ತನ್ನಿಮಿತ್ತ
ರಾಜು ಭೂಶೆಟ್ಟಿ
ದಿನದಿಂದ ದಿನಕ್ಕೆ ವೈದ್ಯಕೀಯ ಕ್ಷೇತ್ರವು ಸಾಕಷ್ಟು ಸಂಶೋಧನೆಗಳಿಗೆ ಕಾರಣವಾಗುವ ಮೂಲಕ ಹಲವಾರು ಕಾಯಿಲೆಗಳಿಗೆ ಈಗಾಗಲೇ ಯಶಸ್ವಿಯಾಗಿ ಔಷಽಯನ್ನು ಕಂಡುಹಿಡಿಯಲಾಗಿದೆ.
ಇಷ್ಟಾದರೂ ಒಂದಿಲ್ಲೊಂದು ರೋಗಗಳು ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿ ಕಾಡುತ್ತಿರುವುದು ಕೂಡ ಅಷ್ಟೇ ಸತ್ಯ. ಪರಿಸ್ಥಿತಿ
ಹೀಗಿರುವಾಗ ಅಪಸ್ಮಾರ ರೋಗದ ಕುರಿತು ಇನ್ನೂ ಸಾಕಷ್ಟು ಮೂಢನಂಬಿಕೆಗಳು ಜೀವಂತವಾಗಿವೆ. ಈ ಕಾರಣದಿಂದಾಗಿ ಈ ರೋಗದ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಸಲುವಾಗಿ, ರೋಗದ ಲಕ್ಷಣಗಳು, ತಡೆಗಟ್ಟುವ ಕ್ರಮಗಳ ಕುರಿತು ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ನವೆಂಬರ್-17ನ್ನು ರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನವನ್ನಾಗಿ ಆಚರಿಸ ಲಾಗುತ್ತದೆ.
ಅಪಸ್ಮಾರ ಎಂದರೇನು? ಅಪಸ್ಮಾರ ಎಂಬುದು ಒಂದು ಪ್ರತ್ಯೇಕ ರೋಗವಲ್ಲ, ಬದಲಾಗಿ ಇದೊಂದು ಮೆದುಳಿಗೆ ಸಂಬಂಧಿಸಿದ ಕಾಯಿಲೆಯ ಲಕ್ಷಣವಾಗಿದ್ದು, ಇಂಗ್ಲಿಷ್‌ನಲ್ಲಿ ಇದಕ್ಕೆ ಎಪಿಲೆಪ್ಸಿ ಎಂದು ಕರೆಯುವರು. ಇದು ಮೆದುಳಿನ ನರಗಳ ಚಟುವಟಿಕೆ ಯಲ್ಲಿ ಉಂಟಾಗುವ ಏರುಪೇರು ಅಥವಾ ಅವ್ಯವಸ್ಥೆಯಿಂದ ಉಂಟಾಗುವ ಒಂದು ತೊಂದರೆಯೆಂದು ಹೇಳಬಹುದಾಗಿದೆ. ಇದನ್ನು ಮೂರ್ಛೆ ರೋಗ ಎಂದು ಕೂಡ ಕರೆಯುತ್ತಾರೆ. ಅಪಸ್ಮಾರಕ್ಕೆ ಕಾರಣಗಳೇನು? ಮೆದುಳಿನ ಅಂಗಾಂಶಕ್ಕೆ ಗಾಯವಾದಾಗ, ಅತಿಯಾಗಿ ಜ್ವರ ಬಂದಾಗ, ಮೆದುಳಿನಲ್ಲಿ ಗಡ್ಡೆ ಬೆಳೆದಿದ್ದರೆ, ಮೆದುಳಿಗೆ ನಂಜು ಸೋಂಕಿದ್ದರೆ, ಮೆದುಳಿಗೆ ರಕ್ತ ಸಂಚಾರ ಅಥವಾ ಆಮ್ಲಜನಕದ ಕೊರತೆ ಉಂಟಾದಾಗಲೂ ಕೂಡ ಈ ಕಾಯಿಲೆ ಗೋಚರಿಸಬಹುದು.
ಕೆಲವು ಸಂದರ್ಭಗಳಲ್ಲಿ ಮೆದುಳಿನ ಬೆಳವಣಿಗೆ ಸರಿಯಾಗಿ ಆಗದೇ ಇದ್ದರೆ ಈ ರೋಗದ ಲಕ್ಷಣಗಳು ಕಂಡುಬರುತ್ತವೆ. ಆದರೆ ಜಾಗತಿಕವಾಗಿ ವಿಶ್ಲೇಸುವುದಾದರೆ ಶೇ.50ರಷ್ಟು ಪ್ರಕರಣಗಳಲ್ಲಿ ಈ ರೋಗಕ್ಕೆ ನಿರ್ದಿಷ್ಟ ಕಾರಣಗಳು ತಿಳಿದಿಲ್ಲ. ರೋಗದ ಲಕ್ಷಣ ಗಳು – ಅನಿಯಂತ್ರಿತವಾದ ಚಲನವಲನಗಳು, ಉಸಿರಾಟದ ತೊಂದರೆ, ಭ್ರಮೆ ಮತ್ತು ಗೊಂದಲ, ತಲೆನೋವು, ತೀವ್ರವಾದ ಆತಂಕ, ಕಣ್ಣು ಮಂಜಾಗುವುದು, ಮರಗಟ್ಟುವಿಕೆ, ಅರಿವಿಲ್ಲದಂತಾಗುವುದು, ತಲೆ ಸುತ್ತುವುದು ಹೀಗೆ ಕೆಲವು ಲಕ್ಷಣಗಳನ್ನು ಈ ರೋಗವು ಸೂಚಿಸುತ್ತದೆ.
ಅಪಸ್ಮಾರ ಬಂದಾಗ ತಕ್ಷಣ ಕೆಲವು ಅಂಶಗಳತ್ತ ಗಮನಹರಿಸಬೇಕಾಗುತ್ತದೆ. ಅವುಗಳೆಂದರೆ – ರೋಗಿಯ ದೇಹದ ಭಾಗಕ್ಕೆ
ಯಾವುದೇ ರೀತಿಯ ಅಪಾಯವಾಗದಂತೆ ಆತನಿಗೆ ಕಾಳಜಿವಹಿಸಬೇಕಾಗುತ್ತದೆ. ಚೂಪಾದ ವಸ್ತುಗಳು, ಕಲ್ಲು, ನೀರು, ಬೆಂಕಿ ಇಂತಹ ವಸ್ತುಗಳಿಂದ ದೂರವಿರಿಸಬೇಕು. ಉಸಿರಾಟ ಕ್ರಿಯೆ ಸರಳವಾಗಿ ನಡೆಯುವಂತೆ ನೋಡಿಕೊಳ್ಳುವುದು ತುಂಬಾ ಅಗತ್ಯ. ನಾಲಿಗೆ ಕಚ್ಚಿಕೊಳ್ಳುವ ಸಂಭವನೀಯತೆಗಳು ಇರುವುದರಿಂದ ರಕ್ಷಣೆಗಾಗಿ ಹಲ್ಲುಗಳು ನಡುವೆ ಬಟ್ಟೆಯನ್ನು ಇಡುವುದು ತುಂಬಾ ಮಹತ್ವದ್ದು.
ಅಪಸ್ಮಾರದಿಂದ ಕಂಪಿಸುತ್ತಿರುವಾಗ ಆ ವ್ಯಕ್ತಿಯನ್ನು ಕುಳಿತುಕೊಳ್ಳಿಸುವುದಕ್ಕೆ ಪ್ರಯತ್ನಸಲೇಬಾರದು. ಅದರ ಬದಲು ಸಮತ ಟ್ಟಾದ ನೆಲದ ಮೇಲೆ ಮಲಗಿಸಿ ಅಪಸ್ಮಾರ ನಿಲ್ಲುವವರೆಗೂ ಆ ವ್ಯಕ್ತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ತದನಂತರ ವೈದ್ಯರನ್ನು
ಸಂಪರ್ಕಿಸುವುದು ತುರ್ತು ಅಗತ್ಯವೆಂದು ಭಾವಿಸಬೇಕು. ಈ ರೋಗದಿಂದ ಬಳಲುವವರು ನಿರಂತರವಾಗಿ ವೈದ್ಯರು ನೀಡುವ ಮಾರ್ಗದರ್ಶನವನ್ನು ಚಾಚು ತಪ್ಪದೇ ಪಾಲಿಸುವುದು ಅತೀ ಅಗತ್ಯವಾಗಿರುತ್ತದೆ. ಎಂದಿಗೂ ನಿರ್ಲಕ್ಷ್ಯ ಸಲ್ಲದು. ಏಕೆಂದರೆ ರೋಗಿ ಮಾಡುವ ಸ್ವಲ್ಪ ಪ್ರಮಾಣದ ನಿರ್ಲಕ್ಷ್ಯವು ದೊಡ್ಡ ಪ್ರಮಾಣದಲ್ಲಿ ಅಪಾಯವನ್ನು ತಂದೊಡ್ಡಬಹುದಾಗಿರುತ್ತದೆ.
ಕೆಲವು ಸಂಗತಿಗಳನ್ನು ನೋಡಲಾಗಿ ಎತ್ತರದ ಪ್ರದೇಶಗಳಲ್ಲಿ ಕೆಲಸ ಮಾಡುವುದು, ಏಕಾಂಗಿಯಾಗಿ ವಾಹನ ಚಲಾವಣೆ ಮಾಡು ವುದು, ಒಬ್ಬರೇ ಈಜಾಡಲು ಹೋಗುವುದು, ಬೆಟ್ಟ – ಗುಡ್ಡಗಳನ್ನು ಹತ್ತಲು ಪ್ರಯತ್ನಿಸುವುದು, ದೂರದ ಪ್ರಯಾಣ ಇವೆಲ್ಲವೂ ತುಂಬಾ ಅಪಾಯಕಾರಿಗಳಾಗಿವೆ. ಇಂತಹ ಸಂಗತಿಗಳನ್ನು ನಿರ್ಲಕ್ಷಿಸಿದರೆ ಕೆಲವೊಮ್ಮ ಜೀವಕ್ಕೂ ಅಪಾಯವಾಗ ಬಹುದು. ಪದೇ ಪದೆ ಮೂರ್ಛೆ ಹೋಗುವುದರಿಂದ ಮೆದುಳು ಹಾಗೂ ನರಮಂಡಲಕ್ಕೆ ಅಪಾಯ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರು ವುದರಿಂದ, ರೋಗದ ಬಗ್ಗೆ ನಿರ್ಲಕ್ಷ್ಯ ವಹಿಸದೇ ಸಕಾಲದಲ್ಲಿ ಚಿಕಿತ್ಸೆ ತೆಗೆದುಕೊಳ್ಳುವುದು ತುಂಬಾ ಅತ್ಯಗತ್ಯ.
ಒಟ್ಟಾರೆಯಾಗಿ, ಈ ರೋಗದಿಂದ ನರಳುತ್ತಿರುವವರು ಯಾವಾಗಲೂ ಕುಟುಂಬ ಸದಸ್ಯರು, ಸ್ನೇಹಿತರ ಕಣ್ಗಾವಲಿನಲ್ಲಿಯೇ ಇರುವುದು ಆರೋಗ್ಯದ ಹಿತದೃಷ್ಟಿಯಿಂದ ತುಂಬಾ ಮಹತ್ವದ್ದಾಗಿದೆ. ರೋಗ ಬಂದಿದೆ ಎಂಬ ಕಾರಣಕ್ಕಾಗಿ ಆ ವ್ಯಕ್ತಿಯ ಬಗ್ಗೆ ಎಂದಿಗೂ ಕೀಳಿರಿಮೆಯ ಮನೋಭಾವನೆಯನ್ನು ಹೊಂದಬಾರದು. ಅದರ ಬದಲು ಅವರಿಗೆ ಪ್ರೀತಿ, ವಿಶ್ವಾಸವನ್ನು ತೋರಿಸಿ, ಧನಾತ್ಮಕ ಮಾತುಗಳನ್ನಾಡುವುದರ ಮೂಲಕ ಆತ್ಮವಿಶ್ವಾಸವನ್ನು ಬಲಪಡಿಸುವತ್ತ ಗಮನಹರಿಸುವುದು ತುಂಬಾ ಅಗತ್ಯ ವಾಗಿದೆ. ಅವರಲ್ಲಿನ ಆತ್ಮವಿಶ್ವಾಸ ಹೆಚ್ಚಾಗುವುದರಿಂದ ಅಪಸ್ಮಾರ ರೋಗದಿಂದ ಚೇತರಿಸಿಕೊಳ್ಳಲು ಸಹ ಸಹಾಯಕವಾಗ ಬಲ್ಲದು.