Saturday, 14th December 2024

ಔಷಧಗಳೇ ಜನರ ಜೀವ ತೆಗೆಯುವಂತಾದಾಗ…

ಶಿಶಿರ ಕಾಲ

shishirh@gmail.com

ಸಾಧಾರಣವಾಗಿ ತಲೆನೋವು, ಜ್ವರ, ನೆಗಡಿ ಮೊದಲಾದ ಚಿಕ್ಕಪುಟ್ಟ ಅನಾರೋಗ್ಯಗಳಿಗೆ ಬೇಕಾಗುವ ಔಷಧದ ಹೆಸರು ಎಲ್ಲರಿಗೂ ಗೊತ್ತಿರುತ್ತದೆ. ಸಾರಿಡಾನ್, ಡೊಲೊ, ಪ್ಯಾರಾಸಿಟಮಾಲ್… ಹೀಗೆ ಕೆಲವು. ಆ ಮಟ್ಟದ ದೈಹಿಕ ಸಮಸ್ಯೆಗಳಿಗೆ ಎಲ್ಲರೂ ವೈದ್ಯರೇ. ಓಹ್ ಹಾಗಾಗಿದೆಯಾ, ಈ ಗುಳಿಗೆ ಯನ್ನು ತಿನ್ನು, ಆರಾಮಾಗಿಬಿಡುತ್ತದೆ ಎನ್ನುತ್ತಾರೆ. ಅವು ಔಷಧಿ ಅಂಗಡಿಯ ಕೌಂಟರ್‌ಗೆ ಹೋಗಿ ಡಾಕ್ಟರ್ ಚೀಟಿಯಿಲ್ಲದೇ ಪಡೆಯಬಹುದಾದ ಮದ್ದುಗಳು. ಇಂತಹ ಸಾಮಾನ್ಯ ಔಷಧಗಳ ಜಾಹೀರಾತುಗಳನ್ನು ನಿರಂತರ ಟಿವಿಯಲ್ಲಿ ನೋಡುತ್ತಲೇ ಇರುತ್ತೇವೆ.

ಅನಾರೋಗ್ಯವಾದಾಗ, ಅಥವಾ ಮುನ್ಸೂಚನೆ ದೇಹಕ್ಕೆ ಸಿಕ್ಕ ತಕ್ಷಣ ಆ ಬ್ರ್ಯಾಂಡ್‌ನ ಔಷಧವೇ ನೆನಪಾಗಬೇಕು. ಈ ಸಾಮಾನ್ಯ ರೋಗಗಳು ಯಾವಾಗಲೋ ಒಮ್ಮೆ ಬರುವುದರಿಂದ ಅವುಗಳ ಹೆಸರನ್ನು ನಿರಂತರ ಜನಮಾನಸದ ನೆನಪಿನಲ್ಲಿಟ್ಟಿರಬೇಕಾದ ಅವಶ್ಯಕತೆ ಫಾರ್ಮಾ ಕಂಪನಿಗಳದ್ದು . ಆ ಕೆಲಸವನ್ನು ಈ ಜಾಹೀರಾತುಗಳು ಮಾಡುತ್ತಿರು ತ್ತವೆ. ಜಾಹೀರಾತು ನಿಂತಿತೆಂದರೆ ಆ ಹೆಸರು ಮರೆತುಹೋಗಬಹುದು. ಅಥವಾ ಜನರು ಇನ್ನೊಂದು ಕಂಪನಿಯ ಔಷಧವನ್ನು ಖರೀದಿಸಲು ಶುರುಮಾಡಿಬಿಡಬಹುದು ಎನ್ನುವ ಹೆದರಿಕೆಯೇ ಈ ಜಾಹೀರಾತುಗಳ ನಿರಂತರತೆಗೆ ಕಾರಣ.

ಇನ್ನೊಂದಿಷ್ಟು ಗುಳಿಗೆಗಳ ಜಾಹೀರಾತು ಆ ಅನಾರೋಗ್ಯ ಹೆಚ್ಚಾಗಿ ಕಾಡುವ ಋತುಮಾನದಲ್ಲಿ ಮಾತ್ರ ಜಾಸ್ತಿ ಕಾಣಿಸಿಕೊಳ್ಳುತ್ತವೆ. ಇದನ್ನು ನೀವು ಗ್ರಹಿಸಿಯೇ ಇರುತ್ತೀರಿ. ಅಂತಹ ಅನಾರೋಗ್ಯ ನಿಮಗೆ ಒಮ್ಮೆಯೂ ಬಾಧಿಸಿರದೇ  ಇರಬಹುದು, ಅಥವಾ ನಿಮಗೆ ಚಿಕ್ಕಪುಟ್ಟ ಅನಾರೋಗ್ಯಕ್ಕೆ ಗುಳಿಗೆ ನುಂಗುವ ಖಯಾಲಿ ಇಲ್ಲದರಿರಬಹುದು. ಆದರೆ ಹೆಸರುಗಳು ತಿಳಿದಿರುತ್ತವೆ.

ಅಮೆರಿಕದಲ್ಲಿ ಸ್ವಲ್ಪ ವಿಭಿನ್ನ. ನಮಗೆ ನೆಗಡಿ, ಜ್ವರಕ್ಕೆ ತೆಗೆದುಕೊಳ್ಳುವ ಔಷಧದ ಹೆಸರು ಹೇಗೆ ತಿಳಿದಿರುತ್ತದೋ ಹಾಗೆಯೇ ಅಮೆರಿಕದವರಿಗೆ, ಅದರಲ್ಲೂ ಟೀವಿ ನೋಡುವವರಿಗೆ ನೂರೆಂಟು ದೊಡ್ಡ ರೋಗಗಳ ಔಷಧದ ಹೆಸರೂ ತಿಳಿದಿರುತ್ತದೆ. ತೀವ್ರ ಬೆನ್ನು ನೋವಿಗೆ, ವಯೋಸಹಜ ಸಂಧಿ
ನೋವುಗಳಿಗೆ, ಅಲರ್ಜಿಗಳಿಗೆ, ನಿದ್ರೆ ಬಾರದಿದ್ದಲ್ಲಿ ಹೀಗೆ ಓವರ್ ದಿ ಕೌಂಟರ್ ಅಲ್ಲದ, ಕೇವಲ ಡಾಕ್ಟರುಗಳು ಚೀಟಿ ಬರೆದುಕೊಟ್ಟಲ್ಲಿ ಮಾತ್ರ ಸಿಗುವ ಔಷಧಗಳ ಹೆಸರುಗಳೂ ಎಲ್ಲರ ಬಾಯಿತುದಿಯಲ್ಲಿರುತ್ತವೆ. ಅದಕ್ಕೆ ಕಾರಣ ಅವೆಲ್ಲವುಗಳ ಜಾಹೀರಾತುಗಳು ತೀರಾ ಪ್ರೈಮ್ ಸಮಯದ ಜಾಹೀರಾತಿನ ಹೆಚ್ಚಿನ ಸಮಯವನ್ನು ವ್ಯಾಪಿಸಿರುತ್ತವೆ.

‘ಓಪ್ರಾ ವಿನ್ರೆ’, ಹೆಸರು ಕೇಳಿರಬಹುದು. ಆಕೆ ನಡೆಸಿಕೊಡುವ ಟಿವಿ ಸಂದರ್ಶನ ಕಾರ್ಯಕ್ರಮ, ‘ದಿ ಓಪ್ರಾ ವಿನ್ರೆ ಶೋ’ ಅತ್ಯಂತ ಜನಪ್ರಿಯ. ಹಿಂದಿನ ವರ್ಷ ಇಂಗ್ಲೆಂಡಿನ ರಾಜಮನೆತನದ ಸಂಕೋಲೆಯಿಂದ ಬಿಡಿಸಿಕೊಂಡು ಅಮೆರಿಕಕ್ಕೆ ಬಂದು ನೆಲೆಸಿದ್ದ ರಾಜಕುಮಾರ ಹ್ಯಾರಿ ಮತ್ತು ಆತನ ಹೆಂಡತಿ ಮೇಗನ್ ಮರ್ಕೆಲ್ ಸಂದರ್ಶನ ಬಿತ್ತರವಾಗಿತ್ತು. ಇದು ತೀರಾ ನಿರೀಕ್ಷೆಯುಳ್ಳ ಸಂದರ್ಶನ, ಹೇಳಿ ಕೇಳಿ ಓಪ್ರಾ ನಡೆಸಿಕೊಡುತ್ತಿರುವುದು. ಅದೆಷ್ಟೋ ಕೋಟಿ ಜನ ಇದು ಮೊದಲ ಬಾರಿ ಬಿತ್ತರವಾದಾಗ ನೋಡುತ್ತಿದ್ದರು, ನಾನೂ ನೋಡುತ್ತಿದ್ದೆ.

ಇಂತಹ ಕಾರ್ಯಕ್ರಮಗಳಲ್ಲಿ ಜಾಹೀರಾತಿಗೆ ಇಂತಿಷ್ಟು ಶುಲ್ಕವೆಂದಿರುವುದಿಲ್ಲ. ಕಂಪನಿಗಳು ಬಿಡ್ ಮಾಡುತ್ತವೆ. ಯಾರು ಅತ್ಯಂತ ಹೆಚ್ಚು ಹಣ ತೆರುತ್ತಾರೋ ಅವರ ಜಾಹೀರಾತನ್ನು ಪ್ರಸಾರಮಾಡಲಾಗುತ್ತದೆ. ಆ ಓಪ್ರಾಳ ಕಾರ್ಯಕ್ರಮದಲ್ಲಿ ಬರೀ ಅದು ಇದು ರೋಗಗಳಿಗೆ ಪ್ರಿಸ್ಕ್ರಿಪ್ಷನ್ ಔಷಧ ಗಳ ಜಾಹೀರಾತುಗಳೇ ತುಂಬಿದ್ದವು. ಮೊಬೈಲ, ಎಲೆಕ್ಟ್ರಾನಿಕ್ಸ್ ಈ ಕಂಪನಿಗಳು ಔಷಧ ಕಂಪನಿಯ ಜಾಹೀರಾತಿನ ಪೈಪೋಟಿಯಲ್ಲಿ ಹಿಂದೆಬಿದ್ದು ಬಿಟ್ಟಿದ್ದವು.

ಔಷಧ ಕಂಪನಿಗಳು ಡಾಕ್ಟರ್ ಚೀಟಿ ಇದ್ದರಷ್ಟೇ ಸಿಗುವ ಔಷಧಗಳನ್ನು ಜನಸಾಮಾನ್ಯರಿಗೆ ಜಾಹೀರಾತಿನಲ್ಲಿ ಹೇಳುವ ಅವಶ್ಯಕತೆಯೇ ನನಗೆ ಬಹುಕಾಲ ಬಗೆಹರಿದಿರಲಿಲ್ಲ. ಡಾಕ್ಟರಿಗೆ ಈ ಜಾಹೀರಾತು ಮುಟ್ಟಬಹುದು, ಅಥವಾ ಅಮೆರಿಕದಲ್ಲಿ ಕೇವಲ ಡಾಕ್ಟರುಗಳಷ್ಟೇ ಟಿವಿ ನೋಡುವುದೇ? ಇಲ್ಲ, ಈ ಜಾಹೀರಾತುಗಳು ಡಾಕ್ಟರ್ ಅನ್ನು ಉದ್ದೇಶಿಸಿ ಇರುವುದೇ ಇಲ್ಲ. ಬದಲಿಗೆ ಸಾಮಾನ್ಯ ಜನರಿಗೆ ಟಾರ್ಗೆಟ್ ಆಗಿರುತ್ತದೆ. ನಿಮಗೆ ಈ ಸಮಸ್ಯೆ ಇದ್ದರೆ ನಿಮ್ಮ ಡಾಕ್ಟರ್ ಅನ್ನು ನೋಡಿ ಈ ಔಷಧವನ್ನು ಕೊಡಲು ಕೇಳಿಕೊಳ್ಳಿ ಎನ್ನುವ ಅಡ್ವರ್ಟೈಸ್‌ಮೆಂಟುಗಳು. ಇತ್ತ ಡಾಕ್ಟರುಗಳಿಗೆ ಪ್ರತ್ಯೇಕವಾಗಿ ಅವರ ಔಷಧದ ಬಗ್ಗೆ ತಿಳಿಸುವುದು, ಅವರನ್ನು ವಿದೇಶಕ್ಕೆ ಕಾನರೆನ್ಸ್ ಹೆಸರಿನಲ್ಲಿ ಕರೆದುಕೊಂಡು ಹೋಗಿ ಮೋಜು ಮಸ್ತಿ ಮಾಡಿಸಿಕೊಂಡು ಬರುವುದು ಒಂದು ಕಡೆ.

ಇನ್ನೊಂದು ಕಡೆಯಿಂದ ರೋಗಿ ಕೂಡ ಇದೇ ಔಷಧ ಕೊಡಬಹುದೇ ಎಂದು ಎಂದು ಡಾಕ್ಟರ್ ಅನ್ನು ಕೇಳುವಂತೆ ಮಾಡುವುದು. ಅಲ್ಲಿಗೆ ಒಂದು ಸರ್ಕಲ್ ಪೂರ್ಣವಾದಂತೆ. ಇದನ್ನು ಸರಕಾರ ಏಕೆ ನಿಲ್ಲಿಸುವುದಿಲ್ಲ ಎಂಬ ಪ್ರಶ್ನೆ ಮೂಡಬಹುದು. ಅಮೆರಿಕದ ಕಾನೂನಿನಲ್ಲಿ ಮೊದಲ ಆದ್ಯತೆ
ಫ್ರೀಡಂ ಆಫ್ ಎಕ್ಸ್‌ಪ್ರೆಶನ್‌ಗೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಈ ಜಾಹೀರಾತುಗಳನ್ನು ನಿಲ್ಲಿಸಲಾಗದ ಸ್ಥಿತಿ ಸರಕಾರಕ್ಕೆ. ಇದು ಮುಂದುವರಿದು, ಇನ್ನೊಂದು ಹಂತಕ್ಕೆ ತಲುಪಿ ದಶಕಗಳೇ ಕಳೆದಿವೆ. ಅಮೆರಿಕದಲ್ಲಿ ಜೀವ ಉಳಿಸಬೇಕಾದ ಔಷಧವೇ ಅದೆಷ್ಟೋ ಲೆಕ್ಕಮೀರಿದ ಸಾವಿಗೆ ಕಾರಣವಾಗಿದೆ.
ಇದೆಲ್ಲ ಹೇಗೆ? ಸುಮಾರು ಮೂರು ಸಾವಿರ ವರ್ಷದ ಹಿಂದೆ ಈಜಿಪ್ಟ್‌ನಲ್ಲಿ ಪೊಪ್ಪಿ (ಗಸಗಸೆ) ಹೂವಿನ ಸಾರದಿಂದ ತಯಾರಿಸುವ ಓಪಿಯಮ್ ಅನ್ನು ಔಷಧವಾಗಿ ಬಳಸುವುದು ಶುರುವಾದದ್ದು. ಇದು ಅಂದಿನ ಕಾಲದಲ್ಲಿ ದಿವ್ಯ ಅಮೃತವೆಂದೇ ಅಲ್ಲಿ ಪರಿಗಣಿಸಲಾಗುತ್ತಿತ್ತು. ಇದನ್ನು ಸೇವಿಸಿದಲ್ಲಿ ದೇಹದ
ನೋವಿನ ಗ್ರಾಹಕಗಳು ನಿಸ್ತೇಜವಾಗುತ್ತವೆ.

ಇದರಿಂದ ನೋವು ಚಿಕ್ಕದಿರಲಿ, ದೊಡ್ಡದಿರಲಿ ದೇಹದಲ್ಲಿ ಔಷಧದ ಶಕ್ತಿ ಇರುವಲ್ಲಿಯವರೆಗೆ ಬಾಧಿಸುವುದಿಲ್ಲ. ಅಲ್ಲದೆ ಈ ಔಷಧ ಒಂದಿಷ್ಟು ಹುಮ್ಮಸ್ಸನ್ನು ಕೊಡುತ್ತವೆ. ನೋವು ಹೋಗಿ ಒಂದಿಷ್ಟು ಮತ್ತು ಕೊಡುವ, ಆ ಮೂಲಕ ಉಸವನ್ನು ತುಂಬುವ ಔಷಧ ಒಳ್ಳೆಯದೇ ಅಲ್ಲವೇ? ೧೯ನೇ ಶತಮಾನದಲ್ಲಿ ಈ ಓಪಿಯಮ್‌ನೊಳಗೆ ಅಡಗಿರುವ ಮೊರ್ಫಿನ್ ಅನ್ನು ಮೊದಲಬಾರಿಗೆ ಪ್ರತ್ಯೇಕಿಸಲಾಯಿತು ಮತ್ತು ಅದನ್ನು ನೋವಿನ ಔಷಧವಾಗಿ ಬಳಸುವುದು ಚಾಲ್ತಿಗೆ ಬಂತು.

ಮೊರ್ಫಿನ್, ಕೊಡೈನ್ ಇವೆಲ್ಲ ಓಪಿಯಮ್ / ಪೊಪ್ಪಿ (ಗಸಗಸೆ) ಗಿಡದಿಂದ ಪಡೆಯುವ ಔಷಧಗಳು. ಅವನ್ನೆಲ್ಲ ಒಟ್ಟಾಗಿ ‘ಓಪಿಯೆಟ್ಸ್’ ಅನ್ನೋದು. ಈಗ ಕೆಲವು ದಶಕದ ಹಿಂದೆ, ವಿeನ ಬೆಳೆದಂತೆ ಕೃತಕವಾಗಿ ಲ್ಯಾಬೊರೇಟರಿಯಲ್ಲಿ ಈ ರಾಸಾಯನಿಕಗಳನ್ನು ತಯಾರಿಸುವಲ್ಲಿ ವಿಜ್ಞಾನಿಗಳು ಯಶಸ್ವಿ ಯಾದರು. ಈ ರೀತಿ ಕೃತಕ ಉತ್ಪನ್ನಗಳನ್ನು ತಯಾರಿಸುವಾಗ ಹೆರಾಯಿನ್, ಹೈಡ್ರೋಕೊಡೆನ್, ಆಕ್ಸಿಕೊಡೊನ್, -ಂಟಾನಿಲ್ ಮೊದಲಾದವುಗಳ ಆವಿಷ್ಕಾರವಾಯಿತು.

ಗಸಗಸೆ ಗಿಡದಿಂದಿರಬಹುದು ಅಥವಾ ಲ್ಯಾಬ್‌ನಲ್ಲಿ ತಯಾರಿಸುವ ಕೃತಕ ಉತ್ಪನ್ನಗಳಿರಬಹುದು, ಇವೆಲ್ಲವೂ ಕೆಲಸ ಮಾಡುವುದು ರಾಸಾಯನಿಕವಾಗಿ ಒಂದೇ ರೀತಿ. ಇದೆಲ್ಲವನ್ನು ಒಟ್ಟಾಗಿ ‘ಓಪಿಯೋಯ್ಡ್’ ಎಂದು ಕರೆಯೋದು. ಹೆರೋಯಿನ್ ಕೃತಕವಾಗಿ ತಯಾರಿಸಿzದರೆ ಓಪಿಯಮ್ ಗಸಗಸೆ ಗಿಡದ ಸಾರದಿಂದ ತಯಾರಿಸೋದು. ಇವು ಮತ್ತೇರಿಸುವ ಡ್ರಗ್ಸ್. ಆದರೆ ಇವು ಅತ್ಯಂತ ಪರಿಣಾಮಕಾರೀ ನೋವಿನ ಗ್ರಹಿಕೆ ತಗ್ಗಿಸುವ ಔಷಧ. ಆದರೆ ಸಮಸ್ಯೆ ಯೆಂದರೆ ಇದು ಅಷ್ಟೇ ಚಟವಾಗಿಬಿಡುವ ರಾಸಾಯನಿಕ.

೧೯೮೦-೯೦ ರ ದಶಕದಲ್ಲಿ ಅಮೆರಿಕದ ಔಷಧ ಕಂಪನಿಗಳು ಈ ಓಪಿಯೋಯ್ಡಗಳನ್ನು ಅತ್ಯಂತ ಪರಿಣಾಮಕಾರೀ ನೋವಿನ ಔಷಧಗಳೆಂದು ಮಾರ್ಕೆಟಿಂಗ್ ಮಾಡಲು ಶುರುಮಾಡಿಕೊಂಡವು. ಕಂಪನಿಗಳಿಗೆ ಓಪಿಯೋಯ್ಡಗಳು ಚಟವಾಗುವ ಸಾಧ್ಯತೆಯ ಸಂಪೂರ್ಣ ಅರಿವಿತ್ತು. ಆದರೆ
ಲಾಭಕ್ಕಾಗಿ ಮರೆಮಾಚಲಾಯಿತು. ಯಾವುದೇ ಕಂಪನಿಯಿರಬಹುದು, ಅದು ಯಶಸ್ವಿಯಾಗಲು ಅದರ ಉತ್ಪನ್ನವನ್ನು ಜನರು ಖರೀದಿಸಬೇಕು, ಬಳಸಬೇಕು, ನಿರಂತರವಾಗಿ ಖರೀದಿಸುತ್ತಲೇ ಇರಬೇಕು. ಔಷಧ ಕಂಪನಿಗಳಿಗೆ ಬೇಕಾದದ್ದೂ ಅದೇ, ಇದು ಜನರಿಗೆ ಚಟವಾಗಿಬಿಟ್ಟರೆ ಆದಾಯ
ನಿರಂತರ. ಆಲ್ಕೋಹಾಲ, ನಿಕೋಟಿನ್ ಹೀಗೆ ಯಾವುದೇ ರಾಸಾಯನಿಕವಿರಬಹುದು ಅವು ಚಟವಾಗಲು, ಇನ್ನೂ ಹೆಚ್ಚು ಬೇಕೆಂದು ಅನಿಸಲು ವೈeನಿಕವಾಗಿ ಬೇರೆ ಬೇರೆ ದೈಹಿಕ ಕಾರಣಗಳಿರುತ್ತವೆ.

ಹಿಂದೊಮ್ಮೆ ಒಂದೊಂದು ಡ್ರಗ್ಸ್ ದೇಹದೊಳಗೆ ಹೇಗೆ ಕೆಲಸಮಾಡುತ್ತದೆ ಮತ್ತು ಯಾವ ವೈಜ್ಞಾನಿಕ ಕಾರಣಕ್ಕೆ ಅದು ಚಟವಾಗಿಬಿಡುತ್ತದೆ ಎನ್ನುವು ದನ್ನು ವಿವರಿಸಿ ಲೇಖನ ಬರೆದಿದ್ದೆ. ನೋವಿನ ಗ್ರಹಿಕೆ ದೇಹಕ್ಕೆ  ಅತ್ಯಂತ ಅವಶ್ಯಕ. ಅಂತೆಯೇ ದೇಹಕ್ಕೆ ಲೆಕ್ಕ ಮೀರಿ ನೋವಾದಲ್ಲಿ ಸ್ವಾಭಾವಿಕವಾಗಿ ಅದನ್ನು ತಗ್ಗಿಸುವ ರಾಸಾಯನಿಕಗಳು ದೇಹದಲ್ಲಿಯೇ ಉತ್ಪಾದನೆಯಾಗುತ್ತವೆ. ಕೈಯ್ಯೋ, ಕಾಲೋ ಕತ್ತರಿಸಿಯೇ ಹೋದಾಗ ನಮಗೆ ನೋವಿನ ಪ್ರಮಾಣ ಅದಕ್ಕನುಗುಣವಾಗಿ ಆಗದಿರಲು ಅದೇ ಕಾರಣ. ದೇಹದಲ್ಲಿಯೇ ತಯಾರಾಗುವ ‘ಎಂಡೋರ್ಫಿನ್’ ಆ ಕೆಲಸ ಮಾಡುತ್ತದೆ. ಓಪಿಯೋಯ್ಡ ಕೂಡ ಹೆಚ್ಚು ಕಡಿಮೆ ಅದೇ ಕೆಲಸವನ್ನು ಸ್ವಾಭಾವಿಕಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ.

ಬ್ರೈನ್ ಟ್ಯೂಮರ್ ಮೊದಲಾದ ಅನಾರೋಗ್ಯವಾದಾಗ ದೇಹದಲ್ಲಿ ಉತ್ಪಾದನೆಯಾಗುವ ಎಂಡೋರ್ಫಿನ್ ಸಾಕಾಗುವುದಿಲ್ಲ. ಏಕೆಂದರೆ ನೋವು ಅಷ್ಟು ತೀವ್ರ. ಅಂತಹ ಸಮಯದಲ್ಲಿ ಅನಿವಾರ್ಯವಾಗಿ ಓಪಿಯೋಯ್ಡಗಳ ಮೊರೆ ಹೋಗಬೇಕಾಗುತ್ತದೆ. ಓಪಿಯೋಯ್ಡ ಕೇವಲ ನೋವನ್ನಷ್ಟೇ ತಗ್ಗಿಸಿ ಸುಮ್ಮನಾಗುವವಲ್ಲ. ಅವು ನಮ್ಮ ಮನಃಸ್ಥಿತಿ ಬದಲಿಸುತ್ತದೆ, ಹೃದಯಬಡಿತ ತಗ್ಗಿಸುತ್ತದೆ, ಪಚನ ಶಕ್ತಿ ತಗ್ಗಿಸಿ ಅಜೀರ್ಣ, ಮಲಬದ್ಧತೆಗೆ ಕಾರಣ ವಾಗುತ್ತದೆ, ರಕ್ತದೊತ್ತಡದ ಮೇಲೂ ಪರಿಣಾಮ ಬೀರುತ್ತದೆ. ಹೀಗೆ ಇಡೀ ದೇಹದ ಲೆಕ್ಕಾಚಾರವನ್ನೆಲ್ಲ ಬುಡಮೇಲಾಗಿಸಿಬಿಡುತ್ತವೆ. ನೋವಿನ ಗ್ರಾಹ್ಯ ಶಕ್ತಿಯನ್ನು ತಗ್ಗಿಸುವುದರ ಜತೆಜತೆಗೆ ಇಡೀ ದೇಹದ ಹಲವಾರು ಗ್ರಾಹ್ಯಗಳ ಮೇಲೆಯೂ ಪರಿಣಾಮ ಬೀರುತ್ತವೆ.

ಕ್ರಮೇಣ ತನ್ನ ಗ್ರಹಣ ಶಕ್ತಿಯನ್ನು ಕಳೆದುಕೊಂಡು ಮಂದವಾಗುತ್ತವೆ. ಇದೆಲ್ಲದರಿಂದ ಸಹಜ ದೇಹ ಮತ್ತು ಮಾನಸಿಕ ಸ್ಥಿತಿ ಬೇಕಾದಲ್ಲಿ ಇನ್ನಷ್ಟು ಓಪಿಯೋಯ್ಡಗಳನ್ನು ಸೇವಿಸುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಆದರೆ ಓಪಿಯೋಯ್ಡಗಳು ರಕ್ತದೊತ್ತಡ ತಗ್ಗಿಸುತ್ತವೆ ಮತ್ತು ಹೃದಯಬಡಿತದ ವೇಗವನ್ನು ಕೂಡ. ಹೀಗೆ ಇದೊಂದು ವಿಷವರ್ತುಲದಲ್ಲಿ ಸಿಲುಕಿದ ವ್ಯಕ್ತಿ ಓಪಿಯೋಯ್ಡಗೆ ದಾಸನಾಗಿಬಿಡುತ್ತಾನೆ. ಒಂದೊಮ್ಮೆ ಆ ವ್ಯಕ್ತಿ ತೀರಾ ಗಟ್ಟಿ
ಮನಸ್ಸು ಮಾಡಿ ಇದನ್ನು ನಿಲ್ಲಿಸಿಬಿಟ್ಟನೆಂದುಕೊಳ್ಳಿ, ಪರಿಣಾಮ ಇನ್ನೊಂದು ವ್ಯತಿರಿಕ್ತದ್ದಾಗಿರುತ್ತದೆ. ಆತನ ದೇಹಸ್ಥಿತಿ ತೀರಾ ಅಸಹನೀಯ ಸ್ಥಿತಿಗೆ ತಲುಪಿಬಿಡುತ್ತದೆ. ಸ್ವಲ್ಪ ಕಾಲ ಹೇಗೋ ತಡೆದುಕೊಂಡು ನಂತರ ಹಿಂದಿನ ಡೋಸ್ ಅನ್ನು ಸೇವಿಸಿದನೆಂದುಕೊಳ್ಳಿ, ಒಮ್ಮಿಂದೊಮ್ಮೆಲೇ ಓವರ್ ಡೋಸ್ ಆಗಿ, ಹೃದಯಬಡಿತ ತೀರಾ ಕಡಿಮೆಯಾಗಿ ಆ ವ್ಯಕ್ತಿ ಸತ್ತೇ ಹೋಗುತ್ತಾನೆ.

ಅದಕ್ಕೇ ಹೇಳಿದ್ದು, ಇದೊಂದು ವಿಷವರ್ತುಲ ಎಂದು. ಇದರೊಳಕ್ಕೆ ಒಮ್ಮೆ ಹೊಕ್ಕರೆ ಹೋದ ದಾರಿಯಲ್ಲಿ ಮರಳಿ ಬರುವುದಕ್ಕೆ ಸಾಧ್ಯವೇ ಇಲ್ಲ. ಹಾಗಾಗಿಯೇ ಸಾವೇ ಒಳ್ಳೆಯದೆಂದು ಅನ್ನಿಸುವ ಸ್ಥಿತಿಗೆ ವ್ಯಕ್ತಿ ತಲುಪುವುದು. ಈ ರೀತಿ ನೋವಿಗೆ ಪಡೆಯುವ ಓಪಿಯೋಯ್ಡಗಳು ಕಾಲ ಕಳೆದಂತೆ ನಮ್ಮ ದೇಹದಲ್ಲಿ ಅದರತ್ತ ಒಂದಿಷ್ಟು ಜಾಡ್ಯವನ್ನು ಹುಟ್ಟುಹಾಕುತ್ತವೆ. ಇದರಿಂದಾಗಿ ಆ ವ್ಯಕ್ತಿ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಓಪಿಯೋಯ್ಡ ಅನ್ನು
ಬಳಸಬೇಕಾಗುತ್ತದೆ. ಹೆಚ್ಚು ಬಳಸಿದಂತೆ ಮನಸ್ಸು ಹಗುರವೇನೋ ಆಗುತ್ತದೆ, ಆದರೆ ಹಂತ ಮೀರಿದಾಗ, ಕೊನೆಯ ಹಂತ ಕೆಲವೇ ದಿನ ತಿಂಗಾಳುಗಳಲ್ಲಿ ವ್ಯಕ್ತಿ ತಲುಪಿ ದಾಗ, ಒಂದು ದಿನ ಆ ಪ್ರಮಾಣ ಹೃದಯ ಬಡಿತವನ್ನು ಸಂಪೂರ್ಣ ನಿಲ್ಲಿಸಿಬಿಡುತ್ತದೆ.

ಇಂತಹ ಓಪಿಯೋಯ್ಡಗಳನ್ನು ಡಾಕ್ಟರುಗಳು ಬರೆದುಕೊಡುವುದು ೧೯೯೦ರ ನಂತರದಲ್ಲಿ ಲಾಭ ಕಾರಣಕ್ಕೆ ಹೆಚ್ಚಿತು. ಡಾಕ್ಟರುಗಳು ಚಿಕ್ಕಪುಟ್ಟ ನೋವಿಗೆ ಓಪಿಯೋಯ್ಡಗಳನ್ನು ಗೊತ್ತುಮಾಡಲು ಶುರುಮಾಡಿದರು. ಆಪೆರೇಷನ್ ಆದವರಿಗೆ, ಕಾಲು ಉಳುಕಿಸಿಕೊಂಡವರಿಗೆ, ಕೈ ಮುರಿದು ಕೊಂಡವರಿಗೆ, ಯುದ್ಧದಲ್ಲಿ ಗಾಯಗೊಂಡ ಸೈನಿಕರಿಗೆ ಹೀಗೆ ಎಲ್ಲರಿಗೂ, ಎಲ್ಲ ವರ್ಗದವರಿಗೂ ಇದನ್ನು ಪ್ರಿಸ್ಕ್ರಬ್ ಮಾಡುವುದು ಆರಂಭವಾಯಿತು. ಔಷಧ ಕಂಪನಿಗಳ ವ್ಯವಸ್ಥಿತ ಕುತಂತ್ರದಿಂದಾಗಿ, ಡಾಕ್ಟರುಗಳ ಅಲ್ಪ ಲಾಭಕ್ಕಾಗಿ ೨೦೦೦ ಇಸವಿಯ ನಂತರದಲ್ಲಿ, ಅಮೆರಿಕಾದಲ್ಲಿ ಅದೆಷ್ಟೋ ಕೋಟಿ
ಜನರು ಓಪಿಯೋಯ್ಡ ದಾಸರಾಗಿಬಿಟ್ಟರು.

ಡಾಕ್ಟರುಗಳು ಓಪಿಯೋಯ್ಡಗಳನ್ನು ಪ್ರಮಾಣದಲ್ಲಿಯೇ ಬರೆದುಕೊಡುತ್ತಿದ್ದರು. ಆದರೆ ವ್ಯಕ್ತಿಗೆ ಕ್ರಮೇಣ ಆ ಡೋಸ್ ಸಾಕಾಗು ತ್ತಿರಲಿಲ್ಲ. ಇದರಿಂದಾಗಿ ಅವರೆಲ್ಲ ಬೇರೆ ಬೇರೆ ಡಾಕ್ಟರುಗಳನ್ನು ಒಂದೇ ದಿನ ಕಂಡು ಲೆಕ್ಕ ಮೀರಿ ಇದರ ಪ್ರಿಸ್ಕ್ರಿಪ್ಷನ್ ಪಡೆಯಲು ಶುರುಮಾಡಿದರು. ಇದರಿಂದ ಫಾರ್ಮಾ
ಕಂಪನಿಗಳು, ಕಳ್ಳ ಡಾಕ್ಟರುಗಳು ಇದೇ ದಂಧೆಗೆ ಇಳಿದು ಬಿಟ್ಟರು. ಬೇಕಾಬಿಟ್ಟಿ, ಏನೋ ಒಂದು ನೋವಿದೆಯೆಂದು ಬಂದವರಿಗೆಲ್ಲ ಓಪಿಯೋಯ್ಡ ಚೀಟಿ ಬರೆದುಕೊಡಲಾಯಿತು. ಇದರ ಜೊತೆ ಓಪಿಯೋಯ್ಡ ನ ಈ ಔಷಧಿಯನ್ನು ಡಾಕ್ಟರ್ ಬಳಿ ಕೊಡುವಂತೆ ಕೇಳಿ ಎನ್ನುವ ಜಾಹೀರಾತುಗಳು.

ಒಮ್ಮೆ ದಾಸ್ಯಕ್ಕೊಳಗಾದವರಿಗೆ ಬದುಕಲು ಓಪಿಯೋಯ್ಡ ಅನಿವಾರ್ಯ. ಬಿಟ್ಟರೆ ವಾಂತಿ ಬ್ರಾಂತಿ. ಇದನ್ನು ಪಡೆಯಲು ಯಾವ ಹಂತಕ್ಕೂ ಹೋಗು ವಂತಹ ಸ್ಥಿತಿ. ಓಪಿಯೋಯ್ಡ ಸಿಗದಿದ್ದಾಗ, ತುಟ್ಟಿಯಾದಾಗ, ಅಗ್ಗದ ಹೆರೋಯಿನ್ – ಓಪಿಯಮ್‌ನ ಮೊರೆ ಹೋಗಲು ಅವರೆಲ್ಲ ಶುರುಮಾಡಿದರು. ಔಷಧ ಮತ್ತು ಡ್ರಗ್ಸ್ ಒಂದೇ ತೆರನಾಗಿ ಕೆಲಸ ಮಾಡುತ್ತಿತ್ತು. ಏಕೆಂದರೆ ಅವೆರಡೂ ಒಂದೇ ಆಗಿತ್ತು. ಹೀಗೆ ಒಂದು ಚಿಕ್ಕ ನೋವಿನ ಔಷಧ ಪಡೆದ ಮುಗ್ಧರೆಲ್ಲ ಕ್ರಮೇಣ ಅಯಾಚಿತ ಚಟಕ್ಕೆ ಬಲಿಯಾಗುವಂತಾಯಿತು.

ಇದರಿಂದ ಚಟ ಮುಕ್ತಿ ಕೇಂದ್ರಗಳು ಅಮೆರಿಕದುದ್ದಗಲಕ್ಕೂ ತೆರೆಯುವಂತಾಯಿತು. ಅದು ಕೂಡ ಲಾಭ, ಶ್ರೀಮಂತರಾಗಿ ಮಾಡಿದ್ದು ಇದೇ ಫಾರ್ಮಾ ಕಂಪನಿಗಳನ್ನು, ಡಾಕ್ಟರುಗಳನ್ನು. ಒಂದು ಲೆಕ್ಕಾಚಾರ ಕೊಟ್ಟರೆ ನಿಮಗೆ ಈ ಅಮೆರಿಕದ ಸಮಸ್ಯೆಯ ಬಗ್ಗೆ ಅಂದಾಜಾಗಬಹುದು. ಈ ಓಪಿಯೋಯ್ಡ
ಸಮಸ್ಯೆ ಮತ್ತು ಓವರ್ ಡೋಸ್‌ನಿಂದಾಗಿ ೨೦೨೧ರ ಒಂದೇ ವರ್ಷದಲ್ಲಿ ಜೀವ ಕಳೆದುಕೊಂಡ ಅಮೆರಿಕನ್ನರ ಸಂಖ್ಯೆ ಬರೋಬ್ಬರಿ ೮೧ಸಾವಿರ. ಅದಲ್ಲದೆ ಸುಮಾರು ೧೬ ಸಾವಿರ ಮಂದಿ ಡಾಕ್ಟರ್ ಬರೆದುಕೊಟ್ಟ ಓಪಿಯೋಯ್ಡ ಅನ್ನು ಲೆಕ್ಕ ಮೀರಿ ಸೇವಿಸಿರುವುದರಿಂದ ಪ್ರಾಣ ಕಳೆದುಕೊಂಡವರು.

ಇನ್ನು ಈ ಓಪಿಯೋಯ್ಡ್ ಚಟಕ್ಕೊಳಗಾಗಿ ಅದು ಸಿಗದಿದ್ದಾಗ ಹೆರಾಯಿನ್, ಓಪಿಯಮ್ ಮೊದಲಾದವನ್ನು ಕಾಳಸಂತೆಯಲ್ಲಿ ಖರೀದಿಸಿ, ಸೇವಿಸಿ ಸತ್ತವರು ಕೆಲವು ಲಕ್ಷ ಮಂದಿ. ಇದೆಲ್ಲ ಒಂದೇ ವರ್ಷದ ಲೆಕ್ಕ. ಇನ್ನು ವೈದ್ಯರ ಕಾರಣದಿಂದ ಚಟವಾಗಿ ಸಾಯದೇ ಒದ್ದಾಡುತ್ತಿರುವವರ ಸಂಖ್ಯೆ ಎಂಟರಿಂದ ಇಪ್ಪತ್ತು ಲಕ್ಷ ಮಂದಿ. ಈ ಸಂಖ್ಯೆ ಅಮೆರಿಕಾದ ಜನಸಂಖ್ಯೆಗೆ ಹೋಲಿಸಿದರೆ ತೀರಾ ದೊಡ್ಡದು.

ಇಲ್ಲಿ ಅವರದ್ದೇನೂ ತಪ್ಪೇ ಇಲ್ಲದವರೇ ಜಾಸ್ತಿ. ಅವರೆಲ್ಲ ಈ ಚಟವನ್ನು ಬಯಸಿ ತಮ್ಮದಾಗಿಸಿಕೊಂಡವರಲ್ಲ. ಅಥವಾ ಕುತೂಹಲಕ್ಕೆ ಶುರುವಿಟ್ಟು ಕೊಂಡು ಚಟವಾಗಿಸಿಕೊಂಡವರಲ್ಲ. ಡಾಕ್ಟರ್ ಬರೆದುಕೊಟ್ಟರು, ಜಾಹೀರಾತುಗಳಲ್ಲಿ ಹೇಳಲಾಯಿತು, ಚಿಕ್ಕ ನೋವಿಗೆ, ಕೆಲವೊಮ್ಮೆ ನೋವೇ ಇಲ್ಲದಿದ್ದರೂ ಸುಮ್ಮನೆ ಓಪಿಯೋಯ್ಡ್ ಗುಳಿಗೆ ಬರೆದು ಕೊಟ್ಟು ಆ ಚಕ್ರವ್ಯೂಹಕ್ಕೆ ಅವರನ್ನೆಲ್ಲ ತಿಳಿಯದಂತೆ ದೂಡಲಾಯಿತು. ಅಮೆರಿಕಾ ಆಧುನಿಕ, ಸುವ್ಯವಸ್ಥೆ ಎಲ್ಲವೂ ಹೌದು. ಅಂತೆಯೇ ಅದಕ್ಕನುಗುಣವಾಗಿ ಇಂತಹ ಅಪಸವ್ಯಗಳು ಸಮಾನಾಂತರವಾಗಿ ಅಷ್ಟೇ ಇವೆ. ಸಮಸ್ಯೆ ಹಂತ ಮೀರಿ
ಕಾಡುವುದು, ಅದನ್ನು ಪರಿಹರಿಸಲಿಕ್ಕಾಗದಂತಹ ಸ್ಥಿತಿಗೆ ಇಷ್ಟು ಮುಂದುವರಿದ ಸಮಾಜ ತಲುಪುವುದು ಇವೆಲ್ಲ ಎಡವಟ್ಟುಗಳು ಆಧುನಿಕತೆಯ ಭಾಗವೇ ಆಗಿದೆ.

ವೈದ್ಯ ನಾರಾಯಣ, ಹರ, ಬ್ರಹ್ಮ ಎನ್ನುವುದೆಲ್ಲ ಸರಿ, ಹೌದು. ಆದರೆ ವ್ಯವಸ್ಥೆ ಬೇರೆಯದೇ ತೆರನಾಗಿ ಕೆಲಸ ಮಾಡುತ್ತದೆ. ಅದರ ಭಾಗವಾಗಿ ವೈದ್ಯರು ಕೂಡ ವ್ಯವಹರಿಸುತ್ತಾರೆ. ಇಂದಿಗೂ ಓಪಿಯೋಯ್ಡ ಸಮಸ್ಯೆಗೆ ಅಮೆರಿಕಾದ ಗಂಡು ಹೆಣ್ಣು, ಬಡವ, ಶ್ರೀಮಂತ ಹೀಗೆ ಎಲ್ಲ ವರ್ಗ ಪ್ರಬೇಧದವರೂ ಬಲಿಯಾಗುತ್ತಲೇ ಇದ್ದಾರೆ. ಇದನ್ನೆ ನಿಯಂತ್ರಿಸುವ ಕೆಲಸ ಒಂದು ಕಡೆ ನಡೆಯುತ್ತಿದ್ದರೂ ಅವನ್ನೆಲ್ಲ ಮೀರಿ ವ್ಯವಸ್ಥೆ, ಅನಿವಾರ್ಯತೆ ಕೆಲಸ ಮಾಡುತ್ತಿದೆ. ಹಾಗಾದರೆ ಇದೆಲ್ಲದಕ್ಕೆ ಯಾರು ಕಾರಣ? ಲಾಭ ಬಯಸುವ ಕಂಪನಿಗಳೆ? ಅದರ ಷೇರುದಾರರೇ? ಡಾಕ್ಟರುಗಳೇ? ಟಿವಿ ಚಾನೆಲ್‌ಗಳೇ? ಅಥವಾ ಒಂದು ಚಿಕ್ಕ ನೋವನ್ನೂ ಸಹಿಸಲು ಹಿಂಜರಿಯುವ ಜನಸಾಮಾನ್ಯರೇ? ಸರಕಾರವೇ? ಯಾರೋ ಒಬ್ಬರನ್ನು ಹೊಣೆಯಾಗಿಸುವಂತಿಲ್ಲ.

ಎಲ್ಲರಿಗೂ ಒಂದು ಸಮಜಾಯಿಷಿಯಿದೆ, ತಪ್ಪು ನನ್ನದಲ್ಲವೆನ್ನಲು ಕಾರಣವಿದೆ. ಇದೊಂದು ಅತ್ಯಾಧುನಿಕ ಜಗತ್ತಿನ ಅಪಸವ್ಯ. ಇದರ ಗಂಭೀರತೆ ಮತ್ತು ತೀವ್ರತೆಯನ್ನು ಅಂದಾಜಿಸಿಕೊಳ್ಳಲು ಯೌಟ್ಯೂಬ್ ನಲ್ಲಿ ‘Opioid Crisis in America’ ಎಂದು ಹುಡುಕಿ ಸಿಗುವ ಸಾವಿರ ವಿಡಿಯೋಗಳಲ್ಲಿ ಒಂದೆರಡು ನೋಡಿದರೆ ಸಾಕು.