತರ ಜನರನ್ನು ರಕ್ಷಿಸಲು, ಕೆಲವು ಸೈನಿಕ ರನ್ನು ಬಲಿ ಕೊಡಬೇಕಾಗುತ್ತದೆಯೋ, ಹಾಗೆ ಕೋಟ್ಯಂತರ ಜನರನ್ನು ರಕ್ಷಣೆಯ ದೃಷ್ಟಿಯಿಂದ ಅಪರೂಪವೆನಿಸುವ ಅಡ್ಡ ಪರಿಣಾಮಗಳು ಮುಖ್ಯವೆನಿಸುವುದಿಲ್ಲ.

ಲಸಿಕೆ ವಿರೋಧಿ ಚಳವಳಿಗಾರರ ಮತ್ತೊಂದು ಆರೋಪವೇನೆಂದರೆ, ಔಷಧ ಕಂಪನಿಗಳು ತಮ್ಮ ಲಾಭಕ್ಕಾಗಿ ಲಸಿಕೆಗಳನ್ನು ಉತ್ಪಾದಿಸುತ್ತಿದ್ದಾರೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಲಸಿಕೆ ಉತ್ಪನ್ನಗಳಲ್ಲಿ ಔಷಧ ಕಂಪನಿಗಳಿಗೆ ಬರುವ ಲಾಭ ಶೇಕಡಾ ಎರಡರಷ್ಟು ಮೀರುವುದಿಲ್ಲ. ಔಷಧ ಕಂಪನಿಗಳಿಗೆ ಪದೇ ಪದೆ ನೀಡುವ ಔಷಧಗಳಿಂದ ಹೆಚ್ಚಿನ ಲಾಭವೇ
ಹೊರತು, ಜೀವಮಾನದಲ್ಲಿ ಒಮ್ಮೆ ಅಥವಾ ಎರಡು ಬಾರಿ ನೀಡುವ ಲಸಿಕೆಗಳಿಂದ ಅಲ್ಲ.

ಹಾಗೆ ನೋಡಿದರೆ ಲಸಿಕಾ ಉದ್ಯಮ, ಹೆಚ್ಚಿನ ಔಷಧ ಕಂಪನಿಗಳಿಗೆ ಮಾರಕ. ಲಸಿಕೆಗಳನ್ನು ವಿರೋಧಿಸಲು ಬಲಪಂಥೀಯರಿಗೆ ಕ್ರಿಸ್ತ ಧಾರ್ಮಿಕ ಮುಖಂಡರಿಗೆ ಅವರದೇ ಆದ ಕಾರಣಗಳಿದ್ದರೆ, ಮುಸ್ಲಿಮರಿಗೂ ಅವರದೇ ಆದ ಕಾರಣಗಳಿವೆ. ಕೆಲವೊಂದು ಮುಸ್ಲಿಂ ಧಾರ್ಮಿಕ ಸಂಘಟನೆಗಳು ಲಸಿಕೆಗಳಲ್ಲಿ ಹಂದಿ ಅಂಶಗಳಿರುವುದರಿಂದ ಲಸಿಕೆಗಳನ್ನು ವಿರೋಧಿಸಿದರೆ, ಭಾರತದಲ್ಲಿ ಪೋಲಿಯೋ ಔಷಧದ ಜತೆ ಸಂತಾನಹರಣ ಔಷಧವನ್ನು ಮೋದಿ ಸೇರಿಸಿದ್ಧಾರೆ ಎಂದು ಅಪಪ್ರಚಾರ ನಡೆಸಿ ಲಸಿಕಾ ವಿರೋಧಿ ಚಳುವಳಿಗೆ ಪ್ರಚಾರ ನೀಡಲಾಗುತ್ತಿದೆ.

ಕರೋನಾ ಲಸಿಕಾ ವಿರೋಧಿಗಳಿಗೆ ಇನ್ನೊಂದು ತಕರಾರಿದೆ. ಅದೇನೆಂದರೆ ಕರೋನಾ ಲಸಿಕೆ ತರಾತುರಿಯಲ್ಲಿ ರಾಜಕೀಯ ಒತ್ತಡದಿಂದ ತಯಾರಿಸಲಾಗಿರುವ ಲಸಿಕೆ. ಆದ್ದರಿಂದ ಇದರ ಸುರಕ್ಷತೆಯ ಬಗ್ಗೆ ನಮಗೆ ನಂಬಿಕೆ ಇಲ್ಲ ಎನ್ನುವ ಮಾತನಾಡು ತ್ತಿದ್ದಾರೆ. ಹೌದು. ಕರೋನಾ ಲಸಿಕೆಯನ್ನು, ಕಂಡು ಕೇಳರಿಯದ ಕಡಿಮೆ ಸಮಯದಲ್ಲಿ, ಹಗಲು – ರಾತ್ರಿ ಸಂಶೋಧನೆ ನಡೆಸಿ
ತಯಾರಿಸಲಾಗಿದೆ. ತರಾತುರಿಯಲ್ಲಿ ಈ ಲಸಿಕೆಯನ್ನು ಜನಸಾಮಾನ್ಯರಿಗೆ ಕೊಡಲು ಅನುಮತಿ ನೀಡಲಾಗಿದೆ.

ಏಕೆಂದರೆ ಸದ್ಯದ ಪರಿಸ್ಥಿತಿ ಹಾಗಿದೆ. ಹಲವಾರು ವರ್ಷಗಳು ಪ್ರಯೋಗಗಳನ್ನು ನಡೆಸಿ ಸುರಕ್ಷತೆಯನ್ನು ಪ್ರಮಾಣೀಕರಿಸಲು ಇಂದಿನ ಕಾಲಮಾನದಲ್ಲಿ ಸಾಧ್ಯವಾಗುತ್ತಿಲ್ಲ. ಕರೋನಾ ಲಸಿಕೆ ಶೇಕಡ 80 ರಿಂದ 90 ಯಶಸ್ಸು ಗಳಿಸಿದರೂ ಕೂಡ, ಅದು ವೈದ್ಯಕೀಯ ಇತಿಹಾಸ ಪುಟಗಳಲ್ಲಿ ಅದ್ವಿತೀಯ ಸಾಧನೆ ಎಂದೇ ದಾಖಲಾಗಲಿದೆ.

ಕೋವಿಡ್ ಲಸಿಕೆ ಎಷ್ಟು ಪ್ರಯೋಜನಕಾರಿ? ಇದನ್ನು ಎಲ್ಲರಿಗೂ ನೀಡಬೇಕೋ ಅಥವಾ ಹೈ ರಿಸ್ಕ್ ರೋಗಿಗಳಿಗೆ ಮಾತ್ರ ನೀಡಬೇಕೋ? ಅಡ್ಡ ಪರಿಣಾಮಗಳೇನು ಎಂಬುದಕ್ಕೆ ಸದ್ಯಕ್ಕೆ ಪೂರ್ಣ ಸ್ಪಷ್ಟ ಉತ್ತರವಿಲ್ಲ. ಇದಕ್ಕೆ ಸ್ಪಷ್ಟ ಉತ್ತರಕ್ಕೆ ಕೆಲವು ವರ್ಷಗಳೇ ಬೇಕಾಗಬಹುದು. ಎಲ್ಲಕ್ಕೂ ಉತ್ತರವನ್ನು ಕಂಡುಕೊಂಡ ನಂತರ ಲಸಿಕೆ ಕೊಡುತ್ತೇವೆ ಎನ್ನುವ ಪರಿಸ್ಥಿತಿಯಲ್ಲಿ ಸದ್ಯ
ಜಗತ್ತು ಇಲ್ಲ. ಅದು ಅಲ್ಲದೆ ಈ ರೋಗಕ್ಕೆ ತುರ್ತುಚಿಕಿತ್ಸೆಯ ಲಸಿಕೆಯ ಅಗತ್ಯವಿದೆ. ಅದನ್ನು ವಿಜ್ಞಾನಿಗಳನ್ನು ಸಾಧಿಸಿದ್ಧಾರೆ.

ಅವರಿಗೆ ಅಭಿನಂದಿಸೋಣ. ಅದೇ ಸಮಯದಲ್ಲಿ ಕರೋನಾ ಲಸಿಕೆಯಲ್ಲಿರುವ ಸಂದಿಗ್ನತೆಯನ್ನು ತಮ್ಮ ಲಾಭಕ್ಕೆ ಬಳಸಿ ಕೊಳ್ಳಲು ಮತ್ತು ಇದನ್ನು ಇಡೀ ಲಸಿಕೆ ವಿರೋಧಿ ಅಭಿಯಾನವನ್ನಾಗಿ ಮಾಡುತ್ತಿರುವವರ ದೃಷ್ಟತನ ಬಗ್ಗೆ ಎಚ್ಚರವಹಿಸೋಣ.
ಕೊನೆಮಾತು: ಒಬ್ಬ ವೈದ್ಯ, ಕೇವಲ 5 ದಿನದಲ್ಲಿ ಔಷಧ ತಯಾರಿಸಿ, 10 ಜನರ ಮೇಲೆ ಪ್ರಯೋಗ ಮಾಡಿ, ಶೇಕಡ ನೂರಕ್ಕೆ ನೂರು ಯಶಸ್ವಿ ಎಂದು ಹೇಳಿದಾಗ ನಂಬಿದ ಜನರು, ಸಾವಿರಾರು ವಿಜ್ಞಾನಿಗಳು ಲಕ್ಷಾಂತರ ಜನರ ಮೇಲೆ ಪ್ರಯೋಗ ನಡೆಸಿ ಇದು ಸುರಕ್ಷಿತ, ಇದು ಶೇಕಡ 70ರಷ್ಟು ಯಶಸ್ವಿಯಾಗುತ್ತದೆ ಎಂದು ಹೇಳಿದಾಗ ನಂಬಲು ತಯಾರಿಲ್ಲ!

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ದಿನಕ್ಕೆ ಎಂಟು ಮಾತ್ರೆಗಳನ್ನು ಜೀವನ ಪರ್ಯಂತ ನುಂಗಲು ಹಿಂದೆಮುಂದೆ ನೋಡದೆ ಜನ, ಎರಡೇ ಎರಡು ಒಂದು ಲಸಿಕೆ ಹಾಕಿಕೊಳ್ಳಿ ಎಂದರೆ ತಯಾರಿಲ್ಲ ಎನ್ನುತ್ತಿದ್ಧಾರೆ!